ಪ್ರಕೃತಿ ಬಿಂಬ
ಚುಕ್ಕೆ ಜೇಡ © ಕೃಷ್ಣ ದೇವಾಂಗಮಠ.
ಭಾರತದ ಕಾಡುಪ್ರದೇಶಗಳು, ಹೊಲಗಳು, ಉದ್ಯಾನವನಗಳು ಮತ್ತು ಹಿತ್ತಲಿನಲ್ಲಿ ಕಾಣಬಹುದಾದ ಈ ಚುಕ್ಕೆ ಜೇಡಗಳು ಅರೇನಿಡೇ ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ನಿಯೋಸ್ಕೋನ (Neoscona sp.) ಎಂದು ಕರೆಯಲಾಗುತ್ತದೆ. ಕೆಲವು ಕಂದು ಬಣ್ಣದ್ದಾಗಿದ್ದು, ಕೆಲವು ಜೇಡಗಳು ಕಿತ್ತಳೆ-ಕೆಂಪು ಅಥವಾ ಹಳದಿ-ಕಂದು ಬಣ್ಣದ್ದಾಗಿರುತ್ತವೆ. ಹೊಟ್ಟೆಯ ಭಾಗದಲ್ಲಿ ಕೆಲವು ವಿನ್ಯಾಸಗಳನ್ನು ಹೊಂದಿವೆ ಹಾಗೂ ತಲೆ, ಎದೆ, ಹೊಟ್ಟೆ ಮತ್ತು ಕಾಲುಗಳ ಮೇಲೆ ಸಣ್ಣ ಕೂದಲುಗಳನ್ನು ಕಾಣಬಹುದಾಗಿದೆ. ಹೆಣ್ಣು ಜೇಡವು ತನ್ನ ರೇಷ್ಮೆಯಿಂದ ನೇಯ್ದ ಗೂಡಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಇವುಗಳು ಇತರೆ ಕೀಟಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.
ಸಾಲಿಸಿಟಿಡೇ (Saliticidae) ಕುಟುಂಬಕ್ಕೆ ಸೇರುವ ಈ ಜೇಡಗಳನ್ನು ಮರಗಳು ಮತ್ತು ಪೊದೆಗಳಲ್ಲಿ ಕಾಣಬಹುದಾಗಿದೆ. ಇರುವೆಗಳನ್ನು ಹೋಲುವ ಇವುಗಳನ್ನು ವೈಜ್ಞಾನಿಕವಾಗಿ ಮೈರ್ಮಾರಾಕ್ನೆ (Myrmarachne sp.) ಎಂದು ಕರೆಯಲಾಗುತ್ತದೆ. ರೇಷ್ಮೆಯಿಂದ ನೇಯ್ದ ದಪ್ಪದಾದ ಗೂಡನ್ನು ಎಲೆ, ಗೋಡೆ, ಮರ ಮತ್ತು ಪೊದೆಗಳ ನಡುವೆ ಕಟ್ಟುತ್ತದೆ. ಇವು ಸಣ್ಣದಾದ ಗೋಳಾಕಾರದ ಮೊಟ್ಟೆಗಳನ್ನು ಇಡುತ್ತವೆ. ಮೈ ಬಣ್ಣವು ಕೆಂಪು ಮಿಶ್ರಿತ ಕಂದು ಬಣ್ಣದ್ದಾಗಿದ್ದು, ಉದ್ದವಾದ ತೆಳ್ಳಗಿನ ಕೋರೆ ಹಲ್ಲನ್ನು ಹೊಂದಿರುತ್ತವೆ. ಇವು ಸಾಮಾನ್ಯವಾಗಿ ಕೀಟಗಳನ್ನು ತಮ್ಮ ಆಹಾರವಾಗಿ ಸೇವಿಸುತ್ತವೆ.
ಪಕ್ಷಿಗಳ ಹಿಕ್ಕೆಗಳಂತೆ ಕಾಣುವ ಈ ಜೇಡಗಳು ಅರಾನಿಡೇ (Araneidae) ಕುಟುಂಬಕ್ಕೆ ಸೇರುತ್ತವೆ. ಇವುಗಳನ್ನು ವೈಜ್ಞಾನಿಕವಾಗಿ ಪಾಸಿಲೋಬಸ್ (Pasilobus sp) ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಕಂಡುಬರುವ ಇವುಗಳು, ಪೊದೆಗಳು ಮತ್ತು ಹುಲ್ಲನ್ನು ಹೊಂದಿರುವ ಪ್ರದೇಶಗಳಲ್ಲಿ ವಾಸಿಸುತ್ತವೆ. ಕಡುಗಂದು ಬಣ್ಣ, ಅಗಲವಾದ ದೇಹ ಹಾಗೂ ಗಟ್ಟಿಮುಟ್ಟಾದ ಪುಟ್ಟ ಕಾಲುಗಳನ್ನು ಹೊಂದಿದ್ದು, ಅಂಟಾದ ರೇಷ್ಮೆಯ ಗೂಡುಗಳನ್ನು ನೇಯುತ್ತವೆ. ಜಿಗುಟಾದ ದ್ರವವನ್ನು ಸಿಂಪಡಿಸಿ ಇತರೆ ಕೀಟಗಳನ್ನು ಭಕ್ಷಿಸುತ್ತವೆ.
ಭಾರತ, ಬಾಂಗ್ಲಾದೇಶ ಮತ್ತು ಚೀನಾ ದೇಶಗಳಲ್ಲಿ ಕಂಡುಬರುವ ಈ yellow sac spider ಗಳು ಕ್ಲಬಿಯೋನಿಡೇ (Clubionidae) ಕುಟುಂಬಕ್ಕೆ ಸೇರುತ್ತವೆ. ಸಾಮಾನ್ಯವಾಗಿ ಅಗಲವಾದ ಎಲೆಗಳ ನಡುವೆ ಅಥವಾ ನೆಲದ ಮೇಲೆ ವಾಸಿಸುತ್ತವೆ. ಹೊಟ್ಟೆಯ ಭಾಗವು ಅಗಲವಾಗಿದ್ದು, ಅಂಡಾಕಾರದಲ್ಲಿರುತ್ತವೆ ಹಾಗೂ ಹಳದಿ ಮಿಶ್ರಿತ ಬಿಳುಪು ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಚಪ್ಪಟೆಯಾದ ಮೊಟ್ಟೆಯ ಚೀಲವನ್ನು ಹೆಣ್ಣು ಜೇಡವು ರಕ್ಷಣೆ ಮಾಡುತ್ತದೆ ಹಾಗೂ ಮುಂಗಾಲುಗಳಿಂದ ಬೇಟೆಯನ್ನು ಭಕ್ಷಿಸುತ್ತವೆ.
ಚಿತ್ರಗಳು : ಕೃಷ್ಣ ದೇವಾಂಗಮಠ
ಲೇಖನ : ದೀಪ್ತಿ ಎನ್.