ಹೆಪ್ಪುಗಟ್ಟುವ ಹಮ್ಮಿಂಗ್ !

ಹೆಪ್ಪುಗಟ್ಟುವ ಹಮ್ಮಿಂಗ್ !

©GLENN BARTLEY_ALL CANADA PHOTOS_ALAMY STOCK PHOTO

ಹಳ್ಳ ಗುಂಡಿಗಳ ರಸ್ತೆಯಾದ್ದರಿಂದ ನಮ್ಮ ಕಾರಿನ ಒಳಗೆ ಇರುವವರೆಲ್ಲಾ ಸಾಮೂಹಿಕವಾಗಿ ನೃತ್ಯಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದೇವೇನೋ ಅನ್ನುವಷ್ಟು ಗಾಡಿ ಕುಲುಕುತ್ತಿತ್ತು. ಗಂಗೋತ್ರಿಯ ಮಾರ್ಗದ ರಸ್ತೆಗಳು ಬೆಟ್ಟಗುಟ್ಟಗಳ ಕಡಿದು ಮಾಡಿರುವುದಲ್ಲವೇ, ಜೊತೆಗೆ ಸದಾ ಅಲ್ಲಲ್ಲಿ ಹರಿಯುವ ನೀರಿನ ಝರಿಗಳಿಗೆ ರಸ್ತೆ ಹೀಗಾಗಿವೆ ಎಂದು ನೋಡಿದವರಿಗೇ ತಿಳಿಯುತ್ತದೆ. ಅಂತಹ ರಸ್ತೆಯ ಪ್ರಯಾಣದಲ್ಲೂ ಸಹ ನನಗೇ ತಿಳಿಯದೆ ನಿದ್ದೆಗೆ ಜಾರಿದ್ದೆ. ಬಹುಶಃ ಆ ಬಳುಕುವ ರಸ್ತೆಗಳು, ಬೆಳಿಗ್ಗೆ ಬೇಗ ಎದ್ದು ಗಂಗೋತ್ರಿಯ ಕಡೆಗೆ ಬರುತ್ತಿದ್ದ ನನಗೆ ಜೋಕಾಲಿಯಾಗಿ ಬದಲಾದಂತೆ ಕಾಣುತ್ತದೆ. ಆದರೆ ಅದು ತುಂಬಾ ಹೊತ್ತು ಸಾಗಲಿಲ್ಲ. ಯಾರೋ ನನ್ನನ್ನು ಮುಟ್ಟಿ ಎಬ್ಬಿಸಿದಂತಾಗಿ ಕಣ್ಣು ಬಿಟ್ಟು ನೋಡಿದರೆ, ಕಣ್ಣ ಮುಂದೆ ಏರೋಪ್ಲೇನ್ ರನ್ ವೇ ನಂತಹ ಅಗಲವಾದ ರಸ್ತೆ! ಇದೆಲ್ಲಿಗೆ ಬಂದೆವು ನಾವು? ಸರಿಯಾದ ದಾರಿಯಲ್ಲೇ ಇದ್ದೇವಾ ಎಂದು ಖಚಿತಪಡಿಸಿಕೊಳ್ಳಲು ಪಕ್ಕದ ಮೈಲಿಗಲ್ಲು ನೋಡಿದೆ.

ಗಂಗೋತ್ರಿ 12 ಕಿ. ಮೀ. ಎಂದು ಕಂಡ ನೆನಪು. ಆದರೆ… ಮೈಲಿಗಲ್ಲನ್ನು ನೋಡಲು ತಿರುಗಿದ ಅರೆ ಕ್ಷಣದಲ್ಲಿ ಸೂರ್ಯನ ತಿಳಿಬಿಸಿಲಿಗೆ ಮೈಯೊಡ್ಡಿ ಸ್ನಾನಕ್ಕೆ ಎದ್ದುನಿಂತತಃ  ಪಕ್ಕದ ಮರಗಿಡಗಳ ಹಸಿರು ಕಣ್ ಸೆಳೆದಿತ್ತು. ಎಂತಹ ಸಮಯಕ್ಕೆ ಎದ್ದೆ ನಾನು… ಎಂತಹ ರಮಣೀಯ ನೋಟ! ಛೇ… ಇನ್ನೊಂದೆರೆಡು ಕಣ್ಣು ಹೆಚ್ಚಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸುವಷ್ಟು ಸುಂದರ ದೃಶ್ಯ. ಹಾರುತ್ತಾ ಆಟವಾಡಿ ಪಕ್ಕದ ಮನೆಗೆ ಓಡುವ ಮಕ್ಕಳಂತೆ ತೇಲಿ ಬರುತ್ತಿದ್ದ ಆ ಮಂಜಿನಷ್ಟೇ ತಂಪಾದ ಗಾಳಿ ಕಾಡಿನ ಅಂದವನ್ನು ಚರ್ಮೇಂದ್ರಿಯದಿಂದಲೂ ಸವಿಯಲು ಅನುವು ಮಾಡಿಕೊಟ್ಟಂತಿತ್ತು. ಹಾಗೆ ಆಗಸದತ್ತ ನೋಡಿದರೆ, ಮೋಡಗಳ ಜೊತೆಗೆ ಕಣ್ಣಾಮುಚ್ಚಾಲೆಯಲ್ಲಿ ಬಿಸಿಯಾಗಿದ್ದ ರವಿಯಿಂದ ತಪ್ಪಿಸಿಕೊಂಡು ಬಂದ ಕಿರಣಗಳು ಹಿಮಾಲಯದ ಶ್ರೇಣಿಗಳ ಮೇಲೆ ಬಿದ್ದು ಬೆಳ್ಳಿಯ ಬೆಟ್ಟಗಳನ್ನು ಚಿನ್ನವಾಗಿಸಿದ್ದನ್ನು ಮಾತುಗಳಲ್ಲಿ ಹೇಗೆ ಹೇಳಲಿ? ನಾನೊಂದು ಮಾಯಾಲೋಕದಲ್ಲಿ ತೇಲುತ್ತಿದ್ದುದೇ ವಾಸ್ತವ! ಎನ್ನುವಂತಿತ್ತು.

ಅಷ್ಟೆಲ್ಲಾ ಅನುಭವಿಸುವ ಒಳಗೆ ಮೈಲಿಗಲ್ಲು, ಗಂಗೋತ್ರಿ ೦ ಕಿ. ಮೀ. ಎಂದು ಹೇಳುತ್ತಿತ್ತು. ಪ್ರಯಾಣ ಎಷ್ಟೇ ಮಧುರವಾಗಿದ್ದರೂ ಕೊನೆಗೆ ಕಾರಿನಿಂದ ಇಳಿಯುವ ಸಮಯ ಬಂದೇ ಬಿಟ್ಟಿತು. ನಾವು ತಂಗಬೇಕಿದ್ದ ಕೊಠಡಿಗೆ ದಾರಿ ಹಿಡಿದು ಹೊರೆಟೆವು. ಹಿಮಾಲಯದ ಹಿಮವು ಸೂರ್ಯನ ಜಿದ್ದಾಜಿದ್ದಿಯಲ್ಲಿ ಸೋತರೂ ಸಹ ಸ್ವಲ್ಪವೂ ಕಳೆಗುಂದದೆ ಅದೇ ಚೈತನ್ಯದಿಂದ ಗಂಗೆಯಾಗಿ ಹರಿದು ಬರುತ್ತಿದ್ದ ಹಿಮಕ್ಕೆ ಒಂದು ಸೇತುವೆ ಅಡ್ಡಲಾಗಿ ನಿಂತಿತ್ತು. ಸೇತುವೆ ಮೇಲೆ ನಿಂತು ಆ ದೃಶ್ಯವನ್ನು ಸವಿಯಲು ನಮ್ಮ ಕಣ್ಣುಗಳು ಹವಣಿಸುತ್ತಿದ್ದರೆ… ಈ ತುಂಟ ಮಂಜು ಬೇಕೆಂದೇ ಅಡ್ಡ ಬರುತ್ತಿತ್ತು. ಆ ಮಂಜಿನ ತುಂಟತನವನ್ನು ಬೈಯಲೂ ಆಗದೆ, ಹೊಗಳಲೂ ಆಗದೆ, ನಿನ್ನನ್ನು ನಂತರ ವಿಚಾರಿಸಿಕೊಳ್ಳುತ್ತೇನೆ ಎಂದು ಹೇಳಿ, ಆ ಮಂಜಿನ ತುಂಟತನ ಇಪ್ಪತ್ತರ

ಹರೆಯದಲ್ಲಿರುವ ನಮ್ಮಲ್ಲೂ ಒಳಹೊಕ್ಕು, ತಡೆಯಲಾರದೆ ಆ ಸೇತುವೆಯ ಮೇಲೆಯೇ ‘ಕುಂಟು ಓಟ, ಫೋಟೋ-ಸೆಲ್ಫೀ ಕ್ಲಿಕ್ಕಿಸುವಿಕೆ, ಸ್ಲೋ ಮೋಶನ್ ವೀಡಿಯೋ’ಗಳಲ್ಲಿ ಮುಳುಗಿದ್ದೆವು. ಇಂತಹ ಕ್ರೀಡೆಗಳಲ್ಲಿ ಮಗ್ನರಾಗಿದ್ದ ನಮ್ಮನ್ನು ‘ಬಾಸ್ (ನಮ್ಮ ತಂಡದ ಮುಖ್ಯಸ್ಥ)’ ನ ‘ಬೇಸ್’ ಧ್ವನಿ ಕೂಗಿ ಕರೆಯಿತು. ನಾವು ತಂಗುವ ಕೊಠಡಿಯನ್ನು, ನಿಧಿಯ ಹುಡುಕಾಟದಂತೆ ಹುಡುಕಿ ಆ ಹುಡುಕಾಟದಲ್ಲಿ ಅವರು ಜಯಶೀಲರಾಗಿದ್ದರು. ನಾವು ಆಟಗಳನ್ನು ಮೊಟಕುಗೊಳಿಸಿ ಕೊಠಡಿಯ ಕಡೆಗೆ ಹೊರೆಟೆವು.

ಅಲ್ಲಿನ ಎಲ್ಲಾ ಸೌಂದರ್ಯವನ್ನು ಒಮ್ಮೆಲೇ ಸವಿಯುವ ಆಸೆಯಿದ್ದರೂ, ಅದು ಕಷ್ಟಸಾಧ್ಯವೆಂದು ತಿಳಿಯುವಷ್ಟರಲ್ಲಿ ನಿದ್ದೆಗೆ ಜಾರುವ ಸಮಯವಾಗಿತ್ತು. ಮೊದಲು ರೂಮಿನೊಳಗೆ ಕಾಲಿಟ್ಟಾಗ ಕಂಬಳಿಗಾಗಿ ಹುಡುಕಾಟ ನಡೆಸಿದ್ದೆವು ದೊರಕಿರಲಿಲ್ಲ. ಬಹುಶಃ ನಂತರ ಕೊಡುವರೆಂದು ಅಂದುಕೊಂಡೆವು. ಸಂಜೆಯಾಗುತ್ತಿದ್ದಂತೆ ಅಲ್ಲಿನ ಚಳಿಯ ಅನುಭವ ಆದ ಮೇಲೆಯೇ ತಿಳಿದದ್ದು, ಅಲ್ಲಿ ಹಾಸಿದ್ದ ಹಾಸಿಗೆಯ ಹೊದಿಕೆಯೇ ನಮಗೆ ಕಂಬಳಿಯೆಂದು ನೆನೆಸಿಕೊಂಡರೆ ಈಗಲೂ ನಗು ಬರುತ್ತದೆ. ಚಳಿಗೆ ಎಷ್ಟು ಸಾಧ್ಯವಾದರಷ್ಟು ದೇಹದ ಭಾಗಗಳನ್ನು ಮುಚ್ಚಿಕೊಂಡರೂ ಉಸಿರಾಡಲು ಮೂಗು ಹೊರಗೆ ಇರಬೇಕಿದ್ದರಿಂದ ಅಷ್ಟು ಮಾತ್ರ ಹೊರಬಿಟ್ಟು ನಿದ್ರೆಗೆ ಜಾರಲು ಸಿದ್ಧರಾದೆವು. ನಿದ್ದೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಮೂಗಿನ ಮೇಲೆ ಯಾರೋ ಬರೆ ಎಳೆದು ಎಬ್ಬಿಸುವ ಹಾಗೆ ಚಳಿ ಎಚ್ಚರಿಸುತ್ತಿತ್ತು. ಅಂದಿನ ರಾತ್ರಿ ಯಾವಾಗ ಮುಗಿಯುವುದೋ ಎಂದು ಕಾದು, ಒಂದೊಂದು ಘಂಟೆಯನ್ನು ಒಂದೊಂದು ವರುಷದಂತೆ ರಾತ್ರಿ ಕಳೆಯುವಷ್ಟರಲ್ಲಿ ಸಾಕಾಗಿ ಹೋಗಿತ್ತು. ಎಂಥಾ ಚಳಿ ಮಾರ್ರೆ…ಉಫ್!

ಆಗ ಅಲ್ಲಿನ ತಾಪಮಾನ ಸುಮಾರು 4-6 ಡಿಗ್ರಿ ಸೆಲ್ಸಿಯಸ್ ಇರಬಹುದು. ಆ ತಾಪಮಾನವನ್ನು ಬರೀ ಮೈಯಲ್ಲಿ ಎದುರಿಸುವ ಊಹೆಗೇ ಪ್ರಾಣವೆಲ್ಲ ನಡುಗುವ ಹಾಗೆ ನಮಗಾಗುತ್ತಿದ್ದರೆ, ಬ್ಲಾಕ್ ಮೆಟಲ್ ಟೇಲ್ ಎಂಬೊಂದು ಪ್ರಭೇದದ ಹಮ್ಮಿಂಗ್ ಬರ್ಡ್ ಆಸ್ಟ್ರೇಲಿಯಾದ ಆಂಡಿಸ್ ಪರ್ವತ ಶ್ರೇಣಿಯಲ್ಲಿನ ರಾತ್ರಿಯ ತಾಪಮಾನವಾದ 3 ಡಿಗ್ರಿ ಸೆಲ್ಸಿಯಸ್ ನಲ್ಲಿ ತನ್ನ ದೇಹದ ಉಷ್ಣಾಂಶವನ್ನು ಅಷ್ಟು ಕಡಿಮೆ ತಾಪಮಾನಕ್ಕೆ  ತೆಗೆದುಕೊಂಡು ಹೋಗಿ, ಅಕ್ಷರಶಃ ತನ್ನನ್ನು ತಾನು ರಾತ್ರಿಯಲ್ಲಿ ಹೆಪ್ಪುಗಟ್ಟಿಸಿಕೊಂಡು ಸಮಯ ಕಳೆಯುತ್ತವೆಯಂತೆ. ಮರುದಿನ ಬೆಳಿಗ್ಗೆ ಸೂರ್ಯನ ಆಗಮನವಾದ ಮೇಲೆ, ದೇಹದ ತಾಪಮಾನವನ್ನು ಹೆಚ್ಚಿಸಿಕೊಂಡು ರಾತ್ರಿ ಏನೂ ಆಗಿಲ್ಲವೇನೋ ಅನ್ನೋ ಹಾಗೆ ತನ್ನ ನಿತ್ಯ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತವೆಯಂತೆ. ಈ ಹೊಸ ಸಂಶೋಧನೆ ಬಿಸಿ – ಹಸಿ ಸುಳ್ಳು ಎನ್ನುವಂತಿದ್ದರೂ, ಇದೇ ಶೀತ ಸತ್ಯ.

ಪೆರುವಿನ ಆಂಡಿಸ್ ಪರ್ವತ ಶ್ರೇಣಿಯಲ್ಲಿ ಹಮ್ಮಿಂಗ್ ಬರ್ಡ್ ಗಳಿಗೆ ಹೇರಳವಾಗಿ ಹೂ ಸಿಗುವ ಜೊತೆಗೆ ಕಡಿಮೆ ಜೀವಾಪಾಯವಿರುವುದರಿಂದ ಸ್ವರ್ಗವೇ ಸರಿ. ಆದರೆ ಅಲ್ಲಿನ ಒಂದೇ ತೊಂದರೆ ಎಂದರೆ ಕೇವಲ ಮೈ ಅಲ್ಲ, ಕೈ, ಕಾಲು, ಪ್ರಾಣವೇ ಕೊರೆಯುವಷ್ಟು ಚಳಿ. ರಾತ್ರಿಯ ವೇಳೆ ಹೆಪ್ಪುಗಟ್ಟುವ ತಾಪಮಾನಕ್ಕಿಂತ ಕೆಳ ಹೋಗುವ ಈ ಪ್ರದೇಶದಲ್ಲಿ ಕೇವಲ 6 ಗ್ರಾಂ ಇರುವ ಈ ಪಕ್ಷಿ ರಾತ್ರಿಯಲ್ಲಿ ತನ್ನ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಮಾತ್ರವೇ ಸುಮಾರು 500 ಕ್ಕೂ ಹೆಚ್ಚು ಹೂಗಳ ಮೊರೆ ಹೋಗಿ ಮಕರಂದ/ಆಹಾರ ಸೇವಿಸಬೇಕು. ಇದು ನಡೆಯುವ ಮಾತೇ?

ಅದಕ್ಕೆ ಬದಲಾಗಿ ಈ ಪಕ್ಷಿಗಳು ಸೂರ್ಯನ ಜೊತೆಗೆ, ಸಂಜೆಯಾಗುತ್ತಿದ್ದಂತೆ ಅವನನ್ನೇ ಅನುಸರಿಸಿ ತನ್ನ ದೇಹದ ತಾಪಮಾನವನ್ನು ಕಡಿಮೆ ಮಾಡಿಕೊಳ್ಳುತ್ತಾ ಕೊನೆಗೆ ಟಾರ್ಪರ್ (torpor) ಎಂಬ ಸ್ಥಿತಿಗೆ ಜಾರುತ್ತವೆ (ಇದು ಬೇರೆ ಪ್ರಾಣಿಗಳಲ್ಲಿ ಕಾಣುವ ಹಾಗೆ ಚಳಿ ನಿದ್ದೆಯಲ್ಲ). ಈ ಹಮ್ಮಿಂಗ್ ಬರ್ಡ್ ನ ಒಂದು ಪ್ರಭೇದವಾದ ಬ್ಲಾಕ್ ಮೆಟಲ್ ಟೇಲ್ ಎಂಬ ಪಕ್ಷಿ 3.26 ಡಿಗ್ರಿ ಸೆಲ್ಸಿಯಸ್ ತಲುಪುತ್ತವೆ. ಇದು ಇಲ್ಲಿಯವರೆಗೆ ದೊರಕಿರುವ ಚಳಿ ನಿದ್ದೆ ಮಾಡದ ಪ್ರಾಣಿಯ ಅಥವಾ ಪಕ್ಷಿಯ ದೇಹದ ಅತ್ಯಂತ ಕನಿಷ್ಟ ತಾಪಮಾನ.   

ಅವು ಕಲ್ಲಿನ ಹಾಗೆ ಚಳಿಗೆ ಮರಗಟ್ಟುತ್ತವೆ. ನಿಮಗೆ ಅದರ ಜೀವನ ಶೈಲಿ ಅರಿಯದೆ ಗಮನಿಸಿದರೆ ಅವು ಸತ್ತೇ ಹೋದವೇನೋ ಎಂದು ನಂಬುತ್ತೀರಿ ಎನ್ನುತ್ತಾರೆ “ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯ”ದ ವಿಜ್ಞಾನಿ “ಬ್ಲೇರ್ ವುಲ್ಫ್”. ಹೀಗೆ ಸಾವಿನ ಬಾಗಿಲ ಹೊಸ್ತಿಲಿಗೆ ಹತ್ತಿರವಾಗುವ ತಾಪಮಾನಕ್ಕೆ ದಿನಾ ರಾತ್ರಿ ಹೋಗಿ ಬರುವುದರಿಂದ, ತನ್ನ ದೇಹದ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಉಳಿಸಿ, ಮರುದಿನ ಬೆಳಿಗ್ಗೆ ಎದ್ದು ಆಹಾರವರೆಸಿ ಹೋಗಲು ಪಕ್ಷಿಗೆ ಈ ವಿಧಾನ ಸಹಾಯಕವಾಗಿದೆ ಎಂದು ಹೇಳುತ್ತಾರೆ.

ಟಾರ್ಪರ್ ಎಂಬ ಅವಸ್ಥೆಯನ್ನು ಈ ಹಮ್ಮಿಂಗ್ ಬರ್ಡ್ ಗಳು ಸೇರುವುದನ್ನು ಈ ಮುಂಚೆ ಕಂಡಿದ್ದರೂ. ಅದರ ಸ್ಪಷ್ಟ ಚಿತ್ರಣಕ್ಕಾಗಿ, 6 ವಿವಿಧ ಪ್ರಭೇದದ 26 ಪಕ್ಷಿಗಳನ್ನು ಪ್ರಯೋಗವೊಂದರಲ್ಲಿ ಬಳಸಿಕೊಂಡರು. ಎಲ್ಲಾ ಪಕ್ಷಿಗೂ ಸೂಕ್ಷ್ಮ ಉಷ್ಣಮಾಪಕವನ್ನು ದೇಹದೊಳಗೆ ಅಳವಡಿಸಿ, ರಾತ್ರಿಯೆಲ್ಲಾ ಅಭ್ಯಸಿಸಿದರು. ಎಲ್ಲಾ ಪಕ್ಷಿಗಳು ಬೆಳಕಿನ ಪರದೆ ಸರಿದಂತೆ ತಮ್ಮ ತಮ್ಮ ಕೊಕ್ಕುಗಳನ್ನು ಮೇಲಕ್ಕೆತ್ತಿ ಟಾರ್ಪರ್ ಸ್ಥಿತಿಯನ್ನು ಸೇರಿದವು. ಅವುಗಳಲ್ಲಿ ಒಂದಾದ ಬ್ಲಾಕ್ ಮೆಟಲ್ ಟೇಲ್ ಎಂಬ ಪಕ್ಷಿ ಮಾತ್ರ ಬೆಳಗಿನ 40 ಡಿಗ್ರಿ ಸೆಲ್ಸಿಯಸ್ ಇಂದ ಹಿಡಿದು ಹೆಪ್ಪುಗಟ್ಟುವ ಉಷ್ಣಾಂಶದ ಸಮೀಪದವರೆಗೆ ತನ್ನ ದೇಹದ ತಾಪಮಾನವನ್ನು ಇಳಿಸಿಕೊಂಡಿತು. ಬೆಳಗಿನ ಸಮಯದಲ್ಲಿ ಒಂದು ನಿಮಿಷಕ್ಕೆ ಸರಿ ಸುಮಾರು 1200 ಬಾರಿ ಬಡಿದುಕೊಳ್ಳುವ ಈ ಪುಟ್ಟ ಹಕ್ಕಿಯ ಪವರ್ ಫುಲ್ ಹೃದಯ, ರಾತ್ರಿಯಲ್ಲಿ ಕೇವಲ 40ಕ್ಕೆ ಇಳಿಯುತ್ತವಂತೆ. ಹಾಗೆ ಮಾಡುವುದರಿಂದ ತನ್ನ ದೇಹವನ್ನು ಉಷ್ಣದಲ್ಲಿ ಇಡಲು ಬೇಕಾದ 95% ಶಕ್ತಿಯನ್ನು ಉಳಿಸುತ್ತವೆ. ಇಂತಹ ಹೊಂದಿಕೊಳ್ಳುವ ಗುಣದಿಂದಾಗಿಯೇ ಅವುಗಳು ಸಮುದ್ರಮಟ್ಟದಿಂದ 5000 ಮೀಟರ್ ಎತ್ತರವಿರುವ ಇಂತಹ ಪ್ರದೇಶದಲ್ಲೂ ಸ್ವಚ್ಚಂದವಾಗಿ ಬದುಕಲು ಸಾಧ್ಯವಾಗಿದೆ ಎನ್ನುತ್ತಾರೆ ವುಲ್ಫ್.

ವೈಜ್ಞಾನಿಕವಾಗಿ ಇದೊಂದು ಅತ್ಯಚ್ಚರಿಯ ಸಂಗತಿಯೇ ಸರಿ. ಮನುಷ್ಯ ಜನ್ಮದ ನಮ್ಮ ಜೀವದಲ್ಲಿ ಬರುವ ಕಷ್ಟಕೋಟಲೆಗಳನ್ನು ಮುಂದೆ ಹಿಡಿದು ಸಬೂಬು ಹೇಳುವುದರಿಂದ ಬದುಕು ಮುಂದೆ ಸಾಗಲಾರದು. ಬದುಕಲು ಸಾಗಿಸಲು ಹೆಪ್ಪುಗಟ್ಟಿಸುವಂತಹ ಛಲ ಹೊಂದಿರುವ, ಪ್ರತೀ ದಿನ ಸತ್ತು ಬದುಕುವ ಈ ಹಮ್ಮಿಂಗ್ ಬರ್ಡ್ ಅನ್ನು ಈಗ ತಾನೆ ನೋಡಿದಿರಿ. ಇದರಿಂದ, ಒಳ್ಳೇ ಬದುಕು ಸಾಗಿಸಲು ಎಷ್ಟೇ ಕಷ್ಟವಿದ್ದರೂ, ಅಚಲ ನಿರ್ಧಾರವಿದ್ದರೆ ದಾರಿಗಳು ಕಾಣುತ್ತವೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ.  ನಮ್ಮ ಬದುಕಿನ ಭಾಗವೇ ಆಗಿರುವ ಪ್ರಕೃತಿಯಲ್ಲಿ ಇಂತಹ ನಿದರ್ಶನಗಳು ಕೆದಕಿದಂತೆಲ್ಲಾ ಹೊಸತೊಂದು ಸಿಗುತ್ತದೆ. ಆದರೆ ಇಂತಹ ಸ್ಪೂರ್ತಿ ಬೇಕಾದಲ್ಲಿ ನಮಗೆ ನಾವು ಕೇಳಿಕೊಳ್ಳಬೇಕಾದ ಮೊದಲ ಪ್ರಶ್ನೆ? ಕೆದಕಲು ನಾನು ಸಿದ್ಧನೇ?

ನೀವು ಸಿದ್ಧರೇನು? ಕಮೆಂಟ್ ಮಾಡಿ..

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
    ಡಬ್ಲ್ಯೂ
.ಸಿ.ಜಿ, ಬೆಂಗಳೂರು

Spread the love
error: Content is protected.