ಸೋಮಾರಿ ಮಿಡತೆ

© ಶ್ರೀನಿವಾಸ್ ಕೆ. ಎಸ್.
ಬೆಳಿಗ್ಗೆ ತುಳಸಿ ಗಿಡಕ್ಕೆ ಪೂಜೆ ಮಾಡಿ ನೀರು ಹಾಕುತ್ತಿದ್ದಾಗ, ಅಲ್ಲೇ ಮೆಟ್ಟಿಲಿನ ಮೇಲೆ ಕುಳಿತಿದ್ದ ನನ್ನ ಮಗ ಪಕ್ಕದಲ್ಲಿರುವ ಗೋಡೆಯನ್ನು ದಿಟ್ಟಿಸುತ್ತಾ,
“ನಾವೆಲ್ಲರೂ… ಮಜಾ ಮಾಡೋಣ,
ನಾಳೆಯ ಚಿಂತೆ ನಮಗೆ ಇಲ್ಲಾ.
ಹೊಯ್…”
ಎಂದು ಹಾಡುತ್ತಿದ್ದ. ಈ ಹಾಡನ್ನು ಎಲ್ಲೋ ಕೇಳಿದ್ದೇನಲ್ಲಾ? ಅಂತ ಯೋಚಿಸತೊಡಗಿದೆ. ಮತ್ತೆ
“ನಾವೆಲ್ಲರೂ ಕೆಲಸ ಮಾಡೋಣ,
ಭವಿಷ್ಯದ ಬಗ್ಗೆ ಯೋಚಿಸೋಣ.
ಹೊಯ್…”

ಅಂತ ಮುಂದಿನ ಸಾಲನ್ನು ಹಾಡಿದ.! ಅವನು ಎರಡು ವರ್ಷದ ಹಿಂದೆ ಕಲಿತಿದ್ದ ಹಾಡಿದು ಈಗೇಕೆ ನೆನಪಾಯಿತು ಇವನಿಗೆ? ಅಂತ “ಏನೋ ಇವತ್ತು ಇದನ್ನ ಹಾಡ್ತಾ ಇದ್ದೀಯಾ?” ಎಂದು ಕೇಳಿದೆ. ಸಿಕ್ಕಿದ್ದೇ ಚಾನ್ಸು ಅಂದುಕೊಂಡ ನನ್ನ ಕಿಲಾಡಿ ಮಗ, ತನ್ನ ಟಿ ಶರ್ಟಿನ ಕಾಲರ್ ಅನ್ನು ಏರಿಸುತ್ತಾ “ಅಲ್ಲಿ ನೋಡಲ್ಲಿ” ಅಂತ ಗೋಡೆ ಕಡೆ ಕೈ ತೋರಿಸಿದ. ಅಲ್ಲೊಂದು ಹಸಿರು ಮಿಡತೆ ಇವನ ಹಾಡನ್ನು ಕೇಳುತ್ತ ಕುಳಿತಿತ್ತು. ನಾನು ದಿಟ್ಟಿಸಲು ಶುರು ಮಾಡಿದೊಡನೆ ತನ್ನ ತಪಸ್ಸಿಗೆ ಭಂಗವಾದಂತೆ ಟಪ್… ಎಂದು ಒಂದೇ ನೆಗೆತಕ್ಕೆ ಎಲ್ಲಿಯೋ ಅದೃಶ್ಯವಾಗಿಬಿಟ್ಟಿತು. ಆಗ ಅರ್ಥವಾಯಿತು, ಎರಡು ವರ್ಷದ ಹಿಂದೆ ಶಾಲೆಯಲ್ಲಿ, ಕಥೆ ಹೇಳುವ ಸ್ಪರ್ಧೆ ಇದ್ದಾಗ ಇವನಿಗೆ ಸೋಮಾರಿ ಮಿಡತೆ ಬಗ್ಗೆ ಕಥೆ ಹೇಳಿ ಕೊಟ್ಟಿದ್ದೆ. ಕಥೆ ನೆನಪಿರಲೆಂದು ಈ ಹಾಡನ್ನು ಕೂಡ ಹೇಳಿಕೊಟ್ಟಿದ್ದೆ. ಅದು ವ್ಯರ್ಥವಾಗಲಿಲ್ಲ ಎಂದುಕೊಂಡೆ. ಈಗ ಇನ್ನೂ ಸ್ವಲ್ಪ ಹೆಚ್ಚಿನ ಮಾಹಿತಿ ಕೊಡಬಹುದಲ್ಲವೇ? ಎಂದು ಯೋಚಿಸುತ್ತಾ ಮಗನೊಂದಿಗೆ ಸಂವಾದಕ್ಕೆ ಇಳಿದೆ.

ಮೊಟ್ಟ ಮೊದಲಿಗೆ ತಲೆಗೆ ಬಂದ ವಿಷಯ ಪ್ರಶ್ನೆಯೇ ಮಿಡತೆಯ ಮೈ ಬಣ್ಣ. ಅಂದು ಕಥೆ ಹೇಳಿದ್ದಾಗ ನಾನು ಅದನ್ನು ಹಸಿರು ಬಣ್ಣದಲ್ಲಿ ರೂಪಿಸಿದ್ದರೂ, ಮಿಡತೆಗಳು ಹಸಿರು ಬಣ್ಣ ಹೊರತು ಕಂದು ಬಣ್ಣ, ಕಂದು ಮಿಶ್ರಿತ ಕಪ್ಪು ಬಣ್ಣ ಹಾಗು ಬೂದು ಬಣ್ಣದಲ್ಲಿಯೂ ಸಹ ಹೆಚ್ಚು ಕಾಣಬಹುದಾಗಿದೆ. ಕೆಲ ಮಿಡತೆಗಳ ರೆಕ್ಕೆ ಬಣ್ಣ ಕೂಡ ತುಂಬಾ ಆಕರ್ಷಣೀಯವಾಗಿರುತ್ತವೆ. ಆದರೆ ಸಾಮಾನ್ಯವಾಗಿ ಕಂಡುಬರುವ ಮಿಡತೆಗಳೆಂದರೆ ಹಸಿರು ಮತ್ತು ಕಂದು ಬಣ್ಣದ್ದು. ‘ಯಾಕೆ ಮಿಡತೆ ಹಸಿರು ಬಣ್ಣದ್ದಾಗಿರುತ್ತದೆ? ‘ ಎಂದು ನಾನು ಮಗನಿಗೆ ಪ್ರಶ್ನೆ ಕೇಳಿದಾಗ, ಆತ ತುಂಬಾ ಮುಗ್ಧ ಮತ್ತು ಪ್ರಾಮಾಣಿಕವಾಗಿ ‘ಯಾಕೆಂದರೆ ಅದು ಹಸಿರು ಹುಲ್ಲನ್ನು ತಿನ್ನುತ್ತದೆಯಲ್ಲವೇ? ಅದಕ್ಕೆ!’ ಅಂತ ಉತ್ತರಿಸಿದ. ನಾನು ಮತ್ತೆ ‘ಹಾಗಾದರೆ ನಮ್ಮ ಊರಲ್ಲಿರುವ ಎಮ್ಮೆ ದಿನಾ ಹಸಿರು ಮೇವನ್ನೇ ತಿನ್ನುತ್ತದಲ್ಲವೇ? ಅದ್ಯಾಕೆ ಹಸಿರಾಗಿಲ್ಲ?’ ಎಂದೆ. ಅದಕ್ಕೆ ಅವನು ‘ಹೋ… ಹೌದಲ್ಲಾ?’ ಎಂದು ನಗತೊಡಗಿದ! ವಿಷಯ ಮತ್ತೆ ಬೇರೆ ಕಡೆ ಹೊರಳುವುದಕ್ಕಿಂತ ಮುಂಚೆ ತುಂಬಾ ಎಚ್ಚರಿಕೆಯಿಂದ ‘ನೋಡು, ಬೇರೆ ಪ್ರಾಣಿ ಪಕ್ಷಿಗಳಿಂದ ತಪ್ಪಿಸಿಕೊಳ್ಳಲು ತಮ್ಮ ಶರೀರದ ಮೈಬಣ್ಣವನ್ನು ತಮ್ಮ ಆವಾಸಸ್ಥಾನಕ್ಕೆ ಹೊಂದಿಸಿಕೊಳ್ಳಲು ಈ ವಿವಿಧ ಬಣ್ಣ! ಹಸಿರು ಹುಲ್ಲಿನಲ್ಲಿ ಹಸಿರು ಮಿಡತೆಯನ್ನು ಹುಡುಕುವುದು ಕಷ್ಟವಲ್ಲವೇ?’ ಎಂದು ತಿಳಿ ಹೇಳಿದೆ. ಅಂದ ಹಾಗೆ ಇದು ಸಸ್ಯಾಹಾರಿಯಾಗಿದ್ದು, ಹೆಚ್ಚಾಗಿ ಹುಲ್ಲುಗಾವಲಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಅಷ್ಟೇ ಅಲ್ಲದೆ ನಮ್ಮ ಸುತ್ತಲಿನ ಕೈತೋಟದಲ್ಲಿ ಕೂಡ ಕಾಣಿಸುತ್ತದೆ. ಬಹುತೇಕ ಅತೀ ತಂಪಾದ ಮತ್ತು ಅತೀ ಉಷ್ಣದ ಪ್ರದೇಶಗಳನ್ನು ಬಿಟ್ಟು ಉಳಿದೆಲ್ಲ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಜಗತ್ತಿನಲ್ಲಿ ಮಿಡತೆಯ ಸುಮಾರು 11,000 ಪ್ರಬೇಧಗಳಿವೆಯಂತೆ! ಇದು ಆರ್ಥೋಪ್ಟೆರಾ (Orthoptera) ಎಂಬ ವರ್ಗದ, ಕೈಲಿಫೆರಾ (Caelifera) ಎಂಬ ಉಪವರ್ಗಕ್ಕೆ ಸೇರಲ್ಪಡುತ್ತದೆ. ಮಿಡತೆಯ ಉಗಮ ಸುಮಾರು 220 ಮಿಲಿಯನ್ ವರ್ಷಗಳ ಹಿಂದೆ ಟ್ರಿಯಾಸಿಕ್ ಕಾಲಘಟ್ಟದಲ್ಲಿ ಆಗಿರಬಹುದೆಂಬ ಅಂದಾಜಿದೆ. ಪಳೆಯುಳಿಕೆಗಳ ಆಧಾರದ ಮೇಲೆ ಇವು ಅಂದಿನಿಂದ ಇಲ್ಲಿಯವರೆಗೆ ಇವುಗಳ ಶಾರೀರಿಕ ಗುಣಲಕ್ಷಣಗಳಲ್ಲಿ ಯಾವುದೇ ರೀತಿಯ ಭಿನ್ನತೆ ಕಂಡುಬಂದಿಲ್ಲ ಎಂದು ಹೇಳುತ್ತಾರೆ. ಉಳಿದ ಕೀಟಗಳಂತೆ ಮಿಡತೆಯ ದೇಹ ಕೂಡ ಮೂರು ಭಾಗಗಳಲ್ಲಿ ವಿಂಗಡಿಸಿದ್ದು, ದೊಡ್ಡದಾದ ತಲೆ, ಥೋರಾಕ್ಸ್ ಮತ್ತು ಹೊಟ್ಟೆ ಎಂಬ ಮೂರು ಭಾಗಗಳಿವೆ. ಇದರ ಹಿಂಗಾಲುಗಳು ಬಲಿಷ್ಠವಾಗಿದ್ದು ನೆಗೆಯಲು ಸಹಕಾರಿಯಾಗಿವೆ. ಹೆಣ್ಣು ಮಿಡತೆಗಳು ಗಂಡಿಗಿಂತ ದೊಡ್ಡದಾಗಿರುತ್ತವೆ. ಹೆಣ್ಣು ಮಿಡತೆಯ Ovipositor ಹೊಂದಿರುವ ಕಾರಣ ಇವುಗಳ ವರ್ಗಕ್ಕೆ ಕೈಲಿಫೆರಾ (Caelifera) (Caelifera ಎಂಬುದು ಲ್ಯಾಟಿನ್ ಶಬ್ದವಾಗಿದೆ. ಮಿಡತೆಯ ಬಲಿಷ್ಠವಾದ ಒವಿಪೋಸಿಟೋರ್ ಅಂದರೆ ಮೊಟ್ಟೆ ಇಡುವ ಅಂಗಾಂಶದ ಆಧಾರದ ಮೇಲೆ ಇದನ್ನು ವರ್ಗಿಕರಿಸಲಾಗಿದೆ. ಮಿಡತೆಯು ತನ್ನ ovipositor ನಿಂದ ನೆಲವನ್ನು ಅಗೆದು ಅದರಲ್ಲಿ ಮೊಟ್ಟೆಯ ಚೀಲವನ್ನು ಹುದುಗಿಸಿ ಇಡುತ್ತದೆ) ಎಂಬ ಹೆಸರು ಬಂದಿದೆ. ಮಿಡತೆಯು ತನ್ನ Ovipositor ನಿಂದ ನೆಲವನ್ನು ಅಗೆದು ಅದರಲ್ಲಿ ಮೊಟ್ಟೆಯ ಚೀಲವನ್ನು ಹುದುಗಿಸಿ ಇಡುತ್ತದೆ. ಒಂದು ಮೊಟ್ಟೆಯ ಚೀಲದಲ್ಲಿ ಸುಮಾರು 25 ರಿಂದ 100 ಮೊಟ್ಟೆಗಳಿರುತ್ತವೆ. ಮೊಟ್ಟೆ ಇಟ್ಟ ಎರಡು ವಾರಗಳ ಬಳಿಕ ಮರಿ ಹೊರಬರುತ್ತವೆ. ಇವುಗಳನ್ನು ನಿಂಪ್ (nymph) ಎನ್ನುತ್ತಾರೆ. ನಂತರ ನಾಲ್ಕರಿಂದ ಏಳು ವಾರಗಳವರೆಗೆ ಇವು ಆರೇಳು ಬಾರಿ ರೂಪಾಂತರ (moulting) ಹೊಂದುತ್ತವೆ. ನಂತರ ರೆಕ್ಕೆ ಮೂಡಿ ವಯಸ್ಕ ಮಿಡತೆಯಾಗಿ ಮಾರ್ಪಾಡಾಗುತ್ತವೆ.




ಸಾಮಾನ್ಯವಾಗಿ ಮಿಡತೆಯು ಏಕಾಂತ ವಾಸಿ (solitary). ಆದರೆ ಕೆಲವೊಮ್ಮೆ ಇವು ಗುಂಪುಗಳಲ್ಲಿ ಕೂಡಿ ಬೆಳೆಯ ಮೇಲೆ ಆಕ್ರಮಣ ಮಾಡುತ್ತವೆ. ಇದಕ್ಕೆ Swarms ಎನ್ನುತ್ತೇವೆ. ಹೀಗಾದಾಗ ಮಾತ್ರ ಇವುಗಳ ಸಂಖ್ಯೆಯನ್ನು ನಿಯಂತ್ರಿಸುವುದು ಒಂದು ದೊಡ್ಡ ತಲೆನೋವೇ. ಮಿಡತೆಯ ಜೀವಿತಾವಧಿ ಸುಮಾರು 12 ತಿಂಗಳು. ಈ ಜೀವಿತಾವಧಿಯಲ್ಲಿ ಒಂದು ಮಿಡತೆ ಲಕ್ಷಗಟ್ಟಲೆ ಮಿಡತೆಗಳು ಹುಟ್ಟುವುದಕ್ಕೆ ಕಾರಣವಾಗಿದ್ದರೂ, ಇವುಗಳು ಆಹಾರ ಸರಪಣಿಯಲ್ಲಿ ಮುಖ್ಯ ಪಾತ್ರ ವಹಿಸುವುದರಿಂದ ಇವುಗಳಿಂದ ಮಾನವರಿಗೆ ಯಾವುದೇ ಹಾನಿಯಾಗುವುದಿಲ್ಲ. ಪಕ್ಷಿ, ಕಪ್ಪೆ, ಹಲ್ಲಿ ಮತ್ತು ಇತರ ಸರಿಸೃಪಗಳಿಗೆ ಇದು ಮುಖ್ಯ ಆಹಾರವಾಗಿದೆ. ಹಾಗೆಯೇ ಇಂಡೋನೇಷ್ಯಾ ಮತ್ತು ಚೀನಾದಲ್ಲಿ ಮನುಷ್ಯರು ಕೂಡ, ಪ್ರೋಟೀನ್ ಆಕರಗಳಾದ ಈ ಮಿಡತೆಗಳನ್ನು ತಿನ್ನುತ್ತಾರಂತೆ. ನನ್ನ ಮಗನಿಗೆ ಎಷ್ಟು ಅರ್ಥವಾಯಿತೋ ಏನೋ ತಿಳಿಯದು ಒಟ್ಟಿನಲ್ಲಿ ಇಷ್ಟೂ ಮಾಹಿತಿಯನ್ನು ಸ್ವಲ್ಪ ಸ್ವಲ್ಪವೇ ತಿಳಿದುಕೊಂಡು, ಅವನಿಗೆ ತಿಳಿಸಿಹೇಳಲು ನನಗೆ ಹೆಚ್ಚು ಸಮಯವೇ ಬೇಕಾಯಿತು.
ಹೀಗೆ ನಮ್ಮ ಸುತ್ತಲಿರುವ ಎಷ್ಟೊಂದು ಜೀವಿಗಳ ಬಗ್ಗೆ, ಅದರಲ್ಲೂ ಕೀಟಗಳ ಬಗ್ಗೆ ಸಾಮಾನ್ಯ ಜನರಾದ ನಮಗೆ ಇರುವ ಮಾಹಿತಿ ಅಲ್ಪ ಎಂದರೆ ತಪ್ಪಾಗಲಾರದು. ಮುಂದಿನ ಸಂಚಿಕೆಯಲ್ಲಿ ಮತ್ತೊಂದು ಹೊಸ ಕೀಟದ ಕತೆಯೊಂದಿಗೆ ಭೇಟಿ ನೀಡೋಣ.



ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ
ಬೆಂಗಳೂರು ನಗರ ಜಿಲ್ಲೆ