ಪ್ರಕೃತಿ ಬಿಂಬ

©ವಿಪಿನ್ ಬಾಳಿಗಾ, ಕೂರ್ಗ್ ಹಳದಿ ಪೊದೆಗಪ್ಪೆ
ಪಶ್ಚಿಮಘಟ್ಟ ಪ್ರದೇಶದ ಕಾಫಿತೋಟಗಳಲ್ಲಿ ಹಾಗೂ ಜೌಗುಪ್ರದೇಶಗಳಲ್ಲಿ ಈ ಕಪ್ಪೆಯನ್ನು ಕಾಣಬಹುದು. ಸಂಜೆಯಾಗುತ್ತಲೇ ಗಿಡ-ಗಂಟೆಗಳ ಮೇಲೆ ಕುಳಿತು ಕೂಗಲು ಪ್ರಾರಂಭಿಸುತ್ತವೆ. ಒಂದು ಇಂಚು ಉದ್ದವಿರುವ ಈ ಹಳದಿ ಪೊದೆಗಪ್ಪೆ ತಿಳಿ ಹಳದಿ ಬಣ್ಣದಿಂದ ಕೂಡಿದೆ. ಮೊಟ್ಟೆಯಿಂದ ಹೊರಬರುವಾಗಲೇ ಇವುಗಳ ಕಾಲುಗಳು ಪೂರ್ಣಪ್ರಮಾಣದಲ್ಲಿ ಬೆಳೆದಿರುತ್ತವೆ. ಗಾತ್ರದಲ್ಲಿ ಚಿಕ್ಕದಾದ ಕಪ್ಪೆಮರಿ ಮೊಟ್ಟೆಯಿಂದ ಹೊರಬಂದಾಗ ಬಾಲ ಇರುವುದೇ ಇಲ್ಲ!

©ವಿಪಿನ್ ಬಾಳಿಗಾ, ಕಿರುಮರಗಪ್ಪೆ
ಅವನತಿಯ ಅಂಚಿನಲ್ಲಿರುವ ಈ ಕಪ್ಪೆ ಭಾರತದ ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಕಿರಿದಾದ ದೇಹ ಹೊಂದಿರುವ ಈ ಕಪ್ಪೆಯ ಸಂತತಿ ನಶಿಸಿಹೋಗಿದೆ ಎಂದು ನಂಬಲಾಗಿತ್ತು. ಕೊನೆಗೂ 2000ನೇ ಇಸವಿಯಲ್ಲಿ ಈ ಕಪ್ಪೆಯನ್ನು ಮತ್ತೆ ಪತ್ತೆ ಹಚ್ಚಲಾಯಿತು. ಈ ಕಪ್ಪೆ ತನ್ನ ಮೈ ಬಣ್ಣವನ್ನು ಬದಲಾಯಿಸಕೊಳ್ಳಬಹುದು. ನೀರಿನಂಚಿನಲ್ಲಿ ಪೊದೆಯಲ್ಲಿನ ಎಲೆಯನ್ನು ಸಿಲಿಂಡರ್ ಆಕಾರದಲ್ಲಿ ಸುತ್ತಿ, ಅದರಲ್ಲಿ ಮೊಟ್ಟೆಯಿಟ್ಟು ಕಾಪಾಡುತ್ತದೆ. ಪೂರ್ತಿ ಪ್ರಮಾಣದಲ್ಲಿ ಕಾಲುಗಳು ಬೆಳೆದ ಕಿರುಗಪ್ಪೆ ಮರಿಗಳು ಆ ಎಲೆಯ ಗೂಡಿನಿಂದ ನೇರವಾಗಿ ಕೆಳಗಿರುವ ನೀರಿನ ಹೊಂಡಕ್ಕೆ ಬಿದ್ದು ತನ್ನ ನವಜೀವನವನ್ನು ಪ್ರಾರಂಭಿಸುತ್ತವೆ.

©ವಿಪಿನ್ ಬಾಳಿಗಾ, ಗಂಧಿ ಪೊದೆಗಪ್ಪೆ
ಮೈಮೇಲೆಲ್ಲ ಒರಟು ಗ್ರಂಥಿಗಳಂತಿರುವ ಈ ಪೊದೆಗಪ್ಪೆ ಕರ್ನಾಟಕ ಮತ್ತು ಕೇರಳದ ಘಟ್ಟಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ. ಒಂದು ಇಂಚಷ್ಟೇ ಉದ್ದವಿರುವ ಈ ಕಪ್ಪೆ ನೆಲದಮೇಲಿಂದ ಹತ್ತು – ಹದಿನೈದು ಅಡಿ ಎತ್ತರದ ಮರಗಳ ಮೇಲೆ ಕಾಫಿತೋಟ ಮತ್ತು ಕಾಡು ಪ್ರದೇಶದಲ್ಲಿ ಕಾಣಸಿಗುತ್ತದೆ. ಕಾಡು ನಶಿಸಿ, ಕ್ಷೀಣಿಸುತ್ತಿರುವುದರಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದೆ ಮತ್ತು ಅವನತಿಯ ಅಂಚಿನಲ್ಲಿರುವ ಜೀವಿಗಳ ಕೆಂಪು ಪಟ್ಟಿಗೆ ಸೇರಿದೆ.

©ವಿಪಿನ್ ಬಾಳಿಗಾ, ಗೊದ್ದಮೊಟ್ಟೆ
ಮುಂಗಾರು ಮಳೆಯ ಅವಧಿಯಲ್ಲಿ ಹಳ್ಳ ಮತ್ತು ಹೊಂಡದಂಥ ನೀರು ತುಂಬಿದ ಪ್ರದೇಶಗಳಲ್ಲಿ ಕಪ್ಪೆಗಳು ನೂರಾರು ಮೊಟ್ಟೆಗಳನ್ನಿಡುತ್ತವೆ. ಆ ಮೊಟ್ಟೆಗಳಿಂದ ಹೊರಬರುವ ಗೊದ್ದಮೊಟ್ಟೆ ಥೇಟ್ ಮೀನಿನ ಮರಿಯಂತೆಯೇ ಕಾಣುತ್ತವೆ. ಶ್ವಾಸಕೋಶ ಅಭಿವೃದ್ಧಿ ಹೊಂದಿದ ಮೇಲೆ ಗೊದ್ದ ಮೊಟ್ಟೆಗಳಿಗೆ ಬಾಲ ಮಾಯವಾಗಿ ಪುಟ್ಟ ಪುಟ್ಟ ಕಾಲುಗಳು ಬರುತ್ತವೆ. ಚಿಕ್ಕ ಕಪ್ಪೆ ಮರಿ ಅದರ ಅಮ್ಮನನ್ನೇ ಹೋಲುತ್ತದೆ. ಆನಂತರವೇ ನೀರನ್ನು ಬಿಟ್ಟು ಭೂಮಿಯ ಮೇಲೆ ವಾಸಿಸಲು ಶುರುಮಾಡಿ ಉಭಯ ಜೀವಿಯಾಗುತ್ತದೆ.
ಚಿತ್ರಗಳು: ವಿಪಿನ್ ಬಾಳಿಗಾ
ವಿವರಣೆ : ಶಂಕರಪ್ಪ .ಕೆ .ಪಿ

ಪರಿಸರ ಹಾಗೂ ವನ್ಯಜೀವಿಗಳಲ್ಲಿ ಆಸಕ್ತಿಯುಳ್ಳ ಐ ಟಿ ವೃತ್ತಿಯವ ನಾನು. ಚಾರಣ , ಮಳೆಗಾಲ, ಕೀಟ , ಜೇಡ, ಹಾವು, ಉಭಯಚರಗಳು, ಒಳ್ಳೆಯ ಪುಸ್ತಕ ಓದುವುದು, ಪ್ರಯಾಣ, ವಿಧ-ವಿಧದ ಆಹಾರವೆಂದರೆ ಅಪಾರವಾದ ಪ್ರೀತಿ.