ನವ ಚೇತನ

ಪ್ರತೀ ವರ್ಷದಂತೆ ಕಳೆದ ಜುಲೈ ತಿಂಗಳಿನಲ್ಲೂ ಮಳೆ ಚೆನ್ನಾಗಿ ಬರುತ್ತಿತ್ತು. ಸರೀಸೃಪಗಳು ಹಾಗೂ ಉಭಯವಾಸಿಗಳನ್ನು ನೋಡಲು ಇದು ಉತ್ತಮ ಸಮಯವೆಂದು ನಿರ್ಧರಿಸಿ, ನಾವು ಪ್ರಪಂಚದಲ್ಲೇ ವಿಷಕಾರಿಯೆಂದು ಹೆಸರು ಮಾಡಿರುವ ಕಾಳಿಂಗಸರ್ಪಗಳ ತಾಣವಾದ ಆಗುಂಬೆಗೆ ಹೋಗಲು ನಿರ್ಧರಿಸಿದೆವು. ನಾವು ಆಗುಂಬೆ ತಲುಪಿದ ಸಂಜೆಯಲ್ಲಿ ಮಳೆ ಬೀಳುತ್ತಿತ್ತು. ಭಾರತದಲ್ಲಿ ಹೆಚ್ಚು ಮಳೆಯಾಗುವ ಎರಡನೇ ಸ್ಥಳವಾದ ಆಗುಂಬೆ ಪಶ್ಚಿಮಘಟ್ಟಗಳಲ್ಲಿ ಹರಡಿಕೊಂಡಿದೆ. ಮಳೆಬರುತ್ತಿರುವಾಗ ಸರೀಸೃಪಗಳು ಹಾಗೂ ಉಭಯಚರಿಗಳ ಚಟುವಟಿಕೆ ಹೆಚ್ಚಿರುತ್ತಾದ್ದರಿಂದ ಅವು ಕಾಣುವ ಸಂಭವವೂ ಹೆಚ್ಚು, ಆ ಕಾರಣ ನಾವು ಸಮಯವನ್ನು ವ್ಯಯಿಸದೆ ಆಗುಂಬೆ ತಲುಪಿದಕೂಡಲೇ ಪರಿಚಿತ ಕಾಡನ್ನು ಹೊಕ್ಕೆವು. ನಮ್ಮ ತಂಡದಲ್ಲಿದ್ದ ಒಬ್ಬ ಮಿತ್ರ ಉಭಯವಾಸಿಗಳು ಹಾಗು ಸರೀಸೃಪಗಳ ಬಗ್ಗೆ ಆಳವಾಗಿ ತಿಳಿದುಕೊಂಡಿದ್ದ, ಅವರಿಂದ ನಮಗೆ ಹೆಚ್ಚು ಮಾಹಿತಿ ಸಿಗುವುದೆಂದು ನಮ್ಮ ಉತ್ಸಾಹ ದುಪ್ಪಟ್ಟಾಗಿತ್ತು.

ಸಂಜೆಯ ನಡಿಗೆಯಲ್ಲಿ ನೋಡಲಿಕ್ಕೆ ಹೆಚ್ಚೇನು ಕಾಣಿಸಲಿಲ್ಲ. ಗೊಂಕರು ಕಪ್ಪೆ, ರಾಬರ್ ಫ಼್ಲೈ, ಕಾಡು ಹಲ್ಲಿ, ನೇರಳೆ ಬಣ್ಣದ ಹವಳದ ಅಣಬೆಗಳನ್ನು ನಾವು ನೋಡಿದೆವು. ನಾನು ಭದ್ರಾ ಕಾಡಿನಲ್ಲಿ ಕಂದು ಬಣ್ಣದ ಹವಳದಣಬೆಗಳನ್ನು ಹಿಂದೆ ಕಂಡಿದ್ದೆ, ಜೊತೆಗಾರ ಮಿತ್ರರು ಇವು ಬಲು ಅಪರೂಪದ ಅಣಬೆಗಳೆಂದು ತಿಳಿಸಿಕೊಟ್ಟರು.
ಸಂಜೆ ನಡಿಗೆಯಲ್ಲಿ ಹೆಚ್ಚೇನನ್ನು ಕಾಣದನಾವು ಸ್ವಲ್ಪ ವಿಶ್ರಾಂತಿಯನ್ನು ತೆಗೆದುಕೊಂಡನಂತರ ರಾತ್ರಿ ಏನಾದರೂ ಮಂಡಲದಹಾವು ಕಾಣಸಿಗುವುದೇ ಎಂದು ಹುಡುಕಿಕೊಂಡು ಹೊರಟೆವು. ಒಂದು ಸಣ್ಣ ತೊರೆಯ ಪಕ್ಕ ಬಹಳಷ್ಟು ಮಲೆಜಾರುಕಪ್ಪೆಗಳಿದ್ದವು. ನಾವು ಅಲ್ಲಿದ್ದ ಕಪ್ಪೆಗಳ ಮೊಟ್ಟೆಗಳನ್ನು ಹಾಗೂ ಗೊದಮೊಟ್ಟೆಗಳನ್ನು ಚಿತ್ರೀಕರಿಸಿಕೊಂಡೆವು ನಂತರ ನಾವೆಲ್ಲ ತೊರೆಯಿಂದ ಸ್ವಲ್ಪ ಮುಂದೆ ಸಾಗುತ್ತಲೂ ಮರದ ಮೇಲೆ ಮಲೆಮಂಡಲ ಹಾವನ್ನು ಕಂಡೆವು.ಅದು ಬಹುಶಃ ಕಪ್ಪೆಗಳನ್ನು ಬೇಟೆಯಾಡಲು ಅಲ್ಲಿತ್ತೋ ಏನೋ?

ನಾವು ಕಾಣ ಬಯಸಿದ್ದ ಮಂಡಲದ ಹಾವನ್ನೂ ಕಂಡಾಯಿತು, ಚಿತ್ರೀಕರಿಸುವುದೂ ಆಯಿತು, ಆದರೆ ಮನ ಇನ್ನೂ ಏನಾದರು ವಿಶಿಷ್ಟವಾದುದನ್ನು ಕಾಣಲು ಹಾತೊರೆಯುತ್ತಿತ್ತು. ಪ್ರಕೃತಿ ನಮ್ಮ ನಿರೀಕ್ಷೆಗೂ ಮೀರಿ ನಿಂಫ್ ಹಂತವನ್ನುದಾಟಿ, ಸ೦ಪೂರ್ಣವಾಗಿ ಬೆಳೆದು ಪ್ರಬುದ್ಧ ಹಂತವನ್ನು ತಲುಪುತ್ತಿರುವ ಸಿಕಾಡಾವನ್ನು ನಮ್ಮ ಕಣ್ಗಳಿಗೆ ಉಣಬಡಿಸಿತು. ನಾನು ಇದುವರೆಗೂ ನೋಡಿರುವ ಎಲ್ಲಾ ಬೆಳೆದ ಸಿಕಾಡಾಗಳಿಗಿಂತ ಈ ಸಿಕಾಡಾದ ಬಣ್ಣ ವಿಭಿನ್ನವಾಗಿತ್ತು.
ಸಿಕಾಡಾಗಳು Cicadoidea ಕುಟುಂಬಕ್ಕೆ ಸೇರುತ್ತವೆ ಹಾಗೂ ಅವು “ಕೀಟಗಳು”. ಭೂಮಿಯ ಉಷ್ಣವಲಯದಲ್ಲಿ ಸಿಕಾಡಾಗಳು ಕಂಡು ಬರುತ್ತವೆ. ಬೆಳೆದ ಸಿಕಾಡಾಗಳು ಮರದ ಮೇಲಿದ್ದು ಅದರ ರಸವನ್ನು ಹೀರುತ್ತವೆ. ಗಂಡು ಕೀಟಗಳ ಹೊಟ್ಟೆಯಮೇಲೆ ಟಿಂಬಲ್ ಗಳಿದ್ದು ಜೋರು ಸದ್ದನ್ನು ಹೊರಡಿಸುತ್ತವೆ. ಹೆಣ್ಣು ಸಿಕಾಡಾಗಳು ಸದ್ದನ್ನು ಮಾಡುವುದಿಲ್ಲ. ಸಂತಾನೋತ್ಪತ್ತಿ ಸಮಯದಲ್ಲಿ ಹೆಣ್ಣು ಸಿಕಾಡಾಗಳು ಮರದ ಟೊಂಗೆಯನ್ನು ಸೀಳಿ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಯೊಡೆದು ಹೊರಬರುವ ನಿಂಫ್.ಗಳು (ನಿಂಫ಼್ ಎಂದರೆ ಮೊಟ್ಟೆಯಿಂದ ಹೊರಬಂದು ಇನ್ನೂ ಬೆಳವಣಿಗೆಯಾಗುತ್ತಿರುವ ಕೀಟ, ಕೆಲವು ಸಿಕಾಡಾ ತಳಿಗಳಲ್ಲಿ ಈ ನಿಂಫ಼್ ಹಂತವು 17 ವರ್ಷಗಳೂ ಇರಬಹುದು) ಬೆಳೆದು ಸಿಕಾಡಾಗಳಾಗುತ್ತವೆ. ಬೆಳೆದ ಸಿಕಾಡಾಗಳ ಆಯಸ್ಸು ಸುಮಾರು 3 ವರ್ಷಗಳು. ಇವುಗಳ ಬೆಳವಣಿಗೆಯಲ್ಲಿ ಚಿಟ್ಟೆಗಳ ಬೆಳವಣಿಗೆಯಲ್ಲಿ ಕಾಣುವ ಮೊಟ್ಟೆ, ಲಾರ್ವಾ, ಪ್ಯುಪಾ, ಚಿಟ್ಟೆ ಹಂತಗಳಂತೆ ಸಂಪೂರ್ಣ ಪರಿವರ್ತನಾ ಹಂತಗಳು ಕಾಣುವುದಿಲ್ಲ, ಬದಲಿಗೆ ಮೊಟ್ಟೆಗಳು, ನಿಂಫ್ ಹಾಗೂ ಪ್ರಬುದ್ಧಹಂತ ಅಷ್ಟೇ ಇರುತ್ತದೆ. ನಿಂಫ಼್ ಗಳಲ್ಲಿ ರೆಕ್ಕೆ ಇರುವುದಿಲ್ಲ.
ನಿಂಫ಼್.ನಿಂದ ಪ್ರಬುದ್ಧಹಂತ ತಲುಪಲು ತನ್ನ ನಿಂಫ಼್ ಚರ್ಮದಿಂದ ಹೊರಬರುತ್ತಿರುವ ಇನ್ನೊಂದು ಸಿಕಾಡಾವನ್ನು ಕೂಡಾ ನಾವು ಕಂಡೆವು. ಅದರ ರೆಕ್ಕೆ ವರ್ಣರಂಜಿತವಾಗಿತ್ತು. ಅದರ ಕೆಲವು ಛಾಯೆಯನ್ನು ಚಿತ್ರಿಸಿಕೊಂಡು ಮರಳಿದೆವು.
ಮಾರನೆಯ ದಿನ ಅಲ್ಲೇ ಇದ್ದ ಒಂದು ಸಣ್ಣ ಜಲಪಾತಕ್ಕೆ ಹೋದೆವು. ಅಲ್ಲಿ ಕೆಲವು ಹಸಿರು ಹಾವುಗಳು ಕಂಡವು. ಅಲ್ಲೇ ಕಂಡ ಒಂದು ಸಿಕಾಡಾ ತನ್ನ ನಿಂಫ಼್ ಆಗಷ್ಟೆ ಹೊರಬರುತ್ತಿತ್ತು, ಇದಕ್ಕಿಂತ ಹೆಚ್ಚಿನದೇನೂ ಬೇಕೆನಿಸಲಿಲ್ಲ, ಸೃಷ್ಟಿಯ ಈ ವಿಶೇಷ ವೈಚಿತ್ರಗಳನ್ನು ನೋಡುತ್ತಿದ್ದರೆ ಹಾಗೇ ವಿಸ್ಮಿತರಾಗೇ ಇದ್ದುಬಿಡಬೇಕೆನಿಸುತ್ತದೆ . ಎರಡು ದಿನಗಳಲ್ಲಿ ಕಾಳಿಂಗ ಸರ್ಪವನ್ನು ನೋಡಲಾಗದಿದ್ದರೂ ನಾವು ಸಿಕಾಡಾದ ಇಡೀ ಜೀವನ ವೃತ್ತಾಂತವನ್ನು ಕಣ್ತುಂಬಿಕೊಂಡೆವು.

-ಮೂಲ ಲೇಖನ : ವಿಜಯ್ ಕುಮಾರ್ ಡಿ ಎಸ್
ಕನ್ನಡಕ್ಕೆ : ಡಾ ದೀಪಕ್ ಬಿ., ಮೈಸೂರು