ಕ್ಯಾನ್ಸರ್ ಕ್ಯಾನ್ಸರ್ !
©VICKI JAURON, BABYLON AND BEYOND PHOTOGRAPHY_GETTY IMAGES PLUS
ಎಂದೋ ನಡೆದ ಘಟನೆ. ಗಾಯವಾದ ನನ್ನ ಕೈಯನ್ನು ಭಗೀರ ನೆಕ್ಕಿಬಿಟ್ಟಿದ್ದ. ಆ ಸಮಯದಲ್ಲಿ ಅದರ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಹೀಗೆ ಸಮಯ ಕಳೆಯಿತು, ದಿನಗಳು ತಿಂಗಳುಗಳಾದವು. ತಿಂಗಳುಗಳು ವರ್ಷಗಳೇ ಆದವು. ಭಗೀರ ನಾಯಿಯ ಪ್ರಭೇದಕ್ಕೆ ಸೇರಿರುವುದರಿಂದ, ಅವನ ಬಾಯಲ್ಲಿ ರೇಬೀಸ್ ವೈರಾಣುಗಳು ಇರುವುದು ನನಗೆ ತಿಳಿದಿತ್ತು. ಜೊತೆಗೆ ಈ ವೈರಾಣು ತನ್ನ ಕೆಲಸವನ್ನು ಹಲವಾರು ವರ್ಷಗಳ ನಂತರ ಶುರುಮಾಡುತ್ತದೆ, ಒಮ್ಮೆ ಆ ರೋಗ ಬಂದರೆ ಅದಕ್ಕೆ ಔಷಧಿಯೇ ಇಲ್ಲ ಎಂದು ತೋರಿಸುವ ಅಂಬರೀಶ್ ಚಲನಚಿತ್ರ ಒಂದನ್ನು ಕಂಡಿದ್ದೆ. ನನ್ನ ವೈಜ್ಞಾನಿಕ ಆಲೋಚನೆ ಮತ್ತು ಸಿನಿಮಾ ಆಗ ನನ್ನ ತಲೆ ಕೆಡಿಸಿಬಿಟ್ಟಿದ್ದವು. ಸಮಯ ಕಳೆದಂತೆ ಅದನ್ನು ನಾನು ಮರೆತುಬಿಟ್ಟೆನಾದರೂ ಎಲ್ಲೋ ಒಂದು ಮೂಲೆಯಲ್ಲಿ, ಒಂದು ವೇಳೆ ಏನಾದರೂ… ಎಂಬ ಗುಮಾನಿ ಇದ್ದೇ ಇತ್ತು. ಇತ್ತೀಚೆಗೆ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾದರೆ ಹೇಗೆ ಪ್ರಥಮ ಚಿಕಿತ್ಸೆ ಮಾಡಬೇಕೆಂದು ಹೇಳಿಕೊಡಲು ಒಬ್ಬ ವೈದ್ಯರು ಬಂದಿದ್ದರು. ನನ್ನ ಬಹು ದಿನಗಳ ಈ ವಿಚಾರವನ್ನು ಅವರ ಮುಂದಿಟ್ಟೆ. ಅವರು ನೆನ್ನೆಯೋ, ಮೊನ್ನೆಯೋ ಆಗಿರಬಹುದು ಎಂದು ವಿಚಾರಿಸಿದರು. ಅದಕ್ಕೆ ನಾನು “ಇಲ್ಲ ಸಾರ್ ಸುಮಾರು 2-3 ವರ್ಷಗಳಾಗಿವೆ” ಎಂದಾಗ, ಸುಮ್ಮನೆ ಮುಗುಳ್ನಕ್ಕರು. ನನ್ನ ಗುಮಾನಿಗೆ ಔಷಧಿ ದೊರಕಿತ್ತು. ಆದರೂ ಒಮ್ಮೆ ದೃಢಪಡಿಸಿಕೊಳ್ಳಲು ಕೇಳಲಾಗಿ, ಅವರು ವಿವರಿಸಲಾಗಿ ನಂತರ ಅದು ತಮಾಷೆಯ ತಿರುವುಗಳನ್ನು ತೆಗೆದುಕೊಂಡು ಕೊನೆಗೊಂಡಿತು.
ಆದರೆ ಒಂದಂತು ನಿಜ ಒಮ್ಮೆ ರೇಬೀಸ್ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಯಾವುದೇ ಔಷಧಿಗಳಿಲ್ಲ. ಹಾಗೆಯೇ ಕ್ಯಾನ್ಸರ್ ಗಳು, ಒಮ್ಮೆ ಬಂದರೆ ಗಂಟೂ ಮೂಟೆಯ ಹಾದಿಯೇ. ಎಂಬ ಮಾತುಗಳು ಸತ್ಯಕ್ಕೆ ದೂರವಾಗುತ್ತಿವೆ. ಸಮಯದ ಪರದೆ ಸರಿದಂತೆ ಹೊಸ ಸಂಶೋಧನೆ ಮೈದಳೆದಂತೆ, ಹೊಸ ಚಿಕಿತ್ಸೆಗಳು, ಔಷಧಿಗಳು ಹುಟ್ಟಿಕೊಂಡಿವೆ. ರಕ್ತದ ಕ್ಯಾನ್ಸರ್ ಬಂದರೆ ಯಾವುದೇ ಔಷಧಿಗಳಿಲ್ಲದ ಕಾಲ ಒಂದಿತ್ತು. ಆದರೆ ಈಗ ಶುರುವಿನ ಹಂತದಲ್ಲೇ ಇದನ್ನು ತಿಳಿದುಕೊಂಡರೆ ಅದನ್ನು ಗುಣಪಡಿಸುವ ಚಿಕಿತ್ಸಾ ಮಾರ್ಗಗಳು ಹುಟ್ಟಿಕೊಂಡಿವೆ. ಹಾಗೆಯೇ ಎಲ್ಲವೂ ಫಲಕಾರಿಯಾಗಲಿಕ್ಕಿಲ್ಲ. ಹಾಗೆಂದು ವಿಷಾದಿಸಬೇಕಾಗೂ ಇಲ್ಲ. ಏಕೆಂದರೆ ಈಗ ಹೇಳಹೊರಟಿರುವ ಸಂಶೋಧನೆಯು ರಕ್ತದ ಕ್ಯಾನ್ಸರ್ ಅನ್ನು ಗುಣಪಡಿಸುವ ಚಿಕಿತ್ಸಾ ಮಾರ್ಗವನ್ನು ಕಂಡುಕೊಂಡಿದೆ.
ಅಸಲಿಗೆ ಕ್ಯಾನ್ಸರ್ ಎಂದರೇನು, ಅದಕ್ಕೇಕೆ ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಗಳಿಲ್ಲ ಎಂಬುದನ್ನು ತಿಳಿಯಬೇಕು. ನಾವು ಮಾಡಲ್ಪಟ್ಟಿರುವುದು ಕೋಟ್ಯಾಂತರ ಸೂಕ್ಷ್ಮ ಗಾತ್ರದ ಜೀವಕೋಶಗಳಿಂದ. ಈ ಜೀವಕೋಶಗಳು ದೇಹದಲ್ಲಿ ಹುಟ್ಟಿ ತಮ್ಮ ಪಾತ್ರ ಮುಗಿಸಿ, ಹೊಸದಾಗಿ ಹುಟ್ಟುವ ಜೀವಕೋಶಗಳಿಗೆ ಅವಕಾಶ ಕೊಡುತ್ತಾ ಸಾಯುತ್ತವೆ. ಆದರೆ ಕಾರಣಾಂತರಗಳಿಂದ ಡಿ. ಎನ್. ಎ. ನಲ್ಲಿ ಆಗುವ ಕೆಲವು ಮಾರ್ಪಾಡುಗಳಿಂದ ಕೆಲವು ಜೀವಕೋಶಗಳು ಹತೋಟಿ ಇಲ್ಲದ ಹಾಗೆ ಬೆಳೆದು ಬಿಡುತ್ತವೆ. ಇಂತಹ ಸನ್ನಿವೇಶವನ್ನು ಕ್ಯಾನ್ಸರ್ ಎನ್ನುತ್ತಾರೆ. ಇವುಗಳಲ್ಲಿ ಹಲವು ವಿಧಗಳಿವೆ. ಇಲ್ಲಿ ನಾವು ಮಾತನಾಡುತ್ತಿರುವ ರಕ್ತದ ಕ್ಯಾನ್ಸರ್ ನ ಬಗ್ಗೆ ಹೇಳುವುದಾದರೆ, ರಕ್ತ ಜೀವಕೋಶಗಳು ತಮ್ಮ ನಿರ್ದಿಷ್ಟ ಆಕಾರವನ್ನು ಬದಲಿಸಿ ಲೆಕ್ಕವಿಲ್ಲದ ಹಾಗೆ ಬೆಳೆಯುವುದು. ಹೀಗೆ ವಿಕಾರಗೊಂಡ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಇರುವ ರಕ್ತ ಜೀವಕೋಶಗಳಿಂದ ದೇಹಕ್ಕೆ ವಿವಿಧ ತೊಂದರೆಗಳನ್ನು ಉಂಟುಮಾಡುತ್ತವೆ. ಇಂಗ್ಲೀಷ್ನಲ್ಲಿ ಲುಕೇಮಿಯಾ ಎಂದು ಕರೆಯಲ್ಪಡುವ ರಕ್ತದ ಕ್ಯಾನ್ಸರ್ ಗೆ ಔಷಧಿಗಳು ಹೊರಗಿನಿಂದ ಕೊಡುವುದಕ್ಕಿಂತ ನಮ್ಮ ದೇಹವನ್ನು ಆಪತ್ಕಾಲದಲ್ಲಿ ಕಾಪಾಡುವ ಪ್ರತಿರಕ್ಷಣಾ (ಇಮ್ಯೂನ್) ಜೀವಕೋಶಗಳನ್ನೇ ಬಳಸಿಕೊಂಡು, ಅದನ್ನು ತಳೀಯವಾಗಿ ವಿನ್ಯಾಸಗೊಳಿಸಿದ (ಜೆನೆಟಿಕಲಿ ಇಂಜಿನೀಯರ್ಡ್) ಜೀವಕೋಶಗಳನ್ನಾಗಿ ಮಾರ್ಪಡಿಸಲಾಗಿದೆ. ಹಾಗೂ ಇದಕ್ಕೆ CAR-T cell therapy ಎಂದು ಹೆಸರಿಡಲಾಗಿದೆ.
ಈ ಚಿಕಿತ್ಸೆಯನ್ನು ಪರೀಕ್ಷಿಸಲು, 2010ರಲ್ಲಿ ಲುಕೇಮಿಯಾನಿಂದ ಬಳಲುತ್ತಿದ್ದ ಇಬ್ಬರು ರೋಗಿಗಳನ್ನು ಆರಿಸಿಕೊಂಡು ಅವರಿಗೆ ಈ ಚಿಕಿತ್ಸೆ ಹೇಗೆ ಇಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಅವರ ಮೇಲೆ ಈ CAR-T cell therapy ಶುರುಮಾಡಿದರು. ಆಶ್ಚರ್ಯಕರವಾಗಿ ಚಿಕಿತ್ಸೆ ಫಲಿಸಿತು. ಕ್ಯಾನ್ಸರ್ ಕ್ರಮೇಣ ಕಡಿಮೆಯಾಗಿ ಮೂಲೆ ಸೇರಿತು. ಆದರೆ ಕೆಲವು ಕ್ಯಾನ್ಸರ್ ಗಳು ಒಮ್ಮೆ ಗುಣವಾದಂತೆ ಕಂಡರೂ ಮತ್ತೆ ಬಂದ ಉದಾಹರಣೆಗಳಿವೆ. ಆದರೆ ಇಲ್ಲಿ ಅದು ಸಾಧ್ಯವಿಲ್ಲ, ಒಮ್ಮೆ ಲುಕೇಮಿಯಾ ಹೋದರೆ ಮತ್ತೆ ಬರುವುದಿಲ್ಲ, ಎಂದು ಈ ಸಂಶೋಧಕರ ತಂಡ ಪರೋಕ್ಷವಾಗಿ ಹೇಳುತ್ತಿದೆ. ಹೇಗೆಂದರೆ, 2010 ರಲ್ಲಿ ನೀಡಿದ್ದ ಈ ಚಿಕಿತ್ಸೆಯಿಂದ ರೋಗಿ ಗುಣಮುಖನಾದನು. ಅವನನ್ನೇ 10 ವರ್ಷದ ನಂತರ ಮತ್ತೆ ಲುಕೇಮಿಯಾದ ಕುರುಹು ಇದೆಯೇ ಎಂದು ಗಮನಿಸುವಾಗ ಈ ತಳೀಯವಾಗಿ ವಿನ್ಯಾಸಗೊಳಿಸಿದ ಪ್ರತಿರಕ್ಷಣಾ ಜೀವಕೋಶಗಳು ಇನ್ನೂ ಕೆಲಸ ಮಾಡುತ್ತಿದ್ದನ್ನು ನೋಡಿ ಅವರೇ ಚಕಿತರಾದರು. ಅವರ ಖುಷಿಗೆ ಪಾರವೇ ಇರಲಿಲ್ಲ. ಈ ಸಂಶೋಧನೆಯ ಫಲಿತಾಂಶ ಹೀಗೆ ಕೇವಲ ಒಂದು ಔಷಧಿ ಅಥವಾ ಚಿಕಿತ್ಸೆಯನ್ನಷ್ಟೇ ನೀಡಿಲ್ಲ. ಜೊತೆಗೆ ಹಲವರ ಆಶಾ ಕಿರಣದ ಹಣತೆಯನ್ನೂ ಹಚ್ಚಿತ್ತು.
ಆದರೆ ಒಂದೇ ಒಂದು ವಿಷಾದದ ವಿಷಯವೇನೆಂದರೆ, ಈ CAR-T cell therapy ಎಲ್ಲರಿಗೂ ಒಗ್ಗುವುದಿಲ್ಲ. ಎಲ್ಲೋ ಕೆಲವರಿಗೆ ಮಾತ್ರ ಪೂರ್ಣವಾಗಿ ಒಗ್ಗುತ್ತದೆ. ಆದರೆ ಧೃತಿಗೆಡಬೇಕಾಗಿಲ್ಲ. ಮುಂದಿನ ಸಂಶೋಧನೆಯ ಮೂಲ ಉದ್ದೇಶವೇ ಈ ಚಿಕಿತ್ಸೆ ಎಲ್ಲರಿಗೂ ಪರಿಣಾಮಕಾರಿಯಾಗುವ ಹಾಗೆ ಮಾಡುವುದು ಎಂಬ ಸಂದೇಶವನ್ನು ಅದೇ ಸಂಶೋಧನಾ ತಂಡ ಸಾರುತ್ತದೆ.
ಆ ಸುಸಮಯಕ್ಕೆ ನಾಂದಿ ಹಾಡಲು ನಾವು ನೀವುಗಳು ತಾಳ್ಮೆಯಿಂದ ಸ್ವಲ್ಪ ಸಮಯ ಕಾಯಲೇಬೇಕು. ಕ್ಯಾನ್ಸರ್ ನ ಜೊತೆಗೆ ಯುದ್ಧ ಮಾಡಲು ಸಧ್ಯಕ್ಕೆ ನಮ್ಮ ಬತ್ತಳಿಕೆಯಲ್ಲಿರುವ ಬಾಣಗಳು ವಿಶ್ವಾಸ ಮತ್ತು ತಾಳ್ಮೆ. ಕಾಯೋಣ, ಏಕೆಂದರೆ ‘ಒಳ್ಳೆಯ ವಿಷಯಗಳು ಸಮಯ ಮತ್ತು ಸಹನೆಯನ್ನು ಬೇಡುತ್ತವೆ.
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.