ಜೇನು ಪ್ರಪಂಚ: ಭಾಗ ೧೧
© ಪವನ್ ಕುಮಾರ್ ಟಿ.
ಮನುಷ್ಯ ತನ್ನ ಕಣ್ಣು ಯಾವ ಉದ್ದೇಶಕ್ಕೆ ವಿಕಾಸಗೊಂಡಿದೆ ಎನ್ನುವುದನ್ನೇ ಮರೆತು ದೃಷ್ಟಿದೋಷಪೂರಿತನಾಗಿ ತನ್ನ ಮಕ್ಕಳಲ್ಲೂ ಆ ಸಮಸ್ಯೆಯನ್ನು ತಂದೊಡ್ಡಿದ್ದಾನೆ. ಇಂದು ನವಜಾತ ಶಿಶುವಿಗೂ ಸಹ ಕನ್ನಡಕವನ್ನು ತೊಡಗಿಸುವ ಹಂತಕ್ಕೆ ತಲುಪಿದ್ದಾನೆ. ಕಣ್ಣು ಮತ್ತು ದೃಷ್ಟಿಯ ವಿಕಾಸವೇ ಈ ಜೀವವಿಕಾಸದಲ್ಲಿ ಒಂದು ದೊಡ್ಡ ಮಜಲು, ಅದೊಂದು ಅದ್ಭುತ. ಮನುಷ್ಯನ ಕಣ್ಣು ವಿಕಾಸಗೊಂಡ ಉದ್ದೇಶ ಆಹಾರವನ್ನು ಅನ್ವೇಷಿಸಲು ಬೇಟೆಯಾಡಲು ಮತ್ತು ಬೇಟೆ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು, ತನ್ನ ಸುತ್ತ-ಮುತ್ತಲನ್ನು ಅರಿಯಲು. ಆದರೆ ಆ ಕಣ್ಣು ಎಂದೂ ಸಣ್ಣ ಸಣ್ಣ ಅಕ್ಷರಗಳನ್ನು ದೀರ್ಘಕಾಲ ಓದಲು ಅಥವಾ ಮೊಬೈಲ್ ಕಂಪ್ಯೂಟರ್ ಪರದೆಯನ್ನು ಗಂಟೆಗಟ್ಟಲೆ ನೋಡುವ ಸಲುವಾಗಿ, ಕೃತಕ ಬೆಳಕಲ್ಲಿ ಬದುಕಲು ವಿಕಾಸಗೊಂಡಿದ್ದೇ ಅಲ್ಲ. ಎಂದು ಅವನು ಓದಲು-ಬರೆಯಲು ಪ್ರಾರಂಭಿಸಿದನೋ ಅಂದಿನಿಂದಲೇ ‘ದೃಷ್ಟಿ’ಕೋನದ ಸಮಸ್ಯೆ ಶುರುವಾಯಿತು.
ನಿಮಗೋ ಆಸ್ಪತ್ರೆಗಳಿವೆ, ಕನ್ನಡಕಗಳಿವೆ, ಲೇಸರ್ ಚಿಕಿತ್ಸೆಗಳಿವೆ, ಒಂದು ವೇಳೆ ಅಂತಹ ದೃಷ್ಟಿಯ ಸಮಸ್ಯೆಗಳು ನಮಗೆ ಎದುರಾದರೆ ನಾವೆಂತ ಮಾಡುವುದು? ಅದಕ್ಕಿಂತ ಮೊದಲು ನಾವು ನೋಡುವ ಪರಿ ನೀವು ನೋಡುವ ಪರಿಯ ಕುರಿತಾಗಿ ವಿವರವಾಗಿ ಚರ್ಚಿಸುವುದು ಸೂಕ್ತ.
ನಮ್ಮ ಮನೆ ನಿಮ್ಮ ಮನೆಗಳಂತೆ ಬಾರಿ ದೊಡ್ಡದೇನಲ್ಲ, ಎಲ್ಲೋ ಒಂದು ಮರದ ಕೊಂಬೆಗೆ ಕಟ್ಟಿರುವುದು, ಆಹಾರದ ಅನ್ವೇಷಣೆಗೆ ಹೋದಾಗ ಕೆಲವೊಮ್ಮೆ ವಠಾರದಿಂದ ಎರಡು ಕಿಲೋಮೀಟರ್ ವರೆಗೆ ಪ್ರಯಾಣಿಸುವುದುಂಟು. ಈ ಆಹಾರ ಅನ್ವೇಷಣೆ, ಸಂಭಾಷಣೆಗೆ, ಮನೆಗೆ ಮರಳಿ ಸೇರುವ ಸಲುವಾಗಿ ನಮಗೆ ಕಣ್ಣು ಅವಶ್ಯಕ. ನಾವು ವಾಸನೆಯಿಂದಲೂ ಸಹ ಹೂಗಳನ್ನು, ಮಕರಂದವನ್ನು ಮತ್ತು ಪರಾಗರೇಣುಗಳನ್ನು ಗುರುತಿಸಬಲ್ಲೆವಾದರೂ ಹತ್ತಿರವಿರುವ ಸಂದರ್ಭಗಳಲ್ಲಿ ಮತ್ತು ಅದು ಗಾಳಿಯ ದಿಕ್ಕನ್ನು ಸಹ ಅವಲಂಭಿಸಿರುತ್ತದೆ ಆದ್ದರಿಂದಲೇ ನಮಗೆ ದೃಷ್ಟಿ ಅವಶ್ಯಕ.
ನಮಗೆ ಎರಡು ತೆರನಾದ ಕಣ್ಣುಗಳಿರುತ್ತವೆ ಎಂದರೆ ನಂಬುವಿರಾ? ಹೌದು, ಎರಡು ಸಂಯುಕ್ತ ಕಣ್ಣುಗಳು ಮತ್ತು ಮೂರು ಸರಳ ಕಣ್ಣುಗಳು! ಈ ಸಂಯುಕ್ತ ಕಣ್ಣುಗಳು ದೊಡ್ಡದಾಗಿರುತ್ತವೆ, ಪ್ರತಿಯೊಂದೂ ಕಣ್ಣು ‘ಒಮ್ಮಟಿಡಿಯಾ – Omatidia’ ಎಂದು ಕರೆಯಲ್ಪಡುವ ಸಾವಿರಾರು ಸಣ್ಣ ಘಟಕಗಳಿಂದ ಕೂಡಿರುತ್ತದೆ. ಈ ಕಣ್ಣುಗಳು ವಿಶಾಲವಾದ ದೃಷ್ಟಿಕೋನವನ್ನು ಒದಗಿಸುತ್ತವೆ ಮತ್ತು ಚಲನೆ, ಬೆಳಕಿನ ತೀವ್ರತೆ ಮತ್ತು ಬಣ್ಣವನ್ನು ಗ್ರಹಿಸಲು ಸಹಾಯವಾಗುತ್ತವೆ. ಇನ್ನು ಈ ಸಂಯುಕ್ತ ಕಣ್ಣುಗಳ ಜೊತೆಗೆ ನಮಗೆ ಮೂರು ಸರಳ ಕಣ್ಣುಗಳು (ಒಸೆಲ್ಲಿ – Ocelli) ನಮ್ಮ ತಲೆಯ ಮೇಲ್ಭಾಗದಲ್ಲಿ ಇರುತ್ತವೆ, ಇವು ದಿಗಂತದಲ್ಲಿ ನಿಮ್ಮ ಮನುಷ್ಯರಿಗೆ ಕಾಣದ ಬೆಳಕನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ನಮ್ಮ ದೃಷ್ಟಿ ನಿಮ್ಮಷ್ಟು ತೀಕ್ಷ್ಣವಾಗಿರುವುದಿಲ್ಲ, ನಾವು ಕೇವಲ ಆಕಾರಗಳು ಮತ್ತು ಅಂಚುಗಳನ್ನು ನೋಡಬಲ್ಲೆವೇ ಹೊರತು ಪೂರಾ ವಿವರವಾಗಿ ನೋಡಲಾಗುವುದಿಲ್ಲ. ಇದರ ಹೊರತಾಗಿಯೂ, ನಾವು ವಿವಿಧ ಪ್ರಭೇದದ ಹೂಗಳನ್ನು ಗುರುತಿಸಬಲ್ಲೆವು, ಆ ಹೂಗಳ ಮೇಲೆ ಮೂಡಿದ ನಮ್ಮವರ ಹೆಗ್ಗುರುತುಗಳನ್ನು ಸಹ ಗುರುತಿಸಬಲ್ಲೆವು. ನಮಗೆ ವಿಶೇಷವಾದ ದೃಷ್ಟಿಯ (ಆಪ್ಟಿಕ್ – Optic) ಹರಿವು ಇದ್ದು, ಇದರಿಂದ ನಾವು ದಟ್ಟವಾದ ಸಂಕೀರ್ಣ ಅರಣ್ಯಗಳಲ್ಲಿಯೂ ಸಹ ಸರಾಗವಾಗಿ ಹಾರಾಡಲು ಅನುವು ಮಾಡಿಕೊಡುತ್ತದೆ. ನಮಗೆ ಯಾವುದೇ ಗೂಗಲ್ ನಕ್ಷಗಳಿಲ್ಲ, ಓಡಾಡುವ ಸಲುವಾಗಿ ನಾವು ಎಲ್ಲವನ್ನು ನಮ್ಮ ಸ್ಮರಣೆಯಲ್ಲಿ ದಾಖಲಿಸಿಕೊಳ್ಳಬೇಕು, ಆದರಿಂದ ನಾವು ಶಾಶ್ವತವಾದ ವಸ್ತುಗಳನ್ನು ಗುರುತು ಮಾಡಿಕೊಳ್ಳುತ್ತೇವೆ, ನಾವು ಹೋಗುವ ಆಹಾರದ ಮೂಲ, ನಮ್ಮ ವಠಾರ ಮುಂತಾದವುಗಳನ್ನು ಸ್ಮರಣೆಯಲ್ಲಿ ಇಟ್ಟುಕೊಳ್ಳುತ್ತೇವೆ. ಉದಾಹರಣೆಗಳಿಗೆ ಮರ, ಕಟ್ಟಡ, ಬಂಡೆಗಳ ವೈಶಿಷ್ಟ್ಯಗಳನ್ನು ಬಳಸಿಕೊಂಡು ಭೂದೃಶ್ಯದ ಮಾನಸಿಕ ನಕ್ಷೆಯನ್ನು ರಚಿಸಿಕೊಳ್ಳುತ್ತೇವೆ.
ನಾವು 300 – ರಿಂದ 650 ನ್ಯಾನೊಮೀಟರ್ಗಳವರೆಗೆ ಬೆಳಕಿನ ತರಂಗಾಂತರಗಳನ್ನು ಕಾಣಬಲ್ಲೆವು, ಇದಕ್ಕೆ ಟ್ರೈಕ್ರೊಮ್ಯಾಟಿಕ್ ದೃಷ್ಟಿ ಎನ್ನಬಹುದು. ಆದರೆ ಮಾನವರಾದ ನೀವು 390 ರಿಂದ 750 ನ್ಯಾನೊಮೀಟರ್ಗಳವರೆಗೆ ನೋಡಬಹುದು. ನಾವು ನೀಲಿ ಮತ್ತು ಹಸಿರು ಬಣ್ಣವನ್ನು ನೋಡಬಲ್ಲೆವು, ಆದರೆ ಕೆಂಪು ಬಣ್ಣವನ್ನು ಮನುಷ್ಯರು ನೋಡುವಂತೆ ನೋಡಲಾಗುವುದಿಲ್ಲ, ಅದು ನಮಗೆ ಹಳದಿಯೋ, ಕಿತ್ತಳೆಯೋ ಅಥವಾ ಕಪ್ಪು ಬಿಳಿಯಾಗಿ ಕಾಣಬಹುದು. ಈ ಬಣ್ಣಗಳ ಜೊತೆಗೆ ನಾವು ವಿಶೇಷವಾಗಿ ನೇರಳಾತೀತ ಬೆಳಕನ್ನು ಗ್ರಹಿಸಬಲ್ಲೆವು, ಇದು ಮಾನವರಿಗೆ ಅಗೋಚರವಾಗಿರುವ UV ಮಾದರಿಗಳನ್ನು ಪ್ರತಿಬಿಂಬಿಸುವ ಹೂವುಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅನೇಕ ಹೂವುಗಳು UV ಬೆಳಕಿಗೆ ಪ್ರತಿಫಲಿಸುವಂತೆ ವಿಕಸನಗೊಂಡಿವೆ ಕಾರಣ ಅವುಗಳ ಪರಾಗಸ್ಪರ್ಶ ಕ್ರಿಯೆಗೆ ಅವು ಅವಲಂಬಿತವಾಗಿರುವುದು ನಮ್ಮ ಮೇಲೆಯೇ, ಜೊತೆಗೆ ಅವು ಬಂದು ಹೂವಿನ ಮೇಲೆ ಸರಿಯಾದ ಜಾಗದಲ್ಲಿ ಕೂರುವ ಸಲುವಾಗಿ ಹೂವಿನ ದಳಗಳ ಸುತ್ತಲೂ ನೇರಳಾತೀತ ರೇಖೆಯನ್ನು ರೂಪಿಸಿ ಇಳಿದಾಣವನ್ನು ರೂಪಿಸುತ್ತವೆ. ಜೊತೆಗೆ ಅವು ನಮಗೆ ಮಕರಂದ ಹೂವಿನಲ್ಲಿ ಎಲ್ಲಿದೆ ಎಂದು ಮಾರ್ಗದರ್ಶಿಸುತ್ತವೆ.
ಈಗ ತಿಳಿತಾ, ಒಂದು ಕ್ರಿಯೆಗೆ ವಿಕಾಸವಾದದ್ದನ್ನು ಬೇರೊಂದು ಕ್ರಿಯೆಗೆ ಬಳಸಿದರೆ ಏನೆಲ್ಲಾ ಆಗಬಹುದು ಅಂತ. ಈಗ ಗೊತ್ತಾಗಿರಬೇಕು ಪ್ರಕೃತಿಯಲ್ಲಿ ಯಾವ ಪ್ರಾಣಿಗೂ ಬಾರದ ಕುರುಡುತನ ನಿಮ್ಮ ಮನುಷ್ಯರಿಗೆ ಯಾಕೆ ವಕ್ಕರಿಸಿತು ಎಂದು. ನಿಮ್ಮಂತೆ ಕುರುಡರಾದರೆ ನಾವಂತೂ ಈ ಜೀವವಿಕಾಸದ ಕೊಂಡಿಯಿಂದ ನಶಿಸಿ ಹೋಗುವುದಂತೂ ಖಂಡಿತ, ಅದರಿಂದಲೇ ನಾವು ಓದಲ್ಲ, ಬರಿಯಲ್ಲ, ಮೊಬೈಲ್ ಸಹ ನೋಡಲ್ಲ…
ಲೇಖನ: ಹರೀಶ ಎ. ಎಸ್.
IISER- ತಿರುಪತಿ