ಇವುಗಳ ಬಾಳಿಗೆ ಕತ್ತಲಾಯಿತು-ಬೆಳಕು

ಇವುಗಳ ಬಾಳಿಗೆ ಕತ್ತಲಾಯಿತು-ಬೆಳಕು

ಎತ್ತ ನೋಡಿದರೂ ಕತ್ತಲು. ನಾನು ಯಾರು? ನಾನೆಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ ಎಂಬುದೊಂದೂ ಅರಿವಿಲ್ಲದಷ್ಟು ಗಾಢ ನಿದ್ರೆ. ಅಂತಹ ಸಮಾಧಿ ಸ್ಥಿತಿಯಲ್ಲಿದ್ದ ನನ್ನನ್ನು ಒಂದು ಕರ್ಕಶ ದನಿ ಎಚ್ಚರಿಸಿತು. ಕಣ್ಣು ಬಿಟ್ಟೊಡನೆ ಸದೃಢ ಕಾಯ ಪೋಲಿಸ್ ನ ಮುಖ! ಕಾರಿನ ಕಿಟಕಿಯಿಂದ ಅಂಥ ನಿದ್ದೆಯ ಮಂಪರಿನಲ್ಲೂ ಸ್ಪಷ್ಟವಾಗಿ ಕಾಣಿಸಿತು. ಒಂದು ಕ್ಷಣ ಈ ಮೇಲೆ ಹೇಳಿದ ಪ್ರಶ್ನೆಗಳೆಲ್ಲವೂ ಒಂದೆರೆಡು ಬಾರಿ ನನ್ನ ತಲೆಯಲ್ಲಿ ತಿರುಗಾಡಿದುವು. ಅಷ್ಟರಲ್ಲಿ… ನಾನು ಮತ್ತು ನನ್ನ ಸ್ನೇಹಿತರಾದ ಹರಿ, ಶಿವಾಟಿ ಮತ್ತು ಅಶೋಕ ಕೇರಳ ಪ್ರವಾಸಕ್ಕೆ ಬಂದುದು, ದಿನವೆಲ್ಲ ತಿರುಗಿ ಸುಸ್ತಾಗಿ, ಮುಂದೆ ಸಾಗಿ ತಂಗಬೇಕಿದ್ದ  ಮುನ್ನಾರ್ ಮಾರ್ಗಕ್ಕೆ ಅಡ್ಡಲಾಗಿರುವ ಬೆಟ್ಟದ ಘಾಟ್ ಸೆಕ್ಷನನ್ನು ಸುರಕ್ಷಿತವಾಗಿ ತಲುಪಲು ಸ್ವಲ್ಪ ವಿರಾಮ ಬೇಕೇ ಬೇಕು ಎಂದು ನಿರ್ಧರಿಸಿ. ಕಾರಿನ  ಸ್ಟೇರಿಂಗನ್ನು ಎಡಕ್ಕೆ ತಿರುಗಿಸಿ ಮಲಗಿದ್ದು, ಸಿನೆಮಾದಲ್ಲಿ ತೋರಿಸುವ ಒಂದು ಪುಟ್ಟ ಫ್ಲಾಶ್ ಬ್ಯಾಕ್ ಫಾಸ್ಟ್ ಫಾರ್ವರ್ಡ್ ನಲ್ಲಿ ತೋರಿಸಿದಂತೆ ಗೋಚರಿಸಿತು. ನಂತರ ಪೋಲಿಸ್ ನನಗರಿವಾಗದ ಮಲಯಾಳಂ ಭಾಷೆಯಲ್ಲಿನ ಪ್ರಶ್ನೆಗಳಿಗೆ, ನನ್ನ ಪಕ್ಕದಲ್ಲೇ ಇದ್ದ ಶಿವಾಟಿ ನನಗೆ ಸಹಾಯ ಮಾಡುವ ತವಕದಲ್ಲಿದ್ದರೂ ಭಾಷೆ ಸಹಕರಿಸದ ಕಾರಣ ಸುಮ್ಮನಾದ. ಆದರೂ ನನಗೆ ಸರಿಯಾಗಿ ಬಾರದ ತಮಿಳಿನಲ್ಲಿ ಅವರ ಮಲಯಾಳಂ ಪ್ರಶ್ನೆಗಳಿಗೆ ಉತ್ತರಿಸಿದೆ. ಕ್ಷಣಗಳಲ್ಲಿ  ಕಾರಿನಲ್ಲಿನ ಪರ್ವತಾರೋಹಣಕ್ಕೆ ಮುಖಕ್ಕೆರಡು ನೀರೊಡೆದು ಸಿದ್ಧವಾದೆ. ಹಾಗೆ ಪರ್ವತಾರೋಹಣ ಶುರುವಾಯಿತು. ಸ್ವಲ್ಪ ಮೇಲೆ ಮೇಲೆ ಏರಿದಂತೆಲ್ಲ ನಾವು ತಿರುಗಿ ಬಂದಿದ್ದ ನಗರದ ಬೀದಿಗಳನ್ನು ಬೀದಿ ದೀಪಗಳು ಸಿಂಗರಿಸಿದ್ದು ನಯನಮನೋಹರವಾಗಿ ಕಾಣಿಸುತ್ತಿತ್ತು. ಇದನ್ನು ಕಣ್ಣಿನಲ್ಲಿ ಸವಿದ ಬಳಿಕ, ಇದನ್ನು ಹೇಗಾದರೂ ನಾವು ತಂದಿದ್ದ ಕ್ಯಾಮೆರಾದಲ್ಲಿ ಸೆರೆ ಹಿಡಿಯಬೇಕೆಂದು ತೆಗೆದಾಗಲೇ ತಿಳಿದದ್ದು, ಅದರಲ್ಲಿ ತುಂಬಿಸಿದ್ದ ಶಕ್ತಿಯೆಲ್ಲಾ ನಮ್ಮ ಫೋಟೋಗಳ ಹುಚ್ಚಿಗೆ ಶರಣಾಗಿ ಮುಗಿದಿತ್ತೆಂದು. ಆದರು ಬಿಡದೆ ಕೆಲ ದಿನಗಳ ಹಿಂದೆಯಷ್ಟೇ ಖರೀದಿಸಿದ್ದ ನನ್ನ ಮೊದಲ ಸ್ಮಾರ್ಟ್ ಫೋನನ್ನು ಹೊರ ತೆಗೆದು ಫೋಟೋ ಕ್ಲಿಕ್ಕಿಸಿದೆ.

ಈ ಹಿಂದೆ ನೀವು ನೋಡಿದ ವಿ ವಿ ಅಂಕಣದಂತೆಯೇ ಈ ಘಟನೆಗೂ ಈ ಮಾಸದ ವಿಷಯಕ್ಕೂ ಸಂಬಂಧ ಇರುವುದು, ನಮ್ಮ ನಗರಗಳ ಕತ್ತಲೆಯನ್ನು ಕೊಲ್ಲುವ ರಾತ್ರಿಯ ಸೂರ್ಯನಾದ ವಿದ್ಯುತ್ ಬೆಳಕಿನಲ್ಲಿ. ನಮ್ಮ ಸೂರ್ಯಾಸ್ತದ ಚಟುವಟಿಕೆಗಳಿಗೆ ನೆರವಾಗಿರುವ, ಬೀದಿಗಳಲ್ಲಿ ರಾರಾಜಿಸುವ ಈ ಕೃತಕ ಬೆಳಕು ನಮಗೆ ಎಷ್ಟೋ ಉಪಾಯಕಾರಿ. ಆದರೆ ಕೆಲ ಖಗೋಳಶಾಸ್ತ್ರದ ರುಚಿಯನ್ನು ಸವಿದ, ರಾತ್ರಿಯೆಲ್ಲ ಕಣ್ಣೊರೆಸಿ ನಕ್ಷತ್ರ, ಗ್ರಹ, ಕಾಮೆಟ್ ಎಂದು ಹೌಹಾರಿ ನೋಡುವ ಮಹನೀಯರಲ್ಲಿ ಈ ಮಾತುಗಳನ್ನಾಡಿದರೆ ಅವರ ಮುಂದಿನ ಮಾತಿನ ಖಾರವನ್ನು ನನ್ನ ಸ್ನೇಹಿತರಾದ ಅಮರ್ ಶರ್ಮಾ ರಿಂದ ರುಚಿಸಿದ್ದೇನೆ. ಅವರ ಈ ನಗರಗಳ ರಾತ್ರಿ ಬೆಳಗನ್ನು ‘ಬೆಳಕಿನ ಮಲಿನ’ (Light Pollution) ಎಂದೇ ಕರೆಯುತ್ತಾರೆ. ಕೇವಲ ಇವರಿಗಷ್ಟೇ ಅಲ್ಲದೆ ಕೆಲವು ಸಸ್ಯ ಪ್ರಭೇದಳಿಗೂ, ಈ ರಾತ್ರಿಯ ಅತಿಯಾದ ಬೆಳಕು ಅವುಗಳ ಸಂತತಿ ನಾಶಕ್ಕೆ ಕಾರಣವಾಗಬಹುದು ಎನ್ನುತ್ತಿದೆ ಸಂಶೋಧನೆ.

ಸ್ವಿಟ್ಜರ್ಲ್ಯಾಂಡ್ ನ  ಒಂದು ಭಾಗದಲ್ಲಿ ನಡೆಸಿದ ಈ ಸಂಶೋಧನೆಯಲ್ಲಿ ತಿಳಿದು ಬಂದುದು, ನಗರ ಬೀದಿ ದೀಪಗಳ ಬೆಳಕಿನಿಂದಾಗಿ ಅಲ್ಲಿನ ಒಂದು ಜಾತಿಯ ಸಸ್ಯವಾದ ಕ್ಯಾಬ್ಬೇಜ್ ತಿಸಲ್ ಎಂಬ ಗಿಡದ ಹೂ ಗಳಿಗೆ, ಕತ್ತಲಲ್ಲಿರುವ ಅದೇ ಜಾತಿಯ ಗಿಡಗಳಿಗಿಂತ ಶೇಖಡ 62 ರಷ್ಟು ಕಡಿಮೆ ಪರಾಗಸ್ಪರ್ಶಕ ಕೀಟಗಳು ಬರುತ್ತಿದ್ದವು ಎಂಬುದು.!

ಇದನ್ನು ಸಂಶೋಧಕರು, ಯಾವಾಗಲು ಜನಜಂಗುಳಿಯಲ್ಲಿ ಮುಳುಗಿ ತೇಲುತ್ತಿರುವ, ರಾತ್ರಿಯೂ ಬೆಳಗಿನಂತೆ ತೋರುವ ನಗರದ ಆಸುಪಾಸಿನಲ್ಲಿ ಮಾಡಿ ತಿಳಿಯಲು ಸಾಧ್ಯವಿಲ್ಲ. ಆದ್ದರಿಂದಲೇ ಇ  ಮತ್ತು ಅವರ ಸ್ನೇಹಿತರು, ನಗರ ಪ್ರದೇಶದಿಂದ ದೂರ ಸರಿದು ಹೆಚ್ಚು ಕಡಿಮೆ ಬೆಳಕೇ ಇಲ್ಲದ ಸ್ಥಳವನ್ನು ಗುರುತಿಸಿ ಅಭ್ಯಸಿಸಬೇಕಿತ್ತು. ಅಂತಹ ಸ್ಥಳವೇನೋ ಸಿಕ್ಕಿತು. ಆದರೆ ಅಲ್ಲಿಗೆ ವಿದ್ಯುತ್ ಮತ್ತು ದಾರಿದೀಪಗಳನ್ನು ತರುವುದೇ ನಿಜವಾದ ಸಾಹಸವಾಗಿ ಪರಿಣಮಿಸಿತ್ತು. ಜನರೇಟರ್ ನನ್ನು ಹೊತ್ತೊಯ್ಯಬಹುದಿತ್ತು ಎನಿಸಿದರೂ, ಅದರ ಜಾಗಟೆ ದನಿಗೆ ಅಲ್ಲಿನ ಕೀಟಗಳು ಕಾಲು ಕೀಳುವುದಂತು ಖಂಡಿತ. ಇವುಗಳನ್ನರಿತಇ ಅಲ್ಲೇ ತುಸು ದೂರದಿಂದ ಒದಗುತ್ತಿದ್ದ ಜಲವಿದ್ಯುತ್ ನನ್ನು ಉದ್ದದ ಕೇಬಲ್ ಗಳನ್ನೂ ಹಾಕಿಸಿ ಅವರ ಅಧ್ಯಯನದ ಜಾಗಕ್ಕೆ ಕೊನೆಗೂ ತಂದರು. ನಂತರ ನಗರದ ಹಾಗೆಯೇ ಅಲ್ಲಿಯೂ ಬೀದಿ ದೀಪಗಳ ಸಾಲನ್ನು ಹಾಕಿಸಿ ತಮ್ಮ ತನಿಖೆಯನ್ನು ಪ್ರಾರಂಭಿಸಿದರು.

ದೀಪದ ಬೆಳಕಿನಲ್ಲಿ ಕ್ಯಾಬ್ಬೇಜ್ ಗಿಡಕ್ಕೆ ಭೇಟಿ ನೀಡುತ್ತಿದ್ದ ಕೀಟಗಳನ್ನು ಗುರುತಿಸಿ ಪಟ್ಟಿ ಮಾಡಿಕೊಂಡರು. ಹಾಗೆಯೇ ಕತ್ತಲಿನಲ್ಲಿಯೂ ಸಹ ಪಟ್ಟಿ ಮಾಡಬೇಕಿತ್ತು. ಆದರೆ ಆ ಕೆಲಸವೂ ಅಷ್ಟು ಸುಲಭವಾಗಿರಲಿಲ್ಲ ಎನ್ನುತ್ತಾರೆ. ಕೀಟಗಳನ್ನು ಗುರುತಿಸಲು ಬೆಳಕು ಬೇಕೇ ಬೇಕು. ಆದರೆ ಬೆಳಕು ಕಂಡೊಡನೆ ಓಡುವ ಕೀಟಗಳು. ಸರಿ ಹೀಗಾದರೆ ಆಗುವುದಿಲ್ಲ ಎಂದು ರಾತ್ರಿ ವೀಕ್ಷಣಾ ಕನ್ನಡಕ (Night Vision Goggles) ಗಳನ್ನು ತರಿಸಿ ಹೇಗೋ ಮಾಡಿ ಪರಾಗ ಸ್ಪರ್ಶಕಗಳನ್ನು ಕಂಡು ಹಿಡಿದು ಪಟ್ಟಿ ಮಾಡಿದರು. ಇವೆರೆಡು ಸನ್ನಿವೇಶಗಳಲ್ಲಿದ್ದ ಕೀಟಗಳ ಸಂಖ್ಯೆಗಳನ್ನು ಹೋಲಿಸಿದರೆ ಅವರಿಗೆ ಆಶ್ಚರ್ಯ ಕಾದಿತ್ತು. ಕತ್ತಲಲ್ಲಿ ಗಿಡದ ಹೂವಿನ ಮೇಲೆ ಬಂದು ಎರಗುತ್ತಿದ್ದ ಕೀಟಗಳ ಸಂಖ್ಯೆಗಿಂತ, ಬೆಳಕಿನಲ್ಲಿ.. ಕೀಟಗಳ ಸಂಖ್ಯೆ ಅರ್ಧಕ್ಕಿಂತ ಹೆಚ್ಚು ಕ್ಷೀಣಿಸಿತ್ತು. ಈ ಕೀಟಗಳು ಕೇವಲ ಕೀಟಗಳಲ್ಲದೆ ಆ ಸಸ್ಯಜಾತಿಗೆ ವಂಶವೃದ್ಧಕಗಳೇ ಎಂದರೆ ತಪ್ಪಾಗಲಾರದು. 

ಸಸ್ಯಗಳ ಪರಾಗಸ್ಪರ್ಶ ಕ್ರಿಯೆಯಲ್ಲಿ 10ಕ್ಕೆ 8 ಭಾಗ ಕೆಲಸ ಕೇವಲ ಕೀಟಗಳೇ ಮಾಡಿರುತ್ತವೆ. ಕಡಿಮೆ ಪರಾಗಸ್ಪರ್ಶಕಗಳು ಎಂದರೆ, ಕಡಿಮೆ ಬೀಜೋತ್ಪತ್ತಿ ಎಂದೇ ನೇರ ಅರ್ಥ. ಹಾಗಾದಲ್ಲಿ ಕಡಿಮೆ ಬೀಜ ಉತ್ಪತ್ತಿಯಾದರೆ ಮುಂದಿನ ಅವುಗಳ ಪೀಳಿಗೆಯಲ್ಲಿ ಆ ಸಸ್ಯಗಳ ಸಂಖ್ಯೆ ಕ್ಷೀಣಿಸುತ್ತದೆ ಎಂಬುದು ಅರ್ಥವಾಗದ ವಿಷಯವೇನಲ್ಲ. ಆದರೆ ಸಾಮಾನ್ಯವಾಗಿ ನಮ್ಮ ಗಮನಕ್ಕೆ ಬಾರದ ಸಂಗತಿಯೆಂದರೆ, ಸೂರ್ಯೋದಯದ ನಂತರವೂ ಸಹ ಆ ಗಿಡದ ಆಶ್ರಯ ಬೇಡಿ ಬರುವ ಹಲವಾರು ಕೀಟಗಳು, ಆಹಾರಕ್ಕಾಗಿ ಬರುವ ಸಣ್ಣ ಪ್ರಾಣಿಗಳೂ ಇರುತ್ತವೆ. ಹೀಗೆ ಅವುಗಳ ಸಂಖ್ಯೆ ಕ್ಷೀಣಿಸಿದಷ್ಟು ಇಂತಹ ಜೀವಿಗಳ ಮೇಲೆ ಪರಿಣಾಮ ಬೀರುವುದು ಖಂಡಿತ.

ಇಷ್ಟೆಲ್ಲಾ ಆದಮೇಲೂ ನಿಮ್ಮನ್ನು ಒಂದು ಪ್ರಶ್ನೆ ಕಾಡಬಹುದು. ಆ ಪ್ರಶ್ನೆಯನ್ನೂ ನಾನೇ ಹೇಳುತ್ತೇನೆ. ಈ ಮೇಲೆ ಹೇಳಿದ ಸಸ್ಯಗಳು ಏಕೆ ರಾತ್ರಿಯ ಹೊತ್ತೇ ಅರಳಬೇಕು? ಆ ಹೊತ್ತಿನಲ್ಲೇ ಏಕೆ ಪರಾಗಸ್ಪರ್ಶ ಆಗಬೇಕು? ನಾವು ಹೇರಳವಾಗಿ ನೋಡುವ ಎಲ್ಲ ಸಸ್ಯಗಳಂತೆ ಏಕೆ ಬೆಳಗಿನ ಸಮಯದಲ್ಲಿ ಈ ಕೆಲಸಗಳನ್ನೆಲ್ಲ ಜರುಗಿಸಬಾರದು? ಎಂಬುದು ಅಲ್ಲವೇ…

ಹೌದು.. ಈ ಪ್ರಶ್ನೆಗಳು ಸಹಜ. ಉತ್ತರವೂ ನಿಮ್ಮಿಂದಲೇ ಬರುತ್ತದೆ ನೋಡಿ. ನೀವೇ ನೋಡಿದ ಹಾಗೆ ಬೆಳಕಿರುವ ಸಮಯದಲ್ಲಿ ಅದೆಷ್ಟೋ ಜಾತಿಯ, ಬಣ್ಣದ, ಸುವಾಸನೆಯ, ಆಕಾರಗಳ ಹೂ ಬಿಡುವ ಲಕ್ಷಾಂತರ ಸಸ್ಯಗಳನ್ನು ಗಮನಿಸಿದ್ದೀರಿ. ಹೀಗಿರುವಾಗ ಪರಾಗಸ್ಪರ್ಶ ಕ್ರಿಯೆಗೆ ಕೀಟಗಳ ಆಕರ್ಷಿಸಲು ನಡೆಯುವ ಈ ಸಸ್ಯಗಳ ಹೂ ಜಾತ್ರೆಗೆ ಮರುಳಾಗಿ ಬರುವ ಕೀಟಗಳು ಅದೆಷ್ಟೋ. ಇಂತಹ ಸಸ್ಯ ಪ್ರಭೇದಗಳ ನಡುವೆ ಸ್ಪರ್ಧೆಯೇ ಏಳುತ್ತದೆ. ಹೀಗಿರುವಾಗ ಕೆಲ ಸಸ್ಯ ವರ್ಗಗಳು ಈ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ. ಅಂತಹ ಎಷ್ಟೋ ಗಿಡಗಳು ರಾತ್ರಿಯ ಸಮಯವನ್ನು ರಾತ್ರಿಯ ಹೊತ್ತು ಚಟುವಟಿಕೆಯಿಂದಿರುವ ಕೀಟಗಳನ್ನು ಆಕರ್ಷಿಸಿ ಪರಾಗಸ್ಪರ್ಶ ಕ್ರಿಯೆಗೆ ತೊಡಗಿಸಿಕೊಳ್ಳುತ್ತವೆ. ಉದಾಹರಣೆಗೆ ಬ್ರಹ್ಮ ಕಮಲವನ್ನು ನೋಡಿದ್ದೀರಲ್ಲವೇ? ಅವುಗಳು ಅರಳುವುದು ಕೇವಲ ರಾತ್ರಿಯಲ್ಲಿ ಮಾತ್ರ. ಇಂತಹ ಅದೆಷ್ಟೋ ಜಾತಿಯ ಸಸ್ಯಗಳು ಈ ವಿಧಾನವನ್ನು ತಮ್ಮಲ್ಲಿ ರೂಢಿಸಿಕೊಂಡಿವೆ.

ಹೀಗೆ ಎಷ್ಟೋ ಸವಾಲುಗಳನ್ನು ಎದುರಿಸಿ ತಮ್ಮದೇ ಆದ ಚಾಕಚಕ್ಯತೆಯಿಂದ ತಮ್ಮ ಬದುಕನ್ನು ಕತ್ತಲಲ್ಲಿ ಬೆಳೆಸಿ ಮುಂದಿನ ಪೀಳಿಗೆಯಾಗಿ ಹೊರಬರುತ್ತಿರುವ ಹಾಗು ಜೀವ ವಿಕಾಸದಲ್ಲಿ ನಮ್ಮ ಮುತ್ತಜ್ಜರಿಗಿಂತಲೂ ಕೋಟ್ಯಾಂತರ ವರ್ಷಗಳ ಹಿಂದಿನ ಈ ಹಿರಿಯರನ್ನು ನಿನ್ನೆ ಮೊನ್ನೆಯಷ್ಟೇ ಕಣ್ಣು ಬಿಡುತ್ತಿರುವ ನಾವು, ನಮ್ಮ ಚೇಷ್ಟೆ-ಸುಲಭ-ಆರಾಮದಾಯಕ ಜೀವನಕ್ಕಾಗಿ ನಮಗರಿಯದೆ ಇಂತಹ ಹಿರಿಯರ ಬದುಕನ್ನು ಬಾವಿಗೆ ತಳ್ಳುವುದು ಎಷ್ಟು ನ್ಯಾಯ?

ಹಾಗಾದರೆ ರಾತ್ರಿಯ ಬೆಳಕನ್ನೇ ನಾವು ಬಳಸಬಾರದೇ? ಹಾಗೇನಿಲ್ಲ, ನಮ್ಮ ಅವಶ್ಯಕತೆಗಿಂತಲೂ ಹೆಚ್ಚು ಬಳಸಿದ ಎಲ್ಲಾ ಸವಲತ್ತುಗಳೂ ಸಹ ನಮಗರಿಯದ ರೀತಿಯಲ್ಲಿ ನಮ್ಮ ಸುತ್ತಲ ಜೀವ ವೈವಿಧ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ ಎಂಬುದಕ್ಕೆ ಇವೆಲ್ಲ ಎಚ್ಚರಿಕೆ ಘಂಟೆಗಳು. ನಮ್ಮಲ್ಲಿರುವ ಈ ಯೋಚನಾ, ಸಂಶೋಧನಾ, ಸಂವೀಕ್ಷಣಾ ಮುಂತಾದ ಹತ್ತು ಹಲವಾರು ಗುಣಗಳನ್ನು ನಮ್ಮ ಮತ್ತು ನಮ್ಮ ಸುತ್ತಲಿನ ಜೀವಗಳಿಗೆ ಉಪಯೋಗ ವಾಗುವಂತೆಯೇ ಬದುಕೋಣ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Spread the love
error: Content is protected.