ಶಬ್ದ ನಡೆದದ್ದೇ ದಾರಿ..

‘ಆನೆ ನಡೆದದ್ದೇ ದಾರಿ’ ಎಂಬ ಮಾತುಂಟು. ಏಕೆಂದರೆ ಆನೆಯಂತಹ ದೈತ್ಯ ಪ್ರಾಣಿ ಕಾಡಿನಲ್ಲಿ ಸಾಗುತ್ತಿದ್ದರೆ ಸಣ್ಣ ಪುಟ್ಟ ಗಿಡ ಮರಗಳೆಲ್ಲಾ ಮುದುಡಿ ಮುರಿದುಹೋಗುತ್ತವೆ. ಹಿಂಡಿನಲ್ಲಿ ಇರುವಾಗ ಹೀಗೆ ಹಿಂಬಾಲಿಸುವ ಉಳಿದ ಆನೆಗಳು ಇನ್ನೂ ದಾರಿಯನ್ನು ಹಿಗ್ಗಿಸಿಬಿಡುತ್ತವೆ. ಆಗ ನಮ್ಮಂತಹ ಸಣ್ಣ ಶರೀರದ ಜೀವಿಗಳು ಆ ದಾರಿಯಲ್ಲಿ ನಿರಾಯಾಸವಾಗಿ ಸಾಗಬಹುದು. ಕಾಡಿನಲ್ಲಿ ಓಡಾಡಲು ನಾವು ಬಳಸುವ ಎಷ್ಟೋ ದಾರಿಗಳು ಈ ಆನೆಗಳು ಮಾಡಿರುವ ದಾರಿಗಳೇ. ಅದು ಸರಿ ಅದಕ್ಕೂ ಶಬ್ದ ನಡೆದದ್ದೇ ದಾರಿ ಎನ್ನುವುದಕ್ಕೂ ಏನು ಸಂಬಂಧ? ಶಬ್ದ ಎಲ್ಲಿಯಾದರು ನಡೆಯುತ್ತೇನು? ಇಲ್ಲ. ಆದರೆ ಕಾಡಿನಲ್ಲಿ ಆನೆಗಳು ನಡೆದು ಮಾಡುವ ದಾರಿಗಳನ್ನು ನಾವು ಬಳಸುವ ಹಾಗೆ ಮೆದುಳಿನ ಕ್ಯಾನ್ಸರ್ ನಂತಹ ಮಹಾರೋಗಕ್ಕೆ ಶ್ರವಣಾತೀತ ಶಬ್ದ ತರಂಗಗಳನ್ನು ಬಳಸಿ, ದಾರಿ ಮಾಡಿ, ಆ ದಾರಿಯ ಮೂಲಕ ಔಷಧಿಗಳನ್ನು ಬಾಧಿತ ವಲಯಗಳಿಗೆ ಕಳಿಸಿ, ಚಿಕಿತ್ಸೆ ಕೊಡುವ ಹೊಸ ವಿಧಾನವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.
ಕ್ಯಾನ್ಸರ್ ಎಂದರೆ ಗುಣಪಡಿಸಲಾರದಂತಹ ಒಂದು ವ್ಯಾಧಿ ಎಂದು ಭಾವಿಸಿ, ನಂಬಿದ್ದ ದಿನಗಳಿದ್ದವು. ಆದರೆ ಈಗ ಹಾಗಲ್ಲ. ವಿಜ್ಞಾನ, ತಂತ್ರಜ್ಞಾನ ಬೆಳೆದಂತೆ ಕ್ಯಾನ್ಸರ್ ನಂತಹ ಮಹಾರೋಗಕ್ಕೂ ಚಿಕಿತ್ಸೆಗಳು ತಲೆ ಎತ್ತುತ್ತಿವೆ. ಆದರೆ ದೇಹದ ವಿವಿಧ ಭಾಗಗಳಲ್ಲಿ ಕಂಡುಬರುವ ಇತರ ಕ್ಯಾನ್ಸರ್ ಗಳಿಗಿಂತ ಮೆದುಳಿನಲ್ಲಿ ಕಾಡುವ ಕ್ಯಾನ್ಸರ್ ಗೆ ಇರುವ ಚಿಕಿತ್ಸಾ ವಿಧಾನಗಳು ಕಡಿಮೆ ಎಂದೇ ಹೇಳಬೇಕು. ಏಕೆಂದರೆ ದೇಹದ ಬೇರೆ ಭಾಗಗಳಲ್ಲಿ ಅಂದರೆ ಶ್ವಾಸಕೋಶಗಳಲ್ಲಿ ಕಾಣುವ ಕ್ಯಾನ್ಸರ್ ಗಳಿಗೆ ಔಷಧಿಯನ್ನು ರವಾನಿಸಿ ಚಿಕಿತ್ಸೆ ನೀಡಬಹುದು. ಆದರೆ ಮೆದುಳನ್ನು ಕಾಪಾಡುವ ಆ ಬಲಿಷ್ಟ ತಲೆಚಿಪ್ಪು ಹಾಗೂ ರಕ್ಷಾಕವಚವನ್ನು ಭೇದಿಸಿ ಔಷಧಿಯನ್ನು ರವಾನಿಸುವುದು ಕಷ್ಟಾತಿಕಷ್ಟದ ಕೆಲಸ. ಆದರೆ ಈಗ ಕಂಡುಹಿಡಿದಿರುವ ಚಿಕಿತ್ಸಾವಿಧಾನದಲ್ಲಿ ಶ್ರವಣಾತೀತ ಶಬ್ದ ತರಂಗಗಳನ್ನು ಬಳಸಿ ಮೆದುಳಿನ ರಕ್ಷಾಕವಚವನ್ನು ತಾತ್ಕಾಲಿಕವಾಗಿ ಹರಿದು ನುಸುಳಿ ಹೋಗಿ ಔಷಧಿ ತಲುಪಬೇಕಿರುವ ಜಾಗಕ್ಕೆ ತಲುಪಲು ಶಬ್ದ ದಾರಿ ಮಾಡಿಕೊಡುತ್ತದೆ. ಅದು ಹೇಗೆಂದು ನೋಡೋಣ…
‘ಗ್ಲಿಯೋಬ್ಲಾಸ್ಟೋಮಾ’ ಎಂಬ ಒಂದು ಬಗೆಯ ಮೆದುಳಿನ ಕ್ಯಾನ್ಸರ್ ಬಾಧಿತ ರೋಗಿಗಳಿಂದ ಕ್ಯಾನ್ಸರ್ ಗೆಡ್ಡೆಯನ್ನು ಶಸ್ತ್ರಚಿಕಿತ್ಸೆಯಿಂದ ತೆಗೆಯುತ್ತಾರಾದರೂ ಅದೇ ಜಾಗದಲ್ಲಿ ಮತ್ತೆ ಆ ಕ್ಯಾನ್ಸರ್ ಗೆಡ್ಡೆಗಳು ತಲೆ ಎತ್ತುವ ಸಾಧ್ಯತೆಗಳು ಹೆಚ್ಚು. ಹೀಗೆ ಮಂಬುರುವ (ಮತ್ತೆ ಬರುವ) ಗೆಡ್ಡೆಯನ್ನು ಬಾರದ ಹಾಗೆ ತಡೆಯಲು ಕೆಲವು ಔಷಧಿಗಳಿವೆ. ಆದರೆ ಅದು ಮೆದುಳಿನ ಒಳಗೆ ಹೋಗಿ ತನ್ನ ಕಾರ್ಯಕ್ಷಮತೆಯನ್ನು ತೋರಲು ಮೆದುಳಿನ ರಕ್ಷಾಕವಚ ಅಡ್ಡಗೋಡೆಯಾಗಿದೆ. ಇದಕ್ಕೆ ಪರಿಹಾರವೇ ಇಲ್ಲವೇ? ಎಂಬ ಪ್ರಶ್ನೆಗೆ ಈಗ ‘ಹೌದು’ ಎಂದು ಉತ್ತರಿಸುತ್ತಿದ್ದಾರೆ ವಿಜ್ಞಾನಿಗಳು. ಹೌದು, ಶಬ್ದ ಮತ್ತು ಸೂಕ್ಷ್ಮ ಗಾಳಿ ಗುಳ್ಳೆಗಳನ್ನು ಉಪಯೋಗಿಸಿಕೊಂಡು ಮೆದುಳಿನ ರಕ್ಷಾಕವಚವನ್ನು ದಾಟಿ ಕ್ಯಾನ್ಸರ್ ಬಾಧಿತ ಮೆದುಳಿನ ಭಾಗಕ್ಕೆ ಔಷಧಿಯನ್ನು ಸೇರಿಸಬಹುದಾಗಿದೆ. ಇದಕ್ಕಾಗಿ ಔಷಧಿಯುಕ್ತ ಸೂಕ್ಷ್ಮ ಗಾಳಿ ಗುಳ್ಳೆಗಳನ್ನು ಶ್ರವಣಾತೀತ ತರಂಗಗಳಲ್ಲಿ ಕಂಪಿಸುತ್ತಾರೆ. ಇದರ ಪರಿಣಾಮ ಆ ಸೂಕ್ಷ್ಮ ಗಾಳಿ ಗುಳ್ಳೆಗಳು ಮೆದುಳಿನ ರಕ್ಷಾಕವಚದಲ್ಲಿ ಒತ್ತೊತ್ತಾಗಿರುವ ರಕ್ತನಾಳಗಳನ್ನು ದಾಟಿ ಸೂಕ್ತ ಜಾಗಕ್ಕೆ ಸೇರುತ್ತವೆ. ಇದರಿಂದಾಗಿ ಔಷಧಿ ತನ್ನ ಕೆಲಸವನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡುತ್ತದೆ ಎನ್ನುತ್ತಿದೆ ಈ ಸಂಶೋಧನೆ.

ಈ ಖಾಯಿಲೆಯಿಂದ ಬಳಲುತ್ತಿದ್ದ 17 ಜನರ ಮೇಲೆ ಇದನ್ನು ಪರೀಕ್ಷಿಸಲಾಯಿತು. ಸೂಕ್ಷ್ಮ ಗಾಳಿ ಗುಳ್ಳೆಗಳನ್ನು ಸುಮಾರು 5 ನಿಮಿಷಗಳ ಕಾಲ ಕಂಪಿಸಿದಾಗ ಆ ಸೂಕ್ಷ್ಮ ಗಾಳಿ ಗುಳ್ಳೆಗಳು 8 ಸೆಂ. ಮೀ. ನಷ್ಟು ಮೆದುಳಿನ ಒಳಗೆ ಹೋಗಿ ಬಾಧಿತ ಜಾಗವನ್ನು ತಲುಪಿತು. ನಂತರ ಮೆದುಳಿನ ಈ ಕ್ಯಾನ್ಸರ್ ಗೆ ಬಳಸುವ ‘ಪ್ಯಾಕ್ಲಿಟಾಕ್ಸೆಲ್’ ಎಂಬ ಔಷಧಿಯನ್ನು ನೀಡಿದರು. ಅಚ್ಚರಿಯೆಂದರೆ ಹಿಂದೆಗಿಂತ ಈ ವಿಧಾನ ಕ್ಯಾನ್ಸರ್ ತಡೆಯಲು 4 ಪಟ್ಟು ಹೆಚ್ಚು ಪರಿಣಾಮಕಾರಿಯಾಗಿತ್ತಂತೆ.
ಓಹ್ ನೈಸ್. ಆದರೆ ಈ ವಿಧಾನದಿಂದ ಮೆದುಳಿನ ರಕ್ಷಾಕವಚ ಹರಿದಿತ್ತಲ್ಲ…!
ಈ ಕುತೂಹಲದ ಅನುಮಾನ ನಿಮಗೂ ಬಂದಿರಬೇಕು. ಹಾಗೆ ಹರಿದ ರಕ್ಷಾಕವಚವು 60 ನಿಮಿಷಗಳಲ್ಲಿ ಮತ್ತೆ ಯಥಾಸ್ಥಿತಿಗೆ ಮರಳುತ್ತಿತ್ತಂತೆ. ಹಾಗಾಗಿ ಕಂಗಾಲಾಗುವ ಅವಶ್ಯಕತೆಯಿಲ್ಲ.
ಈ ವಿಧಾನದಲ್ಲಿ ಔಪಚರಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲವೇ? ಮೊದಲೇ ಇಲ್ಲಿ ವ್ಯವಹರಿಸುತ್ತಿರುವುದು ಮೆದುಳೆಂಬ ಸೂಕ್ಷ್ಮ ಹಾಗೂ ಅತಿಮುಖ್ಯ ದೇಹದ ಅಂಗವನ್ನು…
ಈ ವಿಧಾನದಲ್ಲಿ ಔಪಚರಿಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲವೇ? ಮೊದಲೇ ಇಲ್ಲಿ ವ್ಯವಹರಿಸುತ್ತಿರುವುದು ಮೆದುಳೆಂಬ ಸೂಕ್ಷ್ಮ ಹಾಗೂ ಅತಿಮುಖ್ಯ ದೇಹದ ಅಂಗವನ್ನು…
ಹೌದು, ಅಡ್ಡ ಪರಿಣಾಮಗಳು ಖಂಡಿತ ಇವೆ. ಅವೆಂದರೆ ತಲೆ ನೋವು ಮತ್ತು ಗೊಂದಲ. ಆದರೆ ಈ ಅಡ್ಡಪರಿಣಾಮ ಚಿಂತಾಜನಕವಾದುದ್ದಲ್ಲ ಎಂಬ ಧೈರ್ಯದ ಮಾತುಗಳು ವಿಜ್ಞಾನಿಗಳಿಂದ ಕೇಳಿಬರುತ್ತದಾದರೂ ಇನ್ನೂ ಹಲವು ಬಾರಿ ಪರೀಕ್ಷಿಸಿ ನಂತರ ಈ ವಿಧಾನದ ಸದುಪಯೋಗಪಡಿಸಿಕೊಳ್ಳಬೇಕಾಗುತ್ತದೆ. ಆದರೆ ಇಂತಹ ಅತಿ-ಹೊಸ ವಿಧಾನದಿಂದ ಚಿಕಿತ್ಸೆಯೇ ಇಲ್ಲವೆಂದು ನಂಬಿದ್ದ ಮಾರಕ ರೋಗಕ್ಕೆ ಅಡ್ಡ ಹಾಕಲು ನಾವು ಹುಡುಕುತ್ತಿರುವ ಪ್ರಯತ್ನಗಳಲ್ಲಿ ಹುರುಳಿದೆ. ಇದೇ ದಾರಿಯಲ್ಲಿ ಮುಂದೆ ಸಾಗಿ ಎಂದು ಈ ವಿಧಾನ ಸಾರಿ ಹೇಳುತ್ತಿದೆ ಎಂದು ನಂಬಿ ಮುಂದೆ ಸಾಗೋಣ…


ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ., ಬೆಂಗಳೂರು ನಗರ ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.