ಕರ್ಜಿಗೆಯೆಂಬ ಕಾಡ ಹಣ್ಣೊ೦ದರ ರುಚಿ ಸವಿಯುತ್ತಾ…

©ಪೂರ್ಣೇಶ್ ಮತ್ತಾವರ.
ಹಿಂದೊಮ್ಮೆ ಮಳೆಯಲ್ಲಿನ ನಡಿಗೆಯನ್ನು ಆನಂದಿಸುತ್ತಾ ಕಾಡ ಹಾದಿಯಲ್ಲಿ ಸಾಗುವಾಗ ಗಾಢ ಕೆಂಪು ಬಣ್ಣದ ಹಣ್ಣೊಂದು ಕೆಳಗೆ ಬಿದ್ದಿರುವುದು ಕಣ್ಣಿಗೆ ಬಿತ್ತು. ಅದನ್ನು ಎತ್ತಿಕೊಂಡವನು “ಒಳ್ಳೆ ಸೇಬು ಇದ್ದ ಹಾಗೆ ಇದೆ… ಯಾವ್ದೋ ಕಾಡು ಹಣ್ಣು…” ಎನ್ನುತ್ತಿರುವಾಗಲೇ ಗೆಳೆಯ ಮಧು ಪಟೇಲರು ಅದನ್ನು ತೆಗೆದುಕೊಂಡು “ಇದು ಕರ್ಜಿಗೆ ಹಣ್ಣು” ಎನ್ನುತ್ತಾ, ತಿನ್ನಲು ಯೋಗ್ಯವಾದ ಹಣ್ಣು ಎಂದು ತಿನ್ನಲಾರಂಭಿಸಿದರು. “ಅರೇ, ನಾನೂ ರುಚಿ ನೋಡ ಬಹುದಿತ್ತಲ್ಲ” ಎಂಬ ಭಾವ ಅರೆ ಕ್ಷಣ ಮನದಲ್ಲಿ ಮೂಡಿ ಹೋಯ್ತು…
ನಡಿಗೆ ಹೀಗೆ ಬಹುದೂರ ಸಾಗಿರುವಾಗಲೇ ಕಣ್ಣೆದುರು ಇದೇ ಕರ್ಜಿಗೆ ಬಳ್ಳಿಯು ಮೈ ತುಂಬಾ ಹಣ್ಣುಗಳ ರಾಶಿಯನ್ನೊತ್ತು ಮರವೊಂದಕ್ಕೆ ಹಬ್ಬಿರುವುದು ಎದುರಾಗಬೇಕೆ! ಕೆಲ ಹೊತ್ತಿನ ಹಿಂದಷ್ಟೇ ಗಮನಿಸಿದ್ದರ ಫಲವಾಗಿ ತಕ್ಷಣವೇ ಅದನ್ನು ಗುರುತು ಹಿಡಿಯಲು ಕಷ್ಟವಾಗಲಿಲ್ಲ. ತಕ್ಷಣವೇ ಜೊತೆಯಲ್ಲಿದ್ದವರನ್ನೆಲ್ಲಾ ಹಿಂದಿಕ್ಕಿ ಅದನ್ನು ಕೊಯ್ಯುವ ಕಾತರದಲ್ಲಿ ಬಿರುಸಾಗಿ ಮುನ್ನಡೆದೆ.
ಬೆಟ್ಟದ ತುತ್ತ ತುದೀಲಿ, ನೀರವತೆಯಲ್ಲಿ ಕಾಡನ್ನೇ ನಿರುಕಿಸ್ತಾ ಕೂತ್ವಿ, ಬಾಪು ದಿನೇಶಣ್ಣ ಬಳ್ಳಿಯ ಮುಳ್ಳಿನ ಬಗ್ಗೆ, ಮಳೆಗೆ ಮರ ಜಾರುವ ಬಗ್ಗೆ ಮಾತನಾಡುತ್ತಿರುವಾಗಲೇ ಸಾಮಾನ್ಯವಾಗಿ ಮರಗಳನ್ನೇರದ ನಾನು “ಇವನ್ಯಾರೋ ನಿಪುಣನಿರಬೇಕು…” ಎಂದು ಉಳಿದವರು ಭಾವಿಸುವ ರೀತಿಯಲ್ಲಿ ಮರ ಏರಿಬಿಟ್ಟಿದ್ದೆ! ಅಲ್ಲದೇ ಏರಿದವನು ಹಣ್ಣು ಕೊಯ್ದು ಕೊಟ್ಟಾನು ಎಂಬ ಕೆಳಗಿನವರ ತಕ್ಷಣದ ನಿರೀಕ್ಷೆಯನ್ನು ಹುಸಿಗೊಳಿಸಿ ಮಳೆಯಲ್ಲಿಯೇ ಮೊಬೈಲ್ ತೆಗೆದು ಈ ಕರ್ಜಿ ಹಣ್ಣುಗಳ ಫೋಟೋ ಕ್ಲಿಕ್ಕಿಸುತ್ತಿದ್ದೆ!! ನಂತರದಲ್ಲಿ, ಕೈಗೆ ಸಿಕ್ಕ ಕೆಲವನ್ನು ಕೊಯ್ದು ಕೆಳಗೆ ಹಾಕಿದೆ. ಜೊತೆಗೆ, ಮರದ ಕೊಂಬೆಗಳನ್ನು ಅಲ್ಲಾಡಿಸುತ್ತಾ ಕೆಲ ಹಣ್ಣುಗಳು ಉದುರುವಂತೆ ಮಾಡಿದೆ.

ಆ ಕ್ಷಣದಲ್ಲೇ ಇವರಿಬ್ರೂ ಮತ್ತೊಂದು ವಿಚಾರ ಮಾತಿಗೆ ಶುರುಹಚ್ಚಿಕೊಂಡು, ಅತ್ತಿಂದಿತ್ತ ಕಣ್ಣು ಕಿರಿದಾಗಿಸಿಕೊಂಡು ಈ ಕರ್ಜಿಗೆ ಹಣ್ಣನ್ನು ಕೊಯ್ದಾಗ ತೊಟ್ಟುಗಳಲ್ಲಿ ಹಲಸಿನ ಮೇಣದ ತರ ಬಿಳಿ ಬಣ್ಣದ ಒಸರುತ್ತಿತ್ತು. ಒರೆಸಿ ತಿರುಳು ತಿಂದರೆ ಕಪ್ಪು ದ್ರಾಕ್ಷಿ, ಸೇಬಿನ ಮಿಶ್ರಣ ತಿಂದಂತೆ. ಸ್ವಲ್ಪ ಒಗರು, ಸ್ವಲ್ಪ ಹುಳಿ, ಸ್ವಲ್ಪ ಸಿಹಿ ಮಿಶ್ರಿತ ವಿಶಿಷ್ಠವಾದ ರುಚಿ! ತಿನ್ನುವ ವೇಳೆಗಾಗಲೇ ಕೈಯೆಲ್ಲಾ ಮೇಣದ ಅಂಟು. ಬಾಯಲ್ಲಿಯೂ ಸ್ವಲ್ಪ ಮೇಣ ಅಂಟಿ ಬಬಲ್ ಗಮ್ ಜಗಿದಂತಾಗಿತ್ತು. ತಿರುಳ ಒಳಗಡೆ ಬೀಜಗಳಿದ್ದವು. ಹಣ್ಣಾಗಿ ಮಾಗಿ ನೆಲಕ್ಕೆ ಬಿದ್ದಿದ್ದ ಹಣ್ಣುಗಳನ್ನು ಎತ್ತಿ ನೋಡಿದರೆ ಒಂದು ರೀತಿಯ ಹೆಂಡದ ಗಮಲು! ಬಹುದೂರ ಕಾಡ ಹಾದಿಯಲ್ಲಿ ಸಾಗಿ ಆಯಾಸವೆನಿಸುವ ವೇಳೆಗೆ ಅನಿರೀಕ್ಷಿತವಾಗಿ ಇಂತಹದೊಂದು ಹಣ್ಣು ಸಿಕ್ಕರೆ ಅದೆಷ್ಟು ಖುಷಿಯಾಗಬೇಡ!
ಕಾರಿಸ ಕರಂಡಸ್ (Carissa carandas) ಎಂಬ ವೈಜ್ಞಾನಿಕ ಪ್ರಭೇದದ ಈ ಕರ್ಜಿ ಹಣ್ಣನ್ನು ನಮ್ಮಲ್ಲಿ ಕರ್ಜಿಗೆ ಅಥವಾ ಗರ್ಜಿಗೆ ಎಂದೂ ಕರೆಯುತ್ತಾರೆ. ಈ ಕರ್ಜಿ ಬಳ್ಳಿಗಳು ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಹೂ ಬಿಟ್ಟರೆ ಮಳೆಗಾಲದ ಜುಲೈ – ಸೆಪ್ಟೆಂಬರ್ ಸಮಯದಲ್ಲಿ ಹಣ್ಣುಗಳನ್ನೊತ್ತು ಮೈತುಂಬಿರುತ್ತವೆ. ಇವನ್ನು ಕಾಯಿ ಇದ್ದಾಗ ಉಪ್ಪಿನಕಾಯಿ, ಚಟ್ನಿ ತಯಾರಿಕೆಯಲ್ಲಿಯೂ ಬಳಸುತ್ತಾರೆ. ಅಡುಗೆ ತಯಾರಿಕೆಯಲ್ಲಿ ಹುಳಿಯಾಗಿಯೂ ಬಳಸುವುದಿದೆ. ಇವು ಯಥೇಚ್ಛವಾಗಿ ಕಬ್ಬಿಣದ ಅಂಶವನ್ನೊಳಗೊಂಡಿವೆ. ಅಸ್ಕಾರ್ಬಿಕ್ ಆಮ್ಲ (Ascorbic acid) ವನ್ನು ಒಳಗೊಂಡಿದ್ದು, ಹೊಟ್ಟೆ ನೋವು, ಮಲಬದ್ಧತೆ ನಿವಾರಕಗಳಾಗಿವೆ. ವಿಟಮಿನ್-ಸಿ ಅಂಶವನ್ನು ಒಳಗೊಂಡಿದ್ದು ಸ್ಕರ್ವಿ ರೋಗವನ್ನು ತಡೆಗಟ್ಟಬಲ್ಲವು.


ಲೇಖನ: ಪೂರ್ಣೇಶ್ ಮತ್ತಾವರ.
ಚಿಕ್ಕಮಗಳೂರು ಜಿಲ್ಲೆ.