ಒಂಟೆಗೆ ಒಲಿದ ಮರಣದಂಡನೆ !

ಒಂಟೆಗೆ ಒಲಿದ ಮರಣದಂಡನೆ !

ಆಗತಾನೆ ತರಗತಿ ಮುಗಿಸಿ ಕಾರಿನ ಬಳಿ ಬಂದ ನಾನು, ಬಂದೊಡನೆ “ಯಾಕ್ಲಾ ಚನ್ನ… ಸುಸ್ತಾಗಿರೋ ಹಂಗಿದ್ಯಾ ಕಾರು ಓಡಿಸ್ಲಾ…” ಎಂದೆ. ಅದಕ್ಕವನು “ಸುಸ್ತೇನಿಲ್ಲಾ ನಿದ್ದೆ ಮಾಡಿ ಎದ್ದೆ ಅಷ್ಟೇ…” ಎಂದ. ಸರಿ ಎಂದು ನಾನು ಮತ್ತು ‘ಮದ’ ಕಾರನ್ನೇರಿ ಹೊರಟೆವು. ಚನ್ನ(ಅಲಿಯಾಸ್ ಚನ್ನೇಗೌಡ), ಮದ(ಅಲಿಯಾಸ್ ಪ್ರಸನ್ನ) ಮತ್ತು ನಾನು ಚಿಕ್ಕಂದಿನಲ್ಲಿ ಒಟ್ಟಿಗೆ ಓದಿದವರು. ಚನ್ನ ನಮ್ಮ ‘ಮಾಡೂ ಪ್ರಾಜೆಕ್ಟ್’ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಮದ ಆ ದಿನ ನಮ್ಮ ಜೊತೆ ತರಗತಿಗೆ ಸ್ವಯಂಸೇವಕನಾಗಿ ಬಂದಿದ್ದ. ತರಗತಿ ಮುಗಿಸಿ, ಇನ್ನೊಂದು ಶಾಲೆಯಲ್ಲಿದ್ದ ನನ್ನ ಅಕ್ಕನನ್ನು ಕಾರಿಗೇರಿಸಿಕೊಂಡು ಆಶ್ರಮಕ್ಕೆ ಹೊರಡಬೇಕಿತ್ತು. ದಾರಿಯಲ್ಲಿ ಊಟಕ್ಕೆಂದು ಕನಕಪುರದಲ್ಲಿ ನಿಲ್ಲಿಸಿದೆವು. ನಮಗೆ ಅಷ್ಟಾಗಿ ಹೋಟೆಲ್ ಊಟ ಹಿಡಿಸುವುದಿಲ್ಲ. ಹಾಗಾಗಿ ಸುಮಾರು ಸಂಶೋಧನೆ ಮತ್ತು ಹಲವರ ಸಲಹೆಯ ಬಳಿಕ ಮನೆಯ ಊಟದ ಹಾಗೆ ಮಾಡುವ ‘ಅಜ್ಜಿ ಮನೆ’ ಎಂದು ನಾವೇ ಹೆಸರಿಟ್ಟುಕೊಂಡ ಜಾಗದ ಬಳಿ ಹೋಗಿ ಊಟ ಮಾಡುತ್ತಿದ್ದೆವು. ಎರಡು ಚಪಾತಿ, ಒಂದು ರೈಸ್, ಒಂದೂವರೆ ವಡೆ ಮತ್ತು ಒಂದು ಲೋಟ ಮಜ್ಜಿಗೆ ಕುಡಿದ ಚನ್ನ. ಹೊಟ್ಟೆ ಹಸಿವು ದೂರಾದ ಚನ್ನನಿಗೆ ತಲೆ ಚೆನ್ನಾಗಿ ಕೆಲಸಮಾಡಿತು ಎನಿಸುತ್ತದೆ, ತಟ್ಟನೆ ಮನೆಗೆ ಈರುಳ್ಳಿ ತೆಗೆದುಕೊಂಡು ಹೋಗಬೇಕೆಂಬುದನ್ನು ನೆನಪಿಸಿಕೊಂಡು, ಗಾಡಿಯ ಕೀ ನನ್ನ ಕೈಲಿಟ್ಟು “ದಾರಿಗೆ ಬಾ, ನಾನು ಈರುಳ್ಳಿ ತಗೊಂಡ್ ಬರ್ತೀನಿ” ಎಂದು ಹೊರಟ. ನಾವೂ ಊಟ ಮುಗಿಸಿ ಗಾಡಿ ಹತ್ತಿ, ಮುಖ್ಯ ರಸ್ತೆಗೆ ಬಂದು ಕಪ್ಪು ಪ್ಲಾಸ್ಟಿಕ್ ಕವರ್ ಹಿಡಿದಿದ್ದ ಚನ್ನನನ್ನು ಕಾರಿಗೇರಿಸಿಕೊಂಡು ಹೊರೆಟೆವು. ಹತ್ತಿದೊಡನೆ ಚನ್ನ “ಬೈಕ್ ಗೆ ಪೆಟ್ರೋಲ್ ತಗೋಬೇಕು ಮುಂದೆ ನಿಲ್ಸಪ್ಪ” ಎಂದ. ಸ್ವಲ್ಪ ಮುಂದೆ ಹೊರಟು ಸಿಕ್ಕ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿ, ಪೆಟ್ರೋಲ್ ಹಾಕಿಸಿಕೊಂಡು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ.. ಕಾರನ್ನ ಸಮೀಪಿಸುತ್ತಿದ್ದ ಚನ್ನ “ಮಂಜಣ್ಣ ಕೇಳಿದ್ ತಕ್ಷಣ ಕೊಟ್ಟಾಗ್ಲೆ ನಾನ್ ಅನ್ಕೊಬೇಕಿತ್ತು” ಎಂದ. ಯಾಕೆ ಇವನು ಎನೆನೋ ಒಬ್ಬನೆ ಗೊಣಗುತ್ತಾ ಬರುತ್ತಿದ್ದಾನಲ್ಲಾ ಎನಿಸಿತು. ಬಾಟಲ್ ಅನ್ನ ಗುರುಗುಟ್ಟುತ್ತಾ ಬರುತ್ತಿದ್ದ ಚನ್ನನನ್ನು ಕಂಡ ನಮಗೆ ವಾಸ್ತವ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಯಾವುದನ್ನೂ ದಾರಾಳವಾಗಿ ಕೊಡದ ಅಂಗಡಿ ಮಂಜಣ್ಣ ಚನ್ನ ಪೆಟ್ರೋಲ್ ಗೆ ಬಾಟಲ್ ಕೇಳಿದ ತಕ್ಷಣ ಈ ಸೋರುವ ಬಾಟಲ್ ಕೊಟ್ಟಿದ್ದ. ಸರಿ ಇನ್ನೇನು ಮಾಡುವುದು, ಒಂದು ಪ್ಲಾಸ್ಟಿಕ್ ಕವರ್ ಹಾಕಿಕೊಂಡು ಹೋಗೋಣವೆಂದರೆ ನಮ್ಮ ಕಾರಿನಲ್ಲಿ ಒಂದೂ ಕವರ್ ಇಲ್ಲ. ಆದರೆ ನಮ್ಮ ಜನ ಎಷ್ಟು ಪ್ಲಾಸ್ಟಿಕ್ ಬಳಸುತ್ತಾರೆಂದರೆ ಕವರ್ ಹುಡುಕುವಲ್ಲಿ ನಮಗೇನು ಕಷ್ಟವಾಗಲಿಲ್ಲ. ಹೊರಗೆ ಕಣ್ಣಾಡಿಸಿದೊಡನೆ ಎರಡು ಮೂರು ಕವರ್ ಗಳು ಕಾಣಿಸಿತು. ಆದರೆ ಹತ್ತಿರ ಹೋಗಿ ನೋಡಿದರೆ ಅವು ಚಿಕ್ಕದಾಗಿದ್ದವು. ನಮ್ಮ ಕ್ಯಾನ್ ಅದರಲ್ಲಿ ತೂರುವಂತಿರಲಿಲ್ಲ. ನಮ್ಮ ಈ ಸರ್ಕಸ್ಸನ್ನೆಲ್ಲಾ ನೋಡುತ್ತಿದ್ದ ಒಬ್ಬ ಕರುಣಾಮಯಿ ಭಾರತದ ಪ್ರಜೆ ಕೇಳಿದ “ಏನಾಯ್ತು? ಏನ್ಬೇಕು?” ಸುಮ್ಮನೆ ಕೂತು ಕಾಲ ಕಳೆಯುತ್ತಿದ್ದ ಅವನ ಈ ತೆವಲಿನ ಪ್ರಶ್ನೆಗಳಿಗೆ ಉತ್ತರಿಸುವ ಮನಸ್ಸು ನನಗಿರಲಿಲ್ಲ. ಅಷ್ಟರಲ್ಲಿ ಚನ್ನನೇ ಬಂದು ಅವನ ಕಥೆ ವಿವರಿಸಿದ. ಅದಕ್ಕವನು ಅಲ್ಲೇ ಇದ್ದ ಅವನ ಮನೆಯ ಬಳಿ ಹೋಗಿ ಮನೆಯಲ್ಲಿದ್ದ 5ಲೀ ಕ್ಯಾನ್ ಅನ್ನು ತಂದು ಚನ್ನನಿಗೆ ಕೊಡಲು ಅಲ್ಲೇ ಕೆಲಸ ಮಾಡುತ್ತಿದ್ದ ಒಬ್ಬನಿಗೆ ಹೇಳಿದನಾದರೂ, ಅವನು ಹೋಗಿ ಬರಲು ಒಪ್ಪಲಿಲ್ಲ. ಇದರಿಂದ ಕೆಲಸವಾಗುವುದಿಲ್ಲ ಎಂದು ಕಾರಿನ ಬಳಿ ಹೋಗಿ ಈರುಳ್ಳಿ ತೆಗೆದು ಹೊರಗಿಟ್ಟು, ಆ ಕವರನ್ನು ಹಾಕಿದೆವು. ಇನ್ನೇನು ಸೋರುತ್ತಿದ್ದ ಪೆಟ್ರೋಲ್ ಕ್ಯಾನಿಗೆ ಪರಿಹಾರ ಹುಡುಕಾಯಿತು ಎನ್ನುವಷ್ಟರಲ್ಲಿ ಆ ಕವರಿನಿಂದಲೂ ಪೆಟ್ರೋಲ್ ಸೋರಲು ಶುರುವಾಯಿತು. ಅಷ್ಟರಲ್ಲಿ ಕವರ್ ಹುಡುಕಲು ಹೋಗಿ ಒಂದೆರೆಡು ತೂತಾಗಿದ್ದ ಕವರ್ ಹಿಡಿದು ತಂದ ಪ್ರಸನ್ನನ ಪ್ರಸನ್ನತೆ, ಕವರ್ ಹಾಕಿದ್ದರೂ ಸೋರುತ್ತಿರುವ ಪೆಟ್ರೋಲ್ ಕಂಡು ಮಾಯವಾಯಿತು. ಸರಿ ಇಲ್ಲೇ ಇದ್ದರೆ ಕೆಲಸವಾಗುವುದಿಲ್ಲ ಮುಂದೆ ದಾರಿಯಲ್ಲಿ ಯಾವುದಾದರೂ ನೀರಿನ ಬಾಟಲಿ ದೊರೆತರೆ ಅದಕ್ಕೆ ಈ ಪೆಟ್ರೋಲ್ ವರ್ಗಾಯಿಸೋಣವೆಂದು ನಾನು, ಮದ, ಚನ್ನ ಮತ್ತು ನನ್ನ ಅಕ್ಕನ ಚರ್ಚೆಯಲ್ಲಿ ಒಮ್ಮತವಾಗಿ ತೀರ್ಮಾನಿಸಲಾಯಿತು. ಗಾಡಿ ಹತ್ತಿ ಹೊರೆಟೆವು.

“ಅಲ್ಲಿ ಕೂತಿದ್ದೋನು ಹೇಳ್ದ ಕಲ, 5ಲೀ ಕ್ಯಾನ್ ಮನೆಲೈತೆ ತಗೊಂಡ್ ಬಂದು ಕೊಡು ಅಂತ. ಆ ಬಡ್ಡೈದ ತಂದು ಕೊಡ್ದೇ ಹೋದ” ಎಂದು ಸುರಿಯುತ್ತಿರುವ ಕ್ಯಾನ್ ಕಂಡು ಚನ್ನ ಗೊಣಗುತ್ತಿದ್ದ. ಸಚಿನ್ ತೆಂಡೂಲ್ಕರ್ ನ ನೂರನೇ ಸೆಂಚುರಿಯಂತೆ ನೂರರ ಗಡಿ ಹತ್ತಿರವೇ ಇದ್ದ ಪೆಟ್ರೋಲ್ ಬೆಲೆ ಕಂಡು ಚನ್ನ ಈಗಾಗಲೇ ಒಳಗೇ ಉರಿದುಕೊಂಡಿದ್ದ. ಜೊತೆಗೆ ಹನಿ ಹನಿಯಾಗಿ ಸುರಿಯುತ್ತಿರುವ ಈ ಪೆಟ್ರೋಲ್ ಕ್ಯಾನ್ ನೋಡುತ್ತಿದ್ದರೆ, ಒಂದೊಂದು ಹನಿ ಪೆಟ್ರೋಲ್, ಒಂದೊಂದು ರಕ್ತದ ಹನಿಯ ರೀತಿಯಲ್ಲಿ ಕಾಣುತ್ತಿತ್ತೇನೋ ಅವನಿಗೆ. ಅವನಿಗೆ ಮಾತ್ರವಲ್ಲ ಪೆಟ್ರೋಲ್ ಹಾಕಿಸುವ ಎಲ್ಲಾ ಮಧ್ಯ ವರ್ಗದ ಜನರಿಗೆ ಹೀಗೆ ಅನಿಸುತ್ತದೆ ಅಲ್ಲವೇ?  ಲೆಕ್ಕ ಹಾಕಿದರೆ 1000 ಮಿ.ಲೀ ಪೆಟ್ರೋಲ್ ಗೆ 100 ರೂ ಆದರೆ ಒಂದೊಂದು 1 ಮಿ.ಲೀ ಗೆ 1 ಪೈಸೆ ಎಂತಾಯಿತು. ಕಣ ಕಣದಲ್ಲೂ ದೇವನಿದ್ದಾನೆ ಎಂಬ ಮಾತನ್ನು ಇಲ್ಲಿ ಹನಿ ಹನಿಯಲ್ಲಿಯೂ ಕುಬೇರನಿದ್ದಾನೆ ಎನ್ನಬಹುದೇನೋ! ಅದಕ್ಕೇ ಇರಬೇಕು ಪೆಟ್ರೋಲ್-ಡೀಸೆಲ್ ಗಳಿಗೆ ದ್ರವ ರೂಪದ ಚಿನ್ನ ಎನ್ನುವುದು. ಹೇಳುತ್ತಾ ಹೋದರೆ ಇಂತಹ ವ್ಯಥೆಯ ಕಥೆಗಳು ಬಹಳಷ್ಟಿವೆ.

ವಾಪಾಸ್ ನಮ್ಮ ಕಥೆಗೆ ಬಂದರೆ, ಗಾಡಿಯಲ್ಲಿ ಹೋಗುವಾಗ ಇಷ್ಟು ದಿನ ಸಂಗೀತವನ್ನು ಸವಿಯುತ್ತಲೋ, ಅಕ್ಕ ಪಕ್ಕದ ಹೊಸ ಕಟ್ಟಡಗಳ ಬಗ್ಗೆಯೋ ಅಥವಾ ರಸ್ತೆ ಕಾಮಗಾರಿಗಳ ತೆಗಳುತ್ತಲೋ ಹೋಗುತ್ತಿದ್ದ ನಾವು ಅಂದು ನಮ್ಮ ಎಲ್ಲಾ ಏಕಾಗ್ರತೆಯನ್ನು ಕೇವಲ ಬಿಸಾಡಿದ್ದ ಖಾಲಿ ಬಾಟಲಿಯನ್ನು ಹುಡುಕಲು ನಿರ್ದೇಶಿಸಿದೆವು. ಸ್ವಲ್ಪ ದೂರ ಬಂದಂತೆ ಬಾಟಲಿಗಳು ಕಾಣದಾಗಿ ‘ಅರೇ… ಪರವಾಗಿಲ್ಲವಲ್ಲ, ನಮ್ಮ ಸುತ್ತಮುತ್ತ ಇಷ್ಟು ಪ್ಲಾಸ್ಟಿಕ್ ಮುಕ್ತ ಪ್ರದೇಶವಿದೆಯಲ್ಲಾ’ ಎಂದು ಮನದಲ್ಲಿ ಅಂದುಕೊಳ್ಳುವಷ್ಟರಲ್ಲಿ 2 ಲೀಟರ್ ನೀರಿನ ಬಾಟಲಿಯೊಂದು ಕಣ್ಣಿಗೆ ಬಿತ್ತು. ಪಕ್ಕದಲ್ಲೇ ಇನ್ನೆರಡು 1 ಲೀಟರ್ ಬಾಟಲಿಗಳು ಕಂಡವು. ಒಟ್ಟು 4 ಲೀಟರ್ ಆದಂತಾಯಿತು. ಆದರೆ ನಮ್ಮ ಬಳಿ ಇದ್ದದ್ದು 5 ಲೀಟರ್ ಪೆಟ್ರೋಲ್. ಇಷ್ಟು ಸಿಕ್ಕ ಮೇಲೆ ಇನ್ನೊಂದು ಬಾಟಲಿ ಸಿಗುವುದಿಲ್ಲವೆ? ಎಂದು ನಿಮ್ಮ ಹಾಗೆ ನಾವೂ ಅಂದುಕೊಂಡೆವು. ಆದರೆ ದುರಾದೃಷ್ಟವೆಂದರೆ ಬಾಟಲಿ ಸಿಗಲಿಲ್ಲ. ‘ಛೇ. . ಇನ್ನೊಂದೇ ಬಾಟಲ್ ಇದ್ದಿದ್ದರೇ’ ಎಂದು ಕೊಳ್ಳುತ್ತಿರುವಾಗ ಮದ ಎರಡು ಅರ್ಧ ಲೀಟರ್ ಬಾಟಲಿಗಳ ಹಿಡಿದು ಆರ್ ಸಿ ಬಿ ಕಪ್ ಗೆದ್ದಷ್ಟು ಸಂಭ್ರಮದಲ್ಲಿ ಬರುತ್ತಿದ್ದ. ಆದರೆ ಆ ಬಾಟಲಿಗಳು ಹೆಚ್ಚು ಸುಗಂಧ ಬೀರುತ್ತಿದ್ದುದರಿಂದ ಅವನ್ನು ಉಪಯೋಗಿಸಲು ಆಗಲಿಲ್ಲ. ಮತ್ತೆ ಹುಡುಕಾಟ ನಡೆಸಿ ಇನ್ನೊಂದು ಬಾಟಲಿ ತಂದು ಹುಷಾರಾಗಿ ಪೆಟ್ರೋಲ್ ಅನ್ನು ವರ್ಗಾಯಿಸಲಾಯಿತು. ಬಿಸಿಲೆಂದರೆಯೇ ಸೂರ್ಯನಿಗಿಂತ ಬಿಸಿಯಾಗುತ್ತಿದ್ದ ನನ್ನಕ್ಕ ಅಂದು ಮಾತ್ರ ಅದು ಹೇಗೆ ರಸ್ತೆ ಬದಿಯಲ್ಲಿಯೇ ಕೂತು ತಾಳ್ಮೆಯಿಂದ, ಆ ಬಿಸಿಲಿನಲ್ಲಿ 5 ಲೀಟರ್ ಪೆಟ್ರೋಲ್ ವರ್ಗಾಯಿಸಿದಳು ಎಂಬುದು ಈಗಲೂ ನನಗೆ ಕಾಡುತ್ತಿರುವ ಯಕ್ಷ ಪ್ರಶ್ನೆ!

ಚಿಕ್ಕಂದಿನಲ್ಲಿ ಕ್ರಿಕೆಟ್ ಆಡುವಾಗ ಚೆಂಡು ಕಳೆದುಹೋದರೆ ಹುಡುಕಲು ಹೋಗುವ ನಮಗೆ ಎಲ್ಲಿ ನೋಡಿದರೂ ಚೆಂಡೇ ಕಾಣುವ ಹಾಗೆ ಆಗುತ್ತಿತ್ತು. ಇಂತಹ ಅನುಭವ ನಿಮಗೂ ಆಗಿರಬಹುದು. ಹಾಗೆಯೇ ಈ ನೀರಿನ ಬಾಟಲಿಗಳು, ಮುಂದೆ ಸಾಗುವಾಗ ದಾರಿಯಲ್ಲಿ ಎತ್ತ ಕಣ್ಣಾಯಿಸಿದರೂ ಒಂದು ಬಾಟಲ್ ಅಥವಾ ಪ್ಲಾಸ್ಟಿಕ್ ಕವರ್ ಕಣ್ಣಿಗೆ ಕಂಡೇ ಇತ್ತು. ದಿನನಿತ್ಯ ನಾವು ಇನ್ನೆಷ್ಟು ಪ್ಲಾಸ್ಟಿಕ್ ಬಳಸಿದರೆ ಹೀಗೆ ಹೆಜ್ಜೆ ಹೆಜ್ಜೆಗೂ ಪ್ಲಾಸ್ಟಿಕ್ ವಸ್ತುಗಳಿಂದ ಇಡೀ ಭೂಮಿಯನ್ನು ಸಿಂಗರಿಸಿರಬಹುದು ಎಂಬ ಊಹೆ ಹಾಗೆ ತಲೆಯಲ್ಲಿ ಹಾದುಹೋಯಿತು. ಹಿಂದಿನ ಯಾವುದೋ ಒಂದು ವಿ ವಿ ಅಂಕಣದ ‘ಪ್ಲಾಸ್ಟಿಕ್ ಪ್ರಪಂಚ’ ದಲ್ಲಿ ವಿವರಿಸಿರುವ ಹಾಗೆ ನಾವು ದಿನ ನಿತ್ಯ ಬಳಸುವ ಸಾವಿರಾರು ಟನ್ ಪ್ಲಾಸ್ಟಿಕ್  ಪ್ರತೀ ದಿನ ಸಮುದ್ರ ಸೇರುತ್ತಿದೆ. ಇದರಿಂದ ಅಲ್ಲಿನ ಸಾವಿರಾರು ಜಲಚರಗಳ ಮಾರಣಹೋಮವೇ ನಡೆಯುತ್ತಿದೆ. ಇಷ್ಟೇ ಎಂದು ತಿಳಿದರೆ ಅದು ನಮ್ಮ ಮೂರ್ಖತನ. ನಾನೂ ನಿಮ್ಮ ಹಾಗೆ ನಾವು ಬಳಸಿ ಬಿಸಾಡುವ ಪ್ಲಾಸ್ಟಿಕ್ ಹೆಚ್ಚೆಂದರೆ ನಮ್ಮ ಸುತ್ತ-ಮುತ್ತಲ ಪರಿಸರ ಹಾಳು ಮಾಡಬಲ್ಲವು ಎಂದು ತಿಳಿದಿದ್ದೆ. ನಂತರ ನನ್ನ ಊಹೆಗೂ ಮೀರಿದಷ್ಟು ಪ್ಲಾಸ್ಟಿಕ್ ಸಮುದ್ರ ಸೇರಿ ಎಷ್ಟೋ ಪ್ರಾಣಹಾನಿಗೆ ಕಾರಣವಾಗಿದೆ ಎಂದು ಸ್ವಲ್ಪ ಸಂಶೋಧನಾ ಪ್ರಬಂಧಗಳನ್ನು ಓದಿದ ಬಳಿಕ ತಿಳಿಯಿತು. ಆದರೆ ಇದೀಗ ತಿಳಿದ ಸುದ್ದಿಯೆಂದರೆ ಕೇವಲ ನೀರಿನ ಸಮುದ್ರದಲ್ಲಿ ಅಲ್ಲದೇ, ಮರಳಿನ ಸಮುದ್ರವಾದ ಮರುಭೂಮಿಗಳಲ್ಲೂ ಪ್ಲಾಸ್ಟಿಕ್ ನ ಉಪದ್ರವ ಶುರುವಾಗಿದೆಯಂತೆ. ಅಂದರೆ ಈಗ ಶುರುವಾಗಿದೆ ಎಂದಲ್ಲ, ಈಗೀಗ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದಕ್ಕೆ ಒಂದು ಉದಾಹರಣೆಯೇ ಇಲ್ಲಿ ಹೇಳಲು ಹೊರಟಿರುವ ವಿಷಯ. ಹೌದು ದುಬೈನ ಹೊರಗಿನ ಮರುಭೂಮಿಯಲ್ಲಿ ಪ್ಲಾಸ್ಟಿಕ್ ಎಷ್ಟು ಹೆಚ್ಚಾಗಿದೆ ಎಂದರೆ ಅಲ್ಲಿನ 100 ಒಂಟೆಗಳಲ್ಲಿ 1 ಒಂಟೆ ಪ್ಲಾಸ್ಟಿಕ್ ಅನ್ನು ಆಹಾರವೆಂದು ತಿಳಿದು, ತಿಂದು ಸಾಯುತ್ತಿದೆಯಂತೆ. 

© ULRICH WERNERY

ಪ್ಲಾಸ್ಟಿಕ್ ಮತ್ತು ಮಾಲಿನ್ಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದ ಮಾರ್ಕಸ್ ಎರಿಕ್ಸನ್ ಎಂಬ ವಿಜ್ಞಾನಿಗೆ ಅರೇಬಿಯನ್ ಮರುಭೂಮಿಯಲ್ಲಿ ಅಲ್ರಿಚ್ ವರ್ನರಿ ಎನ್ನುವ ಒಂಟೆ ತಜ್ಞನ ಪರಿಚಯವಾಗುತ್ತದೆ. ಹೀಗೆ ತನ್ನ ಸಂಶೋಧನೆಯ ಬಗ್ಗೆ ಮಾತನಾಡುವಾಗ ಅಲ್ರಿಚ್ ‘ನೀನು ಇಲ್ಲಿ ಪ್ಲಾಸ್ಟಿಕ್ ನೋಡಬೇಕೆ? ಹಾಗಿದ್ದರೆ ಬಾ ನನ್ನ ಜೊತೆ’ ಎಂದು ಹೇಳುತ್ತಾ ಮಾರ್ಕಸ್ ನನ್ನು ಕರೆದುಕೊಂಡು ಮರಳಿನ ಸಮುದ್ರದ ಕಡೆಗೆ ಹೊರಡುತ್ತಾರೆ. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅವರಿಗೆ ಒಂಟೆಯ ಅಸ್ತಿಪಂಜರವೊಂದು ಮರಳಲ್ಲಿ ಹುದುಗಿರುವುದು ಕಾಣುತ್ತದೆ. ತಡ ಮಾಡದೆ ಮರಳನ್ನು ತೆಗೆದು ನೋಡಿದ ಮಾರ್ಕಸ್ ಗೆ ಅಚ್ಚರಿಯೊಂದು ಕಾಯುತ್ತಿತ್ತು. ಅಚ್ಚರಿಗೆ ಕಾರಣ ಒಂಟೆಯ ಹೊಟ್ಟೆಯಲ್ಲಿ ದೊರೆತ ಪ್ಲಾಸ್ಟಿಕ್. ಅಲ್ಲಿದ್ದ ಮೀಡಿಯಮ್ ಗಾತ್ರದ ಸೂಟ್ ಕೇಸ್ ನಷ್ಟು ಪ್ಲಾಸ್ಟಿಕ್ ಒಂಟೆಯ ಹೊಟ್ಟೆ ಭಾಗದಲ್ಲಿರುವುದು ಕಂಡಮೇಲೂ ಒಂಟೆಯ ಸಾವಿಗೆ ಕಾರಣವೇನೆಂದು ಹೇಳಬೇಕಿಲ್ಲ ಎಂದನಿಸುತ್ತದೆ. “ಒಂಟೆಯ ಹೊಟ್ಟೆಯಲ್ಲಿ ಅಷ್ಟು ಪ್ಲಾಸ್ಟಿಕ್ ಕಂಡು ನಾನು ದಿಗ್ಭ್ರಾಂತನಾದೆ” ಎನ್ನುತ್ತಾರೆ ಮಾರ್ಕಸ್. ಅವರು ದುಬೈನ ಒಂದು ಸಂಶೋಧನಾ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 2008ರ ಆಚೆಗಿನ ಸುಮಾರು 30,000 ಸತ್ತ ಒಂಟೆಗಳನ್ನು ಪರೀಕ್ಷಿಸಿದ್ದಾರೆ. ಅವುಗಳಲ್ಲಿ 300 ಒಂಟೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತುಂಬಿತ್ತು. ಅಂದರೆ 100 ಒಂಟೆಗಳಲ್ಲಿ 1 ಒಂಟೆ ಪ್ಲಾಸ್ಟಿಕ್ ಸೇವಿಸಿಯೇ ಸಾಯುತ್ತಿದೆ ಎಂದಾಯಿತು.

© M. ERIKSEN ET AL_J. ARID ENVIRO. 2021

ಒಂಟೆಗಳು ಆಹಾರವೆಂದುಕೊಂಡು ಸೇವಿಸುವ ಈ ಪ್ಲಾಸ್ಟಿಕ್ ಜೀರ್ಣವಾಗದೆ ಹೊಟ್ಟೆಯಲ್ಲಿ ಹಾಗೆಯೇ ಉಳಿದುಬಿಡುತ್ತವೆ. ಇವುಗಳನ್ನು ವಿಜ್ಞಾನ ಭಾಷೆಯಲ್ಲಿ ‘ಪಾಲಿಬೆಜಾರ್ಸ್ (polybezoars)’ ಎನ್ನುವರು. ಇವುಗಳು ಬಹಳ ಅಪಾಯಕಾರಿ. ಏಕೆಂದರೆ ಜೀರ್ಣವಾಗದೇ ಹೊಟ್ಟೆಯಲ್ಲಿ ಉಳಿಯುವ ಇವುಗಳಿಂದ ಹೊಟ್ಟೆ ಯಾವಾಗಲೂ ತುಂಬಿರುವ ಹಾಗೆ ಒಂಟೆಗಳಿಗೆ ಭಾಸವಾಗುತ್ತವೆ. ಇದರಿಂದ ಹೊಟ್ಟೆಗೆ ಆಹಾರ ಹೋಗದೇ ಇದ್ದರೂ ಅವುಗಳಿಗೆ ಹಸಿವಾಗುವುದಿಲ್ಲ. ಇದರ ಪರಿಣಾಮ ಅವುಗಳು ಊಟ ಮಾಡದೇ ದಿನೇ ದಿನೇ ಕ್ಷೀಣಿಸುತ್ತಾ ಹಸಿವನ್ನು ತಿಳಿಯದೇ ಕೊನೆಯುಸಿರೆಳೆಯುತ್ತವೆ. ಅಷ್ಟೇ ಅಲ್ಲದೇ ಈ ಪ್ಲಾಸ್ಟಿಕ್ ಗಳು ವಿಷಕಾರಿ ರಾಸಾಯನಿಕಗಳನ್ನೂ ಹೊರಬಿಡುತ್ತವೆ. ಜೊತೆಗೆ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನೂ ಸಹ ಒಂಟೆಯ ಹೊಟ್ಟೆಯೊಳಗೆ ಹೊತ್ತೊಯ್ಯುತ್ತವಂತೆ. ನೋಡಿದಿರಾ ಕೇವಲ ಪ್ಲಾಸ್ಟಿಕ್ ಎಂಬ ಒಂದು ವಸ್ತು ಎಷ್ಟೆಲ್ಲಾ ಉಪದ್ರವ ಉಂಟುಮಾಡುತ್ತಿದೆ.

ಅವರು ನಡೆಸಿದ ಈ ಸಂಶೋಧನೆಯಲ್ಲಿ ಒಂದು ಒಂಟೆಯ ಹೊಟ್ಟೆಯಲ್ಲಿ ದೊರೆತಿರುವ ಕಡಿಮೆ ಪ್ಲಾಸ್ಟಿಕ್ ತೂಕವೆಷ್ಟು ಗೊತ್ತೇನು? 3 ಕೆ. ಜಿ. ಅತೀ ಹೆಚ್ಚು ತೂಕವೆಂದರೆ 64 ಕೆ. ಜಿ. ಊಹಿಸಿಕೊಳ್ಳಿ…”ವನ್ಯ ಜೀವಿಗಳ ಮೇಲೆ ಇವುಗಳು ಬೀರುವ ಪ್ರಭಾವವನ್ನಾದರು ಗಮನಿಸಿ, ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಎಲ್ಲವನ್ನೂ ನಿಷೇಧಿಸಬೇಕು.” ಎನ್ನುತ್ತಾರೆ ಮಾರ್ಕಸ್. 

ಹೀಗೆ ಮನುಷ್ಯನ ಕೈಗಳಿಂದ, ಕಸದ ತೊಟ್ಟಿಗಳಿಂದ ತಪ್ಪಿಸಿಕೊಂಡು ನೂರಾರು ಮೈಲಿ ಹೋಗುವ ಈ ಪ್ಲಾಸ್ಟಿಕ್ ನಿಂದ ಆಗುವ ಉಪದ್ರವಗಳು ಒಂದೇ, ಎರಡೇ? ನಮ್ಮ ಈ ಅಟ್ಟಹಾಸ ಬದುಕಿನ ನ್ಯಾಯಾಲಯದಲ್ಲಿ ಪರ-ವಿರೋಧದ ವಾದ-ವಿವಾದಗಳೇ ಇಲ್ಲದೆ ಏನೂ ಅರಿಯದ ಒಂಟೆಗಳಿಗೆ ಮರಣದಂಡನೆ ವಿಧಿಸುವುದು ಎಷ್ಟರ ಮಟ್ಟಿಗೆ ನ್ಯಾಯ?

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.