ಕಾಡುಪಾಪ

© Joachim S. Müller
ಬೆಳೆಯುತ್ತಿರುವ ಬೆಂಗಳೂರು ನಗರ ದಿನೇ ದಿನೆ ತನ್ನ ಸ್ವರೂಪವನ್ನು ಕಳೆದುಕೊಂಡು ಕಾಂಕ್ರೀಟ್ ಕಾಡಾಗುತ್ತಿದೆ ಎಂಬ ಆತಂಕ ಇಲ್ಲೇ ವಾಸವಿರುವ ಮೂಲ ಬೆಂಗಳೂರಿಗರ ಚಿಂತೆ. ಅಭಿವೃದ್ಧಿಯ ನೆಪದಲ್ಲಿ ಮೂಲ ಸೌಕರ್ಯಗಳ ಉನ್ನತೀಕರಿಸುವ ಭರದಲ್ಲಿ ನಾವು ಈಗಾಗಲೇ ನಗರದ ಹಸಿರು ಹೊದಿಕೆಯನ್ನು ಕಳೆದುಕೊಂಡಿದ್ದೇವೆ. ಈಗಲೂ ಅಲ್ಲಲ್ಲಿ ಅಳಿದುಳಿದಿರುವ ಹಸಿರು ತಾಣಗಳಲ್ಲಿ ಕಾಗೆ, ಓತಿಕ್ಯಾತ, ಪಾರಿವಾಳ ಇವೇ ಮೊದಲಾದ ಜೀವಿಗಳು ಕಾಣಸಿಗುತ್ತವೆ. ನಗರೀಕರಣಗೊಂಡ ಈ ಸಿಲಿಕಾನ್ ಸಿಟಿಯಲ್ಲಿಯೂ ಅಲ್ಲಲ್ಲಿ ಉಳಿದಿರುವ ಹಸಿರುತಾಣಗಳಲ್ಲಿ ಈ ಕಾಡುಪಾಪಗಳು ಇನ್ನೂ ಉಸಿರಾಡಿಕೊಂಡಿವೆ ಎನ್ನುವುದೇ ಒಂದು ಸೂಜಿಗ!
“ದಶಕಗಳ ಹಿಂದೆ ಹಳೆ ಬೆಂಗಳೂರಿನ ಬಹುತೇಕ ಭಾಗದಲ್ಲಿ ಕಾಡುಪಾಪಗಳು ಕಾಣಸಿಗುತ್ತಿದ್ದವು. ನಗರದ ಸುತ್ತಲಿನ ಹಳ್ಳಿಗಳಲ್ಲೂ ಹೇರಳವಾಗಿ ಕಾಣಸಿಗುತ್ತಿದ್ದವು. ಹಳ್ಳಿಯ ಜನರು ಇವುಗಳನ್ನು ಹಿಡಿದುತಂದು ನಗರದ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು” ಎಂಬ ಕಥೆಗಳನ್ನೂ 1960 ರಿಂದ 1990ರ ಬೆಂಗಳೂರಿನ ಜನ ಹೇಳುತ್ತಾರೆ. ಈಗ ಇವುಗಳ ಸಂಖ್ಯೆ ಅತಿ ವಿರಳವಾಗಿದೆ. ಕಾರಣ ಬೃಹದಾಕಾರವಾಗಿ ಬೆಳೆದಿದ್ದ ದೊಡ್ಡ ದೊಡ್ಡ ಮರಗಳನ್ನೆಲ್ಲಾ ನಗರೀಕರಣ ನುಂಗಿ ಹಾಕಿದೆ. ಈ ಮರಗಳ ಮೇಲ್ಛಾವಣಿಯಲ್ಲಿ ಬದುಕಿದ್ದ ಕಾಡುಪಾಪಗಳು ತಮ್ಮ ನೆಲೆ ಕಳೆದುಕೊಂಡು ಪಾದಚಾರಿ ರಸ್ತೆಯಲ್ಲಿ ಸಿಕ್ಕಿವೆ. ಕೆಲವು ಸಲ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತಿರುವ ಸುದ್ದಿಗಳೂ ಇತ್ತೀಚ್ಛೆಗೆ ವರದಿಯಾಗಿವೆ.
ದಕ್ಷಿಣ ಭಾರತ ಮತ್ತು ಶ್ರೀಲಂಕಾದಲ್ಲಿ ಮಾತ್ರ ಕಾಣಸಿಗುವ ಕೋತಿ ಜಾತಿಯ ಕಾಡುಪಾಪ, ಜೀವವಿಕಾಸ ವಾದದಲ್ಲಿ ಬರುವ ಮೊದಲ ಮಾನವರ ಪೂರ್ವಜ! ಕಾಡುಪಾಪಗಳು. ಇದು ಕೋತಿ ಜಾತಿಯಲ್ಲೇ ಅತಿ ಚಿಕ್ಕ ವಾನರ. ಕಾಡುಪಾಪ ರಾತ್ರಿವೇಳೆ ಒಂಟಿಯಾಗಿ ಕಾಣಸಿಗುವ ನಿಶಾಚರಿ. ಸಾಮಾನ್ಯವಾಗಿ ಇವು ಬೇವು, ಅಕೇಶಿಯಾ, ನೀಲಗಿರಿ, ಜಟ್ರೋಪ ಮರಗಳಲ್ಲಿ ಆಶ್ರಯ ಪಡೆದಿರುತ್ತವೆ. ತುಂಬಾ ನಾಚಿಕೆ ಸ್ವಭಾವದ ಈ ಪ್ರಾಣಿ ಮಾನವರನ್ನ ಕಂಡರೆ ಅಡಗಿಕೊಳ್ಳತ್ತವೆ.

ಭಾರತದಲ್ಲಿ ಪಶ್ಚಿಮಘಟ್ಟ ಹಾಗು ಪೂರ್ವಘಟ್ಟಗಳಲ್ಲಿ ಕಾಣಸಿಗುವ ಇದರ ಜೀವನಕ್ರಮದ ಬಗ್ಗೆ ಇನ್ನೂ ನಾವು ತಿಳಿಯಬೇಕಿದೆ. ಇವು ಗಾತ್ರದಲ್ಲಿ ಚಿಕ್ಕವು, ಇದರ ಕೈ-ಕಾಲುಗಳು ಪೆನ್ಸಿಲ್ ನಷ್ಟು ಸಣ್ಣ. ಆರರಿಂದ ಹತ್ತು ಇಂಚು ಉದ್ದವಿರುವ ಈ ಕೋತಿ ಜಾತಿಯ ಜೀವಿಗೆ ಒಂದು ಸೆಂಟಿಮೀಟರ್ ಉದ್ದದ ಬಾಲವಿದೆ!. ತಲೆಯ ಮೇಲೆ ಎದ್ದು ಕಾಣುವ ಬೂದು ಬಣ್ಣದ ದೊಡ್ಡ ಕಣ್ಣುಗಳಿವೆ. ಮುಖದ ಮೇಲಿನ ಉದ್ದ ಮೂಗಿನ ತುದಿ ಹೃದಯಾಕಾರವಾಗಿದೆ. ತಲೆಯ ಮೇಲೆ ಎಂಟಾಣೆ ಗಾತ್ರದ ದುಂಡನೆಯ ಕಿವಿಗಳಿವೆ. ತಿಳಿ ಬೂದು ಕೆಂಪಿನ ಮೈಬಣ್ಣ. ಕೈಕಾಲಿನ ಮೇಲಿನ ರೋಮಗಳು ಚಿಕ್ಕವಾಗಿದ್ದು, ಬೆರಳುಗಳಲ್ಲಿ ಮಾನವರಿಗೆ ಇರುವಂತೆ ಉಗುರುಗಳಿವೆ. ಇದು ಮರದ ಮೇಲೆ ವಾಸಿಸುವ ಪ್ರಾಣಿ. ಇದು ತನ್ನ ಜೀವಿತಾವಧಿಯ ಬಹು ಭಾಗವನ್ನು ಮರದ ಮೇಲೆಯೇ ಕಳೆಯುತ್ತದೆ. ಇದರ ನಡಿಗೆ ಬಹು ನಿಧಾನ. ಆದರೆ ರೆಂಬೆಯಿಂದ ರೆಂಬೆಗೆ ಕರಾರುವಕ್ಕಾಗಿ ನಡೆಯುತ್ತದೆ. ಸಾಮಾನ್ಯವಾಗಿ ಗುಂಪು ಗುಂಪಾಗಿ ಬೇಟೆಯಾಡುತ್ತವೆ. ಜೋಡಿ ಕಾಡುಪಾಪಗಳು ತಮ್ಮ ಆಹಾರವನ್ನು ತಮ್ಮ ಮರಿಗಳೊಂದಿಗೆ ಹಂಚಿಕೊಂಡು ತಿನ್ನುತ್ತವೆ. ಮರದ ಪೊಟರೆಯಲ್ಲಿ “ವಿ” ಆಕಾರದ ಕೊಂಬೆಗಳ ನಡುವೆ ಗುಂಪಾಗಿ ಮಲಗುತ್ತವೆ.
ಸೂರ್ಯೋದಯ ಮತ್ತು ಸೂರ್ಯಾಸ್ತಗಳಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಇವು ಕೊಂಬೆಗಳ ಮೇಲೆ ಆಟವಾಡುತ್ತ ವಿನೋದದಿಂದ ಕಚ್ಚಾಡುತ್ತಾ ತುಂಬಾ ಚಟುವಟಿಕೆಯಿಂದ ಇರುತ್ತವೆ. ಪ್ರತಿ ವರ್ಷ ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಗರ್ಭಧರಿಸುತ್ತವೆ. ಗರ್ಭದಾರಣೆಯಾದ 166-169 ದಿನಕ್ಕೆ ಒಂದು ಅಥವಾ ಎರಡು ಮರಿಗೆ ಜನ್ಮ ನೀಡುತ್ತವೆ. ತಾಯಿ ತನ್ನ ಮರಿಗಳನ್ನು ಕೆಲವು ವಾರದವರೆಗೂ ತನ್ನ ಬಳಿಯೇ ಇಟ್ಟುಕೊಂಡಿರುತ್ತದೆ. ಮರಿಗಳು ತಮ್ಮ ತಾಯಿಯನ್ನು ತಮ್ಮ ಕೈಕಾಲುಗಳಿಂದ ತಬ್ಬಿರುತ್ತವೆ. ಕೆಲವು ವಾರದ ನಂತರ ಮರಿಗಳನ್ನು ಸುರಕ್ಷಿತವಾದ ಕೊಂಬೆಯ ಮೇಲೆ ಕುಳ್ಳಿರಿಸಿ ತಾಯಿ ಬೇಟೆಗೆ ಹೋಗುತ್ತದೆ. ಮರಿಗಳು ಮೊದ ಮೊದಲು ಬಹಳ ನಿಧಾನವಾಗಿ ಚಲಿಸುತ್ತಾ ನಂತರ ಕಾಲ ಕಳೆದಂತೆ ಇವುಗಳ ಚಲನೆ ತೀವ್ರವಾಗುತ್ತದೆ. ಇವು 12-15 ವರ್ಷ ಜೀವಿಸಬಲ್ಲವು.

ಇವು ಕೀಟಹಾರಿ ಜೀವಿ. ಆದರೆ ಕೆಲವು ಬಾರಿ ಚಿಗುರೆಲೆ, ಹೂ, ಕುಡಿಗಳನ್ನೂ ತಿನ್ನುತ್ತವೆ. ಸಾಂದರ್ಭಿಕವಾಗಿ ಮರದ ಮೇಲಿನ ಹಕ್ಕಿಗೂಡುಗಳ ಮೇಲೆ ದಾಳಿ ಮಾಡಿ ಅಲ್ಲಿನ ಮೊಟ್ಟೆ ಮರಿಗಳನ್ನು ನುಂಗಿ ಗುಳುಂ ಮಾಡುತ್ತವೆ. ಅತೀ ಕೆಟ್ಟ ವಾಸನೆ ಬೀರುವ ಕೀಟಗಳನ್ನೂ ಬಿಡದೇ ಭಕ್ಷಿಸುತ್ತವೆ, ಅಲ್ಲದೆ ತಮ್ಮ ಮೂತ್ರದಿಂದ ಕೈಕಾಲು ಮುಖ ತೊಳೆದುಕೊಂಡು ಮೂತ್ರಸ್ನಾನ ಮಾಡುತ್ತವೆ. ಈ ಸ್ವಭಾವ ಅವುಗಳನ್ನು ವಿಷಕಾರಿ ಕೀಟಗಳು ಕಚ್ಚದ ಹಾಗೆ ತಡೆಯಲು ಮಾಡಿಕೊಂಡ ಉಪಾಯವಿರಬಹುದು.
ಆದಿವಾಸಿಗಳು ಕಾಡುಪಾಪದ ದೇಹದಲ್ಲಿ ಔಷಧೀಯ, ಅತಿಮಾನುಷ ಶಕ್ತಿ ಇದೆ ಎಂದು ನಂಬಿದ್ದಾರೆ. ಈ ನಂಬಿಕೆಯೇ ಇವುಗಳ ಸಂತತಿ ಕ್ಷೀಣಿಸಲು ಕಾರಣವಾಗಿದೆ. ಆವಾಸ ನಾಶವೂ ಕೂಡ ಇವುಗಳ ಅವನತಿಗೆ ಇನ್ನೊಂದು ಕಾರಣ.
ನಮ್ಮ ರಾಜ್ಯದಲ್ಲಿ ಇರುವ ಕಾಡುಪಾಪಗಳ ಸಂಖ್ಯೆ ಎಷ್ಟು? ಈ ಪ್ರಶ್ನೆಗೆ ಜೀವ ವಿಜ್ಞಾನಿಗಳ ಬಳಿಯೇ ಉತ್ತರವಿಲ್ಲ! ಇಷ್ಟು ಚಿಕ್ಕ ಗಾತ್ರದ ನಿಶಾಚರಿ ಜೀವಿಯನ್ನು ಹುಡುಕಿ ಗುರುತಿಸಿ ರಾತ್ರಿಯ ಕತ್ತಲೆಯಲ್ಲಿ ನಿಖರವಾಗಿ ಲೆಕ್ಕ ಹಾಕುವುದಾದರೂ ಹೇಗೆ? ಇತ್ತೀಚಿನವರೆಗೂ ಈ ಪುಟಾಣಿ ಜೀವಿಯ ಬಗ್ಗೆ ನಾವು ತಲೆಕೆಡಿಸಿಕೊಂಡಿದ್ದೇ ಕಮ್ಮಿ. ಭಾರತ ಸರ್ಕಾರದ ಸಂರಕ್ಷಿತ ಜೀವಿಗಳ ಪಟ್ಟಿಯಲ್ಲಿ ಕಾಡುಪಾಪ ಇದೆಯಾದರೂ ಈ ಕಾನೂನಿನ ಪರಿಣಾಮ ಮಾತ್ರ ಅಳತೆಗೂ ಸಿಗುತ್ತಿಲ್ಲ.
ಲೇಖನ: ಶಂಕರಪ್ಪ .ಕೆ .ಪಿ
ಬೆಂಗಳೂರು ಜಿಲ್ಲೆ

ಸಹಾಯಕ ಪ್ರಾಧ್ಯಾಪಕರು
ಎಸ್ ಎನ್ ಆರ್ ಪದವಿ ಕಾಲೇಜ್ , ಜಿಗಣಿ , ಬೆಂಗಳೂರು.