ಸಾಯಿಸುವ ಅಣಬೆಗಳು ಬದುಕಿಸುವ ಬಣ್ಣಗಳು!

ಸಾಯಿಸುವ ಅಣಬೆಗಳು ಬದುಕಿಸುವ ಬಣ್ಣಗಳು!

‘ಒಂದು ಮುಂಜಾವಿನಲೀ… ತುಂತುರಿನ ಸೋನೆ ಮಳೆ, ಸೋ… ಎಂದು ಶೃತಿ ಹಿಡಿದು ಸುರಿಯುತ್ತಿತ್ತು…’ ಎಂದು ಹಾಡಿದ ಪಲ್ಲಿವಿಯವರ ಅದೇ ಭಾವಗೀತೆಯ ಭಾವ ಬರಿಸುವ ಬೆಳಗ್ಗೆ ಆವತ್ತು. ಗಾಢ ನಿದ್ರೆಯ ‘ಮಲ್ಟಿ ಯೂನಿವರ್ಸ್’ ನಲ್ಲಿ ತಿರುಗುತ್ತಿದ್ದ ನನ್ನನ್ನು ಎಳೆದು, ಯಾರೋ ಕೈಯಲ್ಲಿ ಒಂದು ರೂಪಾಯಿಯ ನಾಣ್ಯವನ್ನು ಇಟ್ಟಂತೆ ಭಾಸವಾಯ್ತು. ಕೆಲ ಕ್ಷಣದಲ್ಲಿಯೇ ಅದು ನನ್ನ ಅಪ್ಪನೇ ಎಂದು ನನಗೆ ಅರಿವಾಯ್ತು. ಸ್ವಪ್ನವೆಂಬ ಟೈಮ್ ಮೆಷಿನ್ ಇಳಿದು ಕಣ್ ಬಿಟ್ಟು ನೋಡಿದೆ. ಕೈಯಲ್ಲಿ ಒಂದು ರೂಪಾಯಿ ನಾಣ್ಯವಿದೆ. ಸುತ್ತ ಯಾರೂ ಇಲ್ಲ. ಅಪ್ಪ-ಅಮ್ಮ ಸೌದೆ ತರಲು ಕಾಡಿನ ಕಡೆಗೆ ಹೊರಟಾಗಿತ್ತು. ‘ನಾಳೆ ನಾನೂ ಬತ್ತೀನಿ ಕಾಡ್ಗೆ, ನಂಗೂ ನಾಳೆ ರಜೆ ಐತೆ’ ಎಂದು ಕೇಳಿ ಪೇಚಾಡಿದ್ದನ್ನೆಲ್ಲಾ ಲೆಕ್ಕಿಸದೆ, ಅವರು, ನನ್ನನ್ನು ಬಿಟ್ಟು ಕಾಲ್ಕಿತ್ತಿದ್ದರು. ಈ ಘೋರ ಮೋಸವನ್ನು ನೆನೆದು ಕುಪಿತಗೊಂಡೆ. ಆ ಕೋಪ ಕಣ್ಣೀರಿಗೆ ಬದಲಾಗಿ, ನಾನೂ ಹೊಲದ ಕಡೆಗೆ ಓಡಿದೆ. ಅವರಾಗಲೇ ತುಂಬಾ ದೂರ ಹೊರಟಿದ್ದರು. ಕೋಪ ಇನ್ನೂ ಹೆಚ್ಚಾಯ್ತು. ಇನ್ನೂ ಜೋರಾಗಿ ಓಡಿದೆ. ದೂರದಲ್ಲಿ ಕಂಡರು. ಹನಿಗಳು ಸೋಂಬೇರಿಯಾಗಿ ಸುರಿಯುತ್ತಿತ್ತು. ಹಿಂದಿನಿಂದ ಓಡಿ ಹೋಗಿ ಅವರನ್ನು ಸೇರಿದೆ. ನನ್ನೆಲ್ಲಾ ಭಾವನೆ ಅವರಿಬ್ಬರಿಗೆ ಅರ್ಥವಾಗಿ ಹೋಗಿತ್ತು. ನಸುನಗುತ್ತಲೇ ನನ್ನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಮಳೆ, ಕಾಡು, ಕಷ್ಟ ಕಾರಣಗಳೆಲ್ಲಾ ಕೊಟ್ಟರು. ಆದರೂ ನಾನು ಕೇಳಲಿಲ್ಲ. ಕೊನೆಗೆ ನನ್ನ ಕೈಯಲ್ಲಿ ಇನ್ನೊಂದು ಎರಡು ರೂಪಾಯಿಯ ನಾಣ್ಯವನ್ನು ಕೈಗಿಟ್ಟು ‘ಹೋಗು ಮನೇಲಿ ‘ಪಾರ್ಲೇಜಿ’ ಬಿಸ್ಕೆಟ್ ಮತ್ತೆ ಟೀ ಐತೆ ಕುಡ್ದು ನಾಷ್ಟ ಮಾಡು, ಅಷ್ಟ್ರಲ್ಲಿ ಬರ್ತೀವಿ’ ಎಂದು ಏನೇನೋ ಹೇಳಿ ನನ್ನನ್ನು ವಾಪಸ್ಸು ಸಾಗು ಹಾಕಿದರು. ಚಿಕ್ಕ ವಯಸ್ಸಿನಲ್ಲಿ ನನ್ನ ಅಪ್ಪ ದಿನಾಲೂ ತಪ್ಪದೇ ನಾ ಏಳುವ ಮುಂಚೆಯೇ ಕೈಯಲ್ಲಿ ಒಂದು ರೂಪಾಯಿ ನಾಣ್ಯವನ್ನು ಇಡುತ್ತಿದ್ದರು. ನಂತರ ಅಮ್ಮ ಟೀ ಯನ್ನು ತಯಾರಿಸಿರುತ್ತಿದ್ದರು. ಎದ್ದ ತಕ್ಷಣ ಹನುಮಕ್ಕನ ಅಂಗಡಿಗೆ ಹೋಗಿ ಎರಡು ರೂಪಾಯಿಯ ‘ಪಾರ್ಲೇಜಿ’ ಅಥವಾ ‘ಟೈಗರ್’ ಬಿಸ್ಕೇಟ್ ನಿಂದಲೇ ದಿನ ಪ್ರಾರಂಭಿಸುತ್ತಿದ್ದುದು. ಆ ದಿನ ಸ್ವಲ್ಪ ಹೆಚ್ಚು ಹಣ ದೊರೆತಿದ್ದರಿಂದ ನನ್ನ ಲೆಕ್ಕಾಚಾರ ಬದಲಾಗಿತ್ತು. ಜೊತೆಗೆ ಮಳೆಯೂ ಬರುತ್ತಿದ್ದುದರಿಂದ ಬೆಡ್ ಶೀಟ್ ಒಳಗೆ ಬೆಚ್ಚಗೆ ಕೂತು ಬಿಸ್ಕೆಟ್ ತಿನ್ನುವುದೇ ಲೇಸೆಂದು ವಾಪಸ್ ಮನೆಗೆ ತೆರಳಲು ಒಪ್ಪಿದೆ. ಬರುವ ದಾರಿಯಲ್ಲಿ ಸುಮ್ಮನೆ ಬರುವ ಜಾಯಮಾನವೇ ಅಲ್ಲ ನಮ್ಮದು. ಏನಾದರೂ ಒಡೆಯಬೇಕು. ಕೈಗೆ ಕಲ್ ಸಿಕ್ಕರೆ ಗುರಿ ಪರೀಕ್ಷೆಗಳು. ಕೋಲು ಸಿಕ್ಕರೆ ಕತ್ತಿವರಸೆ ಮತ್ತು ಸಿಕ್ಕ ಸಿಕ್ಕ ಗಿಡಗಳ ಮೇಲೆ ಯುದ್ಧ ಪ್ರಯೋಗ. ಅಂದು ಒಂದು ಕೋಲು ದೊರೆಯಿತು. ಯಥಾಪ್ರಕಾರ ನನ್ನ ಕತ್ತಿವರಸೆಯ ಕೌಶಲ್ಯಗಳನ್ನು ನುರಿತಗೊಳಿಸುತ್ತಾ ಬರುವಾಗ ದಾರಿಯ ಹೊಲದ ಬದುಗಳಲ್ಲಿ ಬಿಳಿ ಟೋಪಿ ಧರಿಸಿ ಯಾರೋ ವೈರಿ ತಲೆ ಎತ್ತಿ ನಿಂತಂತೆ ಕಂಡಿತು. ತಕ್ಷಣವೇ ಅವನ ರುಂಡವನ್ನು ಚೆಂಡಾಡುವ ಮನಸ್ಸಾದರೂ ಹಾಗೆ ಮಾಡಲಿಲ್ಲ. ಬದಲಿಗೆ ಈಗೆಲ್ಲಾ ಮಾಡಲು ಹೆಚ್ಚು ಕೆಲಸವಿಲ್ಲದೆ, ದುಡ್ಡು ಹೆಚ್ಚಾಗಿರುವ ಶ್ರೀಮಂತರು ಮಾತ್ರ ಆಡುವ ಕ್ರೀಡೆಯಾದ ಗಾಲ್ಫ್ ನ ಹಾಗೆ ನಾನು ಆಗಲೇ ಯೋಚಿಸಿ, ಅದರ ಪಕ್ಕದಲ್ಲಿ ಕಡ್ಡಿ ಇಟ್ಟು ಗುರಿ ನೋಡುತ್ತಾ ನಿಂತೆ. ಹತ್ತು ಬಾರಿ ಹೋಗಿ ಬಂದು, ಹೋಗಿ ಬಂದು ಮಾಡಿ ಕೊನೆಗೆ ಒಂದೇ ಏಟು! ಗುರಿ ಮಿಸ್ಸಾಗಿತ್ತು. ಅರೇ… ಇದೆಂತಾ ಆಟ ಎಂದುಕೊಂಡು ನಮ್ಮ ಯುದ್ಧಭೂಮಿಗೇ ವಾಪಸ್ಸಾದೆ. ಹಾಗೆ ಮನೆ ಸೇರಿದೆ.

© TODOREAN GABRIEL_ISTOCK_GETTY

ಅದೆಲ್ಲಾ ಸರಿ, ಈ ಬಿಳಿ ಟೋಪಿ ಧರಿಸಿದ ವೈರಿ ಯಾರು ಎಂದಿರೇನು? ಅದೇ ನಮ್ಮ ಸಸ್ಯಹಾರವೂ ಅಲ್ಲದ ಮಾಂಸಹಾರ ಗುಂಪಿಗೂ ಸೇರದ ಅಣಬೆಗಳು. ಆದರೆ ಅಮ್ಮ ಮಾಡುತ್ತಿದ್ದ ಆ ಅಣಬೆ ಸಾರಿನ ರುಚಿಯೇ ಬೇರೆ. ವರ್ಷಕ್ಕೊಮ್ಮೆ ಹೇರಳವಾಗಿ ಸಿಗುತ್ತಿದ್ದ, ಇವನ್ನು ಕೇವಲ ಅಪ್ಪ ಮಾತ್ರ ಹುಡುಕಿ ಆರಿಸಿ ತರುತ್ತಿದ್ದರು. ಏಕೆಂದರೆ ನಮಗೆ ಕಾಣಸಿಗುವ ಎಲ್ಲಾ ಅಣಬೆಗಳನ್ನು ತಿನ್ನಲಾಗುವುದಿಲ್ಲ. ಎಷ್ಟೋ ಹುಚ್ಚು ಅಣಬೆಗಳಿವೆ ಅವನ್ನು ಸೇವಿಸಲಾಗದು, ಸೇವಿಸಿದರೆ ಹುಚ್ಚು ಹಿಡಿಯುತ್ತದೆ, ಸಾಯಲೂ ಬಹುದು! ಎಂದು ಹೇಳುತ್ತಿದ್ದರು. ಅದು ಬಹುಪಾಲು ಸತ್ಯವೂ ಹೌದು. ನಮ್ಮ ಸುತ್ತ ಸಿಗುವ ಅಣಬೆಗಳಲ್ಲಿ ಒಂದೋ ಎರಡೋ ಬಗೆಯ ಅಣಬೆಯನ್ನು ಮಾತ್ರ ನಾವು ತಿನ್ನಬಹುದು. ಉಳಿದವುಗಳಲ್ಲಿ ಬಹಳಷ್ಟು ವಿಷಕಾರಿ ಅಣಬೆಗಳಿವೆ ಎಂಬುದು ವಾಸ್ತವ. ಕೆಲವೊಮ್ಮೆ ಅಂತಹ ಅಣಬೆಗಳನ್ನು ಆಕಸ್ಮಿಕವಾಗಿ ತಿಂದರೆ ಅಪಾಯ ಖಂಡಿತ. ಕೆಲವು ತಿಂದರಂತೂ ಸಾವು ಖಚಿತ ಅದರಲ್ಲೂ ಕೆಲವು ಅಣಬೆಗಳನ್ನು ತಿಂದರೆ ಚಿಕಿತ್ಸೆಯೇ ಇಲ್ಲ. ಅಂತಹುದೇ ಒಂದು ಅಣಬೆ ಈ ‘ಡೆತ್ ಕ್ಯಾಪ್ ಅಣಬೆ’ ಹೆಸರೇ ಹೇಳುವ ಹಾಗೆ ಇದನ್ನು ತಿಂದರೆ ಕೆಲವು ಘಂಟೆಗಳಲ್ಲಿ ತಿಂದ ವ್ಯಕ್ತಿ ಅಂಗಾಂಗ ವೈಫಲ್ಯದಿಂದ ಸಾಯುತ್ತಾನೆ. ಇದಕ್ಕೆ ಸೂಕ್ತ-ತ್ವರಿತ ಚಿಕಿತ್ಸೆಯೇ ಇಲ್ಲ. ಇರಲಿಲ್ಲ… ಈಗ ಇದೆ. ಎನ್ನುತ್ತಿದೆ ಹೊಸ ಸಂಶೋಧನೆಯೊಂದು. ಹೊಸದಾಗಿ ತಯಾರಿಸುತ್ತಿರುವ ಔಷಧಿಯಿಂದ ಡೆತ್ ಕ್ಯಾಪ್ ಅಣಬೆಯಿಂದಾಗುವ ಸಾವನ್ನು ತಡೆಯಬಹುದು ಎನ್ನುತ್ತಿದ್ದಾರೆ ವಿಜ್ಞಾನಿಗಳ ತಂಡ. ಈ ಔಷಧಿಯಲ್ಲಿ ಬಳಸಿದ ಮುಖ್ಯ ವಸ್ತು ಹಲವು ಮಾತ್ರೆಗಳ ಮೇಲೆ ಲೇಪಿಸಲು ಬಳಸುವ ‘ಹಸಿರು ಬಣ್ಣ(green dye)’.

© RUSSELL BURDEN_PHOTODISC_GETTY

ಪ್ರಪಂಚದಲ್ಲಿನ ಅಣಬೆ ತಿಂದು ಸಾಯುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸುವುದು, ಈ ಡೆತ್ ಕ್ಯಾಪ್ ಅಣಬೆಯಿಂದ. ಸೇವಿಸಿದ 6 ಘಂಟೆಗಳಲ್ಲಿ ವಿಷ ತನ್ನ ಕೆಲಸ ಶುರುಮಾಡಿ ವಾಂತಿ-ಬೇಧಿಗಳಂತಹ ಮುನ್ನೆಚ್ಚರಿಕೆಯನ್ನು ನೀಡುತ್ತವೆ. ಚಿಕಿತ್ಸೆ ಕೊಡದೇ ಹೋದ ಪಕ್ಷದಲ್ಲಿ ಯಕೃತ್ (liver) ಮತ್ತು ಮೂತ್ರಪಿಂಡ (kidney) ವೈಫಲ್ಯದಿಂದ ಮುಂದಿನ 48 ಘಂಟೆಗಳಲ್ಲಿ ಸಾಯುತ್ತಾರೆ. ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲವಾದರೂ ಕೆಲವು ಚಿಕಿತ್ಸೆಗಳನ್ನು ಬಳಸುತ್ತಾರೆ. ಆದರೆ ಅವು ಅಷ್ಟು ಫಲಕಾರಿಯಾಗಿಲ್ಲ. ಈ ಅಣಬೆಯಲ್ಲಿರುವ ‘ಆಲ್ಫಾ-ಅಮಿನಾಟಿನ್ (alpha-amanitin)’ ಎಂಬ ವಿಷವನ್ನು ಎದುರಿಸುವ ಔಷಧಿಯನ್ನು ಕಂಡುಕೊಳ್ಳಲೆಂದೇ 3000 ವಿವಿಧ ಔಷಧಿಗಳನ್ನು ಕಲೆಹಾಕಿ ಇಲಿ ಮತ್ತು ಮನುಷ್ಯ ಜೀವಕೋಶಗಳ ಮೇಲೆ ಪ್ರಯೋಗಿಸಲಾಯಿತು. ಅವುಗಳಲ್ಲಿ ಹಸಿರು ಬಣ್ಣ (dye indocyanine green) ಎಂಬ ಔಷಧೀಯ ಬಣ್ಣವನ್ನು ಪ್ರಯೋಗಿಸಿದಾಗ, ಈ ಅಣಬೆಯ ವಿಷ ಕೆಲಸ ಮಾಡಲಿಲ್ಲ ಎಂದು ಕಂಡುಹಿಡಿದರು. ಅದರೆ ವಿಷ ದೇಹಕ್ಕೆ ಸೇರಿದ 1-4 ಘಂಟೆಗಳಲ್ಲಿ, ಈ ಔಷಧಿಯನ್ನು ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು. 8-12 ಘಂಟೆಗಳ ನಂತರ ಪ್ರಯೋಗಿಸಿದರೆ ಇದರ ಕಾರ್ಯಕ್ಷಮತೆ ಅಷ್ಟಾಗಿ ಇರುತ್ತಿರಲಿಲ್ಲ. ಏಕೆಂದರೆ ಅಷ್ಟು ಹೊತ್ತಿಗಾಗಲೇ ಆ ವಿಷ ಬದಲಿಸಲಾಗದಷ್ಟು ಪರಿಣಾಮವನ್ನು ಯಕೃತ್ ಮತ್ತು ಮೂತ್ರಪಿಂಡಗಳ ಮೇಲೆ ಬೀರಿರುತ್ತಿತ್ತು. ಆದರೆ ಇದೇ ಔಷಧಿ ಇಲ್ಲಿಯವರೆಗೆ ರೋಗಪರಿಹಾರವೇ ಇಲ್ಲವೆಂದು ಭಾವಿಸಿದ್ದ, ರೋಗಕ್ಕೆ ಔಷಧಿ ಕೈಗೆಟುಕುವ ನಂಬಿಕೆ ಬಂದಿದೆ

ಕೊನೆಗೆ ಹೇಳುವುದಾದರೆ, ಒಂದೇ ನಾಣ್ಯಕ್ಕೆ ಎರಡು ಮುಖಗಳು ಇರುವ ಹಾಗೆ. ಎಲ್ಲದರಲ್ಲೂ ಒಳ್ಳೆಯದು ಮತ್ತು ಕೆಟ್ಟದ್ದು ಇದ್ದೇ ಇರುತ್ತದೆ. ಅದೇ ರೀತಿ ಈ ವಿಜ್ಞಾನ ಸಂಶೋಧನೆಗಳೂ ಕೂಡ. ಸರಿಯಾಗಿ ಜವಾಬ್ದಾರಿಯುತವಾಗಿ ಪರೋಪಕಾರಿ ಉದ್ದೇಶಗಳನ್ನು ಒಳಗೊಂಡರೆ ವಿ-ಜ್ಞಾನ, ವಿಶೇಷ ಜ್ಞಾನವಾಗುತ್ತದೆ. ಇಲ್ಲವಾದರೇ ಅದೇ ವಿ-ಜ್ಞಾನ, ವಿಕೃತ ಜ್ಞಾನವಾಗುತ್ತದೆ. ಎಲ್ಲಾ ನಮ್ಮ ನಮ್ಮ ವಿ-ಜ್ಞಾನಕ್ಕೆ ಬಿಟ್ಟದ್ದು (ವಿವೇಕ-ಜ್ಞಾನಕ್ಕೆ).

ಮೂಲ ಲೇಖನ: www.snexplores.org

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು ನಗರ ಜಿಲ್ಲೆ

Spread the love
error: Content is protected.