ಅದೊಂದು ಬೇರೆಯದೇ ಅನುಭೂತಿ. . .
© ಧನಂಜಯ ಜೀವಾಳ
ಕುದೋಳಿಗೆ ಅಂದು ರಾತ್ರಿಯೇ ವಾಪಾಸಾದ ಮೇಷ್ಟ್ರು ಮುಂದಿನ ತಿಂಗಳು ತಮ್ಮ ಶಾಲೆಯಿಂದ ವಿದ್ಯಾರ್ಥಿಗಳನ್ನು ಶೈಕ್ಷಣಿಕ ಪ್ರವಾಸಕೊಂಡೊಯ್ಯುವ ಕುರಿತು ಮುಖ್ಯೋಪಾಧ್ಯಾಯರ ಬಳಿ ಚರ್ಚೆ ಆರಂಭಿಸಿದರು. ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ಹೋಗುವುದೆಂದೂ, ಸ್ಥಳಗಳ ಆಯ್ಕೆಯನ್ನು ಗಿರೀಶ್ ಮೇಷ್ಟ್ರು ಅಂತಿಮಗೊಳಿಸಲು ಸ್ವಾತಂತ್ರ್ಯವನ್ನೂ ನೀಡಿದರು. ಈ ಊರಿನಲ್ಲಿ ತಾನಿದ್ದರೆ ಹೆಚ್ಚೆಂದರೆ ಇನ್ನೊಂದು ವರ್ಷ, ಹಾಗಾಗಿ ತನ್ನ ಶಾಲೆಯ ಮಕ್ಕಳಿಗೆ ತನ್ನೂರಿನ ಕೆಲ ಅಪೂರ್ವ ಸ್ಥಳಗಳನ್ನು ಈ ಪ್ರವಾಸದ ಮೂಲಕವಾದರೂ ತೋರಿಸಬೇಕೆಂದು ಅಪೇಕ್ಷಿಸಿ, ತಮ್ಮ ಸಹೋದ್ಯೋಗಿಗಳಲ್ಲೂ ಮಾತನಾಡಿದರು. ಮಲೆನಾಡಿನ ಬಗೆಗೆ ಎಲ್ಲಿಲ್ಲದ ಕುತೂಹಲ ಹಾಗೂ ಪ್ರೀತಿ ಹೊಂದಿದ್ದ ಅವರೆಲ್ಲರೂ ಒಕ್ಕೊರಲಿನಿಂದ “ಗಿರೀಶ್ ಮೇಷ್ಟ್ರಿಗೆ ಜೈ” ಅಂದೇಬಿಟ್ಟರು.
ಬೆಳಿಗ್ಗೆ ಐದಕ್ಕೆ ಕುದೋಳನ್ನು ಬಿಟ್ಟು ಹೊರಡುವುದು, ಎಂಟಕ್ಕೆ ಭೈರಾಪುರದ ನಾಣ್ಯದ ಭೈರವೇಶ್ವರ ದೇವಾಲಯದ ಆವರಣದಲ್ಲಿ ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಶಿಶಿಲ ಕುಡಿಯನ್ನು ಏರಲು ಪ್ರಾರಂಭಿಸುವುದು, ಮಧ್ಯಾಹ್ನ ಎರಡು ಗಂಟೆಗೆ ಬೆಟ್ಟವಿಳಿದು ಮತ್ತದೇ ದೇವಾಲಯದ ಬಳಿ ಮಧ್ಯಾಹ್ನದ ಊಟ ಮಾಡಿಕೊಂಡು, ದೇವರಮನೆಯತ್ತ ಪ್ರಯಾಣ ಬೆಳೆಸುವುದು. ದೇವರಮನೆಯ ಕಾಲಭೈರವೇಶ್ವರ ದೇವಾಲಯದ ಆವರಣದಲ್ಲಿ ಟೆಂಟು ಹಾಕಿಕೊಂಡು ರಾತ್ರಿ ಕಳೆದು, ಮಾರನೆಯ ದಿನ ಆರುಗಂಟೆಗೆ ಅಲ್ಲಿಂದ ಹೊರಟು, ಬಳ್ಳಾಲರಾಯನ ದುರ್ಗಕ್ಕೆ ಚಾರಣ ಹೋಗುವುದು. ಆ ಸಂಜೆಯೇ ಅಲ್ಲಿಂದ ಹೊರಟು ಮುತ್ತೋಡಿ ಅಭಯಾರಣ್ಯದ ಡೋರ್ಮಟೋರಿಯಲ್ಲಿ ತಂಗುವುದು. ಮಾರನೆ ದಿನ ಬೆಳಗ್ಗೆಯೇ ಅರಣ್ಯದೊಳಗೆ ಸಫಾರಿ ಹೋಗುವುದೆಂದು ಆ ಮೂರು ದಿನಗಳ ಟೂರನ್ನು ಮುಖ್ಯೋಪಾಧ್ಯಾಯರ ಮುಂದೆ ಅಂತಿಮ ನಿರ್ಧಾರಕ್ಕಾಗಿ ಇರಿಸಿದರು.
ಶಾಲಾ ಪ್ರವಾಸಗಳೆಂದರೆ ಕೇವಲ ದೇವಸ್ಥಾನಗಳು, ಮ್ಯೂಸಿಯಂಗಳು, ಉದ್ಯಾನವನಗಳ ಭೇಟಿಯೆಂದೇ ಭಾವಿಸಿದ್ದ ಹಾಗೂ ಆ ಸೀಮಿತ ಚೌಕಟ್ಟಿನೊಳಗೇ ಯೋಚಿಸುತ್ತಿದ್ದ ಮುಖ್ಯೋಪಾಧ್ಯಾಯರಿಗೆ ಈ ರೀತಿಯ ಕಾರ್ಯಕ್ರಮ ಸಂಯೋಜನೆ ವಿಶೇಷವೆನಿಸಿತು. ಹಾಗೂ “ಮಕ್ಕಳ ಊಟ-ತಿಂಡಿಗೆ ಏನು ವ್ಯವಸ್ಥೆ ಮಾಡಿಕೊಂಡಿದ್ದೀರಿ?” ಎಂದು ವಿಚಾರಿಸಿದರು. ಅಡುಗೆ ಸಾಮಗ್ರಿ ಮತ್ತು ಅಡುಗೆ ಮಾಡಲು ಎರಡು ಜನ ಅಡುಗೆಯವರನ್ನು ಜೊತೆಯಲ್ಲಿ ಕರೆದೊಯ್ದರೆ ನಮಗೆ ಬೇಕಾದ ಶುಚಿ-ರುಚಿಯ ಊಟ ತಿಂಡಿ, ಕಡಿಮೆ ಖರ್ಚಿನಲ್ಲಿ ಮತ್ತು ಫ್ರೆಷ್-ಹೆಲ್ತಿಯಾಗಿಯೂ ಸಿಗುತ್ತೆ. ನಾವು ಮತ್ತು ಮಕ್ಕಳೂ ಸಹ ಅಡುಗೆ ತಯಾರಿಯಲ್ಲಿ, ಬಡಿಸುವುದರಲ್ಲಿ ಸಹಾಯ ಮಾಡುವುದರಿಂದ ಇದೂ ಸಹಾ ಒಂದು ರೀತಿಯ ವಿನೂತನ ಅನುಭವ ನೀಡುತ್ತದೆ ಎಂದು ಇತರೆ ಶಿಕ್ಷಕರೂ ಅನುಮೋದಿಸಿದರು. ಈ ಹಿಂದೆ ಟೂರಿಗೆ ಬರಲು ಹಿಂದೇಟು ಹೊಡೆದಿದ್ದ ಮುಖ್ಯೋಪಾಧ್ಯಾಯರು ಸಹಾ ಈ ಪ್ರವಾಸದಲ್ಲಿನ ಈ ಎಲ್ಲಾ ಥ್ರಿಲ್ಗಳ ಕುರಿತು ಕೇಳಿಸಿಕೊಂಡು ತಾವೂ ತಪ್ಪಿಸಿಕೊಳ್ಳದೇ ಭಾಗವಹಿಸಲೇಬೇಕೆಂದು ನಿಂತ ನಿಲುವಲ್ಲೇ ತೀರ್ಮಾನಿಸಿದರು.
ಕಾಡಿನೊಳಗಿನ ನಾಡಿನಲ್ಲಿ ಅಡುಗೆ ಮಾಡಿ ಊಟ ಮಾಡುವುದು, ಟೆಂಟ್ ಹಾಕಿಕೊಂಡು ರಾತ್ರಿ ಕಳೆಯುವುದು, ಮೂರೂ ದಿನ ಹಸಿರಿನ ನಡುವೆಯೇ ಚಿಟ್ಟೆಗಳಂತೆ ವಿಹರಿಸುವ ಸುದ್ದಿ ತಿಳಿದ ಮಕ್ಕಳು ನಾಮುಂದು-ತಾಮುಂದು ಎಂದು ಟೂರಿಗೆ ಹೆಸರು ನೋಂದಾಯಿಸಿದರು.
ಪಿಟಿ ಮೇಷ್ಟ್ರು ರುದ್ರಮುನಿಯವರು ಟೂರಿಗೆ ಹೊರಟಿರುವ ಮಕ್ಕಳನ್ನು ಒಂದು ಕೊಠಡಿಯಲ್ಲಿ ಕೂರಿಸಿಕೊಂಡು, ನಾವೀಗ ಟೂರಿಗೆ ಹೊರಟಿದ್ದರೂ, ಮೂರೂ ದಿನ ಕಾಡುಮೇಡಲ್ಲಿ ಅಲೆದಾಡಬೇಕಾಗುತ್ತೆ. ಉತ್ತಮ ಗುಣಮಟ್ಟದ, ಬಳಸಲು ಸರಳವಾಗಿರುವ, ಆರಾಮದಾಯಕವಾಗಿರುವ ಬೂಟುಗಳನ್ನು ಅಂಗಡಿಗಳಲ್ಲಿ ಮಧ್ಯಾಹ್ನದ ನಂತರವೇ ಆಯ್ಕೆ ಮಾಡಿಕೊಳ್ಳಿ. ಆಗ ನಿಮ್ಮ ಪಾದದ ಅಳತೆಗೆ ಸರಿಯಾದ ಬೂಟುಗಳನ್ನು ಆಯ್ಕೆ ಮಾಡಬಹುದು. ಹತ್ತಿಯಿಂದ ತಯಾರಿಸಿದ ಸಾಕ್ಸ್ಗಳನ್ನೇ ಬಳಸಿ, ಅವು ಹವಾನಿಯಂತ್ರಣ ಮಾಡುತ್ತವೆ. ಉಸಿರಾಟದ ವ್ಯಾಯಾಮವನ್ನು ದೈನಂದಿನ ಅಭ್ಯಾಸವನ್ನಾಗಿ ಮಾಡಿಕೊಂಡಿರಿ, ಚಾರಣದ ಸಮಯದಲ್ಲಿ ಎತ್ತರವನ್ನು ಏರುವಾಗ ಆಯಾಸವಾಗದಂತೆ ಸಹಕರಿಸುತ್ತದೆ. ಒಂದು ಜೊತೆ ಹಗುರವಾದ ಉಡುಪನ್ನು ಇಟ್ಟುಕೊಂಡಿರುವುದು ಒಳ್ಳೆಯದು. ಬೆನ್ನಿಗೆ ಹಾಕಿಕೊಳ್ಳಲು, ಸುಲಭವಾಗಿ ತೆಗೆಯಲು, ಸರಾಗವಾಗಿ ತೆರೆಯಲು ಆಗುವಂಥ ಬ್ಯಾಗನ್ನೇ ಇಟ್ಟುಕೊಳ್ಳಿ. ನಡೆಯಲು ಕೈಲೊಂದು ಕೋಲಿದ್ದರೆ ನಡಿಗೆ ಸುಲಲಿತವಾಗಿರುತ್ತದೆ. ಆಧಾರವಾಗಿರುವುದರೊಂದಿಗೆ ಎದುರಾಗುವ ಪೊದೆಯನ್ನು, ಮುಳ್ಳುಕಂಟಿಯನ್ನು ಪಕ್ಕಕ್ಕೆ ಹೊರಳಿಸಲು ಹಾಗೇ ನಡಿಗೆಯ ದಾರಿಯನ್ನು ಪರೀಕ್ಷಿಸಲು ಸಹಕಾರಿಯಾಗುತ್ತದೆ. ಆಗಾಗ ಲವಣಯುಕ್ತ ನೀರನ್ನು ಗುಟುಕರಿಸುವುದರ ಜೊತೆಗೆ ದೇಹದ ಇತರೆ ಅಗತ್ಯಗಳಿಗೆ ಸ್ಪಂದಿಸುವುದು ಸಹ ಅತ್ಯಗತ್ಯ.
ಕಾಡಿನಲ್ಲಿ ಪೊದೆಗಳ ನಡುವೆ ಅರ್ಧ ಇಜಾರಿನಂಥ ಚಡ್ಡಿ ಧರಿಸಿ ನಡೆಯುವುದು ಅಷ್ಟು ಸುರಕ್ಷಿತವಲ್ಲ. ಕಾಲು ಪೂರ್ತಿ ಮುಚ್ಚುವಂಥ ಪೂರ್ಣ ಪ್ರಮಾಣದ ಪ್ಯಾಂಟ್ ಧರಿಸುವುದು ಒಳ್ಳೆಯದು. ಮುಳ್ಳು ತರಚುವುದು, ಎಡವಿ ಬಿದ್ದಾಗ ಆಗಬಹುದಾದ ಗಾಯಗಳು, ಹಾವು ಕಡಿತ ಮುಂತಾದ ಸಂದರ್ಭಗಳಲ್ಲಿ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಗುರವಾದ ಹತ್ತಿಯ ಟೀ ಷರ್ಟ್, ಜೀನ್ಸ್ ಪ್ಯಾಂಟ್ ಸರಳವಾಗಿ, ಸುಲಲಿತವಾಗಿ ಈ ಉದ್ದೇಶಕ್ಕೆ ಹೊಂದಿಕೆಯಾಗುತ್ತದೆ”.
ಟೂರಿನ ಕನವರಿಕೆಯಲ್ಲೇ ನಿದ್ದೆಯಿಲ್ಲದೇ ರಾತ್ರಿಯನ್ನು ಕಳೆದ ಮಕ್ಕಳು, ಬೆಳಗಿನ ಮೂರು ಗಂಟೆಗೇ ಎದ್ದು ಸ್ನಾನ ಮಾಡಿ ಶಾಲೆ ಬಳಿ ಸಡಗರದಿಂದ ಜಮೆಯಾದರು. ಮಕ್ಕಳನ್ನು ಕಳಿಸಿಕೊಡಲು ಶಾಲೆಯವರೆಗೂ ಬಂದಿದ್ದ ಪೋಷಕರೂ ಸಹ ದೊಡ್ಡಸಂಖ್ಯೆಯಲ್ಲಿದ್ದರು. ಪುರುಷ ಶಿಕ್ಷಕರು ಮತ್ತು ಅಡುಗೆಯವರು ಅಡುಗೆಯ ಸರಂಜಾಮುಗಳನ್ನು ಬಸ್ಸಿನ ಲಗೇಜ್ ಬಾಕ್ಸಿನೊಳಗೆ ಹಾಕುವ ಕಾರ್ಯದಲ್ಲಿ ಮಗ್ನರಾಗಿದ್ದರೆ, ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕಿಯರು ಮಕ್ಕಳಿಗೆ ಮತ್ತವರ ಲಗೇಜುಗಳಿಗಾಗಿ ಬಸ್ಸಿನೊಳಗೆ ಸೂಕ್ತ ಸ್ಥಳಗಳನ್ನು ಹೊಂದಿಸುತ್ತಿದ್ದರು.
ಆ ದಿನ ಬೆಳಗಿನ ತಿಳಿಬಿಸಿಲಲ್ಲಿ ಬೆಟ್ಟವೇರುವ ಕಾರ್ಯಕ್ರಮವಿರುವುದರಿಂದ ಬಸ್ ಹೊರಟೊಡನೆ ಮಕ್ಕಳೆಲ್ಲ ನಿದ್ರೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಕವಿತಾ ಮೇಡಂ ಸೂಚನೆ ನೀಡಿದರು. ಆದರೆ ಕಾಡಿನ ಲೋಕದೊಳಗೆ ಹೋಗುವ ಅವರ್ಣನೀಯ ಗುಂಗಿನಲ್ಲಿದ್ದ ಮಕ್ಕಳು ನಿದ್ರಿಸುವುದಿರಲಿ, ತಮ್ಮತಮ್ಮ ನಡುವಿನ ಕಚಪಚ ಮಾತನ್ನು ನಿಲ್ಲಿಸದೇ ನಿಮಿಷಕ್ಕೊಮ್ಮೆ ಹುಡುಗರು ಕೆಕ್ಕೆಕ್ಕೇ ಕಿಸಕ್ ಎಂದರೆ ಹುಡುಗಿಯರು ಗುಡುಗುಡುಗುಡು ಖ್ಖಿಲ್ ಎಂದು ನಗೆ ಪಟಾಕಿ ಹಾರಿಸುತಿದ್ದರು. ಡೂಮಿರೆಗೆಯಿಂದ ಬಸ್ ತರಲು ಹಿಂದಿನ ರಾತ್ರಿಯೇ ಹೋಗಿ, ರಾತ್ರಿಯಿಡೀ ನಿದ್ದೆಗೆಟ್ಟಿದ್ದ ಪಿಟಿ ಮೇಷ್ಟ್ರು ರುದ್ರಮುನಿ ತಮ್ಮ ಕಿಟ್ ಬ್ಯಾಗಿನ ಸೈಡ್ ಝಿಪ್ಪನ್ನು ತೆರೆದು ವಿಷಲ್ಗೆ ಗಂಟುಹಾಕಿದ್ದ ವೈರಿನ ಚಾಟಿಯನ್ನು ಹೊರತೆಗೆದು ಎಲ್ಲರಿಗೂ ಕಾಣುವಂತೆ ಝಳಪಿಸಿದ ನಂತರವೇ ಗಿಲಿಗಡಿಯುತಿದ್ದ ಮಕ್ಕಳು ತಮ್ಮ ಮಾತನ್ನೆಲ್ಲಾ ಬಂದ್ ಮಾಡಿಕೊಂಡು ಆ ಬೆಳಗಿನ ಚಳಿಗೆ ಮುದುರಿ ಕುಳಿತದ್ದು.
ಎಂಟುಗಂಟೆಯ ಸುಮಾರಿಗೆ ಆ ಅಗಾಧ ಏರನ್ನು ದಮ್ಮುಕಟ್ಟಿ ಏರಿ ನಿಟ್ಟುಸಿರು ಬಿಟ್ಟು ದೇವಾಲಯದ ಎದುರಿನ ಬಯಲಲ್ಲಿ ಬಸ್ ನಿಂತಾಗಲೇ ಜೋಗುಳ ತೂಗುವಂತಿದ್ದ ಪಯಣದಿಂದ ಎಚ್ಚರವಾಗಿ ಮಕ್ಕಳು ಕಣ್ಣುಬಿಟ್ಟು ಕಿಟಕಿಯ ಹೊರಗೆ ಕಣ್ಣು ಹಾಯಿಸಿದರು.
ಲಗುಬಗೆಯಿಂದ ಬಸ್ಸಿಳಿದ ಹುಡುಗರು ಅಲ್ಲೆಲ್ಲೋ ಪೊದೆಗಳತ್ತ ಮುಖಮಾಡಿ ಕಾಲಗಲಿಸಿ ನಿಂತು ನೆಮ್ಮದಿಯ ನಿಟ್ಟುಸಿರುಬಿಟ್ಟರು. ಮುಜುಗರದಿಂದ ಕವಿತಾ ಮೇಡಂನತ್ತ ನೋಡುತ್ತಿದ್ದ ಹುಡುಗಿಯರು ಹೇಳಲು ಆಗದೇ ಮುಖ ಕಿವುಚಿಕೊಳ್ಳುತಿದ್ದರು. ಇದನ್ನು ನೋಡಿದ ಗಿರೀಶ್ ಮೇಷ್ಟ್ರು, “ಬನ್ರಮ್ಮ ಇಲ್ಲಿ, ಇಲ್ಲೇ ಹತ್ಹೆಜ್ಜೆ ನಡೆದ್ರೆ ಈ ದೇವಸ್ಥಾನದ ಭಟ್ಟರ ಮನೆ ಇದೆ. ನನಗೆ ಪರಿಚಯಸ್ಥರೇ. ಅವರನ್ನೇ ರಿಕ್ವೆಸ್ಟ್ ಮಾಡಿಕೊಳ್ಳೋಣ, ಬನ್ನೀ ಮೇಡಂ” ಎಂದು ಕರೆದೊಯ್ದರು. ಹುಡುಗರೆಲ್ಲ ಅಡುಗೆ ಸರಂಜಾಮುಗಳನ್ನು ಇಳಿಸಿಕೊಡಲು ನೆರವಾದರು. ಮೂರು ಕಲ್ಲುಗಳನ್ನು ಹೊತ್ತು ತಂದು ಜೋಡಿಸಿ, ಅಲ್ಲೇ ಸುತ್ತಮುತ್ತಲೂ ಬಿದ್ದಿದ್ದ ಒಣಸೌದೆಯನ್ನು ಗುಡ್ಡೆ ಹಾಕಿಕೊಟ್ಟರು. ನಾಲ್ಕು ಜನ ಹುಡುಗರು ಕೊಡಗಳನ್ನು ತೆಗೆದುಕೊಂಡು ಅಲ್ಲೇ ಇದ್ದ ಕೊಳಕ್ಕೆ ಹೋಗಿ ಅಡುಗೆಗೆ ನೀರು ತಂದುಕೊಟ್ಟರು. ಅಡುಗೆಯವರು ಚಕಚಕನೆ ಬೆಳಗಿನ ಉಪಾಹಾರಕ್ಕೆ ಅವಲಕ್ಕಿ ಉಪ್ಪಿಟ್ಟು, ಕೇಸರಿಬಾತು ಹಾಗು ಬಿಸಿಬಿಸಿ ಕಾಫಿ ಮಾಡಿಕೊಟ್ಟು, ತಾವೂ ತಿಂದು ಮಧ್ಯಾಹ್ನದ ಊಟದ ತಯಾರಿಗೆ ಕುಳಿತೇಬಿಟ್ಟರು.
ಮಕ್ಕಳೆಲ್ಲರನ್ನು ಬಸ್ಸಿನ ಪಕ್ಕದ ಬಯಲಿನಲಿ ನಿಲ್ಲಿಸಿಕೊಂಡ ಪೀಟಿ ಮೇಷ್ಟ್ರು ರುದ್ರಮುನಿ ಯಾರೊ ಒಂದಿಬ್ಬರು ಹುಡುಗರು ಶೋಕಿ ತೋರಿಸಲು ಕಿವಿಗೆ ಸಿಕ್ಕಿಸಿಕೊಂಡಿದ್ದ ಕೆಸೆಟ್ ಹಾಕುವ ವಾಕ್ಮನ್ ಅನ್ನು ನೋಡಿದವರೇ,
“ಅದೇನದು ಇಯರ್ ಫೋನೋ? ಹೆಡ್ ಫೋನೋ? ಅದನ್ನು ಬಸ್ಸಿನಲ್ಲಿಯೇ ಬಿಸಾಕಿ ಹೋಗಿ.
ಚಾರಣ ಒಂದು ಸಾಹಸ ಕ್ರೀಡೆ. ದೈನಂದಿನ ಏಕತಾನತೆಯ ಬದುಕಿನಿಂದ ಸ್ವಲ್ಪ ಸಮಯ ಹೊರಬಂದು ಕಾಡಿನ ನೆಲ-ಜಲಗಳ ನಡುವೆ, ಹೊಸ ವಿಷಯಗಳನ್ನು ಅರಿಯುತ್ತಾ, ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ರೋಮಾಂಚನಗೊಳ್ಳಲು ಇದಕ್ಕಿಂತ ಅರ್ಥಪೂರ್ಣ ಹಾಗೂ ಸರಳ ವಿಧಾನ ಬೇರೆಯಿಲ್ಲ. ದಟ್ಟವಾದ ಕಾಡುಗಳು, ಪರ್ವತ ತಪ್ಪಲುಗಳು, ಕಡಿದಾದ ಏರುಗಳು, ನದಿ-ತೊರೆಗಳ ಇಕ್ಕೆಲದ ಜಾಡುಗಳು, ಅನಂತವಾಗಿ ಹರವಿಕೊಂಡಿರುವ ಹುಲ್ಲುಗಾವಲುಗಳು, ಜಲಪಾತದ ಕಂದರಗಳು, ಪ್ರಪಾತದ ಅಂಚುಗಳು, ಸಾಹಸಿಗಳನ್ನು ಕೆಣಕುವ ಅಪಾಯಕಾರಿ ಹರಿವಿನ ನದಿ ಪಾತ್ರಗಳು, ಅಜ್ಞಾತವಾದ ಸುರಂಗಗಳು, ವಿಸ್ಮಯಕಾರಿ ನಿಸರ್ಗ ನಿರ್ಮಿತ ನಿಗೂಢಗಳು, ಸೂರ್ಯನ ಬೆಳಕೇ ಬೀಳದಂಥ ಆಳಕಣಿವೆಗಳು, ಹೀಗೆ ಹೇಳುತ್ತಾ ಹೋದರೆ ಮುಗಿಯದೇ ಇರುವ ಈ ಪೃಥ್ವಿಯ ಕೌತುಕಗಳು ಎಂದಿನಿಂದಲೂ ಸಾಹಸಿಗಳನ್ನು, ನಿಸರ್ಗ ಪ್ರಿಯರನ್ನು ಅನ್ವೇಷಣೆ ಮಾಡಲು ಪ್ರೇರೇಪಿಸುತ್ತಲೇ ಇರುತ್ತವೆ.
ಚಾರಣದಲ್ಲಿ ಸಂದರ್ಶಿಸುವ ಸ್ಥಳದ ವಿವರ, ಮಾರ್ಗದರ್ಶಕರ ಜ್ಞಾನ, ಅವರು ಹೊಂದಿರುವ ಮಾಹಿತಿ, ಚಾರಣ ಪ್ರಾರಂಭವಾದಲ್ಲಿದ್ದ ಗಮ್ಯ ಸ್ಥಾನದವರೆಗೂ ಇರುವ ದೂರ, ನಡೆಯಲಿರುವ ಹಾದಿಯ ಸ್ವರೂಪ, ಹೊರಡುವ ಸಮಯ, ಹಾದಿ ಕ್ರಮಿಸಲು ತಗಲುವ ಸಮಯ, ಭಾಗವಹಿಸುವವರ ವಯಸ್ಸು, ಅವರ ದೈಹಿಕ ಸಾಮರ್ಥ್ಯ, ಆರೋಗ್ಯ ಸ್ಥಿತಿ, ಆ ದಿನದ ವಾತಾವರಣ ಹಾಗೂ ಹವಾಮಾನ, ಉಪಾಹಾರ ಮತ್ತು ಊಟ, ದಾರಿಯ ಮಧ್ಯೆ ಆಯಾಸವಾದಾಗ ಬೇಕಾಗುವ ಲಘುವಾದ ಪೂರಕ ಆಹಾರ, ಹಣ್ಣು, ಚಾಕಲೇಟುಗಳು, ಶುದ್ಧವಾದ ನೀರು ಇನ್ನಿತರೆ ವಿಚಾರಗಳು ಬಹಳ ಮುಖ್ಯವಾಗಿರುತ್ತವೆ.
ಇವತ್ತಿನ ಚಾರಣಕ್ಕೆ ನಮಗೆ ಗೈಡ್ ಆಗಿ ಇದೇ ಭೈರಾಪುರದ ಚಂದ್ರೇಗೌಡರು ನಮ್ಮೊಟ್ಟಿಗೆ ಇರುತ್ತಾರೆ. ನೋಡಿ ಆ ಬುಟ್ಟಿಯಲ್ಲಿ ಕಿತ್ತಲೆಹಣ್ಣುಗಳು, ಈಚೆ ಬಾಳೆಹಣ್ಣುಗಳು ಇದಾವೆ. ಅದರ ಪಕ್ಕದ ಬಾಕ್ಸಿನಲ್ಲಿ ಹುಳಿ ಪೆಪ್ಪರಮೆಂಟಿದಾವೆ. ಅಲ್ಲೇ ಒಂದು ಮೂಟೆಯಲ್ಲಿ ಸೌತೇಕಾಯಿ ಇವೆ, ಎಲ್ಲರೂ ಸಾಲಾಗಿ ಬಂದು ಒಂದು ಸೌತೇಕಾಯಿ, ಎರಡು ಕಿತ್ಲೆಹಣ್ಣು, ಎರಡು ಬಾಳೆಹಣ್ಣು, ನಾಲ್ಕು ನಾಲ್ಕು ಪೆಪ್ಪರಮೆಂಟುಗಳನ್ನ ತಗೊಳ್ಳಿ. ನಿಮ್ನಿಮ್ಮ ವಾಟರ್ ಬಾಟ್ಲಿಗಳನ್ನ ತುಂಬಿಸ್ಕೊಳ್ಳಿ ಎಂದರು ಪಿಟಿಮೇಷ್ಟ್ರು.
ಕಡಿದಾದ ಕಲ್ಲಿನ ಏರನ್ನು ಹಗ್ಗದ ಸಹಾಯದಿಂದ ಹತ್ತುವುದಿದ್ದಲ್ಲಿ, ಪರಿಣಿತರ ಸಲಹೆ, ಮಾರ್ಗದರ್ಶನ ಅತ್ಯಗತ್ಯ. ಈ ಸಾಹಸಕ್ಕೆ ಅಗತ್ಯವಾದ ಸಲಕರಣೆಗಳು, ವಿಶೇಷ ಬೂಟುಗಳು, ಹೆಲ್ಮೆಟ್, ಬಲವಾದ ಹಗ್ಗ, ದೈಹಿಕ ಸಾಮರ್ಥ್ಯಗಳಲ್ಲದೇ ಸೂಕ್ತ ತರಬೇತಿಯೂ ಬೇಕಾಗುತ್ತೆ. ಚಾರಣದ ಸಮಯದಲ್ಲಿ ಬೇಕಾಗಿರುವ ಮೂಲಭೂತ ಸಲಕರಣೆಗಳು, ಅಗತ್ಯವಿದ್ದಲ್ಲಿ ಟೊಪ್ಪಿ, ಸ್ವೆಟರ್, ರೈನ್ ಕೋಟ್, ಸಾಕ್ಸ್ ಮತ್ತು ಬೂಟ್, ಜಿಗಣೆಯಿರುವ ಸ್ಥಳವಾದಲ್ಲಿ ಬೇವಿನೆಣ್ಣೆ ಮತ್ತು ನಶ್ಯ ಪುಡಿಯ ಮಿಶ್ರಣ, ಇಳಿಜಾರಲ್ಲಿ ಮತ್ತು ಕಡಿದಾದ ಏರಿನಲ್ಲಿ ಇಳಿಯಲು ಅಥವಾ ಯಾರನ್ನಾದರೂ ಮೇಲಕ್ಕೆ ಎಳೆದುಕೊಳ್ಳಲು ಸಹಾಯಕವಾಗುವ ಹಗ್ಗ, ಸಕ್ಕರೆ-ಉಪ್ಪು, ನಿಂಬೆಹಣ್ಣಿನ ರಸದ ಹದವಾದ ಮಿಶ್ರಣದ ಕುಡಿಯುವ ನೀರು ದೇಹದಿಂದ ಬೆವರಿನ ರೂಪದಲ್ಲಿ ಹೊರಹೋಗುವ ಲವಣಾಂಶದ ಕೊರತೆಯನ್ನು ಸರಿದೂಗಿಸುತ್ತದೆ. ರಾತ್ರಿ ಕಾಡಿನಲ್ಲಿ ತಂಗುವುದಿದ್ದಲ್ಲಿ, ಟಾರ್ಚ್, ಸ್ಲೀಪಿಂಗ್ ಬ್ಯಾಗ್, ವಾಟರ್ ಪ್ರೂಫ್ ಟೆಂಟ್ ಅಗತ್ಯವಾಗಿರುತ್ತದೆ. ಇವೆಲ್ಲ ಏನೇ ಇದ್ದರೂ ನಿಮ್ಮ ಲಗೇಜ್ ಕಡಿಮೆ ಇದ್ದಷ್ಟೂ ನಿಮ್ಮ ಚಾರಣ ಸರಳ, ಸುಲಲಿತ, ಸರಾಗ ಹಾಗೂ ಸಂತಸಮಯವಾಗಿರುತ್ತದೆ. ನಮ್ಮ ಅನುಕೂಲಕ್ಕೆ ಮಾಡಿಕೊಂಡ ವ್ಯವಸ್ಥೆಗಳೇ ಕೆಲವೊಮ್ಮೆ ಅನಾನುಕೂಲಕ್ಕೆ ಕಾರಣವಾಗುತ್ತವೆ.
ಚಾರಣವನ್ನು ಬೆಳಿಗ್ಗೆ ಆರೇಳು ಗಂಟೆಗೇ ಪ್ರಾರಂಭಿಸುವುದು ಒಳ್ಳೆಯದು. ಚುಮುಚುಮು ಬೆಳಕಿನಲ್ಲಿ ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳು ಸಂಭವಿಸುತ್ತವೆ. ಬೆಳಗಿನ ಉಪಹಾರ ಬಲವಾಗಿರಬೇಕು. ಮಧ್ಯಾಹ್ನಕ್ಕೆ ಉಪಹಾರ ಅಥವಾ ಊಟವನ್ನು ಪುಟ್ಟ ಪೊಟ್ಟಣಗಳಲ್ಲಿ ಅವರವರೇ ಹೊತ್ತೊಯ್ಯುವಂತೆ ಬೆಳಗಿನ ಉಪಹಾರದ ನಂತರ ವಿತರಿಸುವುದು ಒಳ್ಳೆಯದು. ಅವರಿಗೆ ಅಗತ್ಯವಾದಾಗ, ಹಸಿವಾದಾಗ ತಿನ್ನಲು, ಆಯಾಸ ಪರಿಹರಿಸಿಕೊಳ್ಳಲು ಬೇಕಾಗುತ್ತದೆ. ಕಿತ್ತಳೆ ಹಣ್ಣು, ಬಾಳೆ ಹಣ್ಣು, ಸೌತೆಕಾಯಿ, ಒಣ ಹಣ್ಣುಗಳು ಹಾದಿಯಲ್ಲಿ ನಡೆಯುತ್ತಾ ತಿನ್ನಲು ಒಳ್ಳೆಯದು. ಕುರುಕಲು ತಿಂಡಿಗಳು, ಕರಿದ ಪದಾರ್ಥಗಳು ಮತ್ತು ಕಾರ್ಬೋನೇಟೆಡ್ ತಂಪು ಪಾನೀಯಗಳು ಬೇಡವೇ ಬೇಡ. ಇವತ್ತು ನಾವು ಅಷ್ಟು ದೂರದಿಂದ ಬಂದಿರೋದ್ರಿಂದ ಈಗಾಗ್ಲೇ ಗಂಟೆ ಒಂಬತ್ತಾಗಿದೆ. ಮಧ್ಯಾಹ್ನ ಒಂದು ಗಂಟೆಯೊಳಗೆ ನಾವು ಮತ್ತೆ ಇಲ್ಲಿಗೇ ಬರೋದ್ರಿಂದ ಊಟ ಹೊತ್ಕೊಂಡ್ಹೋಗೋ ಪ್ರಶ್ನೆ ಇಲ್ಲ.
ಚಾರಣ ಪ್ರದೇಶದ ನಕಾಶೆಯನ್ನು ಒಮ್ಮೆ ಅವಲೋಕಿಸುವುದು ಸೂಕ್ತ. ಮಾರ್ಗದರ್ಶಕ, ಆಯೋಜಕರಿಬ್ಬರೂ ಕುಳಿತು, ನಕಾಶೆಯನ್ನು ಪರಿಶೀಲಿಸಿ ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಹೊರಡುವ ಸ್ಥಳ, ಸಮಯ, ಸಾಗುವ ಹಾದಿ, ನೀರಿನ ಮೂಲಗಳು, ಮಧ್ಯಾಹ್ನ ವಿಶ್ರಮಿಸುವ ಸ್ಥಳ, ಹತ್ತಿರದ ವಾಹನ ಮಾರ್ಗ, ತಲುಪುವ ಸ್ಥಳ, ಸಮಯ, ಇವೆಲ್ಲವನ್ನೂ ಚಾರಣದ ಪ್ರಾರಂಭದ ಸ್ವಪರಿಚಯ ಸಂದರ್ಭದಲ್ಲಿಯೇ ವಿವರವಾಗಿ ಭಾಗವಹಿಸುವ ಎಲ್ಲರಿಗೂ ಮನನ ಮಾಡಿಕೊಡಬೇಕು. ಗೈಡ್ ಹಾಗೂ ಟೀಂ ಮ್ಯಾನೇಜರ್ ಬಳಿ ವಿಷಲ್ಗಳಿರಲೇಬೇಕು. ದಾರಿ ತಪ್ಪಿದಾಗ, ಎಲ್ಲರನ್ನೂ ಒಂದೆಡೆ ಸೇರಿಸಬೇಕಾದಾಗ, ಈ ವಿಷಲ್ ಬಹಳ ಉಪಯೊಗಕ್ಕೆ ಬರುತ್ತದೆ. ಗವಿ, ಸುರಂಗ ಪ್ರವೇಶಿಸುವುದಿದ್ದಲ್ಲಿ ಅಥವಾ ಸಂಜೆ ತಡವಾಗುವ ಸಂಭವವಿದ್ದಲ್ಲಿ ತಲೆಗೆ ಕಟ್ಟುವ ಎರಡು ಟಾರ್ಚ್ ಬೇಕಾಗುತ್ತದೆ. ಅಲ್ಲದೇ ಅಗತ್ಯ ಸಂದರ್ಭಗಳಲ್ಲಿ ಬಳಸಲು ಉದ್ದವಾದ ಎರಡು ಕತ್ತಿಗಳು ಜವಾಬ್ದಾರಿಯುತರ ಬಳಿಯಲ್ಲಿರುವುದು ಒಳಿತು. ತಂಡದ ಸದಸ್ಯರು ಬಳಸಿದ ನಂತರ ಉಳಿದ ಕವರ್ಗಳು, ಇನ್ನಿತರೆ ತ್ಯಾಜ್ಯಗಳನ್ನು ಒಂದು ಚೀಲದಲ್ಲಿ ಸಂಗ್ರಹಿಸಲು ವ್ಯವಸ್ಥೆಯಿರಲೇಬೇಕು. ಕಣ್ಣಿಗೆ ರಾಚುವಂಥ ಬಣ್ಣದ ಉಡುಪುಗಳನ್ನು ಬಳಸಲೇಬೇಡಿ. ಅವು ವನ್ಯಜೀವಿಗಳನ್ನು ಕೆರಳಿಸಬಹುದು.
ಕಾಡಿನಲ್ಲಿ ಕಿವಿಗೆ ಇಯರ್ ಫೋನುಗಳನ್ನು ಹಾಕಿಕೊಂಡು ಸಿನಿಮಾ ಹಾಡುಗಳನ್ನು ಕೇಳಬೇಡಿ. ಜಗತ್ತಿನ ಅದ್ಭುತ ಸಂಗೀತವಾದ ಕಾಡಿನ ಹಾಡನ್ನು ಕೇಳಿಸಿಕೊಳ್ಳುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳುತ್ತೀರಿ. ದುಂಬಿಗಳ ಝೇಂಕಾರ, ನೀರಿನ ಜುಳುಜುಳು ನಿನಾದ, ಕಾಡಿನ ಅರ್ಥಪೂರ್ಣ ಮೌನ, ಸುಳಿದಾಡುವ ತಂಗಾಳಿ, ಆಳೆತ್ತರದ ಹುಲ್ಲಿನ ತೊನೆದಾಟ, ಪಕ್ಷಿಗಳ ಕಲರವ, ಪ್ರಾಣಿಗಳ ಹೂಂಕಾರ, ಸರೀಸೃಪಗಳ ಸರಿದಾಟದ ಸರಪರ ಸದ್ದು, ಸದ್ದಿಲ್ಲದೆ ಹರಿದಾಡುವ ಇರುವೆ-ಗೆದ್ದಲುಗಳು, ನೀವು ಕಾಡಿಗೆ ಹೋಗಿ ಅಲೆದಾಡಿ ಬಂದದ್ದಕ್ಕೆ ಅರ್ಥ ಬರಬೇಕೆಂದರೆ ಇವೆಲ್ಲವನ್ನೂ ನೀವು ಗಮನಿಸಬೇಕು. ವಿನಾಕಾರಣ ಕೂಗುವುದು, ಗಿಡಗಳನ್ನು ಚಿವುಟುವುದು, ಮರಗಳನ್ನು ಗಾಯಗೊಳಿಸುವುದು ಮಾಡಲೇಬೇಡಿ. ಕಾಡುಪ್ರಾಣಿಗಳು ಎದುರಾದರೆ ಅವುಗಳನ್ನು ಕೆಣಕದೇ ದೂರದಿಂದಲೇ ಎಚ್ಚರಿಕೆಯಿಂದ ಗಮನಿಸಿ. ಪ್ರಾಣಿ, ಪಕ್ಷಿ, ಕೀಟಗಳನ್ನು ದೂರದಿಂದಲೇ ಗಮನಿಸಿ, ಹಿಡಿಯಲು ಹೋಗಲೇಬೇಡಿ. ನಿಮ್ಮಿಂದ ಅವಕ್ಕೆ ಅಥವಾ ಅವುಗಳಿಂದ ನಿಮಗೆ ಅಪಾಯವಾಗಬಹುದು. ತೊರೆಗಳ ಪಾತ್ರದಿಂದ ಕಲ್ಲುಗಳನ್ನು ಸಂಗ್ರಹಿಸಬೇಡಿ. ಪ್ರಕೃತಿಗೆ ಅದರದ್ದೇ ಆದ ನಿಯಮಗಳಿವೆ. ನೀರು ಕಟ್ಟಿ ನಿಲ್ಲಿಸಲು, ಕಲ್ಲುಗಳನ್ನು ರಾಶಿ ಹಾಕಲು ಪ್ರಯತ್ನಿಸಬೇಡಿ. ನೀವಲ್ಲಿಗೆ ಬಂದಿರುವುದು ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಲು ಎಂಬುದು ನೆನಪಿರಲಿ. ಚಾಕಲೇಟ್ನ ಸಿಪ್ಪೆಯಿಂದ ಹಿಡಿದು, ನಿಮ್ಮ ಹರಿದುಹೋದ ಬೂಟಿನವರೆಗೂ ಏನನ್ನೂ ಕಾಡಿನಲ್ಲಿ ಎಸೆಯಬೇಡಿ. ನಿಮಗೆ ಚೈತನ್ಯ ಹಾಗೂ ಸಂತೋಷ ನೀಡಿದ ಕಾಡಿಗೆ ದ್ರೋಹವೆಸಗಬೇಡಿ. ಅಪಾಯಕಾರೀ ಸಾಹಸಗಳನ್ನು ಮಾಡಲು ಹೋಗಬೇಡಿ. ಸಣ್ಣ ತಪ್ಪಾದರೂ ಕಾಡಿನಲ್ಲಿ ನಿಮಗೆ ಸಕಾಲದಲ್ಲಿ ಸರಿಯಾದ ಚಿಕಿತ್ಸೆ ಸಿಗಲಾರದು. ತಿಳೀತಾ?” ಎಂದು ಒಂದು ಸಲ ದಪ್ಪವಾಗಿ ತಮ್ಮ ಕಣ್ಣುಬಿಟ್ಟರು.
ಎಷ್ಟು ದೂರ ನಡೆಯಬೇಕು, ಎಂಥ ಹಾದಿಯಲ್ಲಿ ನಡೆಯಬೇಕು, ಎಷ್ಟು ಹೊತ್ತಿಗೆ ಮುಗಿಸಿ ಹಿಂದಿರುಗಬೇಕು. ಕಾಡಿನಲ್ಲಿ ಹೇಗೆ ವರ್ತಿಸಬೇಕು ಎಂಬುದನ್ನೆಲ್ಲ ಮೋಹನ್ ರಾಜ್ ಹಾಗೂ ಗೈಡ್ ಚಂದ್ರೇಗೌಡರು ಹೇಳಿದರು. ಈ ಚಂದ್ರೇಗೌಡರು ಔಷಧೀಯ ಸಸ್ಯಗಳ, ಅಪ್ಪುಸಸ್ಯಗಳ ಬಗೆಗೆ ಅಪೂರ್ವ ತಿಳುವಳಿಕೆಯಿರುವವರು. ಕೀಟ, ಪ್ರಾಣಿ-ಪಕ್ಷಿಗಳ ಬಗ್ಗೆ ಜ್ಞಾನ ಇರುವವರು, ಅರಣ್ಯಶಾಸ್ತ್ರದಲ್ಲಿ ಅನುಭವವಿರುವವರು, ಹಾಗೆಂದ ಮಾತ್ರಕ್ಕೆ ಅವರೇನೂ ಯೂನಿವರ್ಸಿಟಿಯಿಂದ ಬಂದವರಲ್ಲ, ಸ್ಥಳೀಯ ಪ್ರಜ್ಞಾವಂತರಾದವರಿದ್ದರೆ ಚಾರಣ ಒಂದು ಪದವಿಯಾನದಷ್ಟೇ ಅರ್ಥಪೂರ್ಣ. ತನ್ನೊಡನೆ ತನ್ನದೇ ವೇಗದಲ್ಲಿ ನಡೆಯುತಿದ್ದ ಒಂದಷ್ಟು ಜನ ಹುಡುಗ ಹುಡುಗಿಯರಿಗೆ, “ಒಂದೂ ಒಂದೂ ಸೇರಿದರೆ ಎರಡೇ? ಅಥವಾ ಒಂದೇ?” ಎಂದು ಚಂದ್ರೇಗೌಡರು ಕೇಳಿದ್ದಕ್ಕೆ ಇದ್ದಬದ್ದವರೆಲ್ಲಾ ಒಕ್ಕೊರಲಿನಿಂದ ಗಟ್ಟಿ ದನಿಯಲಿ ಎರಡೂ ಎಂದು ಕೂಗಿದರು. “ಎಲ್ಲಿಂದಲೋ ಹರಿದು ಬಂದ ಎರಡು ತೊರೆಗಳು ಸೇರಿದರೆ ಒಂದು ತೊರೆಯೋ ಇಲ್ಲಾ ಎರಡೋ? ತಾರ್ಕಿಕ ಗಣಿತಕ್ಕಿಂತ ಸಹಜ ಕಲ್ಪನೆಯ ವಾಸ್ತವವೇ ಅಂತಿಮ ಸತ್ಯವೆನಿಸುತ್ತೆ. ಅಲ್ವಾ ಮಕ್ಕಳೇ?” ಎಂದು ಮೀಸೆಯಡಿಯಲಿ ನಕ್ಕ ಚಂದ್ರೇಗೌಡರು, “ನಿಮ್ಮ ಗಣಿತ ಪರೀಕ್ಷೇಲಿ ಮಾತ್ರ ಇದನ್ನೇ ಬರೀಬೇಡಿ, ಆಯ್ತಾ?” ಎಂದು ಎಚ್ಚರಿಕೆಯನ್ನೂ ನೀಡಿದರು.
ಮುಂದುವರಿಯುವುದು . . .
ಲೇಖನ: ಧನಂಜಯ ಜೀವಾಳ
ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ