ಪ್ರಕೃತಿ ಬಿಂಬ

© ತುಷಾರ್ ಜಿ. ಆರ್., ಬಾಲದ ತಾಳೆ ಚಿಟ್ಟೆ
ಈ ಚಿಟ್ಟೆ ಸ್ವಲ್ಪ ಸೋಮಾರಿ, ಹಾಗಾಗಿ ಇದು ಹಾರುವುದು ಅಪರೂಪ. ಹಾರಿದಾಗ ಬೆಂಕಿಯೇ ಹಾರುತ್ತಿದೆ ಎನಿಸುತ್ತದೆ. ಬೆಂಕಿಯಂತೆ ಉಜ್ವಲ ವರ್ಣವಿರುವ ಒಳ ರೆಕ್ಕೆಯೇ ಇದಕ್ಕೆ ಕಾರಣ. ಯಾವುದಾದರೂ ಒಂದು ಗಿಡ ಅಥವಾ ಮರದ ಎಲೆಯ ಮೇಲೆ ಹೋಗಿ ಗಂಟೆಗಟ್ಟಲೆ ಕುಳಿತು ಬಿಡುತ್ತದೆ. ರೆಕ್ಕೆಯನ್ನು ಕೂಡ ಬಿಚ್ಚುವುದಿಲ್ಲ. ಏನಾದರೂ ಕುಳಿತುಕೊಂಡಾಗ ರೆಕ್ಕೆ ಬಿಚ್ಚುವುದೇ ಎಂದು ನಾನೂ ಸತತ 20 ದಿನ ಗಮನಿಸಿದೆ. ಆದರೆ ಕೊನೆಗೂ ಅದು ರೆಕ್ಕೆ ಬಿಚ್ಚಲಿಲ್ಲ. ಆದರೆ ಹಾರುವಾಗ ಆ ರೆಕ್ಕೆಯ ಉಜ್ವಲ ವರ್ಣ ಕಾಣಿಸುತ್ತದೆ. ಹಾಗಾಗಿ ಪಕ್ಕದಿಂದ ತೆಗೆದಿರುವ ಚಿತ್ರ ಮಾತ್ರ ಸಿಕ್ಕಿದೆ.

© ತುಷಾರ್ ಜಿ. ಆರ್., ಸೂರ್ಯಪ್ರಕಾಶ ಚಿಟ್ಟೆ – ಗಂಡು
ಒಂದು ಮಳೆಗಾಲದಲ್ಲಿ ನಮ್ಮ ಊರಾದ ದಾವಣಗೆರೆಯಲ್ಲಿ ವಾತಾವರಣ ತುಂಬಾ ತಂಪಾಗಿತ್ತು. ಎಲ್ಲೆಲ್ಲೂ ತಂಗಾಳಿ ಹಾಗೂ ಮೋಡ ಮುಸುಕಿದ ವಾತಾವರಣ. ನಾನು ಫೋಟೋಗ್ರಫಿಗೆ ಹೋದಾಗ ಈ ಚಿಟ್ಟೆಯನ್ನು ಮೊದಲ ಬಾರಿ ಕಂಡೆನು. ಇದರ ಬಣ್ಣ ಬಹಳ ಮನಮೋಹಕವೆನಿಸಿತು. ಆ ಗಿಡಗಳ ಹಸಿರಿಗೂ ಈ ಚಿಟ್ಟೆಯ ಬಣ್ಣ ಎರಡು ಮನಮೋಹಕವಾಗಿತ್ತು. ಈ ಚಿಟ್ಟೆ ಸಾಮಾನ್ಯವಾಗಿ ಮಳೆ ಬೀಳುವ ಪ್ರದೇಶದಲ್ಲಿ ವಾಸಿಸುತ್ತದೆ. ಆಗ ಮುಂಗಾರಿನ ಸಮಯ, ಪ್ರಕೃತಿ ಸ್ವಲ್ಪ ಹಸಿರಾಗಿದ್ದ ಕಾರಣ ನಮ್ಮಲ್ಲಿಗೆ ಬಂದಿತ್ತು ಈ ಸುಂದರ ಚಿಟ್ಟೆ. ಹಿಮಾಲಯ, ಅಸ್ಸಾಮ್, ಸೌರಾಷ್ಟ್ರ, ಬಂಗಾಳ, ಶ್ರೀಲಂಕಾ, ಫಿಲಿಪೈನ್ಸ್, ಮಯನ್ಮಾರ್ ಹಾಗೂ ನಿಕೋಬಾರ್ ದ್ವೀಪಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತದೆ. ಮಳೆ ಬೀಳುವ ಪ್ರದೇಶದಲ್ಲಿ ಸಾಮಾನ್ಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಗಂಡು ಚಿಟ್ಟೆಗೆ ಮೇಲಿನ ರೆಕ್ಕೆಯ ಭಾಗ ಕಂಚುಕೆಂಪು ಬಣ್ಣ ಇರುತ್ತದೆ. ಕೆಳಭಾಗದಲ್ಲಿ ಹೊಳೆಯುವ ಬೆಳ್ಳಿ ವರ್ಣ ಇರುತ್ತದೆ. ಹೆಣ್ಣು ಚಿಟ್ಟೆಯ ರೆಕ್ಕೆಯ ಮೇಲ್ಭಾಗದಲ್ಲಿ ಕಪ್ಪುಕಂದು ಬಣ್ಣವಿರುತ್ತದೆ. ಅಲ್ಲಲ್ಲಿ ಬಿಳಿ ಮಚ್ಚೆ ಕೂಡ ಹೆಣ್ಣು ಚಿಟ್ಟೆಯ ರೆಕ್ಕೆ ಮೇಲೆ ಇರುತ್ತದೆ.

© ತುಷಾರ್ ಜಿ. ಆರ್., ನೀಲಿ ಹುಲಿ ಚಿಟ್ಟೆ
ಈ ಚಿಟ್ಟೆ ಬಿಸಿಲಲ್ಲಿ ತುಂಬಾ ಚೂಟಿಯಾಗಿ ಹಾರಾಡುತ್ತದೆ. ಅದಕ್ಕೆ ಕಾರಣ ಚಿಟ್ಟೆಯ ರೆಕ್ಕೆಗಳ ಮೇಲೆ ಇರುವ ಕಪ್ಪು ಪಟ್ಟಿ, ಅದು ಶಾಖವನ್ನ ಹೀರಿಕೊಂಡು ಹಾರಾಟಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ. ಬೆಳಕು ಜಾಸ್ತಿ ಇದ್ದಷ್ಟು ಇವುಗಳ ಹಾರಾಟ ಕೂಡ ಹೆಚ್ಚು. ನಮ್ಮ ದಕ್ಷಿಣ ಭಾರತದಲ್ಲಿ ಇವುಗಳು ಹೆಚ್ಚಾಗಿ ಇರುವುದನ್ನು ನಾವು ಗಮನಿಸಬಹುದು. ಇವುಗಳು ಮುಂಗಾರಿನ ಸಮಯದಲ್ಲಿ ವಲಸೆ ಹೋಗುತ್ತವೆ. ಅಶ್ಚರ್ಯದ ವಿಷಯ ಏನಂದರೆ ಇತ್ತೀಚಿಗೆ 2019ರಲ್ಲಿ ಈ Tirumala limniace ಚಿಟ್ಟೆ ಯುರೋಪ್ ನಲ್ಲಿ ಕೂಡಾ ಕಾಣಸಿಕ್ಕಿದ್ದು, ಮೊದಲ ಬಾರಿಗೆ ವರದಿಯಾಗಿದೆ.

© ತುಷಾರ್ ಜಿ. ಆರ್., ರಕ್ತ ಕೆಂಪಿ ಚಿಟ್ಟೆಗಳ ಮಿಲನ
ಈ ಚಿಟ್ಟೆಯು ಸಾಮಾನ್ಯವಾಗಿ ದಕ್ಷಿಣ ಭಾರತ, ಶ್ರೀಲಂಕಾ, ಮಾಲ್ಡಿವ್ಸ್ ಹೀಗೆ ದಕ್ಷಿಣ ಏಷ್ಯಾದ ಎಲ್ಲಾ ಪ್ರದೇಶಗಳಲ್ಲಿನ ಕಾಡುಗಳಿರುವ ಜಾಗಗಳಲ್ಲಿ ಹಾಗೂ ಬಯಲಿನ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಲಂಟಾನದ ಗಿಡ ಇರುವಲ್ಲಿ ಈ ಚಿಟ್ಟೆಗಳು ಹಾರಾಡುತ್ತ ಇರುವುದನ್ನು ನೀವು ಗಮನಿಸಬಹುದು. ಲಂಟಾನಾ ಗಿಡದ ಮಕರಂದ ಈ ಚಿಟ್ಟೆಗಳಿಗೆ ತುಂಬಾ ಇಷ್ಟ. ಈ ಚಿಟ್ಟೆಗಳು ಸೂಸುವ ವಿಷಕಾರಿ ದ್ರವ್ಯದಿಂದ ಬೇರೆ ಜೀವಿಗಳು ಇದನ್ನು ಬೇಟೆಯಾಡುವುದು ಕಷ್ಟ. ಈ ಕಾರಣದಿಂದ ಕಾಮನ್ ಮಾರ್ಮನ್ (Papilio polytes) ಚಿಟ್ಟೆಯು ಈ Crimson Rose ಚಿಟ್ಟೆಯನ್ನು ಹೋಲುವುದರಿಂದ ಬೇಟೆಗಾರರಿಂದ ತಪ್ಪಿಸಿಕೊಳ್ಳುತ್ತದೆ.
ಚಿತ್ರಗಳು – ಲೇಖನ : ತುಷಾರ್ ಜಿ. ಆರ್.
ದಾವಣಗೆರೆ ಜಿಲ್ಲೆ