ನಮ್ಮನ್ನು ಬದುಕಲು ಬಿಡಿ
ಹಸಿರು ಬೆನ್ನೇಣು ಹಾವು
ಹಾವು! ಹಾವು! ಬಡಿಗೆ ತನ್ನಿ ಬಹಳ ವಿಷಕಾರಿ ಹಾವಿದು. ಬೇಗ ಓಡಿ ಬನ್ನಿ, ಹೊಡಿರಿ ಹೊಡಿರಿ. ಓ ಮನುಜರೇ, ಬುದ್ಧಿ ಜೀವಿಗಳೇ ಸ್ವಲ್ಪ ತಡೆಯಿರಿ, ಯಾಕೆ ನಮ್ಮನ್ನು ಎಲ್ಲೆಂದರಲ್ಲಿ ಕೊಲ್ಲುತ್ತೀರಿ? ನಿಮ್ಮಷ್ಟು ವಿವೇಕ ನಮಗಿಲ್ಲದಿರಬಹುದು. ನಿಮ್ಮಷ್ಟು ನಮಗೆ ಆಸ್ತಿಯ ಸ್ವಂತಿಕೆ ಇಲ್ಲ. ನಾವು ಬದುಕುವ ಕಾಡು-ಮೇಡುಗಳನ್ನೆಲ್ಲ ಕಡಿದು ಜಾಲಾಡಿದ್ದೀರಿ. ಕಾಡುಗಳೆಲ್ಲ ನಾಡಾದಾಗ ನಾವು ಇರಬೇಕದ್ದಾದರೂ ಎಲ್ಲಿ?. ಹಸಿವನ್ನು ಹಿಂಗಿಸಿಕೊಳ್ಳುವ ಹಂಬಲದಿಂದ ನಾವು ಇಲ್ಲಿಗೆ ಬಂದೆವು ಅಷ್ಟೆ. ನಾವು ನಿಮಗೇನು ತೊಂದರೆ ಮಾಡಿದೆವು ಹೇಳಿ. ಈ ಸೃಷ್ಠಿ ಸೌಂದರ್ಯದ ನಿಸರ್ಗದಲ್ಲಿ ನಿಮಗೆಷ್ಟು ಬದುಕುವ ಹಕ್ಕಿದೆಯೋ ನಮಗೂ ಅಷ್ಟೇ ಬದುಕುವ ಹಕ್ಕಿದೆ. ಆದರೂ ನಮ್ಮ ಸಂತತಿಯನ್ನು ಮುಗಿಸುತ್ತಿದ್ದೀರಿ. ಒಂದಷ್ಟು ನನ್ನ ಮನದಾಳದ ಅಳಲನ್ನು ದಯವಿಟ್ಟು ಕೇಳಿ.
ನಮಗೆ ಸರ್ಪ, ಹಾವು, ಪನ್ನಂಗ, ಎಂದೆಲ್ಲ ಅನೇಕ ಹೆಸರುಗಳಿವೆ. ನಾವು ಸ್ವಚ್ಛಂದ ಪರಿಸರದಲ್ಲಿ ಹರಿದಾಡುವ ಬೆನ್ನು ಮೂಳೆಯುಳ್ಳ ಸರಿಸೃಪ ಜೀವಿಗಳು. ನಮ್ಮ ನೀಳವಾದ ಶರೀರವನ್ನು ತಲೆ, ಮುಂಡ ಬಾಲವೆಂದು ಮೂರು ಭಾಗಗಳಾಗಿ ವಿಂಗಡಿಸಬಹುದು ನಮಗೆ ಕಾಲುಗಳಿಲ್ಲ ಆದರೆ ನಾವು ನಮ್ಮ ಶಲ್ಕ ಅಥವಾ ಹುರುಪೆಗಳಿಂದ ನೆಲದ ಮೇಲೆ ತೆವಳುತ್ತಾ ಅಲೆದಾಡುತ್ತಿರುತ್ತೇವೆ. ನಮ್ಮ ಕೆಲ ಬಾಂಧವರು ಮರ ವಾಸಿಗಳಾದರೆ ಇನ್ನು ಕೆಲವರು ಜಲವಾಸಿಗಳು ಮತ್ತೆ ಕೆಲವರು ನೆಲವಾಸಿಗಳು, ಸುಮಾರು 240 ಮಿಲಿಯನ್ ವರ್ಷಗಳ ಹಿಂದೆಯೇ ಸರೀಸೃಪಗಳು ಉಗಮಗೊಂಡು ತದ ನಂತರ ಕಾಲಾನುಕ್ರಮದಲ್ಲಿ ನಾವು ಸುಮಾರು 150 ಮಿಲಿಯನ್ ವರ್ಷಗಳ ಹಿಂದೆ ಜುರಾಸಿಕ್ ಯುಗದಲ್ಲಿ ಹಲ್ಲಿಗಳಿಂದ ವಿಕಾಸ ಹೊಂದುತ್ತಾ ನಮ್ಮ ಸಂತತಿ ಸಾಗುತ್ತಾ ಇದೆ.
ನಾವು ವಿಶ್ವದಾದ್ಯಂತ 2 ಸಾವಿರ ಜಾತಿಯ ಹಾವುಗಳಿದ್ದು ಇದರಲ್ಲಿ 282 ಪ್ರಭೇದದ ನಮ್ಮ ಬಾಂಧವರು ಭಾರತದಲ್ಲಿ ಕಂಡು ಬರುತ್ತಾರೆ. ಇವುಗಳಲ್ಲಿ 52 ಪ್ರಭೇದದವರ ಕಡಿತವು ಮಾರಣಾಂತಿಕವಾಗಿದೆ ಹಾಗೂ ಕರ್ನಾಟಕದಲ್ಲಿ ಸುಮಾರು 4 ಜಾತಿಯ ಹಾವುಗಳಲ್ಲಿ ಉಪಪ್ರಭೇದ ಸೇರಿ 10 ಪ್ರಭೇದದವರಲ್ಲಿ ವಿಷವಿದೆ. ಇವುಗಳಲ್ಲಿ 7 ಪ್ರಭೇದಗಳು ಬಲು ವಿಷಕಾರಿಗಳಾಗಿದ್ದು ಉಳಿದ ಮೂರು ಕನ್ನಡಿ ಹಾವಿನ ಉಪ ಪ್ರಭೇದದವರು ಮೃದು ವಿಷಕಾರಿಗಳು. ಈ 10 ಪ್ರಭೇದದ ವಿಷಯುಕ್ತ ಹಾವುಗಳಲ್ಲಿ ಕಟ್ಟುಹಾವು, ನಾಗರಹಾವು, ಕನ್ನಡಿಹಾವು, ಗರಗಸ ಉರಪೆ ಮಂಡಲ ಹಾವಿನ ಪ್ರಭೇದದವರು ನೀವಿರುವ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಆಸುಪಾಸಿನಲ್ಲಿ ಗೌಪ್ಯವಾಗಿ ಅಡಗಿ ವಾಸವಾಗಿದ್ದು ಆಗೊಮ್ಮೆ ಇಗೊಮ್ಮೆ ನಿಮ್ಮ ಕಣ್ಣಿಗೆ ಬೀಳುತ್ತಾರೆ.
ನಾಲ್ಕು ಪ್ರಭೇದದ ಹಾವುಗಳಾದ ಕಾಳಿಂಗ ಸರ್ಪ, ಮಲೆ ಗುಳಿಮಂಡಲ, ಗೂನು ಮೂಗಿನ ಗುಳಿಮಂಡಲ, ಬಿದಿರು ಗುಳಿಮಂಡಲ ಹಾವುಗಳು ಪಶ್ಚಿಮ ಘಟ್ಟದ ದಟ್ಟ ಅರಣ್ಯ ಇಲ್ಲವೇ ಅದರ ತಪ್ಪಲು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಉಳಿದ ಒಂದು ಪ್ರಭೇದದ ಹಾವು ವಿಷಯುಕ್ತ ಸಮುದ್ರವಾಸಿ.
ನಮ್ಮ ವಾಸ ಹೊಲ, ಗದ್ದೆ, ಕೆರೆ, ನೀರಿನ ಪ್ರದೇಶ, ಹುತ್ತ, ಕುರುಚಲು ಕಾಡು ಬೆಟ್ಟ ಪ್ರದೇಶ, ದಟ್ಟ ಅರಣ್ಯದ ಮರ, ತೊಪ್ಪಲು, ಬಂಡೆ ತಳ, ಮನೆಯ ಸೂರು, ಬಿಲ, ಗೋಡೆಯ ಬಿರುಕು. ನಾವು ಸರ್ವವ್ಯಾಪಿಗಳಾಗಿದ್ದರೂ ಉಷ್ಣ ಮತ್ತು ಸಮಶೀತೋಷ್ಣ ವಲಯಗಳಲ್ಲಿ ಮಾತ್ರ ಬದಕು ನಡೆಸಲು ಸಾಧ್ಯ. ಆರ್ಕಟಿಕ್, ನ್ಯೂಜಿಲ್ಯಾಂಡಿನಂತಹ ಅತೀ ಶೀತ ಪ್ರದೇಶಗಳಲ್ಲಿ ನಮ್ಮ ಸಂತತಿಯವರು ಬದುಕು ನಡೆಸಲು ಅಸಾಧ್ಯ, ಅಂದರೆ ಇಲ್ಲಿ ಹಾವುಗಳು ಇಲ್ಲವೇ ಇಲ್ಲ. ಈ ಬಗ್ಗೆ ನಮ್ಮನ್ನು ಕುರಿತು ಅಧ್ಯಯನ ಮಾಡಿದ ಉರಗ ತಜ್ಞರೇ ದೃಢ ಪಡಿಸಿದ್ದಾರೆ.
ಹಾವುಗಳಲ್ಲಿ 100 ಎಂ.ಎಂ ಗಾತ್ರದ ಕುರುಡು ಹುಳು-ಹಾವಿನಿಂದ ಹಿಡಿದು 6 ಮೀಟರ್ ಉದ್ದದ ಹೆಬ್ಬಾವುಗಳಿದ್ದು, ಕುರುಡು ಹುಳು ಹಾವಿನ ಪ್ರಭೇದದಲ್ಲಿ ಗಂಡು ಹಾವುಗಳಿಲ್ಲ. ಹೆಣ್ಣು ಹಾವುಗಳು ಮಾತ್ರವೇ ಇದ್ದು, ಅವು “ಸ್ವಫಲೀಕೃತ” ವಿಧಾನದಿಂದ ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ. ಕೆಲ ಪ್ರಭೇದದವರು ಮೊಟ್ಟೆ ಇಟ್ಟು ಮರಿ ಮಾಡಿದರೆ ಇನ್ನೂ ಕೆಲವರು ನೇರ ಮರಿಗಳಿಗೆ ಜನ್ಮ ನೀಡುತ್ತಾರೆ. ಇನ್ನೊಂದು ವಿಸ್ಮಯಕಾರಿ ಸಂಗತಿ ಎಂದರೆ ನಮ್ಮ ಕುಲದ ಕನ್ನಡಿ ಹೆಣ್ಣು ಹಾವು ಮೇ-ಜೂನ್ ತಿಂಗಳಲ್ಲಿ ಸುಮಾರು 30-65 ಮರಿಗಳನ್ನು ಹೆರುತ್ತದೆ, ಇತರ ಹಾವುಗಳಂತೆ ಮೊಟ್ಟೆಗಳನ್ನಿಡದೆ ಅವುಗಳನ್ನು ಅಂಡಾಶಯದಲ್ಲಿ ಉಳಿಸಿಕೊಳ್ಳುತ್ತದೆ ಹಾಗೂ ದಿನ ತುಂಬಿದ ನಂತರ ನೇರ ಮರಿಗಳಿಗೆ ಜನ್ಮನೀಡುತ್ತದೆ. ಮತ್ತೆ ಹಾವುಗಳು ಒಂದು ಬಾರಿ ಮಿಲನಗೊಂಡರೆ ಬರುವ ಎರಡು ಮೂರು ವರ್ಷ ಗಂಡು ಹೆಣ್ಣಿನ ಮಿಲನವಾಗದಿದ್ದರೂ, ಹೆಣ್ಣುಹಾವು ಕಳೆದ ಮಿಲನದ ವೀರ್ಯಾಣುಗಳ ಸಹಾಯದಿಂದ ಗರ್ಭ ಧರಿಸುತ್ತದೆ.
ಹಾವಾಡಿಗನ ಪುಂಗಿಯ ನಾದಕ್ಕೆ ನಾವು (ಹಾವು) ಸುಂದರವಾದ ಹೆಡೆಯೆತ್ತಿ ತಲೆ ತೂಗಿಸುವುದನ್ನು ನೀವು ಕಂಡಿರಬಹುದು ಅದು ಪುಂಗಿಯಿಂದ ಹೊರಹೊಮ್ಮುವ ನಾದಕ್ಕೆ ಮನಸೋತು ಆಲಿಸುತ್ತಾ ತಲೆ ತೂಗುತ್ತೇವೆ ಎಂದು ಭಾವಿಸಿರುವಿರಿ, ಆದರೆ ಸತ್ಯ ಅದಲ್ಲ. ನಾವು ಪುಂಗಿಯ ತುದಿಯನ್ನೇ ದೃಷ್ಠಿಸಿ ನೋಡುತ್ತಾ ಅದರ ಚಲನೆಗೆ ತಲೆಯನ್ನು ಅತ್ತಿಂದಿತ್ತ ಆಡಿಸುತ್ತೇವೆ ಹೊರತು ಪುಂಗಿಯ ನಾದಕ್ಕಲ್ಲ. ನಮಗೆ ಹೊರಕಿವಿ ಮತ್ತು ಕಿವಿತಮಟೆ ಇಲ್ಲ. ಹೆಚ್ಚಿನ ಬಾಂಧವರು ಭೂಮಿಯ ಮೇಲಾಗುವ ಸೂಕ್ಷ್ಮ ಕಂಪನದಿಂದ ಆಹಾರ ಮತ್ತು ಶತ್ರುವಿನ ಇರುವಿಕೆಯನ್ನು ಗ್ರಹಿಸುವ ಸೂಕ್ಷ್ಮತೆ ನಮ್ಮವರಲ್ಲಿದೆ. ನಿಮ್ಮ ಧ್ವನಿ ಹಾಗೂ ಸಂಗೀತ ಶಬ್ಧಗಳು ನಮಗೆ ಕೇಳಿಸುವುದಿಲ್ಲ.
ನಾವು ಮೂಗಿನಿಂದ ವಾಸನೆಯನ್ನು ಹಿಡಿದರೂ ನಮ್ಮ ಸೀಳು ನಾಲಿಗೆಯು ಮುಖ್ಯ ಇಂದ್ರಿಯ ಅಂಗವಾಗಿದೆ, ಬಾಯಿ ಮುಚ್ಚಿಕೊಂಡಂತ್ತಿದ್ದರು ಎರಡೂ ತುಟಿಗಳು ಸಣ್ಣದಾಗಿ ತೆರೆದಿದ್ದು ಇದರ ಮೂಲಕ ನಾಲಿಗೆ ಹೊರಹಾಕಿ ಸೂಕ್ಷ್ಮ ಸಂವೇದನಾ ತರಂಗಗಳನ್ನು ಗ್ರಹಿಸುತ್ತೇವೆ ಆದರೆ ನಮ್ಮ ಈ ನಾಲಿಗೆ ಸ್ವಾದಿಸುವ ಅಂಗವಲ್ಲ. ನಮ್ಮ ಕಣ್ಣುಗಳಿಗೆ ರೆಪ್ಪೆ ಇರುವುದಿಲ್ಲ ದುಂಡನೆಯ ಕಣ್ಣುಗಳ ಮೇಲೆ ತೆಳುವಾದ ಪಾರದರ್ಶಕ. ಹುರುಪೆಯಿದೆ ನಿಮಗೆ ವಿಷ, ವಿಷದ ಹಲ್ಲು, ಕಚ್ಚುವಿಕೆ ಹಾಗೂ ಸಂತಾನಾಭಿವೃದ್ಧಿ ಬಗ್ಗೆ ಇನ್ನೊಂದು ಸಲ ಹೇಳುವೆ.
ನಾವು ಇಲಿ, ಹೆಗ್ಗಣ, ಕಪ್ಪೆ, ಪಕ್ಷಿ ಮತ್ತು ಪಕ್ಷಿಗಳ ಮೊಟ್ಟೆ ಹಾಗು ಮರಿ, ಸಣ್ಣ ಕೀಟಗಳನ್ನು ಆಹಾರವಾಗಿ ಭಕ್ಷಿಸುತ್ತೇವೆ. ಕೆಲವು ಸಲ ಇತರ ಜಾತಿಯ ಹಾವುಗಳನ್ನು ಭಕ್ಷಿಸಿ “ಸ್ವಜಾತಿ ಭಕ್ಷಣೆ” ಮಾಡುವುದೂ ಇದೆ. ನಿಮಗೆ ಇನ್ನೊಂದು ವಿಚಾರ ಗೊತ್ತೇ? ಒಂದು ಜೋಡಿ ಇಲಿ ವರ್ಷಕ್ಕೆ ಸುಮಾರು 880 ಮರಿಗಳನ್ನು ಹಾಕಿ ರೈತರಿಗೆ ಉಪದ್ರವಿಯಾಗಿದೆ. ಹಾಗಾಗಿ ನಾವು ಇವುಗಳನ್ನು ಭಕ್ಷಿಸುತ್ತಾ ಜೈವಿಕ ನಿಯಂತ್ರಕಗಳಾಗಿದ್ದೇವೆ.
ಪ್ರಕೃತಿಯ ಆಹಾರ ಸರಪಳಿಯ ಪ್ರಮುಖ ಕೊಂಡಿಯಾದ ನಮ್ಮನ್ನು ನೀವು ಚರ್ಮ, ಔಷಧಕ್ಕಾಗಿ ಕೊಲ್ಲುವುದಲ್ಲದೇ ಅನೇಕ ಮೂಢ ನಂಬಿಕೆಗಳಿಗೆ ಒಳಗಾಗಿ ಕೊಂದು ವಿನಾಶದ ಅಂಚಿಗೆ ತಳ್ಳುತ್ತಿದ್ದೀರಿ. ಅಂದ ಹಾಗೆ ಮೂಢ ನಂಬಿಕೆ ಅಂದಕೂಡಲೇ ನೆನಪಾಯಿತು ನೋಡಿ ನಮ್ಮ ಸಂಬಂಧಿಯಾದ “ಮಣ್ಣಮುಕ್ಕ ಹಾವು (ಇರ್ತಲೆಹಾವು)” ಗಳ ಅಕ್ರಮ ಮಾರಟ, ಈ ಹಾವು ಮೂರುವರೆ ಕೆ.ಜಿ. ಮೇಲ್ಪಟ್ಟು ತೂಕವಿದ್ದರೆ ಅದು “ಮಾಣಿಕ್ಯ” ವಿಸರ್ಜಿಸುತ್ತದೆ ಎಂತಲೂ, ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುವಾಗ ಜೀವಂತವಾಗಿ ಇದನ್ನು ಹೂತು ಮನೆ ನಿರ್ಮಾಣ ಮಾಡಿದರೆ ಅಂತಹ ನಿವೇಶನಗಳಿಗೆ ಮಾಟ ಮಂತ್ರ ತಾಗುವುದಿಲ್ಲ ಎಂಬುದು ಎಂಥಾ ಮೌಢ್ಯ ನೋಡಿ! ಮುಗ್ಧ ಸಾಧು ಗುಣದ ಈ ನಮ್ಮ ಕುಲದ ಜೀವಿಯನ್ನು ಕೊಲ್ಲುವುದನ್ನು ನೋಡಿ ನಮಗೆಲ್ಲ ಖೇದವೆನಿಸುತ್ತಿದೆ.
ನಮ್ಮವರ ಕುರಿತು ಕಾನೂನು ಏನು ಹೇಳುತ್ತದೆ ಗೊತ್ತೇ ? ಭಾರತದ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರಂತೆ ನಮ್ಮೆಲ್ಲಾ ಪ್ರಭೇದದವರು ರಕ್ಷಿತ ಉರಗಗಳೆಂದು ಘೋಷಿಸಲಾಗಿದೆ. ವನ್ಯಜೀವಿ ಕಾನೂನು ಪರಿಧಿಯ ಶೆಡ್ಯೂಲ್ ಒಂದರಲ್ಲಿ ಭಾರತದ ಹೆಬ್ಬಾವು (Indian Rock Python), ರೆಟಿಕ್ಯೂಲೇಟೆಡ್ ಹೆಬ್ಬಾವು (Reticulated Python) ಹಾಗೂ ಮೊಟ್ಟೆ ಭಕ್ಷಕಹಾವು (Indian Egg Eater) ಗಳಿಗೆ ಪ್ರಥಮ ಸ್ಥಾನದ ಆದ್ಯತೆಗೊಳಪಟ್ಟು ವಿನಾಶದಂಚಿನಲ್ಲಿರುವ ಪ್ರಭೇದಗಳಾಗಿ ಗುರುತಿಸಲಾಗಿದೆ.
ಇನ್ನು ಶೆಡ್ಯೂಲ್ 2 ರಲ್ಲಿ ಭಾರತದ ಕೇರೆಹಾವು (Indian Rat Snake), ಆಲಿವ್ ನೀರುಹಾವು (Olive Keel Back), ನಾಗರಹಾವು (Spectacled Cobra And Monocled Cobra), ಕಾಳಿಂಗ ಸರ್ಪ (King Cobra), ಕನ್ನಡಿಹಾವು (Russell’s Viper), ನೀರುಹಾವು (Checkered Keel Back), ನಾಯಿಮುಖದ ನೀರುಹಾವುಗಳನ್ನು (Dog Faced Water Snake) ಸೇರಿಸಿ ಇವುಗಳನ್ನು ಸಂರಕ್ಷಿಸಲು ಕಠಿಣ ಕಾನೂನು ಮಾಡಿ ನಮ್ಮವರನ್ನು ಹಿಡಿಯು ವುದು ಕೊಲ್ಲುವುದು, ರಫ್ತು ಮಾಡುವುದು ಮುಂತಾದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ ತಪ್ಪಿತಸ್ಥರಿಗೆ 1 ರಿಂದ 6 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು 25 ಸಾವಿರ ರೂಪಾಯಿಗಳ ದಂಡ ವಿಧಿಸುವ ಕಾನೂನು ಇದ್ದರೂ ಸಹ ನಮ್ಮವರ ಸಂತತಿ ದಿನದಿಂದ ದಿನಕ್ಕೆ ನಿಮ್ಮ ಕ್ರೂರತನದಿಂದ ಕ್ಷೀಣಿಸುತ್ತಲೇ ಇದೆ. ಮೇಲೆ ಹೇಳಿದ ಯಾವ ಶಿಕ್ಷೆಯೂ ನಿಮಗೆ ಕಡಿಮೆಯೇ ಸರಿ! ಹಾಗಾಗಿ ನಿಮ್ಮಂತೆಯೇ ಪ್ರಕೃತಿಯ ಭಾಗವಾಗಿರುವ ನಮ್ಮನ್ನು ಪರಿಗಣಿಸಿ ದಯವಿಟ್ಟು ಕಾನೂನನ್ನು ತಿದ್ದುಪಡಿ ಮಾಡಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ನಮ್ಮ ಸಂತತಿಗಳು ಕ್ಷೀಣಿಸುತ್ತಿರುವುದನ್ನು ಗಮನಿಸಿದ ಕೆಲ ಉರಗ ಪ್ರೇಮಿಗಳು 1967 ರಲ್ಲಿ ಸ್ನೇಕ್ ಫಾರ್ಮ ರಚಿಸಿಕೊಂಡು ನಮ್ಮ ಉಳಿವಿಗಾಗಿ ಅಭಿಯಾನ ಪ್ರಾರಂಭಿಸಿದರಾದರೂ 1970 ಜುಲೈ 16 ರಂದು ಪ್ರಸಿದ್ಧ ರಾಕ್ ಬ್ಯಾಂಡ್ ರಾಮೋನ್ರ್ ಒಂದು ಹಾಡಿನ ಮೂಲಕ ಉರಗವನ್ನು ಜನಪ್ರಿಯಗೊಳಿಸುತ್ತಾ “ವಿಶ್ವ ಉರಗ ದಿನ” ವನ್ನು ಆರಂಭಗೊಳಿಸಿದರು. ಇದರ ಉದ್ದೇಶ ನಮ್ಮ ಉಳಿವಿಗಾಗಿ ಜಾಗೃತಿ ಮೂಡಿಸುವ ದಿನವಾಗಿದ್ದು ಅಂತಹ ಮಹತ್ವ ಪಡೆಯದೇ ಇರುವುದನ್ನು ತಿಳಿದು ಖೇದವೆನಿಸುತ್ತದೆ.
ನಮ್ಮ ಸಂರಕ್ಷಣೆಗಾಗಿ ಒಂದು ದಿನವಿದೆ, ಈ ದಿನವಾದರೂ ನಮ್ಮ ರಕ್ಷಣೆಗೆ ಮುಂದೆ ಬನ್ನಿ, ನಿಮ್ಮ ಕಣ್ಣನ್ನು ತೆರಸಲೆಂದೆ ವಚನಕಾರರು “ಕಲ್ಲ ನಾಗರ ಕಂಡರೇ ಕೈ ಮುಗಿವರು, ದಿಟ ನಾಗರ ಕಂಡರೇ ಕಲ್ಲೆಸೆವರು” ಎಂದು ಠೀಕಿಸುತ್ತ ನಿಮ್ಮನ್ನು ಎಚ್ಚರಿಸಿದರೂ ಸಹ ನೀವು ನಾಗರ ಪಂಚಮಿ ಹಬ್ಬ ಬಂತೆಂದರೆ ಹುತ್ತಕ್ಕೆ ಹಾಲೆರೆದು ಹುತ್ತ ಕರಗುವಂತೆ ಮಾಡಿ ನನ್ನ ವಾಸಕ್ಕೂ ಸಂಚಕಾರ ತರುತ್ತೀರಲ್ಲಾ ಇದು ಯಾವ ಸೀಮೆಯ ನ್ಯಾಯ? ಈ ನಿಸರ್ಗದ ಸಮಸ್ತ ಜೀವಿಗಳು ಒಂದನ್ನೊಂದು ಅವಲಂಬಿಸಿ ಜೀವನ ಸಾಗಿಸುತ್ತಿರುವುದು ಪ್ರಕೃತಿಯ ವೈಶಿಷ್ಟ್ಯಳಗಲ್ಲೊಂದು. ಆದರೆ ಜೀವರಾಶಿಗಳಲ್ಲಿ ಬುದ್ದಿಜೀವಿಯೆನಿಸಿಕೊಂಡ ಮಾನವರಾದ ನೀವು ಮಾತ್ರ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ಇಂತ ಕಾರ್ಯಗಳನ್ನು ಮಾಡುತ್ತಿರುವುದು ನಿಜಕ್ಕೂ ದುರಂತಕ್ಕೆ ಅಹ್ವಾನವಿತ್ತಂತೆಯೇ ಸರಿ. ಇನ್ನೂ ಈ ದಿನದಿಂದಾದರೂ ನಮ್ಮ ಸಂರಕ್ಷಣೆಗೆ ಅಣಿಯಾಗಿ ಇಲ್ಲದಿದ್ದರೆ ಪರಿಸರದ ಆಹಾರ ಸರಪಳಿಯಲ್ಲಿ ಯಾವುದಾದರೊಂದು ಜೀವಿಗಳು ಅಧಿಕವಾಗಿ ಮನುಜಕುಲಕ್ಕೂ ಆಪತ್ತು ಬರುವುದು ಕಟ್ಟಿಟ್ಟ ಬುತ್ತಿ. ನಾವು ನಿಮ್ಮನ್ನು ಸುಖಾಸುಮ್ಮನೆ ಒಮ್ಮೆಲೆ ಕಚ್ಚಿ ಸಾಯಿಸಲು ಇಚ್ಛಿಸುವುದಿಲ್ಲವಾದರೂ ನೀವು ನಮ್ಮ ತಂಟೆಗೆ ಬಂದರೆ ನಿಮ್ಮನ್ನು ನಾವು ಬಿಡುವುದಿಲ್ಲ, ಎಚ್ಚರ ತಿಳಿಯಿರಿ!.
ದಯಮಾಡಿ ಈ ಸ್ಪಚ್ಛಂದ ಪರಿಸರದಲ್ಲಿ ವಿಹರಿಸಲು ನಮ್ಮನ್ನು ಬಿಡಿ. ಮುಂದೊಂದು ದಿನ ಈ ಭೂಮಿ ಮೇಲೆ ನಮ್ಮ ಸಂತಂತಿಯ ವಿನಾಶದಿಂದ ಪರಿಸರದ ಆಹಾರ ಸರಪಳಿಯಲ್ಲಿ ತೊಡಕು ಉಂಟಾಗಿ ಪರಿಸರದಲ್ಲಿ ಏರುಪೇರು ಸಂಭವಿಸುವುದರಲ್ಲಿ ಯಾವುದೇ ಸಂದೇಹವಿಲ್ಲ. ಹಾಗಾಗಿ ನಮ್ಮನ್ನೂ ಜೊತೆಗೆ ಪರಿಸರವನ್ನೂ ಸಂರಕ್ಷಿಸಿ. ಇದು ವಿಶ್ವ ಉರಗ (ಸರ್ಪ) ದಿನದ ಮನವಿ.
ಚಿತ್ರ – ಲೇಖನ: ಶಶಿಧರಸ್ವಾಮಿ ಆರ್.ಹಿರೇಮಠ
ಹಾವೇರಿ ಜಿಲ್ಲೆ
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.