ನೆಲ ಕಚ್ಚಿದ ಗುಬ್ಬಚ್ಚಿ-ಬೆಳಕಿನಿಂದ!

ನೆಲ ಕಚ್ಚಿದ ಗುಬ್ಬಚ್ಚಿ-ಬೆಳಕಿನಿಂದ!

ಬೆಳಿಗ್ಗೆ ಸುಮಾರು ಒಂಭತ್ತು ಘಂಟೆ. ದಿನಾಲು ತಡವಾಗಿ ಹೋಗುವ ಕಾಲೇಜಿಗೆ ಅಂದೇಕೋ ಬೇಗ ಹೋಗಬೇಕೆನ್ನಿಸಿ, ತಿಂಡಿ ಮಾಡಲು ಪಕ್ಕದ ಹಾಸ್ಟೆಲ್ಲಿಗೆ ಹೋಗುತ್ತಿದ್ದೆ. ದಾರಿಯಲ್ಲಿ ಸಿಗುತ್ತಿದ್ದ ವಿದ್ಯುತ್ ಕಂಬಗಳಲ್ಲಿ ನೆನ್ನೆಯೋ, ಮೊನ್ನೆಯೋ ಹತ್ತಿಸಿದ ಬೆಳಕು ಇನ್ನೂ ಉರಿಯುತ್ತಿತ್ತು. ಎಲ್ಲರಂತೆ ನಾನೂ ಸಹ ಹಾಗೇ ನೋಡುತ್ತಾ, ’ಯಾರಿಗೂ ಜವಾಬ್ದಾರಿಯೇ ಇಲ್ಲ’ ಎಂದು  ಮನಸಿನಲ್ಲಿಯೇ ಗೊಣಗಿಕೊಂಡು ಮುಂದೆ ಸಾಗಿದೆ. ಆದರೂ ಒಳಗಿನಿಂದ ಯಾರೋ ತಡೆದು, ಹೋಗು ದೀಪವನ್ನು ಆರಿಸು ಎಂದು ತಳ್ಳಿದಂತಾಗಿ, ಅರೆಬರೆ ಮನಸ್ಸಿನಲ್ಲಿ ಅತ್ತ ಹೆಜ್ಜೆ ಹಾಕಿದೆ. ಆದರೆ ಆ ಬೀದಿ ದೀಪವನ್ನು ಆರಿಸಲು ಅಲ್ಲಿ ಸ್ವಿಚ್ ಇರಲೇ ಇಲ್ಲ. ’ಸರಿ ಇನ್ನೇನೂ ಮಾಡಲಿಕ್ಕೆ ಆಗದು ನಾನಂತೂ ನನ್ನ ಪ್ರಯತ್ನ ಮಾಡಿದ್ದೇನೆ’ ಎಂದು ನನಗೆ ನಾನೆ ಸಬೂಬು ಹೇಳಿಕೊಂಡು ಮುಂದೆ ನಡೆದೆ. ಮುಂದಿನ ಕಂಬದಲ್ಲಿಯೂ ಸಹ ಹಿಂದಿನ ಕಂಬದಂತೆ ದೀಪ ಉರಿಯುತ್ತಿತ್ತು. ’ಈ ಕಂಬವೇನಾದರೂ ದಾಟಿ ಮುಂದೆ ಹೋದರೆ ಮತ್ತೆ ಹಿಂದೆ ಬಂದು ಆರಿಸಬೇಕೇನೋ’ ಎಂದು ಮುಂಚೆಯೇ ನಾನೇ ಕಂಬದ ಬಳಿ ಹೋದೆ. ಅಲ್ಲಿ ದೀಪವನ್ನು ಆರಿಸಲು ಸ್ವಿಚ್ ಸಹ ಇತ್ತು. ’ನಾನು ಬಂದದ್ದೂ ಸಾರ್ಥಕವಾಯಿತು’ ಎಂದು ಮನಸಿನಲ್ಲೇ ಅಂದುಕೊಂಡು, ಸ್ವಿಚ್ಚನ್ನು ಆಫ್ ಮಾಡಿದೆ. ಆಶ್ಚರ್ಯವೆಂದರೆ ಬೆಳಕು ಕೇವಲ ಆ ಕಂಬದಲ್ಲಿ ಮಾತ್ರ ಅಲ್ಲದೆ ಆ ಬೀದಿಯ ಎಲ್ಲ ಕಂಬಗಳಲ್ಲಿನ ಬೆಳಕು ಆರಿತು. ಅದರಲ್ಲೇನು ಆಶ್ಚರ್ಯ ಇಲ್ಲಾ ಬಿಡಿ, ಆ ಕಂಬ ಬೀದಿಯ ಕೊನೆಯ ಕಂಬವಾದ್ದರಿಂದ ಇಡೀ ಬೀದಿಯ ಕಂಬಗಳ ನಿಯಂತ್ರಣ ಅಲ್ಲೇ ಇತ್ತು. ಆದ್ದರಿಂದಲೇ ಒಂದೇ ಏಟಿಗೆ ಅಷ್ಟು ಹಕ್ಕಿಗಳು (ದೀಪಗಳು) ಹಾರಿದ್ದು….!

ಮಾಡಿದ ಘನಕಾರ್ಯ ಇಷ್ಟೇ ಆದರೂ ಬೇರೆ ಯಾರೂ ಇಲ್ಲಿಯವರೆಗೆ ಮಾಡಿರದ ಸಮಾಜ ಸೇವೆ ನಾನೇ ಮಾಡಿರುವೆನೇನೋ ಎಂಬ ಸಣ್ಣ ಖುಷಿ ಒಳಗೆ. ಇಷ್ಟೆಲ್ಲಾ ಸರ್ಕಸ್ ಮಾಡಿ ಕೊನೆಗೆ ಹಾಸ್ಟೆಲ್ ತಲುಪಲು ತಡವಾಗಿ, ಎಂದಿನಂತೆ ಕಾಲೇಜಿಗೆ ತಡವಾಗಿ ಹೋಗುವಂತಾಯಿತು. ಇದನ್ನೆಲ್ಲಾ ಇನ್ನೊಂದು ಕೋನದಲ್ಲಿ ನೋಡುವುದಾದರೆ, ನಾನು ಕಾಲೇಜಿಗೆ ಬೇಗ ಹೋಗುವುದು ಆ ದೇವರಿಗೂ ಅಷ್ಟು ಇಷ್ಟವಿಲ್ಲ ಎಂದೆಣಿಸಿ, ಅಂದಿನಿಂದ ಮುಂದಿನ ದಿನಗಳಲ್ಲಿ ಕಾಲೇಜಿಗೆ ಸತತವಾಗಿ, ಚಾಚೂ ತಪ್ಪದೆ, ಸ್ವಲ್ಪವಾದರೂ ತಡವಾಗಿಯೇ ಹೋಗುತ್ತಿದ್ದೆ.

ಅದಿರಲಿ ಬಿಡಿ. ನಾ ಹೇಳಿದ ಈ ಮೇಲಿನ ವಿದ್ಯುತ್ ಕಂಬದ ಸಂದರ್ಭಕ್ಕೂ, ನೆಲ ಕಚ್ಚಿದ ಗುಬ್ಬಚ್ಚಿಗೂ ಸಂಬಂಧ ಹುಡುಕುತ್ತಿರುವವರಿಗೆ ಮುಂದಿನ ಸಾಲುಗಳಲ್ಲಿ ಉತ್ತರ ಸಿಗಲಿದೆ. ಗುಬ್ಬಚ್ಚಿಗಳ ಸಾವಿಗೆ ಕಾರಣ ನಾವೆಲ್ಲಾ ಸಾಮಾನ್ಯವಾಗಿ ತಿಳಿದಿರುವ ಹಾಗೆ ಸೆಲ್ ಫೋನ್ ಗಳ ಟವರ್ ಗಳಿಂದ. ಇದು ಎಷ್ಟರ ಮಟ್ಟಿಗೆ ಸತ್ಯವೋ ನಾ ಕಾಣೆ. ಆದರೆ ಹೊಸ ಸಂಶೋಧನೆಯ ಪ್ರಕಾರ ಎಷ್ಟೋ ಗುಬ್ಬಚ್ಚಿಗಳು ನೆಲ ಕಚ್ಚಲು ನಾವು ರಾತ್ರಿ ಹತ್ತಿಸುವ ಬೆಳಕೇ ಕಾರಣವಂತೆ!

ಅಮೆರಿಕಾದಲ್ಲಿನ ಗುಬ್ಬಚ್ಚಿಗಳ ಮೇಲೆ ನಡೆಸಿದ ಸಂಶೋಧನೆಯ ಪ್ರಕಾರ, ರಾತ್ರಿಯ ವೇಳೆ ನಾವು ಹತ್ತಿಸುವ ಬೆಳಕಿನಿಂದಾಗಿ ಗುಬ್ಬಚ್ಚಿಗಳು ತಮಗೆ ರೋಗ ತರುವಂತಹ “ವೆಸ್ಟ್ ನೈಲ್” ಎಂಬ ವೈರಸ್ ಅನ್ನು ನಿಯಂತ್ರಿಸುವಲ್ಲಿ ಅರ್ಧದಷ್ಟು ವಿಫಲವಾಗುತ್ತಿದೆ. ಎನ್ನುತ್ತಾರೆ ದಕ್ಷಿಣ ಫ್ಲೋರಿಡಾ ವಿಶ್ವವಿದ್ಯಾಲಯದ ರೋಗವಿರೋಧಕ ತಜ್ಞೆ ಮೇರಿಡಿತ್. ಇವರು ಹೀಗೆ ಹೇಳಲು ಅವರು ನಡೆಸಿದ ಪ್ರಯೋಗ ಇಂತಿದೆ. .

ಗುಬ್ಬಚ್ಚಿಗಳನ್ನು ಪ್ರಯೋಗಾಲಯಕ್ಕೆ ತಂದು ಅದರಲ್ಲಿ ಕೆಲವನ್ನು ಮಂದ ಬೆಳಕಿನಲ್ಲಿ ಇರಿಸಲಾಯಿತು. ಇನ್ನೂ ಕೆಲವನ್ನು ಕತ್ತಲೆಯಲ್ಲಿ ಇರಿಸಲಾಯಿತು. ಹಾಗು ಈ ಎರಡೂ ಜಾಗದಲ್ಲಿರುವ ಪಕ್ಷಿಗಳಿಗೆ “ವೆಸ್ಟ್ ನೈಲ್” ವೈರಸ್ ಅನ್ನು ಕೊಡಲಾಯಿತು. ಪರಿಣಾಮ, ಮಂದ ಬೆಳಕಿನಲ್ಲಿದ್ದ ಗುಬ್ಬಚ್ಚಿಗಳ ರಕ್ತದಲ್ಲಿ ಈ ವೈರಸ್ ನ ಪ್ರಮಾಣ ನಾಲ್ಕು ದಿನಗಳ ವರೆಗೆ ಹೆಚ್ಚಾಗಿತ್ತು. ಆದರೆ ಕತ್ತಲಿನಲ್ಲಿ ಇರಿಸಿದ್ದ ಗುಬ್ಬಚ್ಚಿಗಳಲ್ಲಿ ಅದೇ ವೈರಸ್ ನ ಪ್ರಮಾಣ ಕೇವಲ ಎರಡು ದಿನಗಳು ಮಾತ್ರ ಹೆಚ್ಚಾಗಿತ್ತು. ಹಾಗಾದರೆ ಕತ್ತಲಿನಲ್ಲಿರುವ ಗುಬ್ಬಚ್ಚಿಗಿಂತ ಬೆಳಕಿನಲ್ಲಿರುವ ಗುಬ್ಬಚ್ಚಿಗಳು ಎರಡರಷ್ಟು ಸಮಯ ವೈರಸ್ ಅನ್ನು ತನ್ನಲ್ಲೇ ಹುದುಗಿಸಿಕೊಂಡಿತ್ತು. ಇಷ್ಟು ಸಮಯ ವೈರಸ್ ಅವುಗಳ ರಕ್ತದಲ್ಲಿ ಇದ್ದರೆ, ಪಾಪ ಅವುಗಳಿಗೇ ತೊಂದರೆ  ಎಂದುಕೊಂಡರೆ ಅದು ನಮ್ಮ ಮೂರ್ಖತನ. ಏಕೆಂದರೆ ಅದೇ ವೈರಸ್, ಸೊಳ್ಳೆಗಳ ಮೂಲಕ ಬೇರೆ ಜೀವಿಗಳಿಗೆ(ನಮಗೂ) ವಿಸ್ತರಿಸಲು ಹೆಚ್ಚು ಸಾಧ್ಯತೆ-ಸಮಯ ನೀಡಿದಂತೆ. ಅಲ್ಲವೇ? ಒಮ್ಮೆ ನೀವೇ ಯೋಚಿಸಿ ನೋಡಿ.

ಹಾಗಾದರೆ, ಇದೇ ರೀತಿ ನಮಗೆ ರೋಗ ತರುವಂತಹ ಬೇರೆ ವೈರಸ್ ಗಳೂ ಸಹ ಹೀಗೆ ರಾತ್ರಿಯ ಕೃತಕ ಬೆಳಕಿನಿಂದಾಗಿ ಹೆಚ್ಚು ಪರಿಣಾಮಕಾರಿಯಾಗಿ ಹರಡಬಹುದೇ? ಎಂಬ ಪ್ರಶ್ನೆ ಮೂಡುತ್ತಿದ್ದರೆ, ನೀವು ಸಹ ವೈಜ್ಞಾನಿಕವಾಗಿ ವಿಜ್ಞಾನಿಗಳ ರೀತಿ ಯೋಚಿಸುತ್ತಿರುವಿರಿ ಎಂದರ್ಥ. ಗುಡ್!

ಹೌದು, ಆ ಸಾಧ್ಯತೆಗಳೂ ಇವೆ! ಮಲೇರಿಯಾದಂತಹ ಕೆಲವು ರೋಗಗಳ ಹರಡುವಿಕೆ ಕೃತಕ ಬೆಳಕು ಸಾಮಾನ್ಯವಾಗಿ ಹೆಚ್ಚಾಗಿರುವ ಪಟ್ಟಣಗಳಲ್ಲಿ ಹೆಚ್ಚಿರುವ ಎಲ್ಲ ಸಾಧ್ಯತೆಗಳಿವೆ ಎನ್ನುತ್ತಾರೆ ವಿಜ್ಞಾನಿಗಳು. ಇದು ಒಳ್ಳೆಯ ಸಂಗತಿ ಅಲ್ಲವೇ ಅಲ್ಲ. ಅಷ್ಟೇ ಅಲ್ಲ, ಈ ರಾತ್ರಿಯ ಕೃತಕ ಬೆಳಕಿನಿಂದಾಗಿ “ಕಾರ್ಟಿಕೋಸ್ಟಿರೋನ್” ಎಂಬ ಹಾರ್ಮೋನ್ ಮೇಲೆ ಪರಿಣಾಮ ಬೀರಿ ಜೀವಿಗಳ ರೋಗ ನಿರೋಧಕ ಶಕ್ತಿಯನ್ನು ಏರುಪೇರುಗೊಳಿಸಬಹುದು ಎನ್ನುತ್ತಿವೆ ಬೇರೆ ಸಂಶೋಧನೆಗಳು. ಇವು ಯಾವುವೂ ಒಳ್ಳೆಯ ಸಂಗತಿಗಳಲ್ಲ. ಹಾಗಾದರೆ ಏನು ಮಾಡುವುದು? ರಾತ್ರಿಯಲ್ಲಿ ಬೀದಿ ದೀಪವಿಲ್ಲದೆ ಎಲ್ಲಾ ಆರಿಸಿ ಕತ್ತಲಲ್ಲಿ ಜೀವನ ಮಾಡಬೇಕೆ? ಖಂಡಿತ ಇಲ್ಲ. ರಾತ್ರಿಯಲ್ಲಿ ಬೆಳಕು ನಮಗೆ ಎಷ್ಟೋ ಬಾರಿ ಅವಶ್ಯಕ.

ಹಾಗಾದರೆ ಇದಕ್ಕೆ ಪರಿಹಾರವೇನು? ನಾನೂ ಯೋಚಿಸುತ್ತಿರುವೆ… ತಾಳಿ.
ಸುಮ್ಮನೆ ನಾ ಯೋಚಿಸಿದ ಹಾಗೆ ನನಗೆ ಹೊಳೆದ ಉಪಾಯಗಳಿವು..

  1. ಅನವಶ್ಯಕವಾಗಿ ಉರಿಯುತ್ತಿರುವ ಬೆಳಕನ್ನು ನಂದಿಸುವುದು.
  2. ಬೆಳೆಯುತ್ತಿರುವ ಟೆಕ್ನಾಲಜಿಯ ಪ್ರಯೋಜನ ಪಡೆದು ದಾರಿ ದೀಪಗಳಲ್ಲಿ ಸೆನ್ಸಾರ್ ಗಳನ್ನು ಬಳಕೆ ಮಾಡಿ ‘auto ON/OFF’ ಮಾಡುವುದು. ಆಗ ವಿದ್ಯುತ್ ಉಳಿತಾಯವೂ ಆಗುವುದು, ಬೇಕಾದಾಗ ಬೆಳಕೂ ಸಿಗುವುದು.
    ನಿಮ್ಮ ಉಪಾಯಗಳನ್ನು ನಮಗೆ ಬರೆದು ತಿಳಿಸಿ, @kaanana.mag@gmail.com (Sub: Feedback-VVAnkana Mar-19)

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Spread the love
error: Content is protected.