ಜೇನು ಪ್ರಪಂಚ: ಭಾಗ ೯

ಜೇನು ಪ್ರಪಂಚ: ಭಾಗ ೯

@ ವಿನೀತ್ ಕರ್ಥ

ಇಷ್ಟು ದಿನ ನನ್ನ ಬಗ್ಗೆ ನನ್ನ ಕುಟುಂಬದ ಬಗ್ಗೆ ಹರಿಕತೆ-ಪುರಾಣ ಹೇಳಿದ್ದಾಯಿತು! ನಿಮಗೆ ನನ್ನ ಇತಿಹಾಸ, ಪೂರ್ವದ ಬಗ್ಗೆ ಕುತೂಹಲ ಇಲ್ಲವೇ?

ಒಟ್ಟಾರೆಯಾಗಿ ಜೇನುನೊಣಗಳಲ್ಲಿ ಒಟ್ಟು ಏಳು ಕುಟುಂಬಗಳಿವೆ (ಇಲ್ಲಿ ಜೇನುನೊಣ ಎಂದರೆ ಕೇವಲ ಜೇನನ್ನು ಉತ್ಪಾದಿಸುವವಲ್ಲ, ಎಲ್ಲಾ Bee ಗಳನ್ನು (Apoidea) ಜೇನುನೊಣವೆಂದೇ ಸಂಬೋಧಿಸಲಾಗಿದೆ, ‘ನೋಣ’ ಎಂದರೆ ಅದು Diptera ಗುಂಪನ್ನು ಪ್ರತಿನಿಧಿಸುತ್ತದೆ). ಪ್ರತಿಯೊಂದು ಕುಟುಂಬವು ತನ್ನದೇ ಆದ ಗುಣಲಕ್ಷಣಗಳನ್ನು ಮತ್ತು ಒಂದೇ ವಿಕಾಸದ ಇತಿಹಾಸದ ಹಾದಿಯನ್ನು ಹೊಂದಿರುತ್ತವೆ. ಈ ಏಳು ಕುಟುಂಬಗಳನ್ನು 28 ಉಪಕುಟುಂಬಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಉಪಕುಟುಂಬವು ಒಂದು ವಿಶಿಷ್ಟವಾದ ಅಂಗರಚನಾಶಾಸ್ತ್ರ ಮತ್ತು ಜೈವಿಕ ಲಕ್ಷಣಗಳನ್ನು ಹೊಂದಿದ್ದು, ಅದು ವಿಭಿನ್ನವಾಗಿರುತ್ತದೆ ಮತ್ತು ಆಸಕ್ತಿದಾಯಕವಾಗಿರುತ್ತದೆ. 

ಈ ಒಟ್ಟು 7 ಕುಟುಂಬಗಳಲ್ಲಿ Apidae ಜೇನುನೊಣಗಳ (Bees) ಗುಂಪು ಅತಿದೊಡ್ಡ ಕುಟುಂಬವಾಗಿದ್ದು, ಇಂದು ಸುಮಾರು 6000 ಪ್ರಭೇದವುಗಳು ಜೀವಂತವಾಗಿವೆ. ಈ ಕುಟುಂಬವು ಬಹುಶಃ 115 ರಿಂದ 95 ಮಿಲಿಯನ್ ವರ್ಷಗಳ ಹಿಂದೆ ಜೀವ ಪಡೆದಿರಬಹುದು ಎಂದು ಪಳೆಯುಳಿಕೆಗಳಿಂದ ತಿಳಿದಿದೆ. ಕೃಷಿಯಲ್ಲಿ ಈ ಜೇನುನೊಣಗಳ ಪ್ರಾಮುಖ್ಯತೆಯ ಹೊರತಾಗಿಯೂ, Apidae ಕುಟುಂಬವು ಎಲ್ಲರನ್ನು ಆಕರ್ಷಿಸುವುದು ಅದರ ವೈವಿಧ್ಯತೆಯಿಂದ, ಇದರಲ್ಲಿ ಸಾಮಾಜಿಕ ಪ್ರಭೇದಗಳು ಇವೆ, ಏಕಾಂಗಿಯಾಗಿ ಬದುಕುವ, ಜೇನನ್ನು ಉತ್ಪಾದಿಸುವ, ಸುಂದರವಾದವೂ, ವಿಚಿತ್ರವಾದವೂ ಇವೆ.

ಈ Apidae ಯಲ್ಲಿ ಸಾಕಷ್ಟು ವಿಶೇಷಗಳನ್ನು ಕಾಣಬಹುದು, ಮಣ್ಣಲ್ಲಿ, ಮರದಲ್ಲಿ, ಕಡ್ಡಿಗಳಲ್ಲಿ, ನೆಲದಲ್ಲಿ ಗೂಡನ್ನ ಕಟ್ಟುವುದನ್ನು ನೀವು ಕಾಣಬಹುದು, ನಾವಂತೂ ಮರದ ಕೊಂಬೆಗೆ ತೂಗುವಂತೆ ಗೂಡನ್ನೇ ಕಟ್ಟುತ್ತೇವೆ ಆದರೆ ಇಲ್ಲೊಂದು ಜೇನುನೊಣ Anthophora pueblo ಕಲ್ಲನ್ನೇ ಕೊರೆದು ಗೂಡು ಮಾಡಿಕೊಳ್ಳುತ್ತದೆ! ಕಲ್ಲನ್ನು ಕೊರೆಯಲು ಇವು ತನ್ನ ಬಲವಾದ ಕೋರೆಯನ್ನು (mandibles) ಬಳಸುತ್ತವೆ. ಅವು ಈಗಾಗಲೇ ಕೊರೆದ ರಂಧ್ರಗಳನ್ನು ಬಳಸಿದರೂ ಗುಂಪಾಗಿ ಕೊರೆದು ತನ್ನ ಗುಂಪಿನ ಏಳಿಗೆಗೆ ಸಹಕರಿಸುತ್ತವೆ, ಜೊತೆಗೆ ಆ ಗುಂಪಿನಲ್ಲೇ ಕೆಲವು ತಮ್ಮನ್ನು ಕೇವಲ ಕೊರೆಯುವುದರಲ್ಲೇ ತಮ್ಮ ಜೀವಿತಾವಧಿಯನ್ನು ಮುಡುಪಾಗಿಡುತ್ತವೆ. ನಿಸ್ವಾರ್ಥತೆ! ಕಲ್ಲನ್ನು ಕೊರೆದು ಜೀವಿಸಲು ವಿಕಾಸವಾಗಲು ಕಾರಣ, ಪರಾವಲಂಬಿ ಮತ್ತು ಪರಭಕ್ಷಕಗಳಿಂದ ಮತ್ತು ರೋಗಕಾರಕ ಸೂಕ್ಷ್ಮಾಣುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು.

ಇನ್ನೂ Amegilla dawsoni, “Dawson’s burrowing bee.” ಈ ಜೇನುನೊಣ Apidae ಕುಟುಂಬದಲ್ಲೇ ಅತಿ ದೊಡ್ಡದಾಗಿದೆ, ಒಂಟಿಯಾಗಿ ಜೀವಿಸುವ ಇದು ಪಶ್ಚಿಮ ಆಸ್ಟ್ರೇಲಿಯಾದಲ್ಲಿ ಕಾಣಸಿಗುತ್ತದೆ.

ಚಿತ್ರ: Anthophora pueblo, © 2017 Robert Krampf

ಈ Apidae ಕುಟುಂಬದಲ್ಲೇ Nomadinae ಎಂಬ ಉಪಕುಟುಂಬವೊಂದಿದೆ ಈ ಗುಂಪಿನ ಸದಸ್ಯರು ಆಹಾರ ಕಳ್ಳರು! ಇವರನ್ನು kleptoparasitic ಎಂದು ಕರೆಯಲಾಗುತ್ತದೆ. ಇವು ಬೇರೊಂದು ಜೇನುನೊಣಗಳ ಪ್ರಭೇದದಿಂದ ಕಾದು ಆಹಾರವನ್ನು ಕದಿಯುತ್ತವೆ.  ಕೆಲವೊಮ್ಮೆ ಬೇರೊಂದು ಪ್ರಭೇದದ ಗೂಡಲ್ಲಿ ತಮ್ಮ ಮೊಟ್ಟೆಗಳನ್ನಿಟ್ಟು ಪರಾರಿಯಾಗುತ್ತವೆ.

Halictidae ಎರಡನೇ ಅತಿದೊಡ್ಡ ಜೇನುನೊಣ ಕುಟುಂಬವಾಗಿದ್ದು, ಇದು ಸುಮಾರು 4500 ಪ್ರಭೇದಗಳನ್ನು ಹೊಂದಿದೆ. ಹ್ಯಾಲಿಕ್ಟಿಡೆ ಕುಟುಂಬವು ಪ್ರಾಯಶಃ 96 ರಿಂದ 75 ಮಿಲಿಯನ್ ವರ್ಷಗಳಷ್ಟು ಹಳೆಯದಾಗಿದೆ. ಅವುಗಳನ್ನು ಸಾಮಾನ್ಯವಾಗಿ ಬೆವರು ಜೇನುನೊಣಗಳು (Sweat bees) ಎಂದು ಕರೆಯಲಾಗುತ್ತದೆ. ಕಾರಣ ಇವು ಜನರ ಬೆವರನ್ನು ಸವಿದು ಉಪ್ಪಿನ ಅಂಶವನ್ನು ಪಡೆದುಕೊಳ್ಳುತ್ತವೆ, ಆದ್ದರಿಂದ ಇವನ್ನು ಬೆವರು ಜೇನುನೊಣಗಳು ಎಂದು ಸಾಮಾನ್ಯವಾಗಿ ಕರೆಯುವುದು. ಈ ಪ್ರಭೇದದ ಜೇನುನೊಣಗಳು ಕೆಲವೊಮ್ಮೆ ನಿಮ್ಮಿಂದ ಲವಣಗಳನ್ನು ಹೀರಿಕೊಳ್ಳಲು ಬರಬಹುದು, ಸುಮ್ಮನೆ ನಿಮ್ಮ ಪಾಡಿಗೆ ನೀವು ಇರಿ, ಇಲ್ಲವೆಂದರೆ ಖಂಡಿತ ಅವು ನಿಮಗೆ ಚುಚ್ಚುತ್ತವೆ!

Megachilidae ಮೂರನೇ ಅತಿ ದೊಡ್ಡ ಜೇನುನೊಣ ಕುಟುಂಬವಾಗಿದ್ದು, 4000 ಕ್ಕೂ ಹೆಚ್ಚು ಪ್ರಭೇದಗಳನ್ನು ಹೊಂದಿದೆ. ಈ ಕುಟುಂಬದ ಜೇನುನೊಣಗಳು ಅಂಟಾರ್ಕ್ಟಿಕಾ ಖಂಡವನ್ನು ಹೊರತುಪಡಿಸಿ ಎಲ್ಲಾ ಖಂಡಗಳಲ್ಲಿ ಕಾಣಿಸುತ್ತವೆ, ಮಳೆಕಾಡುಗಳಿಂದ ಮರುಭೂಮಿಗಳವರೆಗೆ ಇವುಗಳ ಆವಾಸಸ್ಥಾನಗಳು.  ಇವೆಲ್ಲವೂ ಒಂಟಿಯಾಗಿ ಜೀವಿಸುವವು, ಕೇವಲ ಮಿಲನಕ್ಕೆ ಮಾತ್ರ ಗಂಡುವಿನೊಂದಿಗೆ ಸೇರುತ್ತವೆ. ಇವು ತಮ್ಮ ಗೂಡನ್ನು ಗೋಡೆಗಳಲ್ಲಿ, ಗಿಡಗಳ ಮೇಲೆ, ಮರದ ಕೊಂಬೆಗಳ ಮೇಲೆ, ಖಾಲಿ ಕೀಟಗಳ ಗೂಡು, ಬಸವನ ಹುಳುವಿನ ಚಿಪ್ಪು, ಕಲ್ಲುಗಳು ಮತ್ತು ಗೆದ್ದಲಿನ ಗೂಡುಗಳಲ್ಲಿ ನಿರ್ಮಿಸುತ್ತವೆ. ಇದರ ಮತ್ತೊಂದು ವೈಶಿಷ್ಟ್ಯವೆಂದರೆ ಎಲ್ಲಾ ರೀತಿಯ ಜೇನುನೊಣಗಳು ಪರಾಗರೇಣುಗಳನ್ನು ತಮ್ಮ ಹಿಂಗಾಲಿನ ಪರಾಗರೇಣು ಬುಟ್ಟಿಯಲ್ಲಿ ಸಂಗ್ರಹಿಸಿದರೆ ಈ ಗುಂಪಿನ ಜೇನುನೊಣಗಳು ತಮ್ಮ ಹೊಟ್ಟೆಯ ಕೆಳಭಾಗದಲ್ಲಿ ಸಂಗ್ರಹಿಸುತ್ತವೆ.

ಚಿತ್ರ: Wallace’s Giant Bee (Megachile pluto). 

ಇಲ್ಲಿ ನಿಮಗೆ ಇನ್ನೊಂದು ವಿಶೇಷವಾದದ್ದನ್ನು ಹೇಳಲೇಬೇಕು, Apidae ಗುಂಪಿನ ಅತಿ ದೊಡ್ಡ ಸದಸ್ಯಕ್ಕೆ ವಿಕಾಸವಾದ ಪಿತಾಮಹ ಡಾರ್ವಿನ್ ಹೆಸರನ್ನು ಇಟ್ಟರೆ ಅವರ ಸಮಕಾಲೀನವರೇ ಆದ ಸ್ವತಂತ್ರವಾಗಿ ವಿಕಾಸವಾದವನ್ನು ಪ್ರತಿಪಾದಿಸಿದ Alfred Russel Wallace ರವರು Megachilidae ಗುಂಪಿನ ಮತ್ತು ಜೇನುನೊಣಗಳಲ್ಲೇ ಅತಿ ದೊಡ್ಡದನ್ನು ಕಂಡುಹಿಡಿದಿರುತ್ತಾರೆ ಅದನ್ನು ಅವರ ಹೆಸರಿನಿಂದಲೇ ಕರೆಯಲ್ಪಡುತ್ತದೆ, ಅದೇ Wallace’s Giant Bee (Megachile pluto), ಇದರ ಗಾತ್ರ ಸರಿಸುಮಾರು 6.35 cm! ಇದರ ಕುರಿತಾಗಿ ನಾನು ನಿಮಗೆ ಮತ್ತಷ್ಟು ಹೇಳಲೇ ಬೇಕು, ಇದು ಕಾಣಿಸಿಕೊಂಡಿರುವುದು ಇಂಡೋನೇಷಿಯಾದ ಬಾಕನ್ ದ್ವೀಪ ಮತ್ತು ಅದರ ಎರಡು ನೆರೆಯ ದ್ವೀಪಗಳಲ್ಲಿ ಮಾತ್ರ. ಮ್ಯೂಸಿಯಂಗಾಗಿ ಈ ಜೇನುನೊಣವನ್ನು Wallace ಸಂಗ್ರಹಿಸಿದ ನಂತರ ಇದನ್ನು ಯಾರು ಕಂಡವರು ಇಲ್ಲ, 1981 ರಲ್ಲಿ ಇದನ್ನು ಮರುಶೋಧಿಸಲಾಯಿತು ಮತ್ತೆ ಇದು ಅಳಿದುಹೋದ ಜೀವಿಯೇ ಎಂದು ತಿಳಿದಿದ್ದರು, 2019 ರವರೆಗೆ! ಒಂದು ಆನ್‌ಲೈನ್ ಹರಾಜಿನಲ್ಲಿ ನಿಗೂಢವಾಗಿ ಇದು ಕಾಣಿಸಿಕೊಂಡ ನಂತರ, ವಿಜ್ಞಾನಿಗಳು ಮತ್ತೆ ಅದರ ಇರುವಿಕೆಯ ಬಗ್ಗೆ ನಂಬಿಕೆ ಮೂಡಿ ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ದ್ವೀಪಗಳಿಗೆ ಧಾವಿಸಿದರು. ಸತತ 5 ದಿನಗಳ ಹುಡುಕಾಟದ ನಂತರ ಕೊನೆಗೂ ಕಾಣಿಸಿಕೊಂಡಿತು, ಫೋಟೋ ಮತ್ತು ವೀಡಿಯೊ ತೆಗೆದು ಅದನ್ನು ಅಲ್ಲಿಯೇ ಬಿಡುಗಡೆ ಮಾಡಲಾಯಿತು.

Andrenidae ಕುಟುಂಬವನ್ನು ಮೈನಿಂಗ್ ಜೇನುನೊಣಗಳು ಅಥವಾ ಡಿಗ್ಗರ್ ಜೇನುನೊಣಗಳು ಎಂದು ಕರೆಯಲಾಗುತ್ತದೆ, ಕಾರಣ ಇವು ಗೂಡುಕಟ್ಟುವುದು ನೆಲದಲ್ಲಿ ಮತ್ತು ಸುಮಾರು 3000 ಪ್ರಭೇದಗಳನ್ನು ಹೊಂದಿದೆ. ಅವು ಒಂಟಿಯಾಗಿರುವ ಜೇನುನೊಣಗಳು ಸಾಮಾನ್ಯವಾಗಿ ಶುಷ್ಕ, ಸಮಶೀತೋಷ್ಣ ಹವಾಮಾನದಲ್ಲಿ ಕಂಡುಬರುತ್ತವೆ. ಮುಸ್ಸಂಜೆಯಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಅತ್ಯಂತ ಸಣ್ಣ ಜೇನುನೊಣವು ಈ ಕುಟುಂಬಕ್ಕೆ ಸೇರಿರುತ್ತದೆ, Perdita minima, ಇದು ಮಣ್ಣಿನಲ್ಲಿ ಗೂಡನ್ನು ಮಾಡುತ್ತದೆ.  ಇದರ ಗಾತ್ರ ಕೇವಲ 1.8 mm! ಅತ್ಯಂತ ದೊಡ್ಡಗಾತ್ರದ Wallace’s Giant Beeನ ಗಾತ್ರ 63.5 mm!

@ಬಸವರಾಜ್ ಕೆಂಪವಾದ್

Colletidae ಜೇನುನೊಣ ಕುಟುಂಬವು 2000 ಕ್ಕೂ ಹೆಚ್ಚು ಪ್ರಭೇದಗಳನ್ನು ಒಳಗೊಂಡಿರುವ ದೊಡ್ಡ ಮತ್ತು ವೈವಿಧ್ಯಮಯ ಗುಂಪು. ಈ ಗುಂಪಿನ ಸದಸ್ಯರಿಗೆ ಪಾಲಿಸ್ಟರ್ ಬೀ ಎಂದು ಕರೆಯುವರು, ಇದಕ್ಕೆ ಮುಖ್ಯ ಕಾರಣ, ಇವು ಗೂಡನ್ನು ನಿರ್ಮಿಸುವುದು ಮಣ್ಣಿನಲ್ಲಿ, ಮಣ್ಣಿನ ಒಳಗೆ ಸೀಲಿಂಗ್ ನಂತೆ ಕವಚವನ್ನು ನಿರ್ಮಿಸಿಕೊಳ್ಳುತ್ತವೆ, ಅದನ್ನು ಅವು ಸ್ರವಿಸುತ್ತವೆ, ಅದು ಪಾಲಿಸ್ಟರ್ ನಂತೆ ಇದ್ದು ತಮ್ಮ ವಿಶಿಷ್ಟವಾದ ಸೀಳು ನಾಲಿಗೆಯಿಂದ ನಿರ್ಮಿಸುವ ಕಾರಣ ಈ ಹೆಸರು ಬಂದಿದೆ. Melittidae ಸುಮಾರು 200 ಪ್ರಭೇದಗಳನ್ನು ಹೊಂದಿದೆ ಮತ್ತು ಉತ್ತರ ಸಮಶೀತೋಷ್ಣ ವಲಯ ಮತ್ತು ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತದೆ. ಅವು ಚಿಕ್ಕದಾಗಿರುತ್ತವೆ ಮತ್ತು ಮಧ್ಯಮ ಗಾತ್ರದಲ್ಲಿರುತ್ತವೆ ಮತ್ತು ಏಕಾಂತ ಜೀವನವನ್ನು ನಡೆಸುತ್ತವೆ. ಈ ಕುಟುಂಬದ ಜೇನುನೊಣಗಳು ಕೇವಲ ಕೆಲವು ಸಸ್ಯಗಳ ಮೇಲೆ ವಾಸಿಸಲು ವಿಕಾಸಗೊಂಡಿವೆ. Macropis nuda ಎಂಬ ಜೇನುನೊಣವು ಅದು ಹಳದಿ ಲೂಸ್‌ಸ್ಟ್ರೈಫ್ ಸಸ್ಯಗಳಿಂದ ಮಾತ್ರ ತೈಲವನ್ನು ಸಂಗ್ರಹಿಸುತ್ತದೆ. ಎಣ್ಣೆಯನ್ನು ಆಹಾರದ ಮೂಲವಾಗಿ ಮತ್ತು ಮೊಟ್ಟೆಯ ಕೋಶಗಳನ್ನು ರಕ್ಷಿಸಿಕೊಳ್ಳಲು ಬಳಸಲಾಗುತ್ತದೆ.

Stenotritidae ಅತಿ ಚಿಕ್ಕ ಕುಟುಂಬ, ಕೇವಲ 21 ಪ್ರಭೇದಗಳನ್ನು ಕಾಣಬಹುದು, ಇವೆಲ್ಲವೂ ಆಸ್ಟ್ರೇಲಿಯಾದ ಪಶ್ಚಿಮ ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇನ್ನು ಭಾರತದ ವಿಷಯಕ್ಕೆ ಬಂದರೆ ಇಲ್ಲಿ 20000 ಕ್ಕೂ ಹೆಚ್ಚಿನ ಜೇನುನೊಣಗಳ ಪ್ರಭೇದಗಳನ್ನು ಕಾಣಬಹುದು. ಜಮ್ಮುವಿನಿಂದ ಕನ್ಯಾಕುಮಾರಿಯವರೆಗೆ ಅವುಗಳ ವೈವಿಧ್ಯತೆಯನ್ನು ಕಾಣಬಹುದು. ನಮ್ಮಲ್ಲಿ ಕಾಣುವ ವಿಶೇಷಗಳ ಬಗ್ಗೆ ಬಹುಶಃ ಮುಂದಿನ ತಿಂಗಳಲ್ಲಿ ತಿಳಿಸುವೆ.

ಲೇಖನ: ಹರೀಶ ಎ. ಎಸ್.

IISER- ತಿರುಪತಿ

Spread the love
error: Content is protected.