ವರ್ಣಮಯ ಸೈಕಲ್ತುಂಬೆಗಳು

ವರ್ಣಮಯ ಸೈಕಲ್ತುಂಬೆಗಳು

© ರಕ್ಷಾ

ಸಾಮಾನ್ಯವಾಗಿ ಸಣ್ಣವರಿದ್ದಾಗ ತುಂಬೆ ಅಥವಾ ಕೋಲುತುಂಬೆಗಳ ಬಾಲಕ್ಕೆ ದಾರ ಕಟ್ಟಿ ಆಟವಾಡಿದ ನೆನಪು ಎಲ್ಲರಲ್ಲೂ ಇದ್ದೇ ಇರುತ್ತದೆ. ತಮ್ಮ ಕೋಲಿನಂತಹ ದೇಹ ರಚನೆಯಿಂದಾಗಿ ಕೋಲುತುಂಬೆ/ಕೋಲುದುಂಬೆ ಎಂದು ಕರೆಲ್ಪಡುವ ಈ ಜೀವಿಗಳು ಸೈಕಲ್‍ತುಂಬೆಗಳೆಂದೂ ಕೂಡ ಆಡು ಭಾಷೆಯಲ್ಲಿ ಪ್ರಸಿದ್ಧಿ ಪಡೆದಿದೆ.

© ರಕ್ಷಾ

ಮಳೆ ಬಂತೆಂದರೆ ಸಾಕು ಅಲ್ಲಿ ಇಲ್ಲಿ ಸಿಗುವ ಅಲ್ಪ ಪ್ರಮಾಣದ ನೀರಲ್ಲೇ ಸಂತಾನೋತ್ಪತ್ತಿ ಮಾಡುತ್ತವೆ. ಈ ಕೋಲುತುಂಬೆಗಳನ್ನು ಮಳೆ ನಿಂತು ಬಿಸಿಲು ಮೂಡಿದ ಮಧ್ಯಾಹ್ನಗಳಲ್ಲಿ ಹೆಚ್ಚಾಗಿ ಹಸಿರು ಹುಲ್ಲುಗಳ ನಡುವೆ ಹಾರಾಡುವುದನ್ನು ನೋಡಬಹುದು. ಇವುಗಳಿಗೆ ಸಂತಾನೋತ್ಪತ್ತಿ ಅರ್ಥಾಥ್ ಮೊಟ್ಟೆ ಇಡಲು ಹಾಗೂ ಲಾರ್ವೆಗಳಿಗೆ ಜೀವಿಸಲು ನೀರು ಅತ್ಯವಶ್ಯಕ. ನೀರಿದ್ದಲ್ಲಿ ಸೊಳ್ಳೆಗಳೂ ಕೂಡ ಇದ್ದೇ ಇರುತ್ತವೆ ಹಾಗಾಗಿ ಸೊಳ್ಳೆಗಳು ಹಾಗೂ ಇತರ ಸಣ್ಣ ಕೀಟಗಳನ್ನು ಹದ್ದುಬಸ್ತಿನಲ್ಲಿ ಇಡಲು ಕೋಲುತುಂಬೆಗಳು ಬೇಕೇ ಬೇಕು. ಕೀಟಗಳೇ ಆಹಾರವಾಗಿರುವ ಈ ಪರಭಕ್ಷಕ ಬಹಳ ಚುರುಕು ಹಾಗೇ ತೀಕ್ಷ್ಣ ದೃಷ್ಟಿಯಿರುವ ಇವುಗಳು ಸಣ್ಣ ಹೆಜ್ಜೆ ಸದ್ದಿಗೂ ಸ್ಪಂದಿಸಿ ಇದ್ದ ಜಾಗದಿಂದ ತಪ್ಪಿಸಿಕೊಳ್ಳುತ್ತವೆ.

ಈ ಕೋಲುತುಂಬೆಗಳೂ ಕೂಡ ಕಲ್ಲುಹೂವು (ಲೈಕನ್), ಕಪ್ಪೆ, ಇನ್ನೂ ಇತರ ಕೆಲವು ಜೀವಿಗಳಂತೆ ಶುದ್ಧ ಹಾಗೂ ಸಮತೋಲಿತ ವಾತವರಣದ ಸೂಚಿಗಳು (ಬಯೋ ಇಂಡಿಕೆಟರ್ಸ). ಅಂದರೆ ಈ ಜೀವಿಗಳು ರಾಸಾಯನಿಕ ಮಿಶ್ರಿತ-ಕಲುಷಿತ ನೀರಿರುವಲ್ಲಿ ಬದುಕಲು ಅಸಾದ್ಯ, ಹಾಗಾಗಿ ಈ ಜೀವಿಗಳನ್ನು ಶುದ್ಧವಾತಾವರಣದ ಸೂಚಿಗಳು ಎನ್ನಲಾಗುತ್ತದೆ.

© ರಕ್ಷಾ

ಈ ಬರಹದ ಹೆಸರಂತೆ ವರ್ಣಮಯವಾಗಿರುವ ಈ ಜೀವಿಗಳನ್ನು ಅವುಗಳ ದೇಹ, ಕಣ್ಣು ಹಾಗೂ ರೆಕ್ಕೆಗಳ ಬಣ್ಣದಿಂದ ಗುರುತಿಸಬಹುದು. ಚಿಟ್ಟೆ, ಕಪ್ಪೆ, ತುಂಬೆ ಸೇರಿ ಇನ್ನೂ ಹಲವು ಜೀವಿಗಳಂತೆ ಕೋಲುತುಂಬೆಗಳಲ್ಲೂ ಕೂಡ ಲೈಂಗಿಕ ದ್ವಿರೂಪತೆ/ಲಿಂಗ ಸೂಚಕ ದ್ವಿರೂಪತೆ (ಸೆಕ್ಷುವಲ್ ಡೈಮೋರ್ಫಿಸಮ್) ಅಂದರೆ ಒಂದೇ ಪ್ರಬೇಧ ಕೋಲುತುಂಬೆಗಳಲ್ಲಿ ಗಂಡು ಮತ್ತು ಹೆಣ್ಣು ಕೋಲುತುಂಬೆಗಳು ಬಣ್ಣದಲ್ಲಿ, ಗಾತ್ರದಲ್ಲಿ ಅಲ್ಪ ವ್ಯತ್ಯಾಸ ಹೊಂದಿರುತ್ತದೆ. ಗಂಡು ಕೋಲುತುಂಬೆಗಳು ಹೆಣ್ಣು ಕೋಲುತುಂಬೆಗಳಿಗಿಂತಲೂ ಬಣ್ಣದಲ್ಲಿ ಗಾಢವಾಗಿದ್ದು, ಗಾತ್ರದಲ್ಲಿ ಸ್ವಲ್ಪ ಸಣ್ಣದಾಗಿರುತ್ತದೆ.

© ರಕ್ಷಾ

ಸಾಮಾನ್ಯವಾಗಿ ಕಂಡುಬರುವ ಕೋಲುತುಂಬೆಗಳಲ್ಲಿ ಒಂದು ಕೋರಮಂಡಲ ಮಾರ್ಷ್ ಡಾರ್ಟ್‍ಗಳು. ಚಿನ್ನದ ಬಣ್ಣದಂತೆ ಹೊಳೆಯುವ ಮೈ ಬಣ್ಣ ಹೊಂದಿರುವ ಈ ಗಂಡು ಕೋರಮಂಡಲ ಮಾರ್ಷ್ ಡಾರ್ಟ್‍ಗಳು ಹೆಣ್ಣು ಕೋರಮಂಡಲ ಮಾರ್ಷ್ ಡಾರ್ಟ್‍ಗಳಿಗಿಂತ ಹೆಚ್ಚು ಗಾಢ ಹಾಗೂ ಸ್ವಲ್ಪ ಗಾತ್ರದಲ್ಲಿ ಸಣ್ಣದಾಗಿರುತ್ತದೆ. ನಮ್ಮ ಮನೆಯ ಸುತ್ತಮುತ್ತಲಿರುವ ಹುಲ್ಲುಗಳ ಮೇಲೆ ಹಾರಾಡುವುದನ್ನು ನೋಡಬಹುದು. ಪುಟ್ಟದಾಗಿದ್ದರೂ ತನ್ನ ಬಣ್ಣದಿಂದ ಬಹು ಪ್ರಖ್ಯಾತವಾಗಿರುವ ಇನ್ನೊಂದು ಸಾಮಾನ್ಯವಾಗಿ ಕಾಣಸಿಗುವ ಕೋಲುದುಂಬಿ ಎಂದರೇ ಪಿಗ್ಮಿ ಡಾರ್ಟಲೆಟ್ಟುಗಳು. ಬಾಲದಲ್ಲಿರುವ ಕೇಸರಿ ತುದಿಯಿಂದ ಗುರುತಿಸಬಹುದು. ಗಂಡು ಪಿಗ್ಮಿ ಡಾರ್ಟಲೆಟ್ಟುಗಳು ಕಪ್ಪು ಬಣ್ಣ ಹೊಂದಿದ್ದು ಕೇಸರಿ ತುದಿ ಹೊಂದಿರುತ್ತದೆ. ಹೆಣ್ಣು ಪಿಗ್ಮಿ ಡಾರ್ಟಲೆಟ್ಟುಗಳಲ್ಲಿನ ವಿಶೇಷವೆಂದರೆ ಲಾರ್ವದಿಂದ ಹೊರಬರುವಾಗ ಕೆಂಬಣ್ಣ ಹೊಂದಿದ್ದು ಬೆಳೆಯುತ್ತಾ ಗಂಡು ಪಿಗ್ಮಿ ಡಾರ್ಟಲೆಟ್ಟುಗಳನ್ನು ಹೋಲುವ ಬಣ್ಣಕ್ಕೆ ತಿರುಗುತ್ತದೆ.

ಇಷ್ಟೆಲ್ಲಾ ತಿಳಿದ ಮೇಲೆ ಇನ್ನು ಮುಂದೆ ಮನೆಮುಂದಿರುವ ಗರಿಕೆ ಅಥವಾ ಇನ್ನಿತರ ಹುಲ್ಲುಗಳ ಮೇಲೆ ಹಾರಾಡುವ ಈ ಸುಂದರ ಜೀವಿಗಳನ್ನು ನೋಡಿ ಆನಂದಿಸಿ, ಅವುಗಳನ್ನು ಹಿಡಿದು ಹಿಂಸಿಸದಿರಿ.

ತಿಳಿಯೋಣ| ಗಮನಿಸೋಣ| ಸಂರಕ್ಷಿಸೋಣ

© ರಕ್ಷಾ


ಲೇಖನ ಮತ್ತು ಛಾಯಾಚಿತ್ರ : ರಕ್ಷಾ
ಉಡುಪಿ
ಜಿಲ್ಲೆ

Spread the love
error: Content is protected.