ಕಣಜಗಳ ಅದ್ಭುತ ಲೋಕ

© ಸಿದ್ಧರಾಮ ಕೂಡ್ಲಿಗಿ
ಇತ್ತೀಚೆಗೆ ಒಂದು ಬೆಳಿಗ್ಗೆ ಮನೆಯಾಕೆ “ಮಾವಿನ ಗಿಡದಾಗ ಹೂ ಬಿಟ್ಟೈತಿ ನೋಡೀರೇನು ” ಎಂದು ಕೇಳಿದಳು. “ನಿನ್ನೇನ ನೋಡೀನಿ” ಅಂದು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಮನೆಯ ಮಾಳಿಗೆಯ ಮೇಲೆ ಹೋದೆ. ಮಾಳಿಗೆಯಲ್ಲಿ ಸೋಲಾರ್ ನೀರಿನ ಟ್ಯಾಂಕ್ ನ್ನು ಅಳವಡಿಸಲಾಗಿದೆ. ಆಕಸ್ಮಾತ್ ಆಗಿ ಟ್ಯಾಂಕಿನ ಕೆಳಭಾಗದಲ್ಲಿ ಏನೋ ಅಂಟಿಕೊಂಡಿರುವುದು ಕಾಣಿಸಿತು. ಕುತೂಹಲದಿಂದ ಕೆಳಗೆ ಬಗ್ಗಿ ನೋಡಿದರೆ ಅದೊಂದು ಕಣಜಗಳ ಗೂಡು. ಅರೆರೆರೆರೆರೆ… ಎಂದುಕೊಂಡು ಸೂಕ್ಷ್ಮವಾಗಿ ನೋಡಿದರೆ ಅದೊಂದು ಸುಂದರವಾದ ಗೂಡು.
ಬೇಗನೇ ಕೆಳಗೆ ಹೋಗಿ ಕ್ಯಾಮೆರಾ ತೆಗೆದುಕೊಂಡು ಹೋಗಬೇಕೆಂದುಕೊಂಡವನಿಗೆ ಕ್ಯಾಮೆರಾದಿಂದ ಸಮೀಪ ಸ್ಪಷ್ಟ ಚಿತ್ರಗಳು ಸಿಗಲಾರವು ಎಂದುಕೊಂಡು ನನ್ನ ಮೊಬೈಲ್ ತೆಗೆದುಕೊಂಡು ಹೋದೆ. ಪೂರ್ತಿಯಾಗಿ ಟ್ಯಾಂಕ್ ನ ಕೆಳಗೆ ಕುಳಿತುಕೊಂಡೆ. ಯಾಕೆಂದರೆ ಕೆಳಗೆ ಕುಳಿತುಕೊಳ್ಳಲಾರದೆ ಚಿತ್ರಗಳನ್ನು ಕ್ಲಿಕ್ ಮಾಡುವುದು ಅಸಾಧ್ಯವಾಗಿತ್ತು. ಚಕ್ಕಳಬಕ್ಕಳ ಹಾಕಿದವನೇ ಮೊಬೈಲ್ ನಿಂದ ಕ್ಲಿಕ್ ಮಾಡತೊಡಗಿದೆ. ನನ್ನ ಕೈಬಳಿಯೇ ಕಣಜಗಳು ಹಾರಾಡುತ್ತಿದ್ದವು. ಅವುಗಳಿಗೆ ತೊಂದರೆ ಮಾಡದೇ ಅವುಗಳೇನು ಮಾಡಲಾರವು ಎಂದು ನನಗೆ ಗೊತ್ತಿತ್ತು. ಕಣಜಗಳ ಮುಳ್ಳಿನ ಕುಟುಕುವಿಕೆಯೂ ಅಪಾಯಕಾರಿಯೆ. ಆದರೂ ಸಮೀಪದಿಂದಲೇ ಕ್ಲಿಕ್ಕಿಸತೊಡಗಿದೆ.

ಅದೊಂದು ದೊಡ್ಡ ಲೋಕವೇ ಸರಿ. ಬೆಳ್ಳನೆಯ ಪುಟ್ಟ ಷಟ್ಕೋನಾಕೃತಿಯ ಗೂಡುಗಳಲ್ಲಿ ಮೊಟ್ಟೆಗಳು, ಮರಿಗಳಿದ್ದವು. ಅವುಗಳಲ್ಲಿ ಕೆಲವಕ್ಕೆ ಮುಚ್ಚಳಗಳಿದ್ದರೆ, ಕೆಲವಕ್ಕೆ ಇರಲಿಲ್ಲ. ಮರಿಗಳಾಗಿದ್ದವುಗಳನ್ನು ಕಣಜಗಳು ಹೊರತಂದು, ಹೊರಪ್ರಪಂಚವನ್ನು ಪರಿಚಯಿಸುತ್ತಿದ್ದವು. ಕೆಲವು ಕಣಜಗಳು ಗೂಡಿನಲ್ಲಿರುವ ಮೊಟ್ಟೆ ಮರಿಗಳಿಗೆ ಸಮವಾದ ಉಷ್ಣತೆ ದೊರೆಯುವಂತೆ ತಮ್ಮ ರೆಕ್ಕೆಗಳಿಂದ ಗಾಳಿ ಬೀಸುತ್ತಿದ್ದವು. ಕೆಲವು ಒಳಗೆ ಹೋಗಿ ಮೊಟ್ಟೆ, ಮರಿಗಳ ಸುರಕ್ಷತೆಯನ್ನು ಗಮನಿಸುತ್ತಿದ್ದವು. ಎರಡು ಕಣಜಗಳು ಅಕ್ಷರಶ: ಮೊಟ್ಟೆಯೊಂದನ್ನು ಬಾಯಲ್ಲಿ ಕಚ್ಚಿ ಎಲ್ಲಿಗೋ ಸಾಗಿಸುತ್ತಿದ್ದವು. ಎರಡು ಕಣಜಗಳು ಗೂಡಿನ ಮೇಲ್ಭಾಗದಲ್ಲಿಯೇ ಕುಳಿತು ಇಡೀ ಗೂಡನ್ನು ಅವಲೋಕಿಸುತ್ತಿದ್ದವು. ನಾನು ಎಲ್ಲವನ್ನೂ ಕ್ಲಿಕ್ ಮಾಡುತ್ತಲೇ ಇದ್ದೆ.


ಅಷ್ಟರಲ್ಲಿ ನಿಧಾನವಾಗಿ ಮೊಬೈಲ್ ನ್ನು ತಿರುಗಿಸಿ ಗಮನಿಸಿದೆ. ಎರಡು ಕಣಜಗಳ ತಲೆಗಳ ದೊಡ್ಡ ಕಣ್ಣುಗಳು ನನ್ನನ್ನೇ ದಿಟ್ಟಿಸಿ ನೋಡುತ್ತಿರುವುದನ್ನು ನೋಡಿ ಗಾಬರಿಗೊಂಡೆ. ಅವು ನನ್ನತ್ತಲೇ ತಲೆ ತಿರುಗಿಸಿ ನೋಡುತ್ತಿದ್ದವು. ಮೆಲ್ಲನೆ ಆಚೀಚೆ ನೋಡಿ ಕ್ಲಿಕ್ ಮಾಡಿದೆ. ಅವುಗಳೇನೂ ತೊಂದರೆ ಕೊಡಲಿಲ್ಲ. ಯಾಕೆಂದರೆ ನಾನು ಅವುಗಳಿಗೆ ತೊಂದರೆಯಾಗಲಾರದಂತೆಯೇ ಕ್ಲಿಕ್ಕಿಸುತ್ತಿದ್ದೆ.
ಕಣಜಗಳು ಕೀಟ ಜಾತಿಗಳಲ್ಲಿಯೇ ವಿಶೇಷವಾದವುಗಳು. ದೊಡ್ಡ ತಲೆ, ದೊಡ್ಡ ಕಣ್ಣು, ತೆಳ್ಳನೆಯ ಸೊಂಟದ ಸ್ವಲ್ಪ ಹಿಂದಿರುವ ಹೊಟ್ಟೆಯ ದುಂಡನೆಯ ಭಾಗದಿಂದ ಕಣಜಗಳನ್ನು ಸುಲಭವಾಗಿ ಗುರುತಿಸಬಹುದು. ಬಹುತೇಕ ಕಣಜಗಳ ಪ್ರಭೇದಗಳು ಏಷ್ಯಾದ ಉಷ್ಣವಲಯಗಳಲ್ಲಿ ಕಾಣಿಸುತ್ತವೆ. ಆದರೆ ಯೂರೋಪಿಯನ್ ಕಣಜವು ಯೂರೋಪ್, ರಷ್ಯಾ, ಉತ್ತರ ಅಮೇರಿಕಾ ಮತ್ತು ಈಶಾನ್ಯ ಏಷ್ಯಾದಾದ್ಯಂತ ವ್ಯಾಪಕವಾಗಿ ಹರಡಿದೆ.
ಇತರ ಸಂಘಜೀವಿ ಕೀಟಗಳಂತೆ, ಕಣಜಗಳು ಕಾಗದದಂಥ ಮೆದು ಪದಾರ್ಥವನ್ನು ಮಾಡಲು ಕಟ್ಟಿಗೆಯನ್ನು ಅಗಿದು ಗೂಡುಗಳನ್ನು ಕಟ್ಟುತ್ತವೆ. ಪ್ರತಿ ಗೂಡು ಒಂದು ರಾಣಿಕಣಜವನ್ನು ಹೊಂದಿರುತ್ತದೆ. ರಾಣಿಕಣಜವು ಮೊಟ್ಟೆಗಳನ್ನು ಇಡುತ್ತದೆ ಮತ್ತು ಇದನ್ನು ಕೆಲಸಗಾರ್ತಿ ಕಣಜಗಳು ಶುಶ್ರೂಷೆ ಮಾಡುತ್ತವೆ. ಕೆಲಸಗಾರ್ತಿ ಕಣಜಗಳು ಆನುವಂಶಿಕವಾಗಿ ಹೆಣ್ಣಾದರೂ ಫಲವತ್ತಾದ ಮೊಟ್ಟೆಗಳನ್ನು ಇಡಲಾರವು. ಬಹುತೇಕ ಪ್ರಜಾತಿಗಳು ಮರಗಳು ಮತ್ತು ಪೊದೆಗಳಲ್ಲಿ ಕಾಣುವಂಥ ಗೂಡುಗಳನ್ನು ಕಟ್ಟುತ್ತವೆ, ಆದರೆ ಕೆಲವು ತಮ್ಮ ಗೂಡುಗಳನ್ನು ನೆಲದ ಕೆಳಗೆ ಅಥವಾ ಇತರ ಕುಳಿಗಳಲ್ಲಿ ಕಟ್ಟುತ್ತವೆ. ಕೆಲವು ಕಣಜಗಳು ಮಡಕೆಯಾಕಾರದಲ್ಲಿ ಮಣ್ಣಿನಿಂದ ಗೂಡನ್ನು ಕಟ್ಟುತ್ತವೆ.
ಮುಖ್ಯವಾಗಿ ಬೆಳೆಗಳಿಗೆ ಹಾನಿಯನ್ನುಂಟುಮಾಡುವ ಕೀಟಗಳನ್ನು ಈ ಕಣಜಗಳು ಭಕ್ಷಿಸುವುದರಿಂದಾಗಿ ಇವು ರೈತನ ಮಿತ್ರವೂ ಆಗಿವೆ. ಇವುಗಳು ವಿಶೇಷವಾದ ರಾಸಾಯನಿಕ ದ್ರವವನ್ನು ಸ್ರವಿಸುವುದರಿಂದ ಪಕ್ಷಿಗಳಾಗಲಿ, ಇತರೆ ಜೀವಿಗಳಾಗಲಿ ಇವುಗಳನ್ನು ತಿನ್ನುವುದು ವಿರಳ.
ಒಟ್ಟಾರೆ ಒಂದು ಕೀಟದ ಅದ್ಭುತ ಲೋಕವನ್ನು ಸಮೀಪದಿಂದ ಕಣ್ಣಾರೆ ನೋಡುವ ಅವಕಾಶ ಇವತ್ತು ಒದಗಿಬಂದದ್ದು ನನ್ನ ಭಾಗ್ಯವೇ ಸರಿ ಎಂದು ನಾನು ಅಲ್ಲಿಂದ ಹೊರಬಂದೆ.




ಲೇಖನ: ಸಿದ್ಧರಾಮ ಕೂಡ್ಲಿಗಿ
ವಿಜಯನಗರ ಜಿಲ್ಲೆ