ಮಳೆಕಾಡಿನಲ್ಲೊಂದು ಸುತ್ತು

ಮಳೆಕಾಡಿನಲ್ಲೊಂದು ಸುತ್ತು

© ಸ್ಮಿತಾ ರಾವ್

ಮುಂದುವರಿದ ಭಾಗ . . .

 ಮಳೆಕಾಡಿನ ಒಂದು ಸಂಕ್ಷಿಪ್ತ ಚಿತ್ರಣ ಸಿಕ್ಕಿದ ಮೇಲೆ, ಸಹಜವಾಗಿಯೇ ನಮಗನ್ನಿಸುವುದು ಇಲ್ಲಿ ಯಾವುದಕ್ಕೂ ಕಡಿಮೆ ಇಲ್ಲ, ಎಲ್ಲವೂ ಅಳತೆ ಮೀರಿ ಸಿಗುವುದೆಂದು. ಹೌದು, ಜಗತ್ತಿನ ಇತರೆ ಕಾಡುಗಳ ನಡುವೆ ನಿಂತು ಹೋಲಿಸಿ ನೋಡಿದರೆ, ಇಲ್ಲಿ ಸೂರ್ಯನ ತಾಪಕ್ಕೆ ಏನೂ ಕಡಿಮೆ ಇಲ್ಲ, ಅಲ್ಲದೆ ಜೀವ ವಿಕಸಿಸಲು ಬೇಕಾದ ಮಳೆ ಕೂಡ ಯಥೇಚ್ಛವಾಗಿದೆ. ಮಳೆ-ಬೆಳಕು ಪೈಪೋಟಿಯಲ್ಲಿ ತಮ್ಮಲ್ಲಿರುವುದನ್ನೆಲ್ಲಾ ಧಾರೆಯೆರೆದು ಅತೀ ಜತನದಿಂದ, ಮಕ್ಕಳಂತೆ ಪ್ರೀತಿಯಿಂದ ಬೆಳೆಸುತ್ತಿವೆ. ಇದಕ್ಕೊಂದಷ್ಟು ಅಲ್ಲಿನ ತೇವ ಸೇರಿ, ಮಳೆಕಾಡುಗಳ ಬೆಳವಣಿಗೆಗೆ ಒಂದು ಕಡಿವಾಣವೇ ಇಲ್ಲ ಎನಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಇಲ್ಲಿನ ಕೆಲವು ಮರಗಳ ಬೆಳವಣಿಗೆಯ ಗತಿ ಎಷ್ಟರ ಮಟ್ಟಿಗೆ ಅಂದರೆ, ಯಾರಾದರೂ ನಿರಂತರ ಅದನ್ನು ನೋಡಲು ಬಯಸುವುದಾದರೆ, ಅದು ನಮ್ಮ ಅನುಭವಕ್ಕೆ ಬರುವಷ್ಟು ಮಟ್ಟಿಗೆ. ಜಗತ್ತಿನ ಇತರ ಕಾಡುಗಳಲ್ಲಿ ಇದೇ ರೀತಿಯ ನಿರಂತರ ಬೆಳವಣಿಗೆಗೆ ಚಳಿ ಕಡಿವಾಣ ಹಾಕಬಹುದು, ಅಥವಾ ನಮ್ಮಲ್ಲಿಯ ಮಾನ್ಸೂನ್ ಕಾಡುಗಳಲ್ಲಿ ಕೆಲವು ತಿಂಗಳುಗಳ ನಿರಂತರ ಒಣ ಹವೆಯಿಂದ ಬೆಳವಣಿಗೆ ಈ ಮಟ್ಟಿಗೆ ಇರುವುದಿಲ್ಲ. ಅವು ಪೋಷಕಾಂಶವನ್ನು ಬೃಹದಾಕಾರದ ಕಾಂಡ, ರೆಂಬೆ ಕೊಂಬೆಗಳಲ್ಲಿ ಹಿಡಿದಿಟ್ಟುಕೊಂಡು ಜೀವಮಾನವಿಡೀ ಉಪಯೋಗಿಸುತ್ತವೆ. ಆದರೆ ಮಳೆಕಾಡಿನಲ್ಲಿ ಮಳೆ ನಿರಂತರ. ಇದು ನಮ್ಮ ದೃಷ್ಟಿಯಲ್ಲಿ ವರದಾನವಾಗಿ ಕಂಡರೂ, ಮಳೆಕಾಡಿನ ಮರಗಳ ಜಾಗದಲ್ಲಿ

© ಶ್ರೀಪತಿ ಹಾದಿಗಲ್

ನಿಂತು ನೋಡಿದಾಗ ಅದರ ಜೀವನ ಖಂಡಿತವಾಗಿಯೂ ದುಸ್ತರ. ಏಕೆಂದರೆ ಇಲ್ಲಿನ ನಿರಂತರ ಮಳೆಯಿಂದಾಗಿ ಮಳೆಕಾಡಿನ ಮಣ್ಣಿನಲ್ಲಿರುವ ಸರ್ವಸಾರವೂ ತೊಳೆದು ಹೋಗುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ಭೂಮಿಯ ಮಣ್ಣಿನ ಕೆಳಸ್ತರದಲ್ಲಿ ದೊಡ್ಡ ದೊಡ್ಡ ಕಲ್ಲುಗಳು, ಸಣ್ಣ ಸಣ್ಣ ಮಣ್ಣಿನ ಕಣಗಳಾಗಿ ವಿಭಜನೆಗೊಳ್ಳುವುದು ಸರ್ವೇ ಸಾಮಾನ್ಯ. ಈ ಪ್ರಕ್ರಿಯೆಯಲ್ಲಿ ಒಂದಷ್ಟು ಉಪಯುಕ್ತ ಖನಿಜಾಂಶಗಳೂ ಬಿಡುಗಡೆಯಾಗುತ್ತವೆ. ಜಗತ್ತಿನ ಬೇರೆ ಎಲ್ಲೇ ನಡೆಯುವ ಈ ಪ್ರಕ್ರಿಯೆಯಲ್ಲಿ, ಮರದ ಬೇರುಗಳು ತಮಗೆ ನೀರು ಸಿಗದ ಒಣ ಹವೆಯ ಕಾಲದಲ್ಲಿ, ಬೇಕಾದ ನೀರನ್ನು ಮಣ್ಣಿನ ಕೆಳಸ್ತರದಿಂದ ಪಡೆದುಕೊಳ್ಳುತ್ತಾ, ನೀರಿನಲ್ಲಿ ಸೇರಿರುವ, ಆಗಷ್ಟೇ ಬಿಡುಗಡೆಯಾಗುವ ಖನಿಜಾಂಶಗಳನ್ನೂ ಹೀರಿಕೊಳ್ಳುತ್ತಾ, ಮಣ್ಣಿನ ಮೇಲ್ಮೈ ಪದರವನ್ನು ಸೇರಿ ಅದನ್ನು ಫಲವತ್ತಾಗಿಸುತ್ತದೆ. ಆದರೆ ನಿರಂತರ ಸುರಿಯುವ ಮಳೆಯಿಂದ ಕೆಳಮುಖವಾಗಿಯೇ ಹರಿಯುವ ನೀರು, ಮಳೆಕಾಡುಗಳಿಗೆ ಈ ಅವಕಾಶ ಸಿಗದ ಹಾಗೆ ಮಾಡುತ್ತದೆ. ಕೊನೆಗೆ ಇದಕ್ಕೆ ಇರುವ ಒಂದೇ ಒಂದು ಬಾಹ್ಯ ಮೂಲ ಎಂದರೆ, ದೂರದ ಮರಳು ಪ್ರದೇಶದಿಂದ ಗಾಳಿ ಹೊತ್ತು ತರುವ ಧೂಳು ಹಾಗೂ ಅದನ್ನು ಮರದ ಬುಡಕ್ಕೆ ತಲುಪುವಂತೆ ಮಾಡುವ ಮಳೆ. ಉದಾಹರಣೆಗೆ ಕೋಸ್ಟಾರಿಕಾದ ಮಳೆಕಾಡನ್ನು ಗಮನಿಸಿದರೆ, ಇಲ್ಲಿಗೆ ಪೋಷಕಾಂಶವನ್ನು ಹೊತ್ತು ತರುವ ಧೂಳು ಸುಮಾರು 80 ಕಿ.ಮೀ. ದೂರದ ಪೆಸಿಫಿಕ್ ಸಾಗರದ ಕಡಲ ಕಿನಾರೆ ಆಗಿರುತ್ತದೆ. ಸಂಪತ್ತು ಹೇರಳವಾಗಿದ್ದಷ್ಟೂ ಬದುಕು ಸುಲಭವೆಂದು ತೋರುವ ಮನುಷ್ಯನ ಜೀವನದಂತೆ, ಮಳೆಕಾಡು ಸಹ ಎದುರಿಸುವ ಸಂಕಷ್ಟ, ಸವಾಲುಗಳು ಹೀಗೆ ಹತ್ತು ಹಲವಾರು. ಪೋಷಕಾಂಶದ ಕೊರತೆ ಎಂದಿಗೂ ಇರುವುದರಿಂದ ಬಹಳ ಜಾಗರೂಕತೆಯಿಂದ ಉಪಯೋಗ-ಪುನರ್ ಉಪಯೋಗ ಮಾಡುವ ಎಲ್ಲಾ ಅಂಶಗಳೂ ಇಲ್ಲಿ ಜನ್ಮ ತಾಳಿವೆ. ಯಾರಿಗೆ ಆದರೂ ಜಗತ್ತಿನಲ್ಲಿ ಅತೀ ಶ್ರೀಮಂತ ಎಂದೆನಿಸುವ ಭೂಭಾಗ ಫಲವತ್ತಾಗಿರದ ಮಣ್ಣಿನಿಂದ ಕೂಡಿದೆ ಅಂದಾಗ ಆಶ್ಚರ್ಯವಾಗಬಹುದು. ಕಾಡಿನ ಸುತ್ತಮುತ್ತ ಮಾಡಿದ ವ್ಯವಸಾಯದ ಬೆಳೆ ಕೂಡ ನಿರಾಶಾದಾಯಕ ಹಾಗೇ ಸತ್ವರಹಿತವಾಗಿರುವುದೇ ಇದಕ್ಕೆ ಮತ್ತೊಂದು ಸಾಕ್ಷಿ!

© ಶ್ರೀಪತಿ ಹಾದಿಗಲ್

ಇಲ್ಲಿರುವ ಮಣ್ಣಿನ ಪ್ರತಿ ಕಣದಲ್ಲಿರುವ ಪೌಷ್ಟಿಕಾಂಶವನ್ನು ಕೊಳ್ಳೆ ಹೊಡೆಯಲು ಮರಗಳ ಬೇರುಗಳು ಸದಾ ಹವಣಿಸುತ್ತಿರುತ್ತವೆ. ಅತೀ ಕಡಿಮೆ ಫಲವತ್ತಾದ ಮಣ್ಣಿನಲ್ಲಿ ಹೀಗೆ ಬೆಳೆಯುವ ಮರಗಳು ನಾನು ಹಿಂದೆ ಹೇಳಿದ್ದ, ಕಾಲು ಚಾಚಿ ಕುಳಿತ ದೈತ್ಯಾಕಾರದ ಮನುಷ್ಯನಂತೆ ಕಾಣುವ ಬೃಹತ್ ಬೇರುಗಳನ್ನು ಚಾಚಿರುತ್ತವೆ. ಇಲ್ಲಿ ಕಾಲಿಡುವುದಕ್ಕೂ ಅಸಾಧ್ಯ ಎನಿಸುವಷ್ಟು ಹರಡಿರುವ ಈ ಬೇರಿನ ಹಾಸುಗಳು, ಬಿದ್ದ ಎಲೆಗಳ ಮತ್ತು ಇತರ ಅವಶೇಷಗಳಿಂದ ಸಿಗುವ ಪೋಷಕಾಂಶವು ಮಣ್ಣಿಗೂ ಸೇರುವ ಮೊದಲೇ ತಾನು ಪಡೆಯಬೇಕೆಂಬ ಪೈಪೋಟಿಯಲ್ಲಿ, ಎಲ್ಲವನ್ನೂ ಅಪೋಷಿಸಲು ತಯಾರಿರುವ ಭಕ್ಷಕನಂತೆಯೇ ಕಾಣುತ್ತವೆ. ಹೀಗೆ ಸ್ವಲ್ಪ ಫಲವತ್ತಲ್ಲದ ಭೂಮಿಯಲ್ಲಿ ಪೌಷ್ಟಿಕಾಂಶ ಹೀರಲು ಹಬ್ಬಿರುವ ಈ ಬೇರಿನ ಹಾಸುಗಳು ಎಂದಿಗೂ ಒಬ್ಬಂಟಿಯಲ್ಲ. ಇದಕ್ಕೆ ಜೊತೆಯಾಗಲೆಂದೇ, ಈ ಮರಗಳ ಎಲ್ಲಾ ಬೇರುಗಳಲ್ಲೂ ಸಣ್ಣ ಜೊತೆಗಾರರೂ ಸಹ ಶಾಮೀಲಾಗಿರುತ್ತಾರೆ. ಇದರ ಮೇಲೆ ತನ್ನ ಸಂಪೂರ್ಣ ಹಕ್ಕಿದೆ ಎಂಬಂತೆ ಬೇರಿನ ತುಂಬಾ ಹರಡಿರುವ ಶಿಲೀಂಧ್ರಗಳು, ದೊಡ್ಡಣ್ಣ ಬೇರಿಗೆ ಜೀವಮಾನವಿಡೀ ಜೊತೆಯಾಗಿರುತ್ತವೆ. ತೆಳುವಾದ ಕೂದಲಿನಂತಹ  ಎಳೆಗಳಿಂದ ಮಾಡಲ್ಪಟ್ಟಿರುವ ಈ ಶಿಲೀಂಧ್ರಗಳು ಬೇರಿನ ಮೇಲೆ ಬೆಳೆಯುತ್ತಾ, ಬೇರು ಹೀರುವ ಪೋಷಕಾಂಶದ ಮೇಲ್ಮೈ ವಿಸ್ತೀರ್ಣವನ್ನು ಹೆಚ್ಚಿಸುತ್ತಾ, ಬಿದ್ದ ಎಲೆಗಳು, ಮಣ್ಣಿನಿಂದ ಇನ್ನೂ ಹೆಚ್ಚು ಪೋಷಕಾಂಶ ಹೀರಲು ನೆರವಾಗುತ್ತವೆ. ಅತ್ಯಂತ ವಿರಳವಾಗಿ ಮಳೆಕಾಡಿನ ಮರಗಳಿಗೆ ಸಿಗುವ ರಂಜಕದ ಪೂರೈಕೆಯಲ್ಲೂ ಶಿಲೀಂಧ್ರಗಳು ಮಹತ್ತರ ಪಾತ್ರವಹಿಸುತ್ತವೆ. ಶಿಲೀಂಧ್ರ ಒಂದು ಕಡೆ ಬೇರಿಗೆ ಪೋಷಕಾಂಶವನ್ನು ತಲುಪಿಸುತ್ತಿದ್ದರೆ, ಇತ್ತ ಮರ ತನ್ನ ಎಲೆಗಳಲ್ಲಿ ನಡೆದ ದ್ಯುತಿ ಸಂಶ್ಲೇಷಣೆಯಿಂದ ಉತ್ಪಾದಿಸಿದ ಆಹಾರವನ್ನು ಕಾಂಡದ ಮೂಲಕ ಬೇರಿಗೆ (ಹಾಗೆಯೇ ಶಿಲೀಂಧ್ರಕ್ಕೆ) ತಲುಪಿಸುತ್ತಾ, ಒಂದು ಅಭೂತ ಕೊಡು-ಕೊಳ್ಳುವಿಕೆಗೆ ಸಾಕ್ಷಿಯಾಗುತ್ತದೆ.  

© ಸ್ಮಿತಾ ರಾವ್

ಆದರೆ ಇಷ್ಟಕ್ಕೇ ಪೋಷಕಾಂಶವನ್ನರಸುವ ಹಸಿವು ಮರಕ್ಕೆ ತೀರುವುದಿಲ್ಲ. ಇದಕ್ಕಾಗಿ ಪ್ರಕೃತಿ ಇನ್ನೂ ಹಲವು ಅದ್ಭುತ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಇವುಗಳಲ್ಲಿ ಮಳೆಕಾಡಿನ ಕೆಲವು ಮರಗಳಲ್ಲಿ ಅಲ್ಲಲ್ಲಿ ಕಾಣುವ ಟೊಳ್ಳಾದ ಕಾಂಡಗಳೂ ಒಂದು. ಟೊಳ್ಳಾದ ಕಾಂಡ ಬಾವಲಿಗಳಿಗೆ ಆಸರೆಯಾಗಿ, ಅವುಗಳು ವಿಸರ್ಜಿಸಿದ ಪದಾರ್ಥಗಳನ್ನೇ ಪೋಷಕಾಂಶದ ಮೂಲವಾಗಿ ಬದಲಾಯಿಸುತ್ತದೆ. ಮರದ ತೊಗಟೆಯಿಂದ ಒಳಗೆ ಹೋಗುವ ಬೇರುಗಳು ತಮಗೆ ಬೇಕಾದ ಖನಿಜಾಂಶಗಳನ್ನು ಹೀಗೆ ಎಷ್ಟು ತರಹದಲ್ಲಿ ಸಾಧ್ಯವಾಗುವುದೋ, ಅಷ್ಟು ತರಹ ಪಡೆದುಕೊಳ್ಳುತ್ತವೆ. ಮೇಘ ಕಾಡಿನಲ್ಲೂ ಅತಿ ಎತ್ತರದ ಮರದ ಮೇಲೆ ಬೆಳೆಯುವ ಅಧಿಸಸ್ಯಗಳು (epiphytes) ಹಸಿವನ್ನು ನೀಗಿಸುತ್ತದೆ. ಇವು ಮರದಿಂದ ಏನೂ ಅಪೇಕ್ಷಿಸದೆ ಕೇವಲ ಹಾರಿ ಬರುವ, ಮರದ ಕಾಂಡದ ಮೇಲಿರುವ ಧೂಳಿನಿಂದಲೇ ಬದುಕಿರುತ್ತದೆ. ಈ ರೀತಿಯ ಸಂಬಂಧ ಪ್ರಪಂಚದ ಎಲ್ಲಾ ಕಾಡುಗಳಲ್ಲೂ ಕಾಣಸಿಗುತ್ತದೆ. ಆದರೆ ಇಲ್ಲಿ ಪೋಷಕಾಂಶದ ಕೊರತೆ ಹೆತೇಚ್ಚವಾಗಿರುವುದರಿಂದ ಅದು ಹೆಚ್ಚು ಮುಖ್ಯವಾಗಿ  ತೋರುತ್ತದೆ. ಈ ಸಂಬಂಧ ಬೇರು ಮತ್ತು ಶಿಲೀಂಧ್ರದಂತಹ ಎರಡು ವಿಭಿನ್ನ ವರ್ಗಕ್ಕೆ ಸೇರುವ ಜೀವಿಗಳಲ್ಲಿ, ಇಬ್ಬರೂ ಲಾಭ ಪಡೆಯುತ್ತಾ ಏರ್ಪಡುವ ಪರಸ್ಪರ ಅವಲಂಬನೆ ಆಗಿರಬಹುದು. ಎರಡೂ ವಿಭಿನ್ನ ಜೀವಿಗಳು ಒಟ್ಟಿಗೆ ಒಂದೇ ಕಡೆ ಬೆಳೆದರೂ, ಇದರಿಂದ ಒಂದು ಮಾತ್ರ ಲಾಭ ಪಡೆಯುವ ಸಹಜೀವಿತ್ವ ಸಹ ಆಗಿರಬಹುದು ಅಥವಾ ಇನ್ನೊಂದನ್ನು ತುಳಿದು ತಾನು ಬದುಕುವ ಪರಾವಲಂಬನೆ ಸಹ ಆಗಿರಬಹುದು. ಇವುಗಳ ನಡುವೆ ಯಾವುದೇ ಒಂದು ಸಂಬಂಧ ಇನ್ನೊಂದಾಗಬಹುದು. ಅದು ಜೀವನದ ಆ ಕ್ಷಣದ ಪರಿಸ್ಥಿತಿಯ ಮೇಲೆ ಅವಲಂಬಿಸಿರುತ್ತದೆ. ಹಕ್ಕಿ ಹಣ್ಣು ತಿಂದು ಬೀಜ ಪ್ರಸರಣ ಮಾಡುವುದೋ, ಕೀಟಗಳು ಮಕರಂದ ಹೀರಿ ಪರಾಗಸ್ಪರ್ಶ ನಡೆಸುವುದೋ, ಹೀಗೆ ಸಹಜೀವತ್ವ ಒಂದೆರಡರ ಮಧ್ಯೆ ಅಷ್ಟೇ ಇರದೇ ಮೂರು, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜೀವಿಗಳು ಇದರಲ್ಲಿ ಭಾಗಿಯಾಗಿರಬಹುದು. ಅಲ್ಲದೆ ಈ ಎಲ್ಲಾ ಸಂಬಂಧಗಳೂ ನಿನ್ನೆ, ಮೊನ್ನೆ ಆಗಿರುವಂತಹದ್ದಲ್ಲ. ಮಿಲಿಯನ್ ವರ್ಷಗಳಿಂದ, ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ದಾಟಿ ಸ್ವವಿಕಸನಗೊಂಡಿರುವ ಪ್ರಕೃತಿಯ ಅದ್ಭುತಗಳಲ್ಲಿ ಒಂದು. ಈ ಎಲ್ಲವೂ ಮಳೆಕಾಡುಗಳಲ್ಲಿ ಊಹಿಸಲಾರದ ಮಟ್ಟದಲ್ಲಿ ನಡೆಯುತಲಿರುತ್ತವೆ.

© ಸ್ಮಿತಾ ರಾವ್

ಮಳೆಕಾಡಿನಲ್ಲಿ ಕಾಣಬಹುದಾದ ಮತ್ತೊಂದು ಆಕರ್ಷಣೆ ಎಂದರೆ ಮರದ ಕಾಂಡಗಳ ಮೇಲೆ ಇನ್ನೆಲ್ಲಿಂದಲೋ ಕಿತ್ತು ತಂದು ಅಂಟಿಸಿದಂತಿರುವ ಹೂವುಗಳು. ಮರದ ತೊಗಟೆಯಿಂದ ಇಳಿದಿರುವ ಹೂವುಗಳು ಅತ್ಯಾಕರ್ಷಕವಾಗಿ ತೊಗಟೆಗಳನ್ನು ಅಲಂಕರಿಸುತ್ತದೆ. ಹೀಗೆ ವಿಚಿತ್ರವಾಗಿ ಎಲ್ಲೆಲ್ಲೋ ಬೆಳೆಯುವ ಹೂವುಗಳಿಗೆ ಕಾರಣ ಏನು ಎಂಬ ಪ್ರಶ್ನೆಗೆ ಉತ್ತರ ಸಿಗುವುದು ಸೂರ್ಯ ಮುಳುಗಿ ಹೊರಟ ಮೇಲೆ. ಅಲ್ಲದೆ ಇಲ್ಲಿ ಹೂವುಗಳು ಚಂದ ಇದೆ ಎಂದು ಅದರಿಂದ ಹೊಮ್ಮುವ ಪರಿಮಳದ ಬಗ್ಗೆಯೂ ನಾವು ಅಷ್ಟೇ ನಿರೀಕ್ಷೆ ಇಟ್ಟಿದ್ದರೆ, ಅದು ಸುಳ್ಳು. ಏಕೆಂದರೆ ಸಂಜೆಯಾಗುತ್ತಿದ್ದಂತೆ ಈ ಹೂಗಳಿಂದ ವಿಚಿತ್ರ ವಾಸನೆ ಹೊರಹೊಮ್ಮಲು ಆರಂಭವಾಗುತ್ತದೆ. ಇದು ನಮಗೆ ಊಹಿಸಲೂ ಅಸಾಧ್ಯವಾದ ಕೆಟ್ಟ ವಾಸನೆ. ಸಂಜೆ ಕಳೆದು ರಾತ್ರಿಯಾಗುತ್ತಿದ್ದಂತೆ ಸಾವಿರಾರು ಬಾವಲಿಗಳು ಇದನ್ನರಸಿ ಎಷ್ಟೋ ದೂರದಿಂದ ಆಕರ್ಷಿತವಾಗಿ ಬರುತ್ತವೆ. ಇದಕ್ಕೆ ಕಾರಣ ಈ ಕೆಟ್ಟ ವಾಸನೆ ಬಾವಲಿಗೆ ತನ್ನದೇ ಮೈಯಿಂದ ಹೊರಹೊಮ್ಮುವ ಪರಿಮಳದಂತೆಯೇ ತೋರುತ್ತದೆ! ಹೀಗಾಗಿಯೇ ಬಾವಲಿಗಳ ಅತ್ಯಂತ ಹೆಚ್ಚು ಆಸಕ್ತಿ, ಆಕರ್ಷಣೆ, ಒಲವೂ ಎಲ್ಲವೂ! ಆದರೆ ಇದು ಇಷ್ಟೇ ಆಗಿದ್ದರೆ ಏನೂ ವಿಶೇಷವಿರುತ್ತಿರಲಿಲ್ಲ. ಇಲ್ಲಿ ಬರುವ ಬಾವಲಿ ಇನ್ನೂ ಕಂಡು ಕೊಂಡಿರುವುದೇನೆಂದರೆ ಈ ವಾಸನೆಯ ಹಿಂದಿರುವ ಅತಿ ಸಿಹಿಯಾದ, ಅಂಟು ಅಂಟಾದ ಮಕರಂದ. ಮಕರಂದದ ನೆಪದಲ್ಲಿ ಒಂದರಿಂದ ಇನ್ನೊಂದು ಮರಕ್ಕೆ ಹಾರುತ್ತಾ, ತಮ್ಮ ಮೈಮೇಲಿನ ತುಪ್ಪಳದಿಂದ ತಮಗರಿವಿಲ್ಲದಂತೆಯೇ ಪರಾಗರೇಣುಗಳ ಪ್ರಸರಣವನ್ನೂ ಮಾಡಿರುತ್ತದೆ.

© ಸ್ಮಿತಾ ರಾವ್

ಹೀಗೆ ಬರೆಯುತ್ತಾ ಹೋದರೆ ಮಳೆಕಾಡಿನ, ಇಲ್ಲಿನ ಜೀವ ವೈವಿಧ್ಯದ ವಿಶೇಷತೆಗಳಿಗೆ ಖಂಡಿತವಾಗಿಯೂ ಕೊನೆಯೆಂಬುದೇ ಇಲ್ಲ. ಇಲ್ಲಿ ಉಗಮವಾಗಿರುವ ಜೀವಿಗಳ ನಿಖರ ಮಾಹಿತಿ ಇಂದಿಗೂ ಸಿಗಲು ಅಸಾಧ್ಯವಾದರೂ, ಉಷ್ಣವಲಯದ ಮಳೆಕಾಡಿನ ಒಂದು ದೊಡ್ಡ ಮರ ಸುಮಾರು 50 ಜಾತಿಯ ಇರುವೆಗಳಿಗೂ, 5೦೦ ಜಾತಿಯ ಇತರೆ ಕ್ರಿಮಿ-ಕೀಟಗಳಿಗೂ ಆಸರೆಯಾಗಿದ್ದನ್ನು ಕಂಡಿದ್ದಾರೆ. ಒಟ್ಟಿನಲ್ಲಿ ಇದೊಂದು ತನ್ನ ಸುತ್ತಲ ಪರ್ವತ, ಆಕಾಶ ಇವಕ್ಕೆಲ್ಲ ಹೊಟ್ಟೆಕಿಚ್ಚು ಹುಟ್ಟಿಸಲೆಂದೇ ರಚನೆಯಾದ ಭೂಭಾಗ!  ಒಂದೇ ಸಾಲಿನಲ್ಲಿ ಮಳೆಕಾಡನ್ನು ಪರಿಚಯಿಸಬೇಕೆಂದರೆ, ಇದು ರಷ್ಯಾದಲ್ಲಿ ಬಳಕೆಯಲ್ಲಿರುವ ಮತ್ರಿಯೊಷ್ಕ ಬೊಂಬೆಯಂತೆ, ಒಂದು ವ್ಯತ್ಯಾಸ ಎಂದರೆ ಬೊಂಬೆಗಳ ಆ ಪರಿಕಲ್ಪನೆಯಲ್ಲಿ ಒಂದು ಮಿತಿ ಇದೆ, ಆದರೆ ಮಳೆಕಾಡಿನ ವಿಷಯಕ್ಕೆ ಬಂದರೆ ಇಲ್ಲಿ ಎಲ್ಲವೂ ಲೆಕ್ಕವಿಲ್ಲದಷ್ಟು. ಅಲ್ಲಿ ಒಂದು ಗೊಂಬೆಯ ಒಳಗಿಂದ ಇನ್ನೊಂದನ್ನು ತೆಗೆದು, ಇದನ್ನು ನೋಡಿದೆ, ತಿಳಿದೇ ಎಂದು ಒಂದು ಹಂತದ ನಂತರ ತೃಪ್ತಿ ಪಟ್ಟು ಪಕ್ಕಕ್ಕಿಟ್ಟರೆ, ಇಲ್ಲಿ ಮೊಗೆದಷ್ಟೂ ಇನ್ನೂ ಅರಿಯದ ಅಂಶಗಳು ಅಡಕವಾಗಿರುತ್ತವೆ. ಹೀಗಾಗಿಯೇ

© ಅರವಿಂದ ರಂಗನಾಥ್

ಭೂಮಿಯ ಮೇಲೆ ಕಾಣುವ ಅದ್ಭುತಗಳ ಸಾಲಿನಲ್ಲೇ ಮಳೆಕಾಡುಗಳು ಮುಂಚೂಣಿಯಲ್ಲಿ ನಿಲ್ಲುತ್ತದೆ. ಆದರೆ ಇದೇ ಮಳೆಕಾಡಿನ ಒಂದು ಎಕರೆಯಷ್ಟು ಕಾಡು ಹೋದರೂ, ಇನ್ನೂ ಬೆಳಕಿಗೆ ಬಾರದ ಜೀವಿಗಳು ಕಣ್ಮರೆಯಾಗುತ್ತವೆ. ಇದು ಇನ್ನು ದೊಡ್ಡ ಮಟ್ಟದಲ್ಲಾದಾಗ, ಬಿದ್ದ ಮಳೆ ಇಂಗಲು ಜಾಗ ಸಿಗದೇ ಪ್ರವಾಹಕ್ಕೆ ಕಾರಣವಾಗುತ್ತದೆ. ಇದು ಇಲ್ಲಾದರೆ, ದೂರದ ಸಮುದ್ರದಲ್ಲಿ, ಕಾಡಿನ ನೆಲದಿಂದ ಕೊಚ್ಚಿ ಹೋದ ಮಣ್ಣಿನಿಂದ ಸಮುದ್ರದ ಆಳದಲ್ಲಿರುವ ಹವಳದ ದಿಬ್ಬ ಬಿಳುಚುಗೊಂಡು, ಸವಕಲಾಗಿ ಒಂದು ದಿನ ಕಣ್ಮರೆಯಾಗುತ್ತವೆ. ಒಟ್ಟಿನಲ್ಲಿ ಒಂದು ಭೂಮಿಯಾಗಿ ನೋಡುವುದಾದರೆ ಎಲ್ಲವೂ ಒಂದಕ್ಕೊಂದು ಬೆಸೆದಿರುವ ಜಟಿಲವಾದ ವ್ಯವಸ್ಥೆ. ಮನುಷ್ಯನ ಅಸ್ತಿತ್ವದಿಂದ, ಮಧ್ಯಸ್ಥಿಕೆಯಿಂದ ಮಳೆಕಾಡಿಗೆ, ಅಲ್ಲಿರುವ ಜೀವ ಸಂಕುಲಕ್ಕೆ ಏನೂ ಆಗಬೇಕಿಲ್ಲವಾದರೂ, ನಮ್ಮ ಉಳಿವಿನ ಮೂಲವೇ ಅಲ್ಲಿದೆ ಎಂಬುದನ್ನು ಅರಿತು, ಜಗತ್ತಿನ ಮಳೆಕಾಡಿನ ರಕ್ಷಣೆಯ ದೊಡ್ಡ ಋಣದಲ್ಲಿ ನಾವು ಬದುಕಬೇಕಿದೆ.

© ಸ್ಮಿತಾ ರಾವ್

ಲೇಖನ: ಸ್ಮಿತಾ ರಾವ್
                      ಶಿವಮೊಗ್ಗ ಜಿಲ್ಲೆ.

Spread the love

One thought on “ಮಳೆಕಾಡಿನಲ್ಲೊಂದು ಸುತ್ತು

  1. ಮಳೆಕಾಡಿನಲ್ಲೊಂದು ಸುತ್ತು ಎಂಬ ಲೇಖನ ಬಹಳ ಚೆನ್ನಾಗಿದೆ. ಮಳೆ ಕಾಡನ್ನು ವಿವರಿಸಿದ ರೀತಿ ಒಂದು ಭಾವನಾ ಲೋಕಕ್ಕೆ ಕರೆದೊಯ್ಯುವಂತಿದೆ. ನಿಜಕ್ಕೂ ನನಗೆ ನನ್ನೂರ ಬಗ್ಗೆಯೇ ವಿವರವಾಗಿ ಓದಿದಂತಾಯಿತು.

Comments are closed.

error: Content is protected.