ಘಟ್ಟದಲ್ಲೊಂದು ಹವಳದ ಸರ .
© ವಿಜಯ್ ಕುಮಾರ್ ಡಿ. ಎಸ್.
ನನ್ನೂರು ಕಾಫಿ ನಾಡು, ಚಿಕ್ಕಮಗಳೂರು. ಪ್ರಕೃತಿ ದೇವತೆ ಆಕಾಶದಿಂದ ಧೋ… ಎಂದು ಸುರಿಯುತ್ತಿದ್ದ ಮಳೆಗೆ ಮೈಯೊಡ್ಡಿ ಚಿಗುರ-ಹಸಿರ ಹೆಚ್ಚಿಸುತ್ತಿದ್ದಳು. ಅದು ಜೂನ್-ಜುಲೈ ತಿಂಗಳು, ಪ್ರಕೃತಿಯ ಹಸಿರ ಹಬ್ಬಕ್ಕೆ ಮಣ್ಣಿನಡಿಯಿಂದ, ಮೊಟ್ಟೆಯೊಳಗಿಂದ, ಕವಚದೊಳಗಿಂದ ಅವಿತಿದ್ದ ಅದೆಷ್ಟೋ ಜೀವರಾಶಿಗಳು ಹೊರಬಂದು ಹಸಿರ ಹಬ್ಬಕ್ಕೆ ಬಣ್ಣ ಬಣ್ಣದ ರಂಗು ಮೂಡಿಸಲು ಸಜ್ಜಾಗಿದ್ದವು. ಅದೇ ಮಳೆಗಾಲದ ಒಂದು ದಿನ ಬಿದಿರಿನ ಕುಕ್ಕೆಯೊಳಗಿನ ಕಪ್ಪು ಹೇಂಟೆ ಮತ್ತು ಮೂರು ಕೋಳಿ ಪಿಕ್ಕಿಗಳು ಅದೇನೋ ಅಪಾಯ ಬಂದ ಸೂಚನೆ ಕೊಡುವಂತೆ ಧ್ವನಿ ಹೊರಡಿಸತೊಡಗಿದ್ದವು. ಅಯ್ಯೋ! ಮತ್ತೆ ನಾಗರಾಜನ ಆಗಮನ ಈ ಸಲವೂ ಒಂದು ಕೋಳಿ ಮರಿಯನ್ನೂ ದೊಡ್ಡದಾಗಲು ಬಿಡುವುದಿಲ್ಲವೇನೋ ಎಂದು ಬೈದುಕೊಳ್ಳುತ್ತಾ ಕೋಳಿ ಮುಚ್ಚಿದ ಕೊಟ್ಟಿಗೆಗೆ ಬಂದು ಸುತ್ತ ಕಣ್ಣಾಡಿಸಿದೆ. ನೋಡಿದರೆ ಬುಟ್ಟಿಯ ಪಕ್ಕದಲ್ಲೊಂದು ತಿಳಿ ಕಪ್ಪು ಮಣಿ ಪೋಣಿಸಿದ್ದ ಹವಳದ ಸರ ಬಿದ್ದಿದೆ. ಇದೆಲ್ಲಿಂದ ಬಂತು ಎಂದು ಹತ್ತಿರ ಹೋಗಿ ನೋಡಿದರೆ ಒಂದು ಸಣ್ಣ ಹಾವು. ಅಬ್ಬಾ! ಕೆಂಪು ಹವಳದಂತೆ ಮೈಬಣ್ಣ ನಡುನಡುವೆ ಕಪ್ಪುಪಟ್ಟಿ ಸುಂದರವಾಗಿತ್ತು. ಆಗ ನೆನಪಾಯಿತು ಸುಂದರವಾದ ವಿಭಿನ್ನ ಬಣ್ಣಗಳ ಅಣಬೆಗಳು ವಿಷಕಾರಿಯೇ ಆಗಿರುತ್ತವೆ, ಹಾಗೆಯೇ ಈ ಹಾವೂ ವಿಷಕಾರಿಯಾಗಿರಬಹುದು ಎಂದು ಭಾವಿಸಿದರೂ ಅದನ್ನು ಬಿಟ್ಟು ಓಡಲು ಮನಸ್ಸಾಗಲಿಲ್ಲ, ಇನ್ನಷ್ಟು ನೋಡಬೇಕೆಂಬ ಆಸೆ.
ಅಷ್ಟರಲ್ಲಿ ಹೇಂಟೆಯು ಇನ್ನೂ ಕೊಕ್…ಕೊಕ್… ಸದ್ದು ಮಾಡುತ್ತಲೇ ಇದ್ದಿದ್ದರಿಂದಲೋ ಏನೋ ಆಕೆಯ ಗಂಡ- ಕೆಂಪು ಜುಟ್ಟಿನ ಹುಂಜ ಕುಕ್ಕೆಯ ಬಳಿ ಬಂದೇಬಿಟ್ಟಿತು. ಅಲ್ಲೇ ಇದ್ದ ಹಾವನ್ನು ನೋಡಿದ ಹುಂಜ ತಡಮಾಡದೇ ತನ್ನ ಕೊಕ್ಕಿನಿಂದ ಅದನ್ನು ಕುಕ್ಕಿ ತಿನ್ನಲು ಮುಂದಾಗಿತ್ತು. ತಕ್ಷಣ ನಾನು ಗಾಬರಿಯಿಂದ ಹುಂಜಣ್ಣನನ್ನು ದೂರ ಓಡಿಸಿದೆ. ಪಾಪ! ಇಷ್ಟು ಸಣ್ಣ ಹಾಗೂ ಸುಂದರ ಅಪರೂಪದ ಹಾವು ಹುಂಜದ ಹೊಟ್ಟೆ ಪಾಲಾಗುವುದು ಬೇಡ ಎನಿಸಿತು. ಕೋಲೊಂದನ್ನು ತೆಗೆದುಕೊಂಡು ಹಾವನ್ನು ದೂರದಿಂದಲೇ ತೋಟದ ಕಡೆ ಹೋಗಿಸುವ ಪ್ರಯತ್ನ ಮಾಡಿದೆ. ಆಗ ಹಾವು ನಿಧಾನವಾಗಿ ಸರಿದು ಅಲ್ಲೇ ಇದ್ದ ಸೌದೆ ರಾಶಿ ಒಳ ಹೊಕ್ಕಿತು. ಇನ್ನು ಅದಕ್ಕೆ ಅಪಾಯವಿಲ್ಲ ಎಂದು ಸುಮ್ಮನೆ ಒಳನಡೆದೆ. ಆದರೆ ಆ ನಡುವೆಯೇ, ಹುಂಜಣ್ಣ ಬರುವ ಗ್ಯಾಪ್ ನಲ್ಲಿ, ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿದ್ದೆ!
ಈ ಅಪರೂಪದ ಹಾವು ಯಾವುದು? ಇದು ನಿಜವಾಗಿಯೂ ವಿಷಕಾರಿಯೇ? ಅಲ್ಲವೇ? ಎಂಬೆಲ್ಲಾ ಪ್ರಶ್ನೆಗಳು ಕಾಡಿದ್ದವು. ಸಂಜೆ ಅಪ್ಪ ಮನೆಗೆ ಬಂದಾಗ ತಡಮಾಡದೆ ಆ ಹಾವಿನ ಚಿತ್ರ ತೋರಿಸಿ ಇದು ಯಾವ ಹಾವು ಎಂದು ಕೇಳಿದೆ. ಅಪ್ಪ ಇದು ಒಂದು ವಿಷಕಾರಿ ಹಾವು ಎಂದು ತಿಳಿದಿದೆಯಾದರೂ ಅದರ ಹೆಸರು ಗೊತ್ತಿಲ್ಲವೆಂದು ಹೇಳಿದರು. ನನ್ನೂರಿನ ಮೊಬೈಲ್ ನೆಟ್ವರ್ಕ್ ಹೆಚ್ಚಿನ ಸಮಯದಲ್ಲಿ ಕೆಲಸ ಮಾಡದೇ ಇರುವ ಕಾರಣ, ಕಾಲೇಜು ಆರಂಭವಾದ ನಂತರ ಹಾಸ್ಟೆಲ್ಲಿಗೆ ಬಂದಾಗ ನೆನಪಿನಲ್ಲಿ ಮೊದಲು ಈ ಹಾವಿನ ಹೆಸರು ತಿಳಿಯಬೇಕೆಂದು ಪಕ್ಷಿ ಹಾಗೂ ಇತರೆ ಜೀವಿಗಳ ಬಗೆಗಿನ ಹೆಚ್ಚಿನ ಅರಿವಿರುವ ಸಮಾನ ಮನಸ್ಕರ ವಾಟ್ಸಪ್ ತಂಡವೊಂದರಲ್ಲಿ ಹಾವಿನ ಫೋಟೋವನ್ನು ಕಳುಹಿಸಿ ಅದನ್ನು ಗುರುತಿಸಿ ಹೇಳಲು ಕೇಳಿಕೊಂಡೆ. ತಕ್ಷಣ ಉತ್ತರ ಬಂದಿದ್ದು, ಹಾವು ಹಾಗೂ ಪಕ್ಷಿಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನವನ್ನು ಹೊಂದಿರುವ ಮ್ಯಾಗ್ಸಿಮ್ ರವರಿಂದ, ಇದು “ಬಿಬ್ರೋನ್ ಹವಳದ ಹಾವು” (Bibron’s coral snake) ಎಂದು, ಅದನ್ನು ತಂಡದ ಅನೇಕರು ಒಪ್ಪಿದರು. ನಂತರ ಹೆಚ್ಚಿನ ಮಾಹಿತಿಗಾಗಿ ಗೂಗಲನ್ನು ಹುಡುಕಾಡಿದೆ.
ಹೌದು! ನಾನು ಕಂಡ ಚಿಕ್ಕ ಕಣ್ಣು, ಕಪ್ಪು ಮೂತಿ ಹಾಗೂ ಕಡು ಕೆಂಪು ಹವಳದ ಮೈ ಬಣ್ಣ, ಮತ್ತದರ ಅಂದವನ್ನು ಹೆಚ್ಚಿಸಿರುವ ತಲೆಯಿಂದ ಬಾಲದವರೆಗೂ ಇರುವ ಕಪ್ಪು ಪಟ್ಟಿಗಳನ್ನು ಹೊಂದಿರುವ ಹಾವು ಬೇರಾವುದೂ ಅಲ್ಲ, ಒಂದು ಪ್ರಭೇದದ ಹವಳದ ಹಾವು. ಅದೇ ಬಿಬ್ರೋನ್ ಹವಳದ ಹಾವು (Calliophis bibroni). ಇದು ಸಾಮಾನ್ಯವಾಗಿ 30 ರಿಂದ 88 ಸೆಂ. ಮೀ. ವರೆಗೆ ಬೆಳೆಯುತ್ತದೆ. ಅಷ್ಟಕ್ಕೇ ಇದು ವಿಶೇಷವಾಗಿಲ್ಲ, ಬದಲಿಗೆ ಇಡೀ ಜಗತ್ತಿನಲ್ಲಿಯೇ ಎಲ್ಲೂ ಕಾಣಸಿಗದ, ಕೇವಲ ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡುಬರುವ ಸ್ಥಳೀಯ ಹಾಗೂ ಒಂದು ಅಪರೂಪದ ವಿಷಕಾರಿ ಹಾವು ಇದಾಗಿದೆ. ಕರ್ನಾಟಕ ಹಾಗೂ ಕೇರಳ ರಾಜ್ಯದ ದಕ್ಷಿಣ ಭಾಗ ಮತ್ತು ತಮಿಳುನಾಡಿನ ವಾಯುವ್ಯ ಭಾಗದ ಆರ್ದ್ರ ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಈ ವಿಧದ ಹಾವುಗಳು ವಿಷಕಾರಿಯಾದರೂ ಮನುಷ್ಯನಿಗೆ ಕಚ್ಚಿದ ವರದಿ ಅತ್ಯಂತ ಕಡಿಮೆ ಅಥವಾ ಇಲ್ಲ. ಇತರೆ ಸಣ್ಣ ಹಾವುಗಳನ್ನು ತಿಂದು ಬದುಕುವ ಈ ಬಿಬ್ರೋನ್ ಹವಳದ ಹಾವುಗಳು ಮಳೆಗಾಲದಲ್ಲಿ ಕಾಣಲು ಸಿಗುತ್ತವೆ ಮತ್ತು ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯನ್ನು ಹೊಂದಿದ್ದು, ಹಗಲಿನ ವೇಳೆಯಲ್ಲಿ ಕಂಡುಬರುವುದು ಬಹು ವಿರಳ.
ಅದಲ್ಲದೆ ಬಿಬ್ರೋನ್ ಹವಳದ ಹಾವುಗಳು ಪಶ್ಚಿಮಘಟ್ಟದ ಸ್ಥಳೀಯ ಪ್ರಭೇದಗಳಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ ಪಶ್ಚಿಮಘಟ್ಟದಲ್ಲಾಗುತ್ತಿರುವ ಅರಣ್ಯ ನಾಶ, ರಸ್ತೆ ವಿಸ್ತರಣೆ, ನದಿ ತಿರುವು ಯೋಜನೆಗಳು, ಅಣೆಕಟ್ಟು ಮತ್ತು ವಿದ್ಯುತ್ ಸ್ಥಾವರಗಳ ನಿರ್ಮಾಣ, ಅವೈಜ್ಞಾನಿಕ ಕೃಷಿ ಹಾಗೂ ರಾಸಾಯನಿಕಗಳ ಬಳಕೆ, ಮುಂತಾದ ವ್ಯತಿರಿಕ್ತ ಪರಿಣಾಮ ಇವುಗಳ ಆವಾಸಸ್ಥಾನದ ನಾಶಕ್ಕೆ ದಾರಿಮಾಡಿಕೊಡುತ್ತಿದೆ. ಈ ಹವಳದ ಹಾವು ಹಾಗೂ ಇಂತಹ ಅನೇಕಾನೇಕ ಸ್ಥಳೀಯ ಮತ್ತು ಅಪರೂಪದ ಜೀವರಾಶಿಗಳಿಗೆ ವಾಸತಾಣವಾಗಿರುವ ಪಶ್ಚಿಮ ಘಟ್ಟಗಳು ಇಂದು ಮನುಷ್ಯನ ಸ್ವಾರ್ಥಕ್ಕೆ ಬಲಿಯಾಗಿ ನಲುಗುತ್ತಿರುವುದು ವಿಷಾದನೀಯ. ಇನ್ನಾದರೂ ಪ್ರಕೃತಿಯ ಸಂರಕ್ಷಿಸುವ ಸಂಕಲ್ಪ ಮಾಡಿಕೊಂಡು ನಮ್ಮ ಮುಂದಿನ ಜನಾಂಗಕ್ಕೆ ಈ ಕೆಂಪು ಹವಳದ ಸರವನ್ನು ಸಂರಕ್ಷಿಸಿ ಕೊಡುವ ಪ್ರತಿಜ್ಞೆ ಮಾಡೋಣ.
ಲೇಖನ: ಅಕ್ಷತ ಹೆಚ್. ಕೆ .
ಚಿಕ್ಕಮಗಳೂರು ಜಿಲ್ಲೆ