ಬನ್ನೇರುಘಟ್ಟದಲ್ಲೊಬ್ಬ ಬಂಡೆಬಾಕನ ಭೇಟಿ.
© ಅಶ್ವಥ ಕೆ. ಎನ್.
ಬೆಟ್ಟ, ಗುಡ್ಡ, ಘಟ್ಟ ಮತ್ತು ಪರ್ವತ ಶ್ರೇಣಿಗಳ ಉಗಮವು ಭೂಮಂಡಲದ ಅದ್ಭುತ ಸೃಷ್ಟಿಗಳಲ್ಲೊಂದು. ಸಣ್ಣ ಬೆಟ್ಟ-ಗುಡ್ಡಗಳು, ಅದೊಂದು ಸುದಿನ. ಬೆಂಗಳೂರಿನ ಬನ್ನೇರುಘಟ್ಟ ಕಾಡಿನ ಸೆರಗಿನಲ್ಲಿರುವ ಆಶ್ರಮ ಹಾಗೂ ದೊಡ್ಡಿಬೆಟ್ಟವನ್ನು ನಮ್ಮ ಅನುಭವದ ಮೂಟೆಗೆ ಸೇರಿಸಿಕೊಳ್ಳೋ ಭಾಗ್ಯ ಸಿಕ್ಕಿತ್ತು. ಆ ಕಾಡು ಹಾಗೂ ಅಲ್ಲಿನ ಹಳ್ಳಿಯ ಸಾಧಕ ಅಣ್ಣಂದಿರಂದ್ರೆ ನಮ್ಮಿಬ್ಬರಿಗೂ ಆಪ್ಯಾಯಮಾನ. ಅವರನ್ನ ಭೇಟಿಯಾದ್ರೆ ಅಥವಾ ಆ ಕಾಡಿಗೆ ಹೋದ್ರೆ, ಕಲಿಯಲಿಕ್ಕೆ ಎಷ್ಟಿದೆಯಲ್ವಾ ಅಂತ ಬಾಯಿ ತೆಕ್ಕೊಂಡು ಅಚ್ಚರಿ ಪಡ್ತಾ ಕೂರೋದೆ ನಮ್ಮ ಕೆಲ್ಸ.
ಅವತ್ತೂ ಹಾಗೇ ಆಯ್ತು. ಅಡವಿ ಫೀಲ್ಡ್ ಸ್ಟೇಷನ್ ಅನ್ನು ಒಮ್ಮೆ ಕಣ್ಣಲ್ಲೇ ಮಾತಾಡಿಸಿಕೊಂಡು, ಅಶ್ವತ್ಥಣ್ಣನ ಜೊತೆಗೆ ದೊಡ್ಡಿಬೆಟ್ಟ ಹತ್ತೋ ಪ್ಲಾನ್ ಆಯ್ತು; ಆಶ್ರಮಕ್ಕೊಮ್ಮೆ ಹಾಗೇ ಹೊಕ್ಕು ಹೊರಬಂದು, ಬೆಟ್ಟದ ತಪ್ಪಲಿನಿಂದ ಉತ್ಸಾಹದಲ್ಲಿ ಹೊರಟೆವು. ಆಗ ಆ ದಾರಿಯುದ್ದಕ್ಕೂ ಮಾತಾಡದ ವಿಷಯವೇ ಇಲ್ಲವೇನೋ! ಅಣ್ಣನ ಪಿ. ಹೆಚ್. ಡಿ. ಸಂಶೋಧನೆಯ ವಿವರಗಳು, ಕಾಡಿನಲ್ಲಿರುವ ಬಗೆ ಬಗೆಯ ಕೀಟಗಳು, ಸಸ್ಯ ಜಗತ್ತು, ಕಾಡಿಗೆ ಹೊಂದಿಕೊಂಡೇ ಇರುವ ಹಳ್ಳಿ ಜನರ ಜೀವನಶೈಲಿ – ಹೀಗೆ ಒಂದಲ್ಲಾ, ಎರಡಲ್ಲ… ಹಿಮ್ಮೇಳದಲ್ಲಿ ಜೀರುಂಡೆಯ ಸದ್ದು, ಜೊತೆಗೆ ಮೇಲೆ ಮೋಡದ ಮುಸುಕು ಬೇರೆ. ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದಾಗಿತ್ತು, ಆದರೆ ಕಾಡೊಳಗೆ ಕಿಚ್ಚಿನ ಮಾತೂ ತೆಗೆಯೋದು ಬೇಡಪ್ಪಾ ಎಂದು ಸುಮ್ಮನೆ ದಾರಿ ಹಿಡಿದೆವು! ಮಾತಾಡ್ತಾ ಮಾತಾಡ್ತಾ ದೊಡ್ಡಿಬೆಟ್ಟವನ್ನ ಹತ್ತಿದ್ದೇ ಗೊತ್ತಾಗಲಿಲ್ಲ; ಅಲ್ಲಿ ಕಂಡ ದೃಶ್ಯ ನಿಜ್ವಾಗ್ಲೂ ಬಣ್ಣನೆಗೇ ಸಿಗ್ತಿಲ್ಲ ನನಗೆ. ಅದೆಷ್ಟು ಚೆಂದ ಗೊತ್ತಾ? ಕಾಡಿನ ವಿಸ್ತಾರ, ಎದುರಿಗೆ ಜಪಾನಿನ ಮೌಂಟ್ ಫ್ಯುಜಿಯನ್ನೇ ಹೋಲುವ ಮತ್ತೊಂದು ಗುಡ್ಡ, ದೂರದಲ್ಲಿ ಕಾಣುವ ಹಳ್ಳಿಗಳ ಮೇಲೆ ಧೋ ಧೋ ಸುರಿಯುತ್ತಿರುವ ಮಳೆ, ಜೊತೆಗೆ ನಮ್ಮ ಮೇಲೆ ವ್ಯಾಪಕವಾಗಿ ಆವರಿಸಿಕೊಂಡಿರೋ ಮೋಡಗಳು; ಯಾವುದೇ ಕ್ಷಣ ಇನ್ನು ಸಂಚಿ ಬಿಚ್ಚಿ ಮಳೆ ಶುರುವಾದ್ರೆ, ನಾವು ಪಡ್ಚ! ಆದ್ರೆ ಅದಕ್ಕೇನು ಹೆದರೋವ್ರಲ್ಲ ನಾವು, ಮಳೆ ಪ್ರೇಮಿಗಳು.
ಬೆಟ್ಟದ ತುತ್ತ ತುದೀಲಿ, ನೀರವತೆಯಲ್ಲಿ ಕಾಡನ್ನೇ ನಿರುಕಿಸ್ತಾ ಕೂತ್ವಿ, ಸಮಯದ ಪರಿವೆಯೇ ಇಲ್ಲದ ಹಾಗೆ. ಅಲ್ಲೇ ಆಚೀಚೆ ಕಣ್ಣು ಹಾಯಿಸ್ತಾ, ಅಲ್ಲಿ ಜೋಡಿಸಲಾಗಿದ್ದ ಕಲ್ಲುಗಳ ಕಡೆಹೋಯ್ತು ನಮ್ಮ ಗಮನ. ಪುಟಾಣಿ ಗೋಪುರಗಳಂತೆ, ನಾಲ್ಕೈದು ಕಲ್ಲು ಬಂಡೆಗಳನ್ನು ಬಳಸಿ, ಎಷ್ಟೊಂದು ಮಂಟಪಗಳಂತಹ ರಚನೆ ಕಟ್ಟಿದ್ರು. ನಾನು ಅದನ್ನು ತೋರಿಸ್ತಾ, ಸರಿ ಬಿಡಿ ಅಣ್ಣ, ಮಳೆ ಸುರಿದ್ರೂ ಚಿಂತೆಯಿಲ್ಲ, ಕ್ಯಾಮೆರಾ ಇತ್ಯಾದಿ ಅಡಪ ಅಲ್ಲಿಟ್ರೆ ಸೇಫ್! ನಾವು ನೆಂದ್ರಾಯ್ತು ತೊಂದ್ರೆಯಿಲ್ಲ. ಅಷ್ಟಕ್ಕೂ ಯಾಕೆ ಹೀಗೆ ಕಟ್ಟಿದಾರೆ? ಅಂತ ಕುತೂಹಲಿಯಾದೆ. ಆಗ, ಅಣ್ಣ ಹೇಳಿದ್ದು ಕೇಳಿ ಬೆಚ್ಚಿಬಿದ್ದೆ. ಅದು ಸುತ್ತಲಿನ ಕಾಡ ಪಂಗಡವೊಂದರ ಸಮಾಧಿಗಳಂತೆ! ಸುಮಾರು ಶತಮಾನಗಳಷ್ಟು ಹಳೆಯ ಪದ್ಧತಿ ಅದು. ಭೂಮಿಯ ಜೀವನ ಮುಗೀತು ಎಂದು ಕಂತೆ ಒಗೆದವರ ದೇಹಗಳನ್ನು ಇಂತಹ ಪುಟಾಣಿ ಮಂಟಪಗಳಂತಹ ಸಮಾಧಿಗಳಲ್ಲಿ ಇರಿಸಿ ಹೋಗುತ್ತಿದ್ರಂತೆ. ನಂತರ ಆ ದೇಹ ಮರಳಿ ಪಂಚಭೂತಗಳ ಪಾಲು, ನಿಸರ್ಗದ ಪಾಲು. ಅಚ್ಚರಿಯಾಯ್ತು ನನಗೆ.
ಆ ಕ್ಷಣದಲ್ಲೇ ಇವರಿಬ್ರೂ ಮತ್ತೊಂದು ವಿಚಾರ ಮಾತಿಗೆ ಶುರುಹಚ್ಚಿಕೊಂಡು, ಅತ್ತಿಂದಿತ್ತ ಕಣ್ಣು ಕಿರಿದಾಗಿಸಿಕೊಂಡು ಓಡಾಡೋಕೆ ಶುರು ಮಾಡಿದ್ರು. ಏನಪ್ಪ, ಹೊಸ ಸಮಾಚಾರ ಅಂತ ಕಿವಿಗೊಟ್ಟು ಕೇಳ್ದೆ, ಆಗ ಕಿವಿಗೆ ಬಿದ್ದ ಹೆಸರು ಕೇಳಿ, ನನ್ನ ಕಿವಿಗಳೂ ನೆಟ್ಟಗಾದ್ವು. ʼಗುಂಥರ್ಸ್ ಟೋಡ್ʼ (Günther’s toad) ಅನ್ನೋ ವಿಶಿಷ್ಟವಾದ ಪುಟ್ಟ ಕಪ್ಪೆಯೊಂದು ಇಲ್ಲೇ ಸಿಗೋದು, ಮತ್ತೆಲ್ಲೂ ಸಿಗಲ್ಲ ಅನ್ನೋ ಮಾತು ಕೇಳಿ ನಾನೂ ಅವರೊಂದಿಗೆ ಹುಡುಕಾಟ ಶುರುಹಚ್ಚಿಕೊಂಡೆ. ಇನ್ನೂ ಒಂದೈದು ನಿಮಿಷವೂ ಕಳೆದಿರಲಿಲ್ಲ. ನಮ್ಮ ಅನನುಭವಿ ಕಣ್ಣಿಗೆ ಕಾಣದ ಆ ಪುಟಾಣಿ ಹ್ಯಾಂಡ್ಸಮ್ ಕಪ್ಪೆ, ಅಣ್ಣನ ಅನುಭವಿ ಕಣ್ಣಿಗೆ ಪಟ್ ಅಂತ ಸಿಕ್ಕೇ ಬಿಡ್ತಲ್ಲ! ಅದೂ ಇನ್ನೂ ಪೂರ್ತಿಯಾಗಿ ಬೆಳೆಯದ ಕಪ್ಪೆ ಮರಿ! ಅಬ್ಬ! ಅಲ್ಲಿನ ವಿಶಿಷ್ಟ ಬಂಡೆಗಳ ಬೂದು, ಕಪ್ಪು ಮತ್ತು ಕೊಂಚ ಕಂದು ಮಿಶ್ರಿತ ಬಣ್ಣವನ್ನು ಯಥಾವತ್ತಾಗಿ ತನ್ನ ಮೈಮೇಲೆ ಚಿತ್ರಿಸಿಕೊಂಡಿದ್ದ ಹಾಗಿತ್ತು ಆ ಪುಟಾಣಿ ಟೋಡ್. ಒಮ್ಮೆ ಒಂದು ಪಟ ತೆಗೆದೇಬಿಡೋಣ ಅಂತ ಹೊರಟ್ರೆ, ಕುಪ್ಪಳಿಸುತ್ತಾ ತಪ್ಪಿಸಿಕೊಂಡು ಕಣ್ಮರೆಯಾಗಿಬಿಡುತ್ತಿತ್ತು. ಅಂತೂ ಇಂತೂ ಎಲ್ಲರ ಪ್ರಯತ್ನದಿಂದ, ಕೈಗಳ ತಾತ್ಕಾಲಿಕ ಮರೆ ಸೃಷ್ಟಿಸಿ, ಪುಟಾಣಿ ಕಪ್ಪೆಯನ್ನು ಕಣ್ತುಂಬಿಸಿಕೊಂಡು, ಕ್ಯಾಮೆರಾನೂ ತುಂಬಿಸಿಕೊಂಡೆವು.
ಆನಂತರ ಮೂರ್ನಾಕು ಇದೇ ಬಗೆಯ ಟೋಡ್ಗಳು ಕಾಣಸಿಕ್ಕವು. ನಮ್ಮ ಉತ್ಸಾಹ ಇಮ್ಮಡಿಯಾಯ್ತು. ಸರಿ, ಹೀಗೆ ಕಪ್ಪೆಮರಿ ಹುಡುಕ್ತಾ ಕೂತ್ರೆ ಮನೇಲಿರುವ ನಾಯಿಮರಿ ಕಾಯ್ತಾ ಕೂರತ್ತೆ ನಮ್ಮನ್ನೇ ಅಂತ ಮನಸಿಲ್ಲದ ಮನಸ್ಸಿಂದ ಹೊರಟ್ವಿ. ಇನ್ನೇನು ಕೆಳಗಿಳಿಯೋಕೆ ಪ್ರಾರಂಭಿಸಬೇಕು, ಆಗ ಅಲ್ಲಿ ನಿಂತ ಮಳೆ ನೀರಲ್ಲಿ ಕಾಮನಬಿಲ್ಲಿನಂತಹ ಬಣ್ಣಗಳು ಕಾಣಿಸಿದ್ವು! ಇದೇನು ಹೀಗೆ? ಜನರಿಗೆ ಅಷ್ಟೇನೂ ಪರಿಚಿತವಿಲ್ಲದ ಗುಡ್ಡದಲ್ಲಿ ಮಾಲಿನ್ಯವೇ? ಇಲ್ಲಿ ಯಾವ ಸೀಮೆ ಎಣ್ಣೆಯೋ, ಪೆಟ್ರೋಲೋ ಲೀಕ್ ಆಗಿರಲು ಸಾಧ್ಯ ಅಂತ ತಲೆಕೆಟ್ಟುಹೋಯ್ತು.
ನೀರಿನ ಮೇಲೆ ಕಾಣ್ತಿರೋ ಎಣ್ಣೆಯಂತಹ ಏಳು ಬಣ್ಣಗಳ ಹೊಳೆಯುವ ಪದರ ನಂಗೆ ಯಾಕೋ ಕಸಿವಿಸಿ ಮಾಡ್ತು. ಸ್ವಚ್ಛ ಪರಿಸರ ಅಂದುಕೊಂಡಿದ್ನಲ್ಲ, ಇಲ್ಲೂ ಮಾಲಿನ್ಯಾನಾ ಅಂತ. ಆಗ, ಅಲ್ಲಿದ್ದ ಅಣ್ಣಂಗೆ ಕೇಳ್ದಾಗ ಅವರಂದ್ರು, ಅದು ಬ್ಯಾಕ್ಟೀರಿಯಾದ ಕೈವಾಡವಿರಬಹುದು ಅಂತ. ಅರೆರೆ ಹೌದಲ್ಲ! ಮೈಕ್ರೋಬಯಾಲಜಿ ತರಗತಿಗಳಿಗೆ ಮಣ್ಣು ಹೊತ್ತದ್ದು ಮರೆತೇ ಹೋಯ್ತಾ ಅಂತ ಒಮ್ಮೆ ನಗು ಬಂತು. ನನಗೊಂದೆರಡು ಚಿತ್ರಗಳನ್ನೂ ತೆಗೆದುಕೊಟ್ಟರು ಇವರಿಬ್ಬರೂ. ಅಣ್ಣ ಹಾಗೂ ನಾವು ಅದರ ಬಗ್ಗೆಯೇ ಮಾತು ಮುಂದುವರೆಸಿಕೊಂಡು ಕೆಳಗಿಳಿದು ಬಂದ್ವು. ಅದು ಬ್ಯಾಕ್ಟೀರಿಯಾದ ಕೈವಾಡವೋ, ಎಣ್ಣೆಯ ಸೋರಿಕೆಯಿಂದ ಉಂಟಾದ ಹೊಳೆಯುವ ಪದರವೋ ಅಂತ ಹೇಗೆ ಗೊತ್ತಾಗೋದು ಗೊತ್ತಾ? ಬಹಳ ಸರಳ! ಆ ನೀರಿಗೆ ಒಂದು ಪುಟಾಣಿ ಕಲ್ಲನ್ನು ಎಸೆದು ನೋಡಿ, ಆ ಬಣ್ಣದ ಪದರ, ಆ ಕಲ್ಲಿನಿಂದ ಒಡೆದು, ಮತ್ತೆ ಕೂಡಿಕೊಂಡರೆ ಅದು ಎಣ್ಣೆಯಿಂದ ಉಂಟಾದದ್ದು; ಅಕಸ್ಮಾತ್ ಪುನಃ ಕೂಡಿಕೊಳ್ಳದೆ, ಬಿಡಿಬಿಡಿ ಪದರಗಳಾಗಿ, ಸಣ್ಣ ಸಣ್ಣ ದ್ವೀಪಗಳಾಗಿ ನಿಂತರೆ ಅದು ಬ್ಯಾಕ್ಟೀರಿಯಾದ್ದೇ ಕೆಲಸ. ಅಲ್ಲೂ ಕೂಡ ಹೀಗೆ ಅದೂ ಬ್ಯಾಕ್ಟೀರಿಯಾನೇ ಅಂತ ಸಾಬೀತಾಯ್ತು. ಅವು ಎಂತಹ ಬ್ಯಾಕ್ಟೀರಿಯಾ ಗೊತ್ತಾ? ಕಬ್ಬಿಣಾಂಶ ಎಲ್ಲಿ ಹೆಚ್ಚಿರುತ್ತೋ, ಅಂಥ ವಾತಾವರಣದಲ್ಲಿ ಜೀವನ ಸಾಗಿಸುವ ಸೂಕ್ಷ್ಮಾಣು ಜೀವಿಯದು. ಅವಕ್ಕೆ ಸೂಕ್ಷ್ಮಜೀವಾಣು ವಿಜ್ಞಾನದಲ್ಲಿ ʼಕೀಮೋಲಿಥೋಟ್ರೋಫ್ʼಗಳು ಅಂತಾರೆ. ಇದೊಂದು ಗ್ರೀಕ್ ಪದಗಳ ಸಂಕಲನವಾಗಿದ್ದು, ಕೀಮೋ ಅಂದ್ರೆ ರಾಸಾಯನಿಕಗಳು, ಲಿಥೋ ಅಂದ್ರೆ ಕಲ್ಲುಬಂಡೆಗಳು ಮತ್ತು ಟ್ರೋಫ್ಗಳಂದ್ರೆ ಆಹಾರ ಸ್ವೀಕರಿಸುವವು ಎಂದು ಅರ್ಥ. ಅಂದ್ರೆ ಅಕ್ಷರಶಃ, ಈ ಬ್ಯಾಕ್ಟೀರಿಯಾ ʼಬಂಡೆಬಾಕʼ ಜೀವಿ ಅನ್ನಬಹುದು! ಆ ಪುರಾತನ ಬಂಡೆಗಳಲ್ಲಿ ಹೆಚ್ಚಿಗೆ ಇರುವ ಕಬ್ಬಿಣ, ಮ್ಯಾಗ್ನೀಷಿಯಂ ನಂತಹ ಲೋಹಗಳನ್ನು, ಬಂಡೆಯ ಕೋರೆಗಳಲ್ಲಿ ನಿಂತಿರುವ ನೀರನ್ನು ಬಳಸಿಕೊಂಡು ತಮ್ಮ ಹೊಟ್ಟೆ ಹೊರೆದುಕೊಳ್ಳತ್ವೆ ಈ ಚಾಲಾಕಿ ಜೀವಿಗಳು. ನಿಂತ ನೀರಿನ ತಳದಲ್ಲಿ ಬೀಡುಬಿಡುವ ಇವಕ್ಕೆ ಆಮ್ಲಜನಕವೇನೂ ಹೆಚ್ಚಿಗೆ ಸಿಗೋದಿಲ್ಲ. ಆಮ್ಲಜನಕದ ಅವಶ್ಯಕತೆ ಇಲ್ಲದಂತಹ ಜೀವರಾಸಾಯನಿಕ ಕ್ರಿಯೆಗಳನ್ನು ನಡೆಸುವ ಇವು, ತಮ್ಮ ಈ ಪ್ರಕ್ರಿಯೆಯ ಫಲಿತಾಂಶವಾಗಿ, ತಮಗೆ ಬೇಕಾದ ಆಹಾರದ ಜೊತೆಗೆ, ಹೊಳೆಯುವ ಮಳೆಬಿಲ್ಲಿನ ಬಣ್ಣದ ತೆಳು ಪದ ರ ಸೃಷ್ಟಿ ಮಾಡುತ್ವೆ. ಈ ಬ್ಯಾಕ್ಟೀರಿಯಾದ ವರ್ಗವು ಅಸಿಡೋಥಯೋಬ್ಯಾಸಿಲ್ಲಸ್ ಅಥವಾ ಥಯೋಬ್ಯಾಸಿಲ್ಲಸ್ ಎಂಬ ಹೆಸರಿನಿಂದ ಪ್ರಖ್ಯಾತವಾಗಿದ್ದು, ಕಲ್ಲು ಗಣಿಗಾರಿಕೆ ನಡೆಯುವಲ್ಲಿ, ಬೆಟ್ಟಗುಡ್ಡಗಳಲ್ಲಿ, ಕ್ವಾರಿಗಳಲ್ಲಿ ಕಾಣಸಿಗುತ್ವೆ.
ಇವು ತಮ್ಮ ಚಯಾಪಚಯ ಕ್ರಿಯೆಯ ಭಾಗವಾಗಿ ಕಿಣ್ವಗಳನ್ನು, ಆಮ್ಲಗಳನ್ನು ಉತ್ಪತ್ತಿ ಮಾಡುತ್ವೆ; ಅದರ ಪರಿಣಾಮವಾಗಿ, ಇಲ್ಲಿದ್ದ ನೀರಿನಲ್ಲಿ ಕರಗದ ಕಬ್ಬಿಣದ (Fe3+) ರೂಪವು, ನೀರಿನಲ್ಲಿ ಕರಗುವ ರೂಪವಾಗಿ (Fe2+) ಬದಲಾಗುತ್ತದೆ. ಇಲ್ಲಿ ಎಲೆಕ್ಟ್ರಾನ್ಗಳ ಕೊಡು-ಕೊಳ್ಳುವಿಕೆ ನಡೆಯುತ್ತದೆ ಮತ್ತು ಈ ಪ್ರಕ್ರಿಯೆಯ ಮೂಲಕ ಬ್ಯಾಕ್ಟೀರಿಯಾವು ತನ್ನ ಆಹಾರ ಪಡೆದುಕೊಳ್ಳಲು ಬೇಕಾದ ಶಕ್ತಿ ದೊರೆಯುತ್ತದೆ. ಹೀಗೆ ಕರಗಿದ್ದ ಕಬ್ಬಿಣ ಮತ್ತೆ ಕರಗದ ರೂಪತಾಳಿ ಅಲ್ಲೇ ಉಳಿಯುತ್ತದೆ; ಇದನ್ನು ಕೂಡ ಬ್ಯಾಕ್ಟೀರಿಯಾವೇ ಮಾಡಬಹುದು ಅಥವಾ ಅಲ್ಲಿ ಆಮ್ಲಜನಕ ಲಭ್ಯವಿದ್ದರೆ, ಆಮ್ಲಜನಕವೇ ಈ ಕಾರ್ಯ ನಡೆಸಿಕೊಡಬಹುದು. ಈ ಕಬ್ಬಿಣದ ಮೇಲೆಯೇ ಆಧರಿತ ಜೀವನ ನಡೆಸುವ ಬ್ಯಾಕ್ಟೀರಿಯಾ ಇವೆಯಲ್ಲಾ… ಇವು ಹಳೆಯ ನಲ್ಲಿಗಳ ಸಂದುಗೊಂದುಗಳಲ್ಲಿ, ಬೋರ್ವೆಲ್ಗಳ ಮೇಲೆ ಕೂಡ ರಾರಾಜಿಸುತ್ತವೆ. ಅಲ್ಲಿ ಇವಕ್ಕೆ ಬೇಕಾದ ಕಬ್ಬಿಣ ಮತ್ತು ನೀರು ಎರಡೂ ಸಿಗುವುದರಿಂದ ಅವು ಸುಖವಾಗಿ ಬದುಕಲು ಸಾಧ್ಯ. ಈ ಬ್ಯಾಕ್ಟೀರಿಯಾಗೆ ಬೇಕಿರುವ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಿರಬೇಕು; ಹಾಗಾಗಿ ಹೂಳು ತುಂಬಿದ ಕೆರೆ-ಕುಂಟೆಗಳಲ್ಲಿ, ಕೊಳೆಯುತ್ತಿರುವ ಕಳೆ ಹೆಚ್ಚಿದ್ದಷ್ಟು, ಇವಕ್ಕೆ ಹಬ್ಬ! ಕೊಳೆಯುವಿಕೆ ಇರುವ ಕಡೆ ಆಮ್ಲಜನಕ ಕಡಿಮೆಯಿರುವ ಕಾರಣ, ಇವು ಅಲ್ಲಿನ ನೀರಿನಲ್ಲಿ ಸುಲಭವಾಗಿ ಬದುಕುತ್ತಾ, ಅಲ್ಲಿ ಮಣ್ಣಿನಲ್ಲಿರುವ ಕಬ್ಬಿಣವನ್ನು ಆಕ್ಸಿಡೀಕರಣಗೊಳಿಸುತ್ತಾ, ಅರಾಮಾಗಿ ಬದುಕುತ್ತವೆ.
ಈ ಕಬ್ಬಿಣಪ್ರಿಯ ಬ್ಯಾಕ್ಟೀರಿಯಾ, ತಮ್ಮ ಜೈವಿಕ ಹಸ್ತಾಕ್ಷರದ ಕಾರಣಕ್ಕೆ ಜಗದ್ವಿಖ್ಯಾತ ಎನ್ನಬಹುದು. ಏನಿದು ಜೈವಿಕ ಹಸ್ತಾಕ್ಷರ ಎಂದಿರಾ? ಗಾಳಿಯಲ್ಲಿ, ನೀರಿನಲ್ಲಿ, ಮಣ್ಣಿನಲ್ಲಿ, ಅಷ್ಟೇ ಏಕೆ, ನಮ್ಮ ಒಳಗೂ ಕೋಟಿಗಟ್ಟಲೆ ಸೂಕ್ಷ್ಮಾಣು ಜೀವಿಗಳು ಇವೆ. ಅವೆಲ್ಲವೂ ತಮ್ಮ ಅಸ್ತಿತ್ವವನ್ನು ಒಂದಿಲ್ಲೊಂದು ರೀತಿಯಲ್ಲಿ ತೋರ್ಪಡಿಸುತ್ತವೆ; ಉದಾಹರಣೆಗೆ, ಮಲ್ಪೆಯಲ್ಲಿ ಇತ್ತೀಚೆಗೆ ಸುದ್ದಿ ಮಾಡಿದ್ದ ಜೈವಿಕ ಪ್ರತಿದೀಪ್ತಿ ಗೊತ್ತಲ್ಲ? (ಹೆಚ್ಚಿನ ಮಾಹಿತಿಗೆ ಕಾನನ ಪತ್ರಿಕೆಯ 2021ರ ನವೆಂಬರ್ ಪ್ರತಿಯನ್ನು ನೋಡಿ) ಸೂರ್ಯ ಮುಳುಗಿ ಕತ್ತಲಾದ ಮೇಲೂ, ನೀಲಿ ಬೆಳಕು ಹೊದ್ದು ಕಂಗೊಳಿಸ್ತಾ ಇದ್ವು ಅಲ್ಲಿನ ಅಲೆಗಳು! ಇದು ಮುಂಚೆಯೂ ಆಗಿದೆ, ಮುಂದೆಯೂ ಆಗುತ್ತಿರುತ್ತದೆ; ಅಲ್ಲಿ ಮಾತ್ರವಲ್ಲದೇ ಅನೇಕ ಜಲಪಾತ್ರಗಳಲ್ಲಿ ಕಂಡಿದ್ದೂ ಉಂಟು; ಅದಕ್ಕೆ ಕಾರಣ ವಿಶೇಷವಾದ ಬೆಳಕನ್ನು ಹೊರಸೂಸುವ ಒಂದು ಬಗೆಯ ನೀಲಿ ಹಸಿರು ಶೈವಲ ಅಥವಾ ಬ್ಲೂಗ್ರೀನ್ ಆಲ್ಗೆ ಎಂಬ ಸೂಕ್ಷ್ಮಾಣು ಜೀವಿ. ಅದು ತನ್ನ ಇರುವಿಕೆಯನ್ನು ನೀಲಿ ಹೊಂಬೆಳಕಿನ ಮೂಲಕ ತೋರ್ಪಡಿಸಿತು; ಅಷ್ಟೇ ಏಕೆ, ಈಗ ಜಗತ್ತನ್ನೇ ಬಾಧಿಸುತ್ತಿರೋ ಕೊರೋನಾ ವೈರಸ್ ಕೂಡ ತನ್ನ ಇರುವಿಕೆಯನ್ನು ನೆಗಡಿ, ಕೆಮ್ಮು, ಜ್ವರದ ಮೂಲಕ ತೋರ್ಪಡಿಸುತ್ತಿಲ್ವೇ? ಹಾಗೇ, ಈ ಕಬ್ಬಿಣವನ್ನು ಬಳಸಿಕೊಳ್ಳುವ ಬ್ಯಾಕ್ಟೀರಿಯಾ, ತನ್ನದೇ ಅನನ್ಯ ಸಿಗ್ನೇಚರ್ ಅಂದರೆ, ನೀರಿನ ಮೇಲೆ ತೇಲುವ, ಹೊಳೆಯುವ ಕಾಮನಬಿಲ್ಲಿನಂತಹ ಬಣ್ಣಬಣ್ಣದ ರಾಸಾಯನಿಕ ಪದರ ಸೃಷ್ಟಿಸಿ ತನ್ನ ಅಸ್ತಿತ್ವವನ್ನು ಸಾರುತ್ತದೆ.
ಈ ಕಬ್ಬಿಣಪ್ರಿಯ ಬ್ಯಾಕ್ಟೀರಿಯಾದಲ್ಲೇ ಹಲವು ಬಗೆಯಿದ್ದು, ಕೆಲವು ಆಮ್ಲಜನಕದ ಬಳಕೆಯನ್ನು ಮಾಡುತ್ತಾ ಕಬ್ಬಿಣವನ್ನು ಜೀರ್ಣಿಸಿಕೊಳ್ಳುತ್ವೆ ಮತ್ತೂ ಕೆಲವು ಆಮ್ಲಜನಕದ ಹತ್ತಿರವೂ ಸುಳಿಯೋದಿಲ್ಲ; ಕೆಲವು ಕಬ್ಬಿಣ ಮಾತ್ರವಲ್ಲದೇ, ಇಂಗಾಲದ ಮೂಲಗಳನ್ನೂ, ಇತರ ಲೋಹಗಳ ಸಂಪನ್ಮೂಲಗಳನ್ನೂ ಕೆದಕುವುದುಂಟು. ವಿಕಾಸದ ಹಾದಿಯಲ್ಲಿ ಈ ಬದಲಾವಣೆಗಳು ಕಂಡುಬಂದಿದ್ದು, ಹೊಸ ಪ್ರಭೇದಗಳ ಉಗಮ ಹೇಗಾಗುತ್ತದೆ ಎಂಬುದರ ಮೇಲೆ ಇಂತಹ ಕವಲುಗಳು ಬೆಳಕು ಹರಿಸಿವೆ ಎನ್ನಬಹುದು. ಇಂತಹ ಕಬ್ಬಿಣ ಪ್ರಿಯ ಬ್ಯಾಕ್ಟೀರಿಯಾದ್ದೇ ಒಂದು ಪ್ರಭೇದವು, ಆಸ್ಟ್ರೇಲಿಯಾದ ʼಬ್ಯಾಂಡೆಡ್ ಐರನ್ ಫಾರ್ಮೇಶನ್ ಸೃಷ್ಟಿಗೆ ಕಾರಣ ಅಂತಾರೆ ವಿಜ್ಞಾನಿಗಳು. ಹೇಗೆ ಗೊತ್ತೇ? ಸಮುದ್ರ ತಟದಲ್ಲಿ ಇದ್ದ ಬಂಡೆಗಳ, ಮಣ್ಣಿನ ಭಾಗವಾಗಿ ಲಭ್ಯವಿದ್ದ ʼಕರಗಲಾರದ ಕಬ್ಬಿಣʼವನ್ನು ಮುಕ್ಕಿದ ಈ ಬ್ಯಾಕ್ಟೀರಿಯಾ, ಆ ಕಬ್ಬಿಣವನ್ನು ಬಳಸಿಕೊಂಡು, ಕರಗಬಲ್ಲ ಸಂಯುಕ್ತವನ್ನ ತಯಾರಿಸಿ ಹೊರ ಹಾಕಿದ್ವು. ಈ ಕರಗಬಲ್ಲ ಕಬ್ಬಿಣದ ರೂಪವು ಸಮುದ್ರದ ನೀರಿನಲ್ಲಿ ಒಂದಾಗಿ, ಬಂಡೆಗಳಿಗೆ ಅಪ್ಪಳಿಸಿತು. ಈ ಕಬ್ಬಿಣದ ಆಕ್ಸೈಡ್ ಸಂಯುಕ್ತವು ಆ ಬಂಡೆಗಳ ಮೇಲೆ ಬಂದು ಶೇಖರಣೆಯಾಗುತ್ತಾ, ಕಾಲಾಂತರದಲ್ಲಿ ಅಲ್ಲಿ ಕಪ್ಪುಬಣ್ಣದ, ಅಗಲವಾದ ಪಟ್ಟಿಗಳು ಕಾಣಿಸಿಕೊಂಡವು. ಹಾಗಾಗಿಯೇ ಆ ಬಂಡೆಗಳನ್ನು ʼಬ್ಯಾಂಡೆಡ್ ಐರನ್ ಫಾರ್ಮೇಶನ್ʼ (ಬಿ.ಐ.ಎಫ್)ಗಳೆಂದು ಕರೆಯೋದು. ಇದು ಸಾಧ್ಯವಾಗಿದ್ದು ಯಾವಾಗ ಗೊತ್ತೇ?
270 ಕೋಟಿ ವರ್ಷಗಳ ಹಿಂದೆ! ಆಗ ಭೂಮಿಯ ವಾತಾವರಣದಲ್ಲಿ ಆಮ್ಲಜನಕ ಮಟ್ಟದ ವಿಪರೀತ ಹೆಚ್ಚಳವು, ಕಬ್ಬಿಣಾಂಶದ ಮೇಲೆ ಅತ್ಯಂತ ಒತ್ತಡ ಹಾಕಿದ ಕಾಲ. ಕಬ್ಬಿಣಾಂಶವು ಕೇವಲ ಭೂರಾಸಾಯನಿಕ ಚಕ್ರಗಳ ಭಾಗವಾಗಿರುವುದನ್ನು ಬಿಟ್ಟು ಜೀವರಾಸಾಯನಿಕ ಚಕ್ರಗಳ ಭಾಗವಾಗಿ, ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಒತ್ತಡದಲ್ಲಿದ್ದ ಸಮಯ. ಇಂತಹ ಹಲವು ಜೈವಿಕ ವಿದ್ಯಮಾನಗಳಿಗೆ ಸಾಕ್ಷಿಯಾಗಿರುವ ಕಬ್ಬಿಣಪ್ರಿಯ ಬ್ಯಾಕ್ಟೀರಿಯಾ, ನಮ್ಮ ಅತ್ಯಂತ ಪುರಾತನ ಪೂರ್ವಜರಲ್ಲಿ ಒಬ್ಬ ಎನ್ನಲು ಯಾವುದೇ ಸಂಶಯವಿಲ್ಲ. ಇಂತಹ ಹಳಬರನ್ನೂ ನಮ್ಮ ಈ ತಲೆಮಾರಿನ ಹೊಸ ಸಮಸ್ಯೆಗಳಾದ ವಾಯುಮಾಲಿನ್ಯ, ಜಲಮಾಲಿನ್ಯ, ಜಾಗತಿಕ ತಾಪಮಾನ ಏರಿಕೆ, ವಾಯುಗುಣ ಬದಲಾವಣೆಗಳು ಕಾಡುತ್ತಿವೆ. ಏರುತ್ತಿರುವ ತಾಪಮಾನ, ಗಾಳಿ, ನೀರು, ಮಣ್ಣಿನಲ್ಲಿ ಹೆಚ್ಚುತ್ತಿರುವ ರಾಸಾಯನಿಕಗಳು, ಆಮ್ಲೀಯತೆ ಅಥವಾ ಕ್ಷಾರೀಯತೆಯ ಪ್ರಮಾಣಗಳಲ್ಲಿ ಆಗುವ ಬದಲಾವಣೆಗಳು, ಇವುಗಳ ಚಯಾಪಚಯ ಕ್ರಿಯೆಗಳ ದಿಕ್ಕನ್ನೇ ಬದಲಾಯಿಸುತ್ತಿವೆ. ಇದರಿಂದ ನಮಗೇನು ನಷ್ಟ ಎಂದುಕೊಳ್ಳುವ ಹಾಗಿಲ್ಲ. ಪ್ರತಿ ಜೀವಿಯೂ ಮತ್ತೊಂದು ಜೀವಿಯ ಜೀವನ ಚಕ್ರದ ಪ್ರತ್ಯಕ್ಷ ಅಥವ ಪರೋಕ್ಷ ಭಾಗವೇ ಅಲ್ಲವೇ? ನಾವೆಲ್ಲಾ ಒಂದೇ ಜಗತ್ತಿನ ಜೀವಿಗಳಾದ್ದರಿಂದ, ನಮ್ಮೆಲ್ಲಾ ಜೀವನ ಚಕ್ರಗಳು ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿರುತ್ತವೆ. ಒಂದು ಜೀವಿಗೆ ಬಂದ ತಾಪತ್ರಯ, ನಮ್ಮನ್ನು ಮತ್ಯಾವುದೋ ರೀತಿಯಲ್ಲಿ ಕಾಡಬಹುದಲ್ಲ! ಹಾಗಾಗಿಯೇ ಬುದ್ಧಿವಂತ ಪ್ರಾಣಿ ಎಂದು ಕರೆಸಿಕೊಂಡಿರುವ ಮನುಷ್ಯ, ತನ್ನ ಅವಿವೇಕಿ ನಡವಳಿಕೆಯನ್ನು ನಿಲ್ಲಿಸಬೇಕು. ಇಂತಹ ಪೂರ್ವಜ ಜೀವಿಗಳನ್ನು ತಮ್ಮ ಪಾಡಿಗೆ ತಾವು ಕಾರ್ಯನಿರ್ವಹಿಸುತ್ತಾ ಪರಿಸರದ ಸಮತೋಲನ ಕಾಯಲು ಅನುವು ಮಾಡಿಕೊಡಬೇಕು.
ಕಲ್ಲನ್ನೂ ಕರಗಿಸಿಬಿಡುವ ಈ ಜೀವಿಗಳು, ಬದುಕಲು ಯಾವ ಅಡ್ಡಿ ಆತಂಕ ಎದುರಿಗೆ ಬಂದರೂ ಅದನ್ನು ಮೆಟ್ಟಿನಿಲ್ಲುವ ಹೊಟ್ಟೆಯೊಳಗಿನ ಕಿಚ್ಚನ್ನು, ಪ್ರತಿ ಬಗೆಯ ಜೀವಿಗೂ ಇರಬೇಕಾದ ಜೀವನ ಪ್ರೀತಿಯನ್ನು, ಜೀವವಿಕಾಸದ ಹಾದಿಯ ಮೈಲಿಗಲ್ಲುಗಳನ್ನು ಪ್ರತಿನಿಧಿಸುತ್ತವೆ ಎನಿಸಿತು ನನಗೆ. ನೀವೇನಂತೀರಿ?
ಲೇಖನ: ಕ್ಷಮಾ ವಿ. ಭಾನುಪ್ರಕಾಶ್.
ಬೆಂಗಳೂರು ಜಿಲ್ಲೆ.