ಮಿಂಚೇ ಮೆಡಿಸಿನ್. . . !

ಮಿಂಚೇ  ಮೆಡಿಸಿನ್. . . !

© DREW ANGERER_GET TY IMAGES

ಅಂದು ಮಳೆಯ ಸುಳಿವೇ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಮೋಡ ಕವಿದ ವಾತಾವರಣ. ಸಂಜೆಯ ಸಮಯ ರಾತ್ರಿಯ ಕತ್ತೆಲೆಗೆ ಕ್ಷಣಾರ್ಧದಲ್ಲಿ ಒಗ್ಗಿಕೊಂಡಿತು. ಕಂಡೂ ಕಾಣದಂತಹ ಅರೆ ಬೆಳಕು. ತಣ್ಣನೆ ಗಾಳಿ ಬೀಸುವ ಆ ಸಮಯವನ್ನು ಸವಿಯಲೆಂದೇ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಂಡೆಯ ಕಡೆಗೆ ಹೆಜ್ಜೆ ಹಾಕಿದೆ. ಹಾಗೆ ಕೂತು, ಮುಂದಿನ ಗಾಢ ಹಸಿರಿನ ಕಾಡು, ಸ್ತಬ್ಧ ಬಂಡೆ, ಮರ-ಗಿಡಗಳ ಮೇಲೆ ಹಾರಿ ಮನೆ ಕಡೆಗೆ ಪಯಣ ಬೆಳೆಸಿದ ಹಕ್ಕಿಗಳ ಸಾಲು, ನೀವೇ ಊಹಿಸಿಕೊಳ್ಳಿ ಎಂದು ಬಿಟ್ಟು ಬಿಟ್ಟಿದ್ದ ಮೋಡಗಳ ಚಿತ್ತಾರ ಎಲ್ಲವೂ ಒಂದು ರೀತಿಯ ಹೊಸ ಪ್ರಪಂಚವನ್ನೇ ಸೃಷ್ಟಿ ಮಾಡಿತ್ತು. ಈ ಪರಿಪೂರ್ಣ ಚಿತ್ತಾರ ನಂದೇ ಎಂದು ಸಾರುತ್ತಾ ಪ್ರಕೃತಿ ಹಾಕುತ್ತಿದ್ದ ಸಹಿ, ಮೋಡಗಳ ಮಧ್ಯೆ ಮೂಡುತ್ತಿದ್ದ ಮಿಂಚು ಹೇಳುತ್ತಿತ್ತು. ಹೀಗೆ ಮೂಡಿದ ಪ್ರಕೃತಿಯ ಚಿತ್ತಾರದ ಮಧ್ಯೆ ಆಗಾಗ್ಗೆ ಮೂಡುತ್ತಿದ್ದ ಈ ಮಿಂಚು ನನ್ನ ಗಮನ ಸೆಳೆಯಿತು. ಮಿಂಚಿನ ವೇಗದಲ್ಲಿ ಬಂದು ಹೋಗುತ್ತಿದ್ದ ಅದನ್ನು ಹೇಗಾದರೂ ಮಾಡಿ ನನ್ನ ಫೋನಿನ ಛಾಯಾಚಿತ್ರದಲ್ಲಿ ಬಂಧಿಸಬೇಕೆಂಬ ಮನಸ್ಸಾಯಿತು. ನನ್ನ ಮನಸ್ಸಿನ ಆಜ್ಞೆಯಂತೇ ಫೋನ್ ತೆಗೆದು, ಅದರಲ್ಲಿನ ಕ್ಯಾಮೆರಾ ಅಪ್ಲಿಕೇಷನ್ ತೆರೆದು ಕಾಯುತ್ತಾ ಕುಳಿತೆ. ಇಷ್ಟು ಹೊತ್ತು ಆಗಾಗ್ಗೆ ಬರುತ್ತಿದ್ದ ಮಿಂಚು ಫೋನ್ ತೆರೆದು ಕಾಯುತ್ತಾ ಕುಳಿತ ತಕ್ಷಣ ಮಾತ್ರ ಸುಳಿವಿಲ್ಲದಂತಾಯ್ತು.  ಆದರೂ ತಾಳ್ಮೆ ಕಳೆದು ಕೊಳ್ಳದೆ ಕಾಯುತ್ತಾ ಕುಳಿತೆ. ಮಿಂಚು ಬಂತು, ನಾನು ಬಲಕ್ಕೆ ನೋಡುತ್ತಿದ್ದರೆ ಎಡ ಭಾಗದಲ್ಲಿ ಬರುತ್ತಿತ್ತು. ಎಡಕ್ಕೆ ತಿರುಗಿದರೆ ಬಲ ಭಾಗದಲ್ಲಿ ಬಂದು ಹೋಗುತ್ತಿತ್ತು. ಅಪ್ಪಿ ತಪ್ಪಿ ನಾನು ಕ್ಯಾಮೆರಾ ಹಿಡಿದ ದಿಕ್ಕಿನಲ್ಲೇ ಬಂದರೂ ಎಷ್ಟು ಬೇಗ ಮಾಯವಾಗುತ್ತಿತ್ತೆಂದರೆ, ನಾನು ಫೋಟೋ ಕ್ಲಿಕ್ಕಿಸುವಷ್ಟರಲ್ಲಿ ಕಣ್ಮರೆಯಾಗುತ್ತಿತ್ತು. ಒಂದು ಕ್ಷಣ ಮಿಂಚು ನನ್ನ ಜೊತೆ ಆಟವಾಡುತ್ತಿದೆಯೇ ಎನಿಸುತ್ತಿತ್ತು. ಇಷ್ಟೆಲ್ಲಾ ಆದರೂ ಧೃತಿಗೆಡದೆ, ಕ್ಯಾಮೆರಾದಲ್ಲಿದ್ದ ‘ಬರ್ಸ್ಟ್ ಮೋಡ್’ ಬಳಸಿಕೊಂಡು ಸತತ ಪ್ರಯತ್ನ ಮಾಡಿ ಕೆಲವು ಚಿತ್ರಗಳನ್ನು ತೆಗೆದೆನಾದರೂ ಮಿಂಚಿನ ಎಲ್ಲಾ ಭಾಗಗಳು ಬರೆಲೇ ಇಲ್ಲ. ಕೆಲವಂತೂ ಮೋಡದ ಹಿಂದೆ ಬಚ್ಚಿಟ್ಟುಕೊಂಡು ಬರೀ ಬೆಳಕನ್ನು ಮಾತ್ರ ಬೀರುತ್ತಿತ್ತು. ಸರಿ ಆದದ್ದಾಯಿತು ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇದರಲ್ಲೇ ಮುಳುಗಿ ಹೋದರೆ ಮುಂದಿದ್ದ ಆ ಚಿತ್ತಾರವನ್ನು ಸವಿಯಲಾಗದೆಂದು ಮನದಟ್ಟಾಗಿ ಫೋನನ್ನು ತೆಗೆದು ಪಕ್ಕಕ್ಕಿರಿಸಿ ಮತ್ತದೇ ಮುಗುಳುನಗೆಯಿಂದ ನೋಡುತ್ತಾ ಕುಳಿತೆ…

ವರುಷಕ್ಕೊಂದು ಬಾರಿ ಬರುವ ಮಳೆಗಾಲದಲ್ಲಿ ಹಾಗೆ ಬಂದು ಹೀಗೆ ಹೋಗುವ ಈ ಮಿಂಚಿನ ಬಗ್ಗೆ ನಮಗೆಷ್ಟು ಗೊತ್ತು? ಬಹುಶಃ ಮಿಂಚು ಹೊಡೆದು ಮರ ಸುಟ್ಟು ಹೋಯಿತು, ಬಯಲಿನಲ್ಲಿದ್ದ ರೈತನಿಗೆ ಮಿಂಚು ಹೊಡೆಯಿತಂತೆ ಎಂಬ ಮಾಧ್ಯಮ ಸುದ್ಧಿಗಳು. ಕೆಲವರು ಮಿಂಚಿನ ಜೊತೆ ಅನುಭವಗಳನ್ನೂ ಹಂಚಿಕೊಂಡಿರಬಹುದು. ನನಗಿನ್ನೂ ನೆನಪಿದೆ ನನ್ನ ತಂದೆ ಯಾವಾಗಲೂ ಹೇಳುವರು, ಮಳೆ ಬರುವ ಸಮಯದಲ್ಲಿ ಮರಗಳ ಕೆಳಗೆ ನಿಲ್ಲಬಾರದು, ವಿದ್ಯುತ್ ಕಂಬಗಳ ಬಳಿ ಇರಬಾರದು. ಸಾಧ್ಯವಾದರೆ ಯಾವುದಾದರೂ ಕಟ್ಟಡದ ಒಳಗೆ ಸೇರಿಕೊಳ್ಳಬೇಕು ಎಂದು. ನಮ್ಮಮ್ಮ ಒಮ್ಮೆ ಹೇಳಿದ ನೆನಪು, ಇಂದ್ರನು ತನ್ನ ಬಿಳಿ ಆನೆಯ ಮೇಲೇರಿ ಹೋಗುವಾಗ ಆನೆಗೆ ಬೀಸುವ ಚಾಟಿಯ ಏಟಿಗೆ ಬರುವ ಬೆಳಕೇ ಮಿಂಚು, ಶಬ್ಧ ಗುಡುಗು ಎಂದು. ಪ್ರಾರಂಭದಲ್ಲಿ ನಾನೂ ಹಾಗೆ ಊಹಿಸಿಕೊಳ್ಳುತ್ತಿದ್ದೆ, ಚೆನ್ನಾಗಿರುತ್ತಿತ್ತು. ತರಗತಿಗಳು ಬದಲಾದಂತೆ ವಿಜ್ಞಾನವು , ಧನಾತ್ಮಕ ಮತ್ತು ಋಣಾತ್ಮಕದ ಸಮ್ಮಿಲನದ ಪರಿಣಾಮವೇ ಮಿಂಚು ಎಂಬ ವಾಸ್ತವವನ್ನು ತಿಳಿಸಿ, ಮಿಂಚಿನ ಬಗ್ಗೆ ನನಗಿದ್ದ ಪೌರಾಣಿಕ ಚಿತ್ರಣವನ್ನು ಸಂಪೂರ್ಣವಾಗಿ ಹಾಳು ಮಾಡಿತು. ಆದದ್ದು ಆಯಿತು. ವಿಜ್ಞಾನವೇ ಹಾಗೆ ಕೆಲವೊಮ್ಮೆ ನಾವು ಇದೇ ಸತ್ಯ ಎಂದು ತಿಳಿದುಕೊಂಡಿದ್ದರೆ ಅದನ್ನು ಸುಳ್ಳು ಮಾಡಿಬಿಡುತ್ತದೆ. ಹಾಗೆಯೇ, ಇದು ಹೀಗೆ ಆಗಲು ಸಾಧ್ಯವಿಲ್ಲ ಎಂದುಕೊಂಡದ್ದನು ಸಾಧ್ಯ ಎನ್ನುತ್ತೆ. ಉದಾಹರಣೆಗೆ ಇಲ್ಲಿ ನೋಡಿ, ಭೂಮಿಯ ವಾಯುಮಾಲಿನ್ಯಕ್ಕೂ, ಮಿಂಚಿಗೂ ಏನಾದರೂ ಸಂಬಂಧ ಇದೆಯೇ? ನಮ್ಮಂತಹ ಸಾಮಾನ್ಯರಿಗೆ ಇಲ್ಲ ಎಂದನಿಸುತ್ತದೆ ಅಲ್ಲವೇ? ಸರಿ ಆಯಿತು ಏನೋ ಸಂಬಂಧ ಇರಬಹುದು. ವಾಯುಮಾಲಿನ್ಯ ಮಿಂಚಿನ ತೀವ್ರತೆಯೋ, ಮತ್ತೊಂದನ್ನೋ ನಿರ್ಧರಿಸಲು ಸಹಾಯಕವಾಗಬಹುದೇನೋ ಎಂದು ಸುಮ್ಮನೆ ಊಹಿಸಬಹುದು ಕೆಲವರು. ಆದರೆ ನಮ್ಮ ವಾಯುಮಂಡಲದಲ್ಲಿನ ವಾಯು ಮಾಲಿನ್ಯವನ್ನು ಮಿಂಚು ಕಡಿಮೆ ಮಾಡುತ್ತವೆ ಎಂದರೆ ನಂಬಲಾದೀತೆ? ನೋಡಿ ಇದನ್ನೇ ಹೇಳಿದ್ದು ನಾನು. ಈ ಮಳೆ ಮೋಡಗಳನ್ನು ಅಭ್ಯಾಸ ಮಾಡಲೆಂದೇ ಕೆಲವು ವಿಮಾನಗಳನ್ನು ‘ನಾಸಾ (NASA) ಸಂಸ್ಥೆ ಬಿಟ್ಟಿದೆ. ಅವುಗಳು ಸಂಗ್ರಹಿಸಿದ ಮಾಹಿತಿಯ ಪ್ರಕಾರ ನೋಡುವುದಾದರೆ, ಮಿಂಚು ಬರುವ ಸಮಯದಲ್ಲಿ ಕೆಲವು ರಾಸಾಯನಿಕ ವಸ್ತುಗಳೂ ಉತ್ಪತ್ತಿಯಾಗುತ್ತವೆ. ಅದರಲ್ಲಿ ‘ಆಕ್ಸಿಡೆಂಟ್ಸ್ (oxidants)’ ಎಂಬುದೂ ಒಂದು ಬಗೆಯ ರಾಸಯನಿಕ ವಸ್ತು. ಇದು ವಾಯುಮಾಲಿನ್ಯಕ್ಕೆ ಕಾರಣರಾದ ‘ಮೀಥೇನ್’ ನಂತಹ ವಸ್ತುವಿನ ಜೊತೆ ಸೇರಿ ನೀರಿನಲ್ಲಿ ಕರಗುವ ಹಾಗೆ ಮಾಡಿ, ಮಳೆ ಬಂದಾಗ ಆ ಮಾಲಿನ್ಯಕಾರಕ ವಸ್ತುಗಳನ್ನೂ ಮಳೆಯ ಜೊತೆಯಲ್ಲಿ ಭೂಮಿಗೆ ತಂದು ಬಿಸಾಡುತ್ತದೆ. ಹೀಗೆ ಮಾಡಿದರೆ ವಾಯುಮಾಲಿನ್ಯ ಕಡಿಮೆ ಮಾಡಿದ ಹಾಗೆ ಅಲ್ಲವೇ?

ನಿಜ ಹೇಳುವುದಾದರೆ, ಮಿಂಚು ನೈಟ್ರಿಕ್ ಆಕ್ಸೈಡ್ (Nitric Oxide)’ ಅನ್ನು ಉತ್ಪಾದಿಸುತ್ತದೆ, ಆ ಆಕ್ಸೈಡ್ ನಿಂದ ‘ಹೈಡ್ರಾಕ್ಸೈಲ್ ರ‍್ಯಾಡಿಕಲ್ (hydroxyl radical)’ ಗಳಂತಹ ಆಕ್ಸಿಡೆಂಟ್ ಗಳು ಬರುತ್ತವೆ ಎಂಬ ವಿಷಯ ಸಂಶೋಧಕರಿಗೆ ಈಗಾಗಲೇ ತಿಳಿದಿದೆ. ಆದರೆ ನಾಸಾ ಸಂಸ್ಥೆಯ ಇತ್ತೀಚಿನ ಸಂಶೋಧನೆ ಹೇಳುತ್ತದೆ, ಮಿಂಚು ನೈಟ್ರಿಕ್ ಆಕ್ಸೈಡ್ ಗಳಂತಹ ಮಧ್ಯವರ್ತಿಗಳಿಲ್ಲದೆಯೇ ನೇರವಾಗಿ ಎರಡು ತರಹದ ಆಕ್ಸಿಡೆಂಟ್ಗಳು ಉತ್ಪತ್ತಿಯಾಗುತ್ತಿವೆ, ಅದೂ ಸಾವಿರಾರು ಸಂಖ್ಯೆಯಲ್ಲಿ. ಒಂದು ‘ಹೈಡ್ರಕ್ಸಿಲ್ ರ‍್ಯಾಡಿಕಲ್ (OH)’ ಆದರೆ, ಇನ್ನೊಂದು ‘ಹೈಡ್ರೋಪೆರಾಕ್ಸಿಲ್ ರ‍್ಯಾಡಿಕಲ್ (HO2)’. ಇವುಗಳು ನೂರು ಕೋಟಿ ಕಣಗಳಿಗೆ (parts per trillion) ಕೇವಲ ಬೆರಳೆಣಿಕೆಯಷ್ಟು ಕಣಗಳು ಮಾತ್ರ ಉತ್ಪತ್ತಿಯಾಗುತ್ತವೆ ಎಂದು ತಿಳಿಯಲಾಗಿತ್ತು. ಆದರೆ ಈಗ ಇವು ನೂರು ಕೋಟಿ ಕಣಗಳಿಗೆ ಹಲವಾರು ಸಾವಿರ ಕಣಗಳಾಗಿ ಉತ್ಪತ್ತಿಯಾಗುತ್ತಿವೆ ಎನ್ನುತ್ತಿದೆ ಈ ಸಂಶೋಧನೆ. ‘ಇದನ್ನು ನಾವು ಊಹಿಸಿಯೂ ಇರಲಿಲ್ಲ’ ಎನ್ನುತ್ತಾರೆ ಪೆನ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ವಿಲಿಯಮ್ ಬ್ರೂನ್. ‘ನಮಗೆ ಸಿಕ್ಕ ಸಂಖ್ಯೆಗಳು ತೀರಾ ಕಡಿಮೆ ಇದ್ದದ್ದರಿಂದ ಇದನ್ನು ನಾವು ಮೂಲೆಗೆ ಹಾಕಿದ್ದೆವು. ಆದರೆ ಈಗ ಈ ಸಂಖ್ಯೆಗಳಲ್ಲಿ ಹೈಡ್ರಾಕ್ಸಿಲ್  ಮತ್ತು ಹೈಡ್ರೋಪೆರಾಕ್ಸೈಲ್ ರ‍್ಯಾಡಿಕಲ್ ನೋಡುತ್ತಿದ್ದರೆ ಆಶ್ಚರ್ಯವಾಗುತ್ತದೆ ಎನ್ನುತ್ತಾರೆ.

ಇಡೀ ಭೂಮಿಯ ಮೇಲೆ ಒಂದು ಕ್ಷಣಕ್ಕೆ ಸುಮಾರು 1800 ಮಿಂಚುಗಳು ಬಂದು ಹೋಗುತ್ತವೆ. ಹಾಗಾದರೆ ಈ ಸಂಖ್ಯೆಯಲ್ಲಿ ಉತ್ಪತ್ತಿಯಾಗುವ ಆಕ್ಸಿಡ್ಯಾಂಟ್ ಗಳು ವಾಯುಮಂಡಲದ 2-16% ಹೈಡ್ರಾಕ್ಸೈಲ್ ರ‍್ಯಾಡಿಕಲ್ (OH) ಗಳು ಮಿಂಚಿನಿಂದಲೇ ಎಂದು ಅಂದಾಜಿಸಲಾಗಿದೆ. ಇದರಿಂದ ವಾಯುಮಂಡಲದ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಲು ಸಾಧ್ಯವಿದೆ. ಹಾಗೆ ನೋಡಿದರೆ ಭೂದೇವಿ ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಬೇಕಾದ ಸಲಕರಣೆಗಳನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದಾಳೆ. ಅವಳಿಗೆ ನಾವು ಅವಕಾಶ ಕೊಡುವ ಮನಸ್ಸು ಮಾಡಬೇಕು ಅಷ್ಟೇ. ಇಲ್ಲವಾದರೆ ಅವಳಿಗೇನು ನಷ್ಟವಿಲ್ಲ, ಇಂದಲ್ಲ ನಾಳೆ ಭೂಮಿ ಯಥಾಸ್ಥಿತಿಗೆ ಮರಳುತ್ತದೆ. ಅನುಭವಿಸಬೇಕಾಗಿರುವವರು ನಾವೇ… ಅಲ್ಲವೇ? ಯೋಚಿಸಿ ನೋಡಿ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.