ವನದಾಳದ ಮಾತು – ಕಗ್ಗತ್ತಲ ಕಾನನದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡ ಕತೆ

ವನದಾಳದ ಮಾತು – ಕಗ್ಗತ್ತಲ ಕಾನನದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡ ಕತೆ

ಪ್ರಕಾಶ್ ಹೊನ್ನಕೋರೆರವರು ಮೂಲತಃ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನವರು. ಕಳೆದ ಎಂಟು ವರ್ಷಗಳಿಂದ ವಿಶೇಷ ಹುಲಿ ಸಂರಕ್ಷಣಾ ದಳ ಬಂಡೀಪುರ  ಹಾಗು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇಲಾಖಾ ಶ್ವಾನವಾದ ರಾಣಾನನ್ನು ಇವರು ನೋಡಿಕೊಳ್ಳುತ್ತಿದ್ದಾರೆ. ಕಾಡು ಮತ್ತು ವನ್ಯಜೀವಿಗಳ ಬಗ್ಗೆ ಅಪಾರವಾದ ಆಸಕ್ತಿ ಹೊಂದಿದ್ದಾರೆ. ಇವರು ಸಾಕಷ್ಟು ಕಾಡಿನ ಅನುಭವಗಳನ್ನು ಕತೆಯಾಗಿಸಿದ್ದಾರೆ.

ಕಗ್ಗತ್ತಲ ಕಾನನದಲ್ಲಿ ಕಾಡಾನೆಯಿಂದ ತಪ್ಪಿಸಿಕೊಂಡ ಕತೆ

ಸುಮಾರು 4 ವಷ೯ಗಳ ಹಿಂದೆ ನಡೆದ ಘಟನೆ ಇದು, ನಾನು ಆಗ ತಾನೆ ನನ್ನ ವೃತ್ತಿ ತರಬೇತಿಯನ್ನು ಮುಗಿಸಿಕೊಂಡು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಳ್ಳಿ ವಲಯದ ಕಳ್ಳಬೇಟೆ ತಡೆ ಶಿಬಿರದಲ್ಲಿ ಕತ೯ವ್ಯವನ್ನು ಪ್ರಾರಂಭಿಸಿದ್ದೆ. ಆಗ ನನಗೆ ಸುಮಾರು 20 ವಷ೯. ನಾನು ವಾಸ ಮಾಡುವ ಕಳ್ಳ ಬೇಟೆ ತಡೆ ಶಿಬಿರವು ಕಾಡಂಚಿನಲ್ಲಿ ಒಂದು ಸುಂದರವಾದ ಪ್ರಕೃತಿದತ್ತವಾದ ಸ್ಥಳದಲ್ಲಿತ್ತು. ಅದರ ಪಕ್ಕದಲ್ಲಿಯೇ ಲಕ್ಷ್ಮಣತೀರ್ಥ ನದಿ ಹರಿಯುತ್ತಿತ್ತು. ನೀರು ಹರಿಯುವ ಸುಮಧುರವಾದ ಸದ್ದು ನಮ್ಮ ಕ್ಯಾಂಪಿಗೆ ಸದಾ ಕೇಳುತ್ತಿತ್ತು ಆಗಾಗ ಅಲ್ಲಿ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳು ನೀರು ಕುಡಿಯಲು ಬರುತ್ತಿದ್ದವು. ಜೀವನದಲ್ಲಿ ಮೊದಲ ಬಾರಿಗೆ ಜಿಂಕೆ, ಆನೆ, ಕಾಡೆಮ್ಮೆ, ಚಿರತೆ, ನಾಗರಹಾವು ಇನ್ನೂ ಅನೇಕ ಪ್ರಾಣಿಗಳನ್ನು ನೋಡಿದ್ದರಿಂದ ತುಂಬಾ ಖುಷಿಯಾಗಿದ್ದೆ. ಇಂತಹ ಕಾಡಿನಲ್ಲಿ ಕತ೯ವ್ಯ ನಿವ೯ಹಿಸುತ್ತಿರುವ ಖುಷಿ ಒಂದು ಕಡೆಯಾದರೆ ಕಗ್ಗತ್ತಲ ರಾತ್ರಿಯಲ್ಲಿ  ಕಾಡಿನಿಂದ ಭಯಪಡಿಸುವ ವಿವಿಧ ರೀತಿಯ ಶಬ್ಧಗಳು, ದಟ್ಟಡವಿಯಿಂದ ಹೊಮ್ಮುವ ಪಕ್ಷಿಗಳ ಕಲರವ, ದೂರದಲ್ಲೆಲ್ಲೊ ಘೀಳಿಡುವ ಆನೆಗಳು, ಜೋರಾಗಿ ಕೂಗುವ ಜಿಂಕೆಗಳು, ಅಬ್ಬಾ ಇದನ್ನೆಲ್ಲ ನೋಡಿ ಯಾಕಾದ್ರೂ ಬಂದೆನಪ್ಪಾ ಈ ಕಾಡು ಕಾಯೋ ಕೆಲಸಕ್ಕೆ ಅನ್ನೋ ಭಾವ ಮತ್ತೊಂದು ಕಡೆಗೆ.

ನಮ್ಮ ಕಳ್ಳ ತಡೆ ಶಿಬಿರದಲ್ಲಿ ಒಟ್ಟು 8 ಜನ ಸಿಬ್ಬಂದಿಗಳು, ಅದರಲ್ಲಿ ನಾವು 4 ಜನ ಹೊಸದಾಗಿ ಸೇರ್ಪಡೆ ಗೊಂಡವರಾಗಿದ್ದೆವು. (ನಾನು, ಸಂಜಯ್, ಲಕ್ಷ್ಮಿಕಾಂತ್, ಪುನೀತ್ ) ಆ ಕ್ಯಾಂಪಿನಲ್ಲಿ ಮುಖ್ಯವಾಗಿ ಚೆನ್ನಯ್ಯ ಎಂಬ ವ್ಯಕ್ತಿ ಇದ್ದ. ನೋಡಲು ಸ್ವಲ್ಪ ಗಿಡ್ಡ, ತುಂಬಾ ಸೊಗಸಾಗಿ ಶನಿ ಮಹಾತ್ಮೆಯನ್ನು ಹೇಳುತ್ತಿದ್ದ ಹಾಗೂ ಜಾನಪದ ಹಾಡುಗಳನ್ನು ಹಾಡುತ್ತಿದ್ದ. ಅವನ ಮನೆ ನಮ್ಮ ಕ್ಯಾಂಪಿನಿಂದ ಸ್ವಲ್ಪ ದೂರದಲ್ಲೇ ಇತ್ತು. ಇದಲ್ಲದೆ ಬಸಯ್ಯ ಎಂಬ ವ್ಯಕ್ತಿ  ಸಮೀಪದ ನಗರದಿಂದ ವಾಚರ್ ಕೆಲಸಕ್ಕೆ ನೇಮಕವಾಗಿ ಬಂದಿದ್ದ. ಇವನಿಗೆ ಕಾಡಿನ ಅನುಭವ ಸ್ವಲ್ಪ ಕಡಿಮೆ ಇತ್ತು, ಇನ್ನೊಬ್ಬ ಕುಶಾಲ ಅಂತ ಇದ್ದ, ಯಾವಾಗಲೂ ಒಂದು ರೀತಿಯ ನಶೆಯಲ್ಲಿ ಇರುತ್ತಿದ್ದ. ಚೆನ್ನಯ್ಯ ಮತ್ತು ಕುಶಾಲ ಇಬ್ಬರೂ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ಅವರಿಬ್ಬರಿಗೂ ಮತ್ತು ಕಾಡಿನ ಬಗ್ಗೆ ಅಪಾರವಾದ ಅನುಭವ ಇತ್ತು. ಇವರಿಬ್ಬರ ಜೊತೆ ಯಾವಾಗಬೇಕಾದರೂ ಕಾಡು ಸುತ್ತಬಹುದಾಗಿತ್ತು, ಆದ್ದರಿಂದ ನಾನು ಯಾವಾಗಲೂ ಇವರ ಜೊತೆ ಸ್ವಲ್ಪ ಸಲಿಗೆಯಿಂದಲೇ ಇದ್ದೆ. ಇದೆ  ಕ್ಯಾಂಪಿನಲ್ಲಿ ಗಾರ್ಡ್ ಆಗಿ ಮಂಜು ಅಂತ ನಮ್ಮ ಸೀನಿಯರ್  ಒಬ್ಬರು ಕೆಲಸ ಮಾಡುತ್ತಿದ್ದರು. ಇನ್ನು ನನ್ನ ಜೊತೆ ಸಂಜಯ್, ಲಕ್ಷ್ಮಿಕಾಂತ್, ಪುನೀತ್  ಇದ್ದರು. ಮುಂಜಾನೆ ಇಂದ ಸಂಜೆವರೆಗೂ ಕಾಡು ಸುತ್ತುವುದೇ ನಮ್ಮ ಕೆಲಸ. ಕಾಡಲ್ಲಿ ಇರುವ ಜೇನು, ಗೆಡ್ಡೆ ತಿಂದೇ ಎಷ್ಟೋ ಸಲ ಹೊಟ್ಟೆತುಂಬಿಸಿ ಕೊಂಡಿದ್ದೇವೆ. ಆಮೇಲೆ ವಾರದಲ್ಲಿ 3 ದಿನ ರಾತ್ರಿ ಡ್ಯೂಟಿ  ಮಾಡಬೇಕಿತ್ತು. ನಾವೆಲ್ಲ ಸೇರಿ  ಅನುಕೂಲಕ್ಕಾಗಿ ಎರಡು ಗುಂಪಾಗಿದ್ದೆವು  ಒಂದುದಿನ ನನ್ನ ಡ್ಯೂಟಿ ಇದ್ದರೆ, ಇನ್ನೊಂದು ದಿನ ಬೇರೆಯವರದು.

ಹೀಗೆ ರಾತ್ರಿ ಕೆಲಸ ಮಾಡುವುದರ ಉದ್ದೇಶ  ರಾತ್ರಿ ಹೊತ್ತು ಆನೆಗಳು ಕಾಡಿನಿಂದ ಹೊಲಗಳಿಗೆ ಬಂದು ಫಸಲನ್ನು ಹಾಳು ಮಾಡುವುದನ್ನು ತಡೆಗಟ್ಟುವುದಾಗಿತ್ತು. ನಮ್ಮ ರಾತ್ರಿ ಕೆಲಸ ಆರಂಭ ಆಗೋದು ಸುಮಾರು  8 ಗಂಟೆ ಇಂದ ಬೆಳಗಿನ ಜಾವ 4 ಗಂಟೆವರೆಗೂ. ಈ ಸಮಯದಲ್ಲಿ ಯಾವುದೇ ಕಾಡಾನೆಗಳು ಹೊಲಗಳಿಗೆ ಬರುವುದನ್ನು ಎಷ್ಟೋ ರಾತ್ರಿ ತಡೆಗಟ್ಟುತ್ತಿದ್ದೆವು  ಹೀಗೆ ಕಳ್ಳ ತಡೆ ಶಿಬಿರದಿಂದ ಕೆಲಸ ಮುಗಿಸಿಕೊಂಡು ಬರುವಾಗ ನಡೆದ ಘಟನೆಯೇ ಕಗ್ಗತ್ತಲೇ ಕಾಡಿನೊಳಗೆ ಕಾಡಾನೆಯಿಂದ ತಪ್ಪಿಸಿಕೊಂಡ ಕಥೆ.

ಎಲ್ಲ ದಿನದ ಹಾಗೆ ಅದು ಒಂದು ದಿನ, ಆದರೆ ಆವತ್ತು ರಾತ್ರಿ ನಡೆದ  ಘಟನೆ ನನ್ನ ಮೇಲೆ  ತೀವ್ರ ಪರಿಣಾಮ ಬೀರುತ್ತೆ ಅಂದುಕೊಂಡಿರಲಿಲ್ಲ. ಬೆಳಿಗ್ಗೆಯಿಂದ ಸಂಜೆಯವರೆಗೂ ಕಾಡನ್ನು ಸುತ್ತಿ ವಾಪಸ್ ಕ್ಯಾಂಪಿಗೆ  ಬರುವ ಹೊತ್ತಿಗೆ ಸುಮಾರು ಸಂಜೆ 4 ಗಂಟೆ ಆಗಿತ್ತು ಅನಿಸುತ್ತದೆ. ಅದೇನೋ ಖುಷಿಯಲ್ಲಿ ನಮ್ಮ ಚೆನ್ನಯ್ಯ  ಹಾಡನ್ನು ಹಾಡುತ್ತ ನಮಗೆ ಬ್ಲ್ಯಾಕ್ ಟೀ ಮಾಡಿ ಕೊಟ್ಟ. ನಾವೆಲ್ಲರೂ ಜೊತೆಯಾಗಿ ಟೀ ಕುಡಿದು ಆ ದಿನ ಕಾಡಲ್ಲಿ ಕಂಡ ಪ್ರಾಣಿ, ಪಕ್ಷಿಗಳ ಬಗ್ಗೆ ಮಾತನಾಡುತ್ತಾ ಇದ್ದೆವು. ಅದೇ ವೇಳೆಗೆ ಇವತ್ತು ರಾತ್ರಿ ಡ್ಯೂಟಿ ಯಾರದ್ದಿದೆ ಅಂತ ವಿಚಾರ ಮಾಡಿದಾಗ ನಮ್ಮ ತಂಡದ್ದು ರಾತ್ರಿಪಾಳಿ ಎಂದು ಗೊತ್ತಾಯಿತು. ಅದರಲ್ಲಿ ನಾನು, ಮಂಜು, ಬಸಯ್ಯ, ಚೆನ್ನಯ್ಯ ಮತ್ತು ಸಂಜು ಇದ್ದೆವು. ಆವತ್ತು ನಾವು ಆ ಕ್ಯಾಂಪಲ್ಲಿ ಇರೋವರೆಗೂ ಸಂಜೆ 5 ಗಂಟೆಗೆ ಕ್ರಿಕೆಟ್ ಆಡೋ ಒಂದು ಅಭ್ಯಾಸ ಇತ್ತು, ಎಲ್ಲರೂ ಸೇರಿ ಕ್ರಿಕೆಟ್ ಆಡುದ್ವಿ. ಕ್ರಿಕೆಟ್ ಆಡಿ ಬಸವಳಿದಿದ್ದ ನಾವು ಸ್ವಲ್ಪ ವಿಶ್ರಾಂತಿ ತಗೆದುಕೊಳ್ಳುತ್ತಾ ಹಾಗೆ ಹರಟೆ ಹೊಡಿಯುತ್ತ ಕುಳಿತುಕೊಂಡೆವು. ಅನಂತರ ಸುಮಾರು 7 ಗಂಟೆ ವೇಳೆಗೆ ಅಡುಗೆ ಮಾಡೋಕೆ ಶುರುಮಾಡದೆವು. ಅಡುಗೆ ಮಾಡೋವಾಗ ನಮ್ಮ್ ಕೆಲ್ಸ ಅಂದ್ರೆ ಚೆನ್ನಯ್ಯ ಮತ್ತು ಬಸಯ್ಯನಿಗೆ ಅಡುಗೆ ಮಾಡಲು ಸಹಾಯ ಮಾಡೋದು. ಅಡುಗೆ ಮುಗಿಯುವ ಹೊತ್ತಿಗೆ 7 ಗಂಟೆ 45 ನಿಮಿಷ ಆಗಿತ್ತು. ಆಮೇಲೆ ನಾವೆಲ್ಲ ಊಟ ಮಾಡಿ ಸುಮಾರು 8 ಗಂಟೆಗೆ ರಾತ್ರಿ ಕೆಲಸಕ್ಕೆ ಹೋಗಲು ಅಣಿಯಾದೆವು.

8.30 ರ ಸಮಯದಲ್ಲಿ ರಾತ್ರಿ ಪಾಳಿಯವರಾದ ನಾವು ಐದು ಜನ ರಾತ್ರಿ ಕೆಲಸಕ್ಕೆ ಬಳಸುವ ಟಾರ್ಚ್, ಬಂದೂಕು ಮತ್ತು ಪಟಾಕಿಗಳನ್ನು ತಗೆದುಕೊಂಡು ಎಲ್ಲರೂ ಕಾಡಂಚಿನ ಸುತ್ತಲೂ ತುಂಬಾ ಹುಷಾರಾಗಿ ನಡಿಯುತ್ತಾ ಸಾಗಿದ್ವಿ. ಇಲ್ಲಿ ಇನ್ನೊಂದು ವಿಷಯ ಹೇಳಲು ಇಷ್ಟ ಪಡ್ತೀನಿ, ನಾವು ಕೆಲ್ಸ ಮಾಡ್ತಾ ಇರೋದು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇದು ತುಂಬಾ ಕಾಡಾನೆಗಳು, ಚಿರತೆಗಳು, ಹುಲಿಗಳು, ಕರಡಿಗಳು, ಹಾವುಗಳು ವಾಸ ಮಾಡುವ ಪ್ರದೇಶ.

ನಾವು ಕೆಲ್ಸ ಮಾಡೋ ಸಮಯದಲ್ಲಿ ಯಾವ ಕಡೆಯಿಂದ ಯಾವ ಪ್ರಾಣಿಗಳು ಬರುತ್ತವೆ ಅನ್ನೋದು ನಮಗೆ ಗೊತ್ತಿರುವುದಿಲ್ಲ. ನಾವು ಕೆಲ್ಸ ಮುಗಿಸಿಕೊಂಡು ವಾಪಸ್ ಕ್ಯಾಂಪಿಗೆ ಹೋಗುತ್ತೇವೆ ಅನ್ನೋದು ಖಾತರಿ ಇರುವುದಿಲ್ಲ.  ಅದಲ್ಲದೆ ನಾವು ಕೆಲ್ಸ ಮಾಡೋದು  ಕಾಲ್ನಡಿಗೆಯಲ್ಲಿ ಅನ್ನೋದನ್ನ ಮರೆಯಬಾರದು. ಹೀಗೆ ಸುಮಾರು 4 ಕಿ. ಮೀ ನಡೀತಾ ಬರುತ್ತಿರಬೇಕಾದರೆ ಕಾಡಿನ ಮತ್ತೊಂದು ಚಿತ್ರಣ ನಮಗೆ ಕಾಣುತ್ತಿತ್ತು.

ಹಗಲಿನಲ್ಲಿ ಕಾಡು ತುಂಬಾ ಚೆನ್ನಾಗಿ ಹಸಿರಿನಿಂದ ಕಂಗೊಳಿಸುತ್ತ ಕಾಡು ಪ್ರಾಣಿಗಳನ್ನು ತನ್ನ ಆಭರಣಗಳಂತೆ ತೊಟ್ಟು ಮದ್ವೆ ಹುಡುಗಿ ಹಾಗೆ ಕಂಡ್ರೆ, ಅದೇ ರಾತ್ರಿ ಎತ್ತರದ ಮರಗಳು ಗಾಳಿಗೆ ಸೊಂಯ್ ಎಂದು ಶಬ್ಧ ಮಾಡುತ್ತ ಗಿಡದ ಮೇಲಿರುವ ಹುಳುಗಳು ಕಿರ್ ಕಿರ್ ಅಂತ ತಮ್ಮದೇ ನಾದ ಮಾಡುವುದನ್ನು ಕೇಳಿದ್ರೆ ಬೆಚ್ಚಿ ಬೀಳುವುದು ಒಂದೇ ಬಾಕಿ, ಇನ್ನು ಪಕ್ಷಿಗಳಂತೂ ಯಾರೋ ಸಾವನಪ್ಪಿದಾಗ ನುಡಿಸುವ ಶೋಕ ಗೀತೆಯಂತೆ ತಮ್ಮದೇ ಶಬ್ಧವನ್ನು ಮಾಡುತ್ತಿರುತ್ತವೆ, ಅದೆಲ್ಲೋ ದೂರದಲ್ಲಿ ಕಾಡು ನಾಯಿಗಳು ಜಗಳವಾಡುತ್ತ ಕರ್ಣ ಕರ್ಕಷವಾಗಿ ಅರಚುತ್ತಿರುತ್ತವೆ. ಬಿದಿರುಗಳ ಮೆಳೆಗಳಿಂದ ದೊಪ್ಪನೆ ಹಾದು ಹೋಗುವ ಗಾಳಿ ಯಾವ್ದೋ ರಾಕ್ಷಸ ತನ್ನ ಮಡದಿಯನ್ನು ಓಲೈಸಲು ಮಾಡುವ ನೃತ್ಯದಂತೆ ಕೇಳುತ್ತೆ. ನಾನಿಲ್ಲಿ ನಿಮಗೆ ಕಾಡಿನ ಬಗ್ಗೆ ವಿವರಿಸಬಹುದೆ ಹೊರತು ಅದರ ಕರಾಳತೆಯ ಬಗ್ಗೆ ಹೇಳೋಕೆ ಆಗಲ್ಲ. ಅದನ್ನ ನೀವು ಅನುಭವಿಸಿದಾಗ ಮಾತ್ರವೇ ನಿಮಗೆ ತಿಳಿಯುವುದು. ಹೀಗೆ ಇದೆಲ್ಲವನ್ನು ಅವಲೋಕಿಸುತ್ತ ಮುಂದೆ ಸಾಗ್ತಾ ಇರಬೇಕಾದ್ರೆ ತುಂಬಾ ಕತ್ತಲು  ಆವರಿಸಿತ್ತು. ಅಮಾವಾಸ್ಯೆ ಮುಗಿದು ಮೂರು ದಿನ ಆಗಿತ್ತು ಎಲ್ಲಿ ನೋಡಿದರೂ ಬರಿ ಕತ್ತಲು. ಮುಂದೆ ಚೆನ್ನಯ್ಯ ಮಾತ್ರ ಯಾವುದನ್ನು ಲೆಕ್ಕಿಸದೆ ಬ್ಯಾಟರಿಯ ಬೆಳಕಿನಲ್ಲಿ ಮುಂದೆ ಮುಂದೆ ಹೋಗ್ತಾ ಇದ್ದ. ನಾವು ಮಾತ್ರ ಅವನ ಬೆಂಬಲಿಗರಂತೆ ಹಿಂದೆ ನಡೀತಾ ಇದ್ವಿ. ಚೆನ್ನಯ್ಯ ಬಿಡೋ ಬ್ಯಾಟರಿಯ ಬೆಳಕಿಗೆ ಜಿಂಕೆಗಳ ಕಣ್ಣುಗಳು ಮೈಸೂರು ಅರಮನೆಗೆ ಮಾಡಿರುವ ವಿದ್ಯುತ್ ದೀಪದ ವ್ಯವಸ್ಥೆ ಹಾಗೆ ಕಾಣ್ತಾ ಇತ್ತು. ಹಾಗೆ ಸುಮಾರು ಒಂದು 2 ಕಿಲೋ ಮೀಟರ್ ದಾಟಿರ್ಬಹುದು, ಕಾಡಿನ ಬದಿಯಿಂದ ಚಂಗನೆ ಒಂದು ಜಿಂಕೆ ನಮ್ಮಿಂದ ಮುಂದೆ ಹಾರಿ ಹೋಯಿತು, ಅಷ್ಟಕ್ಕೇ ನನ್ನ ಜೀವ ಬಾಯಿಗೆ ಬಂದಿತ್ತು. ಯಾಕಂದ್ರೆ ಆ ನಡು ರಾತ್ರಿ  ಕಗ್ಗತ್ತಲ ಕಾಡಲ್ಲಿ ನಮ್ಮ ಸಹಾಯಕ್ಕೆ ಒಂದು ನರ ಪಿಳ್ಳೆಯೂ ಇರ್ಲಿಲ್ಲ. ನಾವೆಲ್ಲೋ ದಾರಿ ತಪ್ಪಿ ಯಮಲೋಕದ ದಾರಿಯಲ್ಲಿ ಇದ್ದೇವೆ ಅನ್ನೋ ಹಾಗೆ ಭಯ ಹುಟ್ಟಿಸುವ ಯೋಚನೆಗಳು ನಮ್ಮ ಮನಸ್ಸನ್ನ ಹಾದು ಹೋಗುತ್ತಿದ್ದವು. ಅಷ್ಟೊತ್ತಿಗಾಗಲೇ ನನ್ನ ಪುಣ್ಯಕ್ಕೆ ನಾವು ಕಾಡಾನೆಗಳು ಹಾದು ಹೋಗುವ ದಾರಿಯಲ್ಲಿ ಬೆಂಕಿ ಹಾಕಿ ಕಾಯುವ ಸ್ಥಳ ಸಮೀಪಿಸ್ತಾ ಇದ್ದೀವಿ ಎಂದು ಚೆನ್ನಯ್ಯ ಹೇಳಿದ. ಆಮೇಲೆಯೇ ನನಗೆ ಸ್ವಲ್ಪ ಧೈರ್ಯ ಬಂದಿದ್ದು. ಅಷ್ಟೊತ್ತಿಗಾಗಲೇ ಸಮಯ ನಡುರಾತ್ರಿ 12 ಗಂಟೆ.

ಮುಂದುವರಿಯುವುದು…

ಚಿತ್ರ – ಲೇಖನ: ಪ್ರಕಾಶ್ ಹೊನ್ನಕೋರೆ
ಬಂಡೀಪುರ ರಾಷ್ಟ್ರೀಯ ಉದ್ಯಾಯನವನ


Print Friendly, PDF & Email
Spread the love
error: Content is protected.