ವಡೇನಕೆರೆ ಕೆರೆ ಹಬ್ಬ – ೨೦೨೩

ವಡೇನಕೆರೆ ಕೆರೆ ಹಬ್ಬ – ೨೦೨೩

© ಡಬ್ಲ್ಯೂ. ಸಿ. ಜಿ.

ಬನ್ನಿ ಕಣ್ಮರೆಯಾಗುತ್ತಿರುವ ಕಾಮನ್ಸ್‌ ಗಳನ್ನು ಮರಳಿ ಪಡೆಯೋಣ

ನಮ್ಮ ಸುತ್ತ ಮುತ್ತ ಇರುವ ಕೆರೆ, ಗೋಮಾಳ, ಸಾಲು-ಮರ, ಗುಂಡುತೋಪುಗಳನ್ನು ಮತ್ತು ಅಲ್ಲಿನ ಗಿಡಮರಬಳ್ಳಿ, ಜೀವವೈವಿಧ್ಯ ಎಲ್ಲವುದನ್ನು ಸೇರಿಸಿ ಕಾಮನ್ಸ್‌ ಎನ್ನುತ್ತಾರೆ.

ʼಕಾಮನ್ಸ್‌ ಗಳುʼ ಇವು ಒಂದು ಸಮುದಾಯದ ಜನಗಳಿಂದ ಅಲ್ಲಿನ ಜನ-ಜಾನುವಾರುಗಳಿಗಾಗಿ ನೂರಾರು ವರ್ಷಗಳಿಂದ ರಕ್ಷಿಸಿ ಮೀಸಲಿಟ್ಟ ಪ್ರದೇಶಗಳಾಗಿವೆ.   ಕೆರೆ, ಕುಂಟೆ, ಬಾವಿ, ಸಾಲುಮರ, ಗುಂಡುತೋಪು, ಅರಳಿಕಟ್ಟೆ ಗೋಮಾಳ, ಸ್ಮಶಾನ, ರಾಜಕಾಲುವೆ ಇವೆ ಮೊದಲಾದ ಸಮುದಾಯಕ್ಕೆ ಸಂಬಂಧಿಸಿದ ಪ್ರದೇಶಗಳು. ಇವು ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಮತ್ತು ಇತರೆ ಜೀವ ಜಂತುಗಳಿಗೆ ಹಲವು ಪ್ರಮುಖ ಸೇವೆಗಳನ್ನು ನಿರಂತರವಾಗಿ ಒದಗಿಸುತ್ತಿವೆ.  ಆದರೆ ಬದಲಾಗುತ್ತಿರುವ ಜನರ ಆದ್ಯತೆ ಮತ್ತು ಜೀವನ ಶೈಲಿಯ ಹಾಗು ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಅನಿಯಂತ್ರಿತ ನಗರ ವಲಸೆಯ ಪರಿಣಾಮವಾಗಿ ಬೆಂಗಳೂರು ಮಹಾನಗರದ ಕಾಮನ್ಸ್‌ ಗಳು ತೀವ್ರವಾದ ಒತ್ತಡಗಳನ್ನು ಎದುರಿಸುತ್ತಿವೆ.

ಹಿಂದಿನ ತಲೆಮಾರಿನ ಜನರಿಗೆ ಕಾಮನ್ಸ್ ಗಳ ಪ್ರಾಮುಖ್ಯತೆ ತಿಳಿದಿತ್ತು.  ಈಗಿನ ನವ ನಾಗರಿಕತೆಯ ಜನಕ್ಕೆ ತಿಳಿಯುತ್ತಿಲ್ಲ. ಏಕೆಂದರೆ ಸೌದೆಗೆ – ಗ್ಯಾಸ್‌ ಇದೆ. ಔಷಧಿಗೆ – ಆಸ್ಪತ್ರೆ ಇದೆ.  ನೀರಿಗೆ – ನಲ್ಲಿ ಇದೆ.  ಹಾಲಿಗೆ – ಡೈರಿ ಇದೆ. ಊಟಕ್ಕೆ – ಹೋಟೆಲ್ ಇದೆ. ಧವಸ ಧಾನ್ಯಗಳಿಗೆ, ಸೊಪ್ಪು – ತರಕಾರಿಗಳಿಗೆ ಸಂತೆಗಳಿವೆ, ಅಂಗಡಿಗಳಿವೆ. ಇದರಿಂದ ಕಾಮನ್ಸ್‌ ಗಳಿಂದ ಜನರು ದೂರ ಸರಿದಿದ್ದಾರೆ. ಇಂದು ಕಾಮನ್ಸ್‌ಗಳು ಜನರ ನೇರ ಭಾಗವಹಿಸುವಿಕೆಯಿಂದ ದೂರವಾಗಿ ಯಾರಿಗೂ ಬೇಡವಾಗಿ ಹೇಳುವವರು ಕೇಳುವವರು ಇಲ್ಲದೆ ನಿರ್ಲಕ್ಷಕ್ಕೆ ಗುರಿಯಾಗಿವೆ. ಇದರ ನೇರ ಲಾಭ ಪಡೆಯುತ್ತಿರುವ ಭೂಗಳ್ಳರು, ರಾತ್ರೋ ರಾತ್ರಿ ಕಾಮನ್ಸ್‌ಗಳನ್ನು ಒತ್ತುವರಿ ಮಾಡಿ, ಜೆಸಿಬಿಯಿಂದ ಸಮ ಮಾಡಿ, ರಸ್ತೆ ಚರಂಡಿ ನಿರ್ಮಿಸಿ, ಕಬಳಿಸುತ್ತಿದ್ದಾರೆ. ಇದರ ಪರಿಣಾಮವನ್ನು ಅಲ್ಲಿ ಸಾವಿರಾರು ವರ್ಷದಿಂದ ನೆಲೆ ನೆಲೆಸಿ ಜೀವಿಸುತ್ತಿರುವ ಮರ-ಗಿಡ, ಕ್ರಿಮಿ-ಕೀಟ, ಏಡಿ-ಆಮೆ, ಮೀನು, ಕಪ್ಪೆ, ಚಿಟ್ಟೆ, ಪಕ್ಷಿಗಳು ತಮ್ಮ ನೆಲೆ ಕಳೆದುಕೊಂಡು ಆಶ್ರಯ ರಹಿತವಾಗಿವೆ. ನೆಲೆ ಕಳೆದುಕೊಂಡ ಹಲವು ಜೀವಿಗಳು ಅಲೆದು ಅಲೆದು ಟಾರ್‌ ರಸ್ತೆಗೆ ಬಂದು ಚಕ್ರಕ್ಕೆ ತಲೆಕೊಟ್ಟು ಸಾಯುತ್ತಿವೆ. ಇವುಗಳ ಗೋಳು ಕೇಳುವವರು ಯಾರು? ಕಂಡರೂ ಕಾಣದು.! ಆಳುವ ಸರ್ಕಾರಕ್ಕೆ, ದೇಶಕ್ಕೆ ಜನರ ಸೌಖ್ಯವೇ ಮುಖ್ಯ. ಈ ಹುಳ-ಹುಪ್ಪಟ್ಟೆಗಳ ಗೋಳು ಯಾರಿಗೂ ಕೇಳದು. ಈ ರೀತಿ ನಿರ್ಲಕ್ಷಕ್ಕೆ ಒಳಗಾಗಿರುವ ಬೆಂಗಳೂರು ಹೊರವಲಯದ ಕಾಮನ್ಸ್‌ಗಳ ಬಗ್ಗೆ, ಅಲ್ಲಿನ ಯುವಜನರಿಗೆ, ವಿದ್ಯಾರ್ಥಿಗಳಿಗೆ, ತಿಳಿಸುವುದು, ಅಳಿದುಳಿದಿರುವ ಕಾಮನ್ಸ್‌ ಬಗ್ಗೆ ಅರಿವು ಮೂಡಿಸಿ ಮತ್ತೆ ಜನರ ಒಡೆತನಕ್ಕೆ ಪಡೆಯುವ ಹಾಗೆ ಮಾಡುವ ಸಣ್ಣ ಪ್ರಯತ್ನವೇ ಪ್ರಾಜೆಕ್ಟ ಕಾಮನ್ಸ್. ಇದರ ಒಂದು ದಿವ್ಯ ನಿದರ್ಶನವೇ ವಡೇನಕೆರೆ ಕೆರೆ ಹಬ್ಬ.

ಆನೇಕಲ್‌ ತಾಲ್ಲೂಕು, ಮಂಟಪ ಗ್ರಾಮ ಪಂಚಾಯಿತಿಯ ಕಾಳೇಶ್ವರಿ ಗ್ರಾಮದ ವಡೇನಕೆರೆಯ ಸುತ್ತಲಿನ ಖಾಲಿ ಜಾಗದಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ದಿನಾಂಕ 8/10/2023 ರಂದು ಡಬ್ಲ್ಯೂ ಸಿ ಜಿ ಮತ್ತು ಸ್ನೇಹಸಂಪದ ತಂಡ ಸೇರಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದಯಾನಂದ ಸಾಗರ್‌ ಇನ್ಸ್ಟಿಟ್ಯೂಟ್‌ ಆಪ್‌ ಟೆಕ್ನಾಲಜಿ, ಬೆಂಗಳೂರು ಮತ್ತು ನೃಪತುಂಗ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಅಪ್ಲೈಡ್ ಸಿಸ್ಟಮ್ಸ್ ಕಂಪನಿಯ ಕಾರ್ಮಿಕರು, ಇನ್ನು ಕೆಲವು ಸ್ವಯಂ ಸೇವಕರು ಭಾಗವಹಿಸಿ ಯಶಸ್ವಿಗೊಳಿಸಿದರು. ಬೆಳಿಗ್ಗೆ 8 ಗಂಟೆಗೆ ಶುರುವಾದ ಕೆರೆ ಹಬ್ಬ ಕಾರ್ಯಕ್ರಮದಲ್ಲಿ ಮೊದಲು ಕೆರೆಯ ಇತಿಹಾಸ, ಪರಿಚಯವನ್ನು ಕೆರೆಹಬ್ಬಕ್ಕೆ ಬಂದಿದ್ದ ಎಲ್ಲರಿಗೂ ತಿಳಿಸಿಕೊಡಲಾಯಿತು. ನಂತರ ವಿದ್ಯಾರ್ಥಿಗಳು ಶ್ರಮದಾನ ಮಾಡಿ,  ಕೆರೆಯ ಸುತ್ತಮುತ್ತ ಬಿದ್ದಿದ್ದ ಪ್ಲಾಸ್ಟಿಕ್‌ ಕಸವನ್ನು ಆಯ್ದು ಸ್ವಚ್ಚಗೊಳಿಸಿದರು.  ನಂತರ ಇಡ್ಲಿ ಸಾಂಬಾರ್ ಸವಿದರು. ಡಬ್ಲ್ಯೂ ಸಿ ಜಿ ಯು ಕೆರೆಯ ಅಂಗಳದಲ್ಲಿ ಏರ್ಪಡಿಸಿದ್ದ ವನ್ಯಜೀವಿ ಛಾಯಾಚಿತ್ರಗಳನ್ನು ವೀಕ್ಷಿಸಿ ಕೆರೆಯ ಪರಿಸರದಲ್ಲಿರುವ ಕಪ್ಪೆ, ಪಕ್ಷಿ, ಕೀಟಗಳ ಬಗ್ಗೆ ತಿಳಿದುಕೊಂಡರು. ನಂತರ ಅವರೇ ಸಣ್ಣ ಸಣ್ಣ ಗುಂಪುಗಳಾಗಿ ಗುಂಪು ಗುಂಪಾಗಿ ಸೇರಿಕೊಂಡು, ನೇರಳೆ, ಹಲಸು, ಗಸಗಸೆ, ಹೊಳೆಮತ್ತಿ, ಆಲ, ಅತ್ತಿ ಪ್ರಭೇದದ ಸುಮಾರು 140 ಗಿಡಗಳನ್ನು ಒತ್ತೊಯ್ದು ಪಾತಿಗಳಲ್ಲಿ ಇಟ್ಟು ನೆಟ್ಟರು. ನಾಟಿ ಮಾಡಿದ ಗಿಡಗಳಿಗೆ ಮಾನವ ಸರಪಳಿ ನಿರ್ಮಿಸಿ ಕೆರೆಯಿಂದಲೇ ನೀರನ್ನು ತೆಗೆದು ಗಿಡಗಳಿಗೆ ಜೀವ ನೀರುಣಿಸಿದರು. ಕುಗ್ಗದ ಉತ್ಸಾಹ, ಅಪರಿಮಿತ ಜೋಷ್‌ ನಿಂದ ಎಲ್ಲಾ ಕೆಲಸ ಸಾಂಘವಾಗಿ ಜರುಗಿತು. ಕೆರೆಯ ಬಳಿಯ ಹೊಂಗೆಯ ನೆರಳಲ್ಲಿ ಬೋಜನ ಸವಿದು, ಎಲ್ಲರೂ “ಕಾಮನ್ಸ್‌ ಗಳನ್ನು ಉಳಿಸಲು ನಾವಿದ್ದೇವೆ” ಎಂದು ಹೇಳಿ ಹೊರಟರು. ಊಟದ ಕೊನೆಯ ಸಾಲಿನ ಕೆಲವರಿಗೆ ಜಾಮೂನು ಸಾಲ್ಟೇಜ್‌ ಬಂದದ್ದು ಬಿಟ್ಟರೆ, ಉಳಿದಂತೆ ವಡೇನಕೆರೆ ಕೆರೆ ಹಬ್ಬ ಸಂಪನ್ನವಾಗಿತ್ತು. 

        ಇಂದಿನ ವಿದ್ಯಾರ್ಥಿಗಳನ್ನು ಯುವಕರನ್ನು ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗುವಂತೆ ಮಾಡುವುದೇ ಒಂದು ಸವಾಲಿನ ಕೆಲಸ. ಅದಕ್ಕೆ ಕಾರಣ ಹಲವು. ಆದರೆ ಈ ಕೆರೆ ಹಬ್ಬದಲ್ಲಿ ಸರಿ ಸುಮಾರು 120 ಜನ ಭಾಗವಹಿಸಿದ್ದರು ಎಂಬುದು ಸಂತಸದ ವಿಷಯವೇ ಸರಿ!

ಲೇಖನ: ಶಂಕರಪ್ಪ ಕೆ. ಪಿ.
        ಡಬ್ಲ್ಯೂ.ಸಿ.ಜಿ., ಬೆಂಗಳೂರು ಜಿಲ್ಲೆ

Print Friendly, PDF & Email
Spread the love
error: Content is protected.