ಮಡಿಕೆ ಮಾಡುವ ಹುಳು

©ಮಂಜುನಾಥ ಎಸ್. ನಾಯಕ
ಹಿಂದಿನ ಅಂಕಣದಲ್ಲಿ ಕೇಳಿದ ಪ್ರಶ್ನೆಗೆ ಮೊದಲು ಉತ್ತರಿಸಿ ನಂತರ ಇವತ್ತಿನ ಕಥೆ ಹೇಳ್ತಿನಿ.
ಪ್ರಶ್ನೆ: ಕಣಜವು ಜೇಡವನ್ನು ಪೂರ್ತಿಯಾಗಿ ಕೊಂದು, ನಂತರ ಗೂಡಿನಲ್ಲಿ ತಂದಿಡಬಹುದಾಗಿತ್ತಲ್ಲವೇ? ಅದೇಕೆ ಪ್ಯಾರಲೈಜ್ ಮಾಡಿಟ್ಟಿತು ಎಂದು ಊಹಿಸಬಲ್ಲಿರಾ?
ಉತ್ತರ: ಒಂದು ವೇಳೆ ಕಣಜವು ಜೇಡ/ಕಂಬಳಿ ಹುಳುಗಳನ್ನು ಕೊಂದು ಆಮೇಲೆ ಗೂಡಿನಲ್ಲಿ ತಂದಿಟ್ಟರೆ, ಕಣಜದ ಮೊಟ್ಟೆಯಿಂದ ಲಾರ್ವ ಹೊರ ಬರುವವರೆಗೆ ಜೇಡ/ಕಂಬಳಿ ಹುಳುಗಳ ಕಳೇಬರಗಳು ಕೊಳೆಯಲು ಪ್ರಾರಂಭಿಸಬಹುದು. ಅದೇ ಪ್ಯಾರಲೈಜ್ ಮಾಡಿಟ್ಟರೆ ಜೇಡ/ಕಂಬಳಿ ಹುಳು ಜೀವಂತವಾಗಿದ್ದರೂ ಅವುಗಳು ಅಲ್ಲಾಡಲಾರವು. ಕಣಜದ ಮರಿ ತಾಜಾ ತಾಜಾ ತಿಂಡಿಯನ್ನು ಸವಿಯಬಹುದು!


ಕಣಜವು ಎಂಥ ಪರಿಪೂರ್ಣ ತಾಯಿಯಲ್ಲವೇ? ಇಂಥ ಕಣಜವನ್ನು ಕುಂಬಾರ ಕಣಜವೆಂದು ತಿಳಿದು ಅದರ ಬಗ್ಗೆ ತಪ್ಪು ಮಾಹಿತಿ ನೀಡಿದೆನಲ್ಲವೇ? ನನಗೆ ಅಪರಾಧಿ ಪ್ರಜ್ಞೆ ಕಾಡತೊಡಗಿತು. ಮತ್ತೆ ಮಗನನ್ನು ಹುಡುಕತೊಡಗಿದೆ ಸರಿಯಾಗಿ ತಿಳಿಸಿ ಹೇಳಲು. ಇನ್ನು ಇವನು ಎಂದಿಗಿಂತ ತುಸು ಹೆಚ್ಚೇ ಪ್ರಶ್ನೆ ಕೇಳುತ್ತಾನೆ ಎಂದು ಸ್ವಲ್ಪ ಮುಂಚಿತವಾಗಿಯೇ ಓದಿ ತಿಳಿದುಕೊಂಡರೆ ಒಳಿತೆನಿಸಿತು. ಇವನ್ಯಾಕೋ ನನ್ನ ಶಾಲೆಯ ಗುರುಗಳಿಗಿಂತ ಹೆಚ್ಚಾಗಿ ನನ್ನನ್ನು ಭಯ ಪಡಿಸಿದ್ದಾನೆ ಎಂದೆನಿಸಿ ಇನ್ನೂ ಹೆಚ್ಚು ಆತಂಕವಾಗತೊಡಗಿತು. ಭಕ್ತ ಕುಂಬಾರ ಸಿನಿಮಾದಲ್ಲಿ ಅಣ್ಣಾವ್ರು ವಿಠಲ ಪಾಂಡುರಂಗ ಎನ್ನುತ್ತಾ ತನ್ನ ಮಗುವನ್ನು ಕೂಡ ಕೆಸರಿನಲ್ಲಿ ಬಿದ್ದುದನ್ನು ಗಮನಿಸದಷ್ಟು ಭಕ್ತಿಪರವಶವಾಗಿರುತ್ತಾನೆ. ಆದರೆ ಇಲ್ಲೊಬ್ಬ ಕುಂಬಾರ್ತಿ ಮುಂದೆ ಹುಟ್ಟುವ ತನ್ನ ಮಗುವಿಗಾಗಿ ಭದ್ರವಾದ ಮಣ್ಣಿನ ಮಡಕೆಯನ್ನು ತಯಾರಿಸುತ್ತದೆ. ಅದಕ್ಕೇ ಈ ಹೆಸರು ಕುಂಬಾರ ಹುಳು.

ನಿಜ ಹೇಳಬೇಕೆಂದರೆ ಇಲ್ಲಿಯವರೆಗೆ ಮಣ್ಣಿನ ಗೂಡು ಕಟ್ಟುವ ಹುಳುವೆಂದರೆ ಅದು ಕುಂಬಾರ ಕಣಜವೆಂದೇ ತಿಳಿದುಕೊಂಡಿದ್ದೆ. ಅದೂ ಅಲ್ಲದೆ ಒಂದೇ ಹುಳುವು ಮಡಕೆಯ ತರಹವೂ ಮತ್ತು ಉದ್ದುದ್ದ ಕೊಳವೆಗಳ ತರಹವೂ ಗೂಡು ಕಟ್ಟುತ್ತದೆಯೆಂದು ತಪ್ಪು ತಿಳಿದುಕೊಂಡಿದ್ದೆ. ತಪ್ಪು ಅನ್ನುವುದಕ್ಕಿಂತಲೂ ಅದರ ಬಗ್ಗೆ ನಿರ್ಲಕ್ಷ್ಯವಹಿಸಿದ್ದೆ. ಆದರೆ ಪ್ರತಿ ಸಲವೂ ನನಗೆ ಈ mud dauber wasp ಗೂಡು ಕಟ್ಟುತ್ತಿರುವ ದೃಶ್ಯ ನೋಡಲು ಸಿಕ್ಕಿತ್ತೆ ವಿನಃ ಕುಂಬಾರ ಹುಳು ಗೂಡು ಕಟ್ಟುವ ದೃಶ್ಯ ನೋಡಲು ಸಿಕ್ಕಿರಲೇ ಇಲ್ಲ. ಹೀಗಾಗಿ ಬೆಳಗಾಗುವುದರೊಳಗೆ ಒಮ್ಮಿಂದೊಮ್ಮಿಗೆ ಧುತ್ತೆಂದು ಮಣ್ಣಿನ ಮಡಕೆಗಳು ಗೋಡೆಯ ಮೇಲೆಯೋ, ಕಿಡಕಿಗಳ ಸಂದಿಗಳಲ್ಲಿಯೋ, ಪುಸ್ತಕಗಳ ಶೆಲ್ಫ್ ಗಳಲ್ಲಿಯೋ ಪ್ರತ್ಯಕ್ಷವಾಗುತ್ತಿತ್ತೇ ಹೊರತು ಹುಳುವಿನ ದರ್ಶನವೇ ಆಗಿರಲಿಲ್ಲ! ಒಂದು ಸಲ ಮಡಕೆಯ ಬಾಯಿ ಮುಚ್ಚಿದ್ದು ಕಾಣಿಸುತ್ತಿತ್ತು; ಮತ್ತೊಮ್ಮೆ ಖಾಲಿ ಮಡಕೆ ಬಾಯಿ ತೆರೆದು ಕೂತಿರುತ್ತಿತ್ತು. ಅದರ ರಹಸ್ಯ ಮಾತ್ರ ಮಡಕೆಯಲ್ಲಿಯೇ ಹುದುಗಿ ಕುಳಿತಿತ್ತು. ಬಹುಷಃ ಒಂದೇ ಕಡೆ ಕೊಳವೆಯಾಕಾರದ ಬಹಳಷ್ಟು ಗೂಡುಗಳನ್ನು ನಿರ್ಮಿಸಲು ತಗಲುವ ಸಮಯ ಸಹಜವಾಗಿಯೇ ಒಂದು ಮಡಕೆ ನಿರ್ಮಿಸಲು ಬೇಕಾಗುವ ಸಮಯಕ್ಕಿಂತ ಹೆಚ್ಚು, ಹೀಗಾಗಿ ಕುಂಬಾರ ಹುಳು ಗೂಡು ಕಟ್ಟುವ ದೃಶ್ಯ ಸಿಗದೇ ಇದ್ದಿರಬಹುದು ಎಂದು ಊಹಿಸಿದೆ.
ಈ ಊಹೆ ಸುಳ್ಳಾಗಿದ್ದು ಕಳೆದ ವರ್ಷದ ಯುಗಾದಿಯ ಶುಭ ಮಧ್ಯಾಹ್ನದಂದು. ಅಂದು ಎಲ್ಲರೂ ಹೋಳಿಗೆ ಊಟ ಮಾಡಿ ಮಧ್ಯಾಹ್ನದ ಸವಿ ನಿದ್ದೆಯಲ್ಲಿರಬೇಕಾದರೆ ನಾನು ಅವಾಗ ತಾನೇ ತರಿಸಿದ ತೇಜೋ ತುಂಗಭದ್ರಾ ಪುಸ್ತಕವನ್ನು ಹಿಡಿದು ಓದಲು ಟೆರೇಸಿನ ನೆರಳಲ್ಲಿ ಕೂತಿದ್ದೆ. ಹೀಗೆ ಓದಬೇಕೆಂದೇ ಮೊದಲೇ ಯೋಜಿಸಿ ಅದಕ್ಕಾಗಿಯಾದರೂ ಹೋಳಿಗೆ ಮಾಡಿ, ಎಲ್ಲರನ್ನೂ ನಿದ್ದೆಗೆ ಜಾರಿಸಿದ್ದೆ ಎಂದೇ ಹೇಳಬೇಕು. ಇತ್ತ ಹಂಪಮ್ಮ ಸತಿ ಪದ್ಧತಿಯ ಸಂಪ್ರದಾಯದಂತೆ ಕೈಗೆಲ್ಲ ಹಚ್ಛೆ ಹಾಕಿಸಿಕೊಂಡು ಸುಮಂಗಲೆಯರೊಡನೆ ತಾನು ಬಲಿಯಾಗಲು ಹೋಗುತ್ತಿದ್ದಾಗ (ಪುಸ್ತಕದಲ್ಲಿ ಬರುವ ದೃಶ್ಯ) ನನಗೆ ಜುಯ್ಯ ಎಂದು ಸದ್ದು ಕೇಳಿಸತೊಡಗಿತು! ಇದೇನು, ಲಿಸ್ಬನ್ ನಿಂದ ಹೊರಟ ಗ್ಯಾಬ್ರಿಯಲ್ ದೋಣಿಯಲ್ಲಿ ಸಮುದ್ರದ ಮೇಲೆ ತೇಲುತ್ತಿದ್ದಾಗಲೂ (ಇದು ಕೂಡ ಅದೇ ಪುಸ್ತಕದಲ್ಲಿ ಬರುವ ದೃಶ್ಯ) ಈ ತರಹ ಸದ್ದು ಕೇಳಿಸಿರಲಿಲ್ಲವಲ್ಲ ಎಂದು ಯೋಚಿಸಿದೆ! ತಲೆ ಎತ್ತಿ ನೋಡಿದಾಗ ಕಿಟಕಿಯ ಕೆಳ ಅಂಚಿನ ಮೂಲೆಯಲ್ಲಿ ಮಡಕೆಯ ಅಡಿಪಾಯ ಸಿದ್ದವಾಗಿತ್ತು! ಹುಳುವು ನಿಧಾನಕ್ಕೆ ತನ್ನ ಗೂಡನ್ನು ಮಡಕೆಯ ತರಹ ರೂಪಿಸಲು ತನ್ನ ಕಾಲುಗಳು, ಬಾಯಿ ಮತ್ತು ನನ್ನ ಪ್ರಕಾರ ಅದರ ಮೀಸೆಗಳನ್ನು ಕೂಡ ಬಳಸುತ್ತಿತ್ತು! ಹಳದಿ ತಲೆ, ದೊಡ್ಡದಾದ ಕಪ್ಪು ಕಣ್ಣುಗಳು, ಒಂದೇ ಕಡ್ಡಿಯಂತಹ ಕಡು ಕಂದು ಬಣ್ಣದ ಹೊಟ್ಟೆ, ಮತ್ತೆ ಹಳದಿ ಬಣ್ಣದ ಹಿಂದಿನ ಭಾಗ ಇವಿಷ್ಟೇ ನನಗೆ ಗೋಚರಿಸಿದ್ದು. ಇನ್ನೂ ಹತ್ತಿರಕ್ಕೆ ಹೋಗಿ ನೋಡಿದರೆ ಎಲ್ಲಿ ಈ ಕುಂಬಾರ್ತಿ ಗೆ ಸಿಟ್ಟು ಬಂದು ನನ್ನನ್ನು ಕಚ್ಚಿ ಬಿಡಬಹುದೋ ಅಥವಾ ಮಡಕೆ ತ್ಯಜಿಸಿ ಹೋಗಿ ಬಿಟ್ಟರೆ ಏನು ಮಾಡುವುದೆಂದು ಯೋಚಿಸಿ ಸ್ವಲ್ಪ ದೂರದಿಂದಲೇ ಗಮನಿಸಿದೆ. ಆದರೆ ಅದನ್ನು ನೋಡಿದ್ದು ಅದೇ ಕೊನೆ. ಮತ್ತೆ ನೋಡಿದಾಗ ಸಿದ್ದವಾದ ಮಡಕೆ ಅಷ್ಟೇ ಇತ್ತು. ನಾನೇ ಪುಸ್ತಕದಲ್ಲಿ ಮುಳುಗಿ ಹೋದೆನೋ ಅಥವಾ ಅದೇ ಸದ್ದಿಲ್ಲದೇ ಬಂದು ಮಡಕೆ ಕಟ್ಟಿತೋ ಎಂದು ನೆನಪಿಲ್ಲ ನನಗೆ! ಈಗ ಈ ಕುಂಬಾರ್ತಿ ಬಗ್ಗೆ ಓದಿದಾಗ ತಿಳಿದಿದ್ದೇನೆಂದರೆ ಇದು Delta pyriforme ಎಂಬುದರ ಒಂದು ಪ್ರಭೇದದ ಪಾಟರ್ ವಾಸ್ಪ್. ಇದರ ಮುಖ್ಯ ಕುಟುಂಬ Vespidae. Eumeninae ಎಂಬ ಸಹ ಕುಟುಂಬ ವರ್ಗಕ್ಕೆ ಸೇರಲ್ಪಡುತ್ತದೆ. ಇದು ಕೂಡ ತನ್ನ ಬೇಟೆಯನ್ನು ಪ್ಯಾರಲೈಜ್ ಗೊಳಿಸಿ ನಂತರ ಅದನ್ನು ತನ್ನ ಮರಿಗಾಗಿ ಗೂಡಿನಲ್ಲಿ ತಂದಿಡುತ್ತದೆ. ಕೆಲ ಸಂಶೋಧನೆಗಳ ಪ್ರಕಾರ ಒಂದು ಮಡಕೆಯಲ್ಲಿ ಅಂದರೆ ಗೂಡಿನಲ್ಲಿ 28 ಕಂಬಳಿಹುಳುಗಳು ಪತ್ತೆಯಾಗಿದ್ದೂ ಇದೆ! ನಾನು ಗಮನಿಸಿ ಹಾಗು ಓದಿದ್ದ ಪ್ರಕಾರ ಇದು ಜೇಡಗಳಿಗಿಂತ ಕಂಬಳಿಹುಳುಗಳನ್ನೇ ಮುಖ್ಯ ಆಹಾರವನ್ನಾಗಿಸಿಕೊಂಡಿದೆ. ತನ್ನ ಮೂರು ತಿಂಗಳುಗಳ ಜೀವಿತಾವಧಿಯಲ್ಲಿ ಸುಮಾರು ಇಪ್ಪತ್ತೈದು ಮಡಕೆಗಳನ್ನು ತಯಾರಿಸುತ್ತದೆ!



ಮೊದಲು ಒಬ್ಬ ಉತ್ತಮ ಕುಂಬಾರ್ತಿಯಂತೆ ಮಣ್ಣನ್ನು ಅಣಿಗೊಳಿಸಿ ಅದಕ್ಕೆ ಹತ್ತಿರದಲ್ಲಿನ ನೀರಿನ ಸೆಲೆಯಿಂದ ನೀರನ್ನು ಮಿಶ್ರಗೊಳಿಸಿ ತನ್ನ ಬಾಯಿಯ ಮೂಲಕ ಹದಗೊಳಿಸುತ್ತದೆ. ಹದಗೊಂಡ ಮಣ್ಣಿನ ಉಂಡೆಯನ್ನು ತನ್ನ ಮುಂಗಾಲು ಹಾಗು ಬಾಯಿಯ ಸಹಾಯದಿಂದ ಗೂಡು ಕಟ್ಟುವ ಜಾಗಕ್ಕೆ ತೆಗೆದುಕೊಂಡು ಬಂದು ತನ್ನ ಅಡಿಪಾಯವನ್ನು ಭದ್ರಗೊಳಿಸುತ್ತದೆ. ತದ ನಂತರ ನಾನು ಮೊದಲೇ ತಿಳಿಸಿದಂತೆ ಗೂಡನ್ನು ಕಟ್ಟುತ್ತಾ ಸಾಗುತ್ತದೆ. ಮಡಕೆ ಪೂರ್ತಿಗೊಂಡ ನಂತರ ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಒಣಗಲು ಆಸ್ಪದ ಮಾಡಿ ಕೊಡುತ್ತದೆ. ಇದಾದ ಮೇಲೆ ಒಂದೇ ಒಂದು ಮೊಟ್ಟೆಯನ್ನು ಮಡಕೆಯಲ್ಲಿ ರೇಷ್ಮೆ ಎಳೆಯ ಮೂಲಕ ತೂಗು ಬಿಡುತ್ತದೆ. ಮೇಲೆ ವಿವರಿಸಿದಂತೆ ಕಂಬಳಿಹುಳುಗಳನ್ನು ತುಂಬಿದ ನಂತರ ಮಡಕೆಯ ಬಾಯನ್ನು ಮುಚ್ಚಿ ಬಿಡುತ್ತದೆ. ಇದು ಬೇರೆ ಬೇಟೆಗಾರ ಹುಳುಗಳಿಂದ ರಕ್ಷಣೆ ನೀಡುತ್ತಲ್ಲದೆ ಕೆಲ ಕಳ್ಳ ಕಣಜಗಳು ಅಥವಾ ಪರಾವಲಂಬಿ ಕಣಜಗಳು ತಮ್ಮ ಮೊಟ್ಟೆಯನ್ನು ಬೇರೆ ಕಣಜಗಳ ಗೂಡಿನಲ್ಲಿ ಇಡುವುದನ್ನು ಕೂಡ ತಪ್ಪಿಸುತ್ತದೆ! ಎಂಥ ಬುದ್ಧಿಶಾಲಿ ತಾಯಿಯಲ್ಲವೇ?

ನನಗಿನ್ನೂ ನಂಬಲಸಾಧ್ಯವಾದ ವಿಷಯವೆಂದರೆ ನಾನು ಬೆಂಗಳೂರಿಗೆ ಬಂದ ಮೇಲೆ ಯಾವುದೇ ಒಂದು ಮಡಕೆಯನ್ನು ಕೂಡ ನೋಡಿಲ್ಲ! mud dauber wasp ಹಾಗು ಇತರೆ ಹುಳುಗಳ ಮಣ್ಣಿನ ಗೂಡನ್ನು ನೋಡಿರುವೆನೇ ಹೊರತು ಕುಂಬಾರ್ತಿಯ ಮನೆ ಹುಡುಕಿದರೂ ಸಿಕ್ಕಿಲ್ಲ. ನಿಮಗೇನಾದರೂ ಇದರ ಬಗ್ಗೆ ಮಾಹಿತಿಯಿದ್ದಲ್ಲಿ ದಯವಿಟ್ಟು ತಿಳಿಸಿ. ಇದು ಗ್ಯಾರಂಟಿ ನನ್ನ ಮಗ ಕೇಳುವ ಪ್ರಶ್ನೆಗಳಲ್ಲಿ ಒಂದಾಗಿರುತ್ತದೆ!
ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
ಬೆಂಗಳೂರು ನಗರ ಜಿಲ್ಲೆ.