ಚಿಟ್ಟೆಯೋ. . . . ? ಪತಂಗವೋ. . . . ?

ಚಿಟ್ಟೆಯೋ. . . . ? ಪತಂಗವೋ. . . . ?

© ಅರವಿಂದ ರಂಗನಾಥ್

ನಾವು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ವಿಧದ ಪ್ರಾಣಿ ಪಕ್ಷಿಗಳನ್ನು ನೋಡುತ್ತೇವೆ. ಈ ಜೀವಿಗಳು ಒಂದೇ ಸ್ಥಳಕ್ಕೆ ಸೀಮಿತವಾಗಿರದೆ ತಮ್ಮ  ಆಹಾರ, ವಿಹಾರ ಮತ್ತು ಜೈವಿಕ ಗುಣಲಕ್ಷಣಗಳಿಗೆ ಅನುಗುಣವಾಗಿ ಭೂಮಿಯ ತುಂಬ ಹರಡಿಕೊಂಡಿವೆ. ಅಂತೆಯೇ ಹೆಚ್ಚು ಹಚ್ಚ ಹಸಿರಿರುವ ಪ್ರದೇಶದಲ್ಲಿ ಅನೇಕ ಜೀವಿಗಳು ಕಂಡುಬಂದರೆ, ಮರಳುಗಾಡಿನಲ್ಲಿ ಅಷ್ಟೊಂದು ಜೀವಿಗಳು ಗೋಚರಿಸುವುದಿಲ್ಲ. ಅಲ್ಲದೆ ಕೆಲವು ಜೀವಿಗಳು ತಮ್ಮ ಆಹಾರ, ವಿಹಾರ, ವಸತಿ ಬೇರೆ ಬೇರೆಯಾಗಿದ್ದರೂ ಕೂಡ ಬಾಹ್ಯ ಲಕ್ಷಣದಲ್ಲಿ ಒಂದೇ ರೀತಿ ಕಾಣುತ್ತವೆ. ಅಂತೆಯೇ ಈ ಚಿಟ್ಟೆಗಳು ಮತ್ತು ಪತಂಗಗಳೂ ಕೂಡ ಬಾಹ್ಯ ಲಕ್ಷಣದಲ್ಲಿ ತಕ್ಷಣಕ್ಕೆ ಒಂದೇ ರೀತಿ ಕಂಡರೂ ಸಹ ಅವು ಬೇರೆ ಬೇರೆಯೇ ಆಗಿವೆ.

 ಅತೀ ಸೂಕ್ಷ್ಮವಲಯಗಳಲ್ಲಿ ಒಂದಾದ ಸಹ್ಯಾದ್ರಿ ಎಂದು ಕರೆಯಲ್ಪಡುವ ಪಶ್ಚಿಮ ಘಟ್ಟಗಳು ಜೈವಿಕ ಭೂಗೋಳ ಪ್ರದೇಶಗಳಾಗಿದ್ದು, ಅತಿ ಹೆಚ್ಚು ಜೀವ ವೈವಿಧ್ಯತೆಯನ್ನು ಹೊಂದಿದೆ. ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ 1600 ಕಿಲೋಮೀಟರ್ ದೂರದಲ್ಲಿ 1,40,000 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಪರ್ವತ ಶ್ರೇಣಿಯಾಗಿದ್ದು, ತಮಿಳುನಾಡು, ಕೇರಳ, ಕರ್ನಾಟಕ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಹರಡಿಕೊಂಡಿದೆ. ಪಶ್ಚಿಮ ಘಟ್ಟಗಳು ಎಲೆ ಉದುರುವ ಕಾಡು, ನಿತ್ಯಹರಿದ್ವರ್ಣ ಕಾಡು, ಕುರುಚಲು ಕಾಡು, ಶೋಲಾ ಮತ್ತು ಸವನ್ನಾ ಹುಲ್ಲುಗಾವಲನ್ನು ಹೊಂದಿದೆ.

ಕರ್ನಾಟಕವು ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ಸಮೃದ್ಧ ವೈವಿಧ್ಯತೆಯನ್ನು ಹೊಂದಿದ್ದು, ಪರಿಸರ ನಮತೋಲನವನ್ನು ಕಾಪಾಡುವಲ್ಲಿ ಈ ಪ್ರಭೇದಗಳು ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಕೇವಲ ಪಶ್ಚಿಮ ಘಟ್ಟಗಳಿಗೆ ಸೀಮಿತವಾದ ಕೆಲವು ಜೀವಿಗಳನ್ನು ಸಹ ಇಲ್ಲಿ ಕಾಣಬಹುದು (Endemism). ಇಲ್ಲಿ ಸುಮಾರು 4900 ಪ್ರಭೇದದ ಹೂ ಬಿಡುವ ಸಸ್ಯಗಳು, 139 ಪ್ರಭೇದದ ಸಸ್ತನಿಗಳು, 500 ಪ್ರಭೇದದ ಪಕ್ಷಿಗಳು, 179 ಪ್ರಭೇದದ ಕಪ್ಪೆಗಳು ಮತ್ತು 334 ಪ್ರಭೇದದ ಸರಿಸೃಪಗಳು ಇಲ್ಲಿವೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ಚಿಟ್ಟೆಗಳು ಮತ್ತು ಪತಂಗಗಳು ಲೆಪಿಡಾಪ್ಟೆರ ವರ್ಗಕ್ಕೆ (Lepidoptera) ಸೇರಿದ್ದು, ಅದರಲ್ಲಿ ಚಿಟ್ಟೆಗಳು ರೊಪಲೊಸೆರ (Rhopalocera) ಎಂಬ ಪ್ರವರ್ಗಕ್ಕೆ ಮತ್ತು ಪತಂಗಗಳು ಹೆಟೆರೊಸೆರ (Heterocera)  ಎಂಬ ಪ್ರವರ್ಗಕ್ಕೆ ಸೇರಿವೆ. ಲೆಪಿಡಾಪ್ಟೆರ ವರ್ಗದಲ್ಲಿ ಸುಮಾರು 1,00,000 ಪ್ರಭೇದದ ಚಿಟ್ಟೆಗಳು ಮತ್ತು 1,27,000 ಪ್ರಭೇದದ ಪತಂಗಗಳು ಇವೆ ಎಂದು ಗುರುತಿಸಲಾಗಿದೆ.

ಚಿಟ್ಟೆಗಳು ಮತ್ತು ಪತಂಗಗಳ ನಡುವಿನ ವ್ಯತ್ಯಾಸ

ಕ್ರ. ಸಂ.ಚಿಟ್ಟೆಗಳುಪತಂಗಗಳು
01ಚಿಟ್ಟೆಗಳ ಮೀಸೆಯು (Antennae) ತೆಳುವಾಗಿದ್ದು, ತುದಿ ಭಾಗವು ದಪ್ಪವಾಗಿರುತ್ತದೆ ಹಾಗೂ ಕೂದಲುಗಳನ್ನು ಹೊಂದಿರುವುದಿಲ್ಲ.ಪತಂಗಗಳ ಮೀಸೆಯು (Antennae) ದಪ್ಪವಾಗಿದ್ದು, ಚಿಕ್ಕ ಚಿಕ್ಕ ಕೂದಲುಗಳನ್ನು ಹೊಂದಿರುತ್ತದೆ ಹಾಗೂ ನೋಡಲು ಹಕ್ಕಿಯ ಪುಕ್ಕದಂತಿರುತ್ತದೆ.
02ಚಿಟ್ಟೆಗಳು ತಮ್ಮ ಮೀಸೆಯನ್ನು ಯಾವಾಗಲು ಮುಖದ ಮುಂದಿಟ್ಟುಕೊಂಡಿರುತ್ತವೆ.ಪತಂಗಗಳು ತಮ್ಮ ಮೀಸೆಯನ್ನು ಯಾವಾಗಲು ರೆಕ್ಕೆಯ ಸಮೀಪದಲ್ಲಿ ಇಟ್ಟು ಕೊಂಡಿರುತ್ತವೆ.
03ಚಿಟ್ಟೆಗಳು ವಿಶ್ರಾಂತ ಸ್ಥಿತಿಯಲ್ಲಿ ರೆಕ್ಕೆಗಳನ್ನು ಮಡಚಿಕೊಂಡಿರುತ್ತವೆ.ಪತಂಗಗಳು ವಿಶ್ರಾಂತ ಸ್ಥಿತಿಯಲ್ಲಿ ರೆಕ್ಕೆಗಳನ್ನು ಬಿಚ್ಚಿಕೊಂಡಿರುತ್ತವೆ.
04ಚಿಟ್ಟೆಗಳು ಸಣ್ಣದಾದ ಹೊಟ್ಟೆಯನ್ನು ಹೊಂದಿರುತ್ತವೆ.ಪತಂಗಗಳು ದಪ್ಪದಾದ ಹೊಟ್ಟೆಯನ್ನು ಹೊಂದಿರುತ್ತವೆ.
05ಚಿಟ್ಟೆಗಳ ಮೊಟ್ಟೆಗಳು ದುಂಡಾಗಿ ಅಥವಾ ಚಪ್ಪಟೆಯಾಗಿರುತ್ತವೆ.ಪತಂಗಗಳ ಮೊಟ್ಟೆಗಳು ದುಂಡಾಗಿ, ಬಾಟಲ್ ಅಥವಾ ತಟ್ಟೆ ಆಕಾರದಲ್ಲಿರುತ್ತವೆ.
06ಚಿಟ್ಟೆಗಳ ಮರಿ ಹುಳಗಳ ಮೈ ಮೇಲಿನ ಕೂದಲಿನ ರಚನೆ ಚುಚ್ಚುವುದಿಲ್ಲ.ಪತಂಗಗಳು ಮರಿ ಹುಳಗಳ ಮೈ ಮೇಲಿನ ಕೂದಲಿನ ರಚನೆ ಚುಚ್ಚುತ್ತದೆ.
07ಚಿಟ್ಟೆಗಳು ಆಕರ್ಷಕ ಗಾಢ ಬಣ್ಣದ್ದಾಗಿರುತ್ತದೆ.ಪತಂಗಗಳು ಮಂದ ಬಣ್ಣದ್ದಾಗಿರುತ್ತವೆ.
08ಚಿಟ್ಟೆಗಳು ಹಗಲಿನಲ್ಲಿ ಸಂಚರಿಸುತ್ತವೆ.ಪತಂಗಗಳು ಹೆಚ್ಚಾಗಿ ರಾತ್ರಿ ವೇಳೆಯಲ್ಲಿ ಸಂಚರಿಸುತ್ತವೆ.

ಪತಂಗಗಳ ಜೀವನ ಚಕ್ರ

ಚಿಟ್ಟೆಗಳು ಮತ್ತು ಪತಂಗಗಳು ತಮ್ಮ ಜೀವಿತಾವಧಿಯಲ್ಲಿ ನಾಲ್ಕು ವಿಭಿನ್ನ ಹಂತಗಳನ್ನು ಒಳಗೊಂಡು ಸಂಪೂರ್ಣ ರೂಪಾಂತರಕ್ಕೆ ಒಳಗಾಗುತ್ತದೆ. ಅವುಗಳೆಂದರೆ ಮೊಟ್ಟೆ, ಕಂಬಳಿ ಹುಳು, ಪೊರೆ ಹುಳು ಮತ್ತು ವಯಸ್ಕ ಹಂತ.

ಚಿಟ್ಟೆಗಳು ಮತ್ತು ಪತಂಗಗಳು ಆರೋಗ್ಯಕರ ಪರಿಸರ ವ್ಯವಸ್ಥೆಯ ಸೂಚಕವಾಗಿದ್ದು (Biological indicator), ಇವುಗಳು ಸಮೃದ್ಧವಾಗಿರುವ ಪ್ರದೇಶದಲ್ಲಿ ಇತರ ಕಶೇರುಕಗಳ ಸಂಖ್ಯೆ ಕೂಡ ಸಮೃದ್ಧವಾಗಿರುತ್ತದೆ ಎಂದು ಸಂಶೋಧನೆಗಳಲ್ಲಿ ಹೇಳಲಾಗಿದೆ. ಅನೇಕ ಸಸ್ಯಗಳ ನೈಸರ್ಗಿಕ ಪರಾಗಸ್ಪರ್ಶ ಮತ್ತು  ಕೀಟ ನಿಯಂತ್ರಣ ಸೇರಿದಂತೆ ವ್ಯಾಪಕವಾದ ಪ್ರಯೋಜನವನ್ನು ಇವು ಪರಿಸರಕ್ಕೆ ಒದಗಿಸಿಕೊಡುತ್ತವೆ. ಅಲ್ಲದೆ ಆಹಾರ ಸರಪಳಿಯ ಒಂದು ಭಾಗವಾಗಿದ್ದು, ಪಕ್ಷಿಗಳು, ಹಲ್ಲಿಗಳು ಮತ್ತು ಇನ್ನಿತರ ಕೀಟ ಭಕ್ಷಕಗಳು ಇವುಗಳನ್ನು  ಬೇಟೆಯಾಡುತ್ತವೆ ಹಾಗೆಯೇ  ಜೀವವೈವಿಧ್ಯತೆಯ ಸಮೃದ್ಧತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇವುಗಳು ಸುಂದರವಾಗಿರುವುದರಿಂದ ಪ್ರಕೃತಿಯ ನೈಸರ್ಗಿಕ ಭೂದೃಶ್ಯದ ಸೌಂದರ್ಯವನ್ನು ಸಹ ಹೆಚ್ಚಿಸುತ್ತವೆ.

ಅನೇಕ ವಿಸ್ಮಯಗಳನ್ನೊಳಗೊಂಡಿರುವ ಅತೀ ಸುಂದರ ಜೀವಿಗಳಲ್ಲಿ ಚಿಟ್ಟೆ ಮತ್ತು ಪತಂಗಗಳು ಜೈವಿಕ ಸರಪಳಿಯ ಮುಖ್ಯ ಕೊಂಡಿಯಾಗಿದ್ದು, ಇವುಗಳ ಸಂತತಿ ದಿನೇ ದಿನೇ ಕ್ಷೀಣಿಸುತ್ತಿರುವುದು ಗಣನೆಗೆ ತೆಗೆದುಕೊಳ್ಳಬೇಕಾದ ವಿಷಯವೇ ಸರಿ. ಮಾನವ ತನ್ನ ಸುಖಕ್ಕಾಗಿ ಜೀವಿಗಳ ಜೀವನಕ್ಕೆ ಆಧಾರವಾದ ಮರ-ಗಿಡಗಳನ್ನು ಕಡಿದು ಇಂತಹ ಅನೇಕ ಜೀವಿಗಳ ಬದುಕನ್ನೇ ನಾಶ ಮಾಡುತ್ತಿದ್ದಾನೆ. ‘ಒಂದು ಮರ ಹಲವು ಜೀವಸಂಕುಲ’ ಎಂಬಂತೆ ಮರ-ಗಿಡಗಳು ಪ್ರತಿಯೊಂದು ಜೀವಿಯ ಬದುಕಿಗೆ ಆಸರೆಯಾಗಿರುತ್ತದೆ. ಆದ್ದರಿಂದ ನಮ್ಮ ಕೈಲಾದಷ್ಟು ಮರ ಗಿಡಗಳನ್ನು ಉಳಿಸಿ ಬೆಳೆಸೋಣ.

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕೆಲವು ಚಿಟ್ಟೆಗಳು


© ಸೌಮ್ಯ ಅಭಿನಂದನ್
ಪಟ್ಟೆ ಕಾಕ (Double Banded crow)
ಕುಟುಂಬ: ನಿಮ್ಫಾಲಿಡೆ (Nymphalidea)
ರೆಕ್ಕೆಯ ಅಳತೆ: 95-105 ಮಿ. ಮೀ.

© ಸೌಮ್ಯ ಅಭಿನಂದನ್
ಸ್ವಟಿಕ (Danaid Eggfly)
ಕುಟುಂಬ: ನಿಮ್ಫಾಲಿಡೆ (Nymphalidea)
ರೆಕ್ಕೆಯ ಅಳತೆ: 70-85 ಮಿ. ಮೀ.
© ಸೌಮ್ಯ ಅಭಿನಂದನ್
ಹುಲ್ಲು ಭೂತ (Grass Demon)
ಕುಟುಂಬ: ಹೆಸ್ಪೆರಿಡೆ (Hesperiidae)
ರೆಕ್ಕೆಯ ಅಳತೆ: 40-48 ಮಿ. ಮೀ.
© ಸೌಮ್ಯ ಅಭಿನಂದನ್
ಹಸುರು ಕಣ್ಣು (Double Banded Judy)
ಕುಟುಂಬ: ಪ್ಯಾಪಿಲಿಯೊನಿಡಿಯಾ (Papilionidea)
ರೆಕ್ಕೆಯ ಅಳತೆ: 40-50 ಮಿ. ಮೀ.
© ಸೌಮ್ಯ ಅಭಿನಂದನ್
ನಿಂಬಿ (Lime butterfly)
ರೆಕ್ಕೆಯ ಅಳತೆ: 80-100 ಮಿ. ಮೀ.
ಕುಟುಂಬ: ಪ್ಯಾಪಿಲಿಯೊನಿಡಿಯಾ (Papilionidea)
© ಸೌಮ್ಯ ಅಭಿನಂದನ್
ಸಂಚಾರಿ (Cruiser )
ರೆಕ್ಕೆಯ ಅಳತೆ: 72-110 ಮಿ. ಮೀ.
ಕುಟುಂಬ: ನಿಮ್ಫಾಲಿಡೆ (Nymphalidea)

ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಕೆಲವು ಪತಂಗಗಳು

© ಸೌಮ್ಯ ಅಭಿನಂದನ್
ದೊಡ್ಡ ಕಣ್ಣಿನ ಗೂಬೆ ಪತಂಗ (Large eyed owl moth)
ಕುಟುಂಬ: ನೋಕ್ಟುಯಿಡಿಯಾ (Noctuoidea)
ರೆಕ್ಕೆಯ ಅಳತೆ: 134-160 ಮಿ. ಮೀ.
© ಸೌಮ್ಯ ಅಭಿನಂದನ್
ಕೆಂಪು ಸ್ಲಗ್ ಪತಂಗ (Red slug moth)
ಕುಟುಂಬ: ಜೈಗೆನೊಯಿಡಿಯಾ Zygaenoidea)
ರೆಕ್ಕೆಯ ಅಳತೆ: 50-56 ಮಿ. ಮೀ.
© ಸೌಮ್ಯ ಅಭಿನಂದನ್
ಸಾಮಾನ್ಯ ಗೂಬೆ ಪತಂಗ (Common Owlet moth)
ಕುಟುಂಬ: ನೋಕ್ಟುಯಿಡಿಯಾ (Noctuoidea)
ರೆಕ್ಕೆಯ ಅಳತೆ: 66-85 ಮಿ. ಮೀ.
© ಜಾನ್ಹವಿ ರಮೇಶ್
ವಿಶಾನೌ ಲೋಪೆಟ್ ಪತಂಗ (Vishanou loppet moth)
ಕುಟುಂಬ: ಲ್ಯಾಸಿಯೊಕಾಂಪೊಯಿಡಿಯಾ (Lasiocampoidea)
ರೆಕ್ಕೆಯ ಅಳತೆ: 47-67 ಮಿ. ಮೀ.
© ಸೌಮ್ಯ ಅಭಿನಂದನ್
ಸೈನ್ಯ ಹಸಿರು ಪತಂಗ (Army Green Moth)
ಕುಟುಂಬ: ಬಾಂಬಿಕೋಯಿಡಿಯಾ (Bombycoidea)
ರೆಕ್ಕೆಯ ಅಳತೆ: 90-110 ಮಿ. ಮೀ.
© ಸೌಮ್ಯ ಅಭಿನಂದನ್
ಕಪ್ಪು ಚುಕ್ಕೆಯ ನಕ್ಸ ಪತಂಗ (Naxa species)
ಕುಟುಂಬ: ಜಿಯೊಮೆಟ್ರೊಯಿಡಿಯಾ (Geometroidea)
© ಸೌಮ್ಯ ಅಭಿನಂದನ್
ನೀಲಿ ಹುಲಿ ಪತಂಗ (Blue Tiger Moth)
ಕುಟುಂಬ: ಜಿಯೊಮೆಟ್ರೊಯಿಡಿಯಾ (Geometroidea)
ರೆಕ್ಕೆಯ ಅಳತೆ: 50-85 ಮಿ. ಮೀ.
© ಸೌಮ್ಯ ಅಭಿನಂದನ್
ಬೆಳ್ಳಿ ಪಟ್ಟೆ ಗಿಡುಗ ಪತಂಗ (Silver striped hawk moth)
ಕುಟುಂಬ: ಬಾಂಬಿಕೋಯಿಡಿಯಾ (Bombycoidea)
ರೆಕ್ಕೆಯ ಅಳತೆ: 54-80 ಮಿ. ಮೀ

ಕಂಬಳಿಹುಳುಗಳು

© ಸೌಮ್ಯ ಅಭಿನಂದನ್
ಕಂಬಳಿಹುಳು (Tussock moth caterpillar)
© ಸೌಮ್ಯ ಅಭಿನಂದನ್
ಕಂಬಳಿಹುಳು (Southern Birdwing Butterfly caterpillar)
© ಸೌಮ್ಯ ಅಭಿನಂದನ್
ಕಂಬಳಿಹುಳು (moth caterpillar)
© ಸೌಮ್ಯ ಅಭಿನಂದನ್
ಕಂಬಳಿಹುಳು (Common Jay Butterfly caterpillar)

ಲೇಖನ: ಸೌಮ್ಯ ಅಭಿನಂದನ್
                      ಶಿವಮೊಗ್ಗ ಜಿಲ್ಲೆ.

Spread the love

24 thoughts on “ಚಿಟ್ಟೆಯೋ. . . . ? ಪತಂಗವೋ. . . . ?

  1. ವಿವರಣೆ ತುಂಬಾ ಚೆನ್ನಾಗಿದೆ. Photo exhibition ಮಾಡ್ಬಹುದು ಅಷ್ಟೊಂದು collection ಹಾಕಿದ್ದೀರ!

    1. ಹೌದು ಲೇಖಕಿಯು ಲೇಖನವನ್ನು ಬರೆಯುವ ಮುಂಚೆ ದಾಖಲಿಸಿರುವ ಚಿತ್ರಗಳ ಹಿಂದಿನ ಶ್ರಮ ಎದ್ದು ಕಾಣಿಸುತ್ತಿದೆ. ನಿಮ್ಮ ಅನಿಸಿಕೆಗೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು Greeshma Arunkumar

  2. Well written article on differences between butterflies and moths
    Kannada names r interesting to read and author has worked hard to collect and write the article on these biological indicators , thank u

    1. ನಿಮ್ಮ ಅನಿಸಿಕೆಗೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು Ramanjinaiah

  3. ಉತ್ತಮ ಮಾಹಿತಿಯುಳ್ಳ ಬರಹ. ಸೊಗಸಾಗಿದೆ. ಇನ್ನೂ ವಿಶೇಷ ಸಂಗತಿಗಳನ್ನು ಹುಡುಕಿ ಬರೆಯುವ ಪ್ರಯತ್ನ ಮಾಡಿ.

    1. ನಿಮ್ಮ ಅನಿಸಿಕೆಗೆ ಹಾಗು ಪ್ರೋತ್ಸಾಹಕ್ಕೆ ಧನ್ಯವಾದಗಳು ವಿನಾಯಕ. ಖಂಡಿತವಾಗಿಯೂ ಮುಂದಿನ ಲೇಖನದಲ್ಲಿ ಲೇಖಕರು ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಬರೆಯುತ್ತಾರೆ. ಧನ್ಯವಾದಗಳು

Comments are closed.

error: Content is protected.