ಹಾವಿನ ಸಂಬಂಧಿಯಲ್ಲ , ಆದರೂ ಹಾವು ರಾಣಿ!
ನಾಗ ರಾಜರೇ ಬೇರೆ, ಹಾವುರಾಣಿಯರೇ ಬೇರೆ
ನಾಗರ ಹಾವು, ಹಾವು ಸಂತತಿಯ ರಾಜ ಎಂದು ಕರೆದರೆ, ಹಾವುರಾಣಿ ಎಂದು ಕರೆವ ಹಲ್ಲಿ ಪ್ರಭೇದದ ಈ ಜೀವಿ ನೋಡಲಿಕ್ಕೆ ಮನೋಹರವಾಗಿರುತ್ತದೆ. ಹಾವುರಾಣಿ ಎಂದು ಕರೆವ ಇದು ಎಲ್ಲಿಯೂ ಕೂಡ ಹಾವಿನೊಂದಿಗಿದ್ದು ಬದುಕಿದ, ಮಿಲನ ಕೂಟದಲ್ಲಿ ತೊಡಗಿದ ಉದಾಹರಣೆಗಳಿಲ್ಲ. ನೆಲೆದ ಮೇಲೆ, ಕಲ್ಲಿನ ಸಂದುಗಳಲ್ಲಿ ಕಂಡು ಬರುವ ಇವು ನಿಸರ್ಗ ಸಮತೋಲನ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹಾವುರಾಣಿಗಳ ಮೈ ಬಣ್ಣ ಹೊಳಪು ಕಂದು, ನೀಳವಾದ ಚಪ್ಪಟೆ ದೇಹ, ಬೆನ್ನು ಕಂಚು ವರ್ಣ, ಅಲ್ಲಲ್ಲಿ ಚುಕ್ಕೆಗಳಿವೆ. ಕಣ್ಣಿನಿಂದ ಬಾಲದವರೆಗೆ ಒಂದು ಪಟ್ಟಿ ಇದೆ. ದೇಹದ ಮೇಲೆ ಒಂದೇ ರೀತಿಯ, ಒಂದೇ ಗಾತ್ರದ ಉರುಪೆಗಳಿವೆ. ಉರುಪೆಗಳಿಂದ ಆವೃತವಾದ ಕೆಳ ಕಣ್ಣಿಗೆ ರೆಪ್ಪೆ ಇದೆ. ನಾಲ್ಕು ಕಾಲುಗಳಿದ್ದು ಪ್ರತಿಯೊಂದು ಕಾಲುಗಳು ಐದು ಬೆರಳುಗಳನ್ನು ಹೊಂದಿವೆ. ಕುತ್ತಿಗೆಯು ಅತೀ ಸಣ್ಣದು, ಮೂತಿ ಉದ್ದವಾಗಿದೆ. ವೃತ್ತಾಕಾರದ ತೆರದ ಕಿವಿಗಳು ಮತ್ತು ಕೆಂಪಾದ ಕಣ್ಣುಗಳಿವೆ.
ಶತ್ರುವಿನಿಂದ ತಪ್ಪಿಸಿಕೊಳ್ಳುವ ಚತುರ
ಉದ್ದವಾದ ಹಾಗೂ ಚಪ್ಪಟೆಯಾದ ಬಾಲವು ತುದಿಯಲ್ಲಿ ಕ್ಷೀಣಿಸಿ ಮೊನಚಾಗಿದೆ. ಶತ್ರು ಪ್ರಾಣಿ ಅಟ್ಟಿಸಿಕೊಂಡು ಬಂದು ಹಿಡಿದಾಗ, ಬಾಲವು ತುಂಡಾಗಿ ಬಿದ್ದು ವಿಲಿವಿಲಿ ಒದ್ದಾಡುತ್ತಾ ಶತ್ರುವನ್ನು ವಂಚಿಸಿ ತನ್ನ ಜೀವ ಉಳಿಸಿಕೊಂಡು ಓಡಿ ಹೋಗಿ ಬಚಾವಾಗುತ್ತವೆ. ತುಂಡಾದ ಬಾಲವು ಕಾಲಾನಂತರ ಮತ್ತೆ ದೇಹದಿಂದ ಬೆಳವಣಿಗೆ ಹೊಂದುತ್ತದೆ.
ಇವು ಮಾನವನ ಸಹ ಜೀವಿಗಳಾಗಿದ್ದು ಕಾಡಿನಲ್ಲಿ ಇರುವಷ್ಟೇ ನಿರ್ಭಯವಾಗಿ ಜನ ವಸತಿ ಪ್ರದೇಶಗಳಲ್ಲಿ ನೆಲದ ಮೇಲೆ ಓಡಾಡುವ ದಿವಾಚರಿ ಜೀವಿಗಳಾಗಿವೆ. ಸಾಮಾನ್ಯವಾಗಿ ಇವು ಕೀಟಾಹಾರಿಗಳಾಗಿವೆ. ಹಗಲಿನಲ್ಲಿ ಆಹಾರ ಅನ್ವೇಷಣೆಯಲ್ಲಿ ತೊಡಗುವ ಇವು ಮನೆ ಒಳಗೂ ಬರುವುದುಂಟು.
ಸುರಂಗ ಮಾರ್ಗ ರಚಿಸುವ ಇಂಜಿನಿಯರ್
ಸ್ವಭಾವತಃ ನೆಲವನ್ನು ಕೆದರುವುದು ಹಾಗೂ ಅಗೆಯುವುದನ್ನು ತುಂಬಾ ಇಷ್ಟಪಡುವ ಇವು ಬಹುತೇಕ ಸಮಯವನ್ನು ನೆಲದಡಿ ಕಳೆಯುತ್ತವೆ. ಇವು ಶತ್ರುಗಳಿಂದ ರಕ್ಷಿಸಿಕೊಳ್ಳಲು ಕೆಲವೊಮ್ಮೆ ಸುಲಭ ಸಂಚಾರಕ್ಕಾಗಿ ಸುರಂಗ ಮಾರ್ಗವನ್ನು ರಚಿಸಿಕೊಂಡಿರುತ್ತವೆ. ಬೇಟೆ ಇರುವಿಕೆಯನ್ನು ನಾಲಿಗೆಯ ಮುಖಾಂತರ ಪತ್ತೆ ಮಾಡಿ ಬೇಟೆಯನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು ನುಂಗಿಹಾಕುತ್ತದೆ. ತೆರೆದ ಜಾಗದ ಕಲ್ಲುಗಳ ಮೇಲೆ ಕುಳಿತು ಬಿಸಿಲು ಕಾಯಿಸುತ್ತವೆ. ಶತ್ರುಗಳ ದರ್ಶನವಾದರೆ ಪಟ್ಟನೆ ಕಲ್ಲು ಸಂದುಗಳಲ್ಲಿ ಅಡಗಿಕೊಳ್ಳುತ್ತವೆ.
ವಿಸ್ಮಯದ ಸಂತಾನಾಭಿವೃದ್ಧಿ
ಇವುಗಳ ಸಂತಾನಾಭಿವೃದ್ಧಿಯ ಕಾಲವು ಅಕ್ಟೋಬರ್-ಡಿಸೆಂಬರ್ ತಿಂಗಳ ಅವಧಿ. ಇವು ಅಂಡೋತ್ಪಾದಕಗಳಾಗಿವೆ. ಹೆಣ್ಣು ಹಾವುರಾಣಿಯಲ್ಲಿ ಪುರುಷಾಣುಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅನುಕೂಲವಿದೆ ಹಾಗಾಗಿ ಒಂದು ವರ್ಷದಲ್ಲಿ ಒಂದೇ ಬಾರಿ ಒಮ್ಮೆಗೆ 2 ರಿಂದ 20ರ ತಂಡದಲ್ಲಿ ತಾವು ರಚಿಸುವ ರಂಧ್ರದ ಬಿಲದಲ್ಲಿ ಅಥವಾ ನೈಸರ್ಗಿಕವಾಗಿ ರಂಧ್ರದ ಬಿಲವಿರುವಲ್ಲಿ ಮೊಟ್ಟೆಗಳನ್ನಿಡುತ್ತವೆ. ಗೂಡಿರುವ ಪ್ರದೇಶದಲ್ಲಿ ತಾಯಿ ಕಾವಲಿರುತ್ತದೆ.
ಅಪಾಯದಂಚಿನಲ್ಲಿ ಕೆಲ ಪ್ರಭೇದಗಳು
ಹಾವುರಾಣಿಗಳನ್ನು ಆಂಗ್ಲಭಾಷೆಯಲ್ಲಿ ಸ್ಕಿಂಕ್ (Skink) ಎಂದು ಕರೆದು ಸರಿಸೃಪ (Reptilia) ವರ್ಗದ ಉರುಪೆ ಸರಿಸೃಪಗಳ ಸ್ಕ್ವಾಮಾಟಾ (Squamata) ಗಣದ ಸಿನ್ಸಿಡೇ (Scincidae) ಕುಟುಂಬಕ್ಕೆ ಸೇರಿಸಿ ಭಾರತದಲ್ಲಿ ಯುಟ್ರೋಪಿಸ್ ಕ್ಯಾರಿನಾಟಾ (Eutropis carinata), ಯುಟ್ರೋಪಿಸ್ ಮೆಕುಲಾರಿಯಾ (Eutropis macularia), ಯುಟ್ರೋಪಿಸ್ ಕ್ವಾಡ್ರಿಕ್ಯಾರಿನಾಟಾ (Eutropis quadricarinata), ಯುಟ್ರೋಪಿಸ್ ಬೆಡ್ಡೊಮಿ (Eutropis beddomii), ಯುಟ್ರೋಪಿಸ್ ಟ್ರಿವಿಟ್ಟಾಟ (Eutropis trivittata), ಯುಟ್ರೋಪಿಸ್ ಬೈಬ್ರೋನಿ (Eutropis bibronii) ಎಂಬ ಆರು ಪ್ರಭೇದಗಳಿದ್ದು ಇದರಲ್ಲಿ ಯೂ. ಟ್ರಿವಿಟ್ಟಾಟ (E trivittata), ಮತ್ತು ಯೂ. ಬೈಬ್ರೋನಿ (E bibronii) ಪ್ರಭೇದಗಳು ವಿನಾಶದಂಚಿನಲ್ಲಿವೆ.
ವಾರವಿಲ್ಲದ ದಿನ ಕಚ್ಚುವ ರೈತ ಮಿತ್ರರು
ಇದರ ವಿಷವು ಹಾವಿನಂತೆ ಹೆಚ್ಚು ವಿಷಕಾರಿಯಾಗಿದ್ದು ವಾರವಿಲ್ಲದ ದಿನ ಕಚ್ಚಲು ದೇವರು ಇವಕ್ಕೆ ಹೇಳಿದ್ದಾನಂತೆ. ಅದಕ್ಕಾಗಿ ಇವು ಮಾನವರಿಗೆ ಕಚ್ಚುವುದಿಲ್ಲ ಎಂದು ಜನಪದರ ನಂಬಿಕೆ ಇದೆ. ಆದರೆ ಇವು ವೈಜ್ಞಾನಿಕವಾಗಿ ವಿಷಕಾರಿಗಳಲ್ಲ. ವಿವಿಧ ಕೀಟಗಳನ್ನು ಭಕ್ಷಿಸಿ ರೈತಮಿತ್ರರಾಗಿವೆ.
ಚಿತ್ರ – ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
ಹಾವೇರಿ ಜಿಲ್ಲೆ
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.