ಗಣಿ ಪರಿಸರಕ್ಕೆ ಬವಣೆಯಾಗದಿರಲಿ..

ಗಣಿ ಪರಿಸರಕ್ಕೆ ಬವಣೆಯಾಗದಿರಲಿ..

©ಕುಮುದ ಕೆ. ಬಿ.

ಸಂಡೂರು: ಬಳ್ಳಾರಿ ಜಿಲ್ಲೆ ಕರ್ನಾಟಕದ ಗಣಿಗಾರಿಕೆಯಲ್ಲಿ ಅಗ್ರಶ್ರೇಷ್ಠವೆನ್ನಬಹುದಾದ, ಕಬ್ಬಿಣ, ಮ್ಯಾಂಗನೀಸ್ ಅದಿರಿನ ಸಂಪನ್ಮೂಲವನ್ನು ಹೇರಳವಾಗಿ ಹೊಂದಿರುವ ಜಿಲ್ಲೆ. ಗಣಿ ಉದ್ಯಮಿಗಳನ್ನು ಇನ್ನಿಲ್ಲದಂತೆ ಆಕರ್ಷಿಸುವ ತಾಕತ್ತಿರುವ ಭೂಪ್ರದೇಶ. ರಾಜ್ಯದ ಆರ್ಥಿಕತೆಯ ಗಣಿಗಾರಿಕೆಯ ಆದಾಯದಲ್ಲಿ ಬಹುಭಾಗವನ್ನು ಹೊಂದಿರುವ ಜಿಲ್ಲೆ. ಅಂತೆಯೇ ಅನೇಕ ಪಾರಂಪರಿಕ ಸ್ಥಳಗಳನ್ನು, ಪುರಾತನ ದೇಗುಲಗಳನ್ನೂ ಹೊಂದಿದೆ.  ಇದಲ್ಲದೇ, ಬಿಳಿಗಿರಿ ರಂಗನ ಬೆಟ್ಟದಿಂದ ಬಳ್ಳಾರಿಯವರೆಗೂ ಹಬ್ಬಿರುವ ಈ ಕ್ರೇಟನ್ ಶೀಲ್ಡ್ / ಕ್ಲೋಸ್ಪೆಟ್ ಗ್ರಾನೈಟ್ ಬೆಲ್ಟ್ ಎಂದು ಕರೆಯುವ ಕಲ್ಲು ಹಾಸಿನ ಮೇಲೆ ಅನನ್ಯ ಜೀವಸಂಕುಲ ನೆಲೆ ಪಡೆದಿದೆ ಹಾಗು ಹಲವಾರು ವರ್ಷಗಳ ಹಿಂದೆ ಹವಾಮಾನ ವೈಪರಿತ್ಯಗಳನ್ನು ಎದುರಿಸಿ ನಿಂತಿರುವುದನ್ನು ಸಂಡೂರಿನ ಕಾಡುಗಳೇ ಹೇಳುತ್ತವೆ. ಶ್ರೀಗಂಧ, ರಕ್ತಚಂದನ, ನೂರಾರು ಪ್ರಭೇದದ ಗಿಡಮೂಲಿಕೆಗಳು, ಮಾಲಿನ್ಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುವ ಕಮರ, ಧೂಪದ ಮರಗಳು, ದಿಂಡುಗದಂತಹ ಬರಗಾಲ ನಿರೋಧಕ ಮರಗಳು, ಬನ್ನಿ, ತುಗ್ಗಲಿ, ಬೀಟೆ, ಬಾಗೆ, ಬೇಲದಂತಹ ಮರಗಳು ಅಲ್ಲದೇ ಔಷಧೀಯ ಸಸ್ಯಗಳನ್ನು ಹೇರಳವಾಗಿ ಹೊಂದಿದ್ದು, ಸಂಡೂರಿನ ಕಾಡುಗಳು ನೈಸರ್ಗಿಕವಾಗಿಯೂ ಹಲವಾರು ವೈಶಿಷ್ಟ್ಯತೆಗಳನ್ನು ತನ್ನೊಡಲಲ್ಲಿ ಕಾಪಿಟ್ಟುಕೊಂಡಿವೆ.  ಬಯಲು ಸೀಮೆಯ ಮಲೆನಾಡು, ಕರ್ನಾಟಕದ ಕಾಶ್ಮೀರ ಎಂದೆಲ್ಲ ಕರೆಸಿಕೊಳ್ಳುವ ಸಂಡೂರು ಅಲ್ಲಿನ ಗಣಿಗಾರಿಕೆಯಿಂದ ಪರಿಚಿತವಾದಷ್ಟು, ಅಲ್ಲಿನ ನೈಸರ್ಗಿಕ ವಿಶೇಷತೆಗಳಿಂದ ಗುರುತಿಸಿಕೊಂಡಿಲ್ಲವೆಂಬುದು ಅಥವಾ ರಕ್ಷಣಾದೃಷ್ಟಿಯಿಂದ ಜನರ ಗಮನ ಸಂಡೂರಿನ ಕಾಡುಗಳತ್ತ ಕಡಿಮೆ ಇರುವುದು ವಿಷಾದವೇ ಹೌದು.

ಸಂಡೂರಿನಲ್ಲಿ ಗಣಿಗಾರಿಕೆಯ ಹಿನ್ನೆಲೆ: ಸುಮಾರು 1904 ರಿಂದಲೂ ಸಂಡೂರಿನ ಸುತ್ತಲಿನ ಪ್ರದೇಶಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ನ ಗಣಿಗಾರಿಕೆ ನಡೆಯುತ್ತಿದೆ. ಬಳ್ಳಾರಿ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಗಣಿಗಾರಿಕೆಯೇ. ಮನುಷ್ಯನಿಗೆ ತಿಳಿದಿರಬೇಕಾದದ್ದು, ಎಲ್ಲದರ ಮೌಲ್ಯವೇ ಹೊರತು ಬೆಲೆಯಲ್ಲ. ಈಗಾಗಲೇ ಸಂಡೂರಿನ 3862.34 ಹೆಕ್ಟೆರ್ ನಲ್ಲಿ ಕಾರ್ಯ ನಿರತ ಮೈನ್ಸ್ ಗಳು 1675.24 ಹೆಕ್ಟೇರ್ ನಲ್ಲಿ ಕಾರ್ಯ ನಿಲ್ಲಿಸಿರುವ ಮೈನ್ ಗಳಿವೆ., ಪುನಶ್ಚೇತನ ಕಾರ್ಯಗಳೂ ಬೆರಳೆಣಿಕೆಯಷ್ಟು ಮಾತ್ರ. ಹೌದು, ಈ ಪ್ರಸ್ತಾಪ ಸಂಡೂರಿನಲ್ಲಿ ಗಣಿಗಾರಿಕೆ ಆರಂಭಿಸಲು ಅನುಮತಿ ಪಡೆದಿರುವ ಮತ್ತೊಂದು ಮೈನಿಂಗ್ ಲೀಸ್ ನ ಕುರಿತಾದದ್ದೇ.

© ಕುಮುದ ಕೆ. ಬಿ

   ವಾಸ್ತವ ಸ್ಥಿತಿಗತಿಗಳು: ಕೇಂದ್ರ ಸರ್ಕಾರ ಸ್ವಾಮ್ಯದ ಕುದುರೆಮುಖ ಐರನ್ ಓರ್ ಕಂಪನಿ ಲಿಮಿಟೆಡ್ ಗೆ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ದೇವದಾರಿ ಪ್ರದೇಶದಲ್ಲಿ ಗಣಿಗಾರಿಕೆಗಾಗಿ 50 ವರ್ಷಗಳವರೆಗೆ ಲೀಸ್ ಗೆ ಒಪ್ಪಂದವಾಗಿರುವ 401.5761 ಹೆಕ್ಟೇರ್ ಅರಣ್ಯ ಪ್ರದೇಶದ ತೆರವಿಗೆ ಅನುಮತಿ ದೊರೆತಿದ್ದು, ಮುಂದಿನ ವರ್ಷದಿಂದ ಕಂಪನಿಯು ಪೂರ್ಣ ಪ್ರಮಾಣದಲ್ಲಿ ಗಣಿಗಾರಿಕೆ ಆರಂಭಿಸುವುದಾಗಿ ತಿಳಿಸಿದೆ.

ಗಣಿಗಾರಿಕೆಗೆ ಅನುಮತಿ ನೀಡಲಾದ ಈ ಪ್ರದೇಶದಲ್ಲಿ 60 ಸೆಂ. ಮೀ. ಗಿಂತ ಕಡಿಮೆ ಸುತ್ತಳತೆಯುಳ್ಳ 58,324 ಮರಗಳು, 60 ಸೆಂ. ಮೀ. ಗಿಂತ ಹೆಚ್ಚು ಸುತ್ತಳತೆಯುಳ್ಳ 12,566 ಮರಗಳು ಸೇರಿದಂತೆ ಒಟ್ಟು 70,890 ಮರಗಳನ್ನು ಕಡಿಯಬೇಕಿದೆ. ಸಂಡೂರು ಪ್ರದೇಶವು ಔಷಧೀಯ ಗುಣಗಳನ್ನೊಳಗೊಂಡ ಅನೇಕ ಸಸ್ಯ ಸಂಪತ್ತಿಗೆ ಹೆಸರುವಾಸಿಯಾದದ್ದು, ಇಷ್ಟು ಪ್ರಮಾಣದ ಮರಗಳ ಕಡಿತದಿಂದ ಈ ಪ್ರದೇಶದಲ್ಲಿ ತೀವ್ರ ಮಣ್ಣಿನ ಸವಕಳಿಗೆ, ನೀರಿನ ಆಕರಗಳ ಮೇಲೆ ಪರಿಣಾಮ ಬೀರುವುದು, ಅಂತರ್ಜಲ ಕ್ಷೀಣಿಸುವುದು ಇಂತಹ ಅನೇಕ ಸರಿಪಡಿಸಲಾಗದ ಪರಿಸರ ನಷ್ಟಗಳಿಗೆ ಕಾರಣವಾಗಬಹುದು.

ಪ್ರಸ್ತಾಪಿತ ಯೋಜನಾ ಪ್ರದೇಶಕ್ಕೆ ತೀರಾ ಹತ್ತಿರವಿರುವಂತಹ ವನ್ಯಜೀವಿ ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಕಾರಿಡಾರ್ ಗಳು ಇಲ್ಲವೆಂದು ಗುರುತಿಸಲಾಗಿದ್ದರೂ ಸಹ ಸಂಡೂರಿನ ಪ್ರದೇಶಕ್ಕೆ ಹೊಂದಿಕೊಂಡ ಕೊಂಡುಕುರಿ, ಕರಡಿ, ಚಿರತೆ, ಮುಳ್ಳುಹಂದಿ, ಮೊಲ ಸೇರಿದಂತೆ ಅನೇಕ ವನ್ಯಜೀವಿಗಳಿಗೆ ಸೂಕ್ತ ಆವಾಸಸ್ಥಾನವಾಗಿದೆ. ಪ್ರಸ್ತಾಪಿತ ಯೋಜನೆಯ ಆರಂಭವು ಎಲ್ಲಾ ಸಸ್ಯ ಹಾಗು ಪ್ರಾಣಿ ಸಂಕುಲಕ್ಕೆ, ಅವುಗಳ ಆವಾಸಸ್ಥಾನ ನಷ್ಟಕ್ಕೆ ನೇರ ಕಾರಣವೇ ಆಗುತ್ತದೆ.

ಈಗಾಗಲೇ ಈ ಪ್ರದೇಶದಲ್ಲಿ ಸುಮಾರು 59 ಎ&ಬಿ ಕೆಟಗರಿ ಮೈನಿಂಗ್ ಗಳು, 26 ಸಿ ಕೆಟಗರಿ ಮೈನಿಂಗ್ ಗಳು ಹಾಗು 14 ರಿಸೆಟಲ್ಮೆಂಟ್ & ರಿಹ್ಯಾಬಿಲಿಟೇಷನ್ ಪ್ಲಾನ್ ಅನುಮೋದನೆಯಾಗದ ಮೈನ್ ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಒಟ್ಟು ವಾರ್ಷಿಕ ಅದಿರು ಉತ್ಪಾದನೆ 53,599 ಮಿಲಿಯನ್ ಮೆಟ್ರಿಕ್ ಟನ್ ಇದ್ದು, ಬಳ್ಳಾರಿ ಜಿಲ್ಲೆಗೆ ಅನ್ವಯಿಸುವಂತೆ ನಿಗದಿತ ಅದಿರು ಉತ್ಪಾದನಾ ಮಿತಿಯು 28 ಮಿಲಿಯನ್ ಮೆಟ್ರಿಕ್ ಟನ್ ಗಳಾಗಿದೆ. (ಸಮಾಜ ಪರಿವರ್ತನಾ ಸಮುದಾಯ ಹಾಗು ಇತರರು Vs ಕರ್ನಾಟಕ & ಇತರರು ಕೇಸಿನಂತೆ ದಿನಾಂಕ 14-12-2017 ರ ಮಾನ್ಯ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ) ಪ್ರಸ್ತುತ ಉತ್ಪಾದನೆಯೇ ನಿಗದಿತ ಮಿತಿಯನ್ನು ಮೀರಿದೆ. ಈ ಪ್ರದೇಶದಲ್ಲಿನ ಮೈನಿಂಗ್ ಕಾರ್ಯ ಮುಗಿಯದೇ ಇರುವ ಗಣಿಗಳು ಇದ್ದಂತೆಯೇ ಹೊಸದಾದ ಮೈನಿಂಗ್ ಗೆ ಅವಕಾಶ ನೀಡುವುದರಿಂದ ಈ ಪ್ರದೇಶದ ಶುಭ್ರ ಕಾಡು, ವನ್ಯ ಸಂಕುಲ ಪುನಶ್ಚೇತನಗೊಳಿಸಲಾರದಂತೆ ಹಾನಿಗೊಳಗಾಗುತ್ತದೆ.

 ಎಲ್ಲಾ ಅಂಶಗಳನ್ನೂ ಗಮನಿಸಿ ಪ್ರಸ್ತಾಪಿತ ಯೋಜನೆಗಾಗಿ ಅರಣ್ಯ ತೆರವು ಮಾಡುವುದು ಸೂಕ್ತವಲ್ಲವೆಂದು ಅರಣ್ಯ ಇಲಾಖೆ ಸೂಚಿಸಿದ್ದಾಗಿಯೂ ಸರ್ಕಾರವು ಈ ಕೆಳಗಿನ ಅಂಶಗಳನ್ನಷ್ಟೇ ಪರಿಗಣಿಸಿ ಅನುಮತಿ ನೀಡಿದೆ.

© ಕುಮುದ ಕೆ. ಬಿ.

ಅನುಮತಿಗೆ ಈ ಕಾರಣಗಳು ಸಾಕೆ? ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದ್ದು, ಉಕ್ಕಿನ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ ಹಾಗು ಯೋಜನೆಯ ಅನುಮೋದನೆಯ ನಂತರದ 10 ವರ್ಷಗಳಲ್ಲಿ ಕರ್ನಾಟಕದಲ್ಲಿ ವನ್ಯಜೀವಿ ಕಾರಿಡಾರ್ ಗಳಿಗಾಗಿ ವಿಶೇಷವಾಗಿ ಆನೆ ಕಾರಿಡಾರ್ ಗಳಿಗೆ ಕಂಪನಿಯು 50 ಕೋಟಿ ಖರ್ಚು ಮಾಡಲು ಸಮ್ಮತಿ ನೀಡಿದೆಯಂತೆ, ಸಂಡೂರಿನ ಪ್ರಾಣಿ ಸಂಕುಲದ ಆವಾಸ ಸ್ಥಾನಗಳ ಶಾಶ್ವತ ನಾಶ ಮಾಡಿ ಮತ್ತಿನ್ನೆಲ್ಲಿಯೋ ಕಾರಿಡಾರ್ ಗಳ ನಿರ್ಮಾಣ ನಿರ್ವಹಣೆ ನಿರರ್ಥಕವಲ್ಲದೇ ಇನ್ನೇನು? ಪರಿಹಾರ ಅರಣ್ಯೀಕರಣವಾಗಿ (ಕಾಂಪೆನ್ಸೇಟರಿ ಅಪಾರೆಸ್ಟೇಷನ್) ಕೂಡ್ಲಿಗಿ ಹಾಗು ಹಡಗಲಿ ತಾಲ್ಲುಕಿನಲ್ಲಿ ತಲಾ 439 & 530 ಹೆಕ್ಟೇರ್ ಗಳಲ್ಲಿ ಅರಣ್ಯ ಇಲಾಖೆಯ ನಿರ್ದೇಶನದಂತೆ ಸಸಿ ನೆಡುವುದು, 70 ಸಾವಿರಕ್ಕೂ ಅಧಿಕ ಬಲಿತ ಮರಗಳನ್ನು ಕಡಿದು ಸಸಿಗಳನ್ನು ನೆಟ್ಟು ಎಷ್ಟರ ಮಟ್ಟಿಗೆ ಪೋಷಿಸಬಹುದು.

ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ (ಕೆಐಒಸಿಎಲ್) ಪ್ರಮುಖ ಉಕ್ಕು ಉತ್ಪಾದನಾ ಕಂಪನಿಯಾಗಿದ್ದು, 3500 ಕೋಟಿ ರೂ ಹೂಡಿಕೆ ಮಾಡಲಿದ್ದು, ರಾಜ್ಯ ಜಿಡಿಪಿ ಹಾಗು ಆರ್ಥಿಕತೆಗೆ ಸಹಕಾರಿಯಾಗುತ್ತದೆ. 1500 ಜನರಿಗೆ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದೆ. ಪ್ರಸ್ತುತ ಮೈನಿಂಗ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್ಚಿನ ಸ್ಥಳೀಯ ಉದ್ಯೋಗಿಗಳು ಲಾರಿಗಳ ಡ್ರೈವಿಂಗ್, ಕ್ಲೀನಿಂಗ್, ರಸ್ತೆ ಬದಿ ಅಂಗಡಿಗಳಲ್ಲಿಯೇ ಕೆಲಸ ಮಾಡುತ್ತಿದ್ದು, ಉನ್ನತ ಹುದ್ದೆಗಳಲ್ಲಿ ಸ್ಥಳೀಯರಿರುವುದು ಕಡಿಮೆಯಾಗಿದೆ. ಇದೇ ಪ್ರವೃತ್ತಿ ಮುಂದುವರೆಯುವ ಸಾಧ್ಯತೆಗಳೇ ಹೆಚ್ಚಿದೆ, ಇನ್ನು, ಆರ್ಥಿಕ ಅಭಿವೃದ್ಧಿ ಆಗಬೇಕು ಆದರೆ ಪರಿಸರದ ಬೆಲೆ ತೆರಬಾರದು.

ನಾವು ಏನು ಮಾಡಬಹುದು? ಪ್ರತಿನಿತ್ಯ ನಾವು ನೋಡುತ್ತಿರುವ ಪರಿಸರ ಸಂರಕ್ಷಣೆ, ವನ್ಯಜೀವಿಗಳ ಪರ ಆಂದೋಲನಗಳು, ಆನ್ಲೈನ್ ಪಿಟಿಷನ್ ಗಳು ಲಿಂಕ್ ಒತ್ತಿ ಪಿಟಿಷನ್ ಗೆ ಸಹಿ ಮಾಡುವ ಅನೇಕ ಸಂರಕ್ಷಣಾ ಜಾಲತಾಣಗಳನ್ನು ನಾವೆಲ್ಲರೂ ದಿನನಿತ್ಯ ನೋಡುತ್ತಿದ್ದೇವೆ. ಸಹಿಯನ್ನೂ ಮಾಡುತ್ತಿದ್ದೇವೆ, ಸಹಿ ಮಾಡಿದ ನಂತರದಲ್ಲಿ ಅದರ ಪರಿಣಾಮದ ಕುರಿತು ನಾವು ಯೋಚಿಸುವುದೇ ಇಲ್ಲ, ಈ ರೀತಿಯ ಆನ್ಲೈನ್ ಪಿಟಿಷನ್ ಗಳು ಸಂರಕ್ಷಣೆಗೆ ಸಹಕಾರಿಯೇ? ನಾವು ಸಲ್ಲಿಸಿದ ಪಿಟಿಷನ್ಗಳು ಸಂಬಂಧಿತರಿಗೆ ತಲುಪುತ್ತಿವೆಯೇ? ಅಥವಾ ಜಾಲತಾಣಗಳ ಲಾಭದ ಸರಕಾಗಿವೆಯೇ? ಈ ಕುರಿತ ಮಾಹಿತಿ ನನಗಿಲ್ಲ. ಅಭಿವೃದ್ಧಿ ಸಾಮಾಜಿಕ ಬೆಳವಣಿಗೆಯ ಭಾಗ ಹೌದು, ಆದರೆ ವನ್ಯಸಂಕುಲ, ಪರಿಸರ ವ್ಯವಸ್ಥೆಯ ಉಳಿವು ನಮ್ಮ ಆದ್ಯತೆಯಾಗಿರಬೇಕು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಜಾಗಗಳ ಪಾರಿಸರಿಕ ಮೌಲ್ಯಗಳನ್ನು ಗಮನದಲ್ಲಿರಿಸಿಕೊಂಡು ಪರ್ಯಾಯ ಮಾರ್ಗಗಳನ್ನು ಅನುಸರಿಸಬಹುದು, ಈ ನಿಟ್ಟಿನಲ್ಲಿ ನಾವು ಯೋಚಿಸಿ ಸಾರ್ವಜನಿಕರ ಪರವಾಗಿ ಸರ್ಕಾರದ ಮೇಲೆ ಪ್ರಭಾವ ಬೀರಬಲ್ಲ ಪ್ರಮುಖರಿಂದ ಬೆಂಬಲ ಪಡೆದು ಸರ್ಕಾರವು ಪಾರಿಸರಿಕ ದೃಷ್ಟಿಕೋನದಿಂದ ಈ ಸಮಸ್ಯೆಯನ್ನು ನೋಡುವಂತೆ ಮನವಿ ಮಾಡಬಹುದು.

ಸ್ಥಳೀಯರಿಗೆ ಈ ಯೋಜನೆಯಿಂದಾಗಬಹುದಾದ ಪರಿಣಾಮಗಳ ಮಾಹಿತಿ ತಲುಪಲು ಸ್ಥಳೀಯ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಬಹುದು.

ಗಣಿಗಾರಿಕೆ ಹೆಚ್ಚಳದಿಂದ ಸ್ಥಳೀಯ ಜನರ ಆರೋಗ್ಯದ ಮೇಲಾಗುತ್ತಿರುವ ಪರಿಣಾಮಗಳು ಜನರಲ್ಲಿನ ಹಾಗೂ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆಗಳನ್ನು ತಿಳಿಸಿ ಅದರ ನಿರ್ವಹಣೆಗೆ ಶಿಫಾರಸ್ಸು ಮಾಡುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಬೆಂಬಲ ಕೋರಬಹುದು. ವನ್ಯಜೀವಿ ಸಂರಕ್ಷಣೆಯಲ್ಲಿ ತೊಡಗಿದ ಸಂಸ್ಥೆಗಳ, ವ್ಯಕ್ತಿಗಳ ಸಹಕಾರದಿಂದ ಗಣಿಗಾರಿಕೆ ಹೆಚ್ಚಳದಿಂದಾಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸಿ ಅರಣ್ಯ ಸಲಹಾ ಸಮಿತಿಗೆ ಮನವಿ ಮಾಡಬಹುದು. ಸಂರಕ್ಷಣೆಯ ದೃಷ್ಟಿಯಿಂದ ಹಿನ್ನೆಲೆಯಲ್ಲಿಯೇ ಇರುವ ತನ್ನದೇ ಆದ ಭೌಗೋಳಿಕ ವೈಶಿಷ್ಟ್ಯತೆಗಳನ್ನು, ವಿಶಿಷ್ಟ ನೈಸರ್ಗಿಕ ಸಂಪನ್ಮೂಲ, ಸಸ್ಯ ಹಾಗು ಪ್ರಾಣಿಸಂಕುಲವನ್ನು ಹೊಂದಿದ್ದು, ಅತಿಯಾದ ಮಾನವನಿರ್ಮಿತ ಕೃತ್ಯಗಳಿಂದ ಅವಸಾನದೆಡೆಗೆ ಸಾಗುತ್ತಿರುವ ಸಂಡೂರನ್ನು ಇನ್ನಾದರೂ ನಾವು ರಕ್ಷಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಮೇಲಿನ ಎಲ್ಲಾ ಸಾಧ್ಯತೆಗಳನ್ನು ಸಾಕಾರಗೊಳಿಸಲು ನಾವು ತುರ್ತಾಗಿ ಕೈಜೋಡಿಸಬೇಕಿದೆ.

© ಕುಮುದ ಕೆ. ಬಿ.

ಲೇಖನ: ಕುಮುದ ಕೆ. ಬಿ.
             ಚಿಕ್ಕಮಗಳೂರು ಜಿಲ್ಲೆ

Spread the love

One thought on “ಗಣಿ ಪರಿಸರಕ್ಕೆ ಬವಣೆಯಾಗದಿರಲಿ..

  1. ಗಣಿಗಾರಿಕೆಯಿಂದ ಸ್ಥಳೀಯ ಜನ-ಜೀವನದ ಮತ್ತು ಅರಣ್ಯ-ವನ್ಯಸಂಪತ್ತಿನ ಮೇಲಾಗುತ್ತಿರುವ ಕೆಟ್ಪ ಪರಿಣಾಮಗಳ ಕುರಿತು ಯಾರೂ ಯೋಚಿಸುತ್ತಿಲ್ಲ, ಸರ್ಕಾರಿ ಸಂಸ್ಥೆಗಳು, NGOಗಳು ಸಹ ಇಲ್ಲಿ ಕೈಚೆಲ್ಲಿ ಕೂತಿವೆ, ಸಂಡೂರಿನ ಭೂಗರ್ಭದಲ್ಲಡಗಿರುವ ಬೆಲೆಬಾಳುವ ಸಂಪತ್ತಿನ ಮೇಲೆಯೇ ಪ್ರತಿಯೊಬ್ಬರ ಕಣ್ಣು.

Comments are closed.

error: Content is protected.