ಪ್ರಕೃತಿ ಬಿಂಬ
© ಹಯಾತ್ ಮೊಹಮ್ಮದ್, ಕೆಂಪು ನಾಮ ಕೋಳಿ
ಜೌಗು ಪ್ರದೇಶದಲ್ಲಿರುವ ಆಕರ್ಷಕವಾದ ಸುಂದರ ಪಕ್ಷಿ ಇದಾಗಿದ್ದು, ಕೋಳಿಯ ಗಾತ್ರದಲ್ಲಿ ಹೊಳೆಯುವ ನೇರಳೆ ಬಣ್ಣದೊಂದಿಗೆ ಬೋಳು ತಲೆಯ ಮೇಲೆ ಕೆಂಪು ನಾಮ ಧರಿಸಿದಂತೆ ಕಾಣುವ ಇದುವೇ ಕೆಂಪು ನಾಮ ಕೋಳಿ ಪರ್ಪಲ್ ಮೂರ್ಹೆನ್. ಇವುಗಳಲ್ಲಿ ಗಂಡು ಹೊಳೆಯುವ ನೇರಳೆ ಬಣ್ಣ ಮತ್ತು ಹೆಣ್ಣು ಬೂದು ನೇರಳೆ ಬಣ್ಣದಲ್ಲಿರುತ್ತವೆ. ಹೆಣ್ಣು ಪಕ್ಷಿ, ಗಂಡು ಪಕ್ಷಿಗಳಿಗಿಂತ ಸ್ವಲ್ಪ ದಪ್ಪದಾಗಿರುತ್ತದೆ. ಹೆಚ್ಚಾಗಿ ನಾಮ ಕೋಳಿಗಳು ಕೀಟಗಳು, ಜೀರುಂಡೆಗಳಂತಹವುದನ್ನು ತಿನ್ನುವುದಲ್ಲದೆ ಆಗಾಗ ಭತ್ತದ ಬೆಳೆಗಳ ಮೇಲೂ ದಾಳಿ ಮಾಡುತ್ತವೆ. ಇವುಗಳ ಸಂತಾನೋತ್ಪತ್ತಿಯ ಸಮಯ ಜೂನ್ ನಿಂದ ಸೆಪ್ಟೆಂಬರ್ ವರೆಗೆ ಗೂಡುಕಟ್ಟಿ ಮಸುಕಾದ ಹಳದಿ ಬಣ್ಣದಿಂದ ಕೆಂಪು-ಕಂದು ಬಣ್ಣದಿಂದ ಕೂಡಿರುವಂತಹ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.
©ಹಯಾತ್ ಮೊಹಮ್ಮದ್, ಪೆಲಿಕನ್
ಪೆಲಿಕನ್ ಗಳು ದೊಡ್ಡ ನೀರಿನ ಪಕ್ಷಿಗಳ ಕುಲಕ್ಕೆ ಸೇರಿರುತ್ತವೆ. ಉದ್ದನೆಯ ಕೊಕ್ಕು ಹಾಗೂ ದೊಡ್ಡ ಗಂಟಲಿನ ಚೀಲದಿಂದ ಅವು ಬೇಟೆಯನ್ನು ಹಿಡಿದಿಟ್ಟುಕೊಳ್ಳಲು ತುಂಬಾ ಉಪಯುಕ್ತವಾಗಿದೆ. ಅಂಟಾರ್ಟಿಕವನ್ನು ಹೊರತುಪಡಿಸಿ ಎಲ್ಲಾ ಖಂಡಗಳಲ್ಲಿ ಈ ಪೆಲಿಕನ್ ಗಳು ಕಂಡುಬರುತ್ತವೆ. ಹೆಚ್ಚಾಗಿ ಬೆಚ್ಚಗಿನ ಪ್ರದೇಶಗಳಲ್ಲಿ ಈ ಹಕ್ಕಿಗಳು ವಾಸಿಸುತ್ತವೆ. ಇವುಗಳ ಜೀವಿತಾವಧಿಯು ಇಪ್ಪತ್ತರಿಂದ ಇಪ್ಪತೈದು ವರ್ಷ. ವಯಸ್ಕ ಪಕ್ಷಿಗೆ ರೆಕ್ಕೆಯ ಒಂದು ತುದಿಯಿಂದ ಇನ್ನೊಂದು ಸರಿ ಸುಮಾರು ಎರಡರಿಂದ ಮೂರು ಮೀಟರ್ ಅಂತರವಿರುತ್ತದೆ. ಪಕ್ಷಿ ತಜ್ಞರ ಗಣತಿಯ ಪ್ರಕಾರ ಈಗ ಎಂಟು ಬಗೆಗಿನ ಪೆಲಿಕನ್ ಗಳು ಬದುಕುಳಿದಿವೆ.
©ಹಯಾತ್ ಮೊಹಮ್ಮದ್, ಬ್ರಾಹ್ಮಿನಿ ಡಕ್
ನಲ್ಸರೋವರ್ ಸರೋವರವು ಮಧ್ಯ ಗುಜರಾತ್ ಮತ್ತು ಪೂರ್ವ ಸೌರಾಷ್ಟ್ರಗಳ ನಡುವೆ ಅತ್ಯಂತ ತಗ್ಗು ಪ್ರದೇಶದಲ್ಲಿದೆ. ಹಲವಾರು ಪಕ್ಷಿಗಳು ಸಂತಾನೋತ್ಪತ್ತಿಯ ಸಮಯದಲ್ಲಿ ಸಾವಿರಾರು ಕಿಲೋಮೀಟರ್ ಗಳನ್ನು ಹಾರಿ ನಲ್ಸರೋವರ್ ಸರೋವರವನ್ನು ಸೇರುತ್ತವೆ. ಆ ವಲಸೆ ಬರುವ ಪಕ್ಷಿಗಳಲ್ಲಿ ಬ್ರಾಹ್ಮಿನಿ ಡಕ್ ಗಳು ಕೂಡ ಸೇರಿವೆ. ರಡ್ಡಿ ಶೆಲ್ಡಕ್ ಗಳನ್ನು ಭಾರತದಲ್ಲಿ ಬ್ರಾಹ್ಮಿನಿ ಬಾತುಕೋಳಿಗಳೆಂದು ಕರೆಯಲಾಗುತ್ತಿದೆ. ಇವುಗಳ ಜೊತೆಗೆ ವಲಸೆ ಬರುವ ಇನ್ನೂ, 200 ವಿವಿಧ ಪ್ರಭೇದದ ಪಕ್ಷಿಗಳು ಚಳಿಗಾಲದಲ್ಲಿ ಪಕ್ಷಿ ವೀಕ್ಷಕರಿಗೆ ಸ್ವರ್ಗವೇ ಭಾಸವಾಗುವಂತೆ ಮಾಡುತ್ತವೆ. ಬ್ರಾಹ್ಮಿನಿ ಡಕ್ ಗಳು ಸುಮಾರು 8 ಮೊಟ್ಟೆಗಳನ್ನಿಟ್ಟು 4 ವಾರಗಳಲ್ಲಿ ಮರಿಮಾಡುತ್ತವೆ. ಆ ಮರಿಗಳನ್ನು ಗಂಡು ಹಾಗೂ ಹೆಣ್ಣು ಪಕ್ಷಿಗಳೆರಡೂ ಸೇರಿ ಪೋಷಿಸುತ್ತವೆ. ಹುಟ್ಟಿದ ಮರಿಗಳು 8 ವಾರಗಳಲ್ಲಿ ಹಾರುವ ಸಾಮರ್ಥ್ಯವಿರುವಷ್ಟು ರೆಕ್ಕೆಗಳನ್ನು ಬೆಳೆಸಿಕೊಳ್ಳುತ್ತವೆ.
©ಹಯಾತ್ ಮೊಹಮ್ಮದ್, ಕಪ್ಪು ಕತ್ತಿನ ಕೊಕ್ಕರೆ
ಇದೊಂದು ವ್ಯಾಪಕವಾಗಿ ಬೇಟೆಯಾಡುವ ಪಕ್ಷಿಯಾಗಿದ್ದು ಭಾರತ ಹಾಗೂ ಏಷ್ಯಾದ ಕೆಲ ಭಾಗಗಳಲ್ಲಿ ನೆಲೆಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ. ಕಪ್ಪು ಕತ್ತಿನ ಕೊಕ್ಕರೆ ದೊಡ್ಡ ಪಕ್ಷಿಯಾಗಿದ್ದು ಕೊಳದ ಬಕದಂತೆ ತನ್ನ ಕತ್ತನ್ನು ಹಿಂತೆಗೆದುಕೊಳ್ಳದೆ ಚಾಚಿಕೊಂಡು ಹಾರಾಡುತ್ತದೆ. ಇವುಗಳು ಎತ್ತರದ ಮರಗಳಲ್ಲಿ ನಾಲ್ಕು ಮೊಟ್ಟೆಗಳನ್ನಿಟ್ಟು ಮರಿ ಮಾಡುವಷ್ಟು ದೊಡ್ಡ ಗೂಡನ್ನು ನಿರ್ಮಿಸಿ ಸೆಪ್ಟೆಂಬರ್ ನಿಂದ ಜನವರಿಯವರೆಗಿನ ತಮ್ಮ ಸಂತಾನೋತ್ಪತ್ತಿ ಸಮಯದಲ್ಲಿ ಒಂದು ತಿಂಗಳ ಕಾಲ ಕಾವುಕೊಟ್ಟು ಮರಿಮಾಡುತ್ತವೆ. ಇವು ಮಾಂಸಾಹಾರಿ ಪಕ್ಷಿಯಾಗಿರುವುದರಿಂದ ಏಡಿ, ಮೀನು, ಉಭಯವಾಸಿ, ಸಣ್ಣ ಸರೀಸೃಪ, ಜಲಚರ ಕಶೇರುಕ ಹಾಗೂ ಕಪ್ಪೆಗಳನ್ನು ಆಹಾರವನ್ನಾಗಿ ತಿನ್ನುತ್ತವೆ. ಅತಿಯಾದ ಮೀನುಗಾರಿಕೆ, ಮಾಲಿನ್ಯ, ವಿದ್ಯುತ್ ತಂತಿ ಸ್ಪರ್ಶ ಮತ್ತು ಬೇಟೆಯಾಡುವಿಕೆಯಿಂದ ಇವುಗಳ ಸಂಖ್ಯೆ ಕ್ಷೀಣಿಸುತ್ತಿದ್ದು. ಅಳಿವಿನಂಚಿನಲ್ಲಿರುವ ಪಕ್ಷಿಗಳಲ್ಲಿ ಇದು ಒಂದಾಗಿದೆ.
ಚಿತ್ರಗಳು:ಹಯಾತ್ ಮೊಹಮ್ಮದ್
ವಿವರಣೆ: ಧನರಾಜ್ ಎಂ
ಹಯಾತ್ ಮೊಹಮ್ಮದ್ ರವರು ಒಬ್ಬ ಐಟಿ ಉದ್ಯೋಗಿ . ಪ್ರಕೃತಿಯ ನಡುವೆ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾ, ಪ್ರಕೃತಿಯನ್ನೇ ತಮ್ಮ ವಿವೇಕವನ್ನು ವೃದ್ಧಿಸಿಕೊಳ್ಳುವ ಸಾಧನವನ್ನಾಗಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಳೆಯುತ್ತಿರುವ ಈ ಮಹಾನಗರಿಯ ಉದ್ಯಾನಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕಾಣಸಿಕ್ಕ ಚಿಟ್ಟೆಗಳು ಮತ್ತು ಕೀಟಗಳು ಇವರ ಆಸಕ್ತಿಯನ್ನು ಕೆರಳಿಸಿದವು. ಇವರು ಮ್ಯಾಕ್ರೋ ಫೋಟೋಗ್ರಫಿ ವಿಧಾನವನ್ನ ಬಳಸಿ ಕೀಟ ಲೋಕದ ವಿಸ್ಮಯಗಳನ್ನು ಸೆರೆಹಿಡಿದು ಮಾನವ ಜಗತ್ತಿಗೆ ತೋರಿಸುತ್ತಿದ್ದಾರೆ.