ಒಂದು ಮೊಟ್ಟೆಯ ಕಥೆ!
© ORNITOLOG82_ISTOCK_GETTY IMAGES PLUS
‘ಸರಿ ಶಂಕ್ರಣ್ಣ ತಂದೆ ಇರು… ನಾನು ತರೋಷ್ಟ್ರಲ್ಲಿ ಸಿಪ್ಪೆ ತೆಗ್ದಿರು’ ಎಂದು ಹೇಳುತ್ತಾ ಚಾಕು ತರಲು ಓಡಿದೆ. ‘ಸರಿ ಆಯ್ತು ಹೋಗ್ಬಾ…’ ಎಂದು ಶಂಕ್ರಣ್ಣ ಹೇಳಿದ್ದು ಪೂರ್ತಿ ಕೇಳಿಸುವಷ್ಟರಲ್ಲಿ ನಾನು ಲ್ಯಾಬ್ (ಪ್ರಯೋಗ ಶಾಲೆ) ನಿಂದ ದೂರ ಬಂದಿದ್ದೆ. ಆದರೆ ನಾನು ಉಪ್ಪು ಮತ್ತು ಚಾಕು ತಂದರೂ ಶಂಕ್ರಣ್ಣ ಸಿಪ್ಪೆ ಬಿಡಿಸಿರಲಿಲ್ಲ. ‘ಯಾಕಣ್ಣ ಇನ್ನು ತೆಗ್ದಿಲ್ವಾ?’ ಎಂದು ಲಾಲಾರಸ ಆವರಿಸಿದ್ದ ಬಾಯಿಂದಲೇ ಹೇಳಿದೆ. ‘ಆಯ್ತು ಆಯ್ತು ಬಾರೋ…’ ಎಂದ ಶಂಕ್ರಣ್ಣನ ಮುಖದಲ್ಲಿ ಏನೋ ಸಾಧಿಸಿದ ಕಳೆ ಮಿಶ್ರಿತ ಮುಗುಳುನಗೆ ಸ್ಪಷ್ಟವಾಗಿ ಕಾಣುತ್ತಿತ್ತು. ಇದು ನಡೆದದ್ದು ನಾನು ಏಳನೇ ತರಗತಿಯಲ್ಲಿದ್ದಾಗ. ನಾನು ಮತ್ತು ನನ್ನ ನಾಲ್ಕು ಜನ ಸ್ನೇಹಿತರು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ, ಇಂಗ್ಲೀಷ್ ಮಾಧ್ಯಮದ ಪ್ರೌಢಶಾಲೆಗೆ ಸೇರಲು ಬೇಕಾದ ತರಬೇತಿಯನ್ನು ಪಡೆದುಕೊಳ್ಳಲು ಶಾಲೆಯಲ್ಲಿಯೇ ಉಳಿದುಕೊಳ್ಳುತ್ತಿದ್ದೆವು. ನಮ್ಮನ್ನು ನೋಡಿಕೊಳ್ಳಲೆಂದು ನಮ್ಮ ಶಾಲೆಯಲ್ಲಿಯೇ ಓದಿದ್ದ ನಮಗಿಂತ 6-7 ವರ್ಷ ದೊಡ್ಡವರು ಆದ ಹಾಗೆಯೇ ನಮಗಿಂತ ದಪ್ಪ ಹಾಗೂ ಉದ್ದವಿದ್ದ ಶಂಕ್ರಣ್ಣನು ಜೊತೆಯಲ್ಲಿದ್ದರು. ಅಲ್ಲಿ ತಂಗಿದ್ದ ಆ ಒಂದು ವರುಷದಲ್ಲಿ ನಾವು ಮಲಗಿ ಏಳುತ್ತಿದ್ದದ್ದು ನಮ್ಮ ಶಾಲೆಯ ಲ್ಯಾಬ್ (ಪ್ರಯೋಗಶಾಲೆ) ನಲ್ಲೇ.
ಶನಿವಾರದ ಮಧ್ಯಾಹ್ನ ಮತ್ತು ಸಂಜೆಯ ನಡುವಿನ ಸಮಯ. ನಾನೂ ಮತ್ತು ಶಂಕ್ರಣ್ಣ ನಮ್ಮ ಎಸ್. ಆರ್. ವಿ. ಕೆ. ಶಾಲೆಯ ವರಾಂಡದಲ್ಲಿ ನಡೆದು ಲ್ಯಾಬ್ ಕಡೆಗೆ ಹೋಗುತ್ತಿದ್ದೆವು. ಆ ಶನಿವಾರ ರಜಾದಿನವೆಂದು ತೋರುತ್ತದೆ. ಅದಕ್ಕೆ ಬೇರೆ ಸ್ನೇಹಿತರು ಅಂದಿನ ನಮ್ಮ ಪ್ರಯೋಗಕ್ಕೆ ಹಾಜರಿರಲಿಲ್ಲ. ನಾನು ಮತ್ತು ಶಂಕ್ರಣ್ಣ ಹಾಗೆ ವರಾಂಡದಲ್ಲಿ ನಡೆದು ಹೋಗುವಾಗ ಹೀಗೆ ಯಾವುದೋ ವಿಷಯಕ್ಕೆ ಬೆಂಕಿ ಮತ್ತು ಅದರ ಗುಣಲಕ್ಷಣಗಳ ಚರ್ಚೆ ಶುರುವಾಯಿತು. ಬಹುಶಃ ಆ ದಿನ ಮಧ್ಯಾಹ್ನದ ಊಟ ಇನ್ನೂ ಆಗಿರಲಿಲ್ಲ, ಅದಕ್ಕೇ ಇರಬೇಕು ಊಟ ತಯಾರಿಸಲು ಮುಖ್ಯ ರುವಾರಿಯಾದ ಅಗ್ನಿ ದೇವನ ಬಗ್ಗೆ ಚರ್ಚೆ ಎದ್ದದ್ದು. ಶಂಕ್ರಣ್ಣನಿಗೂ ಊಟ-ಭೋಜನಾದಿಗಳಿಗೂ ಅವಿನಾಭಾವ ಸಂಬಂಧವಿದೆ, ಇನ್ನೊಂದು ಘಟನೆಯ ನೆನಪೂ ಬರುತ್ತಿದೆ. ಅದನ್ನು ಹೇಳಲು ಹೊರಟರೆ ಈಗಿನ ವಿಷಯ ಮುಂದುವರೆಯುವುದಿಲ್ಲ. ಅದನ್ನು ಬಿಡಿ, ಹೀಗೆ ಮಾತನಾಡುವಾಗ ಶಂಕ್ರಣ್ಣನು, ‘ಹೇ.. ಜೈ!, ಬೆಂಕಿ ಪೇಪರ್ ನ ಸುಡುತ್ತೋ ಇಲ್ವೋ?’ ಎಂದು ಟಕ್ಕನೆ ಕೇಳಿಬಿಟ್ಟರು. ನಾನು ಅದಕ್ಕೆ ‘ಸುಡುತ್ತೆ’ ಎಂದೆ. ‘ನೀರು ಬೆಂಕೀನ ಆರ್ಸುತ್ತೋ ಇಲ್ವೋ?’ ಮತ್ತೊಂದು ಪ್ರಶ್ನೆ. ನಾನದಕ್ಕೆ ‘ಆರ್ಸುತ್ತೆ’ ಎಂದೆ. ‘ಹಾಗಾದ್ರೆ ನಿಂಗೊಂದ್ ಪ್ರಶ್ನೆ, ಪೇಪರ್ ಬಟ್ಲಲ್ಲಿ ನೀರು ಹಾಕಿ ಬೆಂಕಿಯ ಮೇಲಿಟ್ರೆ ಏನಾಯ್ತದೆ?’ ಎಂದನು. ನಾನು ಅದಕ್ಕೆ ನನಗೆ ತಿಳಿದ ಎಲ್ಲಾ ವೈಜ್ಞಾನಿಕ ಕೋನಗಳಲ್ಲಿ ಯೋಚಿಸಿದೆ. ಅಷ್ಟೇನು ಗೊತ್ತಾಗಲಿಲ್ಲ. ನಂತರ ಸಾಮಾನ್ಯ ಜ್ಞಾನ ಬಳಸಿ ಹೀಗೆ ಹೇಳಿದೆ, ‘ಅದ್ರಲ್ಲೇನೈತೆ ಪೇಪರ್ ಸುಟ್ಟೋಗಿ, ನೀರು ಬೆಂಕಿ ಮೇಲೆ ಬಿದ್ದು ಬೆಂಕಿ ಆರೋಯ್ತದೆ’. ಸಾಮಾನ್ಯವಾಗಿ ಯೋಚಿಸಿದರೆ ಅದೇ ಅಲ್ಲವೇ ಆಗೋದು. ಅದಕ್ಕೆ ನನ್ನ ಉತ್ತರ ಎಂದಿನಂತೆ ಸರಿಯಿರುತ್ತದೆ ಎಂದುಕೊಂಡು, ಶಂಕ್ರಣ್ಣ ‘ಹು..’ ಎನ್ನುತ್ತಾನೆ ಎಂದು ಕಾಯುತ್ತಿದೆ. ಆದರೆ ಶಂಕ್ರಣ್ಣ ನನಗೆ ಶಾಕ್ ಕೊಟ್ಟುಬಿಟ್ಟ. ‘ಇಲ್ಲಾ..’ ಎಂದು ಮುಗುಳ್ನಕ್ಕ. ನಾನು ‘ಇನ್ನೇನಾಯ್ತದೆ??’ ಎಂದು ಕೇಳುವಷ್ಟರಲ್ಲಿ ಶಂಕ್ರಣ್ಣನೇ ‘ಪೇಪರೂ ಸುಡಲ್ಲ, ಬೆಂಕಿನೂ ಆರಲ್ಲ. ಅದ್ರು ಬದ್ಲು ನೀರು ಕಾಯ್ದು ಕುದಿತದೆ’ ಎಂದ ಕೂಡಲೆ, “ಛಾನ್ಸೇ ಇಲ್ಲ, ಬೆಂಕಿ ಇರೋದೇ ಸುಡಕೆ. ಅಂತದ್ರಲ್ಲಿ ಪೇಪರು.. ನೀರು.. ಕುದ್ಯೋದು.. ಛಾನ್ಸೇ ಇಲ್ಲ” ಎಂದೆ.
ಶಂಕ್ರಣ್ಣ ಈ ಮುಂಚೆಯೂ ನಮಗೆ ಹಲವಾರು ಚಕಿತಗೊಳಿಸುವ ವಿಜ್ಞಾನದ ಪ್ರಯೋಗಗಳನ್ನು ಮಾಡಿಸಿದ್ದ ಕಾರಣ, ಯಾವುದೋ ಮೂಲೆಯಲ್ಲಿ ಇದ್ದರೂ ಇರಬಹುದು ಎನಿಸುತ್ತಿತ್ತು. ಆದರು ನಂಬಲು ಕಷ್ಟ. ಆಗಿನ ಏಳನೇ ತರಗತಿಯ ವಿಧ್ಯಾರ್ಥಿಯ ಪರಿಸ್ಥಿತಿ ನೆನೆಸಿಕೊಳ್ಳಿ. ಅಷ್ಟು ಹೊತ್ತಿಗೆ ಶಂಕ್ರಣ್ಣನೇ ‘ಬಾ ಆ ಪ್ರಯೋಗ ಮಾಡಿ ತೋರ್ಸ್ತೀನಿ’ ಎಂದಾಯಿತು. ಈ ಮಾತುಗಳು ಕೇಳಿದ ಮೇಲೆಯೇ ಸ್ವಲ್ಪ ಸಮಾಧಾನವಾದದ್ದು. ಅಲ್ಲಿಯವರೆಗೆ ನಿಧಾನವಾಗಿ ಇಡುತ್ತಿದ್ದ ಹೆಜ್ಜೆಗಳು, ಈಗ ಬೇಗ ಬೇಗ ಸಾಗತೊಡಗಿದವು. ನಮ್ಮ ಬಿಡಾರವೇ ಲ್ಯಾಬ್ ಆದ್ದರಿಂದ, ನಮ್ಮ ಪ್ರಯೋಗಕ್ಕೆ ಬೇಕಿದ್ದ ಸಾಮಾಗ್ರಿಗಳು ಬೇಗನೆ ಸಿಕ್ಕವು. ಎಲ್ಲಾ ಸಿದ್ಧಪಡಿಸಿಕೊಂಡು ನೀರು ತುಂಬಿದ ಪೇಪರ್ ಕಪ್ಪನ್ನು ಬೆಂಕಿಯ ಮೇಲೆ ಇಡಲಾಯಿತು. ಬಾಲ ಸುಟ್ಟ ಬೆಕ್ಕಿನಂತೆ ಅಲ್ಲಿಯವರಗೆ ಕಾಯುತ್ತಿದ್ದ ನನಗೆ, ಅಬ್ಬಾ ಇನ್ನೇನು ಕೆಲ ಕ್ಷಣಗಳಲ್ಲಿ ಉತ್ತರ ದೊರೆಯುವುದೆಂಬ ನಿರಾಳ ಭಾವನೆ ಸಮೀಪಿಸುತ್ತಿತ್ತು. ಪ್ರಯೋಗ ಪ್ರಾರಂಭವಾಯಿತು, ಹತ್ತು ಸೆಕೆಂಡ್ ಕಳೆಯಿತು ಪೇಪರ್ ಸುಡಲಿಲ್ಲ. ಅರ್ಧ ನಿಮಿಷ ಕಳೆಯಿತು ಪೇಪರ್ ಸುಡಲಿಲ್ಲ. ಓಹೋ ಶಂಕ್ರಣ್ಣನೇ ಸರಿ. ಇದ್ಯಾಕೋ ಸುಡುವುದಿಲ್ಲ ಎಂದು ಮನದಟ್ಟಾಗುತ್ತಿದ್ದಂತೆಯೇ ಮನದಲ್ಲಿ ಇನ್ನೊಂದು ಆಲೋಚನೆ ಹುಟ್ಟಿತು. ಹೇಗಿದ್ದರೂ ಪೇಪರ್ ಕಪ್ ಸುಡುತ್ತಿಲ್ಲ. ಶಂಕ್ರಣ್ಣ ಬೇರೆ, ನೀರು ಕುದಿಯುವವರೆಗೆ ಕಾಯುತ್ತದೆ ಎಂದಿದ್ದಾನೆ. ಹಾಗಿದ್ದಲ್ಲಿ ನಾವು ಎಂದಾದರು ಕಾಡಿಗೆ ಹೋಗಿ ಅಲ್ಲಿ ತಪ್ಪಿಸಿಕೊಂಡುಬಿಟ್ಟರೆ, ಅಲ್ಲಿ ಅಡಿಗೆ ಮಾಡಿ ತಿನ್ನಲು ಪಾತ್ರೆ ಸಿಗುವುದಿಲ್ಲ. ಆಗ ಈ ಪ್ರಯೋಗವನ್ನು ಉಪಯೋಗಿಸಿಕೊಳ್ಳಬಹುದಲ್ಲವೇ? ಎಂದೆನಿಸಿ “ಹಂಗಾರೆ…! ನಾವು ಯಾವಾಗ್ಲಾದ್ರು ಕಾಡಲ್ಲಿ ಕಳ್ದೋಗಿ, ಪಾತ್ರೆ ಸಿಕ್ಕಿಲ್ಲ ಅಂದ್ರೆ ಹಿಂಗೆ ಮಾಡಿ ಅಡಿಗೆ ಮಾಡ್ಬೋದಾ?” ಕೇಳಿಯೇ ಬಿಟ್ಟೆ. ‘ಹೌದೌದು ಮಾಡ್ಬೋದು. ಬೇಕಿದ್ರೆ ಈಗ್ಲೆ ಮೊಟ್ಟೆನ ಇದ್ರಲ್ಲಿ ಬೇಯ್ಸಿ ವರ್ಕ್ ಆಗುತ್ತೋ ಇಲ್ವೋ ನೋಡ್ಬೋದು’ ಎಂದು ಹೇಳಿ ನಕ್ಕುಬಿಟ್ಟರು. ನಾನು ಅದಕ್ಕೆ ಅವರ ಮುಖವನ್ನು ದಿಟ್ಟಿಸಿ ನೋಡಿದೆ. ಮುಗುಳ್ನಗೆಯ ಆ ಸಮಯದಲ್ಲಿ, ನಮ್ಮ ಕಣ್ಣುಗಳಲ್ಲೇ ವಿಚಾರ ವಿನಿಮಯವಾಗಿ ನಿರ್ಧಾರವೂ ಆಗಿಬಿಟ್ಟಿತು. ಅದೇನಿಲ್ಲ, ಆ ಮೊಟ್ಟೆ ತಂದು ಬೇಯಿಸುವ ಕಾರ್ಯಕ್ರಮ ಈಗಲೇ ಮಾಡಿಬಿಡೋಣವೆಂದು. ಅಣ್ಣ ಜೇಬಿಗೆ ಕೈ ಹಾಕಿ ಹಣ ಕೊಟ್ಟದ್ದು, ನಾನು ಮೊಟ್ಟೆ ತಂದದ್ದು ಕ್ಷಣಾರ್ಧದಲ್ಲಿ ನಡೆದುಹೋಯಿತು. ಮೊಟ್ಟೆಯನ್ನು ಪೇಪರ್ ಕಪ್ ನಲ್ಲಿ ಹಾಕಿ ಮೊಟ್ಟೆ ಬೇಯುವುದನ್ನೇ ಕಾಯುತ್ತಾ ಕುಳಿತೆವು. ಮಧ್ಯಾಹ್ನ ಊಟಮಾಡಿರದ ನಮಗೆ, ಆ ದಿನದ ಪ್ರಯೋಗಶಾಲೆ-ಪಾಕಶಾಲೆ ಒಂದೇ ಆದಂತಿತ್ತು.
ಆ ಪೇಪರ್ ಕಪ್ಪಿನಲ್ಲಿದ್ದ ನೀರಿನ ಒಳಗಿಂದ ಸಣ್ಣ ಸಣ್ಣ ಗುಳ್ಳೆಗಳು ಬರಲಾರಂಭಿಸಿತು. ಅದು ನೀರು ಕುದಿಯುವ ಮುನ್ಸೂಚನೆಯಾದ್ದರಿಂದ ಮೊಟ್ಟೆ ಬೆಂದಿರುತ್ತದೆ, ಜೊತೆಗೆ ಅಣ್ಣನು ಸಾಧಿಸಬೇಕಿದ್ದ ವಿಷಯ, ‘ನೀರು ಕುದಿಯುವವರೆಗೆ ಪೇಪರ್ ಸುಡುವುದಿಲ್ಲ’ ಎಂಬ ಮಾತು ಒಟ್ಟೊಟ್ಟಿಗೆ ನಿಜವಾಗುವ ಸಮಯ ಬಂದೇ ಬಿಟ್ಟಿತ್ತು. ಒಂದೇ ಏಟಿಗೆ ಎರಡು ಹಕ್ಕಿ ಎಂಬಂತೆ, ಅದೇ ಖುಷಿಗೆ ಮಾಡಿದ ಪ್ರಯೋಗದ ಎರಡೆರಡು ಪ್ರತಿಫಲಗಳನ್ನು ಆಚರಿಸಲು ಪ್ರಯೋಗಕ್ಕೆ ಬಳಸಿದ ಮೊಟ್ಟೆಯನ್ನು ವ್ಯರ್ಥ ಮಾಡದೆ, ಸರಿಯಾಗಿ ಬೆಂದಿದೆಯೋ ಇಲ್ಲವೋ ಎಂದು ತಿಳಿಯಲು ಒಮ್ಮೆ ತಿಂದು ನೋಡೋಣವೆಂದುಕೊಂಡೆವು. ನಂತರ ಅನಿಸಿಕೆ ನಿರ್ಧಾರವಾಯಿತು. (ಸೂಚನೆ: ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನಾವು ಮೊಟ್ಟೆಯನ್ನು ತಿನ್ನುವ ಉದ್ದೇಶದಿಂದ ಇವೆಲ್ಲ ಮಾಡಿಲ್ಲ. ಬದಲಿಗೆ ಒಲಿದು ಬಂದದ್ದನ್ನು ಉಪಯೋಗಿಸಿಕೊಂಡು ಪ್ರಯೋಗವನ್ನು ಬಲಪಡಿಸುತ್ತಿದ್ದೇವಷ್ಟೆ.) ಆ ನಿಟ್ಟಿನಲ್ಲಿ ಈ ಮೇಲೆ ಹೇಳಿದ ಹಾಗೆ ಚಾಕು ತರಲು ನಾನು ಓಡಿದ್ದು, ತಂದದ್ದು. ಆದರೆ ನಮ್ಮ ಆತುರದ ನಿರ್ಣಯಕ್ಕೆ ತಲೆಬಾಗದ ಮೊಟ್ಟೆ, ಪೂರ್ತಿಯಾಗಿ ಬೆಂದಿರಲಿಲ್ಲ. ಅದಕ್ಕಾಗಿಯೇ ಸಿಪ್ಪೆ ಬಿಡಿಸುವಾಗ ಶಂಕ್ರಣ್ಣನಿಗೆ ಸಮಯ ತೆಗೆದುಕೊಂಡದ್ದು. ಹೇಗೋ ಮಾಡಿ ಸಿಪ್ಪೆ ತೆಗೆದು, ಕುಯ್ದು, ಸ್ವಲ್ಪ ಉಪ್ಪನ್ನು ಉದುರಿಸಿ, ಅರೆಬೆಂದ ಮೊಟ್ಟೆಯನ್ನು ಸ್ವಾಹಾ ಮಾಡಲಾಯಿತು. ಹಸಿದ ಹೊಟ್ಟೆಯಾದ್ದರಿಂದ ಅರೆಬೆಂದ ಮೊಟ್ಟೆಯ ರುಚಿ ಯಾವುದೇ ತೊಂದರೆ ಕೊಡಲಿಲ್ಲ. ಅದಾದ ಬಳಿಕವೆ ನನಗೆ ತಿಳಿದದ್ದು, ಈ ಸರಿಯಾದ ಉಷ್ಣತೆಗೆ ಮತ್ತು ಮೊಟ್ಟೆಗೆ ಇರುವ ಸಂಬಂಧ ಹಾಗೂ ಅಡುಗೆ ಮನೆಯಲ್ಲಿ ಸರಿಯಾದ ರುಚಿ ಹೊರಗೆಳೆಯುವ ಅಮ್ಮನ ಚಾತುರ್ಯತೆ.
ಮೊಟ್ಟೆ ಎಂದೊಡನೆ ನನಗೆ ಚಿಕ್ಕಂದಿನ ಈ ಘಟನೆ ಯಾವಾಗಲೂ ನೆನಪಾಗುತ್ತದೆ. ಆದರೆ ಇದು ಕೇವಲ ಒಂದು ಮೊಟ್ಟೆಯ ಕಥೆ. ನಾನು ಈ ಮಾಸದ ವಿ ವಿ ಅಂಕಣದಲ್ಲಿ ಹೇಳಲು ಹೊರಟಿರುವುದು ಪ್ರಪಂಚದ ನಾ ನಾ ಭಾಗದಿಂದ ಆರಿಸಿದ 634 ಪ್ರಭೇದ ಪಕ್ಷಿಗಳ ಮೊಟ್ಟೆ ಕಥೆ. ಸಾಮಾನ್ಯವಾಗಿ ಮೊಟ್ಟೆ ಎಂದೊಡನೆ ನಮಗೆ ನೆನಪಾಗುವುದು ಕೋಳಿ ಮೊಟ್ಟೆ. ಅದನ್ನು ಬಿಟ್ಟು ಬೇರೆ ಹೆಸರಿಸಿ ಎಂದರೆ ಬಹುಶಃ ಗುಬ್ಬಚ್ಚಿಯ ಮೊಟ್ಟೆ, ಕಾಗೆಯ ಮೊಟ್ಟೆ ಹೀಗೆ ಪಟ್ಟಿ ಮಾಡುತ್ತಾ ಹೋಗಬಹುದು. ಪಕ್ಷಿಗಳೆಲ್ಲವೂ ಮೊಟ್ಟೆ ಇಡುತ್ತವೆ. ಆದರೆ ನೀವು ಗಮನಿಸಿರಬಹುದು, ನಾಟಿ ಕೋಳಿಯ ಮೊಟ್ಟೆ ಮತ್ತು ಫಾರಂ ಕೋಳಿಯ ಮೊಟ್ಟೆಯ ಮತ್ತು ಬಣ್ಣ ಬೇರೆ ಇರುತ್ತದೆ. ಏಕೆ ಹೀಗಿರಬಹುದು?
ನೋಡಿದಿರಾ, ತಕ್ಷಣ ಕೇಳಿದರೆ ಮಾತೇ ಬರುತ್ತಿಲ್ಲ. ಆದರೂ ನಮ್ಮಲ್ಲಿ ಹೆಚ್ಚು ಜನ ಇದನ್ನು ಚಿಕ್ಕ ವಯಸ್ಸಿನಿಂದಲೂ ತಿನ್ನುತ್ತಾ ಬಂದಿದ್ದೇವೆ. ಆದರೆ ಎಂದೂ ಏಕೆ ಹೀಗೆ ಎಂದು ಕೇಳಿರಲಿಕ್ಕಿಲ್ಲ. ಅದರ ಬದಲಿಗೆ ಉಪ್ಪೋ, ಖಾರವೋ ಕಡಿಮೆ ಆದರೆ ಕೇಳಿರುತ್ತೇವೆ. ಪರವಾಗಿಲ್ಲ ಬಿಡಿ. ಈಗ ಅದೇ ಪ್ರಶ್ನೆಗೆ ಉತ್ತರ ಏನೆಂದು ನೋಡಿಬಿಡೋಣ.
ನಮಗೆ ತಿಳಿದ ಹಾಗೆ ಎಲ್ಲಾ ಪಕ್ಷಿಗಳು ಮೊಟ್ಟೆ ಇಡುತ್ತವೆ ಅಲ್ಲವೆ? ಹೌದು. ಆದರೆ ಒಂದು ಪ್ರಭೇದದ ಪಕ್ಷಿ ಮೊಟ್ಟೆಯ ಹಾಗೆ ಇನ್ನೊಂದು ಪ್ರಭೇದದ ಪಕ್ಷಿಯ ಮೊಟ್ಟೆ ಇರುವುದಿಲ್ಲ. ಅವುಗಳ ಆಕಾರದಲ್ಲಿ ವ್ಯತ್ಯಾಸವಿರಬಹುದು, ಬಣ್ಣಗಳಲ್ಲಿ ವ್ಯತ್ಯಾಸವಿರಬಹುದು ಅಥವಾ ಗಾತ್ರದಲ್ಲಿ ವ್ಯತ್ಯಾಸವಿರಬಹುದು. ಕಾರಣವಿಲ್ಲದೆ ಹೀಗೆ ಇರಲು ಪ್ರಕೃತಿಯಲ್ಲಿ ಮಾತ್ರ ಸಾಧ್ಯವಿಲ್ಲ. ಏನೋ ಕಾರಣ ಇದ್ದೇ ಇರುತ್ತದೆ. ಮೊಟ್ಟೆಯ ಬಣ್ಣ ಕೆಲವೊಮ್ಮೆ ಪರಭಕ್ಷಕರಿಂದ ರಕ್ಷಿಸಿಕೊಳ್ಳುವಲ್ಲಿ ಉಪಯೋಗವಾಗಿರಬಹುದು. ಮೊಟ್ಟೆಯ ಆಕಾರ ಮತ್ತು ಬಣ್ಣ ಆ ಮೊಟ್ಟೆಯನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ಕೆಲಸ ಮಾಡಬಹುದು ಅಥವಾ ಆ ಮೊಟ್ಟೆಗಳು ಎಷ್ಟು ಬಲವಾಗಿವೆ ಎಂದೂ ಹೇಳಬಹುದು. ಜೊತೆಗೆ ಬಣ್ಣದಿಂದ ಮೊಟ್ಟೆಯ ಉಷ್ಣಾಂಶದ ಮೇಲೆ ಪ್ರಭಾವ ಬೀರಬಹುದು. ಹೀಗೆ ವೈಜ್ಞಾನಿಕವಾಗಿ ಕೆಲವನ್ನು ಊಹಿಸಬಹುದು. ಜೊತೆಗೆ ಈ ಕೆಲವಕ್ಕೆ ಸ್ವಲ್ಪ ಮಟ್ಟಿಗೆ ಪುರಾವೆಯೂ ಇದೆ. ಅಂತಹುದೊಂದು ಪುರಾವೆಯನ್ನೇ ಈ ಸಂಚಿಕೆಯ ಸಂಶೋಧನೆಯಲ್ಲಿ ಹೇಳಲು ಹೊರಟಿರುವುದು.
ಅದೇನೆಂದರೆ, ಪಕ್ಷಿಯ ಮೊಟ್ಟೆಯ ಬಣ್ಣದಿಂದ ಆ ಮೊಟ್ಟೆಯ ಉಷ್ಣಾಂಶ ಬದಲಾಗುತ್ತದೆ ಎಂದು. ಇದನ್ನು ಸಂಶೋಧನೆಯ ಪದಗಳಲ್ಲಿ ಹೇಳುವುದಾದರೆ, ಭೂಮಿಯ ಮೇಲಿನ ಪಕ್ಷಿಗಳನ್ನೆಲ್ಲಾ ತೆಗೆದುಕೊಂಡರೆ ಶೀತ ಪ್ರದೇಶಗಳಲ್ಲಿರುವ ಅಂದರೆ ಉತ್ತರ ಧೃವಗಳಂತಹ ಪ್ರದೇಶಗಳಲ್ಲಿರುವ ಪಕ್ಷಿಗಳ ಮೊಟ್ಟೆಯ ಬಣ್ಣ ಗಾಢ (dark) ವಾಗಿರುತ್ತವೆ. ಭೂಮಧ್ಯ ರೇಖೆಯ ಉಷ್ಣವಲಯಕ್ಕೆ ಬಂದರೆ ಮೊಟ್ಟೆಯ ಬಣ್ಣ ತಿಳಿ (light) ಯಾಗಿ ಅಥವಾ ತಿಳಿ ನೀಲಿ ಬಣ್ಣಗಳಲ್ಲಿರುತ್ತವೆ ಎನ್ನುವುದೇ ಈ ಸಂಶೋಧನೆಯ ಸಾರಾಂಶ. ಅದಕ್ಕಾಗಿ ನ್ಯೂಯಾರ್ಕ್ ನ ಒಂದು ವಿಶ್ವವಿದ್ಯಾಲಯದ ಸಂಶೋಧಕರಾದ ಹ್ಯಾನ್ಲಿ ಮತ್ತು ವಿಸೋಕಿ ಪ್ರಪಂಚದ ನಾ ನಾ ಭಾಗದಿಂದ ಸುಮಾರು 634 ವಿವಿಧ ಪ್ರಭೇದದ ಪಕ್ಷಿಯ ಮೊಟ್ಟೆಗಳನ್ನು ಸಂಗ್ರಹಿಸಿದರು. ಈ ಸಂಗ್ರಹದಲ್ಲಿ, ಇಡೀ ಪ್ರಪಂಚದ ಪಕ್ಷಿಗಳನ್ನು 40 ಮುಖ್ಯ ಗುಂಪುಗಳನ್ನಾಗಿ ಮಾಡಿದರೆ, ಅದರಲ್ಲಿ 36 ಬಗೆಯ ಗುಂಪುಗಳಿಂದ ಆರಿಸಿದ ಪಕ್ಷಿಯ ಮೊಟ್ಟೆಗಳು ಇದ್ದವು. ಆ ಎಲ್ಲಾ 634 ವಿವಿಧ ಪ್ರಭೇದದ ಪಕ್ಷಿಯ ಮೊಟ್ಟೆಗಳ ಬಣ್ಣಗಳನ್ನು ದಾಖಲಿಸಲಾಯಿತು. ಈ ಮಾಹಿತಿಯನ್ನು ಪ್ರಪಂಚ ಭೂಪಟದಲ್ಲಿ ಚಿತ್ರಿಸಲಾಯಿತು. ಆ ಭೂಪಟ ಇಲ್ಲಿ ತೋರಿಸಿದೆ. ಇಲ್ಲಿ ಗಮನಿಸಿದರೆ ನೀವೇ ಹೇಳಬಹುದು. ಉತ್ತರ ಧೃವದಂತಹ ಶೀತ ವಲಯಗಳಲ್ಲಿ ಪಕ್ಷಿಯ ಮೊಟ್ಟೆಯ ಬಣ್ಣ ಗಾಢವಾಗಿದೆ. ಅದನ್ನು ಕಾಫಿ ಬಣ್ಣದ ಛಾಯೆಗಳಲ್ಲಿ (Shades) ಗುರುತಿಸಲಾಗಿದೆ. ಹಾಗೂ ಉಷ್ಣವಲಯಗಳಲ್ಲಿರುವ ಪಕ್ಷಿಯ ಮೊಟ್ಟೆಯ ಬಣ್ಣ ತಿಳಿಯಾಗಿವೆ. ಅದನ್ನು ನೀಲಿ ಬಣ್ಣದ ಛಾಯೆಗಳಲ್ಲಿ ಗುರುತಿಸಲಾಗಿದೆ. ಇದರಿಂದ ಸುಲಭವಾಗಿ ನಾವು ಹೀಗೆ ಅರ್ಥೈಸಿಕೊಳ್ಳಬಹುದು, ಮೊಟ್ಟೆಯ ಬಣ್ಣ ಆ ಪ್ರದೇಶದ ಉಷ್ಣತೆಗೆ ತಕ್ಕಂತೆ ಬದಲಾಗಿವೆ. ಸ್ವಾಭಾವಿಕವಾಗಿ ಹೀಗೆ ಪಕ್ಷಿಗಳ ಮೊಟ್ಟೆಗಳು ಬಣ್ಣ ಬಣ್ಣಗಳಲ್ಲಿ ಕಾರಣ ಅಥವಾ ಕಾರಣವಿಲ್ಲದೆ ಮಾತ್ರ ಇಲ್ಲ. ಇದರಿಂದ ಪಕ್ಷಿಯ ಮೊಟ್ಟೆಗೆ ಏನೋ ಉಪಯೋಗವಿರಬಹುದು. ಯೋಚಿಸಿ ನೋಡೋಣ…
ಹೌದು ನಿಮ್ಮ ಊಹೆ ಸರಿಯಾಗಿದೆ. ಶೀತ ಪ್ರದೇಶಗಳಲ್ಲಿ ಮೊಟ್ಟೆಗಳು ಗಾಢ ಬಣ್ಣದಲ್ಲಿರುವುದರಿಂದ ಆ ಮೊಟ್ಟೆ ಚೆನ್ನಾಗಿ/ಹೆಚ್ಚಾಗಿ ಸೂರ್ಯನ ಶಾಖವನ್ನು ಹೀರಿ ಹೆಚ್ಚು ಸಮಯದವರೆಗೆ ಹಿಡಿದಿಟ್ಟುಕೊಳ್ಳಬಹುದು. ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆ ಧರಿಸಿ ನಾವು ಬಿಸಿಲಿನಲ್ಲಿ ನಿಂತ ಹಾಗೆ. ಅನುಭವ ಆಗಿರಬೇಕಲ್ಲವೇ? ಸರಿ ಅದರಿಂದ ಮೊಟ್ಟೆಗೆ ಉಪಯೋಗವೇನು? ಎನ್ನುತ್ತೀರಾ.. ಉಪಯೋಗ ಇದೆ. ಹಳ್ಳಿಯ ಜನರಿಗೆ ಇದು ಸಾಮಾನ್ಯ ಜ್ಞಾನ, ಮೊಟ್ಟೆಗೂ ಮತ್ತು ಉಷ್ಣತೆಗೂ ಅವಿನಾಭಾವ ಸಂಬಂಧವಿದೆ. ಅದು ಎಷ್ಟು ಮುಖ್ಯವೆಂದು ಪ್ರಾರಂಭದಲ್ಲೇ ಹೇಳಿರುವ ಘಟನೆಯಲ್ಲಿ ವಿವರಿಸಿದ್ದೇನೆ. ಸರಿಯಾದ ಉಷ್ಣತೆ ಮೊಟ್ಟೆಗೆ ದೊರಕದೇ ಇದ್ದರೆ ಮೊಟ್ಟೆ ಒಡೆದು ಮರಿಯಾಗಲು ಸಾಧ್ಯವಿಲ್ಲ. ಹೀಗಿರುವಾಗ ಮಂಜಿನಿಂದ ಕೂಡಿರುವ ಧೃವ ಪ್ರದೇಶಗಳಲ್ಲಿ ಕಾವಿಗೆ ಕೂತಿರುವ ಪಕ್ಷಿ ಊಟವನ್ನು ಅರಸಿ ಹೋಗಬೇಕಲ್ಲವೇ? ಆಗ ಮೊಟ್ಟೆಯ ಉಷ್ಣಾಂಶ ಗಂಭೀರವಾಗಿ ಇಳಿಯುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹ ಸಮಯದಲ್ಲಿ ಮೊಟ್ಟೆಯ ಬಣ್ಣ ಗಾಢವಾಗಿದ್ದರೆ, ಮೊಟ್ಟೆಯ ಉಷ್ಣಾಂಶ ಇನ್ನೂ ಕೆಲವು ನಿಮಿಷಗಳ ಕಾಲ ಹಾಗೆ ಉಳಿಯುತ್ತದೆ. ಹೀಗೆ ತಾಯಿ ಪಕ್ಷಿಗೆ ಸಿಗುವ ಈ ಕೆಲವು ನಿಮಿಷಗಳು ಅವುಗಳ ಜೀವ ಉಳಿಸುವ ಸಂಜೀವಿನಿ ಕ್ಷಣಗಳೇ ಆಗಿವೆ. ವಿಷಯ ಸಣ್ಣದೆನಿಸಿದರೂ ಪ್ರಕೃತಿಯಲ್ಲಿ ಅದೇ ವಿಚಾರ ಒಂದು ಜೀವದ ಅಥವಾ ಒಂದು ಪೀಳಿಗೆಯ ಅಳಿವು-ಉಳಿವಿನ ಪ್ರಶ್ನೆಯಾಗಿದೆ.
ಹಾಗೆಂದ ಮಾತ್ರಕ್ಕೆ ಮೊಟ್ಟೆಯ ವಿವಿಧ ಬಣ್ಣಗಳ ಕೆಲಸ ಕೇವಲ ಇಷ್ಟೇ ಎಂದೇನಲ್ಲ. ಇದು ಸಂಶೋಧನೆಯ ಹೆಸರಲ್ಲಿ ಕೆಲವು ಸಂಶೋಧಕರು ಮಾಡಿದ ಪ್ರಯತ್ನಕ್ಕೆ, ಪ್ರಕೃತಿಯ ಬಗೆಗಿನ ವಿಸ್ಮಯಗಳ ಅನಂತ ಪುಟಗಳ ಪುಸ್ತಕದಲ್ಲಿ, ಪ್ರಕೃತಿ ತೆರೆದ ಒಂದೇ ಒಂದು ಪುಟ ಮಾತ್ರ . ಇನ್ನೂ ಓದಲು ಇಚ್ಛಿಸುವವರು ಮುಂದುವರೆಯಬಹುದು…
ಮೂಲ ಲೇಖನ: ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.
?ತಿಳಿದುಕೊಳ್ಳಬೇಕಾದ ವಿಷಯ ತಡವಾಗಿ ತಿಳಿದಂತಾಯಿತು… ಆದರೆ ಮೊಟ್ಟೆಯ ಬಣ್ಣಕ್ಕಿಂತ ಹಲವು ಮೊಟ್ಟೆಗಳ ಮೇಲೆ ಇರುವ ಚುಕ್ಕೆಗಳಿಗೆ ಕಾರಣವೇನೆಂಬುವುದರ ಬಗೆ ಹೇಗೆ? ???