ಪ್ರಕೃತಿ ಬಿಂಬ
ಬೂದಿ ಹೂ ಚಿಟ್ಟೆ © ಡಾ. ಪ್ರಭಾಕರ್ ತೀರ್ಥಹಳ್ಳಿ
ದಕ್ಷಿಣ ಏಷ್ಯಾದ ತೇವಭರಿತ ಪ್ರದೇಶಗಳು, ಕಾಡುಗಳ ಅಂಚುಗಳು ಮತ್ತು ಕೆರೆಗಳ ಹತ್ತಿರ ಕಂಡುಬರುವ ಬೂದಿ ಹೂ ಚಿಟ್ಟೆ Junonia atlites ನಿಂಫಾಲಿಡೆ (Nymphalidae) ಕುಟುಂಬಕ್ಕೆ ಸೇರಿದೆ. ಇದರ ರೆಕ್ಕೆಗಳ ಮುಂಭಾಗವು ತೆಳು ಬೂದು ಬಣ್ಣದಲ್ಲಿದ್ದು, ಕಡುಗಂದು ಬಣ್ಣದ ಅಲೆಗಳಂತಿರುವ ಗೆರೆಗಳನ್ನು ಹೊಂದಿರುತ್ತದೆ, ಹಿಂಭಾಗವು ಇದೇ ಮಾದರಿಯಲ್ಲಿದ್ದು, ಸ್ವಲ್ಪ ತೆಳುವಾಗಿರುತ್ತದೆ. ರೆಕ್ಕೆಗಳ ಮೇಲೆ ಮೃದುವಾದ ಕಣ್ಣಿನಾಕಾರದ ಮಚ್ಚೆಗಳು (eyespots) ಕಂಡುಬರುತ್ತವೆ. ಈ ಚಿಟ್ಟೆ ನೆಲದ ಹತ್ತಿರ ಜಾರುವ ರೀತಿ ಹಾರಾಡುತ್ತದೆ ಮತ್ತು ಬಹುಮಟ್ಟಿಗೆ ರೆಕ್ಕೆಗಳನ್ನು ತೆರೆದು ಬಿಸಿಲಿನಲ್ಲಿ ಕೂತು ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ. ಇದರ ಲಾರ್ವಾಗಳು ಅಕಾಂಥೇಸಿ (Acanthaceae) ಕುಟುಂಬದ ಸಸ್ಯಗಳಾದ ಕೊಳವಳಿಕೆ ಗಿಡ Hygrophila auriculata ಮತ್ತು ಮುಳ್ಳು ಗೋರಂಟಿ (Barleria) ಜಾತಿಯ ಸಸ್ಯಗಳ ಮೇಲೆ ಅವಲಂಬಿತವಾಗಿರುತ್ತವೆ.

ನೇಪಾಳ, ಭಾರತ ಮತ್ತು ಶ್ರೀಲಂಕಾದ ಸಮತಟ್ಟು ಪ್ರದೇಶ, ಎಲೆ ಉದುರುವ ಕಾಡು, ಕುರುಚಲು ಕಾಡು, ಮತ್ತು ನಿತ್ಯ ಹರಿದ್ವರ್ಣ ಕಾಡುಗಳಿಗೆ ಸ್ಥಳೀಯವಾಗಿರುವ ಅಶೋಕ ಚಿಟ್ಟೆಯು ಪ್ಯಾಪಿಲಿಯೊನಿಡೆ (Papilionidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಗ್ರಾಫಿಯಂ ಅಗಮೆಮ್ನಾನ್ (Graphium agamemnon) ಎಂದು ಕರೆಯಲಾಗುತ್ತದೆ. ಮೇಲಿನ ಮತ್ತು ಕೆಳಗಿನ ರೆಕ್ಕೆಗಳ ಬಣ್ಣ ಕಪ್ಪಾಗಿದ್ದು, ರೆಕ್ಕೆಗಳ ಮೇಲೆ ಉದ್ದವಾದ ನಾಲ್ಕು ಸಾಲು ಹಸಿರು ಮಚ್ಚೆಗಳಿರುತ್ತವೆ ಹಾಗೂ ಕೆಳಗಿನ ರೆಕ್ಕೆಗಳಲ್ಲಿ ಬಾಲವಿರುತ್ತದೆ. ಅತ್ಯಂತ ವೇಗವಾಗಿ ಹಾರಾಡುತ್ತಿರುತ್ತವೆ ಮತ್ತು ತೇವಾಂಶವಿರುವ ಮಣ್ಣಿನ ಮೇಲೆ ಕುಳಿತು ಖನಿಜಗಳನ್ನು ಹೀರಿಕೊಳ್ಳುತ್ತವೆ. ಕಂಬದ ಮರ (False Ashoka) ಇದರ ಅತಿಥೇಯ ಸಸ್ಯವಾಗಿದೆ.

ದಕ್ಷಿಣ ಏಷ್ಯಾ ಖಂಡದ ಸಮತಟ್ಟು ಪ್ರದೇಶ, ಕುರುಚಲು ಕಾಡುಗಳು, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುವ ಹುಲ್ಲು ಚಿಟ್ಟೆಯು ಲೈಕೇನಿಡೆ (Lycaenidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಜಿಜಿನಾ ಓಟೀಸ್ (Zizina otis) ಎಂದು ಕರೆಯಲಾಗುತ್ತದೆ. ರೆಕ್ಕೆಗಳ ಮುಂಭಾಗವು ನೇರಳೆ ಮಿಶ್ರಿತ ನೀಲಿ ಬಣ್ಣವಿದ್ದು, ಕಡುಗಂದು ಬಣ್ಣದ ಅಂಚನ್ನು ಹೊಂದಿದೆ. ಹಿಂಭಾಗವು ಕಂದು ಬಣ್ಣದಲ್ಲಿದ್ದು, ಬಿಳಿ ವರ್ತುಲವುಳ್ಳ ಕಪ್ಪು ಚುಕ್ಕೆಗಳನ್ನು ಹೊಂದಿರುತ್ತದೆ. ಕೆಳಗಿನ ರೆಕ್ಕೆಯ ಹಿಂಭಾಗದ ಬಣ್ಣವು ತೆಳುವಾಗಿದ್ದು, ಚುಕ್ಕೆಗಳು ಚಿಕ್ಕದಾಗಿರುತ್ತದೆ. ಚಿಕ್ಕ ಗಿಡಗಳ ಹೂಗಳಿಂದ ಮಕರಂದವನ್ನು ಹೀರುತ್ತದೆ. ಬೆಳಗಿನ ಜಾವದ ಬಿಸಿಲನ್ನು ಕಾಯುತ್ತದೆ ಮತ್ತು ಉಳಿದ ಸಮಯದಲ್ಲಿ ನೆರಳಿನಲ್ಲಿರುತ್ತದೆ. ಅಮರಂತೇಸಿ (Amaranthaceae) ಕುಟುಂಬದ ಹರಿವೆ ಸೊಪ್ಪು, (Fabaceae) ಫ್ಯಾಬೇಸಿ ಕುಟುಂಬದ ಕಾಡು ಮೆಂತೆ ಜಾತಿಗೆ ಸೇರಿದ ವಿವಿಧ ಸಸ್ಯಗಳು, ಜೈಗೋಫಿಲೇಸಿ (Zygophyllaceae) ಕುಟುಂಬದ ನೆಗ್ಗಿನ ಮುಳ್ಳಿನ ಗಿಡ ಇವುಗಳ ಅತಿಥೇಯ ಸಸ್ಯಗಳಾಗಿವೆ.

ಏಷ್ಯಾ ಖಂಡದ ಹೆಚ್ಚಿನ ಮಳೆಯಾಗುವ ಮತ್ತು ಕಡಿಮೆ ಎತ್ತರದಲ್ಲಿರುವ ದಟ್ಟವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುವ ಕಿತ್ತಳೆ ಬಾಲ ಚಿಟ್ಟೆಯು ಲೈಕೇನಿಡೆ (Lycaenidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಲೋಕ್ಸುರಾ ಅಟಿಮ್ನಸ್ (Loxura atymnus) ಎಂದು ಕರೆಯಲಾಗುತ್ತದೆ. ರೆಕ್ಕೆಗಳು ಕಿತ್ತಳೆ ಬಣ್ಣದಿಂದ ಕೂಡಿದ್ದು, ಕೆಳಗಿನ ರೆಕ್ಕೆಗಳಲ್ಲಿ ಉದ್ದವಾದ ಬಾಲವಿರುತ್ತದೆ. ಚಿಕ್ಕ ಗಿಡಗಳ ಬಳಿ ಮಂದಗತಿಯಲ್ಲಿ ಹಾರಾಡುತ್ತಾ, ಕಾಡುಗಳ ರಸ್ತೆಯ ಬದಿಯಲ್ಲಿ ಕುಳಿತಿರುತ್ತದೆ. ಡಯೋಸ್ಕೋರಿಯಾಸಿ (Dioscoreaceae) ಕುಟುಂಬದ ಕಾಡುಗುಂಬಳ, ಸ್ಮಿಲಾಕೇಸಿ (Smilacaceae) ಕುಟುಂಬದ ಕಾಡುಹಂಬು ಗಿಡಗಳು ಇವುಗಳ ಅತಿಥೇಯ ಸಸ್ಯಗಳಾಗಿವೆ.
ಚಿತ್ರ : ಡಾ. ಪ್ರಭಾಕರ್ ತೀರ್ಥಹಳ್ಳಿ
ಲೇಖನ: ದೀಪ್ತಿ ಎನ್.
