ಈಜಿದ ನವಿಲು
© ಕಿಶೋರ್ ವಿ
ಸುತ್ತಾಟ ಸುತ್ತಾಟ ಸುತ್ತಾಟ, ನಿಸರ್ಗದ ಮಡಿಲಿನಲಿ ಸುತ್ತಾಟ. ನಿರಂತರ ನಿರ್ಬಂಧಿತ ದಿನಗಳಿಂದ ಬಿಡುಗಡೆ ಹೊಂದಿ, ಸುತ್ತಲೂ ನೋಡಿದಾಗ ಪ್ರಕೃತಿಯ ಸೊಬಗು ಮೈನವಿರೇಳಿಸುವಂತಿತ್ತು. ಆ ದಿನ ಒಂದು ಅಪರೂಪದ ಅನುಭವ ದೋಣಿವಿಹಾರದಲ್ಲಿ ನನಗಾಗಿ ಕಾಯ್ದಿತ್ತು. ತಿಂಗಳುಗಳ ನಂತರ ಕೊರೋನಾದ ನಿರ್ಬಂಧಗಳು ಸಡಿಲಾದಾಗ ನಮ್ಮ ಅತಿಥಿಯೊಬ್ಬರೊಡಗೂಡಿ ದೋಣಿಯತ್ತ ಹೆಜ್ಜೆ ಹಾಕಿದಾಗ ಸಂತಸವಾಯಿತು. ಸಾಂಕ್ರಾಮಿಕ ಪಿಡುಗಿನ ಯೋಚನೆ ಬಾಧಿಸಲಿಲ್ಲ. ದೋಣಿವಿಹಾರ ಆರಂಭವಾದ ಕೆಲ ನಿಮಿಷಗಳಲ್ಲೇ ನಮಗೆ ಹಾರುತ್ತಿರುವ ನದಿ ರಿವಾಗಳ ಗುಂಪು ಎದುರಾಯಿತು. ಆ ಸಾಮಾನ್ಯ ಗಾತ್ರದ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಭದ್ರಾನದಿಯ ಮಡಿಲಿನ ಈ ಸಣ್ಣ ಮರಳು ದಿಬ್ಬಕ್ಕೆ ಪ್ರತಿ ವರ್ಷವೂ ಜನವರಿಯಲ್ಲಿ ಬಂದು ಜುಲೈವರೆಗೂ ಇರುತ್ತವೆ. ನಮ್ಮ ವಸತಿ ಕೇಂದ್ರದಿಂದ ಕೂಗಳತೆಯಲ್ಲಿರುವ ಈ ದಿಬ್ಬವನ್ನು ರಿವಾಗಳ ದ್ವೀಪ ಎಂದೇ ಕರೆಯಲಾಗುತ್ತದೆ.
ಮುಂದುವರೆದಾಗ ಅನತಿ ದೂರದಲ್ಲಿ ಎರಡು ದೊಡ್ಡ ಪಕ್ಷಿಗಳು ಹಾರುತ್ತಿರುವುದು ಕಂಡಿತು, ನೋಡನೋಡುತ್ತಿದ್ದಂತೆ ಅವೆರಡೂ ನೀರಿನ ಮೇಲಿಳಿದವು. ಯಾವ ಹಕ್ಕಿಗಳೆಂದು ತಿಳಿಯದ ನಾವು ಕುತೂಹಲದಿಂದ ಆ ದೊಡ್ಡ ಹಕ್ಕಿಗಳು ಇಳಿದೆಡೆಗೆ ಹೋದೆವು., ಏನಾಶ್ಚರ್ಯ! ಎರಡು ಹೆಣ್ಣು ನವಿಲುಗಳು
ಈ ದೃಶ್ಯವನ್ನು ಅಮರಗೊಳಿಸಲು ಕ್ಯಾಮರಾಗೆ ಕೈ ಹಾಕಿದೆ. ಇವೆಲ್ಲ ನಡೆಯುತ್ತಿರುವಾಗ ಆಗಸದಲ್ಲಿ ಬಿಳಿಹೊಟ್ಟೆಯ ಸಮುದ್ರ ಗಿಡುಗ ಕಂಡಿತು ಹಾಗೂ ಅದು ಈಜುತ್ತಿದ್ದ ನವಿಲನ್ನು ಹೊತ್ತೊಯ್ಯಲು ನವಿಲಿನ ಮೇಲಿಳಿದು ಪ್ರಯತ್ನಿಸಿತು ಆದರೆ ಸಫಲವಾಗಲಿಲ್ಲ. ಮತ್ತೆ ಹಲವು ಬಾರಿ ಪ್ರಯತ್ನಿಸಿ ಸೋತಿತು. ಭದ್ರಾ ಹಿನ್ನೀರಿನಲ್ಲಿ ಬಿಳಿಹೊಟ್ಟೆಯ ಸಮುದ್ರ ಗಿಡುಗ ಕಾಣುವುದು ಅಪರೂಪವೇ ಎನ್ನಬಹುದು. ಸಾಮಾನ್ಯವಾಗಿ ಮೀನುಗಳನ್ನು ಹಿಡಿಯುವ ಈ ಗಿಡುಗಗಳು ಇಂದು ತನಗಿಂತಲು ದೊಡ್ಡದಾದ ಹಕ್ಕಿಯನ್ನು ಬೇಟೆಯಾಡಲು ಪ್ರಯತ್ನಿಸುತ್ತಿರುವುದನ್ನು ಇಂದು ನೋಡಿದೆವು. ಅನೇಕ ವಿಫಲ ಯತ್ನಗಳ ನಂತರ ಬಿಳಿಹೊಟ್ಟೆಯ ಸಮುದ್ರ ಗಿಡುಗ ಮರೆಯಾಯಿತು. ನವಿಲುಗಳು ಈಜಿ, ದಡ ಸೇರಿ, ರೆಕ್ಕೆಗಳನ್ನು ಒಣಗಿಸಿಕೊಂಡು ಕಾಡಿನೊಳಗಡೆ ಮಾಯವಾದವು.
ಕನ್ನಡಕ್ಕೆ ಅನುವಾದ : ಡಾ. ದೀಪಕ್ ಭ.
ಮೂಲ ಲೇಖನ : ಕಿಶೋರ್ ವಿ
ಮೈಸೂರು ಜಿಲ್ಲೆ