CO2 ಉಗುಳುವ ಆರ್ಕಟಿಕ್ ಕಾರ್ಖಾನೆ!
© ಜೈಕುಮಾರ್ ಆರ್.
ಬಿಸಿಲಿನ ತಾಪಕ್ಕೆ ಏನೂ ಕೆಲಸ ಮಾಡದೆ ಇದ್ದರೂ ಬೆವರುವಂಥಹ ವಾತಾವರಣ ರಾಮನಗರದ್ದು. ಅಂತಹುದರಲ್ಲಿ ನಾನು ಸೈಕಲ್ ತುಳಿದು ಕಾಲೇಜಿಗೆ ಹೋಗುತ್ತಿದ್ದೆ. 4 ಕಿ. ಮೀ. ದೂರ, ನನ್ನ ಸಂಗೀತ ಕೇಳುವ ಹವ್ಯಾಸದಿಂದಲೋ ಅಥವಾ ಬೇರೆ ಕಾರ್ಬನ್ ಉಗುಳುವ ವಾಹನಗಳಲ್ಲಿ ಹೋಗಬಾರದೆಂಬ ಧೃಡ ತೀರ್ಮಾನವೋ ತಿಳಿಯದು, ಪ್ರತಿ ದಿನದ ಆ ಸೈಕಲ್ ಸವಾರಿ ಖುಷಿ ಕೊಡುತ್ತಿತ್ತು. ಜೊತೆಗೆ ಅಷ್ಟು ಬೆವರಿದ ಮೇಲೆ ಆಗಲೋ-ಈಗಲೋ ಬೀಸುತ್ತಿದ್ದ ಕೊಂಚ ಗಾಳಿ, ‘ನಿನ್ನ ನಿರ್ಧಾರಕ್ಕೆ ನನ್ನ ಬೆಂಬಲವಿದೆ’ ಎಂದು ಸುತ್ತಲಿನ ಪರಿಸರ ಪಿಸುಗುಡುತ್ತಿದೆ ಎನ್ನುವಂತೆ ನನ್ನ ಬುದ್ಧಿ ಊಹಿಸುತ್ತಿತ್ತು. ಅದಾದ ನಂತರ ಕಾರಣಾಂತರಗಳಿಂದ ಸೈಕಲ್ ಸವಾರಿ ಬದಲಿಗೆ ದ್ವಿತೀಯ ವರ್ಷದಿಂದ ಕಾಲೇಜಿಗೆ ಓಡಾಡಲು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕಡೆಗೆ ಮುಖ ಮಾಡಬೇಕಾಯಿತು. ನನ್ನದೇ ಇಂಗಾಲ ಉಗುಳುವ ವಾಹನ ಇರುವುದಕ್ಕಿಂತ ಈ ಆಯ್ಕೆ ಉತ್ತಮವಾದರೂ ಸ್ವಲ್ಪ ಹಿಂಜರಿಕೆ ಇತ್ತು. ಹೀಗೆ ವಾತಾವರಣಕ್ಕೆ ಇಂಗಾಲ ಉಗುಳುವ ಕೆಲಸಗಳಿಗೆ ಎಷ್ಟೋ ವಿಧಗಳಲ್ಲಿ ನಾವೆಲ್ಲಾ ಭಾಗಿಯಾಗಿಬಿಟ್ಟಿದ್ದೇವೆ. ಪ್ರತಿ ದಿನವೂ ಇದು ನಡೆಯುತ್ತಲೇ ಇದ್ದರೂ ನಾವು ಮಾತ್ರ ಇವುಗಳನ್ನು ಗಮನಿಸುವುದಿಲ್ಲ ಅಷ್ಟೇ! ಹೀಗೇ ದಶಕಗಳ ನಮ್ಮ ಶ್ರಮದಿಂದ ಹಾಗೂ ಕೆಲವು ಸ್ವಾಭಾವಿಕ ಕಾರಣಗಳಿಂದ ಜಾಗತಿಕ ತಾಪಮಾನ ಇದರ ಪರಿಣಾಮವಾಗಿ ಏರುತ್ತಾ ಬಂದಿದೆ. ಇದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಚಾರ. ಇದೇ ವಿಷಯವಾಗಿ ಇಲ್ಲಿದೆ ಹೊಸ ಸುದ್ಧಿ. ನಮ್ಮ ಪ್ರಕೃತಿಯೊಡಗಿನ ಸಲಿಗೆಯ ದುರುಪಯೋಗದ ಪರಿಣಾಮವಾಗಿ ಏರುತ್ತಿರುವ ಜಾಗತಿಕ ತಾಪಮಾನದ ಪರಿಣಾಮವಾಗಿ, ಆರ್ಕಟಿಕ್ ನಲ್ಲಿ ಕಂಡು ಬರುವ ‘ಟಂಡ್ರಾ’ ಜೀವವೈವಿಧ್ಯ ಪ್ರದೇಶಗಳಲ್ಲಿ ಬೆಳೆಯುವ ಸಸ್ಯಗಳು ಹೆಚ್ಚೆಚ್ಚು ‘ಕಾರ್ಬನ್ ಡೈ ಆಕ್ಸೈಡ್(CO2)‘ನ್ನು ಬೇರೆಲ್ಲಾ ಭಾಗದ ಜೀವವೈವಿಧ್ಯಗಳಿಗಿಂತ 4 ಪಟ್ಟು ಹೆಚ್ಚು ಉತ್ಪತ್ತಿ ಆಗಲು ಕಾರಣವಾಗುತ್ತಿವೆ.
ಹೆಚ್ಚಾಗಿ ಹುಲ್ಲು, ಸಣ್ಣ ಸಸ್ಯಗಳು ಹಾಗೂ ಪಾಚಿಗಳು ಕಂಡುಬರುವ ಅರ್ಕಟಿಕ್ ನ ಈ ‘ಟಂಡ್ರಾ ಬಯೋಮ್’ ಇಂಗಾಲವನ್ನು ಶೇಖರಿಸಿ ಭೂಮಿಯಲ್ಲಿ ಹುದುಗಿಟ್ಟಿರುವ ದೊಡ್ಡ ಖಜಾನೆಯಾಗಿದೆ. ಆದರೆ ಹೆಚ್ಚುತ್ತಿರುವ ಈ ಜಾಗತಿಕ ತಾಪಮಾನದ ಕಾರಣವಾಗಿ ಈ ಮಣ್ಣಿನಲ್ಲಿ ಇರುವ ಸೂಕ್ಷ್ಮಜೀವಿಗಳು ಹೆಚ್ಚೆಚ್ಚು ಇಂಗಾಲದ ಡೈ ಆಕ್ಸೈಡನ್ನು ವಾತಾವರಣಕ್ಕೆ ಬಿಡುವಂತೆ ಮಾಡುತ್ತಿವೆ. ಈ ವಿಚಾರ ತಿಳಿದದ್ದು ಹೀಗೆ, ಸುಮಾರು 70 ಜನ ವಿಜ್ಞಾನಿಗಳು ಸೇರಿ ನಡೆಸಿದ ಈ ಪ್ರಯೋಗದಲ್ಲಿ, 28 ಟಂಡ್ರಾ ಪ್ರದೇಶಗಳನ್ನು ಆರಿಸಿಕೊಂಡರು. ಅಲ್ಲಿ ಬೆಳೆಯುವ ಸಸ್ಯಗಳ/ಹುಲ್ಲಿನ ಮೇಲೆ ಸುಮಾರು 1 ಮೀಟರ್ ವ್ಯಾಸದ ವೃತ್ತಾಕಾರದ ಪಾರದರ್ಶಕ ಪ್ಲಾಸ್ಟಿಕ್ ಅನ್ನು ಇಟ್ಟರು. ಇವು ಗಾಳಿ ಹಾಗೂ ತೇವಾಂಶವನ್ನು ಬಿಡುವ ಹಾಗೂ ಗಾಳಿಯನ್ನು ತಡೆಯುವ ಹಸಿರು ಮನೆಯಾಗಿ ಕೆಲಸ ಮಾಡಿದವು. ಇದರಿಂದಾಗಿ ಈ ವೃತ್ತಕಾರದ ಒಳಗಿನ ತಾಪಮಾನ 1.4o C ಹೆಚ್ಚಾಗಿತ್ತು. ಇದಾದ ನಂತರ ವಿಜ್ಞಾನಿಗಳು ಆ ವೃತ್ತಾಕಾರದ ಒಳಗಿನ ಸೂಕ್ಷ್ಮಜೀವಿಗಳ ಕ್ರಿಯೆಯನ್ನು ಗಮನಿಸಿದರು. ಆಗ ತಿಳಿದ ವಿಷಯ, ಅಲ್ಲಿನ ಸೂಕ್ಷ್ಮಜೀವಿಗಳು ಹೊರಗಿನ ಸೂಕ್ಶ್ಮಜೀವಿಗಳಿಗಿಂತ ಹೆಚ್ಚು ಚೂಟಿಯಾಗಿದ್ದು, ಹೆಚ್ಚೆಚ್ಚು CO2ವನ್ನು ಗಾಳಿಗೆ ಉಗುಳುತ್ತಿತ್ತು ಎಂದು. ನಿಖರವಾಗಿ ಹೇಳುವುದಾದರೆ 1/3 ರಷ್ಟು ಹೆಚ್ಚು. ಇದು ಸುಮಾರು 25 ಋತುಗಳಲ್ಲಿ, ವಿವಿದ ಟಂಡ್ರಾ ಪ್ರದೇಶಗಳಲ್ಲಿ ಪ್ರಯೋಗ ನಡೆಸಿ ಪಡೆದ ಫಲಿತಾಂಶವಾಗಿತ್ತು. ಇದರ ಜೊತೆಗೆ ತಿಳಿದ ಇನ್ನೊಂದು ವಿಚಾರ, ಎಲ್ಲೆಲ್ಲಿ ಅಂದರೆ ಆ ಪ್ರದೇಶದ ಮಣ್ಣಿನಲ್ಲಿ ಸಾರಜನಕ(ನೈಟ್ರೋಜನ್) ಪ್ರಮಾಣ ಕಡಿಮೆ ಇತ್ತೋ ಅಲ್ಲಿನ ಸೂಕ್ಶ್ಮಜೀವಿಗಳು, ಅಲ್ಲಿನ ಸಸ್ಯಗಳಿಗೆ ಸಾರಜನಕವನ್ನು ಒದಗಿಸಲು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದವು ಇದರ ಪರಿಣಾಮ ಅಲ್ಲಿ ಇನ್ನೂ ಹೆಚ್ಚಿನ CO2 ಉತ್ಪತ್ತಿಯಾಗುತ್ತಿತ್ತು.
ಇದರಿಂದ ತಿಳಿಯುವ ಮತ್ತೊಂದು ವಿಚಾರ, ಜಾಗತಿಕ ತಾಪಮಾನದ ಏರಿಕೆಯಿಂದ ಇಂಗಾಲ ಉಗುಳುವ ಸೂಕ್ಶ್ಮಜೀವಿಗಳ ಕ್ರಿಯಾಶೀಲತೆಯೂ ಹೆಚ್ಚುತ್ತದೆ ಎಂದು, ಈ ಮುಂಚೆಗಿಂತ ಹೆಚ್ಚು ನಿಖರವಾಗಿ ಈ ಸಂಶೋಧನೆಯಿಂದ ಧೃಡಪಟ್ಟಿದೆ. NASA ಹೇಳಿಕೆಯ ಪ್ರಕಾರ 1700 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲವನ್ನು ತನ್ನಲ್ಲಿ ಹುದುಗಿಸಿ ಇಟ್ಟುಕೊಂಡಿರುವ ಟಂಡ್ರಾ ಪ್ರದೇಶಗಳು ಜಾಗತಿಕ ತಾಪಮಾನ ಏರಿದಂತೆ ವಾತಾವರಣಕ್ಕೆ ಸೇರುತ್ತಾ ಬರುತ್ತದೆ. ಇದು ಹೀಗೆ ಮುಂದುವರೆದರೆ, 2100 ಇಸವಿಗೆ 22-524 ಬಿಲಿಯನ್ ಮೆಟ್ರಿಕ್ ಟನ್ ಇಂಗಾಲ ನಮ್ಮ ವಾತಾವರಣ ಸೇರಬಹುದಂತೆ. ಹಾಗೆಂದ ಮಾತ್ರಕ್ಕೆ ಈ ಪ್ರದೇಶಗಳು ಕೇವಲ ಇಂಗಾಲ ಉಗುಳುವ ಆರ್ಕ್ಟಿಕ್ ಕಾರ್ಖಾನೆಗಳಾಗಬೇಕಿಲ್ಲ! ಅದೇ ಪ್ರದೇಶಗಳಲ್ಲಿ ಸಸ್ಯಗಳ ದ್ಯುತಿಸಂಶ್ಲೇಷಣೆಯಿಂದ ಇಂಗಾಲವನ್ನು ಶೇಖರಿಸುವ ಕೆಲಸವೂ ಆಗುತ್ತದೆ. ಆದರೆ ಈ ಕ್ರಿಯೆ ಹೆಚ್ಚಬೇಕೆಂದರೆ ಜಾಗತಿಕ ತಾಪವನ್ನು ಏರಿಸುವ ಕ್ರಿಯೆಗಳ ಕಡಿತವಾಗಬೇಕಿದೆ. ಈ ಕಡಿತಕ್ಕೆ ಇಂಗಾಲ ಉಗುಳುವ ಕೆಲಸಗಳಿಗೆ ತಿಳಿದೋ ತಿಳಿಯದೆಯೋ ದಿನನಿತ್ಯದಲ್ಲಿ ನಿಯತ್ತಾಗಿ ಕೆಲಸ ಮಾಡುತ್ತಿರುವ ನಾವು-ನೀವುಗಳು ನಮ್ಮ ಅರಿವಿನ ಗಮನವನ್ನು ಇಂಗಾಲ ಉತ್ಪಾದನೆ ಕಡಿತವಾಗುವ ಕೆಲಸಗಳತ್ತ ಹರಿಸಿದರೆ, ಭೂಮಿ ತಾಯಿ ನಾವು ಇನ್ನೂ ಕೆಲ ಕಾಲ ಆರೋಗ್ಯವಾಗಿ ಭೂಮಿಯ ಮೇಲೆ ಸಹಬಾಳ್ವೆಯಿಂದ ಬಾಳಲು ಹರಸಿಯಾಳು!
ಮೂಲ ಲೇಖನ: www.snexplores.org
ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.