ಇರುವೆ ಹೆಸರೇ ‘ಕ್ರೇಜಿ ಇರುವೆ’

ಇರುವೆ ಹೆಸರೇ ‘ಕ್ರೇಜಿ ಇರುವೆ’

©Wikimedia commons

ಅದು ಹೇಗೆ ನನ್ನ ತಲೆಯಲ್ಲಿ ಇಂಥ ವಿಚಿತ್ರ ಪ್ರಯೋಗಗಳು ಮೂಡುತ್ತವೆಯೋ ಗೊತ್ತಿಲ್ಲ. 5 ವರ್ಷದ ಮಗನಿಗೆ ‘ಇ ‘ಸ್ವರವನ್ನು ಕಲಿಸಲು ಸಂಕಲ್ಪ ಮಾಡಿದ್ದೆ. ಇ – ಇರುವೆ ಎಂದು ಹಾಗು A – Ant ಅಂತಲೂ ಅವನಿಗೆ ತಿಳಿಸಲು ಒಂದು ಚಟುವಟಿಕೆ ಮಾಡೋಣ ಎಂದುಕೊಂಡೆ. ಅವನು ಖುಷಿಯಿಂದ ಅದಕ್ಕೆ ಏನೇನು ಬೇಕು ಎಂದು ಕೇಳಿ ಕೇಳಿ ಎಲ್ಲವನ್ನೂ ಮನೆಯ ಮುಂದಿನ ಹೂದೋಟದಲ್ಲಿ ಒಟ್ಟುಗೂಡಿಸಿದ್ದ. ನಾನಂದುಕೊಂಡ ಹಾಗೆ ಒಂದು ಶುಭ್ರ ಬಿಳಿ ಹಾಳೆಯ ಮೇಲೆ ಜೇನುತುಪ್ಪದಿಂದ ದೊಡ್ಡದಾದ ದಪ್ಪಕ್ಷರದಲ್ಲಿ ‘ಇರುವೆ ‘ಎಂದೂ ‘Ant’ ಎಂದೂ ಬರೆದು ಹೂದೋಟದ ಮಧ್ಯಭಾಗದಲ್ಲಿ ಇಟ್ಟೆ. ಮಗನಿಗೆ ಗಮನವಿಟ್ಟು ನೋಡು ಎಂದು ಇಬ್ಬರೂ ಅಲ್ಲಿಯೇ ನಿಂತೆವು. ಕೆಲ ಕ್ಷಣಗಳಲ್ಲಿ ಒಂದೊಂದಾಗಿ ಇರುವೆಗಳು ಬರತೊಡಗಿದವು. ಅವು ತಮ್ಮ ಕುಟುಂಬಕ್ಕೂ ಸಂದೇಶ ರವಾನಿಸಿ ದೊಡ್ಡ ಸಾಲು ಸೃಷ್ಟಿಯಾಯಿತು. ಇಲ್ಲಿಯವರೆಗೆ ಚಿಕ್ಕ ಕೆಂಪಿರುವೆಗಳಿದ್ದು, ಈಗ ಕ್ರೇಜಿ ಇರುವೆಗಳು ಕೂಡ ಅವತರಿಸಿದವು. ಅವುಗಳ ಪಾರದರ್ಶಕ ಹೊಟ್ಟೆ ಉಬ್ಬಿ ಹೋಯಿತು. ಅದನ್ನು ನೋಡಿ ಮಗ ‘ಈಗ ನೋಡು! ಇವುಗಳಿಗೆ ತಿಂದು ತಿಂದು ಓಡುವುದಕ್ಕೂ ಬರುವುದಿಲ್ಲ’ ಎಂದು ಏನೇನೋ ಕಲ್ಪಿಸಿಕೊಂಡು ಕೇಕೆ ಹಾಕಿ ನಗುತ್ತಿದ್ದ. ‘ಇರುವೆ’ಗೆ ಇರುವೆಗಳು ಮುತ್ತಿಗೆ ಹಾಕಿದ್ದರಿಂದ, ಬಿಳಿ ಹಾಳೆ ಕೂಡ ಈಗ ಆಕರ್ಷಕವಾಗಿ ಕಾಣುತ್ತಿತ್ತು. ಇಷ್ಟೇ ಆಗಿದ್ದರೆ ನಮ್ಮ ಚಟುವಟಿಕೆ ಬಹುಶಃ ಶಾಂತಿಯುತವಾಗಿ ಮುಗಿಯುತ್ತಿತ್ತೇನೋ! ಆದರೆ ಎರಡು ಬೇರೆ ಬೇರೆ ಬಗೆಯ ಇರುವೆ ಗುಂಪುಗಳ ನಡುವೆ ಯುದ್ಧ ಪ್ರಾರಂಭವಾಯಿತು. ಚಿಕ್ಕ ಕೆಂಪಿರುವೆಗಳು ಕ್ರೇಜಿ ಇರುವೆಗಳ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಿದವು ಆದರೆ ಕ್ರೇಜಿ ಇರುವೆಗಳ ಭಯಂಕರ ಪ್ರಮಾಣದ ಸಂತತಿಯ ಮುಂದೆ ಚಿಕ್ಕ ಕೆಂಪಿರುವೆಗಳು ಸೋಲನ್ನೊಪ್ಪಲೇಬೇಕಾಯಿತು! ಇವುಗಳಿಗೆ ಕ್ರೇಜಿ ಎಂಬ ಹೆಸರು ಇಟ್ಟಿದ್ದಕ್ಕೆ ಸಾರ್ಥಕಗೊಳಿಸಿದವು ಎಂದೆನಿಸಿತು.

ಅಂದ ಹಾಗೆ ಈ ಇರುವೆಗೆ crazy ಹೆಸರು ಬಂದಿರುವುದು ಇದರ ವರ್ತನೆಯಿಂದ! ಸ್ವಲ್ಪ ಛೇಡಿಸಿದರೂ ಕೂಡಲೇ ಪ್ರತಿಕ್ರಿಯೆ ಬರುತ್ತದೆ! ಅತ್ತಿಂದಿತ್ತ ಓಡಾಡುವುದು, ನೆಗೆಯುವುದು. ಇದರ ವೈಜ್ಞಾನಿಕ ಹೆಸರು Anoplolepis gracilipes. ನೋಡಲು ಕೆಂಪು ಅಥವಾ ಕಂದು ಬಣ್ಣದ ಇರುವೆ. ಹೊಟ್ಟೆಯ ಭಾಗ ಗಾಢ ಕಂದು ಬಣ್ಣ ಆಗಿದ್ದು, ಅದರ ಮೇಲೆ ಅಡ್ಡ ಗೆರೆಗಳಿರುತ್ತವೆ. ದೇಹಕ್ಕೆ ಹೋಲಿಸಿದರೆ ಉದ್ದವಾಗಿರುವ 6 ಕಾಲುಗಳು. 1 ಇಂಚು ಉದ್ದವಿರುವ ಇರುವೆ ಕಂಡಲ್ಲಿ ಅದು ನಿಸ್ಸಂದೇಹವಾಗಿ ಕ್ರೆಜಿ ಇರುವೆನೇ. ಇವು ಹೆಚ್ಚಾಗಿ ತಂಪು ಅಥವಾ ಒಣ ಪ್ರದೇಶದಲ್ಲಿ ಕಂಡು ಬರುತ್ತವೆ. ಗೋಡೆಯ ಸಂದು, ಗಿಡದ ಬುಡ, ಹೂಕುಂಡ, ಕಸದ ತೊಟ್ಟಿಗಳಲ್ಲಿ ಇವುಗಳ ಗೂಡು ಕಾಣಸಿಗುತ್ತದೆ.

ಇದು ಮಿಶ್ರಾಹಾರಿ ಜೀವಿಯಾಗಿದೆ. ತಮ್ಮ ಗೂಡು ಬಿಟ್ಟು ತುಂಬಾ ದೂರ ಆಹಾರ ಅರಸುವುದರಲ್ಲಿ ಇವು ಪ್ರಸಿದ್ಧ. ಮಾಂಸಾಹಾರದಲ್ಲಿ ಚಿಕ್ಕ ಕೀಟಗಳು, ಜಿರಳೆ, ಹಲ್ಲಿ ಇತ್ಯಾದಿಗಳನ್ನು ಸೇವಿಸುತ್ತವೆ. ಸಸ್ಯಾಹಾರದಲ್ಲಿ ಕೆಲವು ಬೀಜಗಳು, ಅಡುಗೆ ಮನೆಯಲ್ಲಿ ಸಿಗುವ ಎಲ್ಲಾ ಬಗೆಯ ತಿಂಡಿ ತಿನಿಸುಗಳನ್ನು ಸೇವಿಸುತ್ತವೆ. ಮುಖ್ಯವಾಗಿ ಇದು ಸಿಹಿತಿಂಡಿ ಪ್ರಿಯ! ಜೇನು, ಸಕ್ಕರೆಯಿಂದ ಮಾಡಿದ ಪದಾರ್ಥಗಳು, ಸಿಹಿಯಾದ ಹಣ್ಣುಗಳೆಂದರೆ ಬಲು ಇಷ್ಟ ಪಡುತ್ತದೆ. ಒಮ್ಮೆ ಸಪೋಟ ಹಣ್ಣುಗಳನ್ನು ತಂದು ಸ್ವಲ್ಪ ಹಣ್ಣಾಗಲಿ ಎಂದು. ಬುಟ್ಟಿಯಲ್ಲಿ ಇಟ್ಟಿದ್ದೆವು. ಮರುದಿನ ಬೆಳಿಗ್ಗೆ ನೋಡಿದರೆ ಹಣ್ಣಿನಲ್ಲಿ ದೊಡ್ಡ ರಂಧ್ರ! ತೆಗೆದು ನೋಡಿದರೆ ಒಳಗೆಲ್ಲಾ ರಸ ಹೀರುತ್ತ ಕುಳಿತಿರುವ ಇರುವೆಗಳು! ಮಾಮೂಲಾಗಿ ಒಂದು ಚೂರು ಅವುಗಳಿಗೆ ತೊಂದರೆ ಕೊಟ್ಟರೆ ಅತಿಯಾಗಿ ಓಡಾಡುವ ಇರುವೆಗಳು, ಸಿಹಿ ಹೀರುವಾಗ ತದ್ವಿರುದ್ಧವಾಗಿ ಪ್ರತಿಕ್ರಿಯಿಸುತ್ತವೆ. ಅವುಗಳನ್ನು ಸಿಹಿ ಪದಾರ್ಥಗಳಿಂದ ಕಿತ್ತು ಬೇರ್ಪಡಿಸಬೇಕು! ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಈ ಸಿಹಿಯನ್ನು ಹೊಟ್ಟೆಯಲ್ಲಿ ಶೇಖರಿಸಿಕೊಂಡಿದ್ದು; ಬೇರೆ ಇರುವೆಗಳಿಗೆ ಅವಶ್ಯವೆನಿಸಿದಾಗ ಬಾಯಿಯ ಮುಖಾಂತರ ಹಂಚುತ್ತವೆ. ಒಂದು ಸಲ ಮಗನ ಹುಟ್ಟು ಹಬ್ಬಕ್ಕೆಂದು ಮಾಡಿದ್ದ ಒಂದು ಗುಲಾಬ್ ಜಾಮೂನ್ ಅನ್ನು ಬಟ್ಟಲೊಳಗೆ ಹಾಕಿ ಕ್ರೇಜಿ ಇರುವೆಗಳಿಗೆ ನೀಡಿದಾಗ ಅವು ಹೊಟ್ಟೆ ಬಿರಿಯುವಷ್ಟು ರಸವನ್ನು ಹಿರಿದರೂ ಜಾಮೂನನ್ನು ಬಿಡಲು ಸಿದ್ಧವಿರಲಿಲ್ಲ. ಪ್ರಯೋಗಕ್ಕೆಂದು ಅವುಗಳನ್ನು ಛೇಡಿಸಿದರೆ ಅವುಗಳಿಗೆ ನಡೆಯಲು ಸಹ ಕಷ್ಟವಾಗಿತ್ತು! ನೇರವಾಗಿ ನಡೆಯುವುದಂತೂ ಅವುಗಳಿಗೆ ದೂರದ ಮಾತಾಗಿತ್ತು.

© ಅನುಪಮಾ ಕೆ. ಬೆಣಚಿನಮರ್ಡಿ

ಈ ಇರುವೆಗಳ ದೊಡ್ಡ ಗುಣವೆಂದರೆ, ಇವು ಕುಟುಕುವುದಿಲ್ಲ ಹಾಗು ಕಚ್ಚುವ ಪ್ರಮಾಣವೂ ಕಡಿಮೆ. ಅದಕ್ಕೆ ಏನೊ ನನ್ನ ಮಗ ಚಿಕ್ಕವನಿದ್ದಾಗ, “ಇರಿ ಇರಿ” (ಇರುವೆ ಅಂತ ಪೂರ್ತಿಯಾಗಿ ಅನ್ನಲು ಬರ್ತಿರಲಿಲ್ಲ) ಎಂದು ಕೂಗುತ್ತಾ ಅವುಗಳನ್ನು ತಗೊಂಡು ನಿರ್ಭಯವಾಗಿ ಬಾಯಲ್ಲಿ ಹಾಕಿಕೊಳ್ಳುತ್ತಿದ್ದ. ಇವುಗಳ ಅತಿಯಾದ ಸಂಖ್ಯೆಯೇ ಇವುಗಳ ಅಸ್ತ್ರ. ಎಲ್ಲೆಂದರಲ್ಲಿ ವೇಗವಾಗಿ ಓಡಾಡುವ ಇರುವೆಗಳನ್ನು ನೋಡಿದರೆ ಎಂಥವರಿಗಾದರೂ ಹುಚ್ಚು ಹಿಡಿಯುತ್ತದೆ. ಅತಿಯಾದ ಸಂತಾನೋತ್ಪತ್ತಿಯ ಕಾರಣ ಇದು ಬೇರೆ ಪ್ರಭೇದದ ಇರುವೆಗಳ ಸಮೂಹವನ್ನು ಕೂಡ ಸ್ಥಳಾಂತರಿಸುತ್ತದೆ. ಸಾಮಾನ್ಯವಾಗಿ ಒಂದು ಗೂಡಿನಲ್ಲಿ ಒಂದಕ್ಕಿಂತ ಹೆಚ್ಚು ರಾಣಿ ಇರುವೆಗಳಿದ್ದು, ಗೂಡಿನ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಇವು ಚಿಕ್ಕ ಚಿಕ್ಕ ಸಮೂಹಗಳ ನಡುವೆ ಸಂಪರ್ಕ ಇಟ್ಟುಕೊಂಡು ದೊಡ್ಡ ಸಮೂಹವಾಗಿ (super colony) ಮಾರ್ಪಡುತ್ತವೆ. ಅಂದ ಹಾಗೆ ನಮ್ಮ ಮನೆಯಲ್ಲಿ ಇರೋದು ದೊಡ್ಡ ಸಮೂಹ (super colony) ಅಲ್ಲ. ಬೇಸಿನ್ ಕೆಳಗಡೆ ಇರುವ ಒಂದು ಸಾಮಾನ್ಯ ಇರುವೆ ಗೂಡು. ಇವು ಈಗ ನಮ್ಮ ಕುಟುಂಬ ಸದಸ್ಯರಾಗಿವೆ. ಈಗಲೂ ಕೂಡ ನನ್ನ ಮಗನಿಗೆ ಊಟ ಮಾಡಿಸಬೇಕಾದರೆ ಇವುಗಳ ಪಾಲು ಮಹತ್ವದ್ದು. ಅದರ ಕಣ್ಣು ನೋಡು ಎನ್ನುತ್ತಲೊ ಅಥವಾ ಅದು ಕೊಂಡೊಯ್ಯುವ ಆಹಾರ ಏನು ಎನ್ನುತ್ತ ಒಂದೊಂದು ತುತ್ತು ತಿನ್ನಿಸಲಾಗುತ್ತದೆ

© Wikidata.


ಲೇಖನ: ಅನುಪಮಾ ಕೆ. ಬೆಣಚಿನಮರ್ಡಿ.
             ಬೆಂಗಳೂರು ಜಿಲ್ಲೆ
.

Spread the love
error: Content is protected.