ಹೂವಿಗೆ ಬರ ಬಂದರೆ ಎಲೆಗೆ ಬರೆ ಹಾಕಿದಂತೆ!
ಶೆಟ್ಟರ ಮನೆ ಎಂದರೆ ಎಲ್ಲಿಲ್ಲದ ಭಯ. ಸಂಜೆ ವೇಳೆ ಅಲ್ಲಿಗೆ ಹೋಗೋಣ ಎಂದರೆ ಸಾಕು ಮುಗಿಯಿತು. ನಾನು ಬರೋದಿಲ್ಲ ಎಂದು ಕಿರುಚಾಡಿ ಎಳೆದಾಡುವ ಸಮಯ ಬಂದಿದೆ ಎಂದರ್ಥ. ಅಯ್ಯೋ ಅದರಲ್ಲೇನಿದೆ ಹೋಗಿ ಬರುವುದು ತಾನೆ. ಎಂದು ನೀವೂ ಅಂದುಕೊಳ್ಳುತ್ತಿರಬಹುದು. ಆದರೆ ಅವರೇನು ಅಲ್ಲಿಗೆ ಕರೆಸಿ ನಮಗೆ ಊಟ ಹಾಕಿಸುತ್ತಿರಲಿಲ್ಲ. ಬದಲಿಗೆ ಗಂಧದ ಕಡ್ಡಿಯಿಂದ ಚುಟಿಕೆ ಇಡುತ್ತಿದ್ದರು. ಹೌದು ನಮ್ಮ ಚಿಕ್ಕ ವಯಸ್ಸಿನಲ್ಲಿ ಜ್ವರ ಬಂದರೆ, ಸಂಜೆಯಾಗುತ್ತಿದ್ದಂತೆ ಶೆಟ್ಟರ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿ ಅವರು ಸ್ವಲ್ಪ ಯವುದೋ ಮಂತ್ರ ಹೇಳಿ, ಸಾಂಬ್ರಾಣಿ ಕಡ್ಡಿ ತೆಗೆದುಕೊಂಡು ಮೊದಲು ಕಣ್ಣಿನ ರೆಪ್ಪೆಗಳ ಮೇಲಿರುವ ಕೂದಲುಗಳನ್ನು ಸ್ವಲ್ಪ ಸುಡುತ್ತಿದ್ದರು. ಆಗಲೇ ನಮಗೆ ಎಲ್ಲಿಲ್ಲದ ಭಯ, ಈ ತಾತ ಅಪ್ಪಿ ತಪ್ಪಿ ಕಡ್ಡಿಯನ್ನು ಕಣ್ಣಿನ ಬಳಿ ತಂದು ಬಿಟ್ಟರೆ ಏನು ಗತಿ? ಆ ಉರಿಯುತ್ತಿದ್ದ ಕಡ್ಡಿಯ ಶಾಖ ಕಣ್ಣಿಗೆ ತಾಗುತ್ತಿದ್ದುದು ಇನ್ನೂ ನನಗೆ ನೆನಪಿದೆ. ನಂತರ ಕ್ಲೈಮ್ಯಾಕ್ಸ್ ಅಲ್ಲಿ ತಲೆ ಮೇಲೆ ಅದೇ ಕೆಂಪಗಿನ ಕಡ್ಡಿಯಿಂದ ಒಂದು ಚುಟಿಕೆ ಇಡುತ್ತಿದ್ದರು.
ಚಿಕ್ಕವಯಸ್ಸಿನಲ್ಲಿ ನಮಗೆ ಅದು ತಾಳಲಾರದ ನೋವು. ಆದರೆ ಅಲ್ಲಿಗೆ ಈ ತಾತನ ಮಾಟ ಮಂತ್ರಗಳೆಲ್ಲಾ ಮುಗಿದವು ಎಂಬ ಸಮಾಧಾನ. ನಂತರ ದಾರಿಯ ಅಂಗಡಿಯಲ್ಲಿ ನಮಗೆ ಬೇಕಾದ ತಿಂಡಿಯೂ ಸಿಗುತ್ತಿತ್ತು. ಅದಿರಲಿ ಬಿಡಿ ಆಶ್ಚರ್ಯ ಎಂದರೆ ರಾತ್ರಿ ಮಲಗಿ ಬೆಳಿಗ್ಗೆ ಏಳುವಷ್ಟರಲ್ಲಿ ಜ್ವರ ಕಡಿಮೆ ಆಗಿರುತ್ತಿತ್ತು ಗೊತ್ತೇ. ಅದು ಹೇಗೆ ಸಾಧ್ಯ ಎಂದೆಲ್ಲ ಕೇಳಬೇಡಿ. ನನಗೂ ಗೊತ್ತಿಲ್ಲ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ! ಎಂಬ ಗಾದೆಯಂತೆ ಕಂಡರೂ ಇಲ್ಲಿ ಕೆಲಸ ಆಗಿದೆ. ನೀವು ತಲೆ ನೋವಿಗೆ ಮಾತ್ರೆಯನ್ನು ಬಾಯಲ್ಲಿ ನುಂಗಿ ಹೊಟ್ಟೆ ಸೇರಿದರೂ ತಲೆ ನೋವು ಮಾಯವಾಗುವುದಿಲ್ಲವೇ? ಇದೂ ಹಾಗೆ.
ಶೀರ್ಷಿಕೆಯಲ್ಲೂ ಇದೇ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ! ಗಾದೆಯನ್ನು ಹಾಗೆ ಹೇಳಿದ್ದೀರಲ್ಲವೇ? ನೋಡಿ ಈ ಬಾರಿ ನಾವೇ ಕಂಡುಹಿಡಿದುಬಿಟ್ಟೆವು, ಎಂದು ಬೀಗುತ್ತಿರುವುದು ಓದುಗರಾದ ನಿಮ್ಮ ಮುಖದಲ್ಲಿ ಕಾಣುತ್ತಿದೆ. ಒಳ್ಳೆಯದು, ಹಾಗಾದರೆ ಹಿಂದಿನ ವಿ ವಿ ಅಂಕಣವನ್ನು ಓದಿದ್ದೀರೆಂದು ಅರ್ಥ. ತುಂಬಾ ಒಳ್ಳೆಯದು. ಆದರೆ, ಈ ಹೂವಿಗೆ ಬರ ಬರುವುದೇನು? ಎಲೆಗೆ ಬರೆ ಹಾಕುವುದೇನು? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುಕೊಂಡಿರಬೇಕಲ್ಲಾ… ಬಹುಶಃ ಪೂರ್ತಿ ಲೇಖನ ಓದಿದರೆ ನಿಮಗೆ ಅದರ ಅರ್ಥ ತಿಳಿಯುತ್ತದೆ ಎಂದು ಭಾವಿಸುತ್ತೇನೆ.
ಓಹ್ ಹಾಗಾ… ನಾವು ರೆಡಿ! ಎಂದು ರೆಡಿಯಾಗಿಬಿಟ್ಟಿರಾ? ಸರಿ ಹಾಗಾದರೆ ಈ ಮಾಸದ ವಿ ವಿ ಅಂಕಣ ಶುರು ಮಾಡಿಬಿಡೋಣ. ಮೊದಲಿಗೆ, ಈ ಹೂವಿಗೆ ಬರ ಬರುವುದೇನು? ಬೇರೆಲ್ಲಾ ಬರಗಳಂತೆ ಇಲ್ಲಿಯೂ ಸಹ ಹೂವಿನ ಸಂಖ್ಯೆ ಕಡಿಮೆಯಾಗುವುದು ಎಂದರ್ಥ. ಹೂವುಗಳ ಸಂಖ್ಯೆ ಕಡಿಮೆಯಾದರೇನು? ಯಾರಿಗೆ ನಷ್ಟ? ಹೇಳಿ ನೋಡೋಣ. ಹೂಗಳ ಮೇಲೆ ಪಕ್ಷಿ, ಚಿಟ್ಟೆ, ಪತಂಗ ಹೀಗೆ ಹತ್ತು ಹಲವಾರು ಜೀವಿಗಳು ಅವಲಂಬಿಸಿದ್ದರೂ, ಅತೀ ಹೆಚ್ಚು ಪರಾಗಸ್ಪರ್ಶ ಮಾಡಿ ಆ ಸಸ್ಯದ ಸಂತತಿಯನ್ನು ಮುಂದುವರೆಸುವಲ್ಲಿ ಮುಖ್ಯ ಪಾತ್ರ ಹೊಂದಿರುವವರು. ನಿಮ್ಮ ತಲೆಯಲ್ಲಿ ಗುಯ್ ಗುಟ್ಟುತ್ತಿರುವ ಅದೇ ದುಂಬಿ(ಜೇನುಹುಳು) ಬೇರೆ ಯಾರೂ ಅಲ್ಲ. ಸರಿ ಹಾಗಾದರೆ ಈ ಎಲೆಗೆ ಬರೆ ಹಾಕುವುದು ಎಂದರೇನು? ಎಂಬುದೇ ನಿಮ್ಮ ಮುಂದಿನ ಪ್ರಶ್ನೆ ಅಲ್ಲವೇ? ಈ ಪ್ರಶ್ನೆಗೆ ಉತ್ತರ ಕೇಳಲು ಕಷ್ಟವಾದರೂ ಅದೇ ಸತ್ಯ. ಹೂ ಬಿಡುವ ಗಿಡಗಳು ಹೂಗಳನ್ನು ಸರಿಯಾದ ಸಮಯದಲ್ಲಿ ಬಿಡದಿದ್ದರೆ ಈ ದುಂಬಿಗಳು ಆ ಗಿಡದ ಎಲೆಯನ್ನು ಕಚ್ಚುತ್ತವೆ/ಚುಚ್ಚುತ್ತವೆಯಂತೆ. ಇದರಿಂದ ಗಿಡಗಳು ಹೂಗಳನ್ನು ಬೇಗ ಬಿಡುತ್ತವೆಯಂತೆ. ಎಂದು ಸಂಶೋಧನೆ ಹೇಳುತ್ತಿದೆ. ಮತ್ತೇ ಅದೇ ಪ್ರಶ್ನೆ… ಅದು ಹೇಗೆ? ಅಲ್ಲವೇ… ಬನ್ನಿ ಆ
ಸಂಶೋಧನೆ ಏನೆಂದು ನೋಡಿಯೇ ಬಿಡೋಣ!
ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವುದು, ಜೇನು ಹುಳುಗಳು ಮಕರಂದಕ್ಕಾಗಿ ಹೂವಿನ ಬಳಿ ಬಂದು ಮಕರಂದ ಹೀರಿ ಜೊತೆಗೆ ಸಸ್ಯಕ್ಕೆ ಬೇಕಾದ ಪರಾಗಸ್ಪರ್ಶವನ್ನೂ ಮಾಡಿ ಹೋಗಿ ತನ್ನ ಗೂಡು ಸೇರುತ್ತದೆ ಎಂದು. ಆದರೆ ನನಗೆ ತಿಳಿಯದ ಹೊಸ ವಿಷಯವೇನೆಂದರೆ ಮಕರಂದದ ಜೊತೆಗೆ ಈ ಜೇನು ಹುಳುಗಳು ಪರಾಗ ಕಣಗಳನ್ನೂ ಹೊತ್ತುಕೊಂಡುಹೋಗಿ ತಮ್ಮ ಮರಿಗಳಿಗೆ ಪ್ರೋಟೀನ್ ಅಗತ್ಯವನ್ನು ಪೂರೈಸಲು ಬಳಸುತ್ತವೆ ಎಂದು.
ಇದಕ್ಕಾಗಿ ಚಳಿಗಾಲ ಶುರುವಾಗುವ ಮುಂಚೆ ಅವುಗಳಿಗೆ ಗಿಡದಲ್ಲಿ ಮೊಗ್ಗುಗಳು ಮೂಡಿ ಅರಳಲೇಬೇಕು. ಇಲ್ಲದಿದ್ದರೆ ಅವುಗಳ ಮುಂದಿನ ಪೀಳಿಗೆಗೇ ಆಪತ್ತು. ಹೀಗಿರುವಾಗ ತಮ್ಮ ಸಂತತಿಯನ್ನು ಆಪತ್ತಿನ ಅಂಚಿಗೆ ತಳ್ಳದೇ ಇರಲು ಅವು ಕಂಡುಕೊಂಡಿರುವ ಮಾರ್ಗ, ಬೇಗ ಹೂ ಬಿಟ್ಟು ಅರಳದ ಗಿಡಗಳ ಎಲೆಗಳನ್ನು ಕಡಿದರೆ ಆ ಗಿಡಗಳ ಹೂ ಬಿಟ್ಟು ಅರಳುವ ಕಾಲ ಕೆಲವು ದಿನಗಳಿಂದ ಹಿಡಿದು ಕೆಲವು ವಾರಗಳು ಬೇಗ ಬರುತ್ತಿದ್ದುದು.
ಸಂಶೋಧನೆ ಇಂತಿದೆ, ವಿಜ್ಞಾನಿಗಳು ಮೊದಲು ಜೇನು ಹುಳುಗಳನ್ನು ಮೂರು ದಿನಗಳ ಕಾಲ ಪರಾಗ ಕಣ ಸಿಗದ ಹಾಗೆ ಪ್ರತ್ಯೇಕಿಸಿದರು. ನಂತರ ಅವುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಒಂದನ್ನು ಹೂ ಬಿಡದ ಟೊಮ್ಯಾಟೋ ಮತ್ತು ಸಾಸಿವೆ ಗಿಡಗಳ ನಡುವೆ ಒಂದು ಮುಚ್ಚಿದ ಜಾಗದಲ್ಲಿ ಬಿಟ್ಟರು. ಆಗ ಅವುಗಳು ಹೆಚ್ಚಾಗಿ ಗಿಡದ ಎಲೆಯನ್ನೇ ಕಚ್ಚುತ್ತಿದ್ದವಂತೆ. ಇನ್ನೊಂದು ಗುಂಪನ್ನು ಹೂ ಬಿಟ್ಟಿರುವ ಸಸ್ಯಗಳ ನಡುವೆ ಬಿಡಲಾಯಿತು. ಅಲ್ಲಿ ಅವುಗಳು ಸಾಮಾನ್ಯವಾಗಿ ಹೂಗಳ ಬಳಿ ಹೋಗಿ ಮಕರಂದ ಹೀರಿ ಜೊತೆಗೆ ತಮಗೆ ಬೇಕಾದ ಪರಾಗ ಕಣಗಳನ್ನೂ ಸಹ ಆರಿಸುತ್ತಿದ್ದವು. ಇದಾದ ಬಳಿಕ ಈ ಎರಡೂ ಗುಂಪುಗಳನ್ನು ಅವುಗಳ ಜಾಗವನ್ನು ಅದಲು ಬದಲು ಮಾಡಿ ನೋಡಿದರು. ಆಗಲೂ ಸಹ ಮುಂಚೆ ಮಕರಂದ ಹೀರುತ್ತಿದ್ದ ದುಂಬಿಗಳು ಈಗ ಎಲೆಗಳನ್ನು ಕಡಿಯುವಲ್ಲಿ ನಿರತವಾದವು. ಹೀಗೆ ಐದರಿಂದ ಹತ್ತು ಬಾರಿ ಕಡಿದ ಟೊಮಾಟೋ ಗಿಡದ ಹೂಗಳು ಸುಮಾರು ಮೂವತ್ತು ದಿನಗಳ ಮುಂಚೆಯೇ ಅರಳಿದವು. ಹಾಗೆ ಸಾಸಿವೆ ಗಿಡದ ಹೂಗಳು ಸುಮಾರು ಹದಿನಾರು ದಿನಗಳ ಮುಂಚೆಯೇ ಅರಳಿದವಂತೆ. ಹಾಗಾದರೆ ಗಿಡಗಳು ಹೂ ಬಿಡದ ಸಮಯದಲ್ಲಿ ಅಥವಾ ಹೂ ಅರಳಿರದ ಸಮಯದಲ್ಲಿ ದುಂಬಿಗಳು ಹೂ ಅರಳುವಿಕೆಯನ್ನು ಪ್ರಚೋದಿಸಲೆಂದೇ ಹೀಗೆ ಮಾಡುತ್ತಿವೆ ಎಂದಲ್ಲವೇ ಅರ್ಥ.
ಹಾಗೇನಿಲ್ಲ ಗಿಡಗಳು ಬೇರೆ ಕಾರಣಗಳಿಗಾಗಿಯೂ ಹೀಗೆ ಬೇಗ ಹೂ ಬಿಡಬಹುದು. ಉದಾಹರಣೆಗೆ ಕ್ಷಾಮದ ಪರಿಸ್ಥಿಯಲ್ಲಿ, ಗಿಡಗಳಿಗೆ ಸ್ಟ್ರೆಸ್ ಆದಾಗ, ಬೇರೆ ಕೀಟಗಳಿಂದ ಆಕ್ರಮಣಕ್ಕೆ ಒಳಗಾದಾಗ. ಹೀಗೆ… ಎಂದು ಕೆಲವರ ವಾದ.
ಅದಕ್ಕಾಗಿಯೇ ಸಂಶೋಧಕರು ಒಂದು ಹೆಜ್ಜೆ ಮುಂದೆ ಹೋಗಿ, ಇದೇ ಪ್ರಯೋಗವನ್ನು ತಮ್ಮ ಕಟ್ಟಡದ ಮೇಲಿನ ಬಯಲು ಪ್ರದೇಶದಲ್ಲಿ ಮಾಡಿದರು. ಈಗ ಅಲ್ಲಿ ಆ ದುಂಬಿಗಳು ಎಲ್ಲಿ ಬೇಕಾದರೂ ಹೋಗಿ ತಮಗೆ ಬೇಕಾದ ಮಕರಂದ ಅಥವಾ ಪರಾಗಕಣ ಸಂಗ್ರಹಿಸಬಹುದಿತ್ತು. ಜೊತೆಗೇ ಬೇರೆ ಕಡೆಯಿಂದಲೂ ಜೇನು ಹುಳುಗಳು ಬಂದು ಅಲ್ಲಿನ ಹೂ ಗಿಡಗಳ ಮಕರಂದ ಹೀರಬಹುದಿತ್ತು. ಆಶ್ಚರ್ಯವೆಂದರೆ ಹೂ ಬಿಡದ ಗಿಡಗಳ ಬಳಿ ಯಾವ ದುಂಬಿ ಬಂದರೂ ಆ ಗಿಡದ ಎಲೆಯನ್ನೇ ಕಡಿಯುತ್ತಿದ್ದವಂತೆ.
ಅದೂ ಸಾಲದು ಎಂಬಂತೆ, ನಾವೇ ದುಂಬಿಗಳ ರೀತಿ ಎಲೆಗಳನ್ನು ಕತ್ತರಿಸಿದರೆ ಏನಾಗಬಹುದು? ನೋಡೋಣ ಎಂದು ಅದನ್ನೂ ಮಾಡಿಬಿಟ್ಟರು. ಸಾಸಿವೆ ಗಿಡದಲ್ಲಿ ಸ್ವಲ್ಪ ಹೂಗಳು ನಿಗದಿತ ಸಮಯಕ್ಕಿಂತ ಬೇಗ ಬಂದಂತೆ ಕಂಡರೂ ಟೊಮ್ಯಾಟೋ ಗಿಡದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಹಾಗಾದರೆ ಮುಂದಿನ ತೀರ್ಮಾನವನ್ನು ನೀವೇ ತೆಗೆದುಕೊಳ್ಳಿ. ಆದರೇ… ನಿಮ್ಮ ಆ ತೀರ್ಮಾನವನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವ ತೀರ್ಮಾನ ಮಾಡದೇ, ನಮಗೂ ತಿಳಿಸುವ ತೀರ್ಮಾನ ಮಾಡಿ ನಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸಿ ಕೊಡಿ.
ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.