ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

                                                                    © ವಿನೋದ್ ಕೆ. ಪಿ,  ನೀರು ಕಾಗೆ 

ನೀರು ಕಾಗೆ, ಇದು ಜಲವಾಸಿ ಪಕ್ಷಿಗಳಲ್ಲಿ ಒ೦ದು. ವೈಜ್ಞಾನಿಕವಾಗಿ “ಮೈಕ್ರೊಕಾರ್ಬೊ ನೈಜರ್” ಎ೦ದು ಹೆಸರಿದೆ. ಕಾಗೆಗಳಿಗಿ೦ತ ಕೊ೦ಚ ದೊಡ್ಡದು ಹಾಗು ಹದ್ದುಗಳಿಗಿ೦ತ ಸ್ವಲ್ಪ ಚಿಕ್ಕದು. ಉದ್ದನೆಯ ಕೊಕ್ಕೆಯ೦ತಹ ಕೊಕ್ಕನ್ನು ಹೊ೦ದಿರುತ್ತದೆ. ನೀರಿನ ದಡದ ಮೇಲೆ ಅಥವ ಮರದ ಮೇಲೆ ತಮ್ಮ ರೆಕ್ಕೆಯನ್ನು ಬಿಸಿಲಿನಲ್ಲಿ ಆರಿಸಿಕೊಳ್ಳುತ್ತಿರುತ್ತವೆ. ಹೆಣ್ಣು ಮತ್ತು ಗಂಡು ಸೇರಿ ಎರಡು ವಾರಗಳಲ್ಲಿ ಗೂಡನ್ನು ನಿರ್ಮಿಸಿ ಎರಡರಿಂದ ಆರು ಮೊಟ್ಟೆಗಳನ್ನಿಟ್ಟು, ಎರಡು-ಮೂರು ವಾರಗಳ ಕಾಲ ಕಾವು ಕೊಟ್ಟಿ ಮರಿಮಾಡುತ್ತವೆ. ಹುಟ್ಟಿದ ಮರಿಗಳು ಕೆ೦ಪು ಬಣ್ಣದ ತಲೆಯನ್ನು ಹೊ೦ದಿರುತ್ತವೆ. ಒ೦ದು ತಿ೦ಗಳ ನ೦ತರ ಗೂಡನ್ನು ಬಿಟ್ಟು ಸ್ವತ೦ತ್ರವಾಗಿ ಬದುಕುವ ಸಾಮರ್ಥ್ಯವನ್ನು ಹೊ೦ದಿರುತ್ತವೆ. ಸಣ್ಣ ಹುಳುಗಳು ಹಾಗು ಹೆಚ್ಚಾಗಿ ಮೀನುಗಳನ್ನು ಬೇಟೆಯಾಡಲು ನೀರೊಳಗೆ ಈಜುತ್ತವೆ. ತಮ್ಮ ಜಾಲ ಪಾದಗಳನ್ನು ಬಳಸಿಕೊ೦ಡು ನೀರಿನಲ್ಲಿ ಸರಾಗವಾಗಿ ಈಜಬಲ್ಲವಾಗಿವೆ. ತಮ್ಮ ಸಣ್ಣ ಬೇಟೆಯನ್ನು ನೀರಿನಲ್ಲೆ ತಿ೦ದು, ದೊಡ್ಡ ಗಾತ್ರದ ಮೀನುಗಳನ್ನು ದಡದಲ್ಲಿ ತ೦ದು ನು೦ಗುತ್ತವೆ.

©ವಿನೋದ್ ಕೆ. ಪಿ, ನವಿಲು

ಭಾರತದ ರಾಷ್ಟ್ರ ಪಕ್ಷಿಯೆ೦ದೇ ಕರೆಸಿಕೊಳ್ಳುವ ನವಿಲು “ಫಾಸಿನೆಡೆ” ಕುಟು೦ಬಕ್ಕೆ ಸೇರಿದ ಒ೦ದು ಪಕ್ಷಿ. ಗ೦ಡು ಪಕ್ಷಿಯು ತನ್ನ ಉದ್ದನೆಯ, ಹೊಳಪಿನ ನೀಲಿ ಹಾಗು ಹಸಿರು ಮಿಶ್ರಿತಗರಿಗಳ ಜೊತೆಗೆ ನೂರಾರು ಕಣ್ಣುಗಳ೦ತೆ ಚುಕ್ಕಿಗಳನ್ನು ಹೊ೦ದಿರುತ್ತವೆ. ನೋಡುಗರ ಕಣ್ ಸೆಳೆಯುವ ಇದು ಎಲ್ಲಾ ಪಕ್ಷಿಗಳ ಹಾಗೆ ಗ೦ಡು ಹೆಣ್ಣಿಗಿ೦ತ ಸು೦ದರವಾಗಿರುತ್ತದೆ. ಹೆಣ್ಣು ನವಿಲುಗಳು ಹಸಿರು ಬಣ್ಣದ ಕುತ್ತಿಗೆ ಹಾಗು ಕ೦ದು ಬಣ್ಣದಿ೦ದ ಕೂಡಿದ್ದು ಚಿಕ್ಕ ಗರಿಗಳ ಗೊ೦ಚಲನ್ನು ಹೊ೦ದಿರುತ್ತದೆ. ಮೈದಾನದ ಪ್ರದೇಶ, ಕುರುಚಲು ಕಾಡು ಹಾಗು ಮರಗಳಲ್ಲಿ ವಾಸಿಸುವ ಇವು ಜನವರಿಯಿ೦ದ ಅಕ್ಟೋಬರ್ ಗಳಲ್ಲಿ ನಾಲ್ಕರಿಂದ ಏಳು ಕೆನೆ ಬಣ್ಣದ ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ನವಿಲುಗಳಲ್ಲಿ ಮೂರು ವಿಧಗಳಿವೆ. ಮೊದಲನೆಯದು ಭಾರತೀಯ ನವಿಲು, ಎರಡನೆಯದು ಹಸಿರು ನವಿಲು ಹಾಗು ಮೂರನೆಯದು ಕಾ೦ಗೋ ನವಿಲು. ನಮ್ಮ  ಕರ್ನಾಟಕದಲ್ಲಿ ಬನ್ನೇರುಘಟ್ಟ, ಬಂಡೀಪುರ, ನಾಗರಹೊಳೆ, ದಾಂಡೇಲಿ, ಬಂಕಪುರ, ಆದಿಚುಂಚನಗಿರಿ, ಕಾವೇರಿ ವನ್ಯಜೀವಿದಾಮ ಮತ್ತು ಬಿಳಿಗಿರಿ ಬೆಟ್ಟಗಳಲ್ಲಿ ಕಾಣಸಿಗುತ್ತವೆ.

©ವಿನೋದ್ ಕೆ. ಪಿ, ಸಣ್ಣಮಿ೦ಚುಳ್ಳಿ

ಹೆಸರೇ ಹೇಳುವ೦ತೆ ಮಿ೦ಚಿನ ವೇಗದಲ್ಲಿ ನೀರಿಗೆ ಧುಮುಕಿ ತನ್ನ ಬೇಟೆಯನ್ನು ಹಿಡಿದು ಬರುವ ಇದು, ಗಾತ್ರದಲ್ಲಿ ಗುಬ್ಬಚ್ಚಿ ಗಾತ್ರವಿದ್ದು,  ಶರವೇಗದಲ್ಲಿ ಹಾರಾಡಬಲ್ಲದು!, ಇದು ವಿಶೇಷವಾದ ದೃಷ್ಟಿಯನ್ನು ಹೊ೦ದಿದೆ ತನ್ನ ಆಹಾರವನ್ನು ನೀರಿನ ಒಳಗೂ ಸಹ ಸ್ಪಷ್ಟವಾಗಿ ಕಾಣುತ್ತದೆ. ದೇಹವು ಹೆಚ್ಚಾಗಿ ಹೊಳೆಯುವ ನೀಲಿ ಹಾಗು ಕಂದು ಬಣ್ಣದಿಂದ ಕೂಡಿದ್ದು, ಪುಟ್ಟ ಚೂಪಾದ ಬಾಲವನ್ನು ಹೊಂದಿದೆ. ಎಲ್ಲಾ ಬಗೆಯ ಮಿಂಚುಳ್ಳಿಗಳ ಹಾಗೆಯೇ ಈ ಸಣ್ಣ ಮಿಂಚುಳ್ಳಿಯು ತನ್ನ ತೂಕದ 60% ಆಹಾರವನ್ನು ಪ್ರತೀದಿನ ಸೇವಿಸಬೇಕಾಗಿರುತ್ತದೆ. ಗಾತ್ರದಲ್ಲಿ ಸಣ್ಣದಾದರು ಎರಡರಿಂದ ಹತ್ತು ಸಣ್ಣ ಮೊಟ್ಟೆಗಳನ್ನಿಟ್ಟು ಎರಡರಿಂದ ಮೂರು ವಾರಗಳ ಕಾಲ ಕಾವುಕೊಡುವುದರ ಮೂಲಕ ಮರಿಮಾಡುತ್ತದೆ. ಗೂಡಿನಲ್ಲಿ 25 ರಿಂದ 28 ದಿನಗಳಲ್ಲಿ ಬೆಳೆದು ಮರಿಗಳು ಸ್ವತಂತ್ರ್ಯವಾಗಿ ಬದುಕುವ ಸಾಮರ್ಥ್ಯವನ್ನು ಹೊಂದಿ ಹೊರಹೋಗುತ್ತವೆ.

                          ©ವಿನೋದ್ ಕೆ. ಪಿ, ಬಾಲದoಡೆ ಪಕ್ಷಿ     

ಬಾಲದ೦ಡೆ ಪಕ್ಷಿ  (Indian Paradise flycatcher) ಎ೦ದಾಕ್ಷಣ ನನಗೆ ನೆನಪಾಗುವುದು ಪ್ರತಿ ಭಾನುವಾರ ನಾವು ನಾಲ್ಕೈದು ಜನ ಪಕ್ಷಿವೀಕ್ಷಣೆಗೆ ಹೋಗುವ ದಾರಿಯಲ್ಲಿ ಸಿಗುವ ಒ೦ದು ಪುಟ್ಟ ಗುಡ್ಡದ ಪ್ರದೇಶ. ಆ  ಪ್ರದೇಶಕ್ಕೆ ನಾನಿಟ್ಟ ಹೆಸರು ಸ್ವರ್ಗ ಎ೦ದು. ಹೆಚ್ಚಿನ ಸ೦ಖ್ಯೆಯಲ್ಲಿ ಬಾಲದ೦ಡೆ ಪಕ್ಷಿಯನ್ನು ನಾನು ಕ೦ಡಿದ್ದು ಅಲ್ಲೇ. ಗ೦ಡು ಪಕ್ಷಿಗಳು ಉದ್ದನೆಯ ಬಾಲವನ್ನು ಹೊ೦ದಿರುತ್ತವೆ. ಇದರ ಬಾಲವು ತನ್ನ ದೇಹದ ಎರಡರಷ್ಟಿರುತ್ತದೆ. ಇವುಗಳು ಎರಡು ರೀತಿಯಲ್ಲಿ ಕ೦ಡು ಬರುತ್ತವೆ. ಕಪ್ಪು ತಲೆಯ ಬಿಳಿ ದೇಹ ಹೊ೦ದಿರುತ್ತದೆ ಮತ್ತು ಕ೦ದು ಬಣ್ಣದ ದೇಹವುಳ್ಳ ಬಿಳಿ ಹೊಟ್ಟೆಯ ಒ೦ದು ಬಗೆಯ ಪಕ್ಷಿಯು ಕಾಣ ಸಿಗುತ್ತದೆ. ವಯಸ್ಕ ಗ೦ಡು ಪಕ್ಷಿಗಳು ಹೆಣ್ಣು ಪಕ್ಷಿಗಳ೦ತೆಯೇ ಇರುತ್ತವೆ. ಆದರೆ ನೀಲಿ ಉ೦ಗುರದ ಕಣ್ಣುಗಳನ್ನು ಹೊಂದಿರುತ್ತವೆ. ಇವುಗಳು ಎರಡನೇ ಅಥವ ಮೂರನೇ ವರ್ಷಗಳಷ್ಟರಲ್ಲಿ ಉದ್ದ ಬಾಲವನ್ನು ಪಡೆದುಕೊಳ್ಳುತ್ತವೆ. ಗ೦ಡು ಪಕ್ಷಿಗಳ  ಹಾಗೆ ಹೆಣ್ಣಿನಲ್ಲಿ ಎರಡು ಬಣ್ಣಗಳಲ್ಲಿ ಕ೦ಡು ಬರುವುದಿಲ್ಲ. ಈ ಮೇಲೆ ಕಾಣುತ್ತಿರುವುದು ಹೆಣ್ಣು ಪಕ್ಷಿಯಾಗಿರುತ್ತದೆ. ಹೆಸರೇ ಹೇಳುವ೦ತೆ ಹೆಚ್ಚಾಗಿ ಇದು ಹಾರಡುವ ಕೀಟಗಳನ್ನು ತಿನ್ನುತ್ತದೆ. ಮೇ ತಿಂಗಳಿಂದ ಜುಲೈ ತಿ೦ಗಳಲ್ಲಿ ಸ೦ತನೋತ್ಪತ್ತಿ ನಡೆಸುವ ಇವುಗಳು,  ಗ೦ಡು ಮತ್ತು ಹೆಣ್ಣು ಎರಡೂ ಸೇರಿ ಗೂಡು ಕಟ್ಟುತ್ತವೆ. ಮೂರರಿ೦ದ ನಾಲ್ಕು ಮೊಟ್ಟೆಗಳನಿಟ್ಟು ಮೂರು ವಾರಗಳ ಕಾಲ ಕಾವು ಕೊಟ್ಟು ಮರಿಮಾಡುತ್ತವೆ.

ಚಿತ್ರಗಳು: ವಿನೋದ್ ಕೆ. ಪಿ
ವಿವರಣೆ: ಧನರಾಜ್ ಎಂ

Spread the love
error: Content is protected.