ಬೂದು ಮುಂಗುಸಿಯ ಮಿಲನ ಮಹೋತ್ಸವ.

©ಡಾ. ಎಸ್. ಶಿಶುಪಾಲ
ಮುಂಗುಸಿ ಎಂಬ ಸ್ತನಿಯನ್ನು ಹಾವಿನ ಹೋರಾಟಕ್ಕೆ ಮಾತ್ರ ನೆನಪಿಸಿಕೊಳ್ಳಲಾಗುತ್ತದೆ. ಸಣ್ಣವರಿದ್ದಾಗ ಬೀದಿ ಬದಿಗಳಲ್ಲಿ ಹಾವಾಡಿಗರು ಹಗ್ಗ ಕಟ್ಟಿ ಇಟ್ಟುಕೊಂಡಿದ್ದ ಈ ಚುರುಕಿನ ಪ್ರಾಣಿಯನ್ನು ನೋಡಿದ್ದು ಬಿಟ್ಟರೆ ನಿಜವಾದ ಮುಂಗುಸಿ-ಹಾವಿನ ಕಾಳಗ ಚಲನ ಚಿತ್ರಗಳಲ್ಲಿ ಅಥವಾ ಡಿಸ್ಕವರಿ ಮತ್ತು ನ್ಯಾಶನಲ್ ಜಿಯಾಗ್ರಫಿಕ್ ಚಾನಲ್ಗಳಲ್ಲಿ ಮಾತ್ರ ಕಾಣಲಾಗಿತ್ತು. ಮುಂಗುಸಿಗಳನ್ನು ಹರ್ಪೆಸ್ಟಿಡೆ (Herpestidae) ಕುಟುಂಬದಲ್ಲಿ ಉದ್ದ ದೇಹದ, ಗಿಡ್ಡ ಕಾಲುಗಳ ಬೇಟೆಗಾರ ಪ್ರಾಣಿಗಳೊಂದಿಗೆ ಸೇರಿಸಿದ್ದಾರೆ. ಭಾರತದಲ್ಲಿ ಜೀವಿಸುವ ಮುಂಗುಸಿಗಳಲ್ಲಿ ಆರು ಪ್ರಭೇದಗಳಿವೆ. ಅದರಲ್ಲಿ ಅತೀ ಸಾಮಾನ್ಯವಾಗಿ ಕಂಡು ಬರುವುದು ಬೂದು ಮುಂಗುಸಿ (Indian Grey Mongoose). ಪ್ರಾಣಿಶಾಸ್ತ್ರೀಯವಾಗಿ ಇದನ್ನು ಹರ್ಪೆಸ್ಟಿಸ್ಎಡ್ವಡ್ರ್ಸಿ (Herpestes edwardsii) ಎಂದು ಕರೆಯಲಾಗಿದೆ.
ಸುಮಾರಾಗಿ ಬೆಕ್ಕಿನ ಗಾತ್ರದ ಪ್ರಾಣಿ. ದೇಹದ ಉದ್ದ 35 ರಿಂದ 45 ಸೆಂಮೀ. ಮತ್ತು ದೇಹದಷ್ಟೇ ಉದ್ದವಾದ ಬಾಲವನ್ನು ಹೊಂದಿರುತ್ತವೆ. ತೂಕ 800 ಗ್ರಾಂ ನಿಂದ ಒಂದೂವರೆ ಕೆ.ಜಿ. ಯಷ್ಟಿರುತ್ತದೆ. ಚಿಕ್ಕ ಕಾಲುಗಳು., ಬೂದು ಬಣ್ಣದ ದೇಹದಲ್ಲಿ ತುಪ್ಪಳವಿದೆ. ತುಪ್ಪಳದ ಪ್ರತಿ ಕೂದಲಿನಲ್ಲಿ ಸರತಿಯಂತೆ ಹತ್ತು ಗಾಢ ಮತ್ತು ತಿಳಿ ಬಣ್ಣದ ಗೆರೆಗಳಿವೆ. ಕಾಲುಗಳು ಮೈ ಬಣ್ಣಕ್ಕಿಂತ ಗಾಢವಾಗಿವೆ. ಗಂಡುಗಳು ಹೆಣ್ಣುಗಳಿಗಿಂತ ದೊಡ್ಡದಾಗಿರುತ್ತವೆ.
ಕುತೂಹಲಭರಿತ, ಚುರುಕಾದ ದಿಟ್ಟ ನಡವಳಿಕೆ. ನೆಲವಾಸಿ ಮತ್ತು ಬಿಲಗಳಲ್ಲಿ ಅಡಗಿಕೊಳ್ಳುತ್ತವೆ. ಸಾಮಾನ್ಯವಾಗಿ ಒಂಟಿಯಾಗಿ ಅಥವಾ ಜೊತೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕುರುಚಲು ಕಾಡು, ಕೃಷಿಭೂಮಿ, ಕೆರೆಗಳ ಆಸುಪಾಸು, ಕಲ್ಲು ಬಂಡೆಗಳ ನಡುವೆ ಮತ್ತು ಕಾಡಂಚಿನಲ್ಲಿ ಜೀವಿಸುತ್ತವೆ. ಮನುಷ್ಯನ ವಾಸಸ್ಥಳದ ಹತ್ತಿರವೂ ವಾಸಿಸಬಲ್ಲವು. ಮುಖ್ಯ ಆಹಾರವಾಗಿ ಇಲಿ, ಹಲ್ಲಿ, ಹಾವು ಮತ್ತು ದುಂಬಿಗಳನ್ನು ತಿನ್ನುತ್ತವೆ. ಹಾಗೆಯೇ ನೆಲದಲ್ಲಿರುವ ಹಕ್ಕಿಗಳು, ಮೊಟ್ಟೆಗಳು, ಚೇಳು, ಸಂಧಿಪದಿಗಳು, ಕಪ್ಪೆ, ಏಡಿ ಮುಂತಾದವುಗಳೂ ಆಗಬಹುದು. ಕೆಲವೊಮ್ಮೆ ಹಣ್ಣು ಮತ್ತು ಗಿಡದ ಬೇರುಗಳನ್ನು ತಿನ್ನುತ್ತವೆ. ಮುಂಗುಸಿಗಳಿಗೆ ಹಾವುಗಳು ಆಹಾರವೇ ಹೊರತು ಮತ್ತೇನು ವಿಶೇಷವಿಲ್ಲ. ಇವೆರಡರ ಸಂಬಂಧ ಬೇಟೆ-ಬೇಟೆಗಾರ, ಅಷ್ಟಕ್ಕೇ ಸೀಮಿತ.



ಹೀಗೆ ಕೆರೆಯೊಂದರ ಸಮೀಪ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಒಂದು ಮುಂಗುಸಿ ಕಾಣಿಸಿತು. ಅದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗುವುದರೊಳಗೆ ಸಂಗಾತಿಯೂ ಬಂತು. ಸ್ವಲ್ಪ ಹೊತ್ತಿನಲ್ಲಿ ತಮ್ಮಲ್ಲೇ ಮಾತನಾಡಿಕೊಂಡಂತೆ ಮಾಡಿ ದೂರದಲ್ಲಿದ್ದ ನಮ್ಮನ್ನು ನೋಡಿದವು. ನಮ್ಮಿಂದ ಏನೂ ತೊಂದರೆಯಿಲ್ಲವೆಂದು ಅರಿತ ನಂತರ ಪ್ರಣಯದಾಟವನ್ನು ಪ್ರಾರಂಭಿಸಿದವು. ಮೊದಲು ಗಂಡು ಹೆಣ್ಣಿನ ಮೈದಡವಿ ಲಲ್ಲೆಗೆರೆಯಿತು. ಒಂದು ಮತ್ತೊಂದರ ದೇಹವನ್ನು ಅಕ್ಕರೆಯಿಂದ ಪೂಸುವಂತೆ ತೋರಿತು. ಮೂತಿಯಿಂದ ಒಂದರ ದೇಹವನ್ನು ಇನ್ನೊಂದು ತೀಡಿತು. ನಾವು ನೋಡುತ್ತಿದ್ದಂತೆ ಗಂಡು ಹೆಣ್ಣಿನ ಮೇಲೆ ತನ್ನ ಮುಂದಿನ ಕಾಲುಗಳನ್ನಿರಿಸಿ ಮಿಲನದಲ್ಲಿ ತೊಡಗಿತು. ನಮ್ಮಿಂದ ಯಾವುದೇ ಅಪಾಯವಿಲ್ಲವೆಂದು ತಿಳಿದ ನಂತರ ಕೆಲವು ಕ್ಷಣಗಳವರೆಗೆ ಮಿಲನ ಕಾರ್ಯವನ್ನು ಮುಂದುವರೆಸಿದವು. ಈ ಅಪೂರ್ವ ಕ್ರಿಯೆಯ ಪ್ರತಿಯೊಂದು ಹಂತವೂ ನನ್ನ ಕ್ಯಾಮೆರಾದಲ್ಲಿ ಸೆರೆಯಾಯಿತು. ಸ್ವಲ್ಪ ಹೊತ್ತಿನಲ್ಲಿ ಹತ್ತಿರದ ಪೊದೆಯಲ್ಲಿ ಹುದುಗಿ ಕಾಣದಾದವು. ಸಾಮಾನ್ಯವಾಗಿ ಮಾರ್ಚ್ ನಿಂದ ಅಕ್ಟೋಬರ್ ವರೆಗೆ ಇವುಗಳ ಸಂತಾನಾಭಿವೃದ್ಧಿಯ ಕಾಲ. ವರ್ಷದಲ್ಲಿ ಎರಡರಿಂದ ಮೂರು ಬಾರಿ ಗರ್ಭಧರಿಸಬಲ್ಲವು. ಮಿಲನದ ನಂತರ ಹೆಣ್ಣು 60 ರಿಂದ 65 ದಿನಗಳಕಾಲ ಗರ್ಭಾವಸ್ಥೆಯಲ್ಲಿದ್ದು ಎರಡರಿಂದ ನಾಲ್ಕು ಮರಿಗಳಿಗೆ ಜನ್ಮ ನೀಡುತ್ತಾಳೆ. ಮೊದಲಿಗೆ ಮರಿಗಳು ಬಿಲದಲ್ಲಿ ತಾಯಿಯ ಹಾಲು ಕುಡಿದು ಬದುಕುತ್ತವೆ. ನಂತರ ತಾಯಿಯೊಡನೆ ಆಹಾರ ಹುಡುಕಲು ಹೊರಟು ಕ್ರಮೇಣ ಸ್ವತಂತ್ರ ಜೀವನ ನಡೆಸುತ್ತವೆ. ಇವುಗಳ ಆಯಸ್ಸು ಸರಿಸುಮಾರು ಏಳು ವರ್ಷಗಳು.

ತನ್ನ ಚುರುಕು ಜೀವನ ಶೈಲಿಯಿಂದ ವಿಷಯುಕ್ತ ಹಾವುಗಳನ್ನು ಸಹ ಬೇಟೆಯಾಡಬಲ್ಲದು. ಆಹಾರಕ್ಕಾಗಿ ದಿನವಿಡಿ ಪೊದೆಗಳಲ್ಲಿ ಹುಡುಕುವ ಇವು ಮುಂಜಾನೆ ಮತ್ತು ಸಂಜೆಯ ಹೊತ್ತು ಅತಿ ಚುರುಕಾಗಿರುತ್ತವೆ. ನಗರೀಕರಣ, ಹೆಚ್ಚಾದ ಕೀಟನಾಶಕಗಳ ಬಳಕೆ, ಕ್ಷೀಣಿಸುತ್ತಿರುವ ಆವಾಸ ಸ್ಥಾನಗಳು, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದ ನಶಿಸುತ್ತಿರುವ ಈ ಮುಂಗುಸಿಗಳ ಸಂತತಿ ದಾವಣೆಗೆರೆಯಂತಹ ಪ್ರದೇಶದಲ್ಲಿರುವುದು ಸಂತೋಷದ ಸಂಗತಿ. ಇವುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಇಲಿಗಳ ಕಾಟ ಮತ್ತು ಅವುಗಳಿಂದಾಗುವ ಕಾಳು ನಾಶವೂ ಕಡಿಮೆಯಾಗುತ್ತದೆ. ಹಾಗೂ ವಸತಿ ಪ್ರದೇಶದ ಸುತ್ತ ಹಾವುಗಳ ಇರುವಿಕೆಯೂ ಕಡಿಮೆಯಾಗಿ ಜನರಿಗೆ ಉಪಯುಕ್ತವಾಗುತ್ತದೆ. ಜೀವವೈವಿಧ್ಯಕ್ಕೆ ತಮ್ಮದೆ ಕೊಡುಗೆ ನೀಡಿರುವ ಮುಂಗುಸಿಗಳ ಸಂತತಿ ಮುಂದುವರೆಯಲಿ ಎಂದು ಹಾರೈಸೋಣ. ಇಂತಹ ಅಪರೂಪದ ಪ್ರಭೇದ ನಿಸರ್ಗದ ಆಹಾರ ಸರಪಳಿಯ ಪ್ರಮುಖ ಕೊಂಡಿ. ಇವುಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ.

ಲೇಖನ: ಡಾ. ಎಸ್. ಶಿಶುಪಾಲ .
ದಾವಣಗೆರೆ ಜಿಲ್ಲೆ.

ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ