ಅಲೆಮಾರಿಯ ಅನುಭವಗಳು -೦೫
©ಅಶ್ವಥ ಕೆ. ಎನ್.
ಬ್ರಿಟೀಷ್ ಆಡಳಿತಾವಧಿಯಲ್ಲಿ ಕಾಡು ಕಡಿದು ಕಾಫಿ ತೋಟಗಳನ್ನು ಹುಟ್ಟು ಹಾಕುವುದರಿಂದ ಹಿಡಿದು ಇಲ್ಲಿಯವರೆಗೂ ಸಾಕಷ್ಟು ಸಲ ನಿರ್ಜನ ನೀಲಗಿರಿಯ ಮೇಲೆ ನಿರಂತರ ದೌರ್ಜನ್ಯ ಎಸಗಿದ ನಂತರ ವಿಫಲವಾಗಿ ಮಾನವನ ಆಕ್ರಮಣಕ್ಕೆ ಹೊರತಾಗಿರುವ ನಾವೇ ಅಂದಾಜಿಸಿದ ಕಟ್ಟಕಡೆಯ ಸದಾಹಸಿರಿನ ಉಷ್ಣವಲಯದ ಮಳೆಕಾಡುಗಳಲ್ಲಿ ಒಂದಾದ ಮೌನ ಕಣಿವೆಯ ದಟ್ಟ ಕಾನನದ ಜಾಡು ಹಿಡಿದು ಒಳಹೊರಟಷ್ಟು ದುರ್ಗಮ ಎನ್ನಿಸುವ ಪ್ರಪಾತಗಳು ಕತ್ತಿಯಂಚಿನ ನಡಿಗೆಯ ಅನುಭವ ಕೊಡುತ್ತವೆ. ಅಂತಹ ಒಂದು ಚಾರಣದ ಹೆಜ್ಜೆ ಕಿತ್ತಿಟ್ಟು ಎತ್ತರೆತ್ತರಕ್ಕೆ ಏರಿದಷ್ಟು ಮಲೆಯ ಮೇಲೆ ಶ್ವೇತ ಶಾಲಿನಂತಹ ಮಂಜು ಮುಸುಕಿನ ಸೆರಗು ಇಡೀ ಹಸಿರ ಪಶ್ಚಿಮಘಟ್ಟವನ್ನು ಹಸಿಬೆಚ್ಚಗೆ ಹೊದ್ದಿರುತ್ತೆ! ಎಷ್ಟು ಚೆಂದದ ಮಲೆಯ ನಾಡದು. ಒಂದಕ್ಕಿಂತ ಒಂದು ಭಯಂಕರ ಸುಂದರ ಸರತಿಯಲ್ಲಿ ಒಂದರ ಬೆನ್ನಲ್ಲಿ ಒಂದು ನಿಂತು ನಮ್ಮನ್ನು ತಮ್ಮ ತೆಕ್ಕೆಗೆ ಎಳೆದುಕೊಳ್ಳುತ್ತವೆ.
ಕಾಡ ಒಳಹೊಕ್ಕು ಹೊರಟರೆ ಕಾಡು, ಕಲ್ಲು ಹಾಸಿದ ಹಾದಿಯಲಿ ಪಾಚಿಗಟ್ಟಿ ಹಸಿರುಮೆತ್ತಿದ ಕಲ್ಲು ದಾರಿಯದು. ಬಣ್ಣ ಬಣ್ಣದ ತಪ್ಪಲು ತನ್ನ ಮೈಗೆ ಮೆತ್ತಿಕೊಂಡ ಲಕ್ಷಾಂತರ ವೃಕ್ಷಗಳು ವರ್ಣರಂಜಿತವಾಗಿ ಮಾರುಹೋಗುವಂತೆ ಮೋಹಿಸುತ್ತವೆ. ಅಚ್ಚುಕಟ್ಟಾಗಿ ಹೆಣೆದ ಜೇಡರ ಬಲೆಯೊಳಗೆ ಎಂಥದೋ ಕೀಟ ಸಿಕ್ಕು ಒದ್ದಾಡುವಾಗ ಧೋ ಎಂದು ಮಳೆ ಸುರಿದರೆ ಸಾವೊಂದು ಬಂದು ತೊಳೆದುಕೊಳ್ಳುತ್ತದೇನೊ ಅನ್ನಿಸಿಬಿಡುತ್ತದೆ. ಮುರುಕಲು ಕಟ್ಟಿಗೆಯ ಪುಟ್ಟ ಪೊಟರೆಯೊಳಗಿಂದ ಎದ್ದು ಬರುವ ಇಂಬಳಗಳು ಆಗಷ್ಟೆ ಸೂರ್ಯೋದಯವಾಗುತ್ತದೆ ಎನ್ನುವಂತೆ ಎದ್ದು ಮೈಸೆಟೆಸಿ ತಮ್ಮ ಅಂಟು ಮೆತ್ತಿಸಿ ಕಿತ್ತಿಡುವ ಹೆಜ್ಜೆ ಹಾಕುತ್ತವೆ. ಮಳೆ ಗಾಳಿಯ ಸುಳಿವು ಅತಿಯಾಗಿ ತಾಕದ ಕಲ್ಲು ಇಕ್ಕೆಲಗಳಲ್ಲಿ ಕಟ್ಟಿದ ಜೇನುಗೂಡಿನಲಿ ರಾಣಿಯರದೆ ದರ್ಬಾರು. ಷಡ್ಭುಜಾಕೃತಿಯ ಒಂದೊಂದು ಕೊಣೆಯೊಳಗೂ ತುಂಬಿಡುವ ಅನಂತ ಹೂವಿನ ಗಂಧವನು ಯಾವ ಗಾಳಿಯೂ ದೋಚದಂತೆ ಹೊತ್ತು ತರುವ ಗಂಡು ಜೇನಿನ ಪೀಕಲಾಟ ಎಷ್ಟು ಮಜವಾಗಿರುತ್ತದಲ್ಲವೆ? ಸಾಲು ಸಾಲು ಇರುವೆಗಳು, ಕೆಂಪಿರುವೆಗಳು ದೊಡ್ಡ ಸೈನ್ಯದೊಡನೆ ಯುದ್ಧಸನ್ನದ್ಧವಾಗಿ ಹೊರಟಂತೆ ದುಬುದುಬು ಅಂತ ಸಾಲುಗಟ್ಟಿ ಸರಿದಾಡುವುದು ಮಳೆಕಾಡಿನ ನಡುವೆ ಅನನ್ಯ ಅನ್ನಿಸಲೂಬಹುದು. ತಮ್ಮ ಆಹಾರ ಸಂಗ್ರಹಣೆಗೆ ಅವುಗಳು ಪರದಾಡುವ ಪರಿ ತುಂಬಾ ರೋಚಕವಾಗಿರುತ್ತೆ. ಬಾಯಿಂದ ಬಾಯಿಗೆ ವರ್ಗಾಯಿಸುತ್ತಲೆ ತಮ್ಮದೆ ಬಿಲದೊಳಗೆ ಆಹಾರವನ್ನು ಬೆಚ್ಚಗೆ ತುಂಬಿಟ್ಟುಕೊಳ್ಳುವ ಸೂಕ್ಷ್ಮತೆಯನ್ನು ಗಮನಿಸಿದಾಗ ಅನ್ನಿಸೋದು ಹಸಿವೊಂದೆ ಎಲ್ಲದಕ್ಕೂ ಕಾರಣ ಅಂತ! ಅಳಿಲು, ಉಡ, ಸಿಂಗಳಿಕ, ಮರಕುಟಿಗ, ಹಾರ್ನಬಿಲ್ ಗಳು ಆಗಾಗ ಕಣ್ಣಿಗೆ ಬೀಳುತ್ತವೆ. ನೂರಾರು ತರಹದ ಪಕ್ಷಿಗಳು ಹಲವಾರು ತರಹದ ಹಾವುಗಳು, ಕಪ್ಪೆಗಳು, ನೂರಾರು ತರಹದ ಚಿಟ್ಟೆಗಳು ಇಡೀ ಕಾಡಿನ ಮೌನದೊಂದಿಗೆ ಬದುಕನ್ನು ಸಮೃದ್ಧವಾಗಿಸಿಕೊಂಡಿವೆ.
ನಿರಂತರ ಸುರಿವ ಮಳೆಯಿಂದಾಗಿ ಮತ್ತು ರಕ್ಕಸ ಗಾಳಿಯ ರಭಸಕ್ಕೆ ಶಿಖರ ಶಿರದಲ್ಲಿ ಮಣ್ಣಿನ ಸವಕಳಿ ಗರಿಷ್ಠ ಪ್ರಮಾಣದಲ್ಲಿರುತ್ತದೆ. ಹಾಗಾಗಿಯೇ ನಾವು ಏರಿದ ಯಾವುದೇ ಪರ್ವತ ಶ್ರೇಣಿಯಾಗಲಿ, ಬೆಟ್ಟದಂಚಿರಲಿ, ದಟ್ಟ ಕಾನನದ ಜಟಿಲತೆ ಹೊಂದಿರುವುದಿಲ್ಲ. ಹುಲ್ಲುಗಾವಲೇ ಅಲ್ಲಿನ ಹಸಿರ ಜೀವಾಳ. ಅಕ್ಕಪಕ್ಕದಲ್ಲಿ ಎಲ್ಲಿಯಾದರೂ ನೀರಿನ ಆಕರಗಳಿದ್ದರೆ ಒಂದಷ್ಟು ಪಕ್ಷಿ ಸಂಕುಲವೂ ಸಹ ತನ್ನ ವಾಸವನ್ನು ಇಲ್ಲಿ ಆರಂಭಿಸಿಬಿಡುತ್ತವೆ. ಇವುಗಳನ್ನು ಮತ್ತು ಇವುಗಳ ಮೊಟ್ಟೆಗಳನ್ನು ಆಹಾರವನ್ನಾಗಿಸಿಕೊಳ್ಳುತ್ತಾ ಸರಿಸೃಪಗಳು ಇಲ್ಲಿ ನೆಲೆಗೊಳ್ಳುತ್ತವೆ. ಅಲ್ಲಲ್ಲಿ ಕಲ್ಲಿನ ಇಕ್ಕೆಲಗಳಲ್ಲಿ ಚೇಳು ಹುಳಹುಪ್ಪಟೆಗಳು ಕಾಣಸಿಗುತ್ತವೆ. ಅದಮ್ಯ ಮಲಯ ಮಾರತಗಳು ಒಕ್ಕರಿಸಿಕೊಂಡು ಬಂದು ಸುರಿಯುವ ಮೋಡದ ಮೇಲ್ಪದರ ತಂಪುತಿಳಿಗಾಳಿ ಇಬ್ಬನಿಯೇ ಹುಲ್ಲುಗಾವಲಿನ ಜೀವಸಂಕುಲದ ಜಲಜೀವಾಳ!
ಮಾರುತಗಳು ತಂದು ಸುರಿವ ನಿರಂತರ ಮಳೆಯಿಂದಾಗಿ ನೀಲಗಿರಿಗಳ ಮೈ ಸದಾ ಹಸಿಹಸಿಯಾಗಿ ನಡುಗುತ್ತಲೇ ಇರುತ್ತದೆ. ಉದುರಿದ ಕೋಟ್ಯಾಂತರ ಎಲೆಗಳೆ ಕಾಡಿಗೆ ಗೊಬ್ಬರವಾಗಿ ರೂಪಾಂತರಗೊಂಡು ಕಾಡು ಮತ್ತಷ್ಟು ಹದಗೊಳ್ಳುತ್ತಲೆ ಇರುತ್ತದೆ. ಸಾವಿರ ತರಹದ ಅನಂತ ಹೂವುಗಳನ್ನು ಒಟ್ಟಿಗೆ ಅರಳಿಸಿ ನಗು ಚೆಲ್ಲಿ ಮಾಯವಾಗುವ ಪರಿಗೆ ಬೆರಗುಗಣ್ಣುಗಳು ಎವೆ ಬಿಚ್ಚಿ ಆನಂದಿಸುತ್ತವೆ. ಕಾಡು ಬಸಿದುಕೊಟ್ಟು ನೀರನ್ನೆಲ್ಲಾ ಒಟ್ಟಿಗೆ ತನ್ನ ಇಕ್ಕೆಲಗಳಲ್ಲಿ ಬಿಟ್ಟುಕೊಂಡು ಮೈದುಂಬಿ ಹರಿಸುವ ತಗ್ಗು ಪ್ರದೇಶಗಳು ತಮ್ಮನ್ನು ತಾವು ಸದಾ ಹಸಿಯಾಗಿಟ್ಟುಕೊಳ್ಳುವಲ್ಲಿ ಸದಾ ಯಶಸ್ವಿಯಾಗುತ್ತವೆ. ಮಟ್ಟಸವಾಗಿ ಹರಿವ ನದಿ ಒಟ್ಟಿಗೆ ಯಾವುದೊ ಪ್ರಪಾತ ಒಂದಕ್ಕೆ ದೊಪ್ಪನೆ ಬೀಳುವಾಗ ಜಲ-ಪಾತವಾಗುತ್ತದೆ! ಮಾರುತದ ಹೊಡೆತಕ್ಕೆ ಬೀಳುತ್ತಿರುವ ಜಲಧಾರೆಯ ಒಟ್ಟು ಅರ್ಭಟ ಸಡಿಲಗೊಂಡು ನೀರ ತುಂತುರು ಗಾಳಿಯ ಬಲೆಯೊಳಗೆ ಬಿದ್ದು ಹರಿದಾಡುತ್ತವೆ. ತಂಪಾದ ತೇವಾಂಶವೆಲ್ಲಾ ಗಾಳಿಯ ಮೈ ಸವರುವಾಗ ಇಡೀ ಕಾಡೊಳಗೆ ಹಸಿಕಂಪನ ಒಂದು ತಣ್ಣಗೆ ತಲೆದೂಗುತ್ತದೆ. ಇಡೀ ಕಾಡು, ಬಿದ್ದ ನೀರಿನ ಸದ್ದನ್ನು ಪ್ರತಿಧ್ವನಿಗೊಳಿಸುತ್ತಾ ಕಾನನದ ಜೀವಗಳಿಗೆ ನೀರಿನ ಮೂಲಗಳ ಗುಟ್ಟನ್ನು ಬಿಟ್ಟುಕೊಡುತ್ತದೆ. ಸಂಜೆ ಏರಿ ಬರುವಾಗ ಗೂಡು ಸೇರಿಕೊಳ್ಳುವ ಪಕ್ಷಿಗಳ ಸದ್ದು ಇಡೀ ಕಾಡಿನ ಮೌನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ಗದ್ದಲೆಬ್ಬಿಸುತ್ತವೆ. ಕತ್ತಲು ಕವಿದಾಗ ಕಾಡಿನ ಮಧ್ಯೆ ಮತ್ತೆಂತದೊ ಜೀವವೊಂದು ತನ್ನ ಮೈಯಿಂದ ಬೆಳಕನ್ನು ಚೆಲ್ಲುತ್ತದೆ. ಕಾಡು ಮತ್ತಷ್ಟು ಸುಂದರವಾಗಿ ಸಿಂಗಾರಗೊಳ್ಳುತ್ತದೆ. ತಮವೆಲ್ಲಾ ತೋಯ್ದ ಕಾಡೊಳಗೆ ಸಣ್ಣ ಬೇಟೆಯ ಕ್ರೌರ್ಯ ತಣ್ಣಗೆ ನಡೆದಿರುತ್ತೆ! ಕಾಡು ಯಾವತ್ತಿಗೂ ಸುಮ್ಮನಿರದ, ನಿರಂತರ ಉಸಿರಾಟದ ಸೆಲೆ ಹೊತ್ತ ನಿಗೂಢ ಅಚ್ಚರಿಗಳನು ಸುರಿವ ದೊಡ್ಡ ಮಾಯಾಜಾಲ!
ಮುಂದುವರಿಯುವುದು. . . . .
ಲೇಖನ: ಮೌನೇಶ ಕನಸುಗಾರ
ಕಲ್ಬುರ್ಗಿ ಜಿಲ್ಲೆ.