ಕೇವಲ ಘಂಟೆಗಳಲ್ಲಿ ಕೊಳೆಯಲಿರುವ ಪ್ಲಾಸ್ಟಿಕ್!
ಊಟವಿಲ್ಲದ ಒಂದು ದಿನವನ್ನು ಸಾಮಾನ್ಯವಾಗಿ ಎಲ್ಲರೂ ಕಳೆದಿರುತ್ತಾರೆ. ನನ್ನಂಥಹ ತಿಂಡಿಪೋತರಿಗೂ ಇದು ಕೆಲ ಅನಿವಾರ್ಯ ಸನ್ನಿವೇಶಗಳಲ್ಲಿ ಸಾಧ್ಯವಾಗಿದೆ. ಹಾಗಾಗಿ ಉಳಿದವರಿಗೆ ಇದು ಸಾಧ್ಯವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ ಬಿಡಿ. ಕೆಲವರು ತಿಂಗಳಿಗೊಮ್ಮೆ ಏಕಾದಶಿಯ ಉಪವಾಸ ಮಾಡುವುದು ಸರ್ವೇ ಸಾಮಾನ್ಯವಾದರೂ, ಅಕಸ್ಮಾತ್ ತಮ್ಮ ಅತೀ ಪ್ರಿಯವಾದ ಆಹಾರ ಆ ಸಮಯದಲ್ಲಿ ಕಣ್ಣ ಮುಂದಿದ್ದರೂ ತಿನ್ನದ ಸ್ವಾಮಿನಿಷ್ಠೆ ಕಂಡು ನನಗಂತೂ ಬೆರಗಾಗುತ್ತದೆ. ಅಷ್ಟು ಪ್ರಿಯವಾದ ಆಹಾರ ಮುಂದಿದ್ದರೂ ತಿನ್ನದಿರುವಂತಹ ಕರ್ಮ ಏತಕ್ಕೆ? ಎಂಬುದು ನನ್ನ ವಾದ. ದಾಸರೇ ಹೇಳುವ ಹಾಗೆ
ಎಲ್ಲಾರು ಮಾಡುವುದು ಹೊಟ್ಟೆಗಾಗಿ! ಅಲ್ಲವೇ?
ಪ್ಲಾಸ್ಟಿಕ್ ಇಲ್ಲದ ಒಂದು ದಿನವನ್ನು ಪಾಲಿಸುವುದು ಪಕ್ಕಕ್ಕಿಡಿ, ಪ್ಲಾಸ್ಟಿಕ್ ಇಲ್ಲದ ಒಂದು ದಿನವನ್ನು ಊಹಿಸಿಕೊಳ್ಳಲೂ ಸಹ ಗಾಬರಿಯಾಗುವ ದುಸ್ಥಿತಿಯಲ್ಲಿ ನಾವಿದ್ದೇವೆ. ಅದೇನು ಕಷ್ಟವಿಲ್ಲ ಬಿಡಿ ಎಂದು ಲೇವಡಿ ಮಾಡುವುದಾದರೆ, ಪ್ಲಾಸ್ಟಿಕ್ ಇಲ್ಲದ ಒಂದು ದಿನವನ್ನು ನೋಡಿಯೇ ಬಿಡೋಣ ಬನ್ನಿ.
ಪ್ಲಾಸ್ಟಿಕ್ ಇಲ್ಲದ ಒಂದು ದಿನದಲ್ಲಿ , ಬೆಳಿಗ್ಗೆ ಏಳುವ ಸಮಯ ನೋಡಲು ಗಡಿಯಾರ ಇರದು, ಹಲ್ಲುಜ್ಜುವ ಬ್ರಶ್ ಇರದು, ಪೇಸ್ಟ್ ಇರದು, ಸ್ನಾನ ಮಾಡಲಿಕ್ಕೆ ಬಳಸುವ ನಲ್ಲಿಯಿಂದ ಹಿಡಿದು ಬಕೆಟ್, ಜಗ್, ಕೆಲವರು ಬಳಸುವ ಊಟದ ಪ್ಲೇಟ್, ಧರಿಸುವ ಕೆಲವು ಬಗೆಯ ಬಟ್ಟೆ, ಬೆಲ್ಟ್, ಕೈ ಗಡಿಯಾರ, ಕೆಲಸಕ್ಕೆ ತೆರಳಲು ಬಳಸುವ ವಾಹನಗಳು, ಕೆಲಸದಲ್ಲಿ ಬಳಸುವ ಕಂಪ್ಯೂಟರ್, ಪೆನ್, ಮೌಸ್, ಚಾರ್ಜರ್, ಸೆಲ್ ಫೋನ್ ಗಳಿಂದ ಹಿಡಿದು ಕೊನೆಗೆ ನಾವು ನಿದ್ದೆಗೆ ಜಾರುವ ಮುನ್ನ ಬಳಸುವ ಗುಡ್ ನೈಟ್ ನ ವರೆಗೆ ಎಲ್ಲಾ ಪ್ಲಾಸ್ಟಿಕ್ ಮಯ. ಒಪ್ಪಿಕೊಳ್ಳಿ, ಎಷ್ಟೋ ಬಾರಿ ನೀವು ಕಂಡ ಕನಸಿನಲ್ಲೂ ಪ್ಲಾಸ್ಟಿಕ್ ಬಳಸಿರುತ್ತೀರಿ. ಅಲ್ಲವೇ? ನಮ್ಮ ಅತಿಯಾದ ಈ ಪ್ಲಾಸ್ಟಿಕ್ ಬಳಕೆಯಿಂದಲೇ 2016ರಲ್ಲಿ 700 ಕೋಟಿ ಜನಸಂಖ್ಯೆಯ ಮನುಷ್ಯರು ಸುಮಾರು 320 ಮಿಲಿಯನ್ ಟನ್ ನಷ್ಟು ಪ್ಲಾಸ್ಟಿಕ್ ಅನ್ನು ಉತ್ಪಾದಿಸಿದ್ದೇವೆ. ಇದು 2034ರಲ್ಲಿ ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ, ಎನ್ನುತ್ತಿದೆ ನಮ್ಮದೇ ಸಂಶೋಧನೆ. ಇದರಲ್ಲಿ ಸುಮಾರು 60-90% ಪ್ಲಾಸ್ಟಿಕ್, ಸಮುದ್ರ ಸೇರುತ್ತಿದ್ದು ಪ್ರತೀ ವರ್ಷಕ್ಕೆ ಅಲ್ಲಿನ 1 ಲಕ್ಷ ಸಸ್ತನಿಗಳ ಮತ್ತು ಆಮೆಗಳ ಹಾಗೂ 10 ಲಕ್ಷ ಸಮುದ್ರ ಪಕ್ಷಿಗಳ ಮಾರಣಹೋಮಕ್ಕೆ ನಾವೇ ನೇರ ಕಾರಣ. ಅಲ್ಲದೆ ಉಳಿದ ಪ್ಲಾಸ್ಟಿಕ್ ಗಳು ಬಿಸಿಲು, ಮಳೆ ಮತ್ತು ಗಾಳಿಗೆ ಸಣ್ಣ ಸಣ್ಣ ಕಣಗಳಾಗಿ ಸಮುದ್ರದಲ್ಲಿನ ನೀರಿಗೆ ಮೈಕ್ರೊ ಪ್ಲಾಸ್ಟಿಕ್ ನ ರೂಪದಲ್ಲಿ ಸೇರುತ್ತಿವೆ. ಅಂತಹ ಪ್ಲಾಸ್ಟಿಕ್ ಅನ್ನು ಆಹಾರವಾಗಿ ಭಾವಿಸಿ ತಿನ್ನುವ ಎಷ್ಟೋ ಮೀನುಗಳು ಸಾಯುತ್ತಿವೆ, ಹಾಗೂ ನಮ್ಮ ಆಹಾರ ಜಾಲದೊಳಕ್ಕೆ ನುಸುಳಿ, ‘ಮಾಡಿದ್ದುಣ್ಣೋ ಮಾರಾಯ’ ಎಂಬ ಗಾದೆಯ ಕಹಿ ನಿದರ್ಶನವಾಗುತ್ತಿದೆ.
ಚಂದ್ರಯಾನ, ಮಂಗಳಯಾನಗಳಂತಹ ಸ್ವಂತವಾಗಿ ತಯಾರಿಸಿದ ಉಪಗ್ರಹಗಳ ಆಕಾಶಯಾನಕ್ಕೆ ಕಳಿಸುವ ತಂತ್ರಜ್ಞಾನ ಹೊಂದಿರುವ ನಮಗೆ, ಈ ಪ್ಲಾಸ್ಟಿಕ್ ಸಮಸ್ಯೆಯನ್ನು ಪರಿಹರಿಸಲು ಯಾವುದೂ ತಂತ್ರಜ್ಞಾನವಿಲ್ಲವೇ? ಎಂದು ಪ್ರಶ್ನಿಸುವವರಿಗೇ ಈ ಮಾಸದ ವಿ ವಿ ಅಂಕಣ. ಹೊಸ ಸಂಶೋಧನೆಯ ಅನುಸಾರ ಕೆಲವು ಕಾರ್ಬನ್ ನ್ಯಾನೊ ಟ್ಯೂಬ್ ಗಳ ಸಹಾಯದಿಂದ ಕೋಟ್ಯಾಂತರ ಜೀವಿಗಳಿಗೆ ಮಾರಕವಾಗಿರುವ ಹಾಗೂ ಬೇರೆ ಪ್ಲಾಸ್ಟಿಕ್ ಗಳಂತೆ ಸಂಗ್ರಹಿಸಲಾಗದ ಮೈಕ್ರೋ ಪ್ಲಾಸ್ಟಿಕ್ ಗಳನ್ನು
ಕೇವಲ ಕೆಲವು ಘಂಟೆಗಳಲ್ಲಿ, ಸ್ವಾಭಾವಿಕವಾಗಿ ಕೊಳೆಯುವ ವಸ್ತುವಾಗಿ ಪರಿವರ್ತಿಸುತ್ತವೆಯಂತೆ.
ನಮಗೆಲ್ಲಾ ತಿಳಿದಿರುವ ಸಾಮಾನ್ಯ ಜ್ಞಾನದ ಅನುಸಾರ, ನಾವು ಬಳಸುವ ಪ್ಲಾಸ್ಟಿಕ್ ವಸ್ತುಗಳು ಸ್ವಾಭಾವಿಕವಾಗಿ ಪ್ರಕೃತಿಗೆ ಸೇರಲು ಕೆಲವು ದಶಕಗಳಿಂದ ಹಿಡಿದು, ಕೆಲವು ಸಾವಿರ ವರುಷಗಳ ಸಮಯಾವಕಾಶ ಬೇಕಾಗುತ್ತದೆ. ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಾವು ಕಲುಷಿತ ನೀರನ್ನು ಶುದ್ಧೀಕರಿಸಿದರೂ ಅಲ್ಲಿನ ಮೈಕ್ರೋ ಪ್ಲಾಸ್ಟಿಕ್ ಅನ್ನು ಶೋಧಿಸುವುದು ಅಸಾಧ್ಯ.ಹಾಗಾಗಿ ಅದನ್ನು ಸ್ವಾಭಾವಿಕವಾಗಿ ಕೊಳೆಯಲು ಬಿಟ್ಟು ಸಾವಿರಾರು ವರ್ಷ ಕಾಯುವುದಕ್ಕಿಂತ ಅದನ್ನು ವೇಗವಾಗಿ ಕೊಳೆಯುವ ವಸ್ತುವಾಗಿ ಮಾಡಿದರೆ ಎಷ್ಟು ಪರಿಣಾಮಕಾರಿ ಅಲ್ಲವೇ? ಇದಕ್ಕಾಗಿ ನಮ್ಮ ಈ ಹೊಸ ಸಂಶೋಧನೆಯ ಸಹಾಯ ಪಡೆದು ನಮ್ಮ ನೀರಿನ ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿದರೆ ಸಾಕು. ಈ ಹೊಸ ಸಂಶೋಧನೆಯಲ್ಲಿ ಸಾರಜನಕ ಲೇಪಿತ ಕಾರ್ಬನ್ ನ್ಯಾನೋ ಟ್ಯೂಬ್ (Nano Tube)ಗಳನ್ನು ಬಳಸಲಾಗಿದ್ದು, ಇವುಗಳು ಪೆರಾಕ್ಸಿಮೋನೋಸಲ್ಫೇಟ್ (Peroxymonosulfate) ಗಳ ಜೊತೆಗೆ ಸೇರಿ ಪ್ರತಿಕ್ರಿಯಾತ್ಮಕ ಆಮ್ಲಜನಕದ ರಾಸಾಯನಿಕ ಗುಂಪುಗಳನ್ನು ಬಿಡುಗಡೆ ಮಾಡುತ್ತವೆ. ಅವುಗಳು ಮೈಕ್ರೋ ಪ್ಲಾಸ್ಟಿಕ್ ನ ಜೊತೆಗೆ ಪ್ರತಿಕ್ರಿಯಿಸಿ ಕೊಳೆಯುವ ಆಲ್ಡಿಹೈಡ್ ಮತ್ತು ಕಾರ್ಬೋಕ್ಸಿಲಿಕ್ ಆಮ್ಲವಸ್ತುಗಳಾಗಿ ಕತ್ತರಿಸುತ್ತವೆ.
ಈ ಕ್ರಿಯೆಯನ್ನು 120 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಮಾಡಿದಾಗ ಕೇವಲ 8 ಘಂಟೆಗಳಲ್ಲಿ ನೀರಿನಲ್ಲಿದ್ದ ಒಟ್ಟು ಮೈಕ್ರೋ ಪ್ಲಾಸ್ಟಿಕ್ ನಲ್ಲಿ 30-50% ಪ್ಲಾಸ್ಟಿಕ್ ಅನ್ನು ಕೊಳೆಯುವ ವಸ್ತುಗಳಾಗಿ ವಿಭಜಿಸಿದ್ದವು ಎನ್ನುತ್ತಾರೆ, ಸಂಶೋಧನಾಕಾರ ಜಿಯಾನ್ ಕ್ಯಾಂಗ್.
ಇಷ್ಟಾದರೆ ಸಾಲದು ಮೈಕ್ರೋ ಪ್ಲಾಸ್ಟಿಕ್ ಅನ್ನು ಕೊಳೆಯುವ ಆಲ್ಡಿಹೈಡ್ ಮತ್ತು ಕಾರ್ಬೋಕ್ಸಿಲಿಕ್ ಆಮ್ಲ ವಸ್ತುಗಳಾಗಿ ವಿಭಜಿಸಿದ ನಂತರ ಅವುಗಳು ನೀರಿನಲ್ಲೇ ಇರುವ ಬೇರೆ ಜೀವರಾಶಿಗೆ ಹಾನಿಕಾರಕವಾಗಿರಬಹುದು ಅಲ್ಲವೇ? ಅದನ್ನು ಪರೀಕ್ಷಿಸಲು ಎರಡು ವಾರಗಳ ಕಾಲ ಇಂತಹ ವಸ್ತುಗಳಿದ್ದ ನೀರನ್ನು ಪರೀಕ್ಷಿಸಿದಾಗ ನೀರಿನಲ್ಲಿದ್ದ ಪಾಚಿ ಸಸ್ಯಕ್ಕೆ ಯಾವುದೇ ಹಾನಿಯಾಗಿರಲಿಲ್ಲ. ಹಾಗೆಂದು ಈ ಸಂಶೋಧನೆ 100% ಸುರಕ್ಷಿತ ಎಂದು ಹೇಳಲಾಗುವುದಿಲ್ಲ. ಏಕೆಂದರೆ ನೀರಿನಲ್ಲಿ ಇನ್ನೂ ಸಹಸ್ರಾರು ಜೀವಿಗಳ ಆವಾಸವಿದೆ; ಅವುಗಳ ಸುರಕ್ಷತೆಯ ಬಗ್ಗೆ ತಿಳಿಯಲು ಇನ್ನೂ ಹೆಚ್ಚಿನ ಪ್ರಯೋಗಗಳ ಅವಶ್ಯಕತೆ ಇದೆ. ಹಾಗೂ ನಿಮಿಷಗಳಲ್ಲಿ ಸಾವಿರಾರು ಲೀಟರ್ ಶುದ್ಧೀಕರಿಸುವ ನೀರಿನ ಘಟಕಗಳಲ್ಲಿ ನೀರನ್ನು ಅಷ್ಟು ಬೇಗ 120 ಡಿಗ್ರಿ ಸೆಲ್ಷಿಯಸ್ ಗೆ ತರುವುದೂ ಸಹ ಸವಾಲಾಗುತ್ತದೆ. ಇವುಗಳ ಕಡೆ ಸ್ವಲ್ಪ ಗಮನಹರಿಸಿ ಈ ಸಂಶೋಧನೆ ಕಾರ್ಯರೂಪಕ್ಕೆ ಬಂದರೆ, ನಮ್ಮ ಸುತ್ತಲಿನ ಜೀವ ವೈವಿಧ್ಯಕ್ಕೆ ನಾವು ಮಾಡುತ್ತಿರುವ ಹಾನಿಯಲ್ಲಿ ಕಿಂಚಿತ್ತಾದರೂ ಕಡಿಮೆ ಮಾಡಿ ಪರಿಸರಕ್ಕೆ ನಾವು ಮಾಡಿರುವ ಹಾನಿಯ ಸ್ವಲ್ಪ ಪಾಲು ಕ್ಷೀಣಿಸಿ ನಮ್ಮ ಪಾಪದ ರಾಶಿಯಲ್ಲಿ ಕೆಲವು ಮೈಕ್ರಾನ್ ಪಾಪವನ್ನು ಪ್ರಾಯಶ್ಚಿತ್ತ ಮಾಡಿಕೊಂಡ ಹಾಗೆಯೇ ಸರಿ.
ಇಲ್ಲಿ ನಾವು ಮುಖ್ಯವಾಗಿ ಯೋಚಿಸಬೇಕಾದ ಇನ್ನೊಂದು ಸಂಗತಿ ಇದೆ. ಈಗ ಇರುವ ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆಗೊಳಿಸುವ ಹಾದಿಯಲ್ಲಿ ಈ ಸಂಶೋಧನೆ ನೆರವಾಗುವ ಸಾಧ್ಯತೆ ಇರಬಹುದು. ಆದರೆ ನಮ್ಮ ಪ್ಲಾಸ್ಟಿಕ್ ಬಳಕೆಯ ನಾವು ಪ್ರತಿಯೊಬ್ಬ ಪ್ರಜೆಯೂ ಕಡಿಮೆ ಮಾಡದೆ ಹೋದರೆ ಇಂತಹ ಸಾವಿರ ಸಂಶೋಧನೆಗಳ ಮಾಡಿಯಾದರೂ ಫಲವೇನು? ಸಾಕು. ಸಮಸ್ಯೆಗಳ ಅವಲೋಕನೆ ಬೇಕಾದಷ್ಟು ಮಾಡಿದ್ದಾಯಿತು. ಈಗ ಸಮಸ್ಯೆಗಳ ಪರಿಹಾರವನ್ನು ಯೋಚಿಸಿ ಕಾರ್ಯರೂಪಕ್ಕೆ ತರುವ ಸಮಯ.
ಹಾಗೆಂದು ನಾವೇನು ಹೋಗಿ ಪ್ಲಾಸ್ಟಿಕ್ ತಯಾರಿಸುವ ಕಾರ್ಖಾನೆಯ ಮುಂದೆ ಧರಣಿ ಕೂರಬೇಕಾಗಿಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ನಾವು ಮಾಡಿಕೊಂಡಿರುವ ಎಷ್ಟೊ ಅನಾವಶ್ಯಕ ಪ್ಲಾಸ್ಟಿಕ್ ಅನ್ನು ಒಂದೊಂದೇ ತ್ಯಜಿಸುತ್ತಾ ಬಂದರೆ ಸಾಕು.
ಇಂದೇ ಸಂಕಲ್ಪ ಮಾಡಿ ಇಂದಿನಿಂದ ಈ ವಿ ವಿ ಅಂಕಣ ಓದಿದ ನಂತರವಾದರೂ ನಾನು ಈ ಅನಾವಶ್ಯಕ ಪ್ಲಾಸ್ಟಿಕ್ ಅನ್ನು ತ್ಯಜಿಸಿ ಅದಕ್ಕೆ ಸ್ವಾಭಾವಿಕ ವಸ್ತುವನ್ನು ಪರ್ಯಾಯ ಹುಡುಕಿ, ನನ್ನ ಜೀವನಪರ್ಯಂತ ಉಪಯೋಗಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತೇನೆ ಎಂದು. ಹಾಗೆಯೇ ಪ್ರತೀ ವರುಷ ನಿಮ್ಮ ಹುಟ್ಟು ಹಬ್ಬದ ಸುಸಂದರ್ಭದಲ್ಲಿ ಇನ್ನೊಂದು ಅನಾವಶ್ಯಕ ಪ್ಲಾಸ್ಟಿಕ್ ಅನ್ನು ತ್ಯಜಿಸಿ. ಹೀಗೆ ಮಾಡುತ್ತಾ ಹೋದರೆ ನಮ್ಮ ಹುಟ್ಟು ಹಬ್ಬಕ್ಕೆ ಒಂದು ಹೊಸ ಅರ್ಥ ಸಿಗಬಹುದು. ನನಗೆ ತಿಳಿದಿದೆ, ಇಂತಹ ಇನ್ನೂ ಹತ್ತು ಹಲವು ಪರಿಹಾರಗಳು ನಿಮ್ಮ ತಲೆಯಲ್ಲಿ ಚಿಗುರುತ್ತಿವೆ. ನಿಮ್ಮ ಪರಿಹಾರಗಳನ್ನು ನಮಗೂ ತಿಳಿಸಿ ನಾವು ಇನ್ನೂ ಹಲವರಿಗೆ ಅದನ್ನು ಹಂಚುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
–ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.