ಅಲೆಮಾರಿಯ ಅನುಭವಗಳು – ೧೦
©ಅರವಿಂದ ರಂಗನಾಥ್
ನಸುಕು ಆಕಳಿಸಿ ಮಂಪರಿನಲ್ಲಿರುವಾಗಲೆ ತಲೆಗೆ ತಣ್ಣೀರು ಸುರಿದುಕೊಂಡು ಒಂದು ಭರ್ತಿ ಸ್ನಾನ ಮುಗಿಸಿ ಮಾರಿಕಾಂಬನ ಮಾರಿ ನೋಡಿ ಬೈಕ್ ತಿರುವಿದಾಗ ಶಿರಸಿ ಜುಮುರುಗಟ್ಟಿದ ಥಂಡಿಯಲ್ಲಿ ಒಂದೆ ಸಮನೆ ನಡುಗುತ್ತಿತ್ತು. ಆಗಷ್ಟೆ ಮಳೆ ತನ್ನ ಅಂತಿಮ ಉಸಿರನ್ನು ತೇಕುತ್ತಿರುವಾಗಲೆ, ತಮವೆಲ್ಲಾ ಸೋರಿ ಬೆಳಕು ಜಾರಿಕೊಂಡು ಬರುವಾಗ ನಿತ್ಯಹರಿದ್ವರ್ಣ ಕಾಡುಗಳ ತುತ್ತ ತುದಿ ತಪ್ಪಲಿಗೆ ತಗಲುವ ಇಳಿಬಿಸಿಲು ಇಡೀ ಪಶ್ಚಿಮಘಟ್ಟದ ಒಳಹೊಕ್ಕು ತೀರಲು ಹೆಣಗಾಡಿ ಸೋಲುತ್ತಲೆ ಇತ್ತು. ಉದ್ದನೆಯ ರೋಡು ಬೆಚ್ಚಗೆ ಡಾಂಬಾರು ಹೊದ್ದು ಮಲಗಿತ್ತು. ಎಡಬಲಕ್ಕೆ ಕಣ್ಣು ಹಾಯಿಸಿದಷ್ಟು ಕಾನನ. ನಿರ್ಜನ ದಾರಿಗೆ ನಾವಿಬ್ಬರೆ ಸವಾರರು. ಬೆಳಕು ಹರಿದು ಮಳೆ ನಿಂತು ಮಂಜು ಆವರಿಸಿ ಮೈ ನಡಗುವಾಗ ಬೆಳಗಿನ ಆರುವರೆ. ಬೈಕ್ ಗೆ ಸವಾಲಾಗುವಂತಹ ಭೀಕರ ರಸ್ತೆ. ಪ್ರತಿ ತಿರುವಿನ ತುದಿಗೂ ತಿಳಿತಿಳಿಯಾದ ಒಂದೊಂದು ಕೌತುಕ. ತಣ್ಣನೆ ಗಾಳಿಕೆನೆ ಈ ಮೈ ಸವರಿದಾಗ ಪ್ರಫುಲ್ಲ ಹುಮ್ಮಸ್ಸೊಂದು ಒಳಗೊಳಗೆ ದ್ವಿಗುಣಗೊಳ್ಳುತ್ತಿತ್ತು. ಚಪ್ಪಟೆ ಘಟ್ಟದ ತಿರುವಿನಲ್ಲಿ ಬೈಕ್ ಪಕ್ಕಕ್ಕೆ ಹಾಕಿ ಸ್ವಲ್ಪ ಹೊತ್ತು ಅಡ್ಡಾಡಲು ಅಣಿಯಾದೆವು. ಅಲ್ಲೊಂದು ಸಣ್ಣ ತಿರುವಿಗೆ ಕಟ್ಟಲಾದ ಸೇತುವೆ ಇತ್ತು. ಅಲ್ಲೆ ಸ್ವಲ್ಪ ಹೊತ್ತು ಆ ಇಡೀ ಕಾಡಿನ ಮೈ ನೋಡವಂತಹ ಅವಕಾಶ ಗಿಟ್ಟಿಸಿಕೊಂಡೆವು. ಕಣ್ಣೆದುರು ಹುಟ್ಟುವ ನೀರಿನ ಸೆಲೆ ಕಣ್ಣೆದುರೆ ಹರಿದುಕೊಂಡು ಹೋಗಿ ಆ ಸಣ್ಣ ಸೇತುವೆಯ ಒಳನುಗ್ಗಿ ಮಾಯವಾಗಿ ಮತ್ತೆಲ್ಲೊ ದೂರದಲ್ಲಿ ಅದು ನೆಲದೊಳಗಿಂದೆದ್ದು ಬರುವುದು ಕಂಡು ಕುತೂಹಲ ಜಾಸ್ತಿ ಆಯಿತು. ತುಂಬಾ ಹೊತ್ತು ಈ ಕೌತುಕಗಳನ್ನೆ ಅವಲೋಕಿಸುತ್ತ ಚಿಟ್ಟೆಯ ದಂಡೊಂದನ್ನು ಬೆನ್ನಟ್ಟಿಕೊಂಡು ಬೆಳಗಿನ ಸಂಭ್ರಮವೊಂದನ್ನು ನಾವೆ ಕಟ್ಟಿಕೊಂಡೆವು.!
ಗಂಗಾವಳಿಯನ್ನು ತಲುಪುವ ಆತುರದಲ್ಲಿರುವ ಚನಗಾರ ಹಳ್ಳ ಆಯತಪ್ಪಿ ಘಟ್ಟದ ಮೇಲಿಂದ ಮೈ ಮುರಿದುಕೊಳ್ಳುತ್ತ ಅನಂತವಾಗಿ ಬೀಳುವ ದೊಡ್ಡ ಸದ್ದು, ಪಶ್ಚಿಮ ಘಟ್ಟದ ತಿರುವಿನಲ್ಲಿ ಲಯವಾಗಿ ಕೇಳಿಬರುತ್ತಿತ್ತು. ಆ ತಿರುವು ದಾಟಿಕೊಂಡು ಹೊರಳಿದ್ದೆ ಸಾಕು ಘಟ್ಟ ಇಳಿಮುಖ ರಸ್ತೆ ಒದಗಿಸಿತು. ಒಂದಷ್ಟು ತಿರುವುಗಳು ದಾಟುತ್ತಿರುವಾಗಲೆ ಆ ಸದ್ದು ಮಾಯ! ಘಟ್ಟದ ಪಾದಕ್ಕೆ ಬಂದು ನಿಂತ ಅನುಭವ. ಅಲ್ಲೊಂದು ಹೋಟೆಲ್ಲು ಕಾಣಿಸಿಕೊಂಡಿತು. ಅವರನ್ನು ವಿಚಾರಿಸಿದಾಗ ಜಲಪಾತದ ದಾರಿ ತಿಳಿಸಿದರು. ಆ ಹಳ್ಳಿ ಸೊಗಡಿನ ದಾರಿಯೆ ಚೆಂದ. ಅಲ್ಲಲ್ಲಿ ಪೇರಿಸಿಟ್ಟ ಇಟ್ಟಿಗೆಗೆ ಪಾಚಿಗಟ್ಟಿದ ಹಸಿರು, ತೆಂಗಿನ ಮರದ ಕಟ್ಟಿಗೆಯಿಂದ ಮಾಡಿದ ಕಾಂಪೊಂಡುಗಳು, ರಸ್ತೆಯುದ್ದಕ್ಕೂ ಬೆಳೆಸಿದ ವಿಧವಿಧವಾದ ಬಳ್ಳಿ, ನೂರಾರು ತರಹದ ಹೂವಿನ ಸಸಿಗಳು, ಬತ್ತದ ಗದ್ದೆ, ಅದರ ಮಧ್ಯೆ ಇರುವ ಮನೆ ಮತ್ತು ಅಪರೂಪಕ್ಕೆ ಕಾಣಸಿಗುವ ಅಡಿಕೆ ಟೋಪಿಯ ಮಲೆನಾಡ ಜನ ಹೀಗೆ ಎಲ್ಲವೂ ಇಡೀ ಕಾಡಿನ ಸೊಬಗನ್ನು ಬಳಿದಿಟ್ಟಂತೆ ಸಮೃದ್ಧವಾಗಿಸಿದ್ದವು!
ಹೊನ್ನಾವರ ವಿಭಾಗದ ಕುಮಟಾ ಉಪವಿಭಾಗಕ್ಕೆ ಒಳಪಡುವ ಹಿರೇಗುತ್ತಿ ವಲಯಕ್ಕೆ ಸಂಬಂಧಿಸಿದ ಅಂಕೋಲಾ ತಾಲೂಕಿನ ಈ ವಿಭೂತಿ ಜಲಪಾತಕ್ಕೆ ತಲುಪಿದಾಗ ಬೆಳಗಿನ ಏಳುವರೆ ಆಸುಪಾಸು. ಇನ್ನೂ ಯಾವ ಟಿಕೇಟ್ ಕೌಂಟರ್ ಗಳೂ ಸಹ ತೆರೆದಿರಲಿಲ್ಲ. ದೊಡ್ಡ ಗೇಟಿನ ಪಕ್ಕದಲ್ಲೆ ಕಾಲುದಾರಿ ನುಸುಳಿಕೊಂಡು ಒಳಹೋದೆವು. ಅನುಕೂಲಕರವಾದ ಮೆಟ್ಟಿಲುಗಳಿರುವುದರಿಂದ ಆರಾಮವಾಗಿ ಅರ್ಧ ದಾರಿ ಕ್ರಮಿಸಿದೆವು. ಈಗ ಒಂದಷ್ಟು ಮಣ್ಣಿನ ಮೈ ಮೆಟ್ಟಿ ಹೋಗಬೇಕಾದ ಏರು. ಹೆಜ್ಜೆ ಕಿತ್ತಿಡುತ್ತಿದ್ದಂತೆ ಇಂಬಳಗಳು ಮೆತ್ತಿಕೊಂಡೆ ಬರುತ್ತಿದ್ದವು. ಇಡೀ ಪಶ್ಚಿಮಘಟ್ಟದ ಈ ಪ್ರದೇಶ ಮತ್ತು ಆಸುಪಾಸಿನನ ಯಾಣಾ ಗುಹೆಗಳವರೆಗೆ, ಇಂಬಳಗಳ ಕಾಟಕ್ಕೆ ಪ್ರಸಿದ್ಧಿಯಾದುದು. ದಣಿವಾರಿಸಿಕೊಳ್ಳಲೆಂದು ಅಲ್ಲಲ್ಲಿ ಬೆಂಚಿನ ವ್ಯವಸ್ಥೆ ಕೂಡ ಮಾಡಿದ್ದರು. ತೊಟಗುಟ್ಟವ ಎಲೆಯಂಚಿನ ನೀರಿನಲ್ಲಿ ಅಪೂರ್ವವಾಗಿ ಕಾಣಸಿಗುವ ಕಾಮನಬಿಲ್ಲಿನ ಬಣ್ಣ ಸೂಕ್ಷ್ಮ ಕೌತುಕದ ಕದವನ್ನು ತೆರೆಯುತ್ತಿತ್ತು. ಒಂದು ತಿರುವು ತಿರುವಿಕೊಂಡು ಒಂದಷ್ಟು ಬೆಟ್ಟದಂಚಿನ ಏರಿಳಿತಗಳನ್ನು ದಾಟಿಕೊಂಡು ಹೆಜ್ಜೆಗಳನ್ನು ಸಾಗುಹಾಕುವಾಗ ಸಣ್ಣ ತೊರೆಯೊಂದು ನಮ್ಮ ಕಾಲುದಾರಿಗೆ ಅಡ್ಡಲಾಗಿ ಮೇಲಿಂದ ಬಿದ್ದು ಹರಿಯುತ್ತಿತ್ತು. ಆ ನೀರಿಗೆ ಈ ಪಾದದ ತುದಿ ಎಡವಿದ್ದೆ ತಡ ಸರಕ್ಕ ಅಂತ ಜಾರಿತು. ಒಂದಷ್ಟು ಹೊತ್ತು ಶೂ ಬಿಚ್ಚಿ ಆ ಕಲ್ಲು ಇಕ್ಕೆಲಗಳಲ್ಲಿ ಹರಿದು ಬರುವ ನೀರ ಮೈ ಸವರಿ ಆನಂದಿಸಿ ಅಲ್ಲಿಂದ ಆ ತೊರೆ ದಾಟಿ ಮುಂದಕ್ಕೆ ಹೊರಟೆವು. ಈಗ ನೀರಿನ ಭೋರ್ಗರೆತದ ಸದ್ದು ಜೋರಾಯಿತು. ನಾವು ಜಲಪಾತದ ಮೈಯ ಗಂಟಲಲ್ಲಿದ್ದೆವು!
ದಟ್ಟ ಕಾನನದ ನಡುವೆ ಇಡಿ ಕಾಡ ನೀರು ಬಸಿದು ಚನಗಾರ ಹಳ್ಳವಾಗಿ ರೂಪುಗೊಂಡು ಸುಣ್ಣದ ಕಲ್ಲಿನ ಮೈ ತೊಳೆದು ಮೂವತ್ತು ಅಡಿ ಎತ್ತರದಿಂದ ಜಾರಿಕೊಂಡು ಬೀಳುವ ಇದಕ್ಕೆ ವಿಭೂತಿ ಜಲಪಾತ ಎನ್ನುತ್ತಾರೆ! ನಿತ್ಯಹರಿದ್ವರ್ಣ ಕಾಡಿನ ಇಕ್ಕೆಲಗಳಲ್ಲಿ ಧುಮ್ಮಿಕ್ಕುವ ಈ ಜಲಪಾತ ಮುಂದೆ ಗಂಗಾವಳಿಯನ್ನು ತಳುಕು ಬೀಳುತ್ತದೆ. ಪುರಾಣದಲ್ಲಿ ಕೂಡ ಈ ವಿಭೂತಿ ಎನ್ನುವ ಹೆಸರಿಗೆ ಅರ್ಥವಿದೆ. ಸ್ಥಳಿಯ ಇತಿಹಾಸದ ಪ್ರಕಾರ ಭಸ್ಮಾಸುರ ಮೋಹಿನಿಯ ಕಥೆ ಈ ಸ್ಥಳದೊಂದಿಗೆ ತಳಕು ಹಾಕಿಕೊಂಡಿದೆ. ಭಸ್ಮಾಸುರ ನನ್ನು ಕೊಲ್ಲಲೆಂದೇ ವಿಷ್ಣುವು ಮೋಹಿನಿಯ ರೂಪ ಧರಿಸಿ ಬರುತ್ತಾನಂತೆ. ಅದನ್ನು ಕಂಡು ಸ್ವತಃ ಶಿವನೇ ಮೋಹಿಸುತ್ತಾನಂತೆ. ಆಗ ಭಸ್ಮಾಸುರನಿಗೆ ಎಲ್ಲಿಲ್ಲದ ಕೋಪ ಬಂದು ಶಿವನನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವಾಗ ಶಿವ ಭೈರವೇಶ್ವರ ನಾಗಿ ಆ ಗುಹೆಯಲ್ಲಿ ನಿಲ್ಲುತ್ತಾನಂತೆ. ನಂತರ ಭಸ್ಮಾಸುರ ಮೋಹಿನಿಯ ತಾಳಕ್ಕೆ ನೃತ್ಯ ಮಾಡುತ್ತ ತನ್ನ ತಲೆಯ ಮೇಲೆ ತಾನು ಕೈ ಇಟ್ಟುಕೊಂಡು ಭಸ್ಮನಾಗುತ್ತಾನೆ. ಹಾಗೆ ಹಾರಿದ ವಿಭೂತಿ ಅಲ್ಲೇ ಸಮೀಪದಲ್ಲಿ ನದಿಯ ರೂಪದಲ್ಲಿ ನೊರೆ ನೊರೆಯಾಗಿ ಕೆಳಗೆ ಬೀಳುತ್ತಿದೆ ಎಂಬುದಾಗಿ ಸ್ಥಳಿಯರು ನಂಬುತ್ತಾರೆ. ಮುಂದೆ ಅದೆ ವಿಭೂತಿ ಜಲಪಾತವಾಗಿದೆ ಎಂಬ ನಿಲುವು ಜಲಪಾತದ ಇನ್ನೊಂದು ಮಗ್ಗುಲನ್ನು ಪರಿಚಯಿಸುತ್ತದೆ!
ಸ್ವಲ್ಪ ಹೊತ್ತು ಅಲ್ಲೆ ಪೋಟೊ ಕ್ಲಿಕ್ಕಿಸಿಕೊಂಡೆವು. ಇನ್ನೇನು ನೀರಿಗಿಳಿದು ಮಿಂದು ಇನ್ನಷ್ಟು ಪ್ರಫುಲ್ಲಗೊಳ್ಳಬೇಕು ಅನ್ನುವಷ್ಟರಲ್ಲಿ ದೊಡ್ಡ ಏಳೆಂಟು ಅಡಿಯ ಹಾವೊಂದು ಕಾಡಿನಿಂದ ಹೊರಬಿದ್ದು ನೀರಿಗೆ ಇಳಿಯಿತು. ಇಡೀ ನೀರಿನ ತುಂಬಾ ಅದರದ್ದೆ ಸಾಮ್ರಾಜ್ಯ ಆಗಿರುವಾಗ ನಾವು ಅತಿಥಿಗಳಲ್ಲಿ ಅಷ್ಟೆ! ತುಂಬಾ ಹೊತ್ತು ಕಾದೆವು ಅದೇನು ನೀರು ಬಿಟ್ಟು ಹೋಗುವ ಮನಸ್ಸು ಮಾಡಲಿಲ್ಲ! ಅಲ್ಲೆ ಇನ್ನಷ್ಟು ಫೋಟೊ ಕ್ಲಿಕ್ಕಿಸಿದರಾಯಿತು ಎಂದು ಕ್ಯಾಮೆರಾ ತೆಗೆದೆ. ಅಪರೂಪ ತಳಿಯ ಕಪ್ಪೆಗಳು, ಬಣ್ಣಬಣ್ಣದ ಮೀನುಗಳು ಕಂಡವು. ಜಟಿಲ ಕಾನನದ ಕುಟಿಲ ಪಥಗಳಿಂದ ಹರಿದು ಬರುವ ಜೀವಪೋಷಕ ದ್ರವ್ಯಕ್ಕೆ ಅದೆಷ್ಟು ಜೀವಿಗಳು ಅವಲಂಬಿಸಿವೆ ಅಂತ ಅವಲೋಕನ ಮಾಡುತ್ತಲೆ ಅಲ್ಲಿಂದ ಸಣ್ಣಗೆ ಹೆಜ್ಜೆ ವಾಪಸ್ಸು ತಿರುಗಿಸಿ ಹಿಂದೆ ನೋಡೆದೆವು. ಹಾವು ತನ್ನ ಏಕಾಂತವನ್ನು ಪರಮಾನಂದದ ಸ್ಥಿತಿಗೆ ತಲುಪಿಸಿ ಆನಂದಿಸುತ್ತಿತ್ತು! ಬಂದ ದಾರಿಗೆ – ಜಲಧಾರೆಗೆ ಸುಂಕ ಕಟ್ಟದೆ ಅಲ್ಲಿಂದ ಪಯಣ ನಮ್ಮ ಮುಂದಿನ ಗಮ್ಯೆದೆಡೆಗೆ ಸಾಗಿತು!
ಲೇಖನ: ಮೌನೇಶ ಕನಸುಗಾರ
ಕಲ್ಬುರ್ಗಿ ಜಿಲ್ಲೆ.