ದುಬಾರಿ ದುಂಬಿ
©FAYE BENJAMIN
ಬಿ. ಎಮ್. ಟಿ. ಸಿ ಬಸ್ಸಿನ ಕೊರೆಯುವ ಕಿಟಕಿ ಗಾಜಿಗೆ ಕಿವಿತಾಗಿ ಎಚ್ಚರವಾಯ್ತು. ಬಸ್ಸು ಕುಲುಕುತ್ತಾ ಇನ್ನೂ ಕಾಡಿನ ದಾರಿಯಲ್ಲೇ ಸಾಗುತ್ತಿತ್ತು. ಮಾರ್ಕೆಟಿಗೆ ಹೋಗಿ ನಂತರ ಯಾರದೋ ಹೊಟ್ಟೆ ಸೇರಬೇಕಿದ್ದ ಟೊಮೋಟ ಹಣ್ಣಿನ ಚೀಲಗಳು ಬಳುಕುವ ಬಸ್ಸಿನ ಹಾಡಿಗೆ ತಾಳ ಹಾಕುತ್ತಿದ್ದವು. ಮಾರ್ಕೆಟ್ ಸಮೀಪಿಸುತ್ತಿದ್ದಂತೆ ಇಲ್ಲಿಯವರೆಗೆ ಬಸ್ಸಿನಲ್ಲಿದ್ದ ಮೌನವೆಲ್ಲಾ ಕರಗಿ ಗಜಿ-ಬಿಜಿಯ ಸದ್ದು ದುಂಬಿಯಂತೆ ಕಿವಿಯ ಬಳಿ ಗುಯ್ಗುಡುತ್ತಿತ್ತು. ಬಸ್ಸು ನಿಂತು ಜನರೆಲ್ಲಾ ಇಳಿಯುವುದರೊಳಗೆ ನಮ್ಮ ಚೀಲಗಳನ್ನು ಇಳಿಸಿಬಿಡಬೇಕಿತ್ತು. ನನ್ನ ಅಪ್ಪನ ಬಲವಾದ ಕೈಗಳನ್ನು ಗಟ್ಟಿಯಾಗಿ ಹಿಡಿದ ಚೀಲಗಳು ಒಂದೊಂದಾಗಿ ಇಳಿದು, ಮೈ ಮುರಿಯುತ್ತಾ ಮಾರ್ಕೆಟ್ ನೋಡುತ್ತಿದ್ದವು. ಅಷ್ಟರಲ್ಲಿ ಎಳೆಯುವ ಎರಡು ಚಕ್ರದ ಗಾಡಿಯೊಂದಿಗೆ ಬಂದ ಅಪರಿಚಿತ ವ್ಯಕ್ತಿ ಅವುಗಳ ಸ್ವಾತಂತ್ರ್ಯ ಕಸಿದುಕೊಂಡಂತೆ ತುಂಬತೊಡಗಿದನು. ಮೊದಲ ಬಾರಿಗೆ ಇದನ್ನೆಲ್ಲಾ ನೋಡುತ್ತಿದ್ದ ನನಗೆ, ಇದೊಂದು ವಿಭಿನ್ನ ಪ್ರಪಂಚ ಎಂದು ಅರಿವಾಯ್ತು. ನಮ್ಮ ಹಳ್ಳಿಯ ಬೀದಿಗಳನ್ನೇ ಹೆಚ್ಚಾಗಿ ನೋಡದ ನಾನು, ಇಂದು ಬೆಂಗಳೂರನ್ನು ನೋಡಿದ ಬಗ್ಗೆ ನನ್ನ ಸ್ನೇಹಿತರಿಗೆ ವಿವರಿಸಲೇಬೇಕೆಂದು ಆಗಲೇ ತೀರ್ಮಾನಿಸಿಬಿಟ್ಟೆ. ಇವೆಲ್ಲಾ ತಲೆಯಲ್ಲಿ ಓಡುತ್ತಿರುವಾಗಲೇ ನಾನು ಮತ್ತು ನನ್ನ ಅಪ್ಪ ಆ ಎರಡು ಚಕ್ರದ ಗಾಡಿಯ ಹಿಂದೆ ಓಡುತ್ತಿದ್ದೆವು. ಮುನಿದ ನಾಗರನಂತೆ
ಬುಸುಗುಟ್ಟುತ್ತಾ, ದಾರಿ ಕೇಳಿ ಗಾಡಿ ಎಳೆದುಕೊಂಡು ಆತ ನುಗ್ಗುತ್ತಿದ್ದ. ಆ ಜನಜಂಗುಳಿಯಲ್ಲೂ ಅವನನ್ನು ಸೇರಲು ನಾನು ಓಡಬೇಕಿತ್ತು. ಅವರಿವರ ಮಧ್ಯದಲ್ಲಿ ನುಸುಳುವಾಗ ಅವರು ಹಿಡಿದಿದ್ದ ಚೀಲಗಳಲ್ಲಿದ್ದ ತರಕಾರಿ, ಹಣ್ಣು-ಹಂಪಲುಗಳು ನನ್ನ ಮುಖ-ಮೂತಿಗೆ ತಗುಲಿ ನಗುತ್ತಿದ್ದವು. ಅವುಗಳ ಮಧ್ಯದಲ್ಲಿ, ದಾರಿಯ ಎರಡು ಕಡೆ ಕಾಣುತ್ತಿದ್ದ, ಯೂನಿಫಾರ್ಮ್ ಧರಿಸಿ ಸ್ಕೂಲಿಗೆ ಹೋಗುವ ಬಾಲಕರಂತೆ ಒಂದೇ ಬಣ್ಣದ ಹಣ್ಣುಗಳು ಸಾಲಾಗಿ ನಿಂತು ನನ್ನೊಡನೆ ಕಣ್ಣಾಮುಚ್ಚಾಲೆ ಆಡುತ್ತಿದ್ದವು. ಈ ವಿಸ್ಮಯಗಳ ಮೇಲೆ ಹರಿಸಿದ ಗಮನ ಪುನಃ ಎರಡು ಚಕ್ರದ ಎಳೆಯುವ ಗಾಡಿಯ ಮೇಲೆ ಹರಿಸಲು ತಿರುಗಿದರೆ, ಗಾಡಿಯೇ ಕಾಣುತ್ತಿಲ್ಲ. ಓಹ್, ಈ ಜನ ಸಾಗರದಲ್ಲಿ ಮುಳುಗಿ ಹೋಗುತ್ತೇನೆಂಬ ಭಯದ ಬೃಹತ್ತಾದ ಅಲೆ ಬಂದು ಇನ್ನೇನು ಅಪ್ಪಳಿಸಬೇಕೆನ್ನುವಷ್ಟರಲ್ಲಿ ಅಪ್ಪನ ಅಂಗಿ ಕಂಡಿತು. ದೀರ್ಘ ನಿಟ್ಟುಸಿರು ಬಿಟ್ಟು ಓಡಿ ಹೋಗಿ ಗಾಡಿಯ ಹಿಡಿದೆ. ಅಷ್ಟರಲ್ಲಿ ತರಕಾರಿಯ ಮಂಡಿಯೂ ಸೇರಿದ್ದೆವು. ಅಲ್ಲಿಯ ಅವರ ಆ ವ್ಯವಹಾರಗಳು ನಂಗೇನು ತಿಳಿಯಲಿಲ್ಲ ಎಂದಲ್ಲ, ಗಮನಿಸುತ್ತಲೇ ಇದ್ದೆ. ಮಂಡಿಯ ಮಾಲೀಕ ಹಾಕುತ್ತಿದ್ದ ಲೆಕ್ಕಗಳನ್ನು ಹಾಗೇ ದಿಟ್ಟಿಸುತ್ತಿದ್ದೆ. ಅಪ್ಪನೇನಾದರೂ ತಕ್ಷಣ, “ಒಟ್ಟು ಎಷ್ಟಾಯ್ತು ನೋಡು” ಎಂದು ಲೆಕ್ಕ ಕೇಳಿಬಿಟ್ಟರೆ? ಎಂಬ ಅರೆ ಭಯ. ಉತ್ತರ ಸರಿಯಾಗಿರದಿದ್ದರೆ, “ಸ್ಕೂಲಿಗೆ ಹೋಗಿ ಏನು ಕಲಿತೆ?” ಎಂದುಬಿಟ್ಟಾರೆಂದು ಮುಂಚೆಯೇ ತಯಾರಾಗಿದ್ದೆ. “ಯಾರು? ಮಗಾನಾ…?” ಎಂದು ಕೇಳಿದವರಿಗೆಲ್ಲಾ ನನ್ನ ಅಪ್ಪ ನಗುತ್ತಾ ಹೌದು ಎನ್ನುತ್ತಿದ್ದುದು, ಇನ್ನೂ ನೆನಪಿದೆ.
ಅದೇನೋ ಗೊತ್ತಿಲ್ಲ ಹಾಗೆಂದಾಗಲೆಲ್ಲಾ ಗರ್ವದ ನಗು ಒಳಗೆ. ಮಂಡಿಯಲ್ಲಿ ಹರಾಜು ನಡೆದು ಅಪ್ಪನ ಕೈಗೆ ಹಣ ಬಂದೊಡನೇ, ಓಹ್ ಇನ್ನೇನು ಭಯ ಏನು ಬೇಕಾದರೂ ಕೇಳಿ ತೆಗೆದುಕೊಳ್ಳಬಹುದೆಂಬ ಸಂತಸ. ಯಾರಿಗೂ ಹೇಳುವ ಹಾಗಿಲ್ಲ ಒಬ್ಬನೇ ಒಳಗೇ ಅನುಭವಿಸುತ್ತಿದ್ದೆ. ಹೇಳುತ್ತಾ ಹೋದರೆ ಇನ್ನು ಎಷ್ಟೋ ಇದೆ. ಕೆಲವು ಸಮಯದಲ್ಲಿ ಅಪ್ಪನ ಕೈಯಲ್ಲಿ ಮಂಡಿಯ ಮಾಲೀಕ ಇಡುತ್ತಿದ್ದ ದುಡ್ಡನ್ನು ಕಂಡು, ಇಂದು ನಾನು ಅಪ್ಪನನ್ನು ಏನೂ ಕೇಳಬಾರದೆಂದು ತೀರ್ಮಾನಿಸಿದ್ದೂ ಉಂಟು. ಒಂದೇ ದಿನದಲ್ಲಿ ಎಲ್ಲಾ ಭಾವನೆಗಳನ್ನು ಕಾಣಬಲ್ಲ ಅನಿಶ್ಚಿತ ಉದ್ಯೋಗ, ‘ವ್ಯವಸಾಯ’. ಇಂತಹ ಜೀವನ ಶೈಲಿಯ ಜನರ ಸಿಹಿ-ಕಹಿಗಳ ರುಚಿ ಅನುಭವಿಸಿದರೆ ಮಾತ್ರ ಅರಿವಾಗುತ್ತದೆ. ನಾನು ಕಂಡ ಹಾಗೆ ಈ ಮಿಶ್ರಣದಲ್ಲಿ ಕಹಿಯು ಹೆಚ್ಚುತ್ತಿರಲು ಮುಖ್ಯ ಕಾರಣ, ಬದಲಾದ ನಮ್ಮ ವ್ಯವಸಾಯ ಪದ್ದತಿ. ಹೌದು, ನಮ್ಮ ಇತ್ತೀಚೆಗಿನ ವ್ಯವಸಾಯ ಪದ್ದತಿಯಲ್ಲಿ ಬಳಸುತ್ತಿದ್ದ ರಾಸಾಯನಿಕಗಳ ಕಾರಣದಿಂದ ಮೊದಲಿಗೆ ಒಳ್ಳೆಯ ಲಾಭವನ್ನು ಕಂಡ ರೈತರು ಅದನ್ನೇ ಪೂರ್ಣ ಪ್ರಮಾಣದಲ್ಲಿ ಅಳವಡಿಸಿಕೊಂಡು ಈಗ ನಷ್ಟದ ಆಳದ ಬಾವಿಗೆ ಬಿದ್ದಿದ್ದಾರೆ. ಈ ಹಾದಿಯಲ್ಲಿ ಕಳೆದುಕೊಂಡ ‘ರೈತ ಮಿತ್ರ’ರ ಅರಿವೇ ಇಲ್ಲದೆ ಈಗಲು ಬಾವಿಯಿಂದ ಮೇಲೇಳಲು ಹೆಣಗಾಡುತ್ತಿದ್ದಾರೆ.
ರಾಸಾಯನಿಕ ಪದ್ಧತಿಯ ಆರಂಭದ ಸಿಹಿಯ ಅನುಭವಕ್ಕೆ ತುತ್ತಾಗಿ, ಈಗ ನಷ್ಟವೆಂಬ ರಾಕ್ಷಸನ ಹಸಿವಿಗೆ ತುತ್ತಾಗುತ್ತಿದ್ದಾರೆ. ರಾಸಾಯನಿಕ ಬಳಸಿ ಮಾಡುವ ವ್ಯವಸಾಯದಿಂದ ಮಣ್ಣು ಕ್ರಮೇಣ ವಿಷವಾಗಿರುವುದು ಈಗೀಗ ಕೆಲವರಿಗೆ ಅರಿವಾಗುತ್ತಿದ್ದರೆ, ಚಿಕ್ಕವರಿದ್ದಾಗ ಕಲಿತಿದ್ದ ರೈತ ಮಿತ್ರ ಎರೆಹುಳು ಮಾತ್ರವಲ್ಲದೆ, ಇರುವೆ, ಜೇಡ, ದುಂಬಿ, ಪಕ್ಷಿ, ಸೂಕ್ಷ್ಮ ಜೀವಿಗಳೆಷ್ಟೋ ಮಂದಿ ರೈತನ ಇಳುವರಿಗೆ ಶ್ರಮಿಸುತ್ತಿದ್ದವು ಎಂಬುದನ್ನು ಈಗೀಗ ಕಣ್ಣು ತೆರೆದು ನೋಡುವ ಹಾಗಾಗಿದೆ. ಬಹುಶಃ ಅವುಗಳ ನಿಜವಾದ ಮೌಲ್ಯವನ್ನು ರೂಪಾಯಿಗಳಲ್ಲಿ ಹೇಳಿದರೆ ಎಚ್ಚೆತ್ತು ಉಳಿಸಿಕೊಳ್ಳುತ್ತಾರೇನೋ… ಹಾಗಾದರೆ ಅದನ್ನೂ ನೋಡೋಣ ಬನ್ನಿ, ಅಮೇರಿಕಾದಲ್ಲಿಯೂ ದೊಡ್ಡ ಪ್ರಮಾಣದಲ್ಲಿ ವ್ಯವಸಾಯ ಮಾಡುವ ರೈತರಿದ್ದಾರೆ. ಅವರೂ ಸಹ ರಾಸಾಯನಿಕ ವ್ಯವಸಾಯವನ್ನು ಶುರು ಮಾಡಿದರು. ಮೊದಲಿಗೆ ಒಳ್ಳೆಯ ಫಲಿತಾಂಶವೇ ಬಂತು. ಅದನ್ನೇ ನಂಬಿ ಮುಂದೆ ಹೋದ ಅವರಿಗೆ ಬರಬರುತ್ತಾ ಇಳುವರಿ ಕುಂಟುತ್ತಾ ಸಾಗಿದಂತೆ, ಇನ್ನೂ ಹೆಚ್ಚು ರಾಸಾಯನಿಕ ಬಳಸಲು ಮುಂದಾದರು. ಆದರೂ ಅಂದುಕೊಂಡ ಯಶಸ್ಸು ಕಾಣಲಾಗಲಿಲ್ಲ. ನಂತರ ಸ್ವಲ್ಪ ಬುದ್ಧಿ ಉಪಯೋಗಿಸಿ ‘ಕೃತಕ ಜೇನು ಸಾಕಣೆ’ (ಪ್ರಾದೇಶಿಕವಲ್ಲದ ಜೇನು ಹುಳುಗಳಿಂದ) ಮಾಡಿ ಅದರಿಂದ ಆಗುವ ಪರಾಗಸ್ಪರ್ಶ ಕ್ರಿಯೆಯ ಮೂಲಕ ತಮ್ಮ ಇಳುವರಿ ಹೆಚ್ಚುತ್ತದೆಂಬ ವಿಜ್ಞಾನ ಜ್ಞಾನವನ್ನು ಬಳಸಿ ಮಾಡಿದರು. ಹೀಗೆ ಪ್ರತೀ ಬೀಳಿಗೆ (fall) ತಕ್ಷಣದ ಉಪಾಯ ಮಾತ್ರ ಹುಡುಕುತ್ತಾ ಹೊರಟರೇ ಹೊರತು ಮೂಲ ಕಾರಣವು ಅದಲ್ಲ ಅಥವಾ ಅದಕ್ಕೆ ಸೂಕ್ತ ಪರಿಹಾರವೂ ಅಲ್ಲ. ನಾವೂ ಸಹ ಅವರ ದಾರಿಯಲ್ಲೇ ಸಾಗುತ್ತಿದ್ದೇವೆ.
ಅಮೇರಿಕಾದಲ್ಲಿ ನಡೆದ ಒಂದು ಸಂಶೋಧನೆಯನ್ನು ವಿವರಿಸುತ್ತೇನೆ. ಅದನ್ನು ತಿಳಿದ ಬಳಿಕ ನಿಮಗೇನು ಅನ್ನಿಸುತ್ತದೆಯೋ ನೀವೇ ಅರ್ಥ ಮಾಡಿಕೊಳ್ಳಿ. ಸಂಶೋಧಕರು ಅಮೇರಿಕಾದ ಸುಮಾರು 131 ಸ್ಥಳಗಳಲ್ಲಿನ ವ್ಯವಸಾಯ ಭೂಮಿಯನ್ನು ಆರಿಸಿಕೊಂಡು, ಅಲ್ಲಿ ಬೆಳೆಯುವ 7 ಬಗೆಯ ಬೆಳೆಗಳನ್ನು ಪಟ್ಟಿ ಮಾಡಿಕೊಂಡರು. ಅದರಲ್ಲಿ ಕೃತಕವಾಗಿ ಸಾಕಿದ್ದ ಜೇನು ಹುಳುಗಳು ಬೆಳೆಯ ಒಟ್ಟು ಇಳುವರಿಗೆ ಎಷ್ಟು ಭಾಗವಹಿಸುತ್ತಿದ್ದವು ಎಂದು ಲೆಕ್ಕ ಹಾಕಿದರು. ಅದರಲ್ಲಿ ಅವರಿಗೆ ತಿಳಿದದ್ದು ಹೆಚ್ಚಾಗಿ ರಾಸಾಯನಿಕ ಬಳಸಿ ಬೆಳೆಯುವ ಬೆಳೆಗಳಲ್ಲಿ ಅವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೇ… ಅಲ್ಲಿಯ ಪ್ರಾದೇಶಿಕ ತಳಿಯ ಜೇನುಗಳು ಎಡೆಬಿಡದೆ ಅಲ್ಲಿಗೆ ಆದಷ್ಟು ಸಂಖ್ಯೆಯಲ್ಲಿ ಆಗಮಿಸಿ ಪರಾಗಸ್ಪರ್ಶ ಮಾಡುತ್ತಿದ್ದವಂತೆ, ಕೇವಲ ಈ ಪ್ರಾದೇಶಿಕ ತಳಿಯ ದುಂಬಿಗಳ ಕೊಡುಗೆಯನ್ನು ರೂಪಾಯಿಗಳಲ್ಲಿ ಲೆಕ್ಕ ಹಾಕಿದರೆ, ಅಲ್ಲಿನ ಮಿಶಿಗನ್ ಮತ್ತು ಪೆನ್ನಿಸಿಲ್ವೇನಿಯಾ ಪ್ರದೇಶದ ಸೇಬುಹಣ್ಣಿನ ಇಳುವರಿಯಲ್ಲಿ ಸುಮಾರು 1.06 ಬಿಲಿಯನ್ ಡಾಲರ್ ಅಂದರೆ 7,800 ಕೋಟಿಗೂ ಹೆಚ್ಚು ಇಳುವರಿ ಪ್ರಾದೇಶಿಕ ತಳಿಯ ದುಂಬಿಗಳಿಂದಲೇ ಆಗುತ್ತಿದೆ. ಫ್ಲೋರಿಡಾದಲ್ಲಿ ಬೆಳೆಯುವ ಕಲ್ಲಂಗಡಿ ಹಣ್ಣಿನ ಆದಾಯದಲ್ಲಿ 146 ಮಿಲಿಯನ್ ಡಾಲರ್ ಅಂದರೆ 1,084 ಕೋಟಿಗೂ ಹೆಚ್ಚು ಆದಾಯದಲ್ಲಿ ಕಾಡು ದುಂಬಿಗಳದ್ದೇ ಪಾತ್ರ. ಸಿಹಿ ಚೆರ್ರಿಯ ಆದಾಯದಲ್ಲಿ 145 ಮಿಲಿಯನ್ ಡಾಲರ್ ಅಂದರೆ 1,076 ಕೋಟಿಗೂ ಹೆಚ್ಚು. ಹೀಗೆ ಕೇವಲ 6 ಬೆಳೆಯ ಇಳುವರಿಯಲ್ಲಿ ಈ ಪ್ರಾದೇಶಿಕ ಅಥವಾ ಕಾಡು ದುಂಬಿಗಳ ಕೊಡುಗೆ ಲೆಕ್ಕ ಹಾಕಿದರೆ 1.5 ಬಿಲಿಯನ್ ಡಾಲರ್ ಗೂ ಹೆಚ್ಚು ಆದಾಯ ಇವುಗಳಿಂದಲೇ ಎಂದು ಸಂಶೋಧನೆ ಹೇಳುತ್ತಿದೆ. ನಾನಲ್ಲ.
ಇನ್ನು ಉಳಿದದ್ದು ನಿಮಗೆ ಬಿಟ್ಟದ್ದು. ಇದನ್ನು ಅಲ್ಲಗೆಳೆಯಲು ಅಂಶಗಳನ್ನು ಹುಡುಕುವುದೋ ಅಥವಾ ನಮ್ಮ ಸ್ವಾಭಾವಿಕ ವ್ಯವಸ್ಥೆಯ ಈ ಸೂಕ್ಷ್ಮ ಭಾಗವನ್ನೇ ಆಧಾರವಾಗಿಟ್ಟುಕೊಂಡು, ಅದರೊಂದಿಗೆ ಬೆರೆತು ಬಾಳ್ವೆ ನಡೆಸಬಹುದಾದಂತಹ ದೀರ್ಘ ಕಾಲದ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಂಡು ಮುಂದಿನ ಪೀಳಿಗೆಗೆಒಳ್ಳೆಯ ಮಾದರಿಯಲ್ಲದಿದ್ದರೂ, ಕೆಟ್ಟ ಮಾದರಿಗಳಾಗದಂತೆ ಎಚ್ಚರವಹಿಸುವುದೋ… ಎಲ್ಲಾ ನಮ್ಮ ನಮ್ಮ ಕೈಯಲ್ಲಿದೆ.
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.