ಪುಂಡಾನೆ

ಪುಂಡಾನೆ

© ಹೇಮಂತ ಕುಮಾರ್ ಟಿ. ಎಂ.

ನನ್ನೂರು ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ. ಸುತ್ತಲೂ ಕಾಡಿನಿಂದ ಸುತ್ತುವರೆದಿರುವ ರಮಣೀಯ ಸ್ಥಳ. ಕಾಡಿಗೂ ನಮ್ಮೂರಿಗೂ ಇರುವ ಈ ಅವಿನಾಭಾವ ಸಂಬಂಧವೋ ಏನೋ, ಚಿಕ್ಕಂದಿನಿಂದಲೂ ಕಾಡು, ಕಾಡು ಪ್ರಾಣಿಗಳನ್ನು ಕಂಡರೆ ನನಗೆ ಏನೋ ಪ್ರೀತಿ. ಅವುಗಳನ್ನು ನೋಡುವ ಆಸೆ, ಕುತೂಹಲ. ವರುಷಗಳು ಉರುಳಿದಂತೆ ವಿದ್ಯಾಭ್ಯಾಸಕ್ಕಾಗಿ, ಉದ್ಯೋಗಕ್ಕಾಗಿ ಬೆಂಗಳೂರು, ಮೈಸೂರು ಪಟ್ಟಣಗಳಿಗೆ ನಮ್ಮೆಲ್ಲ ಸ್ನೇಹಿತರ ಬಳಗ ಹಂಚಿಹೋಯಿತು. ಈ ವಿದ್ಯಾಭ್ಯಾಸದಿಂದ ನಮ್ಮೆಲ್ಲರಿಗೂ ಸಾರ್ವತ್ರಿಕ ರಜೆ ಸಿಕ್ಕಾಗ ಮತ್ತೆ ಊರಿಗೆ ಹೋಗುವುದು ಸಂಭ್ರಮದ ರೀತಿಯೇ ಆಗುತ್ತಿತ್ತು. ಊರಿಗೆ ಹೋಗುವ ತಯಾರಿ ಎಷ್ಟರ ಮಟ್ಟಿಗೆ ನಮ್ಮನ್ನು ಕಾಡುತ್ತಿತ್ತೆಂದರೆ ನಮ್ಮೂರ ಪ್ರಕೃತಿ ಸೌಂದರ್ಯ ಕನಸಿನಲ್ಲಿ ಬಂದು ನಮ್ಮ ನಿದ್ದೆಯನ್ನು ಒಂದೆರಡು ದಿನ ಕಸಿದುಕೊಳ್ಳುತ್ತಿತ್ತು.

ಬಹಳ ದೂರವಿದ್ದ ಬೆಂಗಳೂರಿನಿಂದ ಊರಿಗೆ ರಜೆಗೆಂದು ಬರುತ್ತಿದ್ದ ನಾನು ಸಾಧಾರಣವಾಗಿ ಎರಡರಿಂದ ಮೂರು ದಿನಗಳು ಊರಿನಲ್ಲಿ ಕಳೆಯುವಂತೆ ಯೋಜನೆ ರೂಪಿಸಿಕೊಂಡು ಬರುತ್ತಿದ್ದೆ. ಊರಿಗೆ ಬಂದ ಮೇಲೆ ಎಂತಹ ದೊಡ್ಡ ಕೆಲಸವೇ ಇರಲಿ, ಯಾವುದೇ ಕರ್ತವ್ಯ ಇರಲಿ ಹೇಗಾದರೂ ಮಾಡಿ ನಮ್ಮೂರಿನಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿರುವ ಬಿಳಿಗಿರಿ ರಂಗನ ಬೆಟ್ಟಕ್ಕೆ ಆ ಸಮಯದಲ್ಲಿ ದೊರೆಯುವ ಗೆಳೆಯರೊಂದಿಗೆ ಹೋಗುವುದು ರೂಢಿಯಾಗಿಬಿಟ್ಟಿತ್ತು. ಈ ಬಾರಿಯೂ ರಜೆಗೆಂದು ಊರಿಗೆ ಹೋದ ನನಗೆ ಜನಾರ್ಧನ ಮತ್ತು ಮಲ್ಲೇಶ ಜೊತೆಯಾದರು. ಅವರೊಂದಿಗೆ, ಎಂದೋ ಒಮ್ಮೊಮ್ಮೆ ನಮ್ಮೊಡನೆ ಅಲೆದಾಡಲು ಬರುವ ಪುನೀತನು ಈ ಬಾರಿ ಹೇಗೋ ಸೇರಿಕೊಂಡನು. ನಾವು ಬಿಳಿಗಿರಿ ರಂಗನ ದರ್ಶನಕ್ಕೆಂದು ಹೊರಟದ್ದು ತೀರಾ ಕಡಿಮೆ. ಕಾಡು, ಕಾಡುಪ್ರಾಣಿಗಳ ವೀಕ್ಷಣೆಯೇ ನಮ್ಮ ಆದ್ಯತೆಯಾಗಿದ್ದರಿಂದ ಬೆಳಗಿನಜಾವ ಅಥವಾ ಸಂಜೆ ಹೊತ್ತಿಗೆ ಹೊರಡುವುದು ವಾಡಿಕೆಯಾಗಿಬಿಟ್ಟಿತ್ತು. ಅಂದು ಮಧ್ಯಾಹ್ನ ಮೂರು ಗಂಟೆಯ ಸಮಯ ಸೂರ್ಯ ಕೊಂಚ ತನ್ನ ಕೆಲಸ ಜೋರಾಗಿಯೇ ನಡೆಸಿದ್ದ. ನಾಲ್ವರು ಕೂಡಿ ಎರಡು ಬೈಕ್ ಗಳಿಗೆ ಪೆಟ್ರೋಲ್ ತುಂಬಿಸಿಕೊಂಡು ಹೊರಟೆವು. ದಾರಿಯುದ್ದಕ್ಕೂ ಪಕ್ಕದ ಗದ್ದೆಗಳಲ್ಲಿ ಮಿಂಚುಳ್ಳಿ, ಕಾಜಾಣ, ಪಿಕಳಾರ, ಗಣಿಗಾರಲು ಹಕ್ಕಿಗಳನ್ನು ನೋಡುತ್ತಾ ಸಾಗಿ ಬಿಳಿಗಿರಿ ರಂಗನ ಬೆಟ್ಟದ ಚೆಕ್ ಪೋಸ್ಟ್ ತಲುಪಿದೆವು. ಅಲ್ಲಿದ್ದ ಅರಣ್ಯ ಸಿಬ್ಬಂದಿಗೆ ಕೊಳ್ಳೆಗಾಲದವರೆಂದು ಹೇಳಿ ಅವರಿಂದ ಬಂದ ಆರು ಗಂಟೆಯೊಳಗೆ ಹಿಂತಿರುಗಬೇಕೆಂಬ ನಿಯಮಕ್ಕೆ ಒಪ್ಪಿಗೆ ಸೂಚಿಸಿ ಕಾಡಿನ ಒಳಗೆ ಪ್ರವೇಶ ಮಾಡಿದೆವು. ಕೊಂಚ ದೂರ ಕಾಡಿನ ದಾರಿಯಲ್ಲಿ ನಿಧಾನವಾಗಿ ಬೈಕ್ ನಡೆಸುತ್ತ ಹೊರಟ್ಟಿದ್ದ ನಮಗೆ ರಸ್ತೆಯ ಬಿಳಿ ಪಟ್ಟೆಯ ಮೇಲೆ ಹೆಬ್ಬಾವಿನ ಮರಿಯೊಂದು ಬಿಸಿಲು ಕಾಯಿಸುತ್ತಾ ನಮ್ಮನ್ನು ಸ್ವಾಗತಿಸಿತು. ಮೊದಲ ಬಾರಿ ಕಾಡಿನಲ್ಲಿ ಹೆಬ್ಬಾವಿನ ಮರಿ ನೋಡಿದ ನನಗೆ ಬಹಳ ಆನಂದವಾಯಿತು. ಹಾಗೆ ಕೊಂಚ ಬೈಕ್ ನಿಧಾನಿಸಿ ಒಂದು ಚಿತ್ರ ಕ್ಲಿಕ್ಕಿಸಿ ಮುನ್ನಡೆದವು. ದಾರಿಯುದ್ದಕ್ಕೂ ಗಿಜಗಾರ್ಲು ಹಕ್ಕಿಗಳ ದಂಡು ದರ್ಶನ ನೀಡಿದವು, ಜೊತೆಗೆ ಕಾಜಾಣ, ಪಿಕಳಾರ ಹಕ್ಕಿಗಳು ಕಂಡವು. ನಿಧಾನವಾಗಿ ನಿಸರ್ಗವನ್ನು ಸವಿಯುತ್ತ ಹಾಗೆ ಬೆಟ್ಟದ ಮೇಲಿರುವ ದೇವಸ್ಥಾನದ ಬಳಿಗೆ ತಲುಪಿದೆವು.

© ಹೇಮಂತ ಕುಮಾರ್ ಟಿ. ಎಂ.

ಎಂದಿನ ವಾಡಿಕೆಯಂತೆ ದೇವರ ದರ್ಶನಕ್ಕೆ ಹೋಗದ ನಾವು, ನಮ್ಮ ವಿಶ್ರಾಂತಿ ತಾಣವಾದ ಬೋಂಡಾ ಅಂಗಡಿ ಬಳಿ ಕುಳಿತೆವು. ಆ ಅಂಗಡಿಯವನಿಗೆ ನಾವೆಲ್ಲ ಪರ್ಮನೆಂಟ್ ಗಿರಾಕಿಗಳಾಗಿದ್ದ ಕಾರಣ ಅಲ್ಲಿ ನಮ್ಮನ್ನು ಕಂಡೊಡನೆಯೇ ಅವನು ನಾವು ಕೇಳುವುದಕ್ಕೆ ಮುಂಚೆಯೇ ಎರಡೆರಡು ಮೊಟ್ಟೆ ಬೋಂಡದೊಂದಿಗೆ ಒಂದು ಟೀಯನ್ನು ಕೊಟ್ಟ. ಸಮಯ ಕಳೆಯುತ್ತಿದ್ದಂತೆ ಬಿಸಿಲು ಕಡಿಮೆಗೊಂಡು ತಣ್ಣನೆಯ ಗಾಳಿಗೆ ಕೊಂಚ ಚಳಿಯ ಅನುಭವ ಶುರುವಾಯಿತು. ಪ್ರಕೃತಿಯನ್ನು ಸವಿಯುತ್ತ ಬೆಚ್ಚನೆಯ ಟೀ ಕುಡಿಯುತ್ತ ಸುಮಾರು ದಿನಗಳ ನಂತರ ಸೇರಿದ್ದ ಎಲ್ಲರೂ ತಮ್ಮ ತಮ್ಮ ಕುಶಲೋಪರಿ ವಿಚಾರಿಸಲು ಶುರುಮಾಡಿದೆವು. ಚೆಕ್ ಪೋಸ್ಟ್ ನ ಬಳಿ ಅರಣ್ಯ ಸಿಬ್ಬಂದಿ ಹೇಳಿದ್ದ ಮಾತನ್ನು ನೆನಪಿಸಿಕೊಂಡ ಎಲ್ಲರೂ ಇನ್ನು ತಡ ಮಾಡಿದರೆ ಕಷ್ಟವಾಗುತ್ತದೆ ಎಂದು ಅಲ್ಲಿಂದಲೇ ಬಿಳಿಗಿರಿ ರಂಗನಿಗೆ ನಮಸ್ಕರಿಸಿ ಸುಮಾರು ಐದು ಗಂಟೆಗೆ ಹಿಂದಿರುಗಲು ಸಿದ್ಧವಾದೆವು. ನಾವು ವಾಪಸ್ಸಾಗುವ ರಸ್ತೆ ಇಳಿಜಾರಾದ ಕಾರಣ ಸ್ವಲ್ಪ ಮಟ್ಟಿಗೆ ಪೆಟ್ರೋಲ್ ಉಳಿಸುವ ಆಸೆಯಿಂದ ಬೈಕ್ ಎಂಜಿನ್ ಅನ್ನು ಆನ್ ಮಾಡದೆ ಹಾಗೆ ಬೆಟ್ಟ ಇಳಿಯಲು ಪ್ರಾರಂಭಿಸಿದೆವು.

© ಹೇಮಂತ ಕುಮಾರ್ ಟಿ. ಎಂ.

ನಾನು ಪುನೀತನ ಹೊಸ ಬೈಕ್ ಚಾಲೂ ಮಾಡುತ್ತಾ ಮುಂದೆ ಸಾಗುತ್ತಿದ್ದೆ, ಜನಾರ್ಧನ ಮತ್ತು ಮಲ್ಲೇಶ ನನ್ನ ಬೈಕ್ ನಲ್ಲಿ ನನ್ನನ್ನು ಹಿಂಬಾಲಿಸುತ್ತಿದ್ದರು. ಸುಮಾರು ಅರ್ಧ ಬೆಟ್ಟ ಇಳಿದಿರಬೇಕು ದೊಡ್ಡದೊಂದು ತಿರುವಿನಲ್ಲಿ ಏನೋ ಕಪ್ಪನೆಯ ಬಂಡೆ ಆಕಾರದಲ್ಲಿನ ವಸ್ತು ಚಲಿಸುವಂತೆ ಕಂಡಿತು. ಕೊಂಚ ಕಣ್ಣನ್ನು ದಿಟ್ಟಿಸಿ ನೋಡಿದ ನನಗೆ ಅಲ್ಲಿ ಮೇಯುತ್ತಿರುವುದು ಒಂದು ಆನೆ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ.  ಬೃಹದಾಕಾರದ ಹೆಣ್ಣಾನೆಯೊಂದು ರಸ್ತೆಯಿಂದ ಸ್ವಲ್ಪ ದೂರದಲ್ಲಿಯೇ ಮೇಯುತ್ತಿತ್ತು. ತಕ್ಷಣವೇ ಬೈಕ್ ಅನ್ನು ನಿಧಾನಕ್ಕೆ ರಸ್ತೆಯ ಪಕ್ಕಕ್ಕೆ ಸರಿಸಿ ಪುನೀತನಿಗೆ ಬೈಕ್ ಚಲಾಯಿಸಲು ಕೊಟ್ಟು ವಿಡಿಯೋ ತೆಗೆಯಲು ಹಿಂದೆ ಕುಳಿತೆ. ಆದರೆ ಕೊಂಚ ಮುಂದೆ ಸಾಗುವಷ್ಟರಲ್ಲಿ ಆ ಹೆಣ್ಣಾನೆಯ ಪಕ್ಕದಲ್ಲೇ ಇದ್ದ ಹೆಬ್ಬೆರಳು ಗಾತ್ರದ ದಂತ ಹೊಂದಿದ್ದ ಗಂಡಾನೆ, ಮಧ್ಯಮ ವಯಸ್ಸಿನ ಇನ್ನೊಂದು ಹೆಣ್ಣಾನೆ ಒಟ್ಟಾರೆ ಮೂರು ಆನೆಗಳು ಕಣ್ಣಿಗೆ ಬಿದ್ದವು. ಇವು ನಮ್ಮ ಕಣ್ಣಿಗೆ ಕಂಡ ಆನೆಗಳು, ಕಾಣದವು ಹಿಂದೆ ಇದ್ದ ಲಂಟಾನ ಪೊದೆಯಲ್ಲಿ ಅದೆಷ್ಟಿದ್ದವೋ ಆ ರಂಗನಿಗೆ ಗೊತ್ತು.  ನನ್ನ ಮೊಬೈಲ್ ಕ್ಯಾಮೆರಾ ಆನ್ ಮಾಡುವಷ್ಟರಲ್ಲಿ ಪುನೀತ ಗಾಡಿ ಚಾಲೂ ಮಾಡಿಯೇ ಬಿಟ್ಟ. ಆ ಚಿಕ್ಕ ಗಂಡಾನೆಗೆ ಏನಾಯಿತೋ ತಿಳಿಯದು ಕೇವಲ ನಾಲ್ಕೈದು ಸೆಕೆಂಡ್ಗಳಲ್ಲಿ ಕ್ರಮಿಸಿ ನಮ್ಮೆಡೆಗೆ ಧಾವಿಸಿ ಹತ್ತಿರ ಬಂದೇ ಬಿಟ್ಟಿತು. ಪುನೀತ ಹೇಗೋ ಬೈಕ್ಅನ್ನು ಡಾಂಬರು ರಸ್ತೆಯಿಂದ ಮಣ್ಣಿನ ರಸ್ತೆಗೆ ಇಳಿಸಿ ಮತ್ತೆ ಮೇಲೆ ಹತ್ತಿಸಿ ಬೈಕ್ ಕೆಳಗೆ ಬೀಳುವುದನ್ನು ತಪ್ಪಿಸಿ ಕೂದಲೆಳೆ ಅಂತರದಲ್ಲಿ ಇಬ್ಬರ ಪ್ರಾಣವನ್ನೂ ಉಳಿಸಿದ. ಆನೆ ಸಮೀಪಕ್ಕೆ ಬಂದಾಗ ಆನೆಯ ಕಹಳೆ ಶಬ್ಧ, ಅದರ ಉಸಿರು ಎಲ್ಲವೂ ನನ್ನ ದೇಹಕ್ಕೆ ಬಹಳ ಸ್ಪಷ್ಟವಾಗಿ ಅನುಭವವಾಗಿ ನನ್ನ ಕಾಲುಗಳು ನನ್ನ ನಿಯಂತ್ರಣ ಮೀರಿ ನಡುಗಲು ಶುರು ಮಾಡಿದ್ದವು. ಪುನೀತನಿಗೂ ಅದೇ ಅನುಭವ ಆಗಿರಬಹುದು! ನಾನು ಕೇಳಲು ಹೋಗಲಿಲ್ಲ ಏಕೆಂದರೆ ಅವನು ಬೈಕ್ ಚಲಾಯಿಸುತ್ತಿದ್ದ. ಅಲ್ಲಿಯವರೆಗೂ ಹಿಂದೆ ಬರುತ್ತಿದ್ದ ಜನಾರ್ಧನ, ಮಲ್ಲೇಶನನ್ನು ಮರೆತಿದ್ದ ನಾನು ನೆನಪಿಸಿಕೊಂಡು ಹಿಂದೆ ತಿರುಗಿ ನೋಡಿದರೆ ಅವರು ಬೈಕ್ ಅನ್ನು ರಸ್ತೆಯಲ್ಲೇ ಅಡ್ಡಲಾಗಿ ಬಿಸಾಡಿ ಓಟ ಕಿತ್ತಿದ್ದರು. ಇಷ್ಟು ನಾಟಕಗಳು ನಡೆಯುತ್ತಿದ್ದರೂ ಲೆಕ್ಕಿಸದೆ ತನ್ನ ಭಂಡ ಧೈರ್ಯದಿಂದ ಮುನ್ನುಗ್ಗಿದ.

© ಹೇಮಂತ ಕುಮಾರ್ ಟಿ. ಎಂ.

ಇನ್ನೊಬ್ಬ ಪೇಟೆಯ ಸವಾರನ ಬೈಕ್ ಅನ್ನು ಆನೆಯು ಅಡ್ಡಲಾಗಿ ಕೆಳಗೆ ದಬ್ಬಿತ್ತು. ಪಕ್ಕದಲ್ಲೇ ಇದ್ದ ಕಾಲುವೆಗೆ ಬಿದ್ದ ಅವನು ಆಶ್ಚರ್ಯಕರ ರೀತಿಯಲ್ಲಿ ಎದ್ದು ನಮ್ಮೆಡೆಗೆ ಓಡಿ ಬಂದನು. ಬೈಕ್ ಹಳ್ಳದಲ್ಲಿ ಝಕಂ ಆಗಿತ್ತು. ಸುತ್ತಲೂ ಇದ್ದ ನಾವೆಲ್ಲರೂ ಭಯದಿಂದ ಮುಖ ನೋಡಿಕೊಳ್ಳುತ್ತಾ ನಿಂತಿದ್ದೆವೇ ಹೊರತು ಮಾತನಾಡಲು ಸ್ವರ ಬರುತ್ತಿರಲಿಲ್ಲ. ಶಾಂತವಾದ ವಾತಾವರಣವನ್ನು ಗಮನಿಸಿದ ಆನೆಯು ನಮಗೆ ಇವರಿಂದ ತೊಂದರೆ ಇಲ್ಲ ಎಂದು ತಿಳಿಯಿತೋ ಏನೋ ಮತ್ತೆ ಹೋಗಿ ಪಕ್ಕದಲ್ಲೇ ಮೇಯುತ್ತಿದ್ದ ಗುಂಪನ್ನು ಸೇರಿತು. ಆನೆಗಳು ಸ್ವಲ್ಪ ದೂರ ಸಾಗುವ ತನಕ ಕಾಯುತ್ತಿದ್ದ ನಾವು, ಹತ್ತು ಹದಿನೈದು ನಿಮಷಗಳು ಆದ ಮೇಲೆ ಕಾಲುವೆಯಲ್ಲಿ ಬಿದ್ದಿದ್ದ ಬೈಕ್ ಅನ್ನು ಪಟ್ಟಣದ ಹುಡುಗನಿಗೆ ಎತ್ತಲು ಸಹಾಯ ಮಾಡಿ ಮತ್ತಿಬ್ಬರು ಗೆಳೆಯರನ್ನು ಕೂಡಿಕೊಂಡು ಅಲ್ಲಿಂದ ಹೊರಟೆವು. ಆ ಗಾಬರಿಯಲ್ಲಿ ಏನೇನಾಗಿದೆ ಎಂದು ತಿಳಿಯದ ಜನಾರ್ಧನ, ಮಲ್ಲೇಶನು ತನ್ನ ದೇಹವನ್ನು ಪರೀಕ್ಷಿಸಿಕೊಳ್ಳುತ್ತಿದ್ದರು. ಸಣ್ಣ ಪುಟ್ಟ ಗಾಯಗಳಾಗಿದ್ದನ್ನು ಬಿಟ್ಟರೆ ರಂಗನ ದಯೆಯಿಂದ ಅಂತಹ ದೊಡ್ಡ ತೊಂದರೆಗಳೇನು ಆಗಿರಲಿಲ್ಲ. ಅಂತು ಆರು ಗಂಟೆಯಷ್ಟರಲ್ಲಿ ಚೆಕ್ ಪೋಸ್ಟ್ ದಾಟಿದೆವು.

ಎಲ್ಲರೂ ಶಾಂತವಾದ ಮೇಲೆ ಆ ಸಂದರ್ಭವನ್ನು ಅವಲೋಕಿಸಿದಾಗ ಆನೆ ಯಾಕೆ ಕೋಪಗೊಂಡಿತು ಎಂಬುದಕ್ಕೆ ನಮಗೆ ಹೊಳೆದ ಅಭಿಪ್ರಾಯವಿದು. ಅಲ್ಲಿಯ ತನಕ ಶಾಂತವಾಗಿ ಗಾಡಿಯನ್ನು ಆನ್ ಮಾಡದೆ ಬರುತ್ತಿದ್ದ ನಾವು ಅನೆಯ ಪಕ್ಕಕ್ಕೆ ಬಂದ ತಕ್ಷಣವೇ ಆನ್ ಮಾಡಿ ಶಬ್ಧಮಾಡಿದ್ದು! ಆನೆಗಳಿಗೆ ಗಾಬರಿಯನ್ನು ಉಂಟುಮಾಡಿರಬಹುದು. ಗುಂಪಿನ ಇತರ ಸದಸ್ಯರು ವಿಚಲಿತರಾಗದೆ ಇದ್ದದ್ದನ್ನು ಕಂಡು, ದಾಳಿ ಮಾಡಲು ಬಂದ ಆನೆಯು ಮತ್ತೆ ವಾಪಸ್ಸಾಗಿರಬೇಕು ಎಂದು. ಈ ಘಟನೆಯಾದ ನಂತರ ಎಲ್ಲರೂ ಇನ್ನೂ ಜಾಗರೂಕರಾದೆವು. ಆದಷ್ಟೂ ಕಾಡಿನ ಜೀವಿಗಳಿಗೆ ತೊಂದರೆಯಾಗದ ರೀತಿ ನೋಡಿ, ನಮ್ಮ ನಮ್ಮ ಪಾಡಿಗೆ ನಾವು ಬರುವುದೆಂದು ನಿಶ್ಚಯಿಸಿದ್ದೇವೆ.

© ಹೇಮಂತ ಕುಮಾರ್ ಟಿ. ಎಂ.


ಲೇಖನ: ಹೇಮಂತ ಕುಮಾರ್ ಟಿ. ಎಂ.
             ಚಾಮರಾಜನಗರ ಜಿಲ್ಲೆ
.

Spread the love
error: Content is protected.