ಬೆವರಿಳಿಸಿದರೆ ರೋಗ ಮಾಯ…
‘ಎಸ್. ಕೆ. ಸರ್ ಪಿ. ಟಿ. ನಾ..? ಮುಗಿತು ನಿನ್ ಕಥೆ ಹೋಗು’ ಎಂಬ ನನ್ನ ಹಿರಿಯ ವಿದ್ಯಾರ್ಥಿ ಮಿತ್ರರ ಆ ಉದ್ಗಾರ ಮತ್ತು ಅವರ ಮುಖದಲ್ಲಿನ ವ್ಯಂಗ್ಯ ನಗು ನನಗೆ ಆಗ ಅರ್ಥವಾಗಲಿಲ್ಲ. ನನ್ನ ಹೈಸ್ಕೂಲಿನ ಹಾಸ್ಟೆಲ್ ಜೀವನವು ಬೆಳಿಗ್ಗೆ ಎದ್ದಾಗಲಿಂದ ರಾತ್ರಿ ಮಲಗುವವರೆಗೆ ವಿವಿಧ ಚಟುವಟಿಕೆಗಳಿಂದ ತುಂಬಿಹೋಗಿರುತ್ತಿತ್ತು. ಬೆಳಿಗ್ಗೆ ಎದ್ದು, ಪ್ರಾರ್ಥನೆ ಮುಗಿಸಿದ ನಂತರ ಪಿ.ಟಿ (ಫಿಸಿಕಲ್ ಟ್ರೈನಿಂಗ್). ಇದರಲ್ಲಿ ನಾಲ್ಕೈದು ಟೀಮ್ ಗಳಿದ್ದವು. ಒಂದೊಂದು ಟೀಮ್ ಗೆ ಒಬ್ಬೊಬ್ಬರು ಕೋಚ್. ನಾನು ಖೋ-ಖೋ ಆಟಕ್ಕೆ ಸೇರಿದ್ದರಿಂದ ನನ್ನ ಖೋ-ಖೋ ಕೋಚ್ ಎಸ್. ಕೆ. ಸರ್ ನನ್ನ ಬೆಳಗ್ಗಿನ ವ್ಯಾಯಾಮದ ಕೋಚ್ ಸಹ ಅವರೇ ಆಗಿದ್ದರು. ಒಳ್ಳೆಯದೇ ಅಲ್ಲವೇ ಎಂದು ಮೊದಲಿನಲ್ಲಿ ನಾನೂ ಅಂದುಕೊಂಡೆ. ಆದರೆ, ಸಮಯ ಕಳೆದಂತೆ ಅರಿವಾಗಿದ್ದು, ಅವರ ಬೆಳಗಿನ ಆ ಟ್ರೈನಿಂಗ್ ಯಾವ ನ್ಯಾಷನಲ್ ಅಥ್ಲೀಟ್ ಟ್ರೈನಿಂಗಿಂತ ಕಡಿಮೆ ಇಲ್ಲ ಎಂದು. ಬೆಳಿಗ್ಗೆ ಬೆಳಿಗ್ಗೆ ಇನ್ನೂ ನಿದ್ದೆ ಮಂಪರಿನಲ್ಲಿರುವ ಮಕ್ಕಳಾದ ನಮ್ಮನ್ನು ಯಾವುದೇ ದಯ-ದಾಕ್ಷಿಣ್ಯವಿಲ್ಲದೇ ಕ್ರಾಸ್ ಕಂಟ್ರಿ, ಸ್ಟೆಪ್ಸ್ ವರ್ಕ್ ಔಟ್, ಹೀಗೆ ದಿನವೂ ವಿವಿಧ ರೀತಿಯಲ್ಲಿ ನಮಗೆ ಬೆವರಿಳಿಸುತ್ತಿದ್ದರು. ಅಲ್ಲಿಯವರೆಗೆ ನಾನು ಅಷ್ಟು ಬೆಳಗ್ಗೆ ಬೆವರಿದ ನೆನಪೇ ಇಲ್ಲ. ವಾರದ 7 ದಿನವೂ ಇದೇ ಪಾಡು. ಒಮ್ಮೊಮ್ಮೆ ಎಷ್ಟು ಬೆವರುತ್ತಿದ್ದೆವೆಂದರೆ ಈಗ ತಾನೆ ನೀರಿನಲ್ಲಿ ಮುಖ ತೊಳೆದು ಒರೆಸದೇ ಬಂದಿರುವೆನೇನೋ ಎಂಬಂತೆ ಮುಖದಿಂದ ನೀರು ತೊಟ್ಟಿಕ್ಕುತ್ತಿರುತ್ತಿತ್ತು. ಆಗಲೇ ನನಗೂ ತಿಳಿದದ್ದು ಬೆವರಿನ ನೀರು ಅಷ್ಟು ಉಪ್ಪಾಗಿರುವುದೆಂದು! ಜೊತೆಗೆ ಕೈ ಕಾಲುಗಳು ಪದ ಹಾಡುತ್ತಿರುತ್ತಿದ್ದವು. ಅದೊಂದು ಕಾಲ. ಅದಾದ ದಶಕಕ್ಕಿಂತ ಹೆಚ್ಚು ವರ್ಷಗಳ ನಂತರ ಬಹುಶಃ ಇತ್ತೀಚೆಗೆ ಬೆಳಿಗ್ಗೆ ಶಟಲ್ ಆಡುವುದರಿಂದ ಸ್ವಲ್ಪ ಬೆವರುತ್ತೇನೆ. ನನ್ನ ಪ್ರಕಾರ ಬೆಳಿಗ್ಗೆ ಚೆನ್ನಾಗಿ ಬೆವರುವ ಯಾವುದಾದರೂ ಒಂದು ವ್ಯಾಯಾಮ ಮಾಡಿದ್ದೇ ಆದರೆ ಆ ದಿನವೆಲ್ಲ ಲವಲವಿಕೆಯಿಂದ ಕೂಡಿರುತ್ತದೆ. ಏಕೆಂದರೆ ಎಲ್ಲೋ ಕೇಳಿದಂತೆ, ಬೆಳಗಿನ ಬೆವರಲ್ಲಿ ದೇಹದ ಎಷ್ಟೋ ಟಾಕ್ಸಿಕ್ ಅಂಶಗಳು ಹೊರ ಹೋಗುತ್ತವಂತೆ. ಆದರೆ ಮೊನ್ನೆಯವರೆಗೂ ನನಗೂ ತಿಳಿಯದ ಹೊಸ ಅಂಶವೊಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ. ಅದೇನೆಂದರೆ, ನಾವು ಮನುಷ್ಯರು ಬೆವರುವುದರಿಂದ ಪ್ರಾಣಿಗಳಲ್ಲಿ ಕಂಡುಬರುವ ‘ಉಣ್ಣಿ/ಉನ್ನಿ(tick)’ ಎಂಬ ಕೀಟದ ಕಡಿತದಿಂದ ಮನುಷ್ಯರಿಗೂ ಹರಡುವ ‘ಲೈಮ್ ರೋಗ (Lyme Disease)’ವನ್ನು ಈ ಬೆವರು ತಡೆಯುತ್ತದಂತೆ.
‘ಬೊರೆಲಿಯಾ ಬರ್ಗ್ಡೋರ್ಫೆರಿ (Borrelia burgdorferi)’ ಎಂಬ ಬ್ಯಾಕ್ಟೀರಿಯಾ ಈ ಉನ್ನಿಯಲ್ಲಿ ಇರುತ್ತದೆ. ಆ ಕೀಟದ ಕಡಿತಕ್ಕೆ ನಾವು ಒಳಗಾದಾಗ ಲೈಮ್ ಖಾಯಿಲೆಗೆ ಗುರಿಯಾಗಬಹುದು. ಈ ರೋಗವು ಜ್ವರ, ತಲೆ ನೋವು ಹಾಗೂ ಚರ್ಮದ ದದ್ದುವಿನ ಜೊತೆಗೆ ಇದರ ಪರಿಣಾಮ ಕೀಲುಗಳು, ಹೃದಯ ಮತ್ತು ನರಮಂಡಲದ ಮೇಲೂ ಪ್ರಭಾವ ಬೀರುತ್ತದೆ. ನಾವು ಹೊರಗೆ ಮಾಡುವ ಹಲವು ಚಟುವಟಿಕೆಗಳಲ್ಲಿ ಓಡಾಡುವಾಗ ಈ ಉನ್ನಿಯ ಕಡಿತಕ್ಕೆ ಒಳಗಾಗಬಹುದು. ಆದರೆ ನಮಗೆ ತಿಳಿಯದೇ ನಡೆಯುವ ಈ ಕೃತ್ಯಕ್ಕೆ ನಮಗೆ ತಿಳಿಯದ ಹಾಗೆಯೇ ನಮ್ಮ ದೇಹದ ಬೆವರೂ ಸಹ ನಮ್ಮನ್ನು ಈ ಉನ್ನಿ ಕಡಿತದಿಂದ ಬರಬಹುದಾದ ಖಾಯಿಲೆಯಿಂದ ನಮ್ಮನ್ನು ರಕ್ಷಿಸುತ್ತಿದೆ.
ಅದು ಹೇಗೆ ಎಂದು ನಿಖರವಾಗಿ ತಿಳಿಯುವುದಾದರೆ ವಿಜ್ಞಾನಿಗಳ ಈ ಸಂಶೋಧನೆಯನ್ನು ಸ್ವಲ್ಪ ಗಮನಿಸಬೇಕು. ಫಿನ್ ಲ್ಯಾಂಡ್ ನಲ್ಲಿ ನಡೆಸಿದ ಈ ಸಂಶೋಧನೆಯ ಭಾಗವಾಗಿ 6,20,000 ಆಸ್ಪತ್ರೆಗೆ ಭೇಟಿ ನೀಡಿದ ಎಲ್ಲರ ‘ಜೀನ್(gene)’ನನ್ನು ಸಂಗ್ರಹಿಸಲಾಗಿತ್ತು. ಅದರಲ್ಲಿ 25,000 ಮಂದಿಗೆ ಈ ಲೈಮ್ ಖಾಯಿಲೆಯ ಚಿಕಿತ್ಸೆ ಕೊಡಲಾಗಿತ್ತು. ಆ 25,000 ಜನರ ಜೀನ್ ನಲ್ಲಿ ಗಮನಿಸಿದ್ದೇನೆಂದರೆ ಈ ಲೈಮ್ ರೋಗ ಹರಡುವುದನ್ನು ಗಮನಿಸುವ ಮೂರು ಪ್ರೋಟೀನ್ ಗಳು ಅವರ ದೇಹದಲ್ಲಿ ಕಂಡುಬಂತು. ಅದರಲ್ಲಿ ಒಂದು ಪ್ರೋಟೀನ್ ಆದ SCGB1D2 ಎಂಬ ಹೊಸ ಪ್ರೋಟೀನನ್ನು ಗುರುತಿಸಲಾಯಿತು. ಈ ಪ್ರೋಟೀನಿನ ಬಗ್ಗೆ ಈ ಮುಂಚೆ ವಿಜ್ಞಾನಿಗಳಿಗೇ ತಿಳಿದಿರಲಿಲ್ಲವಂತೆ. ನಂತರದ ಸಂಶೋಧನೆಯಲ್ಲಿ ತಿಳಿದದ್ದು ಈ ಪ್ರೋಟೀನು ನಮ್ಮ ಬೆವರು ಗ್ರಂಥಿಗಳಲ್ಲಿ ಉತ್ಪತ್ತಿ ಆಗುತ್ತವೆ ಎಂದು. ನಂತರ ಸಂಶೋಧನೆಯನ್ನು ಮುಂದುವರೆಸಿದರು, ಅದರ ಭಾಗವಾಗಿ ಈ ಪ್ರೋಟೀನ್ ಜೊತೆಗೆ ಲೈಮ್ ರೋಗ ತರುವ ಬ್ಯಾಕ್ಟೀರಿಯಾವನ್ನೂ ಸೇರಿಸಿ ಇಲಿಗಳಿಗೆ ನೀಡಿದರು. ಅಚ್ಚರಿ ಎಂಬಂತೆ ಇಲಿಗಳಿಗೆ ಲೈಮ್ ರೋಗ ಬರಲಿಲ್ಲ. ಇದು ಸಂತಸದ ವಿಷಯವೇ, ಆದರೆ ಮುಂದುವರೆಸಿದ ಸಂಶೋಧನೆಯಲ್ಲಿ ತಿಳಿದ ವಿಚಾರಗಳ ಪ್ರಕಾರ 10 ಲೈಮ್ ರೋಗ ಹೊಂದಿದ ಮಂದಿಯಲ್ಲಿ ಈ ಪ್ರೋಟೀನಿನ ರೋಗ ತಡೆಯುವ ಶಕ್ತಿ ಇದ್ದದ್ದು 6 ಜನರಿಗೆ ಮಾತ್ರ ಉಳಿದ 4 ಜನರಲ್ಲಿ ಈ ಪ್ರೋಟೀನ್ ಸ್ವಲ್ಪ ಬದಲಾದ್ದರಿಂದ ರೋಗ ತಡೆಯುವಲ್ಲಿ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ.
ಆದರೂ ಧೃತಿಗೆಡಬೇಕಾಗಿಲ್ಲ. ಏಕೆಂದರೆ ಈ ಸಂಶೋಧನೆಯಿಂದ ಒಂದು ಮಹತ್ತರ ವಿಷಯ ಹೊರಬಂದಿದೆ. ಅದೇನೆಂದರೆ ಒಂದೆಲ್ಲ ಒಂದು ದಿನ ಈ SCGB1D2 ಎಂಬ ಹೊಸ ಪ್ರೋಟೀನನ್ನು ಬಳಸಿ ಲೈಮ್ ರೋಗವನ್ನು ತಡೆಯಬಲ್ಲ ಔಷಧಿಯನ್ನು ತಯಾರಿಸಬಹುದು ಎಂಬ ಆಶಾ ಬೀಜವನ್ನು ಈ ಸಂಶೋಧನೆಯು ವಿಜ್ಞಾನಿಗಳ ಮೆದುಳಿನಲ್ಲಿ ಬಿತ್ತಿದೆ.
ಮೂಲ ಲೇಖನ: www.snexplores.org
ಲೇಖನ: ಜೈಕುಮಾರ್ ಆರ್.
ಬೆಂಗಳೂರು ನಗರ ಜಿಲ್ಲೆ
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.