ಮಂಗಳಕ್ಕೆ ಹಾರಬಲ್ಲ ಬ್ಯಾಕ್ಟೀರಿಯಾಗಳು !
ಅಂದು ಅಕ್ಟೋಬರ್ 28 2013 ವಿಜ್ಞಾನಿಗಳೆಲ್ಲ ಹಗಲು ರಾತ್ರಿ ಎನ್ನದೇ, ದಿನಕ್ಕೆ 18-20 ಘಂಟೆಗಳ ಕಾಲ ಕೆಲಸ ಮಾಡಿದ “ಮಂಗಳಾಯಾನ”ದ ಕನಸಿನ ಕೂಸನ್ನು (ಉಪಗ್ರಹ) ಮಂಗಳದ ಅಂಗಳಕ್ಕೆ ತಲುಪಿಸಲು ಪಿ. ಎಸ್. ಎಲ್. ವಿ (ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಎಂಬ ರಥದಲ್ಲಿ ಕೂರಿಸಿ ಶ್ರೀಹರಿಕೋಟಾದಿಂದ ಹಾರಿಸಲು ಎಲ್ಲಾ ಸಿದ್ಧತೆ ಮಾಡಿಯಾಗಿತ್ತು. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ, ಅಕ್ಟೋಬರ್ 28, 2013ರಂದು ‘ಮಂಗಳಾಯಾನ’ ಉಪಗ್ರಹದ ಉಡಾವಣೆಯಾಗಿ ದಾಖಲೆ ಬರೆಯಬೇಕಿತ್ತು. ಆದರೆ ಪೆಸಿಫಿಕ್ ಮಹಾಸಾಗರದಲ್ಲಿ ಸೂಕ್ತ ವಾತಾವರಣ ಇಲ್ಲದ ಕಾರಣ ಮಂಗಳಾಯಾನದ ಕನಸನ್ನು 5 ನವೆಂಬರ್ 2013ಕ್ಕೆ ಮುಂದೂಡಲಾಯಿತು. ನಂತರ ನಡೆದ ಯಶಸ್ವಿ ಉಡಾವಣೆಯಿಂದ ಭಾರತ ಬರೆದ ದಾಖಲೆಗಳನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೂ ಕೆಲವನ್ನು ಹೇಳಬೇಕೆನ್ನಿಸಿ ಹೇಳುತ್ತಿದ್ದೇನೆ…
• ‘ಮಂಗಳಯಾನ’ ಅನ್ಯಗ್ರಹಕ್ಕೆ ಕಳುಹಿಸಿದ ಭಾರತದ ಮೊದಲ ಉಪಗ್ರಹವಾಗಿದೆ. ಹೀಗೆ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ ನಾಲ್ಕೇ ನಾಲ್ಕು ರಾಷ್ಟ್ರಗಳಲ್ಲಿ ಭಾರತವೂ ಒಂದು.
• ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹ ಸುತ್ತಲು ಉಪಗ್ರಹವನ್ನು ಯಶಸ್ವಿಯಾಗಿ ಕಳುಹಿಸಿದ ಪ್ರಪಂಚದಲ್ಲೇ ಮೊದಲ ರಾಷ್ಟ್ರ ಭಾರತವೇ.
• ಅಮೇರಿಕಾ ದೇಶವು ತನ್ನ ಮಂಗಳ ಉಪಗ್ರಹ ಉಡಾವಣೆಗೆ ಸುಮಾರು 4,005 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತ್ತು. ನಮ್ಮ ಮಂಗಳಾಯಾನವು ಕೇವಲ 454 ಕೋಟಿ ರೂಪಾಯಿಗಳಲ್ಲಿ ಯಶಸ್ವಿಯಾಗಿ ಉಡಾಯಿಸಿದೆ. ಅಮೇರಿಕಾಗೆ ಹೋಲಿಸಿದರೆ ಹತ್ತರಲ್ಲಿ ಒಂದು ಭಾಗದಷ್ಟು ವೆಚ್ಚದಲ್ಲಿ ಉಪಗ್ರಹ ಕಳುಹಿಸಿ ಪ್ರಪಂಚದಲ್ಲೇ ಅತೀ ಕಡಿಮೆ ವೆಚ್ಚದಲ್ಲಿ ಈ ಕೆಲಸ ಮಾಡಿದ ಏಕೈಕ ದೇಶವಾಗಿದೆ.
298 ದಿನಗಳ ದೀರ್ಘಕಾಲ ಅಂತರಿಕ್ಷಾಯಾನ ಮಾಡಿ, ಸೆಪ್ಟೆಂಬರ್ 24, 2014ರಂದು ಯಶಸ್ವಿಯಾಗಿ ಮಂಗಳ ಗ್ರಹದ ಕಕ್ಷೆಯಲ್ಲಿ ನಮ್ಮ ಸ್ವದೇಶಿ ಉಪಗ್ರಹ ಮಂಗಳ ಗ್ರಹದ ಗುರುತ್ವದ ಬಾಹುಗಳಲ್ಲಿ ಸೇರಿ ಪ್ರದಕ್ಷಿಣೆ ಶುರು ಮಾಡಿತ್ತು. ಇಡೀ ಪ್ರಪಂಚವೇ ತಿರುಗಿ ನೋಡುವಂತೆ ಮಾಡಿದ ರೋಮಾಂಚಕಾರಿ ದಿನದ ಜೊತೆಗೆ ಭಾರತೀಯರೆಲ್ಲರೂ ಗರ್ವ ಪಡುವಂತ ಹೆಮ್ಮೆಯ ದಿನ ಅದು. ಏಕೆಂದರೆ ಇಡೀ ಪ್ರಪಂಚದಲ್ಲಿ ಇಂದಿಗೆ, 49 ಮಂಗಳಗ್ರಹದ ಸಂಶೋಧನೆಗೆಂದು ವಿಧ ವಿಧವಾದ ಉಪಗ್ರಹಗಳನ್ನು ಕಳುಹಿಸಲಾಗಿದೆ. ಆದರೆ ಅವುಗಳಲ್ಲಿ ಶೇಖಡಾ 50%ಕ್ಕಿಂತ ಕಡಿಮೆ ಪ್ರಯತ್ನಗಳು ಮಾತ್ರ ಯಶಸ್ವಿಯಾಗಿವೆ.
ನಮ್ಮ ಭೂಮಿಯ ಪಕ್ಕದಲ್ಲೇ ಇರುವ ಈ ಮಂಗಳ ಗ್ರಹಕ್ಕೆ ಜೀವವಿಲ್ಲದ ಉಪಗ್ರಹ ತಲುಪಿಸಿದರೆ ಅದು ಅಲ್ಲಿಗೆ ತಲುಪಲು ಕೆಲವು ತಿಂಗಳುಗಳಿಂದ ವರ್ಷಗಳೇ ಹಿಡಿಯುತ್ತದೆ. ಅಂತಹುದರಲ್ಲಿ ಯಾವುದೋ ಒಂದು ಬ್ಯಾಕ್ಟೀರಿಯಾಗಳು ನಾವು ಮಂಗಳಕ್ಕೆ ಹಾರಬಲ್ಲೆವು ಎನ್ನುತ್ತಿರುವುದನ್ನು ಕೇಳಿ ಜೀರ್ಣಿಸಿಕೊಳ್ಳಲು ಕಷ್ಟವಾಗದೇ ಹೋದೀತೆ. ಕಷ್ಟವೇ… ಆದರೆ ‘ಅಸಾಧ್ಯವಲ್ಲ’ ಎನ್ನುತ್ತಿದೆ ಈ ಹೊಸ ಸಂಶೋಧನೆ.
ರಾತ್ರಿಯ ವೇಳೆ ಊಟ ಮುಗಿಸಿ ಹೊರಗೆ ಬಂದು ತೇಗುತ್ತಾ ಆಕಾಶದತ್ತ ನೋಡಿದರೆ ಕಾಣುವ ಆ ನೀರವ ಕತ್ತಲೆಯ ಮಧ್ಯದಲ್ಲಿ ಮಿನುಗುವ ತಾರೆಗಳ ಗಮನಿಸುತ್ತಿದ್ದರೆ, ಬಾಹ್ಯಾಕಾಶದ ಮಧ್ಯೆ ತೆರಳಿ ವಿಹರಿಸಬೇಕೆನ್ನುವ ಆಸೆ ಮೂಡುತ್ತದೆ. ಆದರೆ ಇಲ್ಲಿಂದ ಕಾಣುವ ಹಾಗೆ ಬಾಹ್ಯಾಕಾಶ ಅಂತಹ ಶಾಂತಸ್ವರೂಪಿಯೇನೂ ಅಲ್ಲ. ಬದಲಿಗೆ ಅತೀ ಉಷ್ಣ, ವಿಕಿರಣಗಳಿಂದ ಕೂಡಿದ, ಕನಿಷ್ಠ ಒತ್ತಡದ ಅನಂತ ಆಸ್ತಿ. ಅಲ್ಲಿಯೇನಾದರೂ ಜೀವ ಇದ್ದರೆ ಸೆಕೆಂಡುಗಳಲ್ಲಿ ವಿಕಿರಣ ಮತ್ತು ಉಷ್ಣತೆಯಿಂದ ಸುಟ್ಟು ಬಿಡುವ ಅಥವಾ ಸ್ಪೋಟಗೊಳ್ಳುವ ಅವಕಾಶಗಳೇ ಹೆಚ್ಚು. ಇದಕ್ಕೆ ಬ್ಯಾಕ್ಟೀರಿಯಾಗಳೇನು ಹೊರತಲ್ಲ. ಆದರೇ… ‘ಡೈನೊಕೋಕಸ್’ ಎಂಬ ಕೇವಲ ಐದು ಪೇಪರುಗಳಷ್ಟು ದಪ್ಪ ಇದ್ದ ಬ್ಯಾಕ್ಟೀರಿಯಾ ಗುಂಪು ಯಾವುದೇ ಕವಚ ಅಥವಾ ರಕ್ಷಣೆ ಇಲ್ಲದೆ 3 ವರ್ಷಗಳ ಕಾಲ ಬಾಹ್ಯಾಕಾಶದಲ್ಲಿ ಬದುಕಿದ್ದವಂತೆ.
ಬ್ಯಾಕ್ಟೀರಿಯಾಗಳು ಮಾನವನಿರ್ಮಿತ ಉಲ್ಕೆಗಳ ಮಧ್ಯೆ ಬಾಹ್ಯಾಕಾಶದಲ್ಲಿ ಬದುಕಿರಬಲ್ಲವು ಎಂಬುದನ್ನು ಈಗಾಗಲೇ ಕಂಡುಹಿಡಿದಿದ್ದಾರೆ. ಆದರೆ ಹೀಗೆ ತೆರೆದ ಬಾಹ್ಯಾಕಾಶದಲ್ಲಿ ಬ್ಯಾಕ್ಟೀರಿಯಾಗಳು ಗುಂಪಿನಲ್ಲಿದ್ದರೆ ಬದುಕಬಲ್ಲವು ಎಂಬುದು ಅಚ್ಚರಿಯ ಸಂಗತಿಯೇ ಸರಿ. ಇದರಿಂದ ತಿಳಿಯುವುದೇನೆಂದರೆ ಬೇರೆ ಗ್ರಹಗಳಿಗೂ ಜೀವಿಗಳು ವರ್ಗಾವಣೆ ಆಗಬಲ್ಲ ಸಾಧ್ಯತೆಗಳಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಟೋಕಿಯೋದ ಬಾಹ್ಯಾಕಾಶ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ “ಅಕಿಹಿಕೋ ಯಮಗಿಶಿ” ಎಂಬ ಬಾಹ್ಯಾಕಾಶ ಜೀವವಿಜ್ಞಾನಿ ಮತ್ತು ಅವರ ಸಹೋದ್ಯೋಗಿಗಳು ಸೇರಿ, ನಮ್ಮ ಭೂಮಿಯ ವಾಯುಮಂಡಲದಲ್ಲಿ ಒಂದಾದ ‘ಸ್ಟಾಟೋಸ್ಫಿಯರ್’ ಅಲ್ಲಿ ಸಿಗುವಂತಹ ಮಾರಣಾಂತಿಕ ವಿಕಿರಣಗಳನ್ನು ತಡೆದು ಜೀವಿಸಬಲ್ಲ ಡೈನೋಕಾಕಸ್ ಎಂಬ ಬ್ಯಾಕ್ಟೀರಿಯಾವನ್ನು ‘ನಾಸಾ’ ಬಾಹ್ಯಾಕಾಶ ಸಂಸ್ಥೆಯ ಸಹಾಯದಿಂದ ಭೂಮಿಯಿಂದ ವಾತಾವರಣದ ಹೊರಗೆ, ಬಾಹ್ಯಾಕಾಶದಲ್ಲಿ ಈ ಬ್ಯಾಕ್ಟೀರಿಯಾ ಗುಂಪುಗಳನ್ನು ಇಡಲು ಸೂಚಿಸಿ ಕಳುಹಿಸಿದರು. ಪ್ರತೀ ವರ್ಷ ಒಂದೊಂದೇ ಗುಂಪನ್ನು ಭೂಮಿಗೆ ತಂದು ಅದಕ್ಕೆ ಬೇಕಾದ ಆಹಾರ ಕೊಟ್ಟು ಅದನ್ನು ಸಕ್ರಿಯಗೊಳಿಸಲು ತೀರ್ಮಾನಿಸಿದರು. ಹೀಗೆ ತಂದ ಬ್ಯಾಕ್ಟೀರಿಯಾ ಗುಂಪುಗಳಲ್ಲಿ 100 ಮೈಕ್ರೋಮೀಟರ್ ದಪ್ಪವಿದ್ದ ಗುಂಪು ಸಂಪೂರ್ಣವಾಗಿ ಸತ್ತು ಹೋಗಿತ್ತು (ಡಿ.ಎನ್.ಎ ನಾಶಗೊಂಡಿದ್ದವು). 500-1000 ಮೈಕ್ರೋಮೀಟರ್ ದಪ್ಪವಿದ್ದ ಬ್ಯಾಕ್ಟೀರಿಯಾ ಗುಂಪುಗಳಲ್ಲಿಯೂ ಸಹ ಹೊರಗಿನ ಜೀವಕೋಶಗಳು ವಿಕಿರಣದ ಹಾನಿಯಿಂದ ಬಣ್ಣ ಬದಲಾಗಿ ಸತ್ತುಹೋಗಿದ್ದವು. ಆದರೇ… ಈ 1000 ಮೈಕ್ರೋಮೀಟರ್ ದಪ್ಪವಿದ್ದ ಬ್ಯಾಕ್ಟೀರಿಯಾ ಗುಂಪಿನ ಮಧ್ಯಭಾಗದಲ್ಲಿದ್ದ 4% ಬ್ಯಾಕ್ಟೀರಿಯಾಗಳು ಬದುಕಿದ್ದವಂತೆ! ಸತ್ತು ಹೋಗಿದ್ದ ಹೊರಗಿನ ಬ್ಯಾಕ್ಟೀರಿಯಾ ಜೀವಕೋಶಗಳೇ ಒಳಗಿನ ಜೀವಕೋಶಗಳನ್ನು ಮೂರು ವರ್ಷಗಳ ಕಾಲ ಬದುಕಿರುವಂತೆ ರಕ್ಷಿಸಿದ್ದವು. ‘ಹಾಗಾದರೆ 1000 ಮೈಕ್ರೋಮೀಟರ್ ದಪ್ಪವಿದ್ದ ಬ್ಯಾಕ್ಟೀರಿಯಾ ಗುಂಪುಗಳು ಇನ್ನೂ 5 ವರ್ಷ ಬಾಹ್ಯಾಕಾಶದಲ್ಲಿ ಬದುಕಬಲ್ಲವು’ ಎನ್ನುತ್ತಾರೆ ಯಮಗಿಶಿ. ‘ಒಟ್ಟಾರೆ 8 ವರ್ಷಗಳ ಕಾಲ ಬ್ಯಾಕ್ಟೀರಿಯಾಗಳು ಬಾಹ್ಯಾಕಾಶದಲ್ಲಿ ಬದುಕಬಲ್ಲವೆಂದರೆ ನಮ್ಮ ಪಕ್ಕದ ಗ್ರಹವಾದ ಮಂಗಳಕ್ಕೆ ಕೂಡಾ ಹಾರಬಲ್ಲವು’ ಎಂದೂ ಸೇರಿಸುತ್ತಾರೆ.
“ಒಂದು ಗ್ರಹದಿಂದ ಜೀವಿಗಳು ಬಾಹ್ಯಾಕಾಶಕ್ಕೆ ಯಾವುದೇ ರೀತಿಯಲ್ಲಿ ಬೇಕಾದರೂ ಹೋಗಿ ಸೇರಬಹುದು. ಗಗನ ಯಾತ್ರಿಗಳ ಸಹಾಯದಿಂದ, ಅಯಸ್ಕಾಂತೀಯ ಅಲೆಗಳಿಂದ ಅಥವಾ ಇನ್ನೇನಾದರೂ.. ಹಾಗೇನಾದರೂ ಆಗಿ ಬೇರೆ ಗ್ರಹದಲ್ಲಿ ಜೀವಿಯನ್ನು ಕಂಡುಹಿಡಿದದ್ದೇ ಆದರೆ ಅವುಗಳ ಮೂಲವನ್ನು ಅನ್ವೇಷಿಸಿ ಹೋಗುವುದೇ ನನ್ನ ಜೀವನದ ಅಂತಿಮ ಗುರಿ” ಎಂದು ತಮ್ಮ ಜೀವನದ ಗುರಿಯನ್ನು ಯಮಗಿಶಿ ಹೇಳಿಕೊಳ್ಳುತ್ತಾರೆ.
ಅದೆಲ್ಲಾ ನೆನೆದರೆ ರೋಮಾಂಚನವಾಗುತ್ತದೆ. ಅದೆಲ್ಲಾ ಸರಿ ಅದರ ಜೊತೆ ಜೊತೆಗೆ, ಕೊರೊನಾ ವೈರಸ್ಸುಗಳಂತಹ ಜೀವಿಗಳೇನಾದರೂ! ಬಾಹ್ಯಾಕಾಶ ಸೇರಿಬಿಟ್ಟು, ಮುಂದೆ ಅವೇ ಕಂಟಕವಾಗಬಹುದು ಎಂಬುದೂ ಒಂದು ಕಹಿ ಸತ್ಯ ಅಲ್ಲವೇ..? ಅಷ್ಟೇ ಅಲ್ಲದೆ, ನಮ್ಮ ಮಾತೃಗ್ರಹವನ್ನು ಕಸವನ್ನಾಗಿ ಮಾಡಿ ಮುಂದಿನ ಜೀವನಕ್ಕಾಗಿ ಮಂಗಳ ಗ್ರಹಕ್ಕೆ ಹೊರಡುವ ಉದ್ದೇಶದಿಂದ ಮಾಡುವ ವೈಜ್ಞಾನಿಕ ಪ್ರಯತ್ನಗಳೇ, ಮುಖದಲ್ಲಿ ವ್ಯಂಗ್ಯ ನಗು ತರುತ್ತದೆ. ‘ಏಪ್ರಿಲ್ 22ರ ವಿಶ್ವ ಭೂಮಿ ದಿನ’, ‘ಮೇ 22ರ ವಿಶ್ವ ಜೀವವೈವಿಧ್ಯತೆಯ ದಿನ’ಗಳನ್ನು ಕೇವಲ ವಾಟ್ಸಾಪ್ ಸ್ಟೆಟಸ್ಸುಗಳಲ್ಲಿ, ಫೇಸ್ ಬುಕ್ ಸ್ಟೋರಿಗಳಲ್ಲಿ ಆಚರಿಸುವುದರ ಜೊತೆಗೆ ನಮ್ಮ ಮನಸ್ಸಿನಲ್ಲಿ ಕೂಡಾ ಆಚರಿಸಿದ್ದೇ ಆದರೆ ಒಂದಲ್ಲ ಒಂದು ದಿನ ನಾವೇ ಸ್ವತಃ, ನಮ್ಮ ಭೂಮಿಯನ್ನು, ನಮಗಾಗಿ, ನಮ್ಮ ಕೈಯಿಂದಲೇ ಉಳಿಸಿಕೊಳ್ಳುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡುವಲ್ಲಿ ಯಶಸ್ವಿಯಾಗುತ್ತೇವೆ. ಇಲ್ಲಿ ನನ್ನ ಪ್ರೀತಿಯ ಬರಹಗಾರರ ಒಂದು ಸುಂದರ ಮಾತು ನೆನಪಾಗುತ್ತದೆ…
“ಭೂಮಿ ನಮ್ಮ ಪಾಲಿಗೆ ಹಾಳಾಗುತ್ತದೆಯೇ ಹೊರತು, ಅದರ ಪಾಲಿಗಲ್ಲ.” -ಕೆ. ಪಿ. ಪೂರ್ಣಚಂದ್ರ ತೇಜಸ್ವಿ
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.