ಹೂವಿನ ಮ್ಯಾಜಿಕ್ ಟ್ರಿಕ್!
© AI
ಮರ-ಗಿಡಗಳಿಗೆ ಬುದ್ಧಿ ಇದೆಯೆ?
ಅವುಗಳನ್ನು ಕಡಿದರೂ ಮುರಿದರೂ ರಕ್ಷಿಸಿಕೊಳ್ಳಲು ಆಗದ ಅವುಗಳಿಗೆ ಬುದ್ಧಿ ಇದೆಯೆಂದು ಹೇಳಲು ಹೇಗೆ ಸಾಧ್ಯ? ಸುಮ್ಮನೆ ಒಂದು ಕಡೆ ನಿಂತಿರುತ್ತವೆ. ಬೆಳೆಯುತ್ತವೆ. ನಮಗೆಲ್ಲಾ ಹಣ್ಣು-ಹೂವುಗಳನ್ನು ಕೊಡುತ್ತವೆ. ಒಂದಲ್ಲಾ ಒಂದು ದಿನ ನೆಲಕ್ಕೆ ಉರುಳುತ್ತವೆ. ಅಷ್ಟೇ ತಾನೆ… ಇವೆಲ್ಲಾ ನೋಡಿದರೆ ಇವುಗಳಿಗೆ ಬುದ್ಧಿ ಇರಬಹುದು, ಎಂಬ ಆಲೋಚನೆಯೇ ಬರುವುದಿಲ್ಲ.
ಆದರೇ…
ತಾವೇ ತಿನ್ನಲಾಗದ ಬಣ್ಣ ಬಣ್ಣದ, ಬಲು ರುಚಿಯಾದ ಹಣ್ಣುಗಳನ್ನು ಏಕೆ ಬಿಡುತ್ತವೆ? ಅಥವಾ ಬಣ್ಣ ಬಣ್ಣದ ಸುಂದರ ಸುಗಂಧ ಸೂಸುವ ಹೂಗಳನ್ನು ಏಕೆ ಬಿಡುತ್ತವೆ? ಎಂದಾದರೂ ಇಂತಹ ಪ್ರಶ್ನೆಗಳು ತಲೆಯಲ್ಲಿ ಬಂದಿವೆಯೇ? ಬಂದಿದ್ದರೆ ಸಂತೋಷ. ಬರದವರಿಗೆ, ಇದಕ್ಕೆ ಕಾರಣ ತಿಳಿಯದವರಿಗೆ ಇದು ಅಚ್ಚರಿ ಎನಿಸಬಹುದು. ಮರ-ಗಿಡಗಳು ನಮ್ಮ ಹಾಗೆ ಮಾತನಾಡದಿರಬಹುದು, ಚಲಿಸದಿರಬಹುದು, ಮೊಬೈಲ್ ಫೋನ್, ಚಾಟ್ ಜಿಪಿಟಿ ಬಳಸದಿರಬಹುದು. ಆದರೆ ಅವುಗಳು ಜೀವವಿಕಾಸದಲ್ಲಿ ಕೊನೆಯಲ್ಲಿ ಬಂದ ನಮಗಿಂತಲೇ ಕೋಟ್ಯಂತರ ವರ್ಷಗಳ ಹಿಂದೆ ಕಾಣಿಸಿಕೊಂಡಿವೆ. ಇಲ್ಲಿಯವರೆಗೆ ಅವುಗಳ ಸಂತತಿ ಬೆಳೆಯುತ್ತಾ ಬಂದಿವೆ ಎಂದಾದರೆ ಅವುಗಳ ಬದುಕುವ ಸಾಮರ್ಥ್ಯ ಮತ್ತು ಜಾಣತನ ಎಷ್ಟಿರಬಹುದು ಎಂದು ಒಮ್ಮೆ ಊಹಿಸಿ ನೋಡಿ.

ನಿಜ ಹೇಳುವುದಾದರೆ ನಮಗಿಂತ ಅವುಗಳೇ ಹೆಚ್ಚು ಬುದ್ಧಿ ಜೀವಿಗಳು. ಹೇಗಂತೀರಾ? ನೋಡಿ ಈ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರ ಹುಡುಕುವುದಾದರೆ, ಸಸ್ಯಗಳಿಗೆ ಹಣ್ಣಿನಿಂದ ಅಥವಾ ಅದರ ರುಚಿಯಿಂದ ನೇರವಾಗಿ ಏನೂ ಉಪಯೋಗವಿಲ್ಲ. ಅದಕ್ಕೆ ಬೇಕಾಗಿರುವುದು ಆ ಹಣ್ಣಿನ ಒಳಗೆ ಜೋಪಾನವಾಗಿ ಬಚ್ಚಿಟ್ಟ ಬೀಜದ ಪ್ರಸಾರ. ಮರದ ಬೀಜಗಳು ತನ್ನ ಸುತ್ತಲೇ ಬಿದ್ದು ಮೊಳಕೆಯೊಡೆದರೆ, ಆ ತಾಯಿ ಮರದ ನೆರಳಲ್ಲಿ ಬೆಳಕು ಸಿಗದೆ, ತಾಯಿಯ ವಿಸ್ತಾರವಾಗಿ ಹರಿದ ಬೇರಿನಿಂದ ಈ ಮರಿಗಳಿಗೆ ಪೋಷಕಾಂಶ ಸಿಗದೆ ಬೆಳೆಯಲಾಗುವುದಿಲ್ಲ. ಹಾಗಾಗಿ ಅವುಗಳನ್ನು ದೂರ

ನೋಡಿದಿರಾ, ಹೀಗೇ ಹೂಗಳನ್ನೂ ಬಿಡುವುದು. ಆದರೆ ಇಲ್ಲಿ ನಾವು ಅಥವಾ ಬೇರೆ ಜೀವಿಗಳು ಅವನ್ನು ಸಾಮಾನ್ಯವಾಗಿ ತಿನ್ನುವುದಿಲ್ಲ. ಬದಲಿಗೆ ಅದರಲ್ಲಿರುವ ಮಕರಂದವನ್ನು ಆಹಾರವಾಗಿ ಸೇವಿಸುವ ದುಂಬಿಗಳಂತಹ ಕೀಟಗಳನ್ನು ಆಕರ್ಷಿಸಲು. ವಿವಿಧ ಬಣ್ಣಗಳು ಹಾಗೂ ಸುವಾಸನೆಗಳನ್ನು ಬೀರಿ, ‘ನನ್ನಲ್ಲಿ ಚಂದದ ಜೇನಿದೆ ಬನ್ನಿ’ ಎಂದು ಸುವಾಸನೆ ಮೂಲಕ ಕರೆಯುತ್ತವೆ. ಇದಕ್ಕೆ ಆಕರ್ಷಣೆಗೊಂಡು ಬರುವ ಕೀಟಗಳು ಅಥವಾ ಪ್ರಾಣಿಗಳು, ಬಂದು ತಮಗೆ ತಿಳಿಯದ ಹಾಗೇ ಹೂವಿನಲ್ಲಿನ ಗಂಡು ಹಾಗೂ ಹೆಣ್ಣಿನ ಭಾಗವನ್ನು ಸೇರಿಸಿ, ಪರಾಗಸ್ಪರ್ಶ ಕ್ರಿಯೆಯನ್ನು ಮಾಡಿ ಹೋಗುತ್ತವೆ! ನೋಡಿದಿರಾ ಇವುಗಳ ಜಾಣ್ಮೆಯನ್ನಾ? ಹೀಗೇ ಹೇಳುತ್ತಾ ಹೋದರೆ ಎಷ್ಟೋ ಇವೆ.
ಆದರೆ ಮೊನ್ನೆಯಷ್ಟೇ ನಡೆದ ಒಂದು ಸಂಶೋಧನೆಯಲ್ಲಿ ಹೂವಿನ ಬಳಿ ಬರದೇ ಇರುವ, ಕೇವಲ ಕೀಟಗಳನ್ನು ತಿನ್ನುವ ಕೀಟವೊಂದು ಹೂವಿನ ಬಳಿ ಬಂದು ಏನನ್ನೋ ಹುಡುಕುತ್ತಿತ್ತಂತೆ. ಇದಕ್ಕೆ ಕಾರಣವೇನೆಂದು ಹೇಳಿದರೇ ನೀವೇ ಬಾಯಿ ಮೇಲೆ ಬೆರಳಿಡುವಂತಾಗುತ್ತದೆ ಗೊತ್ತೇನು?
“ಹೌದಲ್ಲವೇ, ತನ್ನ ಆಹಾರವೇ ಸಿಗದ ಗಿಡದ ಬಳಿ ಇದಕ್ಕೇನು ಕೆಲಸ?” ಎಂದು ‘ಕೋ ಮಾಚಿಸುಕಿ’ ಎಂಬ ಸಸ್ಯ ಶಾಸ್ತ್ರಜ್ಞ ಕೂಡಾ ತಲೆ ಕೆಡಿಸಿಕೊಂಡರಂತೆ. ಸ್ವಲ್ಪ ವಿವರವಾಗಿ ಹೇಳುತ್ತೇನೆ ಕೇಳಿ. ಹೀಗೆ ತಮ್ಮ ಜಪಾನ್ ನ ವಿಶ್ವವಿದ್ಯಾಲಯದ ಗಾರ್ಡನಿನಲ್ಲಿ ಹೋಗುವಾಗ ‘ಜಾಪನೀಸ್ ಡಾಗ್ಬೇನ್’ ಎಂದು ಕರೆಯಲ್ಪಡುವ ಗಿಡದ ಹೂವಿನ ಮೇಲೆ ‘ಗ್ರಾಸ್ ಫ್ಲೈಸ್’ ಸುತ್ತಾಡುತ್ತಿದ್ದವಂತೆ. ‘ಅರೆರೇ… ಈ ಗ್ರಾಸ್ ಫ್ಲೈಗಳು ಸತ್ತ ಕೀಟಗಳನ್ನು ತಿನ್ನುವ ಕೀಟಗಳಲ್ಲವೇ, ಇವಕ್ಕೆ ಈ ಸಸ್ಯದ ಹೂವಿನ ಬಳಿ ಏನು ಕೆಲಸ?’ ಎಂದು ಗಮನಿಸಿದ್ದಾರೆ. ನಂತರ ಅವರಿಗೆ ಅನಿಸಿದ್ದು ಇದು-ಈ ಸಸ್ಯದ ಹೂವಿನ ವಾಸನೆಯಲ್ಲಿ ಯಾವುದೋ ಸತ್ತ ಕೀಟದಿಂದ ಬರುವ ವಾಸನೆಯನ್ನು ಹೊರಗೆ ಸೂಸುತ್ತಿರಬೇಕು. ಇಲ್ಲವಾದರೆ ಇವಕ್ಕೆ ಇಲ್ಲಿ ಬೇರೇನು ಕೆಲಸ? ಎಂದು ಯೋಚಿಸಿ. ತಡೀ, ನನ್ನ ಊಹೆಯನ್ನು ಪರೀಕ್ಷಿಸಿಯೇ ಬಿಡೋಣ ಎಂದು ಹೊರಟರು.

ಅದಕ್ಕೆ ಅವರು, ಸಸ್ಯದ ಹೂವಿನಿಂದ ಬರುತ್ತಿದ್ದ ವಾಸನೆಯನ್ನು ಸಂಗ್ರಹಿಸಿ ಪರೀಕ್ಷಿಸಿದರು. ಅವರ ಅಚ್ಚರಿಗೆ ಅದು ಸತ್ತ ಇರುವೆಗಳಿಂದ ಬರುವ ವಾಸನೆಗೆ ಹೋಲಿಕೆಯಾಯ್ತು. ಈ ಗ್ರಾಸ್ ಫ್ಲೈಗಳು ಈ ವಾಸನೆಯ ಕಾರಣವಾಗಿ ಈ ಸಸ್ಯದ ಬಳಿ ಬರುತ್ತಿವೆಯೇ ಎಂದು ಪರೀಕ್ಷಿಸಲು ಸತ್ತ ಇರುವೆಗಳನ್ನು ಒಂದು ಡಬ್ಬದಲ್ಲಿ ಹಾಕಿ ಬಿಟ್ಟರು. ಸ್ವಲ್ಪ ಸಮಯದ ನಂತರ ಈ ಗ್ರಾಸ್ ಫ್ಲೈಗಳು ಅಲ್ಲಿಗೆ ಬಂದವು. ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ; ಆ ಗ್ರಾಸ್ ಫ್ಲೈಗಳು ಆ ಹೂವಿನಿಂದ ಬರುತ್ತಿದ್ದ ಈ ಸತ್ತ ಇರುವೆಗಳ ವಾಸನೆಯನ್ನೇ ಗ್ರಹಿಸಿ ಬಂದು, ಇರುವೆ ಕಾಣದೆ ಹುಡುಕೀ… ಹುಡುಕೀ… ತಮಗೇ ತಿಳಿಯದ ಹಾಗೆ ಆ ಹೂವಿನ ಮೇಲೆ ಓಡಾಡಿ ಸಸ್ಯಗಳಿಗೆ ಬಹು ಮುಖ್ಯವಾಗಿ ಆಗಬೇಕಾದ ಪರಾಗಸ್ಪರ್ಶ ಕ್ರಿಯೆಯನ್ನು ಮಾಡುತ್ತಿವೆ ಎಂದು.
ನೋಡಿದಿರಾ, ನಾವು ಎಣಿಸಿದಷ್ಟೇ ಅಲ್ಲ ಪ್ರಕೃತಿ-ಪರಪಂಚ. ತನಗೆ ಯಾವುದೇ ರೀತಿ ಸಂಬಂಧವಿಲ್ಲದ ಕೀಟವನ್ನು ತನ್ನ ಬಳಿ ಕೇವಲ ಒಂದು ಬಗೆಯ ವಾಸನೆಯಿಂದ ಕರೆಸಿಕೊಂಡು ತನಗೆ ಬೇಕಾದ ಕೆಲಸವನ್ನು ಮಾಡಿಸಿಕೊಳ್ಳುತ್ತಿರುವ ಈ ವಿಧಾನ ಗಮನಿಸಿದರೆ ಇದು ಯಾವುದೇ ಮ್ಯಾಜಿಕ್ ಟ್ರಿಕ್ ಗೆ ಕಮ್ಮಿಯಿಲ್ಲ. ನೋಡಿದಿರಾ ಈ ಹೂವಿನ ಗಿಡದ ಮ್ಯಾಜಿಕ್ ಟ್ರಿಕ್ ಅನ್ನು?
ಹೇಗನ್ನಿಸುತ್ತದೆ?
ಇಷ್ಟೆಲ್ಲಾ ಕಂಡುಹಿಡಿದರೂ ಆ ಗಿಡಕ್ಕೆ ಅಥವಾ ಹೂವಿಗೆ ಆ ವಾಸನೆ ಬಿಟ್ಟರೆ ಈ ಕೀಟ ಬರುತ್ತದೆ ಎಂದು ಯಾರು ಹೇಳಿಕೊಟ್ಟರು? ಇದನ್ನು ಯಾರು, ಹೇಗೆ, ಮೊದಲು ಮಾಡಿದರು? ಇದಿನ್ನೂ ‘ಪ್ರಕೃತಿಯ ನಿಗೂಢತೆ’ಗಳ ಪುಸ್ತಕದ ತೆರೆಯದ ಅಧ್ಯಾಯಗಳು. ಹುಡುಕಿದವರಿಗೆ ಹುಡುಕಿದಷ್ಟು! ಇಂತಹ ಹುಡುಕಾಟದಲ್ಲಿ ಮಜವಿರುತ್ತದೆ. ಅದನ್ನೇ ಸಂಶೋಧನೆ ಎನ್ನುವುದು. ಇದಕ್ಕೆ ಯಾವುದೇ ಡಿಗ್ರಿಗಳು ಬೇಕಿಲ್ಲ. ಗಮನಿಸುವ ಕಣ್ಣುಗಳು, ಆಲಿಸುವ ಕಿವಿಗಳು, ಪ್ರಶ್ನೆ ಮೂಡಿಸುವ ಕುತೂಹಲತೆ ಹಾಗೂ ಅದಕ್ಕೆ ಉತ್ತರ ಹುಡುಕುವ ಆಸಕ್ತಿ, ಹಾತೊರೆಯುವಿಕೆ ಸಾಕು.
ನಿಮ್ಮ ಇಂತಹ ವಿಚಿತ್ರ-ವಿಶೇಷ ಎನಿಸುವ ಅನುಭವಗಳು/ಕತೆಗಳಿದ್ದರೆ ನಮಗೂ ಬರೆದು ತಿಳಿಸಿ…


Source: www.snexplores.org

ಲೇಖನ: ಜೈಕುಮಾರ್ ಆರ್
ಬೆಂಗಳೂರು ಜಿಲ್ಲೆ

ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.