ಈ ಕೆರೆ ನಮ್ಮದು
© WCG
ನೀರು ಪ್ರತಿ ಜೀವಿಯ ಮೂಲ ವಸ್ತು. ಈ ನೀರಿನ ಮೂಲ ಮಳೆ. ಬಿದ್ದ ಮಳೆಯ ನೀರು ನದಿ, ಸರೋವರ ಹಾಗೂ ಕೆರೆಗಳಲ್ಲಿ ಸಂಗ್ರಹಣೆಯಾಗುತ್ತದೆ. ಜನಸಂಖ್ಯೆ ಬೆಳೆದಂತೆಲ್ಲಾ ಮಾನವನ ಚಟುವಟಿಕೆಗಳಿಂದ ಕೆರೆಗಳು ಬತ್ತುತ್ತಾ.. ನದಿಗಳು ಕಲುಷಿತವಾಗಿ ಕಣ್ಮರೆಯಾಗುವ ಹಾದಿ ಹಿಡಿದಿವೆ. ನಗರಗಳಲ್ಲಿ ಕೆರೆಗಳ ಸಮಾಧಿಯ ಮೇಲೆ ಬೇಕಾದಷ್ಟು ಬಹುಮಹಡಿ ಕಟ್ಟಡಗಳು ನಿಂತು ಹಳೆಯದಾಗಿವೆ ಹಾಗೂ ನಿತ್ಯ ನಿರ್ಮಾಣವಾಗುತ್ತಲೇ ಇವೆ. ಸರ್ಕಾರದಿಂದ ರಚಿತವಾಗಿರುವ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳು, ನಗರದಲ್ಲಿ ಅಳಿದುಳಿದುಕೊಂಡಿರುವ ಕೆರೆಗಳು ಅಲ್ಪಸ್ವಲ್ಪ ನಿರಾಳತೆ ಹಾಗೂ ಹೊಸ ರೂಪವನ್ನು ಕೊಟ್ಟಿದೆ. ಆದರೆ ನಮ್ಮೆಲ್ಲರಿಗೂ ತಿಳಿದಂತೆ ಬಹುಪಾಲು ಕೆರೆಗಳು ಸ್ವಚ್ಛವಾಗಿರದೆ ಇಡೀ ನಗರದಲ್ಲಿನ ತ್ಯಾಜ್ಯವನ್ನು ಸಂಗ್ರಹಿಸಿಕೊಳ್ಳುವ ತೊಟ್ಟಿಯಾಗಿ ರೂಪಾಂತರಗೊಂಡುಬಿಟ್ಟಿವೆ. ವಿಸ್ತಾರಗೊಳ್ಳುತ್ತಿರುವ ನಗರಗಳು ಪರಿಣಾಮ ಬಹಳಷ್ಟು ಕೆರೆ-ಕುಂಟೆ ಮತ್ತು ಕೃಷಿ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇದಕ್ಕೆ ಉದಾಹರಣೆಯಾಗಿ ಬೆಂಗಳೂರು ನಗರದ ಸಮೀಪದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದೊಂದಿಗೆ ತನ್ನ ಅಸ್ತಿತ್ವ ಹಂಚಿಕೊಂಡಿರುವ ಕಾಳೇಶ್ವರಿ ಗ್ರಾಮದ ‘ವಡೇನ ಕೆರೆ’ ಇದೆ. ಈ ಕೆರೆಗೆ ಸುಮಾರು ಐದಾರು ಶತಮಾನಗಳ ಇತಿಹಾಸವಿದೆ. ವಡೇನ ಕೆರೆಗೆ ಮೊದಲಿಂದಲೂ ಕಾಡು ಪ್ರಾಣಿಗಳಿಗೆ, ಪಕ್ಷಿಗಳಿಗೆ ಹಾಗೂ ಜನ ಜಾನುವಾರುಗಳಿಗೆ ನೀರಿನ ಸೆಲೆಯಾಗಿ ಉಪಯೋಗದಲ್ಲಿದೆ.
10 ವರ್ಷಗಳ ಹಿಂದೆ ಈ ಕೆರೆಗೆ ಹೊಂದಿಕೊಂಡಂತೆ ಜನ ವಸತಿ ಬಡಾವಣೆಯ ನಿರ್ಮಾಣ ಮಾಡಿದರು. ಇಂತಹ ಸಂದರ್ಭದಲ್ಲಿ ಎಲ್ಲಾ ಕೆರೆಗಳಿಗೂ ಸರ್ವೇಸಾಮಾನ್ಯವಾಗಿ ಆಗುವಂತೆ, ಈ ಕೆರೆಗೂ ಕೂಡಾ ಮಣ್ಣು ತುಂಬಿಸಿ, ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಾಣ ಕೆಲಸವೂ ಕೂಡಾ ಬಹಳ ಬೇಗನೆ ನಡೆದುಹೋಗಿತ್ತು. ಗ್ರಾಮದ ಯುವಕರು ಅವರನ್ನು ಎಚ್ಚರಿಸಿ ಕೆರೆಯ ಒತ್ತುವರಿಯನ್ನು ತೆರವು ಮಾಡಿಸಲು ಮುಂದಾದರು. ಯುವಕರು, ಗ್ರಾಮಸ್ಥರೊಂದಿಗೆ ಗ್ರಾಮ ಪಂಚಾಯ್ತಿಯಲ್ಲಿ ಈ ವಿಷಯದ ಬಗ್ಗೆ ದೂರು ಕೊಟ್ಟು, ನಂತರ ತಹಶೀಲ್ದಾರ್ ರ ಕಛೇರಿಯಲ್ಲಿ ಕೆರೆ ಒತ್ತುವರಿದಾರರ ವಿರುದ್ಧ ಮೊಕದ್ದಮೆ ಹೂಡಿ ಕೆರೆಯ ಅಂಗಳವನ್ನು ಮತ್ತೆ ಬಿಡಿಸಿಕೊಳ್ಳಲು ಯಶಸ್ವಿಯಾದರು.
ಈ ಕೆರೆ ಸಂರಕ್ಷಣೆಯಲ್ಲಿ ವೈಲ್ಡ್ ಲೈಫ್ ಕನ್ಸೆರ್ವೇಷನ್ ಗ್ರೂಪ್ (WCG), ಸ್ನೇಹ ಸಂಪದ ಸಂಸ್ಥೆ ಮತ್ತು ಕಾಳೇಶ್ವರಿ ಗ್ರಾಮಸ್ತರು ಭಾಗಿಯಾಗಿದ್ದರು. “ಸ್ನೇಹ ಸಂಪದ” ಸಂಸ್ಥೆಯು ನಾವು ಮಾಡುತ್ತಿರುವ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ದಿ ಕೆಲಸಗಳಲ್ಲಿ ಆಸಕ್ತಿ ವ್ಯಕ್ತಪಡಿಸಿ, WCG ತಂಡದ ಜೊತೆಗೆ ಕೈಜೋಡಿಸಿದೆ, ಚರ್ಚಿಸಿ, ಈ ಕೆರೆಯ ಅಭಿವೃದ್ಧಿಯ ಯೋಜನೆಗಳಾದ ಕೆರೆಯ ಏರಿ ಎತ್ತರ ಗೊಳಿಸುವುದು, ಕೋಡಿ ಮರು ನಿರ್ಮಾಣ, ಕೆರೆಯ ಸುತ್ತ-ಮುತ್ತಲಿನ ಸ್ವಚ್ಛತೆ ಮತ್ತು ತ್ಯಾಜ್ಯ ವಿಸರ್ಜನೆ ತಡೆಯಲು ಸೂಚನಾ ಫಲಕ ಹಾಕುವುದು ಹಾಗೂ ಕೆರೆಯ ಸುತ್ತ ಬೇಲಿ ಹಾಕಿ ಗಿಡ ನೆಡುವ ಕೆಲಸಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲು ರೂಪು ರೇಷೆಗಳನ್ನು ನಿರ್ಮಿಸಿದೆ. ಸ್ನೇಹ ಸಂಪದ ಬಳಗವು ವಡೇನ ಕೆರೆಯನ್ನು ವೀಕ್ಷಿಸಿ, ಧನ ಸಹಾಯ ಮಾಡಲು ಸಮ್ಮತಿಸಿರುವುದು ಕೆರೆಗೆ ಮತ್ತೇ ಜೀವಕಳೆ ತುಂಬಲು ಅನುವಾಗಿದೆ.
ಮೊದಲಿಗೆ WCG ತಂಡವು ಗ್ರಾಮ ಪಂಚಾಯ್ತಿಯಲ್ಲಿ ಕೆರೆಯ ಅಭಿವೃದ್ಧಿ ಕೆಲಸಕ್ಕೆ ಒಪ್ಪಿಗೆ ಪಡೆಯಿತು. ನಂತರ ಕಾಳೇಶ್ವರಿ ಗ್ರಾಮದ ಜನರ ಜೊತೆಗೆ ಅಲ್ಲಿ ನಿರ್ಮಾಣವಾಗಿರುವ ಹೊಸ ಬಡಾವಣೆ ಜನರ ಮನೆಗಳಿಗೆ ತೆರಳಿ, ಕೆರೆ ಸಂರಕ್ಷಣೆ ಹಾಗೂ ಅದರ ಉಪಯೋಗಗಳ ಕುರಿತು ಅರಿವು ಮೂಡಿಸಿತು. ಕೆರೆ ಉಳಿಸಲು ನಾವು ಏನು ಮಾಡಬೇಕು, ಏನು ಮಾಡಬಾರದು ಎಂಬುದನ್ನು ತಿಳಿಸಲಾಯಿತು. ಕರ ಪತ್ರಗಳನ್ನು ಜನರ ಕೈಗಿತ್ತು ಕಾರ್ಯಕ್ರಮದ ಬಗ್ಗೆ ವಿವರಿಸಿ ಅವರೆಲ್ಲರನ್ನೂ ಕೆರೆಸಂರಕ್ಷಣೆಯ ಕಾರ್ಯದಲ್ಲಿ ಭಾಗಿಯಾಗುವಂತೆ ಆಹ್ವಾನಿಸಲಾಯಿತು. ನಿರ್ಧರಿಸಿದಂತೆ ದಿನಾಂಕ 7ನೇ ಮಾರ್ಚ್ ಭಾನುವಾರ ದಿನ ಮೊದಲ ಹಂತದ ಕೆಲಸವಾದ ಕೆರೆಸುತ್ತ ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ಸಂಗ್ರಹಿಸಿ ಸ್ವಚ್ಚಗೊಳಿಸುವ ಕಾರ್ಯಕ್ರಮ ನೆರವೇರಿಸಲಾಯಿತು. ಗ್ರಾಮಸ್ಥರು, ಮಕ್ಕಳು, ಸ್ವಯಂ ಸೇವಕರು, ಸ್ನೇಹ ಸಂಪದ ತಂಡದ ಜೊತೆಗೆ WCG ತಂಡ ಸೇರಿ ಸುಮಾರು 70ಕ್ಕೂ ಹೆಚ್ಚು ಮಂದಿ ಕೆರೆ ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ 8ಕ್ಕೆ ಕೈಗೆ ಗ್ಲೌಸ್ ಹಾಕಿ, ಚೀಲ ಹಿಡಿದು ಕೆಲಸ ಪ್ರಾರಂಭಿಸಿ, ಕೆರೆಯ ಒಂದು ಬದಿ ಪೂರ್ಣ ಸ್ವಚ್ಛ ಮಾಡಿ ನಂತರ ಒಂದು ಉಪಹಾರದ ವಿರಾಮ ತೆಗೆದುಕೊಳ್ಳಲಾಯಿತು. ಉಪಹಾರದ ನಂತರ ಇನ್ನೊಂದು ಬದಿಯನ್ನು ಸ್ವಚ್ಚ ಮಾಡಲಾಯಿತು. ಆಯ್ದ ಕಸವನ್ನೆಲ್ಲಾ ಸಂಗ್ರಹಿಸಿ ವಿಂಗಡಿಸಿಲಾಯಿತು. ಕಡೆಯಲ್ಲಿ ಭಾಗಿಯಾದವರ ಪರಸ್ಪರ ಪರಿಚಯ ಮತ್ತು ಅನಿಸಿಕೆಗಳನ್ನು ಹಂಚಿಕೊಂಡು, ಮಜ್ಜಿಗೆಯೊಂದಿಗೆ ಬೀಳ್ಕೊಡುವ ಮೂಲಕ “ಈ ಕೆರೆ ನಮ್ಮದು” ಯೋಜನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ನಮ್ಮ ಎರಡನೇ ಹಂತದ ಕಾರ್ಯ, ಕೆರೆ ಸುತ್ತಾ ಹಾಗೂ ಏರಿಯ ಮೇಲೆ ಬೆಳೆದಿರುವ ಲಂಟಾನ ತೆರವು ಮಾಡಿ, ಕೆರೆ ಏರಿ ಎತ್ತರ ಗೊಳಿಸುವುದಾಗಿತ್ತು. ಈ ಕೆಲಸಕ್ಕೆ 2 JCB ಮತ್ತು 3 ಟ್ರಾಕ್ಟರ್ ಸಹಾಯದಿಂದ ಕೆರೆಯ ಒತ್ತುವರಿ ಮಾಡಲು ತುಂಬಿದ್ದ ಮಣ್ಣನ್ನೇ ಅಗೆದು ಏರಿಯ ಮೇಲೆ ಹಾಯಿಸಿ ಎತ್ತರಿಸಲಾಯಿತು. 2 ದಿನಗಳಲ್ಲಿ ಶೇಕಡ 80ರಷ್ಟು ಕೆಲಸ ಮುಗಿದಿದ್ದು, ಇದರ ಕೊನೆಯ ಭಾಗವಾಗಿ ಏರಿಯ ಮಣ್ಣನ್ನು ಸಮಗೊಳಿಸಬೇಕಿದೆ. ಇದಕ್ಕೆ ಮಣ್ಣು ಸರಿಯಾಗಿ ಕೂತು ಪಕ್ವವಾಗುವವರೆಗೆ ಕಾಯಬೇಕಿದೆ. ಮುಂದಿನ ದಿನಗಳಲ್ಲಿ ಅನ್ಯಕೆಲಸಗಳಾದ ಫಲಕ ಅಡವಳಿಕೆ, ಗಿಡಗಳನ್ನು ನೆಡುವುದು, ತ್ಯಾಜ್ಯ ಸಂಗ್ರಹವಾಗದಂತೆ ನಿರ್ವಹಿಸುವುದು ಮುಂತಾದವು ಬಾಕಿಯಿವೆ.
ನಾವು ಚಿಕ್ಕಂದಿನಲ್ಲಿ ಆಟ ಆಡಿದ ಕೆರೆ ಬಯಲು, ದನ-ಕರುಗಳಿಗೆ ನೀರುಣಿಸಿ, ಸುತ್ತಲಿನ ಮರಗಳಿಂದ ನೆರಳು ದಕ್ಕಿಸುತ್ತಿದ್ದ ಕೆರೆಗಳು ಇನ್ನು ಕೇವಲ ನೆನಪಾಗಿ ಉಳಿಯುವ ಮೊದಲು ನಮ್ಮ ಊರ ಕೆರೆಗಳ ಸಂರಕ್ಷಣೆಯ ಮತ್ತು ಉದ್ಧಾರ ಕೆಲಸವನ್ನು ನಾವು ಹೊರಬೇಕಾಗುತ್ತದೆ. ನಮ್ಮ ಪಾಲಿನ ಕೆರೆಗಳು ಮುಂದಿನ ದಿನಗಳಲ್ಲಿ ಭೂಕಬಳಿಕೆದಾರರಿಗೆ ಸಿಕ್ಕು ಮಾಯವಾಗುವ ಅಥವಾ ಕಲುಷಿತವಾಗುವ ಮೊದಲೇ ಅವುಗಳ ಸಂರಕ್ಷಣೆ ಮಾಡಿ ಪುನಃಶ್ಚೇತನಗೊಳಿಸುವುದು ಅತ್ಯಗತ್ಯ. ಪ್ರಾಣಿಗಳ ಬಾಯಾರಿಸಿ, ಬಳಲಿಸಿ, ಪಕ್ಷಿಗಳ ಅವಾಸಕ್ಕೆ ಕೊಳ್ಳಿ ಇಟ್ಟು ಎಲ್ಲವನ್ನು ಇಲ್ಲದಾಗಿಸುವ ಮುನ್ನ ಕೆರೆ ಇತರ ಪ್ರಾಣಿಗಳ ಹಿತರಕ್ಷಣೆಯೇ ನಮ್ಮ ರಕ್ಷಣೆ ಮತ್ತು ಹೊಣೆ ಎಂದು ಅರಿತುಕೊಂಡು ಕಾರ್ಯ ನಿರತವಾಗಬೇಕಿರುವುದು ಇಂದಿನ ಅವಶ್ಯಕತೆ. ಇದು ಮುಂದುವರಿಯುವುದು ಅಥವಾ ಕೊನೆಗೊಳ್ಳುವುದು ನಮ್ಮ ಕೈಯಲ್ಲೇ ಇದೆ. ನಮ್ಮ ಕೆರೆಗಳ ಸಂರಕ್ಷಣೆಯ ಮಾತು ಬಂದಾಗ ನಮ್ಮ ನಡವಳಿಕೆ ಹೇಗಿರಬೇಕು ಎಂಬುದಕ್ಕೆ ನಾವೆಲ್ಲರೂ ಬೇರೊಬ್ಬರಿಗೆ ಮಾದರಿಯಾಗಬೇಕೆಂಬುದು ನಮ್ಮ ಆಶಯ.
ಕೆರೆ-ಕುಂಟೆಗಳನ್ನು ಉಳಿಸಿಕೊಳ್ಳುವುದರಿಂದ ಕುಡಿಯುವ ನೀರಿನ ಅಬಾಧತೆ, ಅಕಾಲಿಕ ಮಳೆ, ಅಂತರ್ಜಲದ ಕ್ಷೀಣತೆ ಮತ್ತಿತರ ತೊಂದರೆಗಳು ಕಡಿಮೆಯಾಗುತ್ತವೆ. ಭೂಕಬಳಿಕೆದಾರರ ದುರಾಸೆಯ ಕೈಗಳನ್ನು ಕಟ್ಟಿಹಾಕಲು ನಾವು ಸಾರ್ವಜನಿಕರು ಕೆರೆಯ ಸಮರ್ಪಕ ನಿರ್ವಹಣೆಯ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗೋಣ.
ಲೇಖನ : ರಾಕೇಶ್ ಆರ್. ವಿ.
ಬೆಂಗಳೂರು ಜಿಲ್ಲೆ