ಗಂಡು ನವಿಲಿನ ಅಧಿಪತ್ಯ

© ಡಾ. ಎಸ್. ಶಿಶುಪಾಲ
ನವಿಲು ನಮ್ಮ ರಾಷ್ಟ್ರೀಯ ಪಕ್ಷಿ. ಬಣ್ಣ ಬಣ್ಣದ ಗರಿಗಳಿಂದ ಎಲ್ಲರ ಮನಸೂರೆಗೊಳಿಸುತ್ತದೆ. ನಮ್ಮ ಕವನ, ಕಥೆ ಮತ್ತು ಸಿನಿಮಾಗಳಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಅಂತೆಯೇ ಈ ಮೊದಲು ನವಿಲಿನ ಗರಿಗಳನ್ನು ಲೇಖನಿಯಾಗಿ ಬಳಸಿದ್ದುಂಟು. ಸಾಧು-ಸಂತರ ಚಾಮರ ಸೇವೆಯಲ್ಲಿ ಈಗಲೂ ಬಳಕೆಯಲ್ಲಿದೆ.
ಸಾಮಾನ್ಯವಾಗಿ ಭಾರತದೆಲ್ಲೆಡೆ ಕಾಣಸಿಗುವ ಈ ಹಕ್ಕಿಯ ಜೀವಶಾಸ್ತ್ರೀಯ ಹೆಸರು ಪಾವೋ ಕ್ರಿಸ್ಟಾಟಸ್. ಗಂಡು ಹಕ್ಕಿಗಳು 180 ರಿಂದ 230 ಸೆ.ಮೀ. ಬೆಳೆದರೆ ಹೆಣ್ಣು ಹಕ್ಕಿಗಳು 90 ರಿಂದ 100 ಸೆ.ಮೀ. ಬೆಳೆಯಬಲ್ಲವು. ಗಂಡು ಹಕ್ಕಿಗೆ ನೀಲಿ ಬಣ್ಣದ ಕತ್ತು ಮತ್ತು ಎದೆಯಿದ್ದು ಹೊಳಪಿನ ಹಸಿರು ಬಣ್ಣದ ಉದ್ದದ ಬಾಲದ ಗರಿಗಳಲ್ಲಿ ವರ್ಣರಂಜಿತ ಕಣ್ಣುಗಳಿರುತ್ತವೆ. ಹೆಣ್ಣು ಹಕ್ಕಿಗೆ ಮಾಸಲು ಬಿಳಿಯ ಕತ್ತು ಮತ್ತು ಹೊಟ್ಟೆಯಿದೆ. ಯಾವುದೇ ಆಕರ್ಷಕ ಗರಿಗಳಿಲ್ಲ. ಗಂಡು ಮತ್ತು ಹೆಣ್ಣುಗಳೆರಡರಲ್ಲಿಯೂ ತಲೆಯ ಮೇಲೆ ಜುಟ್ಟು ಇರುತ್ತದೆ. ಕಹಳೆಯಿಂದ ಬಂದಂತಹ ಸ್ವರದಂತೆ ಕೂಗು.
ಕುದುರೆಮುಖ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿ, ಉಡುಪಿ-ಧರ್ಮಸ್ಥಳ ಹೆದ್ದಾರಿಯ ಮಧ್ಯೆ ಇರುವ ‘ನಾರಾವಿ’ಯೆಂಬ ಹಳ್ಳಿಯ ಮನೆಯ ಮುಂದಿನ ಬಯಲಿನಲ್ಲಿ ರೋಮಾಂಚನಗೊಳಿಸುವ ಎರಡು ಗಂಡು ನವಿಲುಗಳ ಕಾದಾಟದ ದೃಶ್ಯ ಕ್ಯಾಮರ ಕಣ್ಣಿನಲ್ಲಿ ಸೆರೆಯಾಯಿತು. ಉದ್ದಬಾಲದ ವಯಸ್ಕ ಗಂಡು ಸಣ್ಣಬಾಲದ ಯುವ ಗಂಡು ಹಕ್ಕಿಯೊಂದಿಗೆ ತನ್ನ ಶಕ್ತಿ ತೋರ್ಪಡಿಸುವ ಕ್ರಿಯೆ ನಡೆದಿತ್ತು. ಆ ದೃಶ್ಯ ಕರಾವಳಿ ಕರ್ನಾಟಕದ ಹೆಸರುವಾಸಿ ಮನರಂಜಕ ಕ್ರೀಡೆ, ಕೋಳಿ ಅಂಕದ ಕಾದಾಟವನ್ನು ನೆನಪಿಸಿತು. ಮಾರಾಣಾಂತಿಕವಲ್ಲದಿದ್ದರೂ ತನ್ನ ಸುತ್ತಲಿನ ಜಾಗದ ಮತ್ತು ಮಿಲನಕ್ಕೆ ಸಜ್ಜಾಗಿರುವ ಅಧಿಪತ್ಯಕ್ಕಾಗಿ ಕಾದಾಟ ನಡೆದಿತ್ತು. ಎರಡು ಹಕ್ಕಿಗಳು ಹೆಚ್ಚು ಹೆಚ್ಚು ಎತ್ತರಕ್ಕೆ ಎಗರಿ ತನ್ನ ಕಾಲುಗಳ ಉಗುರುಗಳಿಂದ ವಿರೋಧಿಯನ್ನು ಹಣಿಸುವ ಕ್ರಿಯೆ ಜರುಗಿತ್ತು. ಬಲಿಷ್ಠ ಹಕ್ಕಿಯ ಶಕ್ತಿ ಪ್ರದರ್ಶನವಾದ ಕೂಡಲೇ ಇನ್ನೂ ಕಲಿಯಬೇಕಿದ್ದ ಯುವ ಹಕ್ಕಿ ತನ್ನ ಸರದಿ ಬಂದಾಗ ನೋಡಿಕೊಳ್ಳುವೆ ಎಂದುಕೊಂಡು ಪೊದೆಗಳಲ್ಲಿ ಮರೆಯಾಯಿತು. ಶಕ್ತಿಯುತ ಜೀವಿ ಉಳಿಯುವಂತಾಗಲಿ ಎಂಬ ಪ್ರಕೃತಿಯ ನಿಯಮದ ಪರಿಪಾಲನೆಯಷ್ಟೇ ಈ ಕಾದಾಟದ ಉದ್ದೇಶ. ತನ್ನದೇ ಇತಿಮಿತಿಯಲ್ಲಿ ಶಕ್ತಿ ಪ್ರದರ್ಶಿಸಿ ಪಾರಮ್ಯ ಮೆರೆಯುವ ಅವಕಾಶವಷ್ಟೇ. ಮನುಷ್ಯರಂತಹ ಧೂರ್ತತನದ ಕಲ್ಮಶಯುಕ್ತ ಹೋರಾಟವಲ್ಲವದು. ಮುಂದಿನ ಪೀಳಿಗೆ ಆರೋಗ್ಯ ಪೂರ್ಣವಾಗಿದ್ದು, ಪರಿಸರದಲ್ಲಿನ ಏರುಪೇರುಗಳನ್ನು ಸಹಿಸಿಕೊಂಡು ಬದುಕುವ, ಸಂತತಿ ಮುಂದುವರಿಯಲು ಅನುಕೂಲವಾಗುವ ಡಿ.ಎನ್.ಎ. ಜೀವತಂತು (ಜೀನ್ಸ್) ಇರುವ ವೀರ್ಯಾಣು ಉತ್ಪಾದಿಸುವ ಶಕ್ತಿಶಾಲಿಯ ಪ್ರದರ್ಶನ ಮಾತ್ರ.

ಲೇಖನ ಮತ್ತು ಛಾಯಾಚಿತ್ರ : ಡಾ. ಎಸ್. ಶಿಶುಪಾಲ
ದಾವಣಗೆರೆ ಜಿಲ್ಲೆ

ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ
‘ಕಾನನ’ಕನ್ನಡದಲ್ಲೊಂದು ವಿಶಿಷ್ಟ ಪತ್ರಿಕೆ. ಆಕರ್ಷಕ ಚಿತ್ರಗಳು, ವಿನ್ಯಾಸ, ಲೇಖನಗಳ ಗುಣಮಟ್ಟ ಎಲ್ಲವೂ ವಿಶಿಷ್ಟ. ನಾವು ಹೆಮ್ಮೆಯಿಂದ ಇನ್ನೊಬ್ಬರಿಗೆ ಹೇಳಬಹುದಾದ ಪತ್ರಿಕೆ. ಪತ್ರಿಕೆಯ ಸಂಪಾದಕ ಬಳಗಕ್ಕೆ ನನ್ನ ಶುಭಾಶಯಗಳು.