ಅಪರೂಪದ ಕುರುಡುಗಪ್ಪಟ ಹಕ್ಕಿಯೊಂದಿಗೆ

ಅಪರೂಪದ ಕುರುಡುಗಪ್ಪಟ ಹಕ್ಕಿಯೊಂದಿಗೆ

ಚುಮು ಚುಮು ಚಳಿಗಾಲದ ಮುಂಜಾನೆ ಇನ್ನೂ ಭಾಸ್ಕರ ಉದಯಿಸಿರಲಿಲ್ಲ ನಾನು, ಚಂದ್ರು ಶಿಡೇನೂರು ಸೇರಿ ಬೈಕೇರಿ ಕಾಕೋಳ ಸನಿಹದ ರಾಣೆಬೆನ್ನೂರಿನ ಕೃಷ್ಣಮೃಗ ಅಭಯಾರಣ್ಯದ ಕುರುಚಲು ಕಾಡಿನತ್ತ ಪ್ರಯಾಣಿಸ ತೊಡಗಿದೆವು. ಇಬ್ಬನಿ ಬಿದ್ದು ಜಗವೆಲ್ಲ ಇನ್ನೂ ನಿದ್ದೆಯಲ್ಲೇ ಇದ್ದಂತ್ತಿತ್ತು. ನಮ್ಮ ಮೈ-ಮನವೆಲ್ಲ ಚಳಿಗೆ ನಡುಗುತ್ತಿತ್ತು. ನಾವು ಕಾಡಂಚಿಗಿರುವ ಬದುವಿನ ಹತ್ತಿರ ಬೈಕನ್ನು ನಿಲ್ಲಿಸಿ, ಮಂಜು ಕವಿದ ಅಡವಿಯಲ್ಲಿ ಹೆಜ್ಜೆ ಹಾಕುತ್ತಾ ಸಾಗತೊಡಗಿದೆವು. ಅತ್ತ ಪೂರ್ವದ ಅಂಬರದಲ್ಲಿ ನಿಧಾನವಾಗಿ ಭಾಸ್ಕರ ತನ್ನ ಕೆಂಪು ಛಾಯೆಯಲ್ಲಿ ಉದಯಿಸತೊಡಗಿದ. ಸಮಯ ಕಳೆದಂತೆ ಸೂರ್ಯ ಮೇಲೆ ಬಂದಂತೆ ಇಬ್ಬನಿ ಕರಗಿ ಪ್ರಕೃತಿ ನಿಚ್ಚಳವಾಯಿತು. ನಾವು ಚಿಗರಿಮಟ್ಟಿಯತ್ತ ಕ್ಯಾಮೆರಾವನ್ನು ಹಿಡಿದು ನಿಧಾನವಾಗಿ ಕಾಲ್ನಡಿಗೆಯಲ್ಲಿ ಹೋಗುತ್ತಿರುವಾಗ ಸ್ವಲ್ಪದ ದೂರದಲ್ಲಿ ಭೂತಾಯಿಯ ಒಡಲಾಳಕ್ಕೆ ಹತ್ತಿಕೊಂಡಿರುವ ಕಪ್ಪಾದ ಕಲ್ಲು ಬಂಡೆಯ ಮೇಲೆ ಬೂದು ವರ್ಣದ ಯಾವುದೋ ವಸ್ತುವೊಂದು ಅಲುಗಾಡಿದಂತೆ ಭಾಸವಾಯಿತು. ನಾನು ಚಂದ್ರು ಒಬ್ಬರಿಗೊಬ್ಬರು ಕೈಸೆನ್ನೆ ಮಾಡಿಕೊಂಡು ಮೌನಿಗಳಾಗಿ ನಿಧಾನವಾಗಿ ಅದರತ್ತ ಹೆಜ್ಜೆ ಹಾಕಿದೆವು.

ಟೆಲಿಫೋಟೊ ಲೆನ್ಸ್ ಮೂಲಕ ನೋಡಿ ಅಲ್ಲಿ ಜೀವಿ ಇರುವುದನ್ನು ನಾನು ಖಾತ್ರಿ ಮಾಡಿಕೊಂಡೆ. ಹೌದು ಅಲ್ಲಿರುವುದು ಅಪರೂಪವಾಗಿ ಕಾಣಸಿಗುವ ಕುರುಡುಗಪ್ಪಟ (ನೈಟ್ ಝಾರ್) ಹಕ್ಕಿಯಾಗಿತ್ತು. ನಾನು ನಿಧಾನವಾಗಿ ನೆಲದ ಮೇಲೆ ಕುಳಿತು ತೆವಳುತ್ತಾ ಸಾಗಿ, ಹೊಟ್ಟೆಯನ್ನು ನೆಲಕ್ಕೆ ಹಚ್ಚಿ ಮಲಗಿ, ಎರಡು ಕೈಗಳನ್ನು ಹರಳುಗಳಿರುವ ನೆಲೆಕ್ಕೆ ಹಚ್ಚಿ ಆ ಹಕ್ಕಿಯ ಫೋಟೊಗ್ರಫಿ ಮಾಡತೊಡಗಿದೆ. ಹಕ್ಕಿ ರಾತ್ರಿ ಎಚ್ಚರವಿದ್ದುದ್ದರಿಂದ ನಿದ್ರೆಯ ಮೂಡಿನಲ್ಲಿತ್ತು. ಒಂದು ಬಾರಿ ಕಣ್ಣು ತೆರೆದು ನಮ್ಮನೊಮ್ಮೆ ನೋಡಿ ನಿಧಾನವಾಗಿ ಕಣ್ಣು ಮುಚ್ಚತೊಡಗಿತು. ಈಗ ನಾನು ಎಚ್ಚೆತ್ತು ಕೊಂಚ ಮುಂದೆ ಸಾಗಿದೆ. ತಕ್ಷಣವೇ ಎಚ್ಚೆತ್ತ ಆ ನತ್ತಿಂಗ ಹಕ್ಕಿ ಗಾಬರಿಯಿಂದ ಹಾರಿ ಸ್ವಲ್ಪ ದೂರದಲ್ಲಿ ಮತ್ತೆ ನೆಲದ ಮೇಲೆ ಕುಳಿತು ತೂಗಡಿಸ ತೊಡಗಿದಾಗ ನಾನು ನೆಲಕ್ಕೆ ಹೊಟ್ಟೆ ಹಚ್ಚಿ ಮುಂದೆ ಸಾಗಿ ಅದರ ಫೋಟೋಗ್ರಫಿ ಮಾಡಿದೆ. ನೆಲದಲ್ಲಿ ಮಲಗಿ ಆ ಹಕ್ಕಿಯ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದ ಚಂದ್ರ ಅವರಿಗೆ ಪಕ್ಷಿ ಕಾಳಜಿ ತೋರಿಸುತ್ತಾ ಪದೇಪದೇ ತಾನಿದ್ದ ಸ್ಥಳವನ್ನು ಬದಲಾಯಿಸುತ್ತಿತ್ತು.

ನಾನು ಛಲ ಬಿಡದ ತ್ರಿವಿಕ್ರಮನಂತೆ ಅದನ್ನು ಬೆಂಬತ್ತಿ ಛಾಯಾಗ್ರಹಣ  ಮಾಡಿದೆ. ನೈಟ್ ಝಾರ್ ಕಣ್ಣು ಮುಚ್ಚಿ ನಿದ್ರೆಗೆ ಜಾರಿದಾಗ ನಾನು ಎಚ್ಚೆತ್ತು ಕುಳಿತು ಅದನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದೆ. ಅದು ಎಚ್ಚತ್ತು ಕಣ್ಣು ಬಿಟ್ಟಾಗ ನಾನು ಮಲಗಿ ಅದರ ವಿವಿಧ ಭಂಗಿಗಳ ಫೋಟೊ ಕ್ಲಿಕ್ಕಿಸುತ್ತಿದ್ದೆ.

ಪಾರಿವಾಳಕ್ಕಿಂತ ಸ್ವಲ್ಪ ದೊಡ್ಡ ಗಾತ್ರದ ಹಕ್ಕಿ ಇದು. ಇದರ ಕಂದು-ಬೂದು ಮಿಶ್ರಿತ ದೇಹದ ಮೇಲೆ ಕಪ್ಪು ಗೀರುಗಳಿವೆ. ಗಂಟಲ ಎರಡೂ ಬದಿಗಳಲ್ಲಿ ಎದ್ದು ಕಾಣುವ ಬಿಳಿ ಪಟ್ಟಿ. ಇದರ ಕೊಕ್ಕು ಕಪ್ಪೆಯ ಬಾಯಿಯಂತೆ ಅಗಲವಾಗಿ ಗಿಡ್ಡದಾಗಿದೆ. ಚಿಕ್ಕದಾಗಿರುವ ಈ ಕೊಕ್ಕಿನ ಮೇಲ್ಭಾಗದಲ್ಲಿ ಮೀಸೆಯಂತೆ ಕೂದಲುಗಳು ಇರುತ್ತವೆ. ಕೊಕ್ಕಿನಲ್ಲಿ ಉಸಿರಾಟಕ್ಕೆ ಬೇಕಾದ ರಂಧ್ರಗಳು ಸ್ಪಷ್ಟವಾಗಿ ಕಾಣುತ್ತವೆ. ಮಣ್ಣಿನ ಮೇಲೆ ಕುಳಿತರೆ ಗೊತ್ತಾಗದಿರುವಷ್ಟು ಜಟಿಲವಾದ ವರ್ಣ ಸಂಯೋಜನೆ ಈ ಹಕ್ಕಿಯದ್ದು. ಹಾರಿದಾಗ ರೆಕ್ಕೆಗಳ ಮೇಲಿರುವ ಬಿಳಿ ಪಟ್ಟೆ ಸ್ಪಷ್ಠವಾಗಿ ಗೋಚರಿಸುತ್ತದೆ. ಕಣ್ಣುಗಳು ಕೆಂಪಾಗಿವೆ, ಹಾಗಾಗಿ ನೋಡಲು ಕೊಂಚ ಭಯವೆನಿಸುತ್ತದೆ. ಕುರುಡುಗಪ್ಪಟ ಹಕ್ಕಿ ಗೂಬೆಯಂತೆ ನಿಶಾಚರಿ ಹಕ್ಕಿಯಾಗಿದ್ದು ಮುಸ್ಸಂಜೆ ನಂತರ ಮೆಲುದನಿಯ ಕೂಗಿನಿಂದ ಇದರ ಚಟುವಟಿಕೆ ಆರಂಭ. ಇದರ ಕೂಗು ಚುಳುಕ್… ಚುಳುಕ್… ಚುಳುಕ್… ಎಂದು ನೀರಿನಲ್ಲಿ ಕಲ್ಲು ಹಾಕಿದಾಗ ಶಬ್ಧ ಬಂದಂತೆ ಇರುತ್ತದೆ. ಕುರುಚಲು ಕಾಡು, ಬಂಡೆ ಪ್ರದೇಶ, ಬಂಡೆನೆಲೆದ ಮೇಲೆ ಇದರ ವಾಸ, ಇದರ ಆಹಾರ ರಾತ್ರಿ ಸಮಯದಲ್ಲಿ ಹಾರಾಡುವ ಕೀಟಗಳು, ದುಂಬಿ, ರೆಕ್ಕೆಗೊದ್ದ, ಪತಂಗ, ಮಿಡತೆ, ಕಂಬಳಿಹುಳು ಕೀಟಗಳು ಮತ್ತು ಕೀಟಗಳ ಮೊಟ್ಟೆಯೂ ಹೌದು. ಕೆಲ ಸಲ ಸೊಳ್ಳೆಗಳನ್ನು ಸಹ ಪಕ್ಷಿ ಭಕ್ಷಿಸುತ್ತವೆ. ಹಾರುತ್ತಲೇ ಕೀಟಗಳನ್ನು ಬೇಟೆಯಾಡಿ ಹಿಡಿಯುವ ಈ ಪಕ್ಷಿ ಬಲು ಚತುರ ಪಕ್ಷಿಗಳು. ನತ್ತಿಂಗಗಳನ್ನು ಮೊದಲು “Goat suckers” ಎಂದು ಕರೆಯುತ್ತಿದ್ದರು. ಇವು ರಾತ್ರಿ ಹೊತ್ತಿನಲ್ಲಿ ಕುರಿ-ಆಡುಗಳ ಕೊಟ್ಟಿಗೆಗೆ ಬಂದು ಅಲ್ಲಿರುವ ಉಣ್ಣೆ, ಕೀಟಗಳನ್ನು ತಿನ್ನುತ್ತವೆ. ಆದರೆ ಅದನ್ನು ರೈತ ಜನರು, ತಪ್ಪಾಗಿ ಗ್ರಹಿಸಿ ಈ ಹಕ್ಕಿಗಳು ಆಡಿನ ಹಾಲು ಕುಡಿಯಲು ಬರುತ್ತವೆ ಎಂದು ಭಾವಿಸಿದ್ದರು, ಹಾಗಾಗಿ ಈ ಹೆಸರು ಬಂದಿದೆ ಎಂಬ ಮಾತಿದೆ.

ಕುರುಡುಗಪ್ಪಟ ಹಕ್ಕಿಯನ್ನು ಅಡಕಪನಹಕ್ಕಿ, ನತ್ತಿಂಗ, ನೆಲರಾವು, ನೆಲಗೂಗಿ ಅಂತೆಲ್ಲ ಕರೆದು ಆಂಗ್ಲಭಾಷೆಯಲ್ಲಿ ಇಂಡಿಯನ್ ನೈಟ್ ಜಾರ್ ಅಥವಾ ಕಾಮನ್ ನೈಟ್ ಜಾರ್ (Indian Nightjar Or Common Nightjar) ಎಂದು ಕರೆದು ವೈಜ್ಞಾನಿಕವಾಗಿ ಕ್ಯಾಪ್ರಿಮುಲ್ಗುಸ್ ಏಶಿಯಾಟಿಕಸ್ (Caprimulgus asiaticus) ಹೆಸರಿಸಿ ಕ್ಯಾಪ್ರಿಮುಲ್ಗಿಫಾರ್ಮಿಸ್ (Caprimulgiformes) ಗಣದ ಕ್ಯಾಪ್ರಿಮುಲ್ಗಿಡೇ (Caprimulgidae) ಕುಟುಂಬಕ್ಕೆ ಸೇರಿಸಿದ್ದಾರೆ. ಪ್ರಪಂಚದಾದ್ಯಂತ 86 ಪ್ರಬೇಧದ ನತ್ತಿಂಗಗಳಿದ್ದು ಅದರಲ್ಲಿ ಭಾರತದಲ್ಲಿ 9 ಹಾಗೂ ಕರ್ನಾಟಕದಲ್ಲಿ 5 ಪ್ರಬೇಧಗಳಿರುವ ಬಗ್ಗೆ ದಾಖಲಾತಿಯಿದೆ.

ಗಂಡು ಮತ್ತು ಹೆಣ್ಣು ಎರಡು ಹಕ್ಕಿಗಳು ಒಟ್ಟೊಟ್ಟಿಗೆ ಇರುತ್ತವೆ. ಇವುಗಳ ಸಂತಾನಾಭಿವೃದ್ಧಿ ಸಮಯವು ಫೆಬ್ರುವರಿ ಯಿಂದ ಸೆಪ್ಟೆಂಬರ್ ತಿಂಗಳಾಗಿದ್ದು ನೆಲವನ್ನು ಕೆದರಿ ಗುಳಿಮಾಡಿ ತಿಳಿಗುಲಾಬಿ ವರ್ಣದ ಕೆಂಪು ಮಿಶ್ರಿತ ಕಂದು ಚುಕ್ಕಿಗಳಿರುವ ಎರಡು ಮೊಟ್ಟೆಗಳನ್ನು ಮರಿ ಮಾಡುತ್ತವೆ ಸಾಮಾನ್ಯವಾಗಿ ಹೆಣ್ಣು ಹಕ್ಕಿ ಕಾವು ಕೊಡುವ ವೇಳೆ ಗಂಡು ಹಕ್ಕಿ ಅದರ ಸುತ್ತ ಮುತ್ತಲು ಅಡ್ಡಾಡಿಕೊಂಡಿರುತ್ತದೆ. ವೈರಿ ಹಕ್ಕಿಗಳ ದಾಳಿ ಆಗದಂತೆ ಸೈನಿಕನಂತೆ ಕಾರ್ಯ ನಿರ್ವಹಿಸುತ್ತದೆ. ರಾತ್ರಿ ವೇಳೆಯಲ್ಲಿಯೇ ಆಹಾರಕ್ಕಾಗಿ ಅಲೆದಾಡುವ ಈ ಹಕ್ಕಿಗಳು ಯಾವುದೇ ಕಾರಣಕ್ಕೂ ಮೊಟ್ಟೆಗಳಿಂದ ದೂರ ಇರುವುದಿಲ್ಲ. ಏಕೆಂದರೆ ರಾತ್ರಿ ವೇಳೆಯಲ್ಲಿ ಗೂಬೆ ಮತ್ತು ಹೆಗ್ಗಣಗಳು ಮೊಟ್ಟೆಗಳನ್ನು ತಿಂದು ಮುಗಿಸುವ ಸಾಧ್ಯತೆ ಇರುತ್ತದೆ. ಹಗಲಿನಲ್ಲಿ ಹೆಣ್ಣು ಹಕ್ಕಿ ಮಾತ್ರ ಮೊಟ್ಟೆಗಳ ಮೇಲೆ ಸಂಜೆಯಾಗುವ ತನಕ ಕುಳಿತೇ ಇರುತ್ತದೆ.

ಮೊಟ್ಟೆ ಇಟ್ಟ ಸಂದರ್ಭದಲ್ಲಿ ಆಹಾರ ಅರಸಿ ಒಂದು ಹಕ್ಕಿ ದೂರ ಹಾರಿ ಹೋದಾಗ ಮತ್ತೊಂದು ಹಕ್ಕಿ ಮೊಟ್ಟೆಗಳಿಗೆ ಕಾವು ಕೊಡುತ್ತದೆ. ಅಂದರೆ ಗಂಡು ಹಾಗೂ ಹೆಣ್ಣು ಹಕ್ಕಿಗಳೆರಡೂ ಸಮಾನವಾಗಿ ಮೊಟ್ಟೆಗಳಿಗೆ ಕಾವು ಕೊಡುತ್ತವೆ. ಕತ್ತಲಾಗುತ್ತಿದ್ದಂತೆ ಗಂಡು ಹಕ್ಕಿಯ ಸರದಿ. ಆಗ ಹೆಣ್ಣು ನೈಟ್‌ ಜಾರ್ ಹಕ್ಕಿ ಹೊಟ್ಟೆ ತುಂಬಿಸಿಕೊಳ್ಳಲು ದೂರ ಹಾರಿ ಹೋಗುತ್ತದೆ. ನೈಟ್‌ ಜಾರ್ ಹಕ್ಕಿಗಳ ಸಂತತಿ ಈಗ ಕಡಿಮೆ ಆಗುತ್ತಿದೆ. ಆದುದರಿಂದಾಗಿ ಅವುಗಳ ದರ್ಶನಭಾಗ್ಯವೂ ಕಷ್ಟ. ನೈಟ್ ಜಾರ್ ಹಕ್ಕಿಯು ಗಡದ್ದಾಗಿ ಕುಂಭಕರ್ಣ ನಿದ್ರೆಗೆ ಜಾರಿತು. ಸೂರ್ಯನ ತಾಪ ಅಧಿಕವಾಗಿ ನಾವು ನಿಧಾನವಾಗಿ ಅಲ್ಲಿಂದ ಮರಳಿ ಮನೆಯತ್ತ ನಡೆದೆವು. ಆಧುನಿಕತೆಯ ನಗರೀಕರಣ ಬರದಲ್ಲಿ ಇಂಥ ಅನೇಕ ಪಕ್ಷಿಗಳನ್ನು ವಿನಾಶದತ್ತ ತಳ್ಳುತ್ತಿರುವ ಬಗ್ಗೆ, ನಿಶಾಚರಿಯಾಗಿ ರೈತರಿಗೆ ಪೀಡೆ ಕೀಟಗಳನ್ನು ಹಿಡಿದು ಭಕ್ಷಿಸಿ ರೈತ ಮಿತ್ರ ಹಕ್ಕಿಗಳ ಸಂತತಿಯನ್ನು ಉಳಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ…

ಚಿತ್ರ – ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ
ಜಿಲ್ಲೆ

Spread the love
error: Content is protected.